ಮೆಹಬೂಬ್ ಮಠದ ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’

ಪಾತ್ರಗಳು ಎದುರಾದರೆ ಕತೆಗಾರ ಜವಾಬ್ದಾರನಲ್ಲ..!

ಮೆಹಬೂಬ್ ಮಠದ

ಹೆಗಲಿಗೆ ಕ್ಯಾಮರಾ ಹಾಗೂ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದೇ ಸಮನೆ ಹಳೇ ದೇವಸ್ಥಾನಗಳು, ಅಪರೂಪದ ಸ್ಮಾರಕಗಳು, ಯಾವುದೋ ಕಾಡಿನ ತಿರುವಿನಲ್ಲಿ ಸಿಕ್ಕುವ ಹಕ್ಕಿಗಳು, ಹಕ್ಕಿಗಳಂತೆ ಹಾಡುವ ಜನಪದ ಜೀವಗಳು, ಕಾವ್ಯದ ನಗುವ ಹೊತ್ತ ಮುಖಗಳು ಮತ್ತು ಬದುಕಿನ ಇತರ ಸೌಂದರ್ಯಗಳನ್ನು ಹುಡುಕುತ್ತ ತಿರುಗಾಡುವ ಕನ್ನಡದ ವಿಶಿಷ್ಟ ಕತೆಗಾರ ಅಬ್ದುಲ್ ರಶೀದ್ ರವರು ಮತ್ತೊಬ್ಬ ಲೇಖಕರಾದ ವಿವೇಕ ಶಾನಭಾಗ್ ರವರ ಸ್ಟೋರಿ ಚಾಲೆಂಜ್ ಸ್ವೀಕರಿಸಿ ಮೂರೇ ವಾರಗಳಲ್ಲಿ ಬರೆದ ಐದು ಕಥೆಗಳನ್ನು ಒಳಗೊಂಡ ‘ಅಂತಾರಾಷ್ಟ್ರೀಯ ಕುಂಬಳಕಾಯಿ’ ಕಥಾ ಸಂಕಲನ ನನ್ನಲ್ಲಿ ತೀವ್ರ ಕುತೂಹಲ ಹುಟ್ಟಿಸಿತ್ತು. ಮಾರುಕಟ್ಟೆಯಲ್ಲಿ ಸಿಗುವ ಜವಾರಿ ಕುಂಬಳಕಾಯಿ ಮತ್ತು ಫಾರಂ ಕುಂಬಳಕಾಯಿಗಳ ಬಗ್ಗೆ ಮಾತ್ರ ಗೊತ್ತಿದ್ದ ನನಗೆ ಈ ‘ಅಂತಾರಾಷ್ಟ್ರೀಯ ಕುಂಬಳಕಾಯಿ’ ವಿಪರೀತ ಯೋಚನೆಗೆ ಗುರಿ ಮಾಡಿತ್ತು. ಅದಕ್ಕಾಗಿ ಅತಿ ಬೇಗನೆ ತರಿಸಿಕೊಂಡು ಓದಿದ ನಂತರ ನನ್ನ ಮೆದಳು ಮತ್ತು ಹೃದಯಗಳಿಗೆ ಮಧುರ ಯಾತನೆಯ ಅನುಭವವಾಯಿತು.

‘ರಶೀದರು ತೀವ್ರ ಭಾವನೆಗಳ, ಕನಸುಗಳ ಸಮುದಾಯದಲ್ಲಿರುವವರು. ಅವರು ಚಿತ್ರಿಸುವ ಗಂಡುಹೆಣ್ಣುಗಳು ನಿರಾಶೆಯ ನೆಲೆಯಿಂದ ನೆನಪಿಗೆ.ಆಶೋತ್ತರಕ್ಕೆ ಸುಕುಮಾರವೂ ಸಾರ್ವಜನಿಕ ಸ್ಪರ್ಶವೂ ಇರುವ ಖಾಸಗಿ ನೆಲೆಗೆ ಜಿಗಿಯುವವರು. ಅವರ ಖಾಸಗಿ ಮತ್ತು ಸಾರ್ವಜನಿಕ ಸನ್ನಿವೇಶಗಳನ್ನು ಸ್ವಪ್ನಸದೃಶ ರೀತಿಯಲ್ಲಿ ಮರು ಜೋಡಿಸುವುದಕ್ಕಾಗಿ ರಶೀದ್ ಸರಳವೂ ನಿಖರವೂ ಆದ ಭಾಷೆಯನ್ನು ಉಪಯೋಗಿಸುತ್ತಾರೆ’  ಎಂದು ಈ ಕಥಾ ಸಂಕಲನಕ್ಕೆ ಮುನ್ನುಡಿ ಬರೆದ ಕಥೆಗಾರರಾದ ಎಸ್. ದಿವಾಕರ್ ರವರು ಇಲ್ಲಿನ ಕತೆಗಳ ತೀವ್ರತೆ ಮತ್ತು ಗಾಢ ಪ್ರಭಾವದ ಕುರಿತು ಬರೆಯುತ್ತಾರೆ.

ಮಾಂಟೆನಿಗ್ರೋ ದೇಶದ ಅನುಪಮ ಸೌಂದರ್ಯದ ಖಣಿಯಂತಿರುವ ರೂಪದರ್ಶಿಯೊಬ್ಬಳ ಆತ್ಮದಂತಿರುವ ಕಾಣೆಯಾದ ಅವಳಿ ಸಹೋದರನನ್ನು ಹುಡುಕುವ ಜವಾಬ್ಬಾರಿ ಹೊತ್ತ ಕಥೆಗಾರನೊಬ್ಬನ ಸೌಂದರ್ಯ ಉಪಾಸನಾ ಹಿನ್ನೆಲೆಯ ಪ್ರಯಾಣದೊಂದಿಗೆ ಆರಂಭವಾಗುವ ಕತೆ ‘ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು’. ಈ ಕತೆಯಲ್ಲಿ ಬರುವ ಉತ್ಕಟ ಪ್ರೇಮದ ಕವಿತೆಗಳನ್ನು ಬರೆದುಕೊಂಡು ತಮ್ಮ ಕವಿತೆಗಳ ಸಾಲಿನ ದೇವತೆಯಂತಿರುವ ಹುಡುಗಿಯನ್ನು ಪ್ರೀತಿಸಿ ಆ ಕಾರಣಕ್ಕೆ ತಾವು ಹುಟ್ಟಿದ ‘ದ್ವೀಪ’ದಿಂದಲೇ ಗಡಿಪಾರಾಗಿ ಕಲ್ಲಿಕೋಟೆಯಲ್ಲಿ ವಾಸಿಸುವ ‘ಮುಕ್ತಿಯಾರ’ ರು ಭೂತ ಮತ್ತು ಭವಿಷ್ಯವನ್ನು ಕಾಣಬಲ್ಲ ಮಾಂತ್ರಿಕರು ಮಾತ್ರವಲ್ಲ ಹಣಕ್ಕಾಗಿ ಕತ್ತೆಯನ್ನು ಕುದುರೆಯನ್ನಾಗಿಯೂ ಕುದುರೆಯನ್ನು ಕತ್ತೆಯನ್ನಾಗಿಯೂ ಮಾಡಬಲ್ಲ ಜನಪ್ರಿಯ ವಕೀಲರು ಆದರೆ ಹಣದಾಚೆಗೂ ಮೀರಿದ ಮಾನವೀಯ ಮೌಲ್ಯಗಳನ್ನು ಉಸಿರಾಡುವ ಮಹಾನ್ ವ್ಯಕ್ತಿ ಆ ಕಾರಣಕ್ಕಾಗಿಯೇ ಸೀದಾ ನರಕ ಸದೃಶ ಶಿಕ್ಷೆಗೆ ಗುರಿಯಾಗಬೇಕಿದ್ದ ಮುತ್ತುಕೋಯಾ ಎಂಬ ನತದೃಷ್ಟ ಮೀನುಗಾರನನ್ನು ಅದರಿಂದ ಪಾರು ಮಾಡಿದವರು. ಹೇಳಲು ಮತ್ತು ಕೇಳಲು ಬಿದ್ದು ಬಿದ್ದು ನಗುವಂತೆ ಮಾಡುವ ಮುತ್ತುಕೋಯಾ ಮಾಡಿದ ದೇಶದ್ರೋಹವಾದರೂ ಏನು? ಅವನು ಹೇಗೆ ಪಾರಾಗುತ್ತಾನೆ? ಕಡಲ ಸೆರಗಲ್ಲಿ ದರ್ಗಾವನ್ನು ಏಕೆ ಕಟ್ಟಿದರು? ಸಹೋದರನನ್ನು ಹುಡುಕಲು ಹೇಳಿದ ರೂಪದರ್ಶಿಯ ಪ್ರಾಕ್ಟಿಕಲ್ ಬದುಕಾದರು ಎಂಥದ್ದು? ಎಂಬುದನ್ನು ಕಥೆಗಾರ ಕಂಡುಕೊಳ್ಳುವ ಹೊತ್ತಿಗೆ ಅವನಿಗೆ ಬದುಕಿನ ಕೆಲವು ಸತ್ಯಗಳ ದರ್ಶನವಾಗುತ್ತದೆ. ಅವನ ಜೊತೆ ಜೊತೆಗೆ ಓದುಗರನ್ನೂ ಕೂಡ ತನ್ನ ಪ್ರಯಾಣದ ಭಾಗವಾಗಿ ಮಾಡಿಕೊಳ್ಳುವಲ್ಲಿ ಕಥೆಗಾರ ಗೆದ್ದಿದ್ದಾನೆ.

ಹಾರ-ತುರಾಯಿ, ಗುಂಡು-ತುಂಡು, ಭಯ-ಬಹುಮಾನ ಮತ್ತು ಸ್ಥಾನ-ಮಾನಗಳಿಗಾಗಿ ತಮ್ಮ ‘ಬದ್ಧತೆಯನ್ನು’ ಹರಿದ ಅಂಗಿಯನ್ನು ಬದಲಾಯಿಸಿದಷ್ಟೇ ಸಲೀಸಾಗಿ ಬದಲಿಸುವ ಛದ್ಮವೇಷದ ಚಕ್ರವರ್ತಿಗಳಂತಿರುವ ನಕಲಿ ಹುಟ್ಟುಹೋರಾಟಗಾರರ ನಡುವೆ ತಾನು ನಂಬಿದ ಸಿದ್ಧಾಂತಕ್ಕಾಗಿ, ಮುಂದೆ ಯಾವತ್ತೋ ಆಗಲಿರುವ ಕ್ರಾಂತಿ ಮೇಲಿನ ಭರವಸೆಗಾಗಿ ತಮ್ಮ ಕುಟುಂಬ ಮತ್ತು ಬದುಕನ್ನೇ ಒತ್ತೆ ಇಡುವ ‘ಕಾಮ್ರೇಡ್ ಆಲಿ ರೈಟರ ಕೆಂಪು ಕಾರಿಡಾರು’ ಕತೆಯ ಆಲಿಯವರು ಪ್ರತಿಯೊಬ್ಬ ಓದುಗನ ಅಂತರಂಗವನ್ನು ಕಲಕುತ್ತಾರೆ. ಡೋಂಟ್ ಕೇರ್ ವ್ಯಕ್ತಿತ್ವದ ಪಡ್ಡೆ ಹುಡುಗರ ಪಾಲಿನ ಕನಸಿನ ರಾಣಿಯಂತಿರುವ ಅವರು ಮಗಳು ಖತೀಜಾ ಅಪ್ಪನ ಕನಸಿಗೆ ವಿರುದ್ಧವಾಗಿ ಮಾಡುವ ಕ್ರಾಂತಿ ಅವಳಮ್ಮ ಅಮ್ಮಾಯಿಯವರನ್ನು ಜೀವನಪೂರ್ತಿ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಕಂಡವರ ಮಕ್ಕಳನ್ನು ಬಾವಿಗೆ ನೂಕುವ, ನಂಬಿದವರ ಬೆನ್ನುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಅವರ ಅಸ್ತಿತ್ವವನ್ನೇ ಇಲ್ಲವಾಗಿಸುವ ವರ್ತಮಾನದ ಕ್ರೂರ ದಲ್ಲಾಳಿಗಳ ಪ್ರತಿನಿಧಿಯಂತಿರುವ ಚೆಂಗಪ್ಪನ ನೆನೆದರೆ ಕೋಪ ಉಕ್ಕಿ ಹರಿಯುತ್ತದೆ. ತನ್ನ ಅತ್ತೆ ಮಾಡುವ ಸ್ವಾದಿಷ್ಟ ಆಹಾರ ಪದಾರ್ಥ ತರಿಸಿಕೊಳ್ಳುವ ನಿರೂಪಕ ಮಾವನ ಹೇಳುವ ಕ್ರಾಂತಿಯನ್ನು ನಂಬದವ ಆದರೂ ಬಾಂಧವ್ಯವನ್ನು ಚೆನ್ನಾಗಿ ನಿರ್ವಹಿಸುತ್ತಾನೆ. ಈ ಕತೆಯಲ್ಲಿ ಬರುವ ಶ್ರೀರಾಮ ಬಸ್ಸು ಕೂಡ ಒಂದು ಮರೆಯದ ಪಾತ್ರವಾಗಿ ರೂಪಾಂತರವಾಗುವುದು ವಿಶೇಷ.

ಲೆಸ್ಬಿಯನ್ ಪ್ರೇಮದ ಮೋಹಕ ಮೋಸದ ಜಾಲದಲ್ಲಿ ಸಿಲುಕಿ ಇನ್ನಿಲ್ಲದಂತೆ ಒದ್ದಾಡುವ ಕಾರ್ತ್ಯಾಯಿನಿ LGBT ಸಮುದಾಯದ ತೀವ್ರ ನೊಂದ ಜೀವಗಳ ಅಸಾಯಕ ಪರಿಸ್ಥಿತಿಯನ್ನು ಕರುಳು ಹಿಂಡುವಂತೆ ಹೇಳುತ್ತಾಳೆ. ಬಟ್ಟೆ ಗಿರಣಿ ಕಾರ್ಮಿಕರ ಫುಟ್ ಬಾಲ್ ಆಟದ ಹಿನ್ನೆಲೆಯಲ್ಲಿ ನಡೆಯುವ ಯವೌನದ ಉಸಿರ ಹಾಡಿನಂತಿರುವ ಅವಳ ಅಪ್ಪ ಅಮ್ಮರ ಪ್ರೀತಿಯ ಕತೆ ಮತ್ತು ಅವರ ದುರಂತ ದಾಂಪತ್ಯಗೀತೆ ದಟ್ಟ ವಿಷಾದವನ್ನು ಉಳಿಸುತ್ತದೆ. ತಮ್ಮೆಲ್ಲ ಕರ್ಮಕಾಂಡಗಳ ತೊಳೆದುಕೊಳ್ಳಲು, ಕನಸುಗಳಿಗೆ ರೆಕ್ಕೆ ಕೊಡಿ ಎಂದು ಬೇಡಿಕೊಳ್ಳಲು ಸೂಫಿ ಸಂತನ ಗೋರಿಗೆ ಬರುವ ವಿಭಿನ್ನ ಹಿನ್ನೆಲೆಯ ಜನಗಳ ಪರದಾಟ ನೋಡಿ ಅಯ್ಯೋ ಎನಿಸುತ್ತದೆ. ಕಾರ್ತ್ಯಾಯಿನಿ ಬದುಕಿಗೆ ಮರ್ಮಾಘಾತ ನೀಡಿ ಮತ್ತೆಂದೂ ಬರದಂತೆ ಹೋಗುವ ಕ್ರಿಸ್ತಿನಾಳ ನಂಬಿಕೆ ದ್ರೋಹ ಅಮಾನುಷವಾದದ್ದು. ಮಾದಕ ಪದಾರ್ಥಗಳ ಚಕ್ರವ್ಯೂಹದಲ್ಲಿ ಸಿಲುಕಿದ ಕಾರ್ತ್ಯಾಯಿನಿಯನ್ನು ಕಾಪಾಡಲು ಹೋಗುವ ಅವಳ ಅಮ್ಮನ ಬಾಲ್ಯದ ಗೆಳೆಯನಾದ ನಿರೂಪಕನ ಜೀವಕಾರುಣ್ಯ ನಿಜಕ್ಕೂ ಅಪರೂಪದ್ದು.

ಜನಮಾನಸದಲ್ಲಿ ಅಜರಾಮರವಾಗಿ ಉಳಿಯುವಂತೆ ಸಾಹಿತ್ಯ ಕೃಷಿ ಮಾಡಿದ ಕವಿ ಸಾಮ್ರಾಟನೊಬ್ಬನ ಓದುಗ ಅಭಿಮಾನಿಯೊಬ್ಬಳು ಆತನ ಬರಹದ ಮಾಂತ್ರಿಕ ಪ್ರಭಾವದಿಂದಾಗಿ ಮೈಸೂರಿನಲ್ಲಿ ಅಕ್ಷರಶಃ ಇಲ್ಲದೇ ಇರುವ ಜಾಗಗಳನ್ನು ಹುಡುಕಿಕೊಂಡು ಹೋಗುವ , ಅವನು ತೀರಿಕೊಂಡು ಎಷ್ಟೋ ಕಾಲವಾಗಿದ್ದರೂ ನಗರದ ಹೋಟೆಲೊಂದರಲ್ಲಿ ಕಾಯಿಲೆ ಪೀಡಿತನಾದ ಅವನನ್ನು ತನ್ನ ಪತ್ನಿಸಮೇತ ನೋಡಿದ್ದೇನೆ ಎಂದು ಅವನ ಗೆಳೆಯನಿಗೆ ಹೇಳುವ ಸೈಕಾಲಜಿಕಲ್ ಹಿನ್ನೆಲೆಯ ಕವಿ ಸಾಮ್ರಾಟ ಕತೆ ತನ್ನ ವಿಭಿನ್ನ ಶೈಲಿಯಿಂದ ಕಾಡುತ್ತದೆ. ಹೆಂಡತಿಯಿಂದಲೂ ಕರ್ನಲ್ ಸಾಹೇಬರೆ ಎಂದು ಕರೆಯಿಸಿಕೊಳ್ಳುವ ಯಾವ ಭಾವನೆಗಳೂ ಇಲ್ಲದ ಯಾವುದೋ ಪಾರ್ಕಿನ ಮೂಲೆಯಲ್ಲಿರುವ ವಿಗ್ರಹದಂತಹ ಗಂಡನೊಂದಿಗೆ ಅರ್ಥವೇ ಇಲ್ಲದ ಬದುಕು ಕಳೆದ ಹೆಂಡತಿಗೆ ಪ್ರೇಮದ ಕಾಣಿಕೆಯಂತಿರುವ ಮಗನೇ ದೊಡ್ಡ ಭರವಸೆಯಂತೆ ಕಾಣುತ್ತಾನೆ. ಎಂಥ ಜಗವೇ ಮೆಚ್ಚುವ ಸಾಹಿತಿಯಾಗಿರಲಿ ಅವನ ಬದ್ಧತೆ ಮತ್ತು ನಿಷ್ಟುರತೆಯನ್ನು ಅರ್ಥ ಮಾಡಿಕೊಂಡು ಅದನ್ನು ತಾವೂ ಕೂಡ ರೂಢಿಸಿಕೊಂಡು ಹೋಗುವ ಜೀವನ ಸಂಗಾತಿಗಳು ಮತ್ತು ಕುಟುಂಬದ ಸದಸ್ಯರು ದೊರೆತರೆ ಅವನ ಬದುಕು ಸ್ವರ್ಗ ಇಲ್ಲದಿದ್ದರೆ ಅವನ ಬದುಕು ಎಂಥ ಘೋರ ವೈಫಲ್ಯಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಸಹ ಈ ಕತೆ ಅತ್ಯಂತ ಮಾರ್ಮಿಕವಾಗಿ ಹೇಳುತ್ತದೆ.

ಪೋರ್ಚುಗೀಸು ಮೂಲದ, ಯಾವ ಶುಭ ಸಮಾರಂಭಗಳಿಗೂ ಬೇಡವಾದ ಆದರೆ ಸರಕಾರಿ ಯೋಜನೆಗಳ ಮತ್ತು ಪೋಲೀಸರ ಕಾರ್ಯಾಚರಣೆಗಳಿಗೆ ಮಾತ್ರ ಹೇಳಿ ಮಾಡಿಸಿದಂತಿರುವ ಫೋಟೋಗ್ರಾಫರ್ ಆದ, ತನಗೆ ಎಳ್ಳಷ್ಟೂ ಇಷ್ಟವಿಲ್ಲದ ಡಿ-ಗ್ಲಾಮರ್ ಹೆಸರಾದ ರಾಬಿನ್ ಡಿಸಿಲ್ವಾ ಎಂಬ ನಾಮಾಂಕಿತ ಫೋಟೋಗ್ರಾಫರ್ ಕಥೆಗಾರನಾಗಿ ಹುಟ್ಟಬೇಕಿತ್ತು ಆದರೆ ಅದು ಹಾಗಾಗಲಿಲ್ಲ. ಅವನು ಸರ್ವಸಾಕ್ಷಿಪ್ರಜ್ಞೆಯಂತೆ ಆವರಿಸಿರುವ ‘‘ಅಂತಾರಾಷ್ಟ್ರೀಯ ಕುಂಬಳಕಾಯಿ’’ ಕತೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಟಿಬೇಟಿಯನ್ ಕ್ಯಾಂಪಿನ ಮೂವರು ಮಕ್ಕಳು  ಕಾಣೆಯಾಗಿ ಅದೊಂದು ಅಂತರಾಷ್ಟ್ರೀಯ ಸೂಕ್ಷ್ಮ ಪ್ರಕರಣವಾಗಿ ಅಲ್ಲೋಲಕಲ್ಲೋಲ ಉಂಟು ಮಾಡಲು ಕ್ಷಣಗಣನೆ ಆರಂಭವಾಗುತ್ತದೆ. ಇದನ್ನು ಭೇದಿಸಲು ತೊಡಗುವ ತನಿಖಾಧಿಕಾರಿ ಏಎಸೈ ಮಾಲಿಂಗಭಟ್ಠರ ಮೇಲೆ ಭಾರತ ಟಿಬೆಟ್ ಸ್ನೇಹ ಬಳಗದ ಅಧ್ಯಕ್ಷ ಮುತ್ತಪ್ಪನವರ ಅಸಾಧ್ಯ ಒತ್ತಡ ಒಂದು ಕಡೆಯಾದರೆ ಅವರು ಆರಾಧಿಸುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆಯಾದ ಸುಂದರಿ ಶಹನಾಜಳ ಆಕ್ರೋಶ ಒಂದು ಕಡೆ ಹಿಂಡಿ ಹಿಪ್ಪೆಯನ್ನಾಗಿ ಮಾಡುತ್ತದೆ. ಮಕ್ಕಳೇನೋ ಸಿಗುತ್ತವೆ ಆದರೆ ಅವರನ್ನು ಕಾಪಾಡಿದ ಮಾಜಿ ಸೈನಿಕನ ಹೆಂಡತಿ ಅವಳ ಗಂಡನಿಂದ ಅನುಭವಿಸುವ ದೌರ್ಜನ್ಯ ನಿಜಕ್ಕೂ ಭೀಕರವಾದದ್ದು. ಆ ಯಮ ಯಾತನೆಯ ನಡುವೆಯೂ ಅವಳು ಆ ಮೂವರು ಮಕ್ಕಳ ಬದುಕಿನ ಬಗ್ಗೆಯೇ ಯೋಚಿಸುತ್ತಾಳೆ ಆ ಮೂಲಕ ಮಾನವೀಯ ಮೌಲ್ಯಗಳ ಪ್ರತಿನಿಧಿಯಾಗಿ ಉಳಿಯುತ್ತಾಳೆ.

ಅಬ್ದುಲ್ ರಶೀದರ ಈ ಕತೆಗಳು ತುಂಬಾ ಸಾಮಾನ್ಯರ ಕುರಿತ ಕತೆಗಳಾಗಿದ್ದರೂ ಕೂಡ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿನ ಪಾತ್ರಗಳು ಕೂಡ ಕಾಡದೇ ಇರುವುದಿಲ್ಲ. ಮಹಾನಗರದ ಯಾವದೋ ಜನನಿಬಿಡ ಸ್ಥಳದಲ್ಲಿ ತಿರುಗಾಡುವಾಗ ಕಾರ್ತ್ಯಾಯಿನಿ ಧುತ್ತನೆ ಎದುರಾಗುತ್ತಾಳೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ನೀವು ಹಾದು ಹೋಗುವಾಗ ಅಲ್ಲೇನಾದರೂ ಪ್ರತಿಭಟನೆ ನಡೆಯುತ್ತಿದ್ದರೆ ಒಮ್ಮೆ ಗಮನಿಸಿ ನೋಡಿ ಅಲ್ಲಿ ರಾಬಿನ್ ಡಿಸಿಲ್ವಾ ಕಾಣುತ್ತಾನೆ. ದಿನ ಪತ್ರಿಕೆ ತಿರುವಿ ಹಾಕುತ್ತಾ  ಚಳುವಳಿಯೊಂದರ ಸುದ್ದಿ ಓದುವಾಗ ಕಾಮ್ರೇಡ್ ಆಲಿ ಯ ಭಾವ ಚಿತ್ರ ಕಂಡರೂ ಅಚ್ಚರಿಯಿಲ್ಲ. ಅಂದ ಹಾಗೆ ಪಾತ್ರಗಳು ಎದುರಾದರೆ ಕಥೆಗಾರ ಜವಾಬ್ದಾರನಲ್ಲ..!

‍ಲೇಖಕರು avadhi

July 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: