ಕಾಡಿದ ಕಥಾ ಕಮ್ಮಟ

ʻಕಥೆಗಳು ಮನುಷ್ಯನ ಮೃಗತ್ವವನ್ನು ತೊಡೆದು ಹಾಕುತ್ತವೆ. ಕಥನಗಳು ಸಮಕಾಲೀನ ಕೇಡಿಗೆ ಮದ್ದಿನಂತೆ ಕೆಲಸ ಮಾಡುತ್ತಲೇ ಬಂದಿವೆ. ಕಥನ ಪರಂಪರೆಯಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಕನ್ನಡ ಕಥಾ ಪರಂಪರೆಯಲ್ಲಿ ಬಹುತ್ವಕ್ಕೆ ಒತ್ತುಕೊಡುವ ಆ ಮೂಲಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಬಹು ದೊಡ್ಡ ಪರಂಪರೆಯೇ ನಮ್ಮ ಕಣ್ಣ ಮುಂದಿದೆ. ಹಾಗಾಗಿ ಕನ್ನಡದ ಶ್ರೇಷ್ಠ ಕಥೆಗಳ ಬಗ್ಗೆ ಮಾತನಾಡುತ್ತೇವೆ ಅಂದರೆ ಅವುಗಳ ಸಾಮಾಜಿಕ ಆಯಾಮಗಳನ್ನು ಯುವ ಮನಸ್ಸುಗಳಿಗೆ ತಲುಪಿಸಲು ಯತ್ನಿಸುತ್ತಿದ್ದೇವೆ ಅಂತಲೇ ಅರ್ಥ,ʼ ಎಂದು ದಿನಾಂಕ ೧೩, ೧೪ಹಾಗೂ ೧೫ ರಂದು ಆಂದ್ರದ ಡಿ.ಹಿರೇಹಾಳ್‌ನಲ್ಲಿ ʻಹಿರೇಹಾಳ್‌ ಇಬ್ರಾಹಿಂ ಪ್ರತಿಷ್ಠಾನʼ ಆಯೋಜಿಸಿದ್ದ ಮೂರು ದಿನಗಳ ಕಥಾ ಕಮ್ಮಟವನ್ನು ಉದ್ಘಾಟಿಸುತ್ತಾ ಚಿಂತಕ ರಹಮತ್‌ ತರೀಕೆರೆಯವರು ಅಭಿಪ್ರಾಯಪಟ್ಟರು.

ಉದ್ಘಾಟನೆಯ ನಂತರ ಮಾಸ್ತಿಯವರ ʻಕಲ್ಮಾಡಿಯ ಕೋಣʼದ ಪ್ರಾಯೋಗಿಕ ವಿಮರ್ಶೆ ಮಾಡಿ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಅದಾದ ನಂತರ ಮೂರು ದಿನಗಳ ಕಾಲ ನಡೆದ ಕಮ್ಮಟದಲ್ಲಿ ಕನ್ನಡದ ಬಹುಮುಖ್ಯ ಕಥೆಗಳ ಬಗ್ಗೆ ಚರ್ಚಿಸಲಾಯ್ತು. ಕಥೆಗಳ ಆಶಯ, ಭಾಷಾ ವಿನ್ಯಾಸ, ಕಥನ ಕಲೆ, ಕಥೆಗಳ ಓದು ಹಾಗೂ ಗ್ರಹಿಕೆಗೆ ಸಂಬಂಧಿಸಿದಂತೆ ತುಂಬಾ ಅರ್ಥಪೂರ್ಣ ಚರ್ಚೆಗಳಾದವು. ಯುವ ಲೇಖಕರು, ಸಂಶೋಧನಾ ವಿದ್ಯಾರ್ಥಿಗಳು, ವೈದ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇಪ್ಪತ್ತೈದು ಮಂದಿ ಶಿಬಿರಾರ್ಥಿಗಳಿದ್ದ ಈ ಕಮ್ಮಟದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ಕಥೆಗಳ ಓದು ಹಾಗೂ ಗ್ರಹಿಕೆಗಳನ್ನು ಕುರಿತಾದ ತಂತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದರ ಮೂಲಕ ಶಿಬಿರದ ಉದ್ದೇಶವನ್ನು ಸಾರ್ಥಕಗೊಳಿಸಿದರು.

ಮೂರನೆಯ ದಿನ ಶಿಬಿರದಲ್ಲಿ ಚರ್ಚೆಗೊಳಗಾಗಿದ್ದ ʻನೀರು ತಂದವರುʼ ಕಥೆಯ ಲೇಖಕ ಅಮರೇಶ ನುಗಡೋಣಿಯವರು ಭಾಗವಹಿಸಿ ಕಥನ ಕಲೆ ಹಾಗೂ ಸದರಿ ಕಥೆಯನ್ನು ಬರೆಯಬೇಕಾದುದ್ದರ ಹಿನ್ನೆಲೆಯ ಬಗ್ಗೆ ವಿವರಿಸುತ್ತಾ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ʻಜಾತಿ, ಧರ್ಮದ ಹೆಸರಿನಲ್ಲಿ ಸಮುದಾಯಗಳನ್ನುಹಾಗೂ ಮನಸ್ಸುಗಳನ್ನು ಒಡೆದು, ಆ ಮೂಲಕ ಪ್ರಕ್ಷ್ಯುಬ್ಧತೆಯನ್ನು ಸೃಷ್ಟಿಸುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಕಥೆಗಳ ಓದು  ಹೆಚ್ಚು ಮಾನವೀಕರಣದತ್ತ ಮನಸ್ಸುಗಳನ್ನು ಕೊಂಡೊಯ್ಯಬಲ್ಲದು,ʼ ಎಂಬುದಾಗಿ  ಚಿಂತಕರಾದ ರಾಜೇಂದ್ರ ಚೆನ್ನಿಯರು ಅಭಿಪ್ರಾಯಪಟ್ಟರು. ಇದಕ್ಕೂ ಮುಂಚೆ ಶಿಬಿರಾರ್ಥಿಗಳಿಗೆ ಮಾಂಟೋನ ʻಟೋಬಾ ತೇಕ್‌ ಸಿಂಗ್‌ʼ ಹಾಗೂ  ಬಿ.ಟಿ.ಜಾಹ್ನವಿಯವರ ʻವ್ಯಭಿಚಾರʼ ಕಥೆಗಳನ್ನು ತಮ್ಮದೇ ಧಾಟಿಯಲ್ಲಿ ಅರ್ಥೈಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸುಧಾ ಹಾಗೂ ಮಯೂರ ಪತ್ರಿಕೆಗಳ ಕಾರ್ಯನಿರ್ವಾಹಕ‌ ಸಂಪಾದಕರಾದ ಚ.ಹ. ರಘುನಾಥ್ ಲೇಖಕನಾದವನ ಸಾಮಾಜಿಕ ಜವಾಬ್ದಾರಿ ಹಾಗೂ ಲೇಖಕನಿಗೆ ಇರಬೇಕಾದ ನೈತಿಕತೆಯನ್ನು ಕುರಿತು ಮಾತನಾಡಿದರು.

ಕಥೆಗಾರ ಎಸ್. ಗಂಗಾಧರಯ್ಯ ಶಿಬಿರದ ನಿರ್ದೇಶಕರಾಗಿದ್ದರು. ಕಥೆಗಾರ ಮಿರ್ಜಾ ಬಷೀರ್‌ ಹಾಗೂ ಅಬ್ದುಲ್ಲಾ ಸಂಚಾಲಕರಾಗಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಿಮರ್ಶಕ ರಾದ ರಾಮಲಿಂಗಪ್ಪ ಟಿ. ಬೇಗೂರ್‌, ಸುಭಾಷ್‌ ರಾಜಮಾನೆ ಹಾಗೂ ಕಥೆಗಾರ ಜಿ.ವಿ.ಆನಂದಮೂರ್ತೀ ಇವರುಗಳು ಕಾರ್ಯನಿರ್ವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ದಾದಾ ಖಲಂದರ್‌ ಹಾಗೂ ಕಾರ್ಯದರ್ಶಿಯವರಾದ ರವೀಂದ್ರನಾಥ್‌ ಮೂರೂ ದಿನವೂ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದರು.

‍ಲೇಖಕರು Admin

January 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: