ದಾದಾಪೀರ್ ಜೈಮನ್
**
ನಮ್ಮ ಬಸವ
ಬಾಲ ಬಸವ
ನಮ್ಮ ಬಸವ
ಮುದ್ದು ಬಸವ
ನಮ್ಮ ಬಸವ
ಕೊಂಬು ಬಸವ
ಊರ ತುಂಬಾ
ಮೇಯೋ ಬಸವ
ಕಡಲೆ ಎಲೆ
ಹಸಿರು ಮುಸುರೆ
ಏನು ಸಿಕ್ಕರೂ
ಬಿಡದ ಬಸವ
ಉಂಡಾಡಿ ಗುಂಡ ಬಸವ
ಅಮ್ಮ ಬಸವಿ
ಹುಡುಕಿ ಅಡವಿ
ಬಸವ ಬಸವ
ಎಳೆದು ಕೆಡವಿ
ಗುಡಿಯ ಮೂಲೆಯಲ್ಲಿ
ಕಟ್ಟಿ
ಬಟ್ಟೆ ಒಗೆಯಲೋದಳು
ಮೂರು ಬಟ್ಟೆ
ಬಾಳ ಬಟ್ಟೆ
ನಮ್ಮ ಬಸವಿ
ಜಾಣೆ ದಿಟ್ಟೆ
ಒಗೆಯುತಿರಲು
ಸದ್ದೇ ಇಲ್ಲ
ಬಸವ ನಿದ್ದೆ ಹೋದನೋ?!!
ಬಸವಿ ಹಣೆಗೆ
ಕಿತ್ತು ಬೆವರು
ಬಸವ ಬಸವ
ಕೂಗುತಿರಲು
ಒಳಗೆ ಓಡಿ ಬಂದಳು
ಎಲ್ಲಿ ಬಸವ ಇಲ್ಲ ಬಸವ
ಮುನಿದ ಬಸವ
ಮೂತಿ ತಿರುವಿ
ಕಲ್ಲಾಗಿ ಹೋಗಿದ್ದನು
ಅಯ್ಯೋ ಬಸವಿ
ನಮ್ಮ ಬಸವಿ
ಒಡಲು ಉರಿದು
ಕಡಲು ಬಿರಿದು
ಅತ್ತು ಅತ್ತು
ಬಸವ ಬಸವ
ದಿಕ್ಕು ತೋಚದಾದಳು
ಬಸವಿ
ಈಗ ರಮಿಸಬೇಕು
ಕಲ್ಲು ಬಸವ
ಕ್ಷಮಿಸಬೇಕು
ಉಪಾಯವೊಂದು ಹೊಳೆಯಿತು
ಊರಿನಿಂದ
ಕಡಲೆ ತಂದು
ಸಿಪ್ಪೆ ಸುಲಿದು
ಪಾತ್ರೆಯಲ್ಲಿ ಕುಚ್ಚಿ
ಬಸವಿ
ಅವನ ಮುಂದೆ ಹಿಡಿದಳು
ಮುನಿದ ಬಸವ
ಮಮತೆಗೊಲಿದು
ಕಲ್ಲು ಬಸವ
ಪ್ರೀತಿಯಿಂದ
ಕಣ್ಣು ಹೊಡೆದ
ಬಾಯಿ ತೆರೆದ
ತಾಯಿ ಬಸವಿ
ಬಳಸಿ ತಬ್ಬಿ
ಕಥೆಗಳೆಲ್ಲ
ಊರಲಬ್ಬಿ
ಪರಿಷೆ ಪ್ರಾರಂಭವಾಯಿತು.
ಈ ಕವಿತೆ ಕಳೆದ ವರ್ಷ ಕಾವ್ಯಸಂಜೆಗೆ ಸಿಕ್ಕ IFA Grant ಪ್ರಾಜೆಕ್ಟ್ ನಲ್ಲಿ ಬರೆದ ಹಲವು ಕವಿತೆಗಳಲ್ಲಿ ಒಂದು
0 ಪ್ರತಿಕ್ರಿಯೆಗಳು