ಮಿನ್ನಲ್ ಮುರಳಿ : ಸೂಪರ್ ಮ್ಯಾನ್ ನ ದೇಶಿಯ ಅವತಾರ..

ಗೊರೂರು ಶಿವೇಶ್

ಕಾಲದ ಓಟದಲ್ಲಿ ಮುಂದಿದ್ದವರು ಅವಕಾಶಗಳನ್ನು ಬಾಚಿಕೊಳ್ಳುತ್ತಾರೆ ಎಂಬ ಮಾತಿದೆ. ಈ ಮಾತು ಕೇರಳಿಗರಿಗೆ ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮಿನ್ನಾಲ್ ಮುರಳಿ (ಮಿಂಚಿನ ಮುರಳಿ) ಬಂದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಹಿಂದಿ ಚಿತ್ರರಂಗ ಮೊದಲಿಂದಲೂ ಜನಪ್ರಿಯ ಹಾಗೂ ಮನರಂಜನೆಯ ಚಿತ್ರಗಳಿಗೆ ಹೆಚ್ಚು ಗಮನ ನೀಡುತ್ತ ಬಂದಿದ್ದರೆ ಪ್ರಾದೇಶಿಕ ಭಾಷೆಯಲ್ಲಿ ಬಂಗಾಳಿ ಮಲಯಾಳಿ ಮತ್ತು ಕನ್ನಡ ಚಿತ್ರಗಳು ಉತ್ತಮ ಕಥೆಯ ಸುಂದರ ನಿರೂಪಣೆ ಹೊಸ ಅಲೆ ಹಾಗೂ ಸದಭಿರುಚಿ ಚಿತ್ರಗಳಿಂದಾಗಿ ಭಾರತೀಯ ಚಿತ್ರೋದ್ಯಮದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿ ಚಿತ್ರರಸಿಕರನ್ನು ತಮ್ಮೆಡೆಗೆ ಬೆಳದದ್ದು ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ನಿಂತಿದೆ.

ಆದರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಇಡೀ ಭಾರತೀಯ ಚಿತ್ರೋದ್ಯಮ ತತ್ತರಿಸಿಹೋಗಿದ್ದಾಗ ಅವಕಾಶದ ಸೆಲೆಗಳನ್ನು ಹುಡುಕಿದ್ದು ಈ ಕೇರಳಿಗರು.ಮನೆಮಂದಿಯಲ್ಲಾ ಮನೆಯಲ್ಲಿ ಕುಳಿತು ಮನರಂಜನೆಗಾಗಿ ಪರಿತಪಿಸುತ್ತಿದ್ದಾಗ ಚಲನಚಿತ್ರ ಹಾಗೂ ಟಿವಿ ಧಾರಾವಾಹಿಗಳ ಚಿತ್ರೀಕರಣ ಸ್ಥಗಿತಗೊಂಡು ಸ್ವಲ್ಪಕಾಲ ಬೇರೆ ಭಾಷೆಗಳ ಯಶಸ್ವಿ ಚಿತ್ರಗಳು ಹಾಗೂ ಧಾರವಾಹಿಗಳು ಡಬ್ಬಿಂಗ್ ಆಗಿ ಮನರಂಜನೆಯನ್ನು ನೀಡಲು ಯತ್ನಿಸಿದರೂ ಅದು ಸಾಲಾದಾಗಿ ಟಿವಿ ಹಾಕಿದರೆ ನ್ಯೂಸ್ ಚಾನಲ್ ಗಳಲ್ಲಿ ಅದೇ ಹಳೆಯ ಕೋವಿಡ್ ನ ಬೆದರಿಕೆಯ ಗುಂಡುಗಳು ಮತ್ತು ಮನರಂಜನಾ ಚಾನೆಲ್ ಗಳಲ್ಲಿ ಅದೇ ಹಳೆಯ ಸರಕುಗಳನ್ನು ನೋಡಿ ಬೇಸತ್ತಿದ್ದು ಮತ್ತೆ ಇನ್ನೇನು ಎಂದು ಅನ್ವೇಷಣೆ ನಡೆಸುತ್ತಿದ್ದಾಗ ಒದಗಿಬಂದದ್ದು ಈ ಮಲಯಾಳಂ ಚಿತ್ರಗಳು.

ಐಟಿಬಿಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅನ್ನು ಪರಿಚಯಿಸಿ ಮನೆಯಲ್ಲಿಯೇ ಕೆಲಸ ಮಾಡಲು ಅನುಮತಿಸಿ ಕಂಪ್ಯೂಟರ್ಗಳಿಗೆ ಕಂಪನಿಯ ವತಿಯಿಂದಲೇ ಇಂಟರ್ನೆಟ್, ಡಾಟಾ ಸೇವೆಯನ್ನು ಒದಗಿಸಿದ ನಂತರ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಕಾಲಿರಿಸಿ ಅಷ್ಟಾಗಿ ಸದಸ್ಯತ್ವವನ್ನು ಕಾಣದ ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್, ಜಿಯೋ, ಸೋನಿಲೈವ್ ಮುಂತಾದ ಒಟಿಟಿ (ಓವರ್ ದ ಟಾಪ್) ಡಿಜಿಟಲ್ ಪ್ಲಾಟ್ಫಾರ್ಮ್ ಗಳು ನಿಧಾನವಾಗಿ ಕಾಲೂರಲು ಆರಂಭಿಸಿದವು.

ಆರಂಭದಲ್ಲಿ ಬರೀ ಇಂಗ್ಲಿಷ್ ಮತ್ತು ಇಲ್ಲಿನ ಹೆಚ್ಚು ಜನರು ಮಾತನಾಡುವ ಭಾಷೆಗಳಾದ ಹಿಂದಿ,ತಮಿಳು ತೆಲುಗು ಚಿತ್ರಗಳ ಕಡೆ ಕೇಂದ್ರೀಕರಿಸಿದ ಈ ಪ್ಲಾಟ್ಫಾರಂ ಗಳು ನಂತರ ವಿಶ್ವದೆಲ್ಲೆಡೆ ಅದರಲ್ಲೂ ಗಲ್ಫ್ ಕಂಟ್ರಿ ಗಳಲ್ಲಿ ಹರಡಿಹೋಗಿರುವ ಕೇರಳಿಗರ ಸೆಳೆಯಲು ಮಲಯಾಳಂ ಚಿತ್ರಗಳನ್ನು ಇಂಗ್ಲಿಷ್ ಸಬ್ ಟೈಟಲ್ ನೊಂದಿಗೆ ಪ್ರಸಾರ ಮಾಡಲು ಪ್ರಾರಂಭಿಸಿದಾಗ ಕೇರಳಿಯರ ಜೊತೆ ವಿಧಿಯಿಲ್ಲದೆ ಅಥವಾ ಕುತೂಹಲಕ್ಕೆಂದು ಇಣುಕಿದ ಇತರೆ ಭಾಷೆಗಳ ಜನರಿಗೂ ಆ ಸಿನಿಮಾಗಳಿಗೆ ಆಸಕ್ತಿ ಕುದುರಿಸಲು ಆರಂಭವಾಯಿತು. ತ

ಮ್ಮ ಅನುಭವಗಳನ್ನು ಅನೇಕ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾರದ ನಂತರ ದಿಡೀರ್ ಎಂದು ನೋಡುಗರ ಸಂಖ್ಯೆ ಹೆಚ್ಚಿತು.ಇದರಿಂದಾಗಿ ಉಳಿದ ಎಲ್ಲಾ ಒಟಿಟಿ ಪ್ಲಾಟ್ಫಾರಂ ಗಳ ಜೊತೆಗೆ ಮಲಯಾಳಿ ಚಿತ್ರರಂಗದವರು ತಮ್ಮದೇ ಒಟಿಟಿ ಪ್ಲಾಟ್ಫಾರಂ ಗಳನ್ನು ಆರಂಭಿಸಿದರು. ಉಳಿದ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಬಂಡವಾಳದ ಕಥಾ ಪ್ರಧಾನವಾದ ಮಲಯಾಳಂನ ಬಿಡುಗಡೆಯಾಗಿರುವ ಮತ್ತು ಬಿಡುಗಡೆಯಾಗಲಿರುವ ಸಿನಿಮಾಗಳನ್ನು ಮುಗಿಬಿದ್ದು ಒಳ್ಳೆ ಬೆಲೆಯನ್ನು ನೀಡಿ ಕೊಳ್ಳಲಾರಂಭಿಸಿದವು. ಇದರಿಂದಾಗಿ ಅನೇಕ ಮಲಯಾಳಂ ಚಿತ್ರಗಳು ಥಿಯೇಟರ್ನಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿ ಪ್ಲಾಟ್ಫಾರಂ ನಲ್ಲಿ ಬಿಡುಗಡೆಯಾದವು.

ಈ ಮಲಯಾಳಿ ಸಿನಿಮಾಗಳು ನಮ್ಮ ವಾತಾವರಣದಲ್ಲಿ ಸುತ್ತಮುತ್ತಲ ಮನೆಗಳಲ್ಲಿ ನಡೆದಿರಬಹುದಾದ ಘಟನೆಗಳನ್ನಾಧರಿಸಿದ ಕಥೆಗಳನ್ನು ಹೊಂದಿರುವುದು ಅವುಗಳ ಯಶಸ್ಸಿನ ಮೂಲ ಎನ್ನಲಾಗುತ್ತಿದೆ. ಅದಕ್ಕೆ ಉದಾಹರಣೆಯಾಗಿ ಕಳೆದ ವರ್ಷ ಬಿಡುಗಡೆಯಾದ ನಾಯಟ್ಟು, ದ ಗ್ರೇಟ್ ಇಂಡಿಯನ್ ಕಿಚನ್, ಆರ್ಕರಿಯಂ, ತೊಂಡಿಮುತಲುಂ ದ್ರಿಕ್ಷಕ್ಷಿಯುಂ ಪ್ರಕಾಶ್ ಉಂಟೆ ಪ್ರತಿಕಾರಂ ,ಅಯ್ಯಪ್ಪನ್ ಕೋಷಿಯಂ. ಹೋಂ ..ಮುಂತಾದ ಚಿತ್ರಗಳನ್ನು ಹೆಸರಿಸಬಹುದು.

ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಕನ್ನಡಚಿತ್ರಗಳು ಪ್ಯಾನ್ ಇಂಡಿಯಾ ಆಗುವ ಮಟ್ಟಿನಲ್ಲಿ ಪ್ರಯತ್ನ ನಡೆಸಿದ್ದರೆ ಅದನ್ನು ಮೀರಿ ಈ ಮಲಯಾಳಿ ಚಿತ್ರಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದಕ್ಕೆ ಉದಾಹರಣೆಯಾಗಿ ಕಳೆದ ಹದಿನೈದು ದಿನಗಳ ಹಿಂದೆ ಬಿಡುಗಡೆಯಾಗಿ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿ ಭಾರತ-ಯುಎಇ ಮುಂತಾದ ಕಡೆ ವೀಕ್ಷಣೆಯಲ್ಲಿ ಮೊದಲ ಸ್ಥಾನದ ಜೊತೆಗೆ netfix ಪ್ರಸಾರವಾಗುವ ನೂರಕ್ಕೂ ಹೆಚ್ಚು ರಾಷ್ಟ್ರಗಳ, ಜಾಗತಿಕ ಮಟ್ಟದಲ್ಲಿ ಟಾಪ್ ಐದರೊಳಗೆ ಸೇರಿ ಹತ್ತು ದಿನಕ್ಕೆ ಕೋಟಿ ವೀಕ್ಷಕರನ್ನು ಸೆಳೆದದ್ದು ಮಿನ್ನಲ್ ಮುರಳಿಯ ಹೆಗ್ಗಳಿಕೆ.

ಸುಮಾರು 90 ವರ್ಷಗಳ ಹಿಂದೆ ಸೂಪರ್ಮ್ಯಾನ್ ಕಲ್ಪನೆಯ ಕಾದಂಬರಿ ಹೊರಬಂದು ಕೆಲ ವರ್ಷಗಳ ನಂತರ ಅದು ಸಿನಿಮಾವಾಗಿ ರೂಪುಗೊಂಡು ದೊಡ್ಡ ಯಶಸ್ಸನ್ನು ಗಳಿಸಿ ಅದರ ಇತರ ರೂಪಗಳಾದ ಸ್ಪೈಡರ್ಮ್ಯಾನ್, ಬ್ಯಾಟ್ಮ್ಯಾನ್, ಮುಂತಾಗಿ ವೀಕ್ಷಕರು ಅದರಲ್ಲೂ ಮುಖ್ಯವಾಗಿ ಮಕ್ಕಳ ಗಮನ ಸೆಳೆದದ್ದು ಈಗ ಇತಿಹಾಸ.

ಭಾರತದಲ್ಲಿ ಕಠಾರಿವೀರ, ವೀರಕೇಸರಿ ಇಂದ ಹಿಡಿದು ಇತ್ತೀಚಿಗಿನ ಬಾಹುಬಲಿ ವರೆಗೆ ಚಾಣಕ್ಷ ಶೂರರ ಕಥೆಗಳನ್ನು ಹೊಂದಿದ್ದರೂ, ಸೂಪರ್ ಮ್ಯಾನ್ ಗಳ ಶೈಲಿಯ ಸಿನಿಮಾಗಳು ಕಡಿಮೆಯೆಂದೇ ಹೇಳಬಹುದು. ಕಥೆಯಾಧಾರಿತ ಸಿನಿಮಾಗಳನ್ನೇ ಗೆಲ್ಲಿಸಿಕೊಂಡು ಬಂದಿರುವ ಭಾರತೀಯರಿಗೆ ವೈಜ್ಞಾನಿಕ ಹಿನ್ನೆಲೆಯ ಅತಿಮಾನುಷ ಸಿನಿಮಾಗಳು ಅಷ್ಟಾಗಿ ರುಚಿಸದು. ಅದಕ್ಕೆ ಪೂರಕವಾಗಿ ಮಿನ್ನಲ್ ಮುರಳಿ ರೆಟ್ರೋ ಶೈಲಿಯ ಗ್ರಾಮೀಣ ಹಿನ್ನಲೆಯ ದೇಸಿ ನಾಯಕರನ್ನು ಹೊಂದಿದೆ.

ಚಿತ್ರದ ಕಾಲ 30 ವರ್ಷಗಳ ಹಿಂದಿನದು. ಕುರುಕ್ಕನ್ಮೂಲ ಗ್ರಾಮದ ಹೆಚ್ಚು ಓದದ ಯುವ ಟೈಲರ್ ಜೈಸನ್, ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೃತ್ತಿಜೀವನವನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾನೆ. ಅದೇ ಊರಿನ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಸಾಜನ್ ಮಗಳು ಬಿನ್ಸಿಯೊಂದಿಗೆ ಆತನಿಗೆ ಹೈಸ್ಕೂಲಿನಿಂದಲೂ ಪ್ರೇಮ‌.

ರೋಡ್ ರೋಮಿಯೋ ಜೈಸನ್ ಮತ್ತು ಬಿನ್ಸಿಯ ಪ್ರೇಮಕ್ಕೆ ವಿರೋಧಿಸುವ ಸಾಜನ್ ಆಕೆ ಈಗಾಗಲೇ ಅನೀಶ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಎಂದು ತಿಳಿಸುವುದರ ಜೊತೆಗೆ ಮಗಳ ಸಹವಾಸಕ್ಕೆ ಬರದಂತೆ ಎಚ್ಚರಿಸಿ ಆತನನ್ನು ಸಾರ್ವಜನಿಕವಾಗಿ ಅಪಮಾನ ಮಾಡಿ ಅಲ್ಲಿಂದ ಅಟ್ಟುತ್ತಾನೆ. ಅನೀಶ್ ನ ಮಾಜಿ ಗೆಳತಿ ‘ಬ್ರೂಸ್ ಲೀ’ ಬಿಜಿ ಕೂಡ ಅನೀಶ್ ತನ್ನೊಂದಿಗೆ ಪ್ರೇಮ ಸಂಬಂಧ ಮುರಿದದ್ದಕ್ಕೆ ಕೋಪಗೊಂಡಿದ್ದಾಳೆ.

ಇದೇ ವೇಳೆ ಟೀ ಅಂಗಡಿಯೊಂದರಲ್ಲಿಸಪ್ಲೇಯರ್ ಕಮ್ ಕ್ಲೀನರ್ ಕೆಲಸ ಮಾಡುವ ಶಿಬು ಅರೆಹುಚ್ಚ ನೆಂಬ ಪಟ್ಟ ಪಡೆದು ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದಾನೆ. ಜೈಸನ್ ತಂದೆಯ ಟೈಲರ್ ಶಾಪ್‌ನಲ್ಲಿ ಕೆಲಸ ಮಾಡುವ ದಾಸನ ಸಹೋದರಿಬಾಲ್ಯದಲ್ಲಿ ತನ್ನನ್ನು ಕರುಣೆಯಿಂದ ಕಾಣುತ್ತಿದ್ದ ಉಷಾಳನ್ನು ಶಿಬು ಗುಪ್ತವಾಗಿ ಆರಾಧಿಸುತ್ತಿದ್ದು 28 ವರ್ಷ ಕಳೆದರೂ ಅದೇ ಭಾವ ಮುಂದುವರೆದಿದೆ. ಆದರೆ ಆಕೆ ಡ್ರೈವರ್ ಸತೀಶ ನೊಂದಿಗೆ ಓಡಿಹೋಗಿ ಅನೇಕ ವರ್ಷಗಳ ಕಳೆದ ನಂತರ ಸತೀಶ ನಿಂದ ವಂಚಿತಳಾಗಿ ಊರಿಗೆ ಹಿಂದಿರುಗಿದ್ದಾಳೆ‌. ಉಷಾಳಿಗೆ ಒಬ್ಬ ಮಗಳಿದ್ದಾಳೆ. ಮಗಳಿಗೆ ತುರ್ತು ವೈದ್ಯಕೀಯ ಶಸ್ತ್ರಚಿಕಿತ್ಸೆಯ ಅಗತ್ಯವಿದೆ .ಆದರೆ ಆಪರೇಷನ್‌ಗೆ ಪಾವತಿಸಲು ಉಷಾ ಬಳಿ ಹಣವಿಲ್ಲ.

ಆ ದಿನ, ಕ್ರಿಸ್‌ಮಸ್ ಮುನ್ನಾದಿನದಂದು ಜೈಸನ್ ಮತ್ತು ಶಿಬು ಇಬ್ಬರೂ ಒಂದೇ ಮಿಂಚಿನ ಹೊಡೆತಕ್ಕೆ ಒಳಗಾಗುತ್ತಾರೆ. ಬಹಳ ಅಪರೂಪಕ್ಕೆ ಸಂಭವಿಸುವ ಮಂಗಳ ಶನಿ ಮತ್ತು ಗುರು ಗ್ರಹಗಳ ತ್ರಿಕೋನ ಗ್ರಹ ವಿನ್ಯಾಸದಿಂದಾದ ಆ ಮಿಂಚಿನ ಪರಿಣಾಮ ಇಬ್ಬರ ಮೇಲೂ ಆಗುತ್ತದೆ. ಶಿಬು ತಾನ್ನಿದ್ದ ದೋಣಿಯಲ್ಲೇ ಮೂರ್ಛೆ ತಪ್ಪುತಾನೆ. ಇತ್ತ ಜೈಸನ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ .ಆದರೆ ಆಶ್ಚರ್ಯಕರವಾಗಿ, ಇಬ್ಬರಿಗೂ ಆ ಕ್ಷಣದಲ್ಲಿ ಯಾವುದೇ ದೈಹಿಕ ಸಮಸ್ಯೆ ಇಲ್ಲ.

ಮುಂದಿನ ದಿನಗಳಲ್ಲಿ, ಜೈಸನ್ ಮತ್ತು ಶಿಬು ಇಬ್ಬರಿಗೂ ಅತೀಂದ್ರಿಯ ಶಕ್ತಿಯ ಲಕ್ಷಣಗಳನ್ನು ಹೊಂದಿರುವುದು ಅನುಭವಕ್ಕೆ ಬರುತ್ತದೆ. ಜೈಸನ್ ಅಗಾಧವಾದ ದೈಹಿಕ ಶಕ್ತಿಯನ್ನು ಪಡೆದರೆ ಶಿಬುವಿಗೆ ದೈಹಿಕ ಶಕ್ತಿಯ ಜೊತೆಗೆ ವಸ್ತುಗಳು ಗುರುತ್ವಾಕರ್ಷಣ ಶಕ್ತಿಯನ್ನು ತಪ್ಪಿಸಿಕೊಂಡು ಅವನಿಚ್ಛೆಯಂತೆ ತಿರುಗುವ ಶಕ್ತಿಯನ್ನು ಪಡೆದಿರುವುದು ಅನುಭವಕ್ಕೆ ಬರುತ್ತದೆ. ಈ ರೀತಿಯ ಸೂಪರ್ ಪವರ್ ಅನ್ನು ಪಡೆದ ಇಬ್ಬರು ಪರಸ್ಪರ ಎದುರಾಳಿಗಳಾಗುವ ಅನಿವಾರ್ಯತೆಗೆ ಸಿಲುಕಿ ಒಬ್ಬರಮೇಲೊಬ್ಬರು ಮೇಲುಗೈ ಸಾಗಿಸಲು ನಡೆಸುವ ಹೋರಾಟ ಅಂತಿಮವಾಗಿ ಯಾರಿಗೆ ವಿಜಯ ಎಂಬುದನ್ನು ತೆರೆಯ ಮೇಲೇ ನೋಡಬೇಕು.

ಮಲಯಾಳಂ ಚಿತ್ರಗಳಿಗೆ ದುಬಾರಿ ಎನ್ನಬಹುದಾದ ಸುಮಾರು 15 ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ ಸುಮಾರು 35 ಕೋಟಿಗೆ ನೆಟ್ ಫ್ಲಿಕ್ಸ್ ಗೆ ಮಾರಾಟವಾಗಿದೆ ಎಂಬ ಸುದ್ದಿ ಇದೆ. ಚಿತ್ರಕ್ಕೆ ನೀಡಿದ ಪ್ರಚಾರದಿಂದಾಗಿ ಈ ಚಿತ್ರ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಇಂಗ್ಲಿಷ್ನ ಸೂಪರ್ಮ್ಯಾನ್ ಸಿನಿಮಾಗಳಂತೆ ಚಿತ್ರದಲ್ಲಿ ವಿಜ್ಞಾನವನ್ನು ಹೆಚ್ಚು ತುಂಬದೆ ಭಾವನೆಗಳ ಜೊತೆಗೆ ಹಾಸ್ಯವನ್ನು ಬೆಸೆದು ಉಣಪಡಿಸಲಾಗಿದೆ.

ದೇಶಿಯ ಶೈಲಿಯಲ್ಲಿ ತಲೆಗೆ ಸುತ್ತುವ ಮುಂಡಾಸು ಅಥವಾ ಟವಲನ್ನು ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಮುಚ್ಚಿ, ಇಡೀ ಕಥೆಯನ್ನು ಭಾರತೀಯ ಅದರಲ್ಲೂ ಸ್ಥಳೀಯ ಜಾಯಮಾನಕ್ಕೆ ಬಗ್ಗಿಸಿ ಅಷ್ಟೇನು ಜನಪ್ರಿಯರಲ್ಲದ ಟೋವಿನ ಥಾಮಸ್ ಮತ್ತು ತಮಿಳಿನ ಗುರು ಸುಂದರಂ ಅವರನ್ನು ನಾಯಕನನ್ನಾಗಿಸಿ ಅವರಿಂದ ಅತ್ಯುತ್ತಮ ಅಭಿನಯ ತೆಗೆಯುವುದರ ಜೊತೆಗೆ ಯು ಎ ಫ್ ಎಕ್ಸ್ ತಂತ್ರಜ್ಞಾನದ ಸಮರ್ಪಕ ಬಳಕೆಯಲ್ಲಿ ನಿರ್ದೇಶಕ ಬಾಸಿಲ್ ಜೋಸೆಫ್ ಶ್ರಮ ಎದ್ದು ಕಾಣುತ್ತದೆ. ಜೈ ಸನ್ಗೆ ವಿಜ್ಞಾನ,ಸೂಪರ್ ಮ್ಯಾನ್ ಗಳು ಪರಿಚಯ ಮಾಡಿಸುವ ಪಾತ್ರದಲ್ಲಿ ಬಾಲಕ ವಶಿಷ್ಠ ವಿಶ್ವಾಸ ಗಮನ ಸೆಳೆಯುವ ಅಭಿನಯ.

ಚಿತ್ರದ ಕ್ಲೈಮ್ಯಾಕ್ಸ್ ಹಾಸನ ಜಿಲ್ಲೆಯ ಶೆಟ್ಟಿ ಹಳ್ಳಿಯ ಹಳೆಯ ಚರ್ಚು ಮತ್ತು ಅದರ ಹಿನ್ನೆಲೆಯಲ್ಲಿ ಕಂಡುಬರುವ ಹೇಮಾವತಿ ನದಿಯ ದಡದಲ್ಲಿ ಮೂಡಿಬಂದಿರುವುದು ವಿಶೇಷ. ಚಿತ್ರದ ಕನ್ನಡ ಅವತರಣಿಕೆ ಲಭ್ಯವಿದ್ದು ಕನ್ನಡ ವೀಕ್ಷಕರು ಕೂಡ ನೆಟ್ ಫ್ಲಿಕ್ಸ್ ಅಲ್ಲಿ ನೋಡಿ ಆನಂದಿಸಬಹುದು.

‍ಲೇಖಕರು Admin

January 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: