ಮೂರು ಹೊಸ ಕೃತಿಗಳೊಂದಿಗೆ ವೀರಭದ್ರಪ್ಪ ಬಿಸ್ಲಳ್ಳಿ

ಕುಂದೂರು ಉಮೇಶಭಟ್ಟ

ಮೈಸೂರಿನಲ್ಲಿ ಗೆಳೆಯ ವೀರಭದ್ರಪ್ಪ ಬಿಸ್ಲಳ್ಳಿ ಮೂರು ಕೃತಿಗಳ ಬಿಡುಗಡೆ ಸಂತಸ. ಬಹುಕಾಲದ ಗೆಳೆಯ, ಪತ್ರಕರ್ತ ಮಿತ್ರ ವೀರಭದ್ರಪ್ಪ ಬಿಸ್ಲಳ್ಳಿ ಅವರು ಕೋವಿಡ್ ಕಾಲದಲ್ಲೂ ತ್ರಿವಳಿ ಪುಸ್ತಕ ಹೆತ್ತಿದ್ದಾರೆ !.

‘ಏನ್ ಕೊರೊನಾ ಬಂತಪ್ಪ, ಒಂದೂವರೆ ವರ್ಷದಿಂದ ದಿನ ಕಳೆದದ್ದೇ ಗೊತ್ತಾಗಲಿಲ್ಲ, ಏನು ಮಾಡಲಾಗಲಿಲ್ಲ’ ಎಂದು ಗೊಣಗಿಕೊಳ್ಳುವವರ ನಡುವೆ ಮಿತ್ರ ವೀರು ಮೂರು ಭಿನ್ನ ವಿಷಯಗಳ ಕೃತಿ ಹೊರ ತಂದಿದ್ದಾರೆ.

ಸಮಾಜವಾದಿ ನಾಯಕರು, ಹೋರಾಟಗಾರರು, ಪತ್ರಕರ್ತರ ಬದುಕು ತೆರೆದಿಡುವ ಲೋಕಾಂತದ ಮೊರೆತ, ಮುಂಬೈನಲ್ಲಿ ನಡೆದ ಹೈಪ್ರೊಫೈಲ್ ಹತ್ಯೆಯ ರೋಚಕ ಇಂದ್ರಜಾಲ, ಈ ಮಣ್ಣಿನ ಸ್ಮರಣೆಯ ನೆಲದ ನೆನಹು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ. ಹಿಂದೆ ಬೊಲಿವಿಯಾ ಪ್ರವಾಸ ಕೈಗೊಂಡಿದ್ದ ವೀರು ಕೃತಿ ಹೊರ ಬಂದಿತ್ತು.

ಶಿವಮೊಗ್ಗದ ಕಾಲೇಜು ಹಾಗೂ ಪತ್ರಿಕೋದ್ಯಮದ ದಿನಗಳಿಂದಲೂ ಸ್ನೇಹಿತನಾದ ವೀರು ಸಹ್ಯಾದ್ರಿ ಕಾಲೇಜಿನ ಕನ್ನಡ ವಿದ್ಯಾರ್ಥಿ. ಕನ್ನಡ ವಿಭಾಗದಲ್ಲಿ ದೊಡ್ಡ ಬಳಗವೇ ಇತ್ತು. ರವಿಕುಮಾರ್ ಟೆಲೆಕ್ಸ್, ಪಿ. ಓಂಕಾರ್, ಶಿ ಜು ಪಾಶ, ವೈ ಗ ಜಗದೀಶ್, ಹುಲಕೋಡು ರಾಮಸ್ವಾಮಿ, ಚಂದ್ರಶೇಖರ ಶೃಂಗೇರಿ, ಎ ಆರ್ ರಘುರಾಂ, ನಾಗರಾಜ ನೇರಿಗೆ, ಸಂತೋಷ್ ಕಾಚಿನಕಟ್ಟೆ, ಆರ್.ಎಸ್. ಹಾಲಸ್ವಾಮಿ, ಚಂದ್ರಶೇಖರ ಹೊನ್ನಾಳಿ, ನಾಗರಾಜ ಶ್ರೇಷ್ಠಿ, ಮಂಜುನಾಥ ವಡ್ಡಿನಕೊಪ್ಪ, ಶಿವಮೂರ್ತಿ ಹೊತ್ತಾರೆ, ನಾಗರಾಜ ಕಲ್ಲುಕೊಪ್ಪ, ಚಂದ್ರಕಲಾ, ದೇಶಾದ್ರಿ ಹೊಸ್ಮನಿ, ಸುರೇಶ್ ಬಿಸ್ಲಳ್ಳಿ, ಎ ಆರ್‌ ಗಿರಿಧರ ಸಹಿತ ಹಲವರು ಬಳಗದಲ್ಲಿದ್ದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿದ್ದ ನಮಗೂ ಕನ್ನಡದ ಬಗ್ಗೆ ಆಸಕ್ತಿ. ನಮ್ಮನ್ನೆಲ್ಲಾ ಬೆಸೆದಿದ್ದೇ ಕರ್ನಾಟಕ ಸಂಘ ಹಾಗೂ ಶಿವಮೊಗ್ಗದ ಪತ್ರಿಕೋದ್ಯಮ. ಕಾಲೇಜು ದಿನಗಳಲ್ಲಿಯೇ ಬರವಣಿಗೆ ಕೃಷಿ ಆರಂಭಿಸಿದ್ದ ವೀರು ನಂತರ ಶಿವಮೊಗ್ಗದಲ್ಲೇ ಪತ್ರಕರ್ತ ವೃತ್ತಿಗೆ ಇಳಿದಾತ. ಶಿವಮೊಗ್ಗದ ಕರ್ನಾಟಕ ಸಂಘ ಎನ್ನುವ ಆಲದ ಮರ ಸಾಹಿತ್ಯದ ನಂಟನ್ನು ನಮ್ಮೆಲ್ಲ ಎಳೆಯ ಪತ್ರಕರ್ತರ ಬಳಗಕ್ಕೆ ಹಚ್ಚಿತ್ತು.

ಎಲ್ಲ ಪಂಥಗಳ ಸಾಹಿತಿಗಳು ಕರ್ನಾಟಕ ಸಂಘಕ್ಕೆ ಬರುತ್ತಿದ್ದರು. ಲಂಕೇಶ್, ಅನಂತಮೂರ್ತಿ, ದೇವನೂರ ಮಹಾದೇವ, ತೇಜಸ್ವಿ, ಕುಂವೀ, ರಾಮಚಂದ್ರ ಶರ್ಮ, ಬೈರಪ್ಪ, ಕಿರಂ, ರಹಮತ್ ತರೀಕೆರೆ, ಓಎಲ್ ನಾಗಭೂಷಣಸ್ವಾಮಿ.. ಇವರನ್ನೆಲ್ಲಾ ನೋಡುವ, ಅವರ ಮಾತು ಕೇಳುವ, ಓದುತ್ತಲೇ ಒಂದಿಷ್ಟು ಬರೆಯುವ ವೇದಿಕೆಯೂ ಅದಾಗಿತ್ತು. ಸಾಹಿತ್ಯ, ಬಂಗಾರಪ್ಪ, ಜೆಎಚ್‌ಪಟೇಲ್ ಸಹಿತ ಹಲವು ಸಮಾಜವಾದಿ ನಾಯಕರ ಪ್ರಭಾವಗಳು ಅಲ್ಲಿಯೇ ಅನುಭವಕ್ಕೆ ದಕ್ಕಿದವು.

1999ರಲ್ಲಿ ಮೈಸೂರು ‘ಆಂದೋಲನ’ ನಮ್ಮನ್ನೆಲ್ಲಾ ಸೆಳೆಯಿತು. ಓಂಕಾರ್, ವಡ್ಡಿನಕೊಪ್ಪ ಮೊದಲೇ ಮೈಸೂರಿಗೆ ಬಂದರೆ ನಂತರ ನಾನೂ ಮೈಸೂರಿಗೆ ಹೊರಟೆ. ಆನಂತರ ವೀರು ಕೂಡ ಕೂಡಿಕೊಂಡ. ಜಯನಗರದಲ್ಲಿ ನಮ್ಮ ವಾಸ್ತವ್ಯ, ಕಚೇರಿಯ ಜತೆಯ ಜತೆಗೆ ಮನೆಯಲ್ಲೂ ವೀರುಗೆ ನಿರಂತರ ಓದುವ ಹವ್ಯಾಸ. ಯಾವುದೇ ಹೊಸ ಪುಸ್ತಕ ಬಂದರೂ ಅದು ಮನೆ ಸೇರುತ್ತಿತ್ತು. ಓದಿದ ಮೇಲೆ ಪರ ವಿರೋಧದ ಚರ್ಚೆ, ಹರಟೆ ಇರುತ್ತಿತ್ತು.

ಬೇಂದ್ರೆ ಬಗ್ಗೆ ವೀರುಗೆ ವಿಶೇಷ ಆಸಕ್ತಿ. ‘ಜ್ಞಾನಬುತ್ತಿ’ ಕನ್ನಡ ತರಗತಿಗಳಿಗೆ ವೀರು ಪಾಠ ಮಾಡುತ್ತಿದ್ದುದೂ ಉಂಟು. ಮೈಸೂರಿನಿಂದ ಬೆಂಗಳೂರಿಗೆ ‘ವಿಜಯ ಕರ್ನಾಟಕ’ಕ್ಕೆ ಹೊರಟ ವೀರು ಓದಿಕೊಳ್ಳುತ್ತಲೇ ಬರೆಯುವುದಕ್ಕೂ ಒತ್ತು ನೀಡಿದ್ದು, ಶಿವಮೊಗ್ಗ, ಮೈಸೂರು, ಬೆಂಗಳೂರು ದಿನಗಳ ಅನುಭವಗಳು ಈಗ ಪುಸ್ತಕ ರೂಪ ಪಡೆದುಕೊಂಡಿವೆ.

ಸದ್ಯ ಮೈಸೂರಿನ ‘ಪ್ರಜಾನುಡಿ’ ಪತ್ರಿಕೆ ಸಹಾಯಕ ಸಂಪಾದಕರಾದ ವೀರಭದ್ರಪ್ಪ ವಿ ಬಿಸ್ಲಳ್ಳಿ ಅವರ ಮೂರು ಕೃತಿ ಜುಲೈ 24ಕ್ಕೆ ಬಿಡುಗಡೆಯಾಗಲಿವೆ.

ಅಂದ ಹಾಗೆ ಈ ಕೃತಿ ಹೊರ ತರುತ್ತಿರುವವರು ಮೈಸೂರಿನ ನಮ್ಮ ಮನೆ ಮತ್ತೊಬ್ಬ ಸಂಗಾತಿ, ನಾಡಿನ ಖ್ಯಾತ ಕಲಾವಿದ ಪ್ರಕಾಶ ಚಿಕ್ಕಪಾಳ್ಯ. ಚಿಕ್ಕಪಾಳ್ಯ ರೂಪಿಸಿರುವ ವಿಸ್ಮಯ ಬುಕ್ ಹೌಸ್‌ನಿಂದ ಕೃತಿಗಳು ಹೊರ ಬರುತ್ತಿವೆ. ಸ್ನೇಹಿತರನ್ನು ಸದಾ ಪ್ರೋತ್ಸಾಹಿಸುವ ಪ್ರಕಾಶ್ ಮೂರು ಪುಸ್ತಕದ ಮುಖಪುಟ ರೂಪಿಸಿರುವುದು ವಿಶೇಷ.

ಪತ್ರಕರ್ತರು ಲೇಖಕರಾಗುವುದು ಹೊಸ ವಿದ್ಯಮಾನವೇನಲ್ಲ. ಆದರೆ ಆ ಸಂಖ್ಯೆ ಜಾಸ್ತಿಯಾಗಿದೆ. ವೈವಿಧ್ಯತೆಯ ಕೃತಿಗಳು ಹೊರ ಬರುತ್ತಿರುವುದು ಸಂತಸದಾಯಕ. ಮೂರರಲ್ಲಿ ಎರಡು ಕೃತಿಗಳನ್ನೂ ಓದಿದ್ದೇನೆ. ಬರವಣಿಗೆ ಶೈಲಿ, ವಿಷಯ ಆಯ್ಕೆ ಎಲ್ಲವೂ ಖುಷಿ ಕೊಡುತ್ತದೆ. ಗೆಳೆಯನಿಗೆ ಒಳಿತಾಗಲಿ.

ಹಾಗೆಯೇ ಎಲ್ಲಾ ಗೆಳೆಯರಿಗೂ ಶನಿವಾರ ಸಂಜೆಗೆ ಸ್ವಾಗತ. ಬನ್ನಿ ಒಂದಷ್ಟು ಕಾಲ ಹರಟೋಣ.

ಪುಸ್ತಕ ಕೊಳ್ಳಲು ಸಂಪಕಿ೯ಸಿ – 97423 01228

https://andolana.in/journalist-veerabhadrappa-bislallis-three-books-release-july-24/

‍ಲೇಖಕರು Admin

July 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: