ಮುದ್ರಕರ ಕುಟುಂಬದ ಶ್ರೀ ಹಂಸಲೇಖ ಅವರು ಮೈಸೂರು ದಸರಾ ಉದ್ಘಾಟಿಸುವ ಗೌರವಕ್ಕೆ ಪಾತ್ರವಾಗಿರುವುದು ಮುದ್ರಕರಾದ ನಮಗೆಲ್ಲಾ ಹೆಮ್ಮೆಯ ವಿಷಯ….
ಸ್ವ್ಯಾನ್ ಕೃಷ್ಣ ಮೂರ್ತಿ
ಹಂಸಲೇಖ ಅವರ ಪೂರ್ವಜರು ಮಂಡ್ಯ ಮೂಲದವರು. ಇವರ ತಂದೆ ಗೋವಿಂದರಾಜು ಅವರು ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆಯ ನ್ಯಾಷನಲ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಕರಾಗಿ ಕೆಲಸ ಮಾಡುತ್ತಿದ್ದರು. ಮುದ್ರಣಾಲಯದ ಅನುಭವ ಪಡೆದು ಮುಂದೆ ತುಳಸಿ ತೋಟದ ಚಿಕ್ಕಲಾಲ್‌ಬಾಗ್ ಬಳಿ ‘ಗೀತಾ ಪವರ್ ಪ್ರಿಂಟಿಂಗ್ ಪ್ರೆಸ್’ ಎಂಬ ಹೆಸರಿನ ಸ್ವಂತ ಮುದ್ರಣಾಲಯವನ್ನು ತೆರೆದರು. ಮುದ್ರಣೋದ್ಯಮದಲ್ಲೇ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಶ್ರಮ ಪಟ್ಟು ದುಡಿದು, ಸಂಸಾರದ ಬಂಡಿಯನ್ನು ನಡೆಸುವುದರೊಂದಿಗೆ, ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನೂ ಕೊಡಿಸಿದರು.
ಮನೆ, ಮುದ್ರಣಾಲಯ, ಎಲ್ಲಾ ಒಂದೇ ಆಗಿದ್ದರಿಂದ ೧೯೫೧ ರಲ್ಲಿ ಜನಿಸಿದ ಹಂಸಲೇಖ ಅವರು ಮುದ್ರಣಾಲಯದ ಯಂತ್ರಗಳ ನಡುವೆ ಮಸಿ ಡಬ್ಬ, ಕಾಗದದ ಚೂರುಗಳನ್ನೇ ಆಟಿಕೆಗಳನ್ನಾಗಿಸಿಕೊಂಡು ಆಟವಾಡುತ್ತಾ ಬೆಳೆದವರು. ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ ಅವರ ತಂದೆಯವರಿಗೆ ನೆರವಾಗಲು ಮುದ್ರಣಾಲಯದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿರುತ್ತಾರೆ. ಸಾಹಿತ್ಯ ಕ್ಷೇತ್ರದ ಆಸಕ್ತಿ ಹೊಂದಿದ್ದ ಹಂಸಲೇಖ ಅವರು ಮುದ್ರಣಾಲಯದ ಕೆಲಸ ಮಾಡುತ್ತಲೇ ಬಿಡುವಿನ ವೇಳೆಯಲ್ಲಿ ಅವರ ಅಣ್ಣ ಬಾಲಕೃಷ್ಣ ಅವರ ಆರ್ಕೆಸ್ಟ್ರಾ ಗ್ರೂಪ್ ಗಳಲ್ಲಿ ಸಾಹಿತ್ಯ ಬರೆದು ಹಾಡುವ ಅಭ್ಯಾಸ ಮಾಡಿಕೊಂಡರು.
ಹೀಗೇ ಒಂದು ದಿನ ೧೯೮೧ರಲ್ಲಿ ಖ್ಯಾತ ನಿರ್ದೇಶಕರಾದ ಶ್ರೀ ಎಂ.ಎಚ್.ಪ್ರಸಾದ್ ಅವರು ತಮ್ಮ ತ್ರಿವೇಣಿ ಚಿತ್ರಕ್ಕೆ ಸಾಹಿತ್ಯ ಬರೆಯಲು ಹಂಸಲೇಖ ಅವರಿಗೆ ಅವಕಾಶ ನೀಡಿ, ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದರು.
ಮುಂದೆ ೧೯೮೫ರಲ್ಲಿ ವಿ. ರವಿಚಂದ್ರನ್ ಅವರ ನಾನು ನನ್ನ ಹೆಂಡ್ತಿ ಸಿನಿಮಾ ಮೂಲಕ ಅಧಿಕೃತವಾಗಿ ಸಂಗೀತ ನಿರ್ದೇಶಕರಾಗುವ ಅವಕಾಶ ಹಂಸಲೇಖ ಅವರಿಗೆ ಒದಗಿ ಬರುತ್ತದೆ. ಹೀಗೆ ಚಿತ್ರರಂಗ ಪ್ರವೇಶಿಸಿದ ಹಂಸಲೇಖ ಹಿಂತಿರುಗಿ ನೋಡಲೇ ಇಲ್ಲ. ತಮ್ಮ ಸಾಹಿತ್ಯ ಹಾಗೂ ಸುಮಧುರ ಸಂಗೀತದಿಂದಲೇ ಕೋಟ್ಯಾಂತರ ಕನ್ನಡಿಗರು ತಲೆದೂಗುವಂತೆ ಮಾಡಿದರು. ಹೀಗೆ ಚಿತ್ರರಂಗದಲ್ಲಿ ಹಂಸಲೇಖ ಅವರು ತೊಡಗಿಸಿಕೊಂಡರು.
ಹಂಸಲೇಖ ಅವರ ಮೂಲ ಹೆಸರು ಗಂಗರಾಜು. ಚಿತ್ರರಂಗಕ್ಕೆ ಬಂದ ಮೇಲೆ ಅವರ ಗುರುಗಳು ಅವರ ಹೆಸರನ್ನು ಹಂಸಲೇಖ ಎಂದು ಬದಲಾಯಿಸಿದರು.
ಅವರ ತಂದೆಯ ನಂತರ ಮುದ್ರಣಾಲಯವನ್ನು ಅಣ್ಣ ಶ್ರೀ ಧನಪಾಲ್ ಅವರು ಸಂಪಂಗಿ ರಾಮನಗರಕ್ಕೆ ಸ್ಥಳಾಂತರ ಮಾಡಿ , ಶ್ರೀ ಧನಲಕ್ಷ್ಮಿ ಪ್ರಿಂಟರ್ಸ್ ಎಂಬ ಹೆಸರಿನಡಿಯಲ್ಲಿ ಮುದ್ರಣಾಲಯವನ್ನು ಮುಂದುವರೆಸಲು ಪ್ರಯತ್ನ ಪಟ್ಟರು. ಆದರೆ ಅವರಿಗೂ ಕೂಡ ರಂಗಭೂಮಿ ಹಾಗೂ ಚಿತ್ರರಂಗದ ಕಡೆ ಸೆಳೆತವಿದ್ದುದ್ದರಿಂದ ಅವರು ಕೂಡ ಮುದ್ರಣೋದ್ಯಮವನ್ನು ಬಿಟ್ಟು ಮುಂದೆ ಸಾಗಿದರು.
ನಮಗೆ ಇಷ್ಟೆಲ್ಲಾ ಸಾಧನೆ ಮಾಡಲು ಮೂಲ ಮುದ್ರಣೋದ್ಯಮವೇ ಕಾರಣ ಎಂದು ಸ್ವತಃ ಹಂಸಲೇಖ ಅವರೇ ಹೇಳಿಕೊಂಡಿರುತ್ತಾರೆ.
ಕಳೆದ ಬಾರಿಯ ದಸರಾವನ್ನು ಗೌರವಾನ್ವಿತ ರಾಷ್ಟ್ರಪತಿಗಳಾಗಿದ್ದ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡಿದ್ದರು. ಈ ಬಾರಿಯ ದಸರಾ ಹತ್ತಿರ ಬರುತ್ತಿದ್ದಂತೆ ದಸರಾ ಉದ್ಘಾಟನೆ ಮಾಡುವವರು ಯಾರು ಎಂಬುವ ಕುತೂಹಲ ಕರ್ನಾಟಕದ ಜನತೆಯಲ್ಲಿ ಮೂಡಿತ್ತು.ಎಲ್ಲರಿಗೂ ಅಚ್ಚರಿ ಮೂಡಿಸುವ ಹಾಗೆ ಈ ಬಾರಿ ಮುದ್ರಕರ ಕುಟುಂಬದ ಸ್ಯಾಂಡಲ್‌ವುಡ್ ಸಂಗೀತ ಮಾಂತ್ರಿಕ ನಾದಬ್ರಹ್ಮ ಹಂಸಲೇಖ ಅವರು ದಸರಾ ಉದ್ಘಾಟನೆ ಮಾಡುವ ಗೌರವಕ್ಕೆ ಪಾತ್ರರಾಗಿರುವುದು ಸಂತೋಷದ ವಿಷಯ. ಮುದ್ರಕರೆಲ್ಲ ಹೆಮ್ಮೆ ಪಡುವಂತ ಗೌರವಕ್ಕೆ ಪಾತ್ರರಾದ ಹಂಸಲೇಖ ಅವರಿಗೆ ಅಭಿನಂದನೆಗಳು.
( ಮುಂಬರುವ ಕನ್ನಡ ಮುದ್ರಣಾಲಯಗಳ ಇತಿಹಾಸ (1817 – 1980) ಪುಸ್ತಕದಿಂದ)
0 ಪ್ರತಿಕ್ರಿಯೆಗಳು