ಮೀನು ಹಿಡಿದ ಮುದುಕ
ಹರೀಶ್ ಕೇರ
ಮೊನ್ನೆ ಕ್ಯೂಬಾದ ಮುದುಕ ಮೀನುಗಾರ
ಸ್ಯಾಂಟಿಯಾಗೋ ನನ್ನ ಭೇಟಿಯಾದ
ಮೂರು ಹಗಲು ಮೂರು ರಾತ್ರಿ
ನಡುಗಡಲಿನಲ್ಲಿ ತನ್ನ ದೋಣಿಯನ್ನೆಳೆದೊಯ್ದು
ಮಾರ್ಲೆನ್ ಮೀನನ್ನು ಮಣಿಸಿ ಕೊಂದು
ದೋಣಿಗೆ ಕಟ್ಟಿ ಎಳೆದು
ಶಾಕ್ ಗಳ ಜತೆ ಹೋರಾಡಿ ದಣಿದ ಮುದುಕ
ಬೆಂಗಳೂರಿನ ಮಾಕರ್ೆಟ್ಟಿನಲ್ಲಿ ರುಚಿಯಾದ
ಮೀನು ಹುಡುಕಿ ಸೋತು ಮುಖ ಇಳಿಬಿಟ್ಟು
ಹೊರ ಬರುತ್ತಿದ್ದಾಗ ಎದುರಿಗೆ ಇವನು
ಕರೆದೊಯ್ದು ಕಾಫಿ ಕುಡಿಸಿ
ಏನಾದರೂ ಮಾತಾಡು ಅಂದೆ
ಬೇಸ್ಬಾಲ್ ಬಗೆಗೆ ಹೊಸ ಸುದ್ದಿ ಇದೆಯಾ
ರೊನಾಲ್ಡೊ ಹೇಗೆ ಆಡುತ್ತಾನೆ ಅಂದ
ಬೇಸ್ಬಾಲ್ ಗೊತ್ತಿಲ್ಲ ಧೋನಿ ಬಗೆಗೆ ಕೇಳು
ಮೋದಿ ಬಗೆಗೆ ಹೇಳಲಾ ಅಂತ ಕೇಳಿದೆ
ಮುಖ ಕಿವುಚಿದ
ನಂತರ ನನಗಿಂತ ಉದ್ದದ ಮಾಲರ್ಿನ್ ಮೀನು
ಹಿಡಿದ ಕತೆ ಹೇಳಲಾ ಅಂತ ಕೇಳಿದ
ಓ ಅದನ್ನು ಹೆಮಿಂಗ್ವೇ ಹೇಳಿದ್ದಾನೆ
ಅದು ಸಿಕ್ಕಿಯೂ ಸಿಗಲಿಲ್ಲ ಅಲ್ಲವೆ
ಬೇರೇನಾದರೂ ಇದ್ದರೆ ಹೇಳು ಅಂದೆ
ಕಳೆದುಕೊಂಡುದು ಮಾತ್ರ ಮಾತಿಗೆ ಬರುವುದು
ಅಷ್ಟೇ, ಬೇರೇನೂ ಇಲ್ಲ ಅಂದ
ಆಮೇಲೆ ಏನೋ ಯೋಚಿಸಿ
ವೈನ್ ಕುಡಿಯಲು ಹಣ ಕೊಡು ಅಂದ
ನನ್ನ ಬಳಿ ಅದೂ ಇರಲಿಲ್ಲ
ಆಮೇಲೆ ಹಾಗೇ ನಡೆದು ಹೋದ
0 ಪ್ರತಿಕ್ರಿಯೆಗಳು
Trackbacks/Pingbacks