ಮಿರ್ಜಾ ಬಷೀರ್ ನೆನಪಲ್ಲಿ ಹಸು, ಆನೆ ಮತ್ತು ನಾಯಿಮರಿ

 ಡಾ|| ಮಿರ್ಜಾ ಬಷೀರ್

ನಾಣ್ಯಪ್ಪ ಪೂಜಾರಿ ಧರ್ಮಸ್ಥಳ ದೇವಸ್ಥಾನದ ಆನೆ ಲಾಯದಲ್ಲಿ ಮಾವುತರಾಗಿ ಕೆಲಸ ಮಾಡುತ್ತಿದ್ದರು. ಅಂಟೆ ಮಜಲಿನಲ್ಲಿ ಅವರ ಮನೆ. ನಮ್ಮ ಆಸ್ಪತ್ರೆಯಿಂದ ಎರಡು ಕಿ.ಮೀ.ನಷ್ಟೂ ದೂರವಿರಲಿಲ್ಲ. ಅದರೆ ಅವರ ಮನೆ ಹತ್ತಿರ ಒಂದು ಹೊಳೆ ಇತ್ತು. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಇರುತ್ತಿದ್ದುದರಿಂದ ಬೈಕನ್ನು ಈಚೆ ಬದಿಯಲ್ಲಿ ನಿಲ್ಲಿಸಿ ಹೊಳೆಯಲ್ಲಿ ನಡೆದು ಹೋಗುತ್ತಿದ್ದೆ. ನೀರಿಲ್ಲದಾಗ ಕೊರಕಲುಗಳ ದೆಸೆಯಿಂದ ಬೈಕು ನಿಲ್ಲಿಸಿ ನಡೆದು ಹೋಗುತ್ತಿದ್ದೆ. ಹೊಳೆ ದಾಟಿ ದಿಬ್ಬದ ಮೇಲಿದ್ದ ಅವರ ಮನೆ ತಲುಪಿದರೆ ನಾಯಿ ಕಾಟ! ಅಲ್ಲಿದ್ದದ್ದು ಕೇವಲ ಒಂದೆರಡು ಮನೆಯಾದರೂ ನಾಯಿಗಳು ವಿಪರೀತ. ಒಂದು ಕೆಂದ ನಾಯಿಯಂತೂ ಕ್ಷಣದಲ್ಲಿ ನೂರಾರು ಮೀಟರ್ ಓಡುತ್ತಿತ್ತು.

ನಾನು ನನ್ನ ಪ್ಯಾಂಟ್ ಜೇಬಿನಲ್ಲಿ ಒಂದಷ್ಟು ಕಲ್ಲುಗಳನ್ನು ತುಂಬಿಕೊಂಡು ಎಸೆಯುತ್ತ ಸಾಗುತ್ತಿದ್ದೆ. ಹೊಳೆ ದಂಡೆಯಲ್ಲಿ ಬೇಕಾದಷ್ಟು ಕಲ್ಲುಗಳು ಸಿಗುತ್ತಿದ್ದವು. ಕಲ್ಲು ಚಪ್ಪಟೆಯಿದ್ದರೆ ನೀರಿನಲ್ಲಿ ತೇಲುವಂತೆ ಎಸೆಯುವುದು ನನ್ನ ಹವ್ಯಾಸ. ದುಂಡನೆ ಕಲ್ಲುಗಳನ್ನು ನಾಯಿಗಳಿಗೆ ತಾಕದ ಹಾಗೆ ಸ್ಪೀಡಾಗಿ ಎಸೆಯುತ್ತಿದ್ದೆ. ಎಷ್ಟು ಸ್ಪೀಡೆಂದರೆ ರಾಕೆಟ್ ಥರ ಹೋಗಿ ಬೀಳುತ್ತಿದ್ದವು. ವಯಸ್ಸಿನಲ್ಲಿ ದೊಡ್ಡವನೂ, ಸಮಾಜದ ಕಣ್ಣಲ್ಲಿ ಗೌರವಾನ್ವಿತನೂ, ಸರ್ಕಾರಿ ಗೋ ಆಸ್ಪತ್ರೆಯ ವೈದ್ಯನೂ ಆಗಿದ್ದ ನಾನು ನಾಯಿಗಳತ್ತ ಕಲ್ಲೆಸೆಯುವುದು ಮಕ್ಕಳಾಟದಂತೆಯೂ, ಮೂರ್ಖ ನಡೆಯಂತೆಯೂ ಕಾಣಬಹುದು. ಆದರೆ ಆಗಷ್ಟೇ ಅಲ್ಲ 60ಕ್ಕೂ ಮೇಲ್ಪಟ್ಟು ವಯಸ್ಸಾಗಿರುವ ನನಗೆ ಇವತ್ತೂ ಹುಡುಗು ಬುದ್ಧಿಯೇ ಹೋಗಿಲ್ಲ. ನಾಯಿಗಳು ಹೆದರಿ ಓಡುತ್ತಿದ್ದವು. ಹೊಡೆಯುವುದಲ್ಲ, ಹೆದರಿಸುವುದಷ್ಟೇ ನನ್ನ ಉದ್ದೇಶವಾಗಿರುತ್ತಿತ್ತು. ಪಾಪದ ನಾಯಿಗಳಿಗೆ ನಾನೇಕೆ ಹೊಡೆಯಲಿ? ಅವಕ್ಕೇನಾದರೂ ಏಟಾದರೆ ಮತ್ತೆ ಅವುಗಳಿಗೆ ಚಿಕಿತ್ಸೆ ನೀಡುತ್ತ ನಾನೇ ಪೇಚಾಡಬೇಕಲ್ಲ! ಅಷ್ಟೊತ್ತಿಗೆ ನಾಣ್ಯಪ್ಪ ಅಥವಾ ಅವರ ಹೆಂಡತಿ ಅಥವಾ ಮಕ್ಕಳಾರಾದರೂ ಬಂದು ನಾಯಿಗಳನ್ನು ಸಮಾಧಾನ ಮಾಡಿ ಕಟ್ಟಿ ಹಾಕುತ್ತಿದ್ದರು.

ನನ್ನನ್ನು ನೋಡಿದ ಕೂಡಲೇ ನಾಣ್ಯಪ್ಪರ ಪತ್ನಿಗೆ ನಗು ಬರುತ್ತಿತ್ತು. ನನ್ನ ತಲೆ ಬೋಳಾಗಿ ಹೇಗೆ ಮಿಂಚುತ್ತಿತ್ತೆಂದರೆ ತಲೆಯ ಮೇಲೆ ಆಮ್ಲೆಟ್ ಹಾಕಬಹುದೆಂದು ತುಳುವಿನಲ್ಲಿ ಮಕ್ಕಳಿಗೆ ಹೇಳಿಕೊಂಡು ನಗುತ್ತಿದ್ದರು. ಅವರು ನನ್ನ ಚಹಾ ಕುಡಿಯುವ ದೌರ್ಬಲ್ಯವನ್ನು ಪತ್ತೆ ಮಾಡಿಬಿಟ್ಟಿದ್ದರು. ಸಿರಿಂಜ್ ಸ್ಟೆರಿಲೈಸ್ ಮಾಡಿಕೊಳ್ಳಲು ನೀರು ಕಾಯಿಸುವ ಮುಂಚೆಯೇ ಚಹಾ ಕಾಯಿಸುತ್ತಿದ್ದರು. ನಾನು ಮನೆಯೊಳಗೆ ಕುರ್ಚಿಗಳ ಮೇಲೆ ಕೂರದೆ ಹೊರಗೆ ಕಟ್ಟೆಯ ಮೇಲೆ ಚಕ್ಕಳಮಕ್ಕಳ ಕುಳಿತುಕೊಂಡು ಚಹಾ ಕುಡಿಯುತ್ತಿದ್ದೆ. ಅಲ್ಲಿಂದ ದೂರ ದೂರಕ್ಕೆ ದೃಷ್ಟಿ ಹರಿಸಬಹುದಿತ್ತು. ಹೊಳೆ, ಹೊಳೆಯ ಎರಡೂ ಬದಿಗಳು, ನಾಣ್ಯಪ್ಪರ ಮನೆಯ ಹಿಂದಿನ ಮತ್ತು ಬಲಗಡೆಯ ದಿಬ್ಬ, ತಗ್ಗುಗಳೂ ಎಲ್ಲವೂ ನನ್ನ ಕಣ್ಣಳತೆಗೆ ಸಿಗುತ್ತಿದ್ದವು. ಮಳೆ ಬರುತ್ತಿದ್ದರೆ ಅದೊಂದು ಹಬ್ಬ. ನಾಣ್ಯಪ್ಪರ ಪತ್ನಿ “ಈ ಡಾಕ್ಟ್ರು ಮಾತ್ರ ಬರಿಪಾಪ” ಎಂದು ಮರುಕ ತೋರುತ್ತಿದ್ದರು.

ಇಂಥ ನಾಣ್ಯಪ್ಪರ ಮನೆಯಲ್ಲಿ ಎರಡು ದುರ್ಘಟನೆಗಳು ಒಂದರ ಹಿಂದೊಂದು ನಡೆದು ಹೋದವು. ಅವರ ಬಳಿ ನಾಲ್ಕೈದು ಮಿಶ್ರ ತಳಿ ಹಸುಗಳು ಯಾವಾಗಲೂ ಇರುತ್ತಿದ್ದವು. ಚೆನ್ನಾಗಿ ಸಾಕಿದ್ದರು. ಹಾಲು ಮಾರಾಟದಿಂದ ಒಳ್ಳೆಯ ಆದಾಯವೂ ಇತ್ತು. ಮನೆಯ ಯಜಮಾನಿ ಒಂದು ನಿಮಿಷವೂ ವ್ಯರ್ಥ ಮಾಡದೆ ದುಡಿಯುತ್ತಿದ್ದದ್ದು ಇದಕ್ಕೆ ಕಾರಣವಾಗಿತ್ತು. 2005ರಲ್ಲಿ ಎಂದು ಕಾಣುತ್ತದೆ ಒಂದು ದಿನ ಕರಾವಿನ ಹಸುವೊಂದು ಮೇಯಲು ಗುಡ್ಡೆಗೆ ಹೋಗಿದ್ದು ಅಕಸ್ಮಾತ್ತಾಗಿ ಕಾಲು ಜಾರಿ ದಿಬ್ಬದಿಂದ ತಗ್ಗಿಗೆ ಬಿದ್ದಿತು. ಬೆನ್ನು ಕೆಳಗಾಗಿ ಬಿದ್ದು ಅದರ ಬೆನ್ನು ಮೂಳೆಯೇ ಮುರಿದು ಹೋಯಿತು. ಅದು ದೊಡ್ಡ ಹಸುವಾಗಿದ್ದು ಅಂದಾಜು ನಾನೂರು ಕೆಜಿಗೂ ಮೇಲ್ಪಟ್ಟು ತೂಕವಿತ್ತು. ಬೆನ್ನು ಹುರಿಗೆ ಏಟಾಗಿದ್ದರಿಂದ ಅದಕ್ಕೆ ದೇಹದ ಹಿಂದಿನ ಭಾಗದ ಮೇಲೆ ನಿಯಂತ್ರಣವೇ ಇರಲಿಲ್ಲ. ಹಸು ಅಲ್ಲಾಡಿದ ಕೂಡಲೆ ಬೆನ್ನು ಮೂಳೆಯ ತುಂಡಾಗಿದ್ದ ವರ್ಟಿಬ್ರೆ (ಕಶೇರುಖಂಡಗಳು) ಮತ್ತು ಪಕ್ಕೆಲುಬುಗಳು ಕಟಕಟ ಶಬ್ಧ ಮಾಡುತ್ತಿದ್ದವು. ಎರಡು ದಿನದೊಳಗಾಗಿ ಹಸುವಿಗೆ ಶ್ವಾಸಕೋಶದ ನಂಜಾಗಿ ಕೆಮ್ಮು ಪ್ರಾರಂಭವಾಯಿತು. ಪ್ರತಿಸಲ ಕೆಮ್ಮಿದಾಗಲೂ ಹಸುವಿಗೆ ನರಕ ಯಾತನೆಯಾಗಿರಬೇಕು. ವಾಸಿ ಮಾಡಲು ಯಾವ ಚಿಕಿತ್ಸೆಯೂ ಸಾಧ್ಯವಿರಲಿಲ್ಲ. ಹಸು ಅನುಭವಿಸುತ್ತಿದ್ದ ಹಿಂಸೆಯಿಂದ ಪಾರು ಮಾಡಲು ‘ದಯಾಮರಣ’ ಅತ್ಯುತ್ತಮ ಮಾರ್ಗವಾಗಿತ್ತು. ಅಂದರೆ ಇಂಜೆಕ್ಷನ್ ಮಾಡಿ ನೋವಿಲ್ಲದೆ ಹಸುವನ್ನು ಚಿರನಿದ್ರೆಗೆ ಕಳುಹಿಸುವುದು. ಆದರೆ ನಾಣ್ಯಪ್ಪರ ಮನೆಯವರಾರೂ ಇದಕ್ಕೆ ಒಪ್ಪದ ಕಾರಣ ನಾಲ್ಕೈದು ದಿನ ಸಾಧ್ಯವಿರುವ ಚಿಕಿತ್ಸೆ ನೀಡಲಾಯಿತಾದರೂ ಐದನೆ ದಿನ ಹಸು ಮೃತಪಟ್ಟಿತು.

ಒಂದು ಹಸು ಕಳೆದುಕೊಂಡಿದ್ದರಿಂದ ಇನ್ನೂ ಹೆಚ್ಚಿನ ನಿಗಾ ವಹಿಸಿ ಮಿಕ್ಕ ಹಸುಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅಲ್ಲಿಗೆ ಎರಡು ತಿಂಗಳೊಳಗಾಗಿ ಇನ್ನೊಂದು ಹಸುವಿಗೂ ಸಹ ಇದೇ ರೀತಿಯಾಯಿತು. ಮೊದಲ ಹಸುವಿಗಿನ್ನ ಎರಡನೆ ಹಸುವಿನ ಸ್ಥಿತಿ ಹಿಂಸಾಮಯವಾಗಿತ್ತು. ಮೊದಲ ಹಸು ಬಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಇದು ಬಿದ್ದಿತ್ತು. ಭೂಮಿಯ ಮೇಲ್ಮೈಯ ಗುಡ್ಡ ತಗ್ಗುಗಳಿಗೆ ನಾಣ್ಯಪ್ಪ ಏನೂ ಮಾಡುವಂತಿರಲಿಲ್ಲ. ಭೂಮಿಯ ಲಕ್ಷಣವೇ ಹಾಗಿತ್ತು. ಒಂದೇ ಎತ್ತರದಿಂದ ಬಿದ್ದಿದ್ದರೂ ಈ ಹಸುವಿಗೆ ಏಟಿನ ತೀವ್ರತೆ ಹೆಚ್ಚಾಗಿತ್ತು. ಏಕೆಂದರೆ ಈ ಹಸು ತುಂಬು ಗರ್ಭವಿತ್ತು. ಹಸು ನೋವಿನಿಂದ ಒದ್ದಾಡಿದರೆ ಗರ್ಭದೊಳಗಿನ ಕರು ಸಹ ಒದ್ದಾಡುವುದು ಹೊರಗಿನಿಂದಲೇ ಕಾಣುತ್ತಿತ್ತು. ಇದೂ ನಾಲ್ಕೈದು ದಿನದಲ್ಲಿ ಪ್ರಾಣ ಬಿಟ್ಟಿತು. ಪ್ರಾಣ ಹೋಗುವಾಗ ಹಸು ಒದ್ದಾಡಿದ ರೀತಿ ಮತ್ತು ಒಳಗೆ ಕರು ಒದ್ದಾಡುತ್ತಿದ್ದ ರೀತಿಗೆ ಕೊಟ್ಟಿಗೆಯಲ್ಲಿದ್ದ ನಾವೆಲ್ಲ ಸಾವೆಂಬ ನಿಗೂಢದೆದುರು, ಸಾವೆಂಬ ಭಯದೆದುರು, ಸಾವೆಂಬ ಭೂಮದೆದುರು, ಸಾವೆಂಬ ನಿಶ್ಚಿತದೆದುರು ಹುಳು ಹುಪ್ಪಟೆಗಳಂತೆ ಉಸಿರಾಡಲೂ ಬೆದರಿ ಕಲ್ಲಾಗಿ ಕೂತು ಬಿಟ್ಟಿದ್ದೆವು. ನನಗೆ ವೈದ್ಯ ವೃತ್ತಿಯೆಂಬುದು ಕೇವಲ ತಮಾಷೆಯಾಗಿ, ಅಸಂಬದ್ಧವಾಗಿ, ಜಗಜಟ್ಟಿಯೆದುರಿನ ನರಪೇತಲನಂತೆ ಕಾಣತೊಡಗಿತು. ಬದುಕೆಂಬುದು ಆಕಸ್ಮಿಕಗಳ ಮೇಲಿನ ಮಹಲೇ? ನಿಷ್ಪಾಪಿ ಹಸುಗಳ ಸಾವಿಗೆ ಕಾರಣವೇ ಇರಲಿಲ್ಲ! ಒಂದಲ್ಲ ಎರಡು ಸಾವುಗಳು!

ಇದಾಗಿ ಒಂದಷ್ಟು ತಿಂಗಳು ಕಳೆದವು. ಕಾಲನೆಂಬ ವೈದ್ಯ ಎಲ್ಲವನ್ನೂ ಮರೆಸಿ, ನೋವು ದುಃಖಗಳ ತೀವ್ರತೆಯನ್ನು ಉಜ್ಜಿ ಮೊಂಡು ಮಾಡುತ್ತಾನೆ. ಹೀಗಿದ್ದಾಗ ದೇವಸ್ಥಾನದ ಆನೆಯೊಂದಕ್ಕೆ ಹುಷಾರು ತಪ್ಪಿದೆಯೆಂದು ದೇವಸ್ಥಾನದ ಕಚೇರಿಯಿಂದ ಫೋನು ಬಂದಿತು. ಆಗ ರಾತ್ರಿ ಏಳರ ಸಮಯವಿರಬಹುದು. ನಾಣ್ಯಪ್ಪನಿಗೆ ಫೋನು ಮಾಡಿ ವಿಚಾರಿಸಲಾಗಿ ಆನೆಗೆ ಭೇದಿ ಎಂದೂ, ಮೇವು ತಿನ್ನುತ್ತಿಲ್ಲ ಎಂದೂ ತಿಳಿಯಿತು. ಭೇದಿಯು ರಕ್ತ ಮತ್ತು ಬಿಳಿ ಗೊಣ್ಣೆಯಿಂದ ಕೂಡಿದ ಆಮಶಂಕೆ ಭೇದಿಯೆಂದು ನಾಣ್ಯಪ್ಪ ತಿಳಿಸಿದರು.

ಪಶುವೈದ್ಯರಾದ ನಾವು ದನ, ಎಮ್ಮೆ, ಕುರಿ, ಮೇಕೆ, ಕುದುರೆ, ನಾಯಿ, ಕೋಳಿಗಳನ್ನು ವಿವರವಾಗಿ ಓದಿರುತ್ತೇವೆಯೇ ವಿನಹ ವನ್ಯಜೀವಿಗಳಾದ ಹುಲಿ, ಸಿಂಹ, ಚಿರತೆ, ಆನೆ ಮುಂತಾದವುಗಳನ್ನು ವಿವರವಾಗಿ ಓದಿರುವುದಿಲ್ಲ. ನಾನು 1976ರಿಂದ 1981 ರವರೆಗೆ ಬಿ.ವಿ.ಎಸ್‍ಸಿ ಓದಿದಾಗ ವನ್ಯಜೀವಿ (Wild life) ಎಂಬ ವಿಷಯ ಒಂದೇ ಒಂದು ಟ್ರೈಮಿಸ್ಟರ್ (ತ್ರೈಮಾಸಿಕ) ಸಿಲಬಸ್‍ನಲ್ಲಿ ಇತ್ತು. ಒಂದು ಟ್ರೈಮಿಸ್ಟರ್ ಎಂದರೆ ಹದಿನಾಲ್ಕು ವಾರಗಳ ಅವಧಿ. ವನ್ಯಜೀವಿ ವಿಷಯವು ವಾರಕ್ಕೆ ಎರಡು ಗಂಟೆಯಂತೆ ಇಪ್ಪತ್ತೆಂಟು ಗಂಟೆಯ ಗರಿಷ್ಠ ಉಪನ್ಯಾಸಗಳ ಸಾಧ್ಯತೆ ಇತ್ತು. ಇದರಲ್ಲಿ ಐದು ಪರೀಕ್ಷೆಗಳು (Announced Quiz, Un announced Quiz, Mid Term, Interim Exam, Final Exam) ಇದ್ದುದರಿಂದ ಇಪ್ಪತ್ಮೂರು ಗಂಟೆ ಉಪನ್ಯಾಸ ಮಾತ್ರ ಸಾಧ್ಯವಿತ್ತು. ಈ ಅವಧಿಯಲ್ಲಿ ವನ್ಯಜೀವಿಗಳಾದ ಹುಲಿ, ಚಿರತೆ, ಸಿಂಹ, ಒಂಟೆ, ಜಿರಾಫೆ, ಆನೆ, ಕೋತಿ, ಗೊರಿಲ್ಲಾ, ಚಿಂಪಾಂಜಿ, ಜಿಂಕೆ ಇತ್ಯಾದಿ ನೂರಾರು ಬಗೆಯ ಪ್ರಾಣಿಗಳ ಬಗ್ಗೆ ಏನು ಕಲಿಯಲು ಸಾಧ್ಯ? ಯಾವ ಉಪನ್ಯಾಸಕನಿಗೆ ಕಲಿಸಲು ಸಾಧ್ಯವಾಗುತ್ತದೆ? ಸೋಲುವುದು ಖಚಿತವಿರುವ ಆಟದಲ್ಲಿ ಪಾಲ್ಗೊಂಡಂತೆ ನೀರಸವಾಗಿ ಪಾಠ ಮಾಡುತ್ತಿದ್ದರು.

ಸಾಮಾನ್ಯವಾಗಿ ಮನುಷ್ಯರಲ್ಲೇ ಆಗಲಿ ಅಥವಾ ಪ್ರಾಣಿಗಳಲ್ಲೇ ಆಗಲಿ ಕಾಯಿಲೆಗಳ ಕಾರಣ, ಲಕ್ಷಣ, ಉಪಯೋಗಿಸಬೇಕಾದ ಔಷಧಗಳು, ಔಷಧದ ಪ್ರಮಾಣ, ಔಷಧದ ಅವಧಿ ಮುಂತಾದವುಗಳು ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಚಿಕಿತ್ಸೆ ನೀಡಬಹುದು ಎಂಬ ಭಂಡ ಧೈರ್ಯವೇನೋ ನನ್ನಲ್ಲಿತ್ತು. ಉದಾಹರಣೆಗೆ ಆನೆಗೆ ಆಮಶಂಕೆ ಭೇದಿ (Dysentry) ಆಗಿರುವುದರಿಂದ ಆಂಟಿಬಯೋಟಿಕ್ ಔಷಧ, ಕರುಳಿನ ಉತ್ಪ್ರೇಕ್ಷಿತ ಚಲನೆಯನ್ನು ನಿಯಂತ್ರಿಸುವ ಔಷಧ (Astrigents), ಪುನರ್ಜಲೀಕರಣ (Rehydration) ಕೊಡಬೇಕೆಂದು ಗೊತ್ತಿತ್ತು. ಆದರೆ ಚಿಕಿತ್ಸೆಗೆ ನನ್ನೆದುರಿರುವುದು ನಾಲ್ಕು ಸಾವಿರ ಕೆಜಿ ತೂಕದ ಭರ್ಜರಿ ಆನೆ ಮತ್ತು ನಾನು ಜನ್ಮದಲ್ಲಿಯೇ ಚಿಕಿತ್ಸೆ ನೀಡಲು ಹೊರಟಿರುವ ಮೊದಲನೆಯ ಆನೆ. ಆನೆಯ ಸ್ಪೀಸೀಸ್‍ಗೆ ವಿಶಿಷ್ಠವಾದ ಸೂಕ್ಷ್ಮ ವ್ಯತ್ಯಾಸಗಳೇನಾದರೂ ಇದ್ದು ಇಂಜೆಕ್ಷನ್ ಕೊಟ್ಟ ಕೂಡಲೆ ಆನೆಗೆ ಏನಾದರೂ ಹೆಚ್ಚು ಕಡಿಮೆಯಾದರೆ? ಮತ್ತೊಮ್ಮೆ ನಾನು ಇಕ್ಕಟ್ಟಿಗೆ ಸಿಗಿಹಾಕಿಕೊಂಡಿದ್ದೆ!

ನಾನು ಉಜಿರೆಯ ಮನೆಯಿಂದ ಧರ್ಮಸ್ಥಳ ಸೇರುವಷ್ಟರಲ್ಲಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯವರಾದ ಜಯಕೀರ್ತಿ ಜೈನ್ ಮತ್ತು ಯಾದವ್‍ರವರು ಎರಡೆರಡು ಬಾರಿ ಫೋನ್ ಮಾಡಿದರು. ಅವರಿಬ್ಬರೂ ಧರ್ಮಸ್ಥಳದಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಧರ್ಮಸ್ಥಳದಲ್ಲಿ ಇದುವರೆವಿಗೆ ಕೆಲಸ ನಿರ್ವಹಿಸಿದ ಎಲ್ಲ ಪಶುವೈದ್ಯರೂ ಸಹ ನನ್ನಂತೆ ಕೇವಲ ಪಶುವೈದ್ಯರಾಗಿದ್ದರೇ ವಿನಹ ವನ್ಯಜೀವಿ ಚಿಕಿತ್ಸೆಯಲ್ಲಿ ತರಬೇತಿ ಹೊಂದಿದವರಾಗಿರಲಿಲ್ಲ. ಆದುದರಿಂದ ಆನೆಗಳಿಗೆ ಆರೋಗ್ಯ ತಪ್ಪಿದರೆ ಆನೆಯ ಪರಿಣಿತರಾದ, ಕರ್ನಾಟಕದ ವಿವಿಧ ಸ್ಥಳಗಳಲ್ಲಿದ್ದ ಡಾ.ಚಿಟ್ಟಿಯಪ್ಪ, ಡಾ.ಕಲ್ಲಪ್ಪ ಮುಂತಾದವರಿಂದ ಚಿಕಿತ್ಸೆ ಮಾಡಿಸುತ್ತಿದ್ದರಂತೆ. ಒಮ್ಮೊಮ್ಮೆ ಆನೆ ಪರಿಣಿತರಿಗೆ ಧರ್ಮಸ್ಥಳಕ್ಕೆ ಬರಲಾಗದಿದ್ದರೆ ಫೋನಿನಲ್ಲಿ ಚರ್ಚಿಸಿ ಚಿಕಿತ್ಸೆ ನಡೆಯುತ್ತಿತ್ತು. ಈ ರೀತಿಯ ಚಿಕಿತ್ಸೆ ಎಂದೂ ಹುಸಿ ಹೋಗಿಲ್ಲವೆಂದು ಜಯಕೀರ್ತಿ ಜೈನ್ ತಿಳಿಸಿದರು.

ಕೂಡಲೇ ಫೋನ್ ಕರೆ ಮಾಡಿ ಸಂರ್ಪಕಕ್ಕೆ ಸಿಕ್ಕಿದ ಡಾ.ಕಲ್ಲಪ್ಪನವರೊಂದಿಗೆ ಚರ್ಚಿಸಿ, ಔಷಧಗಳ ಪಟ್ಟಿ ಸಿದ್ಧಪಡಿಸಿದೆವು. ಅರ್ಧ ಗಂಟೆಯಲ್ಲಿ ದೇವಸ್ಥಾನದ ಸಿಬ್ಬಂದಿವರ್ಗದವರು ಬೆಳ್ತಂಗಡಿಯ ಔಷಧಿ ಅಂಗಡಿಗಳಿಂದ ಎಲ್ಲ ಔಷಧಿಗಳನ್ನು ತಂದರು. ಚಿಕಿತ್ಸೆ ಶುರು ಮಾಡಿಕೊಂಡೆವು.

ಆನೆ ಲಾಯದಿಂದ ಕಾರು ಮ್ಯೂಸಿಯಂ ಕಡೆ ಬರುವಾಗ ರಸ್ತೆಯ ಪಕ್ಕ ಎಡಗಡೆ ಒಂದು ಎತ್ತರದ ಜಾಗವಿತ್ತು. ಆನೆಯನ್ನು ಕೆಳಗೆ ನಿಲ್ಲಿಸಿಕೊಂಡರು. ನಾವೆಲ್ಲ ಎತ್ತರದ ಜಾಗದಲ್ಲಿ ಸಜ್ಜಾಗಿ ನಿಂತೆವು. ಮಾವುತರು, ಕೆಲಸಗಾರರು ಅನೇಕ ಜನ ಇದ್ದರು. ಅವರೆಲ್ಲರಿಗೂ ಆನೆಗೆ ರಕ್ತನಾಳದ ಮುಖಾಂತರ ಇಂಜೆಕ್ಷನ್ ಕೊಡುವ ವಿಧಾನ ಗೊತ್ತಿದ್ದರಿಂದ ನಾವ್ಯಾರೂ ಹೆಚ್ಚು ಹೇಳಬೇಕಿರಲಿಲ್ಲ. ಒಂದಿಬ್ಬರು ಆನೆ ಕಿವಿ ಬಿಗಿ ಹಿಡಿದರು. ಒಬ್ಬರು ಆನೆ ಹತ್ತಿ ಕುಳಿತರು. ಕಿವಿಯಲ್ಲಿ ಹಲವು ರಕ್ತನಾಳಗಳಿದ್ದವು. ಎರಡು ರಕ್ತನಾಳಗಳಿಗೆ ಸೂಜಿ ಹಾಕಿ ಎರಡು ಬಾಟಲುಗಳನ್ನು ಒಮ್ಮೆಲೇ ನೇತು ಹಾಕಿದೆವು. ಸಾಕಾನೆಯಾಗಿದ್ದರಿಂದ ಗಲಾಟೆ ಇರಲಿಲ್ಲ. ಬಾಟಲುಗಳನ್ನು ಒಂದು ಸಣ್ಣ ಬಿದಿರಿಗೆ ಕಟ್ಟಿದ್ದೆವು. ಆ ಬಿದಿರನ್ನು ಆನೆ ಏರಿದ ಮನುಷ್ಯ ಹಿಡಿದುಕೊಂಡಿದ್ದ. ಮೆಟ್ರೋನೈಡಜೋಲ್ ಮತ್ತು ಡಿಎನ್‍ಎಸ್ ಬಾಟಲುಗಳನ್ನು ಎಣಿಸೆಣಿಸಿ ಏರಿಸಿದೆವು.

ನಾಯಿಗಳಿಗೆ ಹನಿಹನಿಯಾಗಿಯೂ, ಹಸು ಎಮ್ಮೆಗಳಿಗೆ ನಿಧಾನವಾಗಿಯೂ ಐವಿ ಸೆಟ್ ಗಳ (Intravenous Set) ಮೂಲಕ ಔಷಧ ಬಿಡುತ್ತಿದ್ದ. ನಾವು ಆನೆಗಳಿಗೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಔಷಧ ಬಿಡತೊಡಗಿದೆವು. ನನ್ನ ನೆನಪಿನ ಪ್ರಕಾರ ಎರಡೂ ಔಷಧ ಸೇರಿ ಎಪ್ಪತ್ತರಿಂದ ಎಂಭತ್ತು ಬಾಟಲುಗಳನ್ನು ಖಾಲಿ ಮಾಡಿದೆವು. ಚಿಕಿತ್ಸೆ ಮುಗಿದಾಗ ಮಧ್ಯರಾತ್ರಿಯಾಗಿತ್ತು. ನಾನು ಎಲ್ಲರಿಂದ ಬೀಳ್ಕೊಟ್ಟು ಮನೆ ಸೇರಿ ಮಲಗಿದಾಗ ಒಂದು ಗಂಟೆಯ ಮೇಲಾಗಿತ್ತು. ನಾನು ಧರ್ಮಸ್ಥಳದಲ್ಲಿದ್ದ ಮೂರು ವರ್ಷದಲ್ಲಿ ಅದೊಂದೇ ಸಲ ಆನೆಗೆ ಹುಷಾರು ತಪ್ಪಿದ್ದು.

ಇದೇ ಅವಧಿಯಲ್ಲಿ ಒಂದು ದಿನ ಧರ್ಮಸ್ಥಳದ ಮುಳಿಕ್ಕಾರು ಎಂಬಲ್ಲಿಗೆ ಮುತ್ತಪ್ಪ ಎಂಬುವವರ ಮನೆಗೆ ದನದ ಚಿಕಿತ್ಸೆಗೆ ಹೋಗುತ್ತಿದ್ದೆ. ಆನೆ ಲಾಯದ ಪಕ್ಕದಲ್ಲಿಯೇ ಹೋಗಬೇಕಿತ್ತು. ಆ ಮುತ್ತಪ್ಪ ಎಂಬ ಅಜ್ಜನಿಗೆ ಕನ್ನಡ ಬರುತ್ತಿರಲಿಲ್ಲ. ನನಗೆ ತುಳು ಬರುತ್ತಿರಲಿಲ್ಲ. ಮುತ್ತಪ್ಪನ ಕನ್ನಡಕ್ಕೆ ನಾನು ನಗುವುದು ಮತ್ತು ನನ್ನ ತುಳುವಿಗೆ ಮುತ್ತಪ್ಪ ನಗುವುದು ನಡೆಯುತ್ತಿತ್ತು. ಅರ್ಥವಾಗದೆ ಹಾಗೆ ನಗುತ್ತಿದ್ದೆವು. ಒಂದು ಪರಿಚಯದ ದುಭಾಷಿಗಾಗಿ ಹುಡುಕುತ್ತಿದ್ದಾಗ ಆನೆ ಲಾಯದ ಬಳಿ ಮಾವುತ ನಾಣ್ಯಪ್ಪ ಪೂಜಾರಿ ಕಂಡರು. ಅವರ ಹತ್ತಿರ ಭಾಷಾ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಹೋದೆವು. ಹಸುಗಳ ದುರ್ಮರಣದ ಹೊಡೆತದಿಂದ ನಾಣ್ಯಪ್ಪ ಸ್ವಲ್ಪ ಸುಧಾರಿಸಿಕೊಂಡಿದ್ದರು.

ನಾವು ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿರುವಾಗ ಸ್ವಲ್ಪ ದಿನದ ಹಿಂದೆ ಭೇದಿಗೆ ಚಿಕಿತ್ಸೆ ಪಡೆದು ಹುಷಾರಾದ ಆನೆ ಅಲ್ಲಿಯೇ ಗುಡ್ಡದಂತೆ ನಿಂತಿತ್ತು. ಆ ಗಾತ್ರದ ಪ್ರಾಣಿಗೆ ನಾನು ಮುಟ್ಟಿ ಇಂಜೆಕ್ಷನ್ ನೀಡಿದೆನೇ! ಅದು ಹುಷಾರಾಯಿತೇ! ಎಂದು ನನಗೇ ನಂಬಿಕೆ ಬಾರದೆ ಸೋಜಿಗಪಡುತ್ತಿರುವಾಗ ಆನೆಯ ಕಾಲಲ್ಲಿ ನಾಲ್ಕೈದು ಪುಟ್ಟ ಪುಟ್ಟ ನಾಯಿಮರಿಗಳು ಚಿನ್ನಾಟವಾಡುತ್ತಿದ್ದವು. ಆನೆ ಅಕಸ್ಮಾತ್ ಅವುಗಳ ಮೇಲೆ ಕಾಲಿಟ್ಟರೆ ಚಟ್ನಿಯಾಗುತ್ತಿದ್ದವು ಅಥವಾ ಬಾಲದಲ್ಲಿ ಒಂದು ಸಲ ಬೀಸಿದರೆ ಫರ್ಲಾಂಗು ದೂರ ಹೋಗಿ ಬೀಳುತ್ತಿದ್ದವು. ಅವುಗಳ ಪೆದ್ದುತನ ಕಂಡು ನನಗೆ ಭಯವಾಯಿತು.

“ಆನೆ ನಾಯಿಮರಿಗೆ ಏನೂ ಮಾಡುವುದಿಲ್ಲ ಸರ” ಎಂದು ನಾಣ್ಯಪ್ಪ ಹೇಳುತ್ತಿರುವಾಗಲೇ ‘ಕಂಯ್ಞ್ ಕಂಯ್ಞ್ ಕಂಯ್ಞ್’ ಎಂದು ಜೋರಾಗಿ ಶಬ್ದ ಮೊಳಗಿತು. ಅಲ್ಲೇ ಹತ್ತಿರದಲ್ಲಿದ್ದ ನಮಗೆ ತಿಳಿದದ್ದಿಷ್ಟು. ನಿಂತಿದ್ದ ಆನೆಯು ಗಟ್ಟಿ ಲದ್ದಿ ಉದುರಿಸಿದೆ. ಹಲವಾರು ಕೆಜಿ ತೂಕದ ಇಡೀ ಲದ್ದಿಯೊಂದು ಹತ್ತು ಹನ್ನೆರಡು ಅಡಿ ಎತ್ತರದಿಂದ ಅಲ್ಲೇ ಆಡುತ್ತಿದ್ದ ನಾಯಿಮರಿಯ ಮೇಲೆ ಗುರಿಯಿಟ್ಟಂತೆ ಬಿದ್ದಿದೆ! ಲದ್ದಿಯ ಅಡಿಯಲ್ಲಿ ಮುಚ್ಚಿ ಹೋಗಿದ್ದ ಮರಿಯನ್ನು ಈಚೆಗೆಳೆದು ನಾಣ್ಯಪ್ಪ ನನ್ನ ಬಳಿ ತಂದರು. ಅರಚುತ್ತಿದ್ದ ನಾಯಿಯನ್ನು ಒರೆಸಿ ನೋಡಲಾಗಿ ಅದರ ಹಿಂದಿನ ಎಡಗಾಲಿನ ತೊಡೆಮೂಳೆ (Femur) ತುಂಡಾಗಿತ್ತು! ಅದೃಷ್ಟಕ್ಕೆ ಚರ್ಮದ ಮೇಲೆ ಯಾವ ಗಾಯವೂ ಆಗಿರಲಿಲ್ಲ. ಅಲ್ಲಾಡಿಸಿದರೆ ಒಳಗೆ ಮುರಿದ ಮೂಳೆ ತುಂಡುಗಳು ಕಟಕಟ ಶಬ್ದ ಮಾಡುತ್ತಿದ್ದವು.

ಅಲ್ಲಿಯೇ ಸಿಕ್ಕ ಎರಡು ಚಿಕ್ಕ ಬಿದಿರಿನ ಗಟ್ಟಿ ತುಂಡುಗಳನ್ನು ಮುರಿದ ಕಾಲಿನ ಮೇಲಿಟ್ಟು ಅಲ್ಲಾಡದಂತೆ ಟ್ವೈನ್ ದಾರದಲ್ಲಿ ಸುತ್ತಿದೆ. ಬುಗುರಿಗೆ ಚಾಟಿ ಸುತ್ತುವಂತೆ ಒತ್ತಾಗಿ ಸುತ್ತಿದೆ. ದಾರದಿಂದ ಸುತ್ತಿದ ಕಾಲಿನ ಭಾಗ ಎಷ್ಟು ನೀಟಾಗಿತ್ತೆಂದರೆ ಬಿದಿರು ಕಡ್ಡಿಗಳಾಗಲಿ ಅಥವಾ ಸುತ್ತಿದ ದಾರವಾಗಲಿ ನಾಯಿಮರಿಯ ಓಡಾಟಕ್ಕೆ ಅಥವಾ ಕೀಲುಗಳ ಚಲನೆಗೆ ಸ್ವಲ್ಪವೂ ಅಡ್ಡಿ ಬರುತ್ತಿರಲಿಲ್ಲ. ನಮ್ಮಿಂದ ಬಿಡುಗಡೆ ಹೊಂದಿ ನಾಯಿಮರಿ ಕುಂಟುತ್ತ ಓಡಿತು. ಮರಿಗೆ ನಾನು ಇಂಜೆಕ್ಷನ್ ಸಹ ಮಾಡಲಿಲ್ಲ. ನೋವು ಶಮನದ ಮಾತ್ರೆ ಬರೆದು ನಾಣ್ಯಪ್ಪರಿಗೆ ಕೊಟ್ಟು ಉಪಯೋಗಿಸುವ ರೀತಿ ತಿಳಿಹೇಳಿದೆ. ಮುತ್ತಪ್ಪ ಅಜ್ಜನ ಕಡೆ ತಿರುಗಿದೆ. ಅಜ್ಜ ಅಲ್ಲಿಯೇ ದಟ್ಟ ಮತ್ತು ತಂಪು ನೆರಳಲ್ಲಿ ನೆಲದ ಮೇಲೆ ಮಲಗಿ ಗೊರಕೆ ಹೊಡೆಯುತ್ತಿದ್ದರು. ಬಿಸಿಲಿನ ಹೊಡೆತಕ್ಕೆ ಅಜ್ಜ ಹಣ್ಣಾಗಿದ್ದರೆಂದು ಕಾಣುತ್ತದೆ. ಎದ್ದೇಳಿಸಲು ಮನಸ್ಸು ಬಾರದಂತ ಸುಖ ನಿದ್ರೆ! ಆದರೆ ಬೇರೆ ಮಾರ್ಗವಿರಲಿಲ್ಲ. ಅಜ್ಜನನ್ನು ಕೂರಿಸಿಕೊಂಡು ಬೈಕ್ ಓಡಿಸಿದೆ. “ತೂಕಡಿಸಿ ಬಿದ್ದುಬಿಟ್ಟೀಯ!” ಎಂದು ನಾಣ್ಯಪ್ಪ ಮುತ್ತಪ್ಪನನ್ನು ತುಳುವಿನಲ್ಲಿ ಎಚ್ಚರಿಸಿದರು.

ನಾನು ಧರ್ಮಸ್ಥಳದಿಂದ ವರ್ಗವಾಗಿ ಬರುವವರೆಗೂ ನಾಯಿಯು ಆನೆ ಲಾಯದ ಬಳಿ ಅಡ್ಡಾಡಿಕೊಂಡಿತ್ತು.

‍ಲೇಖಕರು nalike

August 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. ashfaq peerzade

  ಪಶುವೈದ್ಯರ ಅನುಭವದ ಸುಂದರ ಹೃದ್ಯ ಅಭಿವ್ಯಕ್ತಿ. ಮಿರ್ಜಾ ಬಷೀರ್ ಅವರ ಮೊಬೈಲ್ ಸಂಖ್ಯೆ ತಿಳಿಸಿ.

  ಪ್ರತಿಕ್ರಿಯೆ
 2. Apurva

  ಮಿರ್ಜಾ ಬಷೀರ್ ರವರ ಕಥೆಗಳಲ್ಲಿ ನಾನು ವನ್ಯಪ್ರಾಣಿ ಗಳ ಬಗ್ಗೆ ಬರೆದದ್ದು ನೋಡಿಲ್ಲ. ಆನೆಯ ಔಷಧೋಪಚಾರದ ಬಗ್ಗೆ ಈ ಲೇಖನದಲ್ಲಿ ಅವರದೇ ಸೂಕ್ಷ್ಮ ನೆಲೆಯಲ್ಲಿ ವಿವರಿಸಿದ್ದಾರೆ..!ಆನೆ ಲದ್ದಿಗೆ ನಾಯಿ ಮರಿಯ ಮೂಳೆ ಮುರಿದದ್ದು,ಹಸುಗಳು ಬಿದ್ದು ಮೂಳೆ ಮುರಿದುಕೊಂಡು ನರಳಿ ಸತ್ತದ್ದು ನಮ್ಮಿಂದ ತಪ್ಪಿಸಲಾರದ ಅವಗಢಗಳ ಬಗ್ಗೆ ನೆನೆಯುತ್ತಾ ಒಂದು ತರಹದ ವಿಷಾದ ಅವರಿಸುತ್ತೆ.ಅವರ ನೆನಪುಗಳು ನಮ್ಮಲ್ಲೂ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಅರಿಯುವಂತೆ ಮಾಡಲಿ..

  ಪ್ರತಿಕ್ರಿಯೆ
 3. Sudhakara Battia

  Ailments and playfulness are integral part of flowing life. Beautiful narrative story

  ಪ್ರತಿಕ್ರಿಯೆ
 4. H Mohammed Honnur Dr

  Adbhuta
  Marvelous
  No words to describe and comment Dr h Mohammed Honnur Jyoti dental clinic opposit police station wilsongarden Bangalore

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: