ರಾಧಾಕೃಷ್ಣ ಕೆ ಉಳಿಯತಡ್ಕ
**
ಕವಯಿತ್ರಿ ಅಕ್ಷಯ ಆರ್ ಶೆಟ್ಟಿ ಅವರ ಹೊಸ ಕವನ ಸಂಕಲನ ‘ಹಿಡಿ ಅಕ್ಕಿಯ ಧ್ಯಾನ’.
ಮಂಗಳೂರಿನ ‘ತುಡರ್ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಖ್ಯಾತ ಹಿರಿಯ ಕವಿ ರಾಧಾಕೃಷ್ಣ ಕೆ ಉಳಿಯತಡ್ಕ ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.
**
(ಲೇಖಕರ ಬಗ್ಗೆ – ರಾಧಾಕೃಷ್ಣ ಕೆ. ಉಳಿಯತಡ್ಕ ಕೇರಳ ರಾಜ್ಯದ ಕಾಸರಗೋಡಿನ ಹಿರಿಯ ಕವಿ, ಪತ್ರಕರ್ತ, ಕನ್ನಡ ಹೋರಾಟಗಾರ. ಇಪ್ಪತ್ತೆರಡಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿರುವ ಇವರು, ಹಲವು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಮತ್ತು ಅಭಿನಂದನಾ ಸಂಪುಟ, ಸಂಸ್ಮರಣಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಇವರ ಕನ್ನಡ ಹಾಗೂ ತುಳು ಕವನಗಳು ಇಂಗ್ಲಿಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಿಗೆ ಅನುವಾದಗೊಂಡಿದೆ. ಕೇರಳದಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯಗಳಾಗಿವೆ.)
**
ಅಕ್ಷಯ ಆರ್. ಶೆಟ್ಟಿ ಸೂಕ್ಷ್ಮ ಸಂವೇದನೆಯ ಕವಯಿತ್ರಿ. ಪ್ರಯೋಗಶೀಲತೆಯನ್ನು ಬಹುವಾಗಿ ಮೆಚ್ಚಿಕೊಂಡವರು. ‘ಹಿಡಿ ಅಕ್ಕಿಯ ಧ್ಯಾನ’ ಅವರ ಮೂರನೆಯ ಕವನ ಸಂಕಲನ. ವೈವಿಧ್ಯಮಯ ರಾಚನಿಕ ವಿನ್ಯಾಸಗಳನ್ನು ಅದರಲ್ಲಿ ಗಮನಿಸಬಹುದು. ಅಕ್ಷಯ ಅವರ ಹಿಂದಿನ ಎರಡು ಕವನ ಸಂಕಲನಗಳನ್ನು ನಾನು ಓದಿದ್ದೆ. ಕಾವ್ಯದ ಅನನ್ಯತೆ ಮತ್ತು ಪ್ರಯೋಗದ ವಿಶಿಷ್ಟತೆಯನ್ನು ಗುರುತಿಸಿದ್ದೆ. ಇನ್ನಷ್ಟು ಅಧ್ಯಯನಕ್ಕೊಳಗಾಗಬೇಕಾದ ಅನಿವಾರ್ಯತೆಯನ್ನೂ ಸೂಚಿಸಿದ್ದೆ. ಆಧುನಿಕ ಕನ್ನಡ ಕಾವ್ಯವನ್ನು ಶೋಧಿಸುವವರು, ಬೋಧಿಸುವವರು
ಅಕ್ಷಯ ಅವರ ಕವನಗಳನ್ನು ಬಗೆದು ನೋಡಲೇಬೇಕು. ಮೊದಲ ಕವನ ಸಂಕಲನ ‘ನನ್ನ ಹಾದಿ’ಯಲ್ಲಿ ಸಮಕಾಲೀನ ಸ್ಥಿತಿಗತಿಗೆ ಕನ್ನಡಿ ಹಿಡಿದ ಕವಯಿತ್ರಿ ಅನಂತರದ ‘ಬದುಕು ಭಾವದ ತೆನೆ’ಯಲ್ಲಿ ವರ್ತಮಾನದ ಅವ್ಯವಸ್ಥೆಯ ವಿರುದ್ಧ ತಣ್ಣಗೆ (ಕಲಾತ್ಮಕವಾಗಿ) ಪ್ರತಿಭಟಿಸಿದ್ದಾರೆ. ವಸ್ತು, ಭಾಷೆ, ಭಾವ ಕಾವ್ಯಮುಖದಲ್ಲಿ ಸಶಕ್ತವಾಗಿ ಅನಾವರಣಗೊಂಡಿರುವುದನ್ನು ಗಮನಿಸಬಹುದು. ಬದುಕನ್ನು ರೂಪಿಸಿದ ಬಗೆಬಗೆಯ ವಿಚಾರಗಳೂ ಕವನಗಳಾಗಿವೆ.
ಕವಯತ್ರಿ ಅಕ್ಷಯ ಆರ್ ಶೆಟ್ಟಿ
೨೦೨೩ರಲ್ಲಿ ಮಂಗಳೂರಿನ ತುಡರ್ ಪ್ರಕಾಶನದ ಮೂಲಕ ಬೆಳಕಿಗೆ ಬಂದ ‘ಹಿಡಿ ಅಕ್ಕಿಯ ಧ್ಯಾನ’ದಲ್ಲಿ ೩೮ ಎದೆ ತಟ್ಟುವ, ೧೨ ಮನಮುಟ್ಟುವ ರಚನೆಗಳಿವೆ. ಭಾವಗಳು ಕವಿತೆಗಳಾಗಿ ಒಂದೇ ಓದಿಗೆ ದಕ್ಕುವುದಿಲ್ಲ, ಸದಾ ಕಾಡುತ್ತಲೇ ಇರುತ್ತವೆ. ಅಕ್ಷಯ ಅವರು ಆ ಭಾವಗಳನ್ನು ‘ಕಾಡುವ ಭಾವಗಳು’ ಎಂದು ಕರೆದಿದ್ದಾರೆ. ಖ್ಯಾತ ಕವಿ ವಾಸುದೇವ ನಾಡಿಗ್ ಮುನ್ನುಡಿಯ ಮೂಲಕ ಅವರ ಕಾವ್ಯ ಪ್ರವೇಶಕ್ಕೆ ಸುಗಮ ಹಾದಿ ಕಲ್ಪಿಸಿದ್ದಾರೆ. ಕನ್ನಡಾಂತರ್ಗತ ತುಳುನಾಡಿನ ಹಿರಿಯ ಕವಿ, ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಅವರಿಗೆ ಈ ಕೃತಿಯನ್ನು ಸಮರ್ಪಿಸಲಾಗಿದೆ. “ಪ್ರೀತಿ ಸಹನೆಯ, ವಿದ್ಯೆ ಬುದ್ಧಿಯ, ಧಾರೆ ಎರೆವ ಎಲ್ಲ ಗುರುಗಳಿಗೆ” ಅಕ್ಷಯ ‘ಗುರುನಮನ’ ಸಲ್ಲಿಸುತ್ತಾರೆ. ಅಮ್ಮನ ಪ್ರೀತಿ ಒಂದು ಅದ್ಭುತ ಶಕ್ತಿ. ಇಡೀ ಜಗತ್ತನ್ನೇ ಮಡಿಲ ಮಗುವನ್ನಾಗಿ ಮಾಡಿಕೊಳ್ಳುವ ರೀತಿ ಆಕೆಯದು. ಬದುಕಿಗೆ ಜೀವ ಕೊಡುವ ಅಮ್ಮ ಜೀವ ಕಾರುಣ್ಯದ ತವರು. “ಒಂದು ಹಿಡಿ ಅಕ್ಕಿಯಾಸರೆಯಲೆ ಉಳಿದಿರುವ ಜೀವ”. ಅಕ್ಷಯ ಅವರು ಅನುಭವದಲ್ಲಿ ಕಂಡುಕೊಂಡ ಪರಮ ಸತ್ಯವನ್ನು ಇಲ್ಲಿ ಕಾವ್ಯವಾಗಿಸಿದ್ದಾರೆ.
“ರೋಗವನ್ನೆ ಹಾಸಿ ಹೊದೆದು
ಹೆಣವಾಗಿ ಮಲಗಿದ
ಅಮ್ಮನ ಮುಂದೆ
ನಾಲ್ಕು ತಿಂಗಳ
ಹಸುಗೂಸ ಎದೆಗವಚಿದ ಅಪ್ಪ
ಸದಾ ನೆನಪಾಗುತ್ತಾನೆ”.
ಅಮ್ಮನಿಗೆ ತಾಯ್ತನವೇ ಅವಳ ನಿಜವಾದ ಸಿದ್ಧಿಯಾದರೆ, ಅಪ್ಪನಿಗೆ ಕಾಯಕವೇ ಕೈಲಾಸ. “ಬದುಕಿನ ಪುಂಜಕ್ಕೆ ಕಡ್ಡಿಗೀರಿ ಬೆಳಕು ಹಚ್ಚುವುದ
ತಿಳಿಸಿಕೊಟ್ಟವ, ಅವ ಬುದ್ಧನಲ್ಲ” ಎಂಬುದು ಅನುಭವ ವೇದ್ಯ. ಸಂಕಲನದ ‘ಒಂದು ಹಿಡಿ ಅಕ್ಕಿ’ ಮತ್ತು ‘ಅಪ್ಪ ಬುದ್ಧನಾಗಲಿಲ್ಲ!’ ಎಂಬೆರಡು ಕವನಗಳಲ್ಲಿ ಅಮ್ಮ, ಅಪ್ಪನ ಗಾಢ ಅಂತಃಕರಣ, ದುಡಿಮೆ ಮತ್ತು ಗೈಮೆಯ ಸತ್ಫಲದ ಅಂತಃಸತ್ವವನ್ನು ದರ್ಶಿಸಬಹುದು.
“ಅನಾಯಸ ಹುಟ್ಟು ನಿಶ್ಚಿತ ಸಾವು
ನಡುವೆ ಜೀವನ ಪಠ್ಯ
ತೆರೆದು ತೋರಿದ ಅಬ್ಬೆ
ಜೊತೆಗಿದ್ದ ಅಯ್ಯ
ಬದುಕ ಕೋನಕೆ
ಎಳಸೊಂದರ
ಜೋಡಿಸಿಟ್ಟ
ಆ ಎರಡು ಕಣ್ಣುಗಳಿಗೆ”
ಅಕ್ಷಯ ನಮನ ಸಲ್ಲಿಸುತ್ತಾರೆ. ಸಾಕಾರಗೊಳ್ಳದ ಇಂದ್ರಿಯ ಗ್ರಾಹ್ಯ ಸುಖದ ಕಲ್ಪನೆ ಕೊನೆಗೂ ಮರೀಚಿಕೆಯಾಗಿ ಉಳಿಯುವ ಹೆಣ್ಣಿನ ವೇದನೆ ಮತ್ತು ಸಂವೇದನೆ ‘ಸಂಗಮದ ಪಾವಿತ್ರ್ಯತೆ’ಯಲ್ಲಿದೆ. ‘ಹಚ್ಚಿಕೊಳ್ಳುವುದೆಂದರೆ’ “ಮೈದೊಗಲ ಮುಟ್ಟುವಿಕೆ ಕೂಡಾ ಅಶ್ಲೀಲದ ಪರಿಧಿ ದಾಟುವ ಅವಧಿ / ರೋಮದಂಚುಗಳಲಿ ನವುರು ಭಾವ ಉಳಿಸುವ ತೆರದಿ” ಎಂಬ ಸತ್ಯವನ್ನು ಕಂಡುಕೊಂಡ ಹೆಣ್ಣು “ಪ್ರೀತಿಸಲೇಬಾರದು, ಕಳೆದುಕೊಳ್ಳುವಿಕೆಯ ನೋವು ಬರಿಸಲಸದಳ” (ಬೆಕ್ಕು) ಎಂಬ ತೀರ್ಮಾನಕ್ಕೆ ಬರುತ್ತಾಳೆ. “ಬಯಸದೆ ಕಟ್ಟಿದ ಗೆಜ್ಜೆ, ಎಚ್ಚರದಿ ಇಟ್ಟ ಹೆಜ್ಜೆ/ ಯಾವುದೂ ದಕ್ಕಲಿಲ್ಲ” ಎಂದು ಮರುಗುವ ಆಕೆಯ ಮನಸು ‘ಕಟ್ಟಿರುವ ಗೆಜ್ಜೆ’ಯಲ್ಲಿ ಹಪಹಪಿಸುತ್ತದೆ. ‘ಭೌತಿಕವಾದವೂ ತಾತ್ವಿಕತೆಯೂ’ ಬೆಸೆದಾಗ ಬದುಕಿನಲ್ಲಿ ಗಳಿಸಿದ್ದೇನು ಎಂಬ ಪ್ರಶ್ನೆ ಮೂಡುವುದು ಸಹಜ. ಆಕರ್ಷಣೆ – ಆಮಿಷಗಳೆಲ್ಲವನ್ನು ಪರಿಭಾವಿಸುತ್ತಲೇ ಆತ್ಮಶೋಧನೆಗೆ ಮುಂದಾಗುವ ‘ನಾರ್ಸಿಸಸ್ ಮತ್ತು ನಾನು’, ಸದಾ ಒಳಗನ್ನು ಹೊರಚೆಲ್ಲುವ ತವಕದಲ್ಲಿ ಸಂಕಲ್ಪದ ಕೊನೆಗೆ ಕರಗುವ ಮಹಿಳೆಯ ತುಮುಲಗಳು ‘ಒಲೆಯ ಮುಂದು’ ಕವನದಲ್ಲಿ ಅಭಿವ್ಯಕ್ತಗೊಂಡಿದೆ.
ಬದುಕಿನ ಸಂಭ್ರಮ-ತಲ್ಲಣಗಳೇ ಕಾವ್ಯದ ಜೀವ ಶಕ್ತಿ. ನಾಲ್ಕು ಕೋಣೆಗಳಲ್ಲಿ ಸಂವಾದಿಸುವ ‘ಮನದ ಮಜಲುಗಳು’ ಭಾವದ ಸಾಕ್ಷಿಪ್ರಜ್ಞೆ ಜಾಗೃತವಾಗಿರುವ ‘ಬದುಕು-ಭಾವ’ ಮೊದಲಾದವುಗಳಲ್ಲಿ ಸಂಸ್ಕಾರಗೊಂಡ ಭಾಷೆಯನ್ನು ಗಮನಿಸಬಹುದು. “ಬದುಕಾಗಿದ್ದ ಭಾವಗಳು ಅಳಿದೇ ಇಲ್ಲ” (ಅಮೃತ ಗಳಿಗೆಗಳು) ಎನ್ನುವ ಸಾಲು ಬದುಕು-ಕಾವ್ಯ ಅಭಿನ್ನ ಎಂಬುದನ್ನು ಸೂಚಿಸುತ್ತದೆ. “ಆತ್ಮಸಖ್ಯದ ಕಸುವಿಗೊಂದು ಭಾವ ತುಂಬುವ ಜೀವ” ಬಯಸುವ ಕವಯಿತ್ರಿ ‘ಹಸಿವಿಗೊಂದಿಷ್ಟು’ ಆಹಾರ ನೀಡುತ್ತಾರೆ. ‘ಸಾಮಾನ್ಯಳ ಸ್ವಗತ’ದಲ್ಲಿ ಪುರುಷರನ್ನು, ‘ಮುಂಗಾರಿನಲ್ಲೊಂದು ಸ್ವಗತ’ದಲ್ಲಿ “ಅಪ್ಪಯ್ಯನ ಉಸಿರೊಳಗೆ ಉಸಿರಾದ ಅವ್ವ”ನನ್ನು ಅಕ್ಷಯ ಸ್ಮರಿಸುತ್ತಾರೆ. ಗತಕಾಲದ ಗತಿ, ವರ್ತಮಾನದ ಸ್ಥಿತಿ ಸ್ವಗತ ಸ್ವಕಾವ್ಯವಾಗಿದೆ. ಕೆಲವು ಸತ್ಯಗಳನ್ನು ಬಯಲು ಮಾಡುವ ‘ಗಡಿ ಮತ್ತು ಮನಸು’ ಆಪ್ತವಾಗುತ್ತದೆ. ‘ಸ್ವಾತಂತ್ರ್ಯ ಮತ್ತು ಆಚರಣೆ; ಸವಾಲಿನೊಳಗೆ ಸ್ವಾತಂತ್ರ್ಯೋತ್ಸವ’ ವರ್ತಮಾನದ ಅವ್ಯವಸ್ಥೆಯನ್ನು ಧ್ವನಿಸುವ ರಚನೆಗಳು. ‘ಒಡೆದ ಮಡಕೆಯ ಇಣುಕು ನೋಟ’ದಲ್ಲಿ ಸಮಕಾಲೀನ ಸಂದರ್ಭದ ಎಲ್ಲ ವೈರುಧ್ಯಗಳನ್ನು ಗುರುಸಿಸಬಹುದು.
ಸಂಕಲನದ ‘ಯುಗಾದಿ ಮತ್ತು ನಾನು’ ಕವನ ಸವಾಲು ಮತ್ತು ತರ್ಕದ ನಡುವಿನ ಚಲನಕ್ರಿಯೆಯಲ್ಲಿ ನಿಲ್ಲುವ ಭಾವ ವ್ಯಕ್ತಿ, ಪ್ರಕೃತಿ, ಸಂಸ್ಕೃತಿಯ ಮೂಲಭೂತವನ್ನು ಪ್ರಶ್ನಿಸುತ್ತದೆ. ‘ರಾಧಾರಮಣರ ನಡುವೆ ನಾವೂ ನೀವೂ’ ಒಂದು ಖಂಡ (ಕಥನ) ಕಾವ್ಯದ ಹಾಗಿದೆ. ಅದರಲ್ಲಿ ಭಾಷೆಯನ್ನು ದುಡಿಸಿಕೊಂಡ ರೀತಿ ಚೆನ್ನಾಗಿದೆ. ದುರಂತವನ್ನು ಚಿತ್ರಿಸುವ ‘ಬೆಕ್ಕು’ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಕಾವ್ಯ ಒಂದು ವಿಕಾಸದ ಹಾದಿಯಲ್ಲಿ ಕ್ರಮಿಸುವುದನ್ನು ‘ಹೀಗೊಂದು ತರ್ಕ’ದಲ್ಲಿ ಕಾಣಬಹುದು. ‘ನಂಬಿಕೆ, ದೇವರು ಮತ್ತು ಸಮಾಜ’ ಚಿಂತನೆಗೆ ಹಚ್ಚುತ್ತದೆ. ‘ಗಾಜಿನ ಮೇಲ್ಛಾವಣಿ ಎಂಬೊಂದು ರೂಪಕ’ ಭಾವಸ್ಪರ್ಶದ ಅನುಭವ ನೀಡುತ್ತದೆ. ‘ಅಸ್ತಿತ್ವದ ಅಂಗಳದಿ ಬಿದ್ದಿರುವ ಕನಸಿನ ರೆಕ್ಕೆ’ ಬಿಚ್ಚಿ ಹಾರಿದ ಮನಸು ಆಕಾಶಗಂಗೆಯ ಮಡಿಲಲ್ಲಿ ಇರವಿನ ಅರಿವನ್ನು ಕೆದಕುತ್ತಾ ಬೆಡಗು ಬೆರಗು ಮೂಡಿಸುತ್ತದೆ. ಹೆಚ್ಚಿನ ಕವನಗಳಲ್ಲಿ ಸಾಮಾಜಿಕ ಕಳಕಳಿಯಿದೆ. ಸಮಕಾಲೀನ ಸಂದರ್ಭದ ಶುಭಾಶುಭ ಫಲಗಳು ಅನುಭವಕ್ಕೆ ಬಂದಿದೆ. ಕಳೆದ ಕೆಲವು ದಶಕಗಳಿಂದ ಮಹಿಳೆಯರ ಕಾವ್ಯ ಸ್ತ್ರೀವಾದಿ ನೆಲೆಯ ಆಶಯಗಳನ್ನು ಪ್ರತಿನಿಧಿಸುತ್ತಾ ಬಂದಿದೆ. ಸ್ತ್ರೀವಾದದ ಬೆನ್ನು ಹತ್ತಿ ಪುರುಷ ದ್ವೇಷದಲ್ಲಿ ರೋಷಗೊಳ್ಳುವ ಕವಯಿತ್ರಿಯರನ್ನೂ ಕಾಣಬಹುದು.
ಆದರೆ ಅಕ್ಷಯ ಸೌಮ್ಯದ ಪ್ರತೀಕ. ‘ಹಿಡಿ ಅಕ್ಕಿಯ ಧ್ಯಾನ’ ಮೆಲುದನಿಯ ಆತ್ಮೀಯ ಸಲ್ಲಾಪದ ಅಕ್ಷಯ ಕಾವ್ಯ. ಅಖಂಡವಾದ ಜೀವನ ಪ್ರೀತಿ, ಸ್ನೇಹ, ಒಲವು, ಅವ್ಯವಸ್ಥೆಯ ವಿರುದ್ಧದ ಧ್ವನಿ, ಸಮಾಜ ವಿಮರ್ಶೆ, ಸಂಯಮ ಇಲ್ಲಿ ಕಾಣಿಸಿಕೊಂಡಿದೆ. ಕಾವ್ಯ ಒಂದು ಕಸುಬುಗಾರಿಕೆ, ಕಲೆ. ಕವಿಯ ಪರಿಶ್ರಮದ, ಶೋಧನೆಯ ಫಲ. ಪ್ರತಿ ವಸ್ತುವೂ ಪ್ರತಿಭೆಯ ಮೂಸೆಯಲ್ಲಿ ಹೊಸ ಆವಿಷ್ಕಾರ ಪಡೆದುಕೊಳ್ಳುತ್ತದೆ. ಕಾವ್ಯ ಸಮಾಜಮುಖಿಯಾಗಿರಬೇಕು, ಸಮಕಾಲೀನ ಸ್ಥಿತಿಗತಿಗೆ ಸ್ಪಂದಿಸಬೇಕು. ಜನಪರ, ಜೀವನಪರವಾಗಿರಬೇಕು. ಅಕ್ಷಯ ಆರ್. ಶೆಟ್ಟಿಯವರ ಕಾವ್ಯ ಈ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದೆ. ಅದು ಸಹಜ ವಿಕಾಸದ ಹಾದಿ ಕ್ರಮಿಸಿರುವುದು ಈ ಸಂಕಲನದಿಂದ ಸ್ಪಷ್ಟವಾಗಿದೆ. ಅವರ ರಚನೆಗಳ ಆಳಕ್ಕಿಳಿಯುವ ಪ್ರಯತ್ನ, ಬಗೆದು ನೋಡುವ ಪರಿಶ್ರಮ, ಧನಾತ್ಮಕವಾಗಿ ಸ್ಪಂದಿಸುವ ಸಂಯಮ ಓದುಗರಲ್ಲಿರಬೇಕು ಅಷ್ಟೆ.
0 ಪ್ರತಿಕ್ರಿಯೆಗಳು