ಮಿತ್ರಾ ವೆಂಕಟ್ರಾಜ್ ಸಾಹಿತ್ಯ ಸಾಧನೆಯ ಅವಲೋಕನ

ಪ್ರೊ. ಜಿ ಎನ್ ಉಪಾಧ್ಯ. ಮುಂಬೈ

**

ಲೇಖಕಿ ಸವಿತಾ ಶೆಟ್ಟಿ ಅವರ ಚೊಚ್ಚಲ ಕೃತಿ ‘ಬೆಳಕಿಂಡಿ’.  

ಈ ಕೃತಿಯನ್ನು ‘ಶ್ರೀರಾಮ ಪ್ರಕಾಶನ, ಮಂಡ್ಯ’ ಅವರು ಪ್ರಕಟಿಸಿದ್ದಾರೆ.

ಖ್ಯಾತ ಸಾಹಿತಿ ಪ್ರೊ ಜಿ ಎನ್ ಉಪಾಧ್ಯ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಮಿತ್ರಾ ವೆಂಕಟ್ರಾಜ್ ಅವರು ಕನ್ನಡದ ಹೆಸರಾಂತ ಕತೆಗಾರರಲ್ಲಿ ಒಬ್ಬರು. ಅವರು ನಮ್ಮ ನಾಡಿನ ಸಮಕಾಲೀನ ಮಹಿಳಾ ಸಾಹಿತ್ಯದ ಒಂದು ಗಟ್ಟಿಯಾದ ದನಿ. ದೂರದ ಮುಂಬೈಯಲ್ಲಿ ಕಳೆದ ಐದು ದಶಕಗಳಿಂದ ನೆಲೆಸಿರುವ ಅವರು ಕತೆಗಾರರಾಗಿ, ಕಾದಂಬರಿಕಾರರಾಗಿ ಅಂಕಣಕಾರರಾಗಿ, ಅನುವಾದಕರಾಗಿ ನಾನಾ ನೆಲೆಗಳಲ್ಲಿ ಕೃಷಿ ಮಾಡಿ ಹೆಸರು ಮಾಡಿದ್ದಾರೆ. ಕತೆ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ. ಕಥನ ಸಾಹಿತ್ಯದಲ್ಲಿ ಮಿತ್ರಾ ಅವರಿಗೆ ವಿಶೇಷವಾದ ಹಿಡಿತ, ಆಸ್ಥೆ, ಶ್ರದ್ಧೆಗಳಿರುವುದನ್ನು ನಾವು ಅವರ ಕತೆಗಳಿಂದ ಕಂಡುಕೊಳ್ಳಬಹುದಾಗಿದೆ. ಪ್ರಬುದ್ಧ ಜೀವನ ದೃಷ್ಟಿ, ಗಟ್ಟಿಯಾದ ಅನುಭವ, ಪ್ರಖರ ಸಾಮಾಜಿಕತೆ, ಸಂಬಂಧಗಳ ಶೋಧ ಮಿತ್ರಾ ಅವರ ಬರವಣಿಗೆಯಲ್ಲಿ ಎದ್ದು ಕಾಣುವ ಅಂಶ.  ಕಳೆದ ನಾಲ್ಕೂವರೆ ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ನಿರತರಾಗಿರುವ ಮಿತ್ರಾ ಅವರು ಬರೆದ ಕತೆಗಳ ಸಂಖ್ಯೆ ಐವತ್ತರಷ್ಟು. ಅವಸರ ಅವಸರವಾಗಿ ಕತೆ ಬರೆಯುವುದು ಅವರ ಜಾಯಮಾನವಲ್ಲ. ಬರವಣಿಗೆ ಒಂದು ಗಂಭೀರ ಕಾರ್ಯ, ಕಾಯಕ, ಅದಕ್ಕೆ ಧ್ಯಾನಸ್ಥ ಸ್ಥಿತಿ ಬೇಕು ಎನ್ನುತ್ತಾರೆ ಅವರು. ಮಿತ್ರಾ ಅವರು ಮಹತ್ವದ ಮೂರು ಸಣ್ಣ ಕತೆಗಳ ಸಂಕಲನಗಳನ್ನು ಮತ್ತು ಒಂದು ಕಾದಂಬರಿಯನ್ನು ಹೊರ ತಂದಿದ್ದಾರೆ. ಅಲ್ಲಿ ತಮ್ಮ ಸೂಕ್ಷ್ಮ ಕತೆಗಾರಿಕೆಯ ನೈಪುಣ್ಯವನ್ನು ಮೆರೆದಿದ್ದಾರೆ. ಅವರ ಕತೆಗಳು ನಮ್ಮ ಸಮಕಾಲೀನ ಬದುಕಿನ ನಾನಾ ಸ್ತರಗಳೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ಮಧ್ಯಮ, ಕೆಳಮಧ್ಯಮ ವರ್ಗದ ಜನರ ನೋವು ನಲಿವುಗಳನ್ನು ಸಶಕ್ತವಾಗಿ ಅನಾವರಣಗೊಳಿಸಿವೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಸವಿತಾ ಅರುಣ್ ಶೆಟ್ಟಿ ಅವರು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಣೆಗೊಳಪಡಿಸಿದ್ದಾರೆ. 

ಲೇಖಕಿ ಮಿತ್ರಾ ವೆಂಕಟ್ರಾಜ್

ಮಿತ್ರಾ ಅವರ ಸ್ವೋಪಜ್ಞತೆ, ಚಿಂತನೆಯ ಆಳ ವಿಶಿಷ್ಟವಾದುದು. ಮನುಷ್ಯನ ಒಳ ಹೊರಗಿನ ಸ್ವಭಾವಗಳನ್ನು, ಅವುಗಳ ವಿವಿಧ ಮುಖಗಳನ್ನು, ಮನುಷ್ಯ ಸಂಬಂಧಗಳನ್ನು ಮಿತ್ರಾ ಅವರು ತಮ್ಮ ಬರವಣಿಗೆಯಲ್ಲಿ ಅಭಿವ್ಯಕ್ತಿಗೊಳಿಸಿರುವ ಕ್ರಮ ಬಲು ವಿಶಿಷ್ಟ ಎನ್ನುತ್ತಲೆ ಕನ್ನಡ ಸಾಹಿತ್ಯದಲ್ಲಿ ಅವರದು ಭಿನ್ನ ದನಿ ಎಂಬುದನ್ನು ಇಲ್ಲಿ ಸವಿತಾ ಶೆಟ್ಟಿ ಅವರು ಚೆನ್ನಾಗಿ ವಿವೇಚಿಸಿದ್ದಾರಲ್ಲದೆ ಮಿತ್ರಾ ಅವರ ಸಾಹಿತ್ಯದ ಅನನ್ಯತೆಯನ್ನು ಲೋಕಮುಖಕ್ಕೆ ಪರಿಚಯಿಸಿದ್ದಾರೆ. ಹತ್ತು ಮುಖ್ಯ ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ ಮಿತ್ರಾ ವೆಂಕಟ್ರಾಜ್ ಅವರ ಬದುಕಿನ ಕತೆ, ಸಾಹಿತ್ಯ ಸಾಧನೆ, ಅವರ ಕತೆಗಳಲ್ಲಿ ಪಡಿಮೂಡಿದ ಗ್ರಾಮೀಣ ಬದುಕಿನ ಬಿಂಬ, ನಗರ ಕೇಂದ್ರಬಿಂದುವಾಗಿ ಅರಳಿದ ಕತೆ ಗಳು, ಮಿತ್ರಾ ಅವರ ಮಿನಿ ಕತೆಗಳ ಗುಚ್ಛದ ವಿಶೇಷತೆ, ಕನ್ನಡ ಕಥಾಲೋಕದಲ್ಲಿ ಅವರ ಕತೆಗಳ ಸ್ಥಾನಮಾನ, ಕನ್ನಡ ಕಾದಂಬರಿ ಲೋಕಕ್ಕೆ ಮಿತ್ರಾ ವೆಂಕಟ್ರಾಜ್  ಅವರ ಕೊಡುಗೆ ಹೀಗೆ ವಿಭಿನ್ನ ನೆಲೆಗಳಲ್ಲಿ ಮಿತ್ರಾ ಅವರ ಸಾಹಿತ್ಯ ಪರಿಚಾರಿಕೆಯ  ವಿಶ್ಲೇಷಣೆ ಈ ಕೃತಿಯ ಹೆಚ್ಚುಗಾರಿಕೆ.

ಮಿತ್ರಾ ಅವರ ಸಮಗ್ರ ಸಾಹಿತ್ಯ ಸಾಧನೆಯ ಸಾಂದ್ರ ಆಲೋಚನೆ ಇಲ್ಲಿ ದಾಖಲಾಗಿದೆ. ಕನ್ನಡ ಮಹಿಳಾ ಸಾಹಿತ್ಯಕ್ಕೆ, ಹೊಸಗನ್ನಡ  ಸಾರಸ್ವತಲೋಕಕ್ಕೆ ಮಿತ್ರಾ ಅವರ ಯೋಗದಾನ ಏನು ಎಂಬುದನ್ನು ಈ ಕೃತಿಯಲ್ಲಿ ಎತ್ತಿ ಹಿಡಿಯಲಾಗಿದೆ. ಅದು ಹೀಗಿದೆ, “ಮುಂಬಯಿ ಸಾಹಿತ್ಯ ವಲಯದಲ್ಲಿ ಉತ್ಕೃಷ್ಟ ಮಟ್ಟದ ಕತೆಗಳನ್ನು ರಚಿಸಿದ ಕತೆಗಾರರಲ್ಲಿ ಮಿತ್ರಾ ವೆಂಕಟ್ರಾಜ್ ಅವರ ಹೆಸರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಕನ್ನಡ ಸಾರಸ್ವತ ಲೋಕ ಅವರ ಕತೆಗಳನ್ನು ಸ್ವಾಗತಿಸಿ ಆದರಿಸಿದೆ. ಮೊದಲಿನಿಂದಲೂ ಮಿತ್ರಾ ಅವರೊಳಗೆ ಸಾಹಿತ್ಯ ಪ್ರೀತಿ ಅವಿತಿದ್ದರೂ ಅವರ ಪ್ರತಿಭೆಗೆ ಪ್ರೋತ್ಸಾಹ ದೊರೆತು ಅವರ ಕಥಾಕೌಶಲ ಪೂರ್ಣ ಪ್ರಮಾಣದಲ್ಲಿ ಅರಳಿ ಘಮಘಮಿಸಿದ್ದು ಮುಂಬೈ ನೆಲದಲ್ಲಿಯೇ ಎನ್ನಬಹುದು. ಮುಂಬೈಯಷ್ಟೇ ಅಲ್ಲದೆ ಕನ್ನಡ ಕಥಾಲೋಕದ ಗಟ್ಟಿಧ್ವನಿ ಅವರದು. ಏಕ ಕಾಲಕ್ಕೆ ಬುದ್ಧಿ ಸಂವಾದಿಯೂ, ಭಾವಸಂವಾದಿಯೂ ಆದ ಕಥಾ ಪ್ರಕಾರವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡವರು ಮಿತ್ರಾ ಅವರು. ಬಾಲ್ಯದಿಂದಲೂ ಕಂಡುಂಡ ಅನುಭವಗಳನ್ನು ಕತೆಯ ಚೌಕಟ್ಟಿನಲ್ಲಿ ಸಹೃದಯರ ಎದುರು ಉಣಬಡಿಸಿದ್ದಾರೆ. ಅವರ ಕತೆಗಳಲ್ಲಿ ಗಾಢ ಅನುಭವವಿದೆ. ವೈಚಾರಿಕ ನಿಲುವಿದೆ, ಸ್ತ್ರೀ ಸಂವೇದನೆಯ ಎಳೆ ಇದೆ. ಬದುಕನ್ನು ರೂಪಿಸುವ ಮೌಲ್ಯಗಳಿವೆ. ವಿಶಿಷ್ಟ ಭಾಷೆಯ ಬನಿ ಇದೆ. ಸಂವೇದನಶೀಲ ಸಂಕೀರ್ಣ ಕತೆಗಳತ್ತ ಹೆಚ್ಚು ಒಲವಿರುವ ಮಿತ್ರಾ ಅವರ ಹೆಚ್ಚಿನ ಕತೆಗಳು ಗ್ರಾಮೀಣ ಮಹಿಳೆಯರ ಒಳತೋಟಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಟ್ಟಿದೆ”. ಮಿತ್ರಾ ವೆಂಕಟ್ರಾಜ್ ಅವರು ಸಾಹಿತ್ಯಲೋಕದಲ್ಲಿ ಗಟ್ಟಿ ಹೆಜ್ಜೆಯೂರಿದ್ದಾರೆಂದರೆ ಅದು ಅವರ ಕತೆಗಳ ಸಂಖ್ಯಾಬಾಹುಳ್ಯದಿಂದಲ್ಲ, ಕತೆಗಳಲ್ಲಿ ಅವರು ತರುವ ಜೀವಂತಿಕೆಯ ಮೂಲಕ. ಮನಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿರುವ ಮಿತ್ರಾ ಅವರು ತಮ್ಮ ಕೆಲವು ಕತೆಗಳಲ್ಲಿ ತೆರೆದಿಡುವ ಮನೋಲೋಕವು ವಿಸ್ತೃತವಾದುದು ಎಂಬ ನಿರ್ಧಾರಕ್ಕೆ ಬರುತ್ತಲೇ ಮಿತ್ರಾ ಅವರ ಕಥನ ಕೌಶಲ, ಅಲ್ಲಿನ ಪ್ರಬುದ್ಧ ಜೀವನ ದೃಷ್ಟಿಯನ್ನು ತೆರೆದು ತೋರಿರುವುದು ಈ ಕೃತಿಯ ಹಿರಿಮೆ. ಹಿರಿಯ ಸಾಹಿತಿ ಮಿತ್ರಾ ಅವರೊಂದಿಗೆ ಇಲ್ಲಿ ನಡೆಸಿರುವ ಮಾತು ಕತೆ ಅನೇಕ ಹೊಸ ಹೊಸ ಒಳನೋಟ, ಅನುಭವ ಜನ್ಯ ವಿವೇಚನೆಗಳಿಂದ ಕೂಡಿದ್ದು ಬಹು ಮೌಲಿಕವೂ ಆಗಿದೆ.

‘ಬೆಳಕಿಂಡಿ’ ಕೃತಿಯ ಬಿಡುಗಡೆ ಸಮಾರಂಭದ ನೆನಪು

ಮುಂಬೈಯಲ್ಲಿ ಕಳೆದ ಐದು ದಶಕಗಳಲ್ಲಿ ಆಗುತ್ತಾ ಬಂದ ಬದಲಾವಣೆಯನ್ನು ನೋಡಿಕೊಂಡು ಬೆಳೆದವರು ಮಿತ್ರಾ ಅವರು. ಬರಹದ ಮೂಲಕ ಅದರ ಅರ್ಥವನ್ನು ಅರಸಿದವರು. ತಮ್ಮ ಹಾಗೆಯೇ, ಹಿಂದೆ, ಹಡಗುಗಳಲ್ಲಿ, ರೈಲುಗಳಲ್ಲಿ, ಬಲ್ಲಾಳ ಬಸ್ಸುಗಳಲ್ಲಿ ಮುಂಬೈಗೆ ಬಂದು ಎಲ್ಲೆಲ್ಲೋ ಕೆಲಸ ಮಾಡಿ ನೆಲೆ ನಿಂತ ಎರಡು ತಲೆಮಾರುಗಳನ್ನು ಕಂಡವರು. ನಾವು ಕೆಲವೊಮ್ಮೆ ನಗರ ಪ್ರಜ್ಞೆ ಅಥವಾ ಗ್ರಾಮೀಣ ಪ್ರಜ್ಞೆ ಎಂದು ಸರಳೀಕರಿಸಿಬಿಡುತ್ತೇವೆ. ಅವರ ಕತೆಗಳಲ್ಲಿ ಮುಂಬಯಿ ನಗರದ ಅಥವಾ ಕುಂದಾಪುರದ ವಸ್ತು, ಅನುಭವಗಳ ಮೂಲಕ ಮಾನವೀಯ ಶೋಧ ಇರುತ್ತದೆ. ಶೋಧ ಮಾಡುವ ಆ ಪ್ರಜ್ಞೆಯಲ್ಲಿ ಖಾನೆಗಳು ಇರುವುದಿಲ್ಲ, ಇದು ನಗರ ಪ್ರಜ್ಞೆ; ಇದು ಗ್ರಾಮೀಣ ಪ್ರಜ್ಞೆ ಅಂತ. ವಸ್ತುಗಳು ಗ್ರಾಮೀಣ ಅಥವಾ ನಗರದ್ದಾಗಿರಬಹುದು. ಪ್ರಜ್ಞೆ ಅನ್ನುವುದು ಇವನ್ನು ಮೀರಿದ ನೆಲೆ. ಅದು ಮುಕ್ತವಾಗಿಯೇ ಇರುತ್ತದೆ. ಆ ತರಹದ ಒಂದು ಮುಕ್ತ ಪ್ರಜ್ಞೆಯ ಲೇಖಕಿ ಮಿತ್ರಾ. ಅವರನ್ನು ಯಾವುದೇ ಪಡಿಯಚ್ಚುಗಳಲ್ಲಿ ಇಡಲಿಕ್ಕೆ ಆಗುವುದಿಲ್ಲ. ಒಂದು ಗುಲಾಬಿ ಗಿಡ ಎಲ್ಲಿ ನೆಟ್ಟರೂ, ಅದಕ್ಕೆ ನೀರು, ಮಣ್ಣು, ಗಾಳಿ, ಬೆಳಕು ಸಿಕ್ಕಿದರೆ ಬೇರು ಬಿಟ್ಟು ಹೂವು ಬಿಡುತ್ತದೆ. ಹಾಗೆ ಒಂದು ಪ್ರಜ್ಞಾವಂತಿಕೆ. ಬೆಳಕಿನತ್ತ ಸಾಗಬೇಕು ಅನ್ನುವ ತುಡಿತ ಇರುವ ಮನಸ್ಸು ಅದು. ಎಲ್ಲೇ ಇದ್ದರೂ ಕೂಡ ಅಲ್ಲಿರುವ ಮಾನವೀಯ ಜಗತ್ತುಗಳ ಒಂದು ಸಾರವನ್ನು ಹೀರಿಕೊಂಡು ಪ್ರಶ್ನೆಗಳನ್ನು ಕೇಳುತ್ತ ಹೋಗುತ್ತದೆ. ಮಿತ್ರಾ ಅವರ ಸುದೀರ್ಘ ಕಥನ ಪ್ರಯಾಣದ ಜೀವಾಳವೇ ಅದು.

ಕೌಟುಂಬಿಕ, ಸಾಮಾಜಿಕ ಸಂಬಂಧಗಳ ವಿನ್ಯಾಸವನ್ನು ದೂರ ನಿಂತು ವಿಶ್ಲೇಷಿಸದೆ ನೇರವಾಗಿ ಪಾಲ್ಗೊಳ್ಳುವ ಒಂದು ಆವರಣವನ್ನಾಗಿ ಮನಗಾಣಿಸುವ ಕಥನ ಮಿತ್ರಾ ವೆಂಕಟ್ರಾಜ್ ಅವರದು. ಇದು ತೀರಾ ಭಿನ್ನ ಪರಿ ಎಂಬುದಾಗಿ ಈ ಕೃತಿಯ ಮುಮ್ಮಾತಿನಲ್ಲಿ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ಹೇಳಿರುವ ಮಾತಿನಲ್ಲಿ ತಥ್ಯವಿದೆ. ಸವಿತಾ ವಿರಚಿತ ಬೆಳಕಿಂಡಿಯನ್ನು ಹೊಸಗನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿಯೇ ಓದಿಕೊಳ್ಳಬೇಕಾಗಿದೆ. ಸವಿತಾ ಅರುಣ್ ಶೆಟ್ಟಿ ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹೆಮ್ಮೆಯ ಪ್ರತಿಭಾವಂತ ವಿದ್ಯಾರ್ಥಿ. ವೈವಿಧ್ಯಮಯವಾದ ಓದು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸವಿತಾ ಅವರು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಕೊಡಮಾಡುವ ವ್ಯಾಸರಾಯ ಬಲ್ಲಾಳ ಸ್ಮಾರಕ ಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರ ಹಾಗೂ ಎಂ. ಬಿ. ಕುಕ್ಯಾನ್ ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ. ಇದೀಗ ಅವರ ಎಂ.ಎ ಶೋಧ ಸಂಪ್ರಬಂಧ ಕೃತಿ ರೂಪದಲ್ಲಿ ಶ್ರೀರಾಮ ಪ್ರಕಾಶನದ ಮೂಲಕ ಬೆಳಕು ಕಂಡಿರುವುದು ಸಂತೋಷದ ಸಂಗತಿ. ಈ ಚೊಚ್ಚಲ ಕೃತಿಗಾಗಿ ಸವಿತಾ ಶೆಟ್ಟಿ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು Admin MM

August 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: