ಯಮುನಾ ಗಾಂವ್ಕರ್
ಅವಳ ಕತೆಗಳು ಇದೇ ನೀರಲ್ಲಿ ಮುಳುಗಿ ಹೋಗಿವೆ. ನೀವು ನಂಬಬೇಕೆಂದೇನಿಲ್ಲ,
ನಾನೇ ಸ್ವತಃ ಕಂಡಿದ್ದೇನೆ, ಅದು ನನ್ನ ಅನುಭವವಷ್ಟೇ.
ಅಂದು ನಾನು ಅಬ್ಬೆಯ ಮಡಿಲಿಗೆ ಮುಖ ಒರೆಸುತ್ತಲೇ ನಿಂತಿದ್ದೆ. ಅವಳು ನಮ್ಮೆಲ್ಲರ ತನ್ನ ತೆಕ್ಕೆಯಲ್ಲಿಟ್ಟು ಗಟ್ಟಿಯಾಗಿ ಕಣ್ಣು ಮುಚ್ಚಿ ನಿಂತಿದ್ದಳು, ನಮ್ಮ ಮುಖದ ಮೇಲೆ ಅವಳ ಕಣ್ಣಿಂದ ಬಿಂದುಬಿಂದುವಾಗಿ ನೀರು ಬೀಳುತ್ತಿದ್ದುದು ನೆನಪಿದೆ. ಅತ್ತ ಮನೆಯ ಕೋಳಿನ ತುದಿ ತುಸುವೇ ಕಾಣಿಸುತ್ತಿತ್ತು. ಸುತ್ತ ಕಾಳಿಯ ನೀರು ಆವರಿಸಿತ್ತು. ಅಲ್ಲಿ ನಮ್ಮ ಗಿಲ್ಲಿ ದಾಂಡುಗಳು, ಡಬ್ಬಾಡುಬ್ಬಿ ಆಟದ ಚೆಂಡು ಹಾಗೂ ಲಗೋರಿ ಕಲ್ಲುಗಳೂ ಇದ್ದವು. ಕಡೆಗೆ ಹೋಗಿ ತಂದರಾಯಿತು ಎಂದು ನಾವು ಅಂದುಕೊಂಡಿದ್ದೆವು. ಆದರೆ ಮುಳುಗಿದ ಕತೆಗಳಲ್ಲಿ ಅವೂ ಸೇರಿಹೋದವು.
ಆ ಕತೆಗಳೆಲ್ಲ ಮುಳುಗುವಾಗ ಬುಳುಬುಳನೆ ಗುಳ್ಳೆಗಳು ಮೇಲೆದ್ದಿದ್ದವು. ಶಬ್ದವೂ ಆಗಿತ್ತು. ಅವುಗಳಲ್ಲಿ ಬಹುತೇಕ ಉಸಿರುಗಟ್ಟಿ ಸತ್ತವು
ಕೆಲವು ಮಾತ್ರವೇ ಸುಳಿ ನೀರಿನಲ್ಲೂ, ಅಲೆಗಳಲ್ಲೂ ನೆನೆದು ಹೋಗದೇ, ಕರಡಿ- ಕೊಚ್ಚಿ ಹೋಗದೇ ಇನ್ನೂ ಜೀವಂತ ಇವೆ. ಆದರೆ ಸೊರಗಿವೆ. ಕೆಲವು ಹಿನ್ನೀರ ಹುಲ್ಲುಕಡ್ಡಿಯ ಮೇಲೂ, ಕೊಳೆತ ಎಲೆಗಳ ಮೇಲೂ, ಕಿತ್ತುಬಿದ್ದ ಬೇರ ಬುಡದಲ್ಲೂ, ಪಾಚಿಗಳ ಜೊತೆಗೂ ಕುಳಿತಿವೆ. ಮುಟ್ಟಲು ಹೋದರೆ ಪುಳಕ್ಕನೆ ಜಾರಿ ಹೋಗುತ್ತವೆ. ಇನ್ನೂ ಕೆಲವು ಶಾಂತ ಕಿರುತೆರೆಗಳ ಮೇಲೇರಿ ಪುನಃ ದಡದಲ್ಲಿ ಬಂದು ಕುಳಿತಿವೆ. ಮತ್ತೆ ಕೆಲವು ಓ ಅಲ್ಲಿ ಕಾಣುತ್ತದೆಯಲ್ಲ ತೇಲುವ ಲಡ್ಡಾದ ಟೊಂಗೆಗಳ ಮೇಲೆ ಕುಳಿತಿವೆ. ಆಗಾಗ ಬರುವ ಗುಂಡುಮುಳಕನ ಹಕ್ಕಿಯ ಜೊತೆಗೋ, ಬೆಳ್ಳಕ್ಕಿಯ ಜೊತೆಗೋ ಕರಿಕಾಸನ ಜೊತೆಗೋ, ಕೆಂಬೂತದ ಜೊತೆಗೋ, ನೀರ್ಕಾಗೆ ಜೊತೆಗೋ ಊರ ಸುದ್ದಿ ಸಂಗ್ರಹಿಸುತ್ತಿವೆ. ತಮ್ಮ ಕತೆಗಳಿಗೆ ಕಾರಣವಾದ ಆ ಜಗಜಗಿಸುವ ದೀಪಗಳ ಬಗ್ಗೆಯೂ ಕೇಳುತ್ತವೆ. ಮಾತ್ರವಲ್ಲ, ತಾನು ತನ್ನವರು ಮುಳುಗಿದಲ್ಲಿ ವಿಹಂಗಮ ನೋಟ ನೋಡಲು ಹಾಯುವ ತೇಲುದೋಣಿಗಳಲ್ಲಿ ಬಂದು ಸಂತೋಷ ಪಡುವ ಗೆಳೆಯ ಗೆಳತಿಯರ ಮಾತಿಗೂ ಕಿವಿಗೊಡುತ್ತಿವೆ. ಆ ದೋಣಿಯ ಹುಟ್ಟಿನ ಜೊತೆಗೆ ಜಗಳವಾಡುತ್ತವೆ. ಆಗಾಗ ಯಾರಿಗೂ ಗೊತ್ತಾಗದಂತೆ, ನೆನೆದ ನೆನಪುಗಳ ಆರಲು ಬಿಟ್ಟಿವೆ.! ಅವು ಪಕ್ಕದಲ್ಲೇ ಹಸಿರೆಲೆಗಳ ಮೇಲೂ ಹಾರಿ ಕುಳಿತಿವೆ.
ಅಂದು ಹರಿದ ಸೀರೆಯ ಸೆರಗ ತುದಿಯಿಂದ ನಮ್ಮ ಮುಖದ ಮೇಲೆ ಬಿದ್ದ ಬಿಸಿ ಹನಿಯ ಒರೆಸಿದ ಅಬ್ಬೆಯರು ಈಗಿಲ್ಲ. ಕೊನೆಯಲ್ಲಿ ಮಕ್ಕಳೆಲ್ಲ ಆಡಿದ ಆ ಲಗೋರಿ ಆಟದ ಬಯಲ ಆವರಿಸಿದ ಈ ನೀರು ಬದುಕನ್ನೇ ಗೋರಿಯಂತಾಗಿಸಿತು.
ಸೊರಗಿದ ಕತೆಗಳು ತಮ್ಮ ಇತಿಹಾಸ ಹೇಳಿವೆ.
ಚಿಮಣಿ ಬುಡ್ಡಿಯ ಮಿಣುಕು ದೀಪ ಹಚ್ಚಿ ನಾನೀಗ ಅವುಗಳನ್ನೆಲ್ಲ ಕಾಯಲು ಶುರು ಮಾಡಿದ್ದೇನೆ. ಆದರೂ ನೀರಲ್ಲಿ ಮುಳುಗಿದ ಕತೆಗಳು ದಡದಲ್ಲಿರುವ ನನ್ನ ಕಾಡುತ್ತಲೇ ಇವೆ.
ಇಷ್ಟು ಓದಿದ ಮೇಲೆ ಮುಳುಗಿದ ಕತೆಗಳು ನಿಮ್ಮದೂ ಕೂಡ ಅನುಭವದ ಭಾಗವಾದರೆ ಮಾತ್ರ ಅವು ಎಲ್ಲರ ಜೊತೆಗಿರುತ್ತವೆ.
0 ಪ್ರತಿಕ್ರಿಯೆಗಳು