ಎಂ ವಿ ಶಶಿಭೂಷಣ ರಾಜು
ತಿಂಗಳಿಗೊಮ್ಮೆ ಸುರಿವ ನೆತ್ತರಕೆ
ನನ್ನವನು ಮುಖತಿರುಗಿಸಿಕೊಳ್ಳುವನು
ಕಿಬ್ಬೊಟ್ಟೆ, ಬೆನ್ನ ನೋವಿಗೆ, ಆಗುವುದಿಲ್ಲ ಮುಲಾಮು
ತಲೆಸವರಿ ಹತ್ತಿರ ಸರಿದು ಸುಧಾರಿಸುವುದಿಲ್ಲ
ಮೂರುದಿನ ನಾನು ಏನು?
ಮಾಮೂಲಿನ ಸಂಗತಿಯಾದರೂ
ಮತ್ತೊಮ್ಮೆ ಹೊಸ ನೋವಲ್ಲವೇ
ಒಂದೊಂದು ತೆರ ಮೈಕಡರುವುದು
ದೇಹದ ಹಿಂಸೆಗೆ ಆಸರೆ ಬೇಡವೇ
ಮೂರು ದಿನ ನಾನು ಏನು?
ನರಳುವೆನು ಮನದಲಿ ನೋವ ನುಂಗಿ
ರಾತ್ರಿಯಲಿ, ಶಬ್ದಮಾಡದೆ ಅವನ ನಿದಿರೆಗೆ
ಪಕ್ಕದಲೇ ನಿದಿರುಸುವ ಪ್ರಶಾಂತವಾಗಿ
ಕೈಮೇಲೆ ನನ್ನ ಮಲಗಿಸಕೊಳ್ಳ ಕೂಡದೇ
ಮೂರುದಿನ ನಾನು ಏನು?
ಮುಗಿದು ನಳನಳಿಸಿದರೆ, ಅರಳಿದ ಹೂವಾಗಿ ನಾನು
ಸುತ್ತಲೇ ಸುಳಿಯುವನು ಬಿಟ್ಟಿರನೆಂಬಂತೆ
ತಬ್ಬಿ ಆವರಿಸುವನು ರಾತ್ರಿಯೆಲ್ಲಾ
ನಾನೂ ಸಹಕರಿಸುವುದು ವಿಪರ್ಯಾಸವಲ್ಲವೇ
ಮೂರು ದಿನ ನಾನು ಏನು?
0 ಪ್ರತಿಕ್ರಿಯೆಗಳು