ಮುನವ್ವರ್‌ ಜೋಗಿಬೆಟ್ಟು ಓದಿದ ‘ಆಡು ಜೀವನ’

ಮುನವ್ವರ್‌ ಜೋಗಿಬೆಟ್ಟು

‘ಆಡು ಜೀವಿದಂ’ ಎಂಬ ಮಲಯಾಳಂ‌ ಪುಸ್ತಕ ಯಾವ ಪೂರ್ವಾಪರಗಳಿಲ್ಲದೆ ಡಿಸಿ ಬುಕ್ಸ್ ನಲ್ಲಿ ಮೂರು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದೆ. ಪುಸ್ತಕ ತಲುಪಿತು, ನನ್ನ ಆಮೆ‌ ನಡಿಗೆಯ ಮಲಯಾಳಂ ಓದಿನಿಂದಾಗಿ ಪುಸ್ತಕವನ್ನು ಸಂಪೂರ್ಣವಾಗಿ ತಬ್ಬಿ‌ ಓದಲು ಮನಸ್ಸು ತಯ್ಯಾರಾಗಲೇ ಇಲ್ಲ. ಹಾಗೇಯೇ ಓದುಗರಿಲ್ಲದೆ ಬಾಕಿಯುಳಿದಿದ್ದ ಪುಸ್ತದ ಮೊದಲ ಲಾಕ್ ಡೌನ್ ದಿನಗಳಲ್ಲಿ ತಂಗಿಗೆ ಸಿಕ್ಕಿ ಅವಳು ಓದಿ ಮುಗಿಸಿದ್ದಳು. ‘ಬಹಳ ಚೆನ್ನಾಗಿದೆ. ಓದು’ ಎಂದು ಹುರಿದುಂಬಿಸಿದ್ದಳು. ಅವಳ ಮಾತು ಕೇಳಿ ಮತ್ತೆ ಓದಲು ಪ್ರಯತ್ನ ಪಟ್ಟೆನಾದರೂ ಫಲಪ್ರದವಾಗಲಿಲ್ಲ. ಅದಕ್ಕೆ ಹೆಚ್ಚಿನ ಅಧ್ವಾನ ಬೇಕಿದ್ದರಿಂದ ಕೈ ಬಿಟ್ಟೆ.

ಇತ್ತೀಚೆಗೆ ಆತ್ಮೀಯರೊಬ್ಬರನ್ನು ಭೇಟಿ ಮಾಡುವ ಅವಕಾಶ ಒದಗಿ ಬಂದಾಗ, ಅವರ ಪುಸ್ತಕ ಸಂಗ್ರಹಣೆಯಲ್ಲಿ ಬಿನ್ಯಾಮೀನ್ ಬರೆದ ಆಡು ಜೀವಿದಂ ಇದರ ಕನ್ನಡ ಅನುವಾದ ‘ಆಡು ಜೀವನ’ ಕೈಗೆತ್ತಿಕೊಂಡೆ. ಅವರಿಗೆ ಪುಸ್ತಕ ಕೊಡುವ ದುರ್ಬುದ್ಧಿ (ಪುಸ್ತಕ ಕೊಟ್ಟು ಕಳೆದುಕೊಳ್ಳುವುದು) ಇಲ್ಲವಾದರೂ, ನನ್ನ ಮೇಲಿನ ಅತಿಯಾದ ಪ್ರೀತಿಯಿಂದ ನನ್ನ ಕರಗಳಿಗೆ ದಾಟಿಸಿದ್ದರು‌‌. ಇನ್ನು ಪುಸ್ತಕದ ವಿಚಾರ ಹೇಳಬೇಕು. ಅನಿವಾಸಿ ಎಂಬ ದೌರ್ಭಾಗ್ಯವಂತ ಜೀವಿಯನ್ನು ಅರ್ಥೈಸಿಕೊಡಬಲ್ಲ ಇದಕ್ಕಿಂತ ಅತ್ಯುತ್ತಮ ಕಾದಂಬರಿಯನ್ನು ಸೂಚಿಸಲಾರೆ. ಎಲ್ಲರಂತೆ ಕನಸುಗಳ‌ ಮೂಟೆ ಹೊತ್ತು ಹೊರಟ ಯುವಕನ ಕರುಣಾಜನಕ ಸ್ಥಿತಿಯದು.

ಮರಳು ಗಾಡಿನಲ್ಲಿ ಬೆವರ ಸಮುದ್ರದಲ್ಲಿ ಮಿಂದು ಆಡು ಮೇಯಿಸುವ ಕೆಲಸಕ್ಕೆ ಕೂಲಿಯಾಗಿ ತಾಪತ್ರಯ ಪಡುವ ನಜೀಬ್ ಎಂಬ ನಾಯಕನ ದುರಂತ ಕಥೆ. ತನ್ನ ವರೆನ್ನೆಲ್ಲ ಬಿಟ್ಟು ಕನಸಿನ ಕುದುರೆಯ ಬೆನ್ನೇರಿ ಮರಳ ನಾಡಿಗೆ ಬಂದು ಸತ್ತು ಬದುಕಿದವನ ಜ್ವಲಂತ ವ್ಯಥೆ. ಪಡ ಬಾರದ ಪಾಡು ಪಟ್ಟು ನರಕ ಯಾತನೆಯಿಂದ ತಪ್ಪಿಸಿಕೊಂಡು ಮರಳುಗಾಡಿನಲ್ಲಿ ಅಂಡಲೆದು, ಅನ್ನ- ನೀರಿಗಾಗಿ, ಸ್ವಾತಂತ್ರ್ಯಕ್ಕಾಗಿ ಕಾದಾಡಿ ಬದುಕಿದ ಈ ಕಥೆ ಎಷ್ಟು ಬರ್ಬರ ಎಂದು ಓದುವಾಗ ಅರ್ಥವಾಗಬಹುದು. ನಮ್ಮವರೇ ಆದ ಮಾವಂದಿರು, ಅಣ್ಣಂದಿರು ವಿಶಾಲ ಮರಳ ಸಮುದ್ರಕ್ಕಿಳಿದಾಗ, ವಾರ್ಷಿಕ ರಜೆಗೋ, ಎರಡು ವರ್ಷದ ರಜೆಗೋ, ಬರುವವಾಗ ಅವರ ಹೊಟ್ಟೆಗೂ ನೋಡದೆ, ಲಗೇಜಿಗೆ ಕಣ್ಣಿಡುವ ನನ್ನಂತಹವರ ಕಣ್ಣು ತೆರೆಸುವ ಈ ಕಥನ ನಾವು ನೀವುಗಳು ಓದಬೇಕು.

ಒಂದರ್ಥದಲ್ಲಿ ಅನಿವಾಸಿಗಳೆಲ್ಲರೂ ನಜೀಬ್ನಂತವರೇ, ಯಾವುದೋ ಕೆಲಸಕ್ಕೆ ಬಂದು, ಇನ್ಯಾವುದೋ ಕೆಲಸಕ್ಕೆ ಸೇರಿ ತನ್ನ ಊರವರೆದುರು ಸುಖವನ್ನು‌ ನಟಿಸಿ ಬದುಕುವ ಅವರೆಂಥಹ ಗಟ್ಟಿಗರು. ಅನಿವಾಸಿ ಊರಿಗೆ ಬಂದ ಕೂಡಲೇ ದೇಣಿಗೆಗಾಗಿ‌ ಮುಗಿ ಬೀಳುವ ಸಂಘ, ಸಂಸ್ಥೆ ಗಳೂ ಕಣ್ಣು ಹಾಯಿಸಲೇ ಬೇಕಾದ ಕೃತಿಯಿದು.

ಮರುಭೂಮಿಯಲ್ಲಿ ಜೊತೆಯಾಗಿದ್ದ ಗೆಳಯ ಹಕೀಂ ನ ಸಾವು ಕಥೆ ಓದುಗರನ್ನು ವಿಶಾದದ ಮಡುವಿಗೆ ತಳ್ಳದಿರದು. ಅದೆಷ್ಟು ಹಕೀಂ ರನ್ನು ಆ ಮರಳ‌ ಕಡಲು ಮುಳುಗಿಸಿ ಕೊಂದಿರಬಹುದು? ಅರ್ಬಾಬ್ಗಳು ಹರಿದು ಮುಕ್ಕಿರಬಹುದು?. ಮರುಭೂಮಿಯಲ್ಲಿ ಮರೀಚಿಕೆಗಾಗಿ ಕಾದು ಬಸವಳಿಯುವ ನಜೀಬ್ ಅಂದರೆ, ಶ್ರೀಮಂತಿಗೆಗಾಗಿ‌ ಕಾಯುತ್ತಾ ಹೊರಟ ಇಲ್ಲಿನ ಪ್ರತಿಯೊಬ್ಬ ಅನಿವಾಸಿಯೇ. ನೋವು, ಕಷ್ಟ, ಸಿಟ್ಟು, ಸೆಡವು, ದುಃಖ, ದುಮ್ಮಾನಗಳನ್ನು ತೋರ್ಗೊಡದೆ ಒಳೊಗೊಳಗೆ ಕುದಿದು ಮೇಣದಂತೆ ಇತರರಿಗೆಲ್ಲಾ ಬೆಳಕಾಗಿ ಉರಿದು ಕರಗಿ ಕೊನೆಗೊಂದು ದಿನ ಅನಿವಾಸಿ ಸಾಲಗಾರನಾಗಿ ಸಾಯುತ್ತಾನೆ. ಎಂಥಹ ಮೌನ ವಿಲಾಪವದು. ಸೃಷ್ಟಿಕರ್ತನೇ ನಮ್ಮನ್ನು ಸ್ಥಿತಿವಂತರನ್ನಾಗಿ ಮಾಡಿದ್ದಕ್ಕಾಗಿ ನಿನಗೆ ಅನಂತ ಕೃತಜ್ಞತೆಗಳು.

ಕಾದಂಬರಿಯ ಪರಿತಪಿಸುವ ಕಷ್ಟಗಳೇನೂ ಈಗ ವಿದೇಶದಲ್ಲಿ ಇಲ್ಲದಿರಬಹದು, ಆದರೆ ವಿಭಿನ್ನವಾಗಿ ಕೆಲವು ಸ್ಥಳೀಯರಿಂದ ಈಗಲೂ ಶೋಷಿಸಲ್ಪಡುತ್ತಿರುವ ಅನಿವಾಸಿಗಳಿಗೇನೂ ಬರವಿಲ್ಲ. ಹೌಸ್ ಡ್ರೈವರ್ಗಳೆಂದು ಕರೆದೂ ಕತ್ತೆಗೂ ಕಡೆಯಾಗಿ ದುಡಿಸುವ ಮಾಲಿಕರ ದಾರ್ಷ್ಟ್ಯತೆ ದೇವರಿಗೆ ಪ್ರೀತಿ. ಕಾದಂಬರಿ ಕುತೂಹಲವನ್ನಿರಿಸಿಕೊಂಡೇ ಕೊನೆಯವರೆಗೂ ತುದಿಗಾಲಲ್ಲಿರಿಸಿ ರಸಭಂಗ ಗೊಳಿಸದಂತೆ ಓದಿಸುತ್ತದೆ. ಆರ್ದ್ರ ಕಣ್ಣು ಮತ್ತು ತೇವ ಮನಸ್ಸಿನೊಂದಿಗೆ ಮನಸ್ಸು ಪ್ರತೀ ಅನಿವಾಸಿಗೂ ಪ್ರಾರ್ಥಿಸುತ್ತದೆ. ಪ್ರೀತಿ. ದೇಶ, ಪ್ರಾಂತ್ಯ, ಜಾತಿಗಳಿಗೂ ಮೀರಿ ಬದುಕು ಕಟ್ಟಿಕೊಳ್ಳಲು ಹೊರಟ ಎಲ್ಲಾ ಅನಿವಾಸಿಗಳನ್ನು ದೇವನು ಚೆನ್ನಾಗಿಟ್ಟಿರಲಿ.

ಈ ಮಲಯಾಳಂ ಮೂಲ ಕೃತಿಯನ್ನು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ ಡಾ. ಅಶೋಕ್ ಕುಮಾರ್ ಅವರನ್ನು ಈ ಸಮಯದಲ್ಲಿ ನೆನೆಯದಿರಲಾರೆ. ಸೊಗಸಾದ ಅನುವಾದದ ಮೂಲಕ ಮೂಲ‌ ಕಥೆಯನ್ನು ನಮ್ಮೊಳಗೆ ಇಳಿಸಿ ಕೊಡುವಲ್ಲಿ ಅವರ ಪ್ರಯತ್ನ ಯಶಸ್ಸು ಕಂಡಿದೆ . ಓದಿ ಮುಗಿಸಿ ಒಂದು ದೀರ್ಘ ನಿಟ್ಟುಸಿರಿಡುವ ಮನ್ನ ‘ಎಲ್ಲಾ ಅನಿವಾಸಿಗರ ಕಷ್ಟಗಳೂ ನೀಗಲಿ. ಅವರು ಕಂಡ ಕನಸುಗಳೆಲ್ಲವೂ ನನಸಾಗಲಿ – ಆಮೀನ್’ ಎಂದು ಮಾತ್ರ ಪ್ರಾರ್ಥಿಸಬಲ್ಲೆ.

‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: