ಮಿರ್ಜಾ ಬಷೀರ್ ನೆನಪು – ‘ಬಡುವ್ರಿಗೆ ಅನ್ಯಾಯ ಮಾಡ್ಬಾರ್ದು ಸಾರ್’

ಡಾ|| ಮಿರ್ಜಾ ಬಷೀರ್

ಅದು 1981. ನಾನು ಪಶುವೈದ್ಯಕೀಯ ಪದವಿ ಪಡೆದ ಕೂಡಲೇ ಬಿ.ಎ.ಐ.ಎಫ್. (ಭಾರತೀಯ ಆಗ್ರೋ ಇಂಡಸ್ಟ್ರೀಸ್ ಫೌಂಡೇಷನ್) ಎಂಬ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅದರ ಕೇಂದ್ರ ಕಚೇರಿ ಪುಣೆಯ ಬಳಿ ಉರುಳಿಕಾಂಚನದಲ್ಲಿದೆ. ಮ್ಯಾಗ್ಸಸ್ಸೇ ಪ್ರಶಸ್ತಿ ವಿಜೇತರಾದ ಶ್ರೀ ಮಣಿಭಾಯಿ ದೇಸಾಯಿಯವರು ಕಟ್ಟಿ ಬೆಳೆಸಿದ ಸಂಸ್ಥೆ ಅದು.

ಉರುಳಿಕಾಂಚನದಲ್ಲಿ ಒಂದು ತಿಂಗಳು ಕಚೇರಿ ಕೆಲಸಗಳ ನಿರ್ವಹಣೆ ಬಗ್ಗೆ ತರಬೇತಿ ಪಡೆದ ಮೇಲೆ ನನಗೆ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಅಶ್ವಿ ಎಂಬ ಗ್ರಾಮಕ್ಕೆ ಸ್ಥಳ ನಿಯುಕ್ತಿ ಆಯ್ತು. ಆ ಪ್ರಕಾರ ನಾನು ಅಶ್ವಿಯಲ್ಲಿ ಕೆಲಸ ಮಾಡಲು ತೊಡಗಿದೆ. ಅಲ್ಲಿ ಮರಾಠಿ ಭಾಷೆಯದೇ ಪ್ರಾಧಾನ್ಯ. ನನಗೆ ಮರಾಠಿಯ ಒಂದೇ ಒಂದು ಶಬ್ದ ಗೊತ್ತಿರಲಿಲ್ಲ.

ಬೈಫ್ ಸಂಸ್ಥೆಯ ಧ್ಯೇಯೋದ್ದೇಶವೆಂದರೆ ಕಡಿಮೆ ಹಾಲು ಹಿಂಡುವ ನಮ್ಮ ನಾಟಿ ತಳಿ ಹಸುಗಳಿಗೆ ವಿದೇಶಿ ತಳಿಗಳಾದ ಎಚ್.ಎಫ್. ಮತ್ತು ಜರ್ಸಿ ತಳಿಗಳ ವೀರ್ಯವನ್ನು ಬಳಸಿ ಕೃತಕ ಗರ್ಭಧಾರಣೆ ಮಾಡಿ ಹೆಚ್ಚು ಹಾಲು ಉತ್ಪಾದಿಸುವ ಮಿಶ್ರತಳಿಯ ಹಸುಗಳನ್ನು ಪಡೆಯುವುದು. ಇದರಿಂದ ರೈತರ ಆದಾಯ ಹೆಚ್ಚಿಸುವ ಉದ್ದೇಶವಿತ್ತು ಮತ್ತು ವರ್ಷಪೂರ್ತಿ ಉದ್ಯೋಗ ಒದಗಿಸುವುದಾಗಿತ್ತು. ಅಶ್ವಿ ಎಂಬುದು ಒಂದು ಸಣ್ಣ ಹಳ್ಳಿ. ಅಲ್ಲಿ ನಮ್ಮ ಕಚೇರಿಯಿತ್ತು. ಒಂದು ರೂಮಿನ ಕಚೇರಿ. ಅದರಲ್ಲಿ ಇಬ್ಬರು ವೈದ್ಯರು, ಮೂರು ಜನ ಇತರೆ ಸಿಬ್ಬಂದಿ ಕುಳಿತುಕೊಳ್ಳ ಬೇಕಾಗಿತ್ತು. ದಿನವೂ ಸರಾಸರಿ ಇಪ್ಪತ್ತು ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಬೇಕಾಗುತ್ತಿತ್ತು. ಅಂದರೆ ಸುತ್ತಮುತ್ತ ಹಳ್ಳಿಗಳಲ್ಲಿರುವ ಹತ್ತು ಹದಿನೈದು ಮನೆಗಳಿಗೆ ಹೋಗಿ ಬರಬೇಕು ಮತ್ತು ಕನಿಷ್ಠ ಪಕ್ಷ ಹತ್ತು ಹನ್ನೆರಡು ಹಳ್ಳಿಗಳ ಭೇಟಿ ಇದ್ದೇ ಇರುತ್ತಿತ್ತು. ಕಚೇರಿಗೆ ಒಂದು ಬೈಕ್ ಕೊಟ್ಟಿದ್ದರು. ಆ ಬೈಕಲ್ಲಿ ನಮ್ಮ ಓಡಾಟ. ಕೃತಕ ಗರ್ಭಧಾರಣೆಯೆಂದರೆ ಹೋರಿಗಳಿಂದ ಪಡೆದು ಸಂಸ್ಕರಿಸಿದ ವೀರ್ಯವನ್ನು ಕೃತಕ ಉಪಕರಣ (ಇದಕ್ಕೆ A.I Gun ಎನ್ನುತ್ತಾರೆ) ಬಳಸಿ ಬೆದೆಗೆ ಬಂದಿರುವ ಹಸುಗಳ ಗರ್ಭಕೋಶದಲ್ಲಿ ಹನಿಸುವುದು.

ಒಂದು ದಿನ ಕಚೇರಿಯಲ್ಲಿದ್ದೆ. ಒಬ್ಬ ಮೂವತ್ತರ ಆಸುಪಾಸಿನ ವ್ಯಕ್ತಿ ಜೀಪಲ್ಲಿ ಬಂದ. ಅವನು ಬಂದ ಕೂಡಲೇ ಕಚೇರಿಯಲ್ಲಿ ಸಂಚಲನವುಂಟಾಯಿತು. ಆತ ಯಾರು ಎಂಬುದು ಗೊತ್ತಿರಲಿಲ್ಲವಾದ್ದರಿಂದ ನಾನು ಸುಮ್ಮನಿದ್ದೆ. ಬಂದವನೋ ಒಂದು ರಾಶಿ ಮಾತಾಡುತ್ತ ಊರಿಗೇ ಕೇಳಿಸುವಂತೆ ನಗುತ್ತಿದ್ದ. ಅವನ ಆತ್ಮವಿಶ್ವಾಸ ಅದ್ವಿತೀಯವಾಗಿತ್ತು. ಅವನೊಬ್ಬ ಸ್ಫುರದ್ರೂಪಿಯಾಗಿದ್ದ. ಎಲ್ಲರನ್ನೂ ಮರುಳು ಮಾಡುವುದರಲ್ಲಿ ನಿಸ್ಸೀಮನಂತಿದ್ದ.
ನನಗೆ ಮರಾಠಿ ಬರುವುದಿಲ್ಲ ಎಂದು ಗೊತ್ತಾದ ಕೂಡಲೆ ಇಂಗ್ಲಿಷ್‍ನಲ್ಲಿ ಮಾತನಾಡತೊಡಗಿದ. ಸುತ್ತ ಇದ್ದ ಗ್ರಾಮದ ಜನರನ್ನೆಲ್ಲ ಆಕರ್ಷಿಸುವುದು, ಅವರ ಮೆಚ್ಚುಗೆ ಗಳಿಸುವುದು, ತಾನು ಲೋಕವನ್ನು ಗೆದ್ದವನು ಎಂದು ಪ್ರಚುರಪಡಿಸುವುದು ಅವನ ಉದ್ದೇಶವಿದ್ದಂತಿತ್ತು. ನಾನು ಕನ್ನಡದವನೆಂದು ಗೊತ್ತಾದ ಕೂಡಲೇ “ಹೆಸರು ಏನು? ಯಾವೂರು? ತಿಂಡಿ ಆಯ್ತಾ?” ಎಂದು ಕೇಳಿ ಎಲ್ಲರನ್ನೂ ದಂಗುಬಡಿಸಿದ! ಅವನಿಗೆ ಸುಮಾರಾಗಿ ಕನ್ನಡವೂ ಬರುತ್ತಿತ್ತು. ಮಹಾರಾಷ್ಟ್ರದ ಯಾವುದೋ ಕುಗ್ರಾಮದಲ್ಲಿ ಕನ್ನಡ ನುಡಿ ಕೇಳಿ ನಾನೂ ರೋಮಾಂಚಿತನಾದದ್ದು ಸುಳ್ಳಲ್ಲ. ಆ ವಾಚಾಳಿಯ ಹೆಸರು ಕೇಳಿ ತಿಳಿದುಕೊಂಡೆ. ಅವನ ಹೆಸರು ಕ್ಷೀರಸಾಗರ.

ಜೀಪಿನಲ್ಲಿ ಬಂದಿದ್ದ ಆತನ ಜೊತೆ ಹೊರಟೆ. ವೀರ್ಯ ನಳಿಕೆಗಳನ್ನಿಟ್ಟಿದ್ದ (Semen Straws) ದ್ರವಸಾರಜನಕದ ಜಾಡಿ (Liquid Nitrogen Container) ಮತ್ತು ಕೃತಕ ಗರ್ಭಧಾರಣೆಯ ಸಲಕರಣೆಗಳನ್ನು ಜೀಪಿನಲ್ಲಿ ಇಡಲಾಯಿತು. ವಿವಿಧ ಗಾತ್ರದ ಜಾಡಿಗಳು ಲಭ್ಯವಿದ್ದು ಅವುಗಳಲ್ಲಿ ಸಾವಿರಾರು ವೀರ್ಯದ ಕಡ್ಡಿಗಳನ್ನು ಇಡಲಾಗುತ್ತದೆ. ವೀರ್ಯ ಕಡ್ಡಿಗಳು ಪೆನ್ನಿನ ರೀಫಿಲ್ ಥರವೇ ಇರುತ್ತವೆ. ಆ ಕಡ್ಡಿಗಳಲ್ಲಿ ವೀರ್ಯವನ್ನು ತುಂಬಿ ದ್ರವಸಾರಜನಕದ ಜಾಡಿಗಳಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು. ದ್ರವಸಾರಜನಕದಲ್ಲಿ (ಇದರ ತಾಪ -1960 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ) ಮುಳುಗಿರುವ ವೀರ್ಯದ ಕಡ್ಡಿಗಳನ್ನು ಅನೇಕ ವರ್ಷಗಳ ಕಾಲ ಉಪಯೋಗಿಸಿ ಕರುಗಳನ್ನು ಪಡೆಯಬಹುದು. ಒಂದು ಕೃತಕ ಗರ್ಭಧಾರಣೆಗೆ ಒಂದು ವೀರ್ಯದ ಕಡ್ಡಿ ಬೇಕಾಗುತ್ತದೆ. ಸದ್ಯಕ್ಕೆ ಹಸು, ಎಮ್ಮೆಗಳಲ್ಲಿ ಮಾತ್ರ ಕೃತಕ ಗರ್ಭಧಾರಣೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಇನ್ನಿತರ ಪ್ರಾಣಿಗಳಿಗೂ (ಕುರಿ, ಮೇಕೆ) ಈ ಸೌಲಭ್ಯವನ್ನು ವಿಸ್ತರಿಸಬಹುದು.

ಕ್ಷೀರಸಾಗರನ ಮನೆ ನಾಲ್ಕೈದು ಕಿ.ಮೀ. ದೂರದಲ್ಲಿತ್ತು. ಅಲ್ಲಿಗೆ ಹೋಗುವವರೆಗೆ ಆತ ಬಾಯಿ ಮುಚ್ಚಲೇ ಇಲ್ಲ. ತನಗೆ ಎರಡು ಮುತ್ತಿನಂಥ ಮಕ್ಕಳಿದ್ದಾರೆಂದ. ಮಕ್ಕಳ ಸೌಂದರ್ಯಕ್ಕೆ ಅವುಗಳ ತಾಯಿಯ ಸೌಂದರ್ಯವೇ ಕಾರಣ ಎಂದ. ಯಾವುದನ್ನು ಹೇಳಬೇಕು, ಯಾವುದನ್ನು ಹೇಳಬಾರದು ಎಂಬ ಎಗ್ಗಿಲ್ಲದೆ ಮಾತಾಡುತ್ತಿದ್ದ. ಬಹುಶಃ ಜನ್ಮದಲ್ಲಿ ಬೇರೆಯವರಿಗೆ ಹೇಳದೇ ಇದ್ದ ಒಂದೇ ಒಂದು ವಿಚಾರವು ಅವನ ಮನಸ್ಸಿನಲ್ಲಿರಲಿಲ್ಲವೆಂದು ಕಾಣುತ್ತದೆ. ಗುಟ್ಟೆಂದರೆ ಅವನಿಗೆ ಗೊತ್ತೇ ಇರಲಿಲ್ಲವೇನೋ? ಜೀಪು ನಿಂತದ್ದು ಒಂದು ಭಾರೀ ತೋಟದ ಮನೆಯ ಮುಂದೆ. ಸುಮಾರು ಜನ ಹೆಣ್ಣಾಳುಗಳು, ಗಂಡಾಳುಗಳು ಏನೇನೋ ಕೆಲಸಗಳಲ್ಲಿ ತೊಡಗಿದ್ದರು.

ಮೊದಲು ಶೆಡ್ಡಿಗೆ ಹೋಗಿ ಹಸುಗಳಿಗೆ ವೀರ್ಯ ಕೊಟ್ಟು ಬರೋಣ ಎಂದುಕೊಂಡು ಕೊಟ್ಟಿಗೆಗೆ ಹೋದರೆ ಅಲ್ಲಿ ಮೂವತ್ತರಿಂದ ನಲವತ್ತು ಮಿಶ್ರತಳಿಯ ಹಸುಗಳಿದ್ದವು. ಎಚ್.ಎಫ್. ಹಸುಗಳೇ ಜಾಸ್ತಿ. ಜರ್ಸಿಗಳು ಕಮ್ಮಿ. ಕೆಲವು ಗಿರ್ ತಳಿಯ ಹಸುಗಳೂ ಇದ್ದವು. ಗಂಡಾಳು, ಹೆಣ್ಣಾಳುಗಳು ಕೂಗಾಡುತ್ತ ಕೆಲಸ ಮಾಡುತ್ತಿದ್ದರು. ಕ್ಷೀರಸಾಗರನಂತೂ ಅವರ ಮೈ ಕೈ ಮುಟ್ಟಿ ಅವರ ಕುಂಡೆಗಳ ಮೇಲೆಲ್ಲಾ ಹೊಡೆಯುತ್ತ ಮಾತನಾಡುತ್ತಿದ್ದ. ಅದರಲ್ಲಿದ್ದ ಕೆಲವು ಹುಡುಗಿಯರಂತೂ ಆಕರ್ಷಕವಾಗಿದ್ದರು. ಯಾವಾಗಲೋ ಉಂಡು, ಯಾವಾಗಲೋ ಸ್ನಾನ ಮಾಡಿ, ಯಾವಾಗಲೋ ನಿದ್ದೆ ಮಾಡಿದ್ದರೂ, ಬಡತನ, ಸಾಲಸೋಲಗಳು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರೂ ಅವರ ಚರ್ಮದ ಹೊಳಪಲ್ಲಿ, ಕಣ್ಣಮಿಂಚಲ್ಲಿ, ನಗುವಲ್ಲಿ, ಎಗ್ಗಿಲ್ಲದ ಮಾತಲ್ಲಿ, ಕತ್ತು ಕೊಂಕಲ್ಲಿ ಅನೇಕ ಸೌಂದರ್ಯದ ವ್ಯಾಖ್ಯಾನಗಳಿದ್ದವು.

ಒಟ್ಟು ನಾಲ್ಕು ಹಸುಗಳು ಬೆದೆಗೆ ಬಂದಿದ್ದವು. ಇಷ್ಟು ಹೊತ್ತಿನ ತನಕ ಕೇಕೆ ಹೊಡೆಯುತ್ತ, ಮಾತಾಡುತ್ತಿದ್ದ ಕ್ಷೀರಸಾಗರ ಇದ್ದಕ್ಕಿದ್ದಂತೆ ಗಂಭೀರನಾದ. ಅವನು ಇಂಗ್ಲಿಷ್, ಹಿಂದಿ, ಕನ್ನಡ ಮೂರೂ ಭಾಷೆಗಳ ಬಳಸಿ ಹೇಳಿದ್ದಿಷ್ಟು: ಇಂದು ಹೀಟಿಗೆ (ಬೆದೆಗೆ) ಬಂದಿರುವ ನಾಲ್ಕು ಹಸುಗಳಲ್ಲಿ ಒಂದು ಹಸು ಮುಂದಿನ ಒಂದೆರಡು ದಿನದಲ್ಲಿ ಯೋನಿಯಿಂದ ರಕ್ತ ಸುರಿಸುತ್ತದೆ. ಮತ್ತು ಈ ಹಸು ಬೇಗನೆ ಗರ್ಭ ಧರಿಸುವುದಿಲ್ಲ. ಬೇರೆ ಹಸುಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಸಲ ವೀರ್ಯ ಕೊಡಿಸಿದರೆ ಗರ್ಭ ಕಟ್ಟುತ್ತವೆ. ಆದರೆ ರಕ್ತಸ್ರಾವ ತೋರಿಸುವ ಹಸುಗಳು ಗರ್ಭ ಧರಿಸುವುದು ಸ್ವಲ್ಪ ತಡವಾಗುತ್ತದೆ. ಗರ್ಭ ಧರಿಸುವುದು ತಡವಾದರೆ ಡೈರಿ ಲಾಸು. ಇಷ್ಟು ಮಾತು ಮುಗಿಸುವಷ್ಟರಲ್ಲಿ ಮತ್ತೆ ಚಂಗಲು ಚಂಗಲಾಗಿ ಆಡತೊಡಗಿದ. ಅವನ ಇನ್ನೊಂದು ವಿಶೇಷವೆಂದರೆ ಮಾತಾಡುತ್ತ ಕಣ್ಣು ಮಿಟುಕಿಸುತ್ತಿದ್ದುದು. ಎದುರಿದ್ದವರು ಸಣ್ಣವರು, ದೊಡ್ಡವರು, ಗಂಡು, ಹೆಣ್ಣು ಎಂಬ ಯಾವ ವ್ಯತ್ಯಾಸವಿಲ್ಲದೆ ಒಂದೇ ಥರ ಹಾವಭಾವವನ್ನು ಪ್ರದರ್ಶಿಸುತ್ತಿದ್ದ.

ಕ್ಷೀರಸಾಗರನಿಗೆ ಸ್ವಲ್ಪ ಹೊತ್ತು ಸಮಾಧಾನಿಸು ಎಂದು ಸೂಚಿಸಿದೆ.

ಕೃತಕ ಗರ್ಭಧಾರಣೆ ಮಾಡುವಾಗ ವೈದ್ಯರು ಎಡಗೈಯನ್ನು ಹಸುವಿನ ಗುದದ್ವಾರದಲ್ಲಿ ಹಾಕಿ ಒಳಗಿಂದಲೇ ಗರ್ಭಕೋಶದ ಬಾಯಿಯನ್ನು (Cervix) ಹಿಡಿದು, ಬಲಗೈಯಲ್ಲಿ ವೀರ್ಯದ ಕಡ್ಡಿಯನ್ನು ಹಾಕಿ ಸಿದ್ಧ ಮಾಡಿರುವ A.I. Gun ಅನ್ನು ಯೋನಿಯ ಮುಖಾಂತರ ಗರ್ಭಕೋಶದ ಬಾಯಿಯ ತನಕ ತಳ್ಳಿ ವೀರ್ಯವನ್ನು ಹನಿಸುತ್ತಾರೆ. ಇದನ್ನು ವಿವರಿಸುವುದು ಕಷ್ಟ. ಆದರೆ ಎದುರಿದ್ದು ನೋಡಿದರೆ ಸುಲಭವಾಗಿ ಅರ್ಥವಾಗುತ್ತದೆ.

ಕೃತಕ ಗರ್ಭಧಾರಣೆ ಮಾಡುವ ವೇಳೆ ಇಬ್ಬರು ಮೂರು ಜನ ಹಸುವಿನ ಮೂಗುದಾರ, ತಲೆ, ಬೆನ್ನು, ಬಾಲ ಹಿಡಿದುಕೊಂಡು ಮೈ ತೂಬರಿಸುವುದು ಅವಶ್ಯಕ. ಅಂದು ಮೂರು ಜನ ಹೆಣ್ಣುಮಕ್ಕಳೇ ಪೈಪೋಟಿಯ ಮೇಲೆ ಹಸು ಹಿಡಿದಿದ್ದರು. ವೀರ್ಯ ಕೊಡುವಾಗ ಹಸು ರಂಪ ಮಾಡದೆ ಎಷ್ಟು ಸಮಾಧಾನದಿಂದ ಇರುತ್ತದೆಯೋ ಅಷ್ಟು ಒಳ್ಳೆಯದು. ಇದರಿಂದ ಗರ್ಭಕೋಶದಲ್ಲಿ ಹನಿಸಿರುವ ವೀರ್ಯಾಣುಗಳು (Sperms) ವೇಗ ವರ್ಧಿಸಿಕೊಂಡು ಅಂಡ ಅಥವಾ ಮೊಟ್ಟೆ ಅಥವಾ ತತ್ತಿಗಳ (Ova or Egg) ಕಡೆಗೆ ದೌಡಾಯಿಸುತ್ತವೆಯಂತೆ! ಇದೆಷ್ಟು ವಿಚಿತ್ರ ನೋಡಿ. ಇಲ್ಲಿ ವೀರ್ಯಾಣುಗಳ ಚಲನೆಗೆ ಸಹಕರಿಸಲು ಗರ್ಭಕೋಶವು ಅಂಡಾಶಯಗಳ (Ovary) ಕಡೆ ಸಂಕುಚನಗೊಂಡರೆ, ಕರು ಹಾಕುವ ಸಮಯದಲ್ಲಿ ಇದೇ ಗರ್ಭಕೋಶದ ಮಾಂಸಖಂಡಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಂಕುಚನಗೊಳ್ಳುತ್ತವೆ. (Uterine Contractions) ಪ್ರಕೃತಿಯ ಸೋಜಿಗದ ಬಗ್ಗೆ ನಾನು ಮಗ್ನನಾಗಿದ್ದರೆ, ಕ್ಷೀರಸಾಗರ ನಾನು ಕೈಗೊಂಡಿದ್ದ ಕ್ರಿಯೆಯ ಅಂದರೆ ಕೃತಕ ಗರ್ಭಧಾರಣೆಯ ಬಗ್ಗೆ ರೋಮಾಂಚಿತನಾಗಿ ವಿಚಿತ್ರವಾಗಿ ವರ್ತಿಸತೊಡಗಿದ್ದ. ಕಿಸಿಕಿಸಿ ನಗುವುದು, ಬಾಯಿ ಬಿಟ್ಟು “ಹಾಗೆ ಸಾರ್, ಕರೆಕ್ಟ್ ಸಾರ್” ಎಂದು ಜೋರಾಗಿ ಹೇಳುವುದು. ಮೆಲ್ಲಗೆ ಸೀಟಿ ಹಾಕುವುದು ಇತ್ಯಾದಿ. ಆ ಹೆಣ್ಣುಮಕ್ಕಳು ಇದೆಲ್ಲವನ್ನೂ ಎಷ್ಟು ವರ್ಷದಿಂದ ನೋಡುತ್ತಿದ್ದರೋ, ಅನುಭವಿಸುತ್ತಿದ್ದರೋ ಎಂದು ನನಗೆ ಪಿಚ್ಚೆನಿಸಿತು. ಆದರದು ಅವರಿಗೆ ಅನಿವಾರ್ಯವಾಗಿತ್ತು.

ನಾಲ್ಕು ಹಸುಗಳ ಕೃತಕ ಗರ್ಭಧಾರಣೆ ಮಾಡಿ ಮುಗಿಸಿದ ಮೇಲೆ ಕೈ ಕಾಲುಗಳನ್ನು ತೊಳೆದುಕೊಂಡೆ. ಕ್ಷೀರಸಾಗರ ಮನೆಯೊಳಗೆ ಕರೆದುಕೊಂಡು ಹೋದನು. ಮನೆಯೊಳಗೆ ದುಬಾರಿ ಬೆಲೆಯ ಕುರ್ಚಿ, ಮೇಜು, ಸೋಫ ಸೆಟ್ಟು, ಕಿಟಕಿ, ಬಾಗಿಲು, ಪರದೆಗಳು, ನೆಲಹಾಸು ಎಲ್ಲವೂ ಭವ್ಯವಾಗಿದ್ದವು. ಮನೆ ಸಣ್ಣ ಅರಮನೆಯಂತಿತ್ತು. ಮತ್ತೊಂದು ವಿಶೇಷವೆಂದರೆ ಕ್ಷೀರಸಾಗರನು ಉದಾರವಾಗಿ ವರ್ತಿಸುತ್ತಿದ್ದನು. ಅವನು ಯಾರ ಮೇಲೆಯೂ ಸಿಟ್ಟಾಗುತ್ತಿರಲಿಲ್ಲ. ಹಸು ಹಿಡಿದುಕೊಂಡಿದ್ದ ಹೆಣ್ಣುಮಕ್ಕಳಿಗೆ ಅಲ್ಲೇ ಐದೈದು ರೂಪಾಯಿಗಳ ಭಕ್ಷೀಸು ಕೊಟ್ಟಿದ್ದ.

ಬೆದೆಯ ನಂತರದ ರಕ್ತಸ್ರಾವಕ್ಕೆ ಮೆಟ್ ಈಸ್ಟ್ರಸ್ ಬ್ಲೀಡಿಂಗ್ (Met estrous Bleeding) ಎಂದು ಕರೆಯುತ್ತಾರೆ. ಶರೀರದ ಹಾರ್ಮೋನುಗಳ (ಈಸ್ಟ್ರೊಜನ್-ಪ್ರೊಜೆಸ್ಟ್ರಾನ್) ಬಿಡುಗಡೆ ಮತ್ತು ನಿಲುಗಡೆ ಕಾರಣವಾಗಿ ಹಾಗೆ ರಕ್ತ ಸುರಿಯುತ್ತದೆ. ಇದನ್ನು ಸರಿಪಡಿಸಲು ನಾವು ಆಗ ಈಸ್ಟ್ರೊಜನ್ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನುಗಳ ಸಂಯೋಗದಿಂದ ತಯಾರಿಸಿದ ಇಂಜೆಕ್ಷನ್ ಮಾಡುತ್ತಿದ್ದೆವು. ಮನುಷ್ಯರಿಗಾಗಿ ತಯಾರಿಸಿದ ಔಷಧವನ್ನೇ ದನಗಳಲ್ಲೂ ಉಪಯೋಗಿಸುತ್ತಿದ್ದೆವು. ಕ್ಷೀರಸಾಗರನಿಗೆ ಒಂದು ಪೇಪರಲ್ಲಿ ಸಂಬಂಧಪಟ್ಟ ಇಂಜೆಕ್ಷನ್ ಬರೆದುಕೊಟ್ಟೆ. ಬರೆದುಕೊಟ್ಟ ಚೀಟಿಯನ್ನು ಓದಿದವನೇ ಕ್ಷೀರಸಾಗರ ಮೈಮೇಲೆ ಬಂದವನಂತೆ ಆಡತೊಡಗಿದ. ಜೋರಾಗಿ ನಗತೊಡಗಿದ. ನನ್ನ ಕೈ ಹಿಡಿದು “ಸಾರ್ ನೀವು ತಮಾಷೆ ಮಾಡುತ್ತಿದ್ದೀರಿ! ಕನ್ನಡಿಗರು ತಮಾಷೆ ಜಾಸ್ತಿ! ಈ ಇಂಜೆಕ್ಷನ್ ಯಾಕೆ ಬರೆದುಕೊಟ್ಟಿರಿ? ಕಿಲಾಡಿ ನೀವು!” ಎಂದು ಹುಚ್ಚುಚ್ಚಾಗಿ ಮಾತಾಡತೊಡಗಿದನು. ನನಗೇನೂ ಅರ್ಥವಾಗಲಿಲ್ಲ.

ಎಷ್ಟೋ ಹೊತ್ತಿನ ಮೇಲೆ ಸುಧಾರಿಸಿಕೊಂಡು ನನ್ನ ಹತ್ತಿರ ಬಂದು “ಹಸುಗಳ ರಕ್ತಸ್ರಾವ ನಿಲ್ಲಿಸಿ ಗರ್ಭ ಧರಿಸುವಂತೆ ಮಾಡಲು ಚಿಕಿತ್ಸೆ ನೀಡಿ ಸಾರ್ ಎಂದು ನಾನು ಕೇಳಿಕೊಂಡರೆ ನೀವು ಅಬಾರ್ಷನ್ ಮಾಡಿಸಲು ಇಂಜೆಕ್ಷನ್ ಬರೆದುಕೊಟ್ಟಿದ್ದೀರಿ!” ಎಂದು ಮತ್ತೊಮ್ಮೆ ನಗತೊಡಗಿದ. ನನಗೇನೂ ಅರ್ಥವಾಗದೆ ಸುಮ್ಮನೆ ನಿಂತುಕೊಂಡಿದ್ದೆ. ಅವನು ನನ್ನ ಕಿವಿಯ ಬಳಿ ಬಂದು ಗುಟ್ಟು ಹೇಳಿದ. “ನಮ್ಮನೆಗೆ ಕೆಲಸಕ್ಕೆ ಬರುವ ಹೆಣ್ಣಾಳುಗಳಲ್ಲಿ ಅನೇಕರಿಗೆ ಇದೇ ಇಂಜೆಕ್ಷನ್ ನಾನೇ ಮಾಡಿದ್ದೇನೆ ಸಾರ್. ಜೊತೆ ಮಲಗಲು ಹತ್ತು ರೂಪಾಯಿ ಕೊಟ್ರೆ ಸಾಕು. ಆದರೆ ನಾನು ಕನಿಷ್ಠ ಐವತ್ತು ರೂಪಾಯಿ ಕೊಡುತ್ತೇನೆ. ಬಡವರಿಗೆ ಅನ್ಯಾಯ ಮಾಡ್ಬಾರ್ದು ಸಾರ್. ಏನೂ ಹೆಚ್ಚು ಕಡಿಮೆ ಆಗದಂಗೆ ನೋಡ್ಕಳ್ತೀನಿ. ಏನಾದ್ರೂ ಹೆಚ್ಚುಕಮ್ಮಿ ಆಗಿ ಪ್ರೆಗ್ನೆಂಟ್ ಆದ್ರೆ ಇದೇ ಇಂಜೆಕ್ಷನ್ ಮಾಡ್ತೀನಿ. ಅಬಾರ್ಷನ್ ಆಗುತ್ತೆ. ಬಾಳ ಒಳ್ಳೆ ಇಂಜೆಕ್ಷನ್ ಸಾರ್ ಇದು. ನನ್ನ ಸುಖ, ಮಾನ ಮರ್ಯಾದೆ, ಹಣ, ಅಂತಸ್ತು ಎಲ್ಲ ಕಾಪಾಡಿಕೊಂಡು ಬಂದಿದೆ ಈ ಇಂಜೆಕ್ಷನ್ನು. ಎಲ್ಲ ಮೆಡಿಕಲ್ ಶಾಪಲ್ಲೂ ಸಿಗುತ್ತೆ. ಡಾಕ್ಟ್ರ ಚೀಟಿ ಸೈತ ಬೇಕಾಗಿಲ್ಲ! ಹಸುಗಳಿಗೆ ಈ ಅಬಾರ್ಷನ್ ಇಂಜೆಕ್ಷನ್ ಯಾಕೆ ಬರೆದಿದ್ದೀರಿ ಸಾರ್” ಎಂದು ಕೇಳಿ ಕ್ಷೀರಸಾಗರ ಕಣ್ಣು ಮಿಟುಕಿಸಿದ.

ಇಂಜೆಕ್ಷನ್‍ಗಳು ಬೇರೆ ಬೇರೆ ಪ್ರಾಣಿಗಳಲ್ಲಿ ಬೇರೆ ಬೇರೆ ವಿಧದಲ್ಲಿ ಕೆಲಸ ಮಾಡಬಹುದು ಮತ್ತು ದೇಹದ ಬೇರೆ ಬೇರೆ ಸ್ಥಿತಿಗಳಲ್ಲಿ, ಬೇರೆ ಬೇರೆಯ ಪರಿಣಾಮವುಂಟು ಮಾಡಬಹುದು. ಉದಾಹರಣೆಗೆ ಹಸು ಬೆದೆಗೆ ಬರುವಂತೆ ಮಾಡಲು ಬಳಸುವ ಔಷಧವನ್ನೇ ಅಬಾರ್ಷನ್ ಮಾಡಲು ಅಥವಾ ದಿನ ತುಂಬಿದ ಮೇಲೆ ಹೆರಿಗೆಯಾಗುವಂತೆ ಮಾಡಲು ಬಳಸಬಹುದು ಇತ್ಯಾದಿ ತಿಳಿಸಿದೆನಾದರೂ ನಾನು ಅಕ್ಷರಶಃ ವಿಚಲಿತನಾಗಿದ್ದೆ. ಮನೆ, ಕೊಟ್ಟಿಗೆ, ಕಣ ಎಲ್ಲ ಕಡೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದ ಅನೇಕ ಬಡ ಮತ್ತು ಮುಗ್ಧ ಹೆಣ್ಣುಮಕ್ಕಳ ಉಲಿ ಕೇಳಿಸುತ್ತಿತ್ತು. ಎಳೆಯರು, ನಡುವಯಸ್ಕರೆಲ್ಲ ಅಲ್ಲಿದ್ದರು. ಅವರಿಗೆಲ್ಲ ಈ ಕಿರಾತಕ ಏನೇನು ನರಕ ಸೃಷ್ಟಿಸಿರಬಹುದು!

ಮಹಿಳೆಯರಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎಂದಾಗ ನಮಗೆ ನಗರಗಳು, ಮಾಲ್‍ಗಳು, ಕಚೇರಿಗಳು, ಚಿತ್ರೋದ್ಯಮ ಇತ್ಯಾದಿ ನೆನಪಾಗುತ್ತವೆ. ಆದರೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ಸರ್ವಾಂತರ್ಯಾಮಿಯಾಗಿಯೇ ಇದೆ. ಇನ್ನೊಂದು ಸಂಗತಿಯೇನೆಂದರೆ ಈ ಇಂಜೆಕ್ಷನ್ನನ್ನು ಮುಂದುವರಿದ ದೇಶಗಳಲ್ಲಿ ಬಹಳ ಹಿಂದೆಯೇ ನಿಷೇಧಿಸಿದ್ದಾರೆ. ಮುಂದೊಂದು ದಿನ ನಮ್ಮಲ್ಲೂ ನಿಷೇಧಕ್ಕೊಳಗಾಗಬಹುದು. ಪಶುವೈದ್ಯ ವಿಜ್ಞಾನದ ಅರಿವಿನಲ್ಲಿಯೂ ಪ್ರಗತಿಯಾಗಿ ಈ ರಕ್ತಸ್ರಾವಕ್ಕೆ ಚಿಕಿತ್ಸೆಯೇ ಬೇಕಿಲ್ಲ ಎಂಬ ಅರಿವು ಮೂಡಿದೆ. ಆದರೆ ಒಂದು ಔಷಧ ನಿಷೇಧಿಸಿದರೆ ಮನುಷ್ಯ ಮತ್ತೊಂದು ಅದಕ್ಕಿನ್ನ ಪ್ರಭಾವಶಾಲಿಯಾದ ಮತ್ತು ಸುಲಭವಾದ ಸಾಧನವನ್ನು ಕಂಡುಹಿಡಿಯುತ್ತಾನೆ! ವಿಜ್ಞಾನವು ಕಾಲಡಿಯಲ್ಲಿ ತೆಪ್ಪಗೆ ಬಿದ್ದುಕೊಂಡಿರುವಾಗ ಅದಕ್ಕೆ ಮೂಗುದಾರ ಏರಿಸದೆ ಸುಮ್ಮನೆ ಬಿಟ್ಟಾನೆಯೇ! ಅದೂ ತನ್ನ ಸುಖ, ಸಂತೋಷ, ಅಂತಸ್ತು, ಅಧಿಕಾರ ಕಾಯುವ ಗುಲಾಮನಾಗಿರುವಾಗ!

‍ಲೇಖಕರು nalike

August 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

 1. Mallikarjuna Hosapalya

  ತುಂಬಾ ಚೆನ್ನಾಗಿದೆ ಸರ್ ಬರಹ.

  ಪ್ರತಿಕ್ರಿಯೆ
 2. Vasudeva Sharma

  Very touching. A true story. A lot of abuse takes place in rural areas, but mostly get unreported.

  ಪ್ರತಿಕ್ರಿಯೆ
 3. Dr.Devaraj MB.

  A beautiful experience narrated so nicely .Dominance, subordination different types of exactraction common in rural areas. Technically educative essay.

  ಪ್ರತಿಕ್ರಿಯೆ
 4. Sudhakara

  Silence of slavery is not different from dumb animals to poor people and will continue as long as rich realise it is sinful or shameful. We hear the heart beat of the story writer in this story loudly

  ಪ್ರತಿಕ್ರಿಯೆ
 5. Sudhakara Battia

  Silence of slavery is not different from dumb animals to poor people and will continue as long as rich realise it is sinful or shameful. We hear the heart beat of the story writer in this story loudly

  ಪ್ರತಿಕ್ರಿಯೆ
 6. ವಿನತೆ ಶರ್ಮ

  Good to read the intersections of veterinarian science practice and societal inequalities. Nice writing.

  ಪ್ರತಿಕ್ರಿಯೆ
 7. ಲಲಿತಾ ಸಿದ್ಧಬಸವಯ್ಯ

  ಈ ಮಾಲಿಕೆಯ ಒಂದೊಂದು ಲೇಖನ ಓದಿದಾಗಲೂ ನನಗೆ ಜಗತ್ತಿನ ಲಕ್ಷಾಂತರ ತಿಳುವಳಿಕೆಗಳಲ್ಲಿ ನನಗಿರುವ ಅಜ್ಞಾನದ ತೀವ್ರ ಅನುಭವವಾಗುತ್ತದೆ. ಸಂಕಟ , ವಿಭ್ರಮ , ಸುಯ್ಲು , ಸಂತೋಷ , ದಿಗ್ಭ್ರಮೆಗಳ ಮಿಶ್ರಭಾವ !

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: