ಮಾಶೀಲಾ: ಕೇಳಬಾರದ ಮತ್ತು ಹೇಳಲಾಗದ ಸತ್ಯಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‘ಹ್ಯಾಪೀ ಹೋಮ್-ಕಮಿಂಗ್ ಶೀಲಾ…’, ಆಯೋಜಕರ ತಂಡದ ಸದಸ್ಯನೊಬ್ಬ ಮಾ ಆನಂದ್ ಶೀಲಾರ ನಿಯೋಜಿತ ಭಾರತ ಪ್ರವಾಸದ ಬಗ್ಗೆ, ಟೆಲಿಫೋನ್ ಕರೆಯೊಂದರ ಮೂಲಕವಾಗಿ ಶೀಲಾರಿಗೆ ಖಚಿತ ಸುದ್ದಿಯನ್ನು ನೀಡುತ್ತಾ ಉದ್ಗರಿಸುವುದು ಹೀಗೆ.

ಈ ದೃಶ್ಯವು ನಮಗೆ ಕಾಣುವುದು ಎಪ್ರಿಲ್ ೨೨, ೨೦೨೧ ರಂದು ನೆಟ್ ಫ್ಲಿಕ್ಸ್ ವಾಹಿನಿಯಲ್ಲಿ ಬಿಡುಗಡೆಯಾದ ‘ಸರ್ಚಿಂಗ್ ಫಾರ್ ಶೀಲಾ’ ಡಾಕ್ಯುಮೆಂಟರಿಯಲ್ಲಿ. ಅಸಲಿಗೆ ‘ಸರ್ಚಿಂಗ್ ಫಾರ್ ಶೀಲಾ’ ಸಾಕ್ಷ್ಯಚಿತ್ರವು ಶುರುವಾಗುವುದೇ ಹೀಗೆ. ನಾನಂದು ದಿಲ್ಲಿಯ ಛತರ್ ಪುರ್ ಪ್ರದೇಶದ ಝೋರ್ಬಾ ಧ್ಯಾನಕೇಂದ್ರದಲ್ಲಿ ಶೀಲಾರ ಮಾತುಗಳನ್ನು ಕೇಳುತ್ತಿದ್ದಾಗ, ಅವರ ಪ್ರವಾಸದ ಬಗ್ಗೆ ನನಗೆ ಯಾವ ಸ್ಪಷ್ಟ ಮಾಹಿತಿಯೂ ಇರಲಿಲ್ಲ.

ಇನ್ನು ನೆಟ್-ಫ್ಲಿಕ್ಸ್ ಮತ್ತು ಧರ್ಮಾಟಿಕ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಹೆಸರುಗಳು ಅಲ್ಲಿ ಅಚಾನಕ್ಕಾಗಿ ಕೇಳಿಬಂದಿದ್ದು ನನಗೊಂದು ಫಾಲೋ-ಅಪ್ ಡಾಕ್ಯುಮೆಂಟೇಷನ್ನಿನ ಸಾಧ್ಯತೆಯಂತಷ್ಟೇ ಕಂಡಿತ್ತು. ಅಂತೂ ಶೀಲಾರ ಪಾಲಿಗೆ ಇದೊಂದು ಬಗೆಯ ಎಕ್ಸಕ್ಲೂಸಿವ್ ಇಂಡಿಯಾ ಟೂರ್ ಆಗಿತ್ತು ಎಂಬ ಅಂಶವು ತಿಳಿದುಬಂದಿದ್ದು ಸರ್ಚಿಂಗ್ ಫಾರ್ ಶೀಲಾ ಡಾಕ್ಯುಮೆಂಟರಿಯನ್ನು ವೀಕ್ಷಿಸಿದ ನಂತರವೇ.

ತಮ್ಮ ಅದ್ಭುತ ಸಂಗೀತ ಮತ್ತು ಭಾರತೀಯ ಗುರು ಮಹರ್ಷಿ ಮಹೇಶ ಯೋಗಿಯ ಜೊತೆಗಿನ ನಂಟಿನೊಂದಿಗೆ ವಿಶ್ವದಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ‘ಬೀಟಲ್ಸ್’ (ಮ್ಯೂಸಿಕ್ ಬ್ಯಾಂಡ್) ಕೂಡ ಈ ಹಿಂದೆ ದಿಲ್ಲಿಗೆ ಬಂದಿತ್ತು. ಈ ಅವಧಿಯಲ್ಲಿ ಬೀಟಲ್ಸ್ ತಂಡದ ಸದಸ್ಯರನ್ನು ಆಲ್ ಇಂಡಿಯಾ ರೇಡಿಯೋಗಾಗಿ ಸಂದರ್ಶಿಸಿದ್ದನ್ನು ಖ್ಯಾತ ನಟ ಕಬೀರ್ ಬೇಡಿ ತಮ್ಮ ಆತ್ಮಕಥೆಯಾದ ‘ಸ್ಟೋರೀಸ್ ಐ ಮಸ್ಟ್ ಟೆಲ್’ ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ.

೨೧ ರ ಪ್ರಾಯದ ಯುವಕನಾಗಿದ್ದ ಬೇಡಿ ಆಗ ಭಾರತೀಯ ಆಕಾಶವಾಣಿಯಲ್ಲಿ ಫ್ರೀಲಾನ್ಸ್ ರಿಪೋರ್ಟರ್ ಆಗಿದ್ದರು. ತಾವು ಡ್ರಗ್ಸ್, ಎಲ್.ಎಸ್.ಡಿ ಇತ್ಯಾದಿಗಳನ್ನು ಬಳಸಿದ್ದೀರಾ ಎಂದು ಜಾನ್ ಲೆನನ್ ಬಳಿ ಕೇಳಿದಾಗ ಅವರು ಸಣ್ಣಗೆ ಸಿಟ್ಟಾದ ಬಗೆಯನ್ನು ಕಬೀರ್ ಬೇಡಿ ಹರೆಯದ ಅಭಿಮಾನದ ಧಾಟಿಯಲ್ಲೇ ಬಹಳ ಸೊಗಸಾಗಿ ಬರೆದಿದ್ದಾರೆ.

೧೯೬೬ ರ ಜುಲೈ ತಿಂಗಳಲ್ಲಿ ದಿಲ್ಲಿಗೆ ಬಂದ ಬೀಟಲ್ಸ್ ತಂಡವು ಇದ್ದ ಮೂರು ದಿನಗಳಷ್ಟು ಕಾಲ ದಿಲ್ಲಿಯ ಸವಿಯನ್ನು ಚೆನ್ನಾಗಿಯೇ ಉಂಡಿತ್ತು. ಅದು ಬೀಟಲ್ಸ್ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕಾಲ. ಇನ್ನು ಬೀಟಲ್ಸ್ ತಂಡದ ದಿಲ್ಲಿ ಆಗಮನದ ಸುದ್ದಿಯು ಅವರ ಭಾರತೀಯ ಅಭಿಮಾನಿಗಳಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತಂತೆ. ಬೀಟಲ್ಸ್ ತಂಡದ ಸದಸ್ಯರಲ್ಲೊಬ್ಬನಾದ ಜಾರ್ಜ್ ಹ್ಯಾರಿಸನ್ ದಾಖಲಿಸಿರುವ ಪ್ರಕಾರ ಇವರ ಆಗಮನದ ಅಪರೂಪದ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು, ಸುಮಾರು ೬೦೦ ಮಂದಿ ಅಭಿಮಾನಿಗಳು ಆಗಲೇ ದಿಲ್ಲಿ ಏರ್ ಪೋರ್ಟಿನಲ್ಲಿ ಜಮಾಯಿಸಿದ್ದರು.

ದಿಲ್ಲಿಯಲ್ಲಿ ಎಲ್ಲಿ ನೋಡಿದರೂ ನಮಗೆ ಜನಜಂಗುಳಿಯೇ ಕಾಣುತ್ತಿತ್ತು ಎಂದು ಬರೆಯುವ ಹ್ಯಾರಿಸನ್ ಗೆ ಭಾರತದ ಅಗಾಧ ಜನಸಂಖ್ಯೆಯ ಬಗ್ಗೆ ಅಚ್ಚರಿಯಿದೆ. ಆಗ ಬೀಟಲ್ಸ್ ಮ್ಯೂಸಿಕ್ ಬ್ಯಾಂಡಿನ ಸದಸ್ಯರು ಉಳಿದುಕೊಂಡಿದ್ದು ನವದೆಹಲಿಯ ಒಬೆರಾಯ್ ಹೋಟೇಲಿನಲ್ಲಿ. ಬೀಟಲ್ಸ್ ತಂಡವು ಈ ಅವಧಿಯಲ್ಲಿ ದಿಲ್ಲಿಯ ಕನ್ನಾಟ್ ಪ್ಲೇಸ್ ನಲ್ಲಿದ್ದ ರಿಖಿ ರಾಮ್ ಮ್ಯೂಸಿಕ್ ಕಂಪೆನಿ ಎಂಬ ಖ್ಯಾತ ಮಳಿಗೆಯೊಂದರಿಂದ ಸಿತಾರ್ ಸೇರಿದಂತೆ ಕೆಲ ಭಾರತೀಯ ಸಂಗೀತ ವಾದ್ಯ-ಉಪಕರಣಗಳನ್ನು ಖರೀದಿಸಿತ್ತು. ಮುಂದೆ ವಿಶ್ವವಿಖ್ಯಾತ ಸಿತಾರ್ ವಾದಕರಾದ ಪಂಡಿತ್ ರವಿಶಂಕರರಿಂದ ಸಿತಾರ್ ನುಡಿಸುವುದನ್ನು ಕೂಡ ಹ್ಯಾರಿಸನ್ ಕಲಿಯುತ್ತಾರೆ.

ಅರವತ್ತರ ದಶಕದಲ್ಲಿ ಭಾರತೀಯ ಆಧ್ಯಾತ್ಮಲೋಕದ ಬಗ್ಗೆ ಅಮೆರಿಕಾ ಸೇರಿದಂತೆ ಪಶ್ಚಿಮದ ಹಲವು ದೇಶಗಳಲ್ಲಿ ಭಾರೀ ಕುತೂಹಲವಿತ್ತು. ಆಚಾರ್ಯ ರಜನೀಶ್ ಕೂಡ ಥಾಮಸ್ ವೂಲ್ಫ್ ವಿರಚಿತ ‘ದ ಎಲೆಕ್ಟ್ರಿಕ್ ಕೂಲ್-ಏಯ್ಡ್ ಆಸಿಡ್ ಟೆಸ್ಟ್’ ನಂತಹ ಕೃತಿಗಳನ್ನೋದಿ ಭಾರತದ ಆಧ್ಯಾತ್ಮದ ಬಗ್ಗೆ ಒಲವಿದ್ದ, ಮುಕ್ತ ಲೈಂಗಿಕತೆ-ಡ್ರಗ್ಸ್-ಹಿಪ್ಪಿ ಜೀವನಶೈಲಿ ಇತ್ಯಾದಿಗಳಿಗಾಗಿ ಹಾತೊರೆಯುತ್ತಿದ್ದ ಪಶ್ಚಿಮದ ಕುತೂಹಲಿಗಳ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತುಕೊಂಡಿದ್ದರು. ಸ್ವತಃ ಒಳ್ಳೆಯ ಓದುಗರಾಗಿದ್ದ ರಜನೀಶ್ ದಿನಕ್ಕೆ ನಾಲ್ಕೈದು ಪುಸ್ತಕಗಳನ್ನು ಓದಿ ಮುಗಿಸುತ್ತಿದ್ದವರು. ಈ ನಿಟ್ಟಿನಲ್ಲಿ ಅಮೆರಿಕನ್ ಪತ್ರಕರ್ತ ಮತ್ತು ಲೇಖಕರಾಗಿದ್ದ ಥಾಮಸ್ ಕೆನರ್ಲಿ ವೂಲ್ಫ್ ರವರ ‘ದ ಎಲೆಕ್ಟ್ರಿಕ್ ಕೂಲ್-ಏಯ್ಡ್ ಆಸಿಡ್ ಟೆಸ್ಟ್’ ಕೃತಿಯು ರಜನೀಶರಿಗೆ ಬಹಳ ಮೆಚ್ಚುಗೆಯಾಗಿತ್ತು.

ಇತ್ತ ಗತಕಾಲದ ಆ ಹಿಪ್ಪಿ ಚಳುವಳಿಯ ತೀವ್ರತೆ, ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದ ರಜನೀಶ್ ಅಲೆ… ಹೀಗೆ ಎಲ್ಲದರೊಂದಿಗೂ ಗಾಢವಾದ ನಂಟನ್ನು ಹೊಂದಿದ್ದ ಮಾ ಆನಂದ್ ಶೀಲಾ, ಮೂವತ್ತೈದು ವರ್ಷಗಳ ನಂತರ ಭಾರತಕ್ಕೆ ಬರುತ್ತಿರುವ ಘಟನೆಯು ಮೈಲುಗಲ್ಲಿನಂಥದ್ದು ಎಂಬುದನ್ನು ಆಯೋಜಕರು ಬಲವಾಗಿ ನಂಬಿದ್ದರು. ಅಲ್ಲದೆ ಈ ಭಾವವನ್ನು ಇತರರಲ್ಲಿ ತುಂಬುವ ಪ್ರಯತ್ನವನ್ನೂ ಕೂಡ ವ್ಯವಸ್ಥಿತವಾಗಿ ಮಾಡಲಾಗಿತ್ತು. ಆದರೆ ೨೦೧೮ ರಲ್ಲಿ ತೆರೆಗೆ ಬಂದ ನೆಟ್ ಫ್ಲಿಕ್ಸ್ ಡಾಕ್ಯುಮೆಂಟರಿ ‘ವೈಲ್ಡ್ ವೈಲ್ಡ್ ಕಂಟ್ರಿ’ ವೀಕ್ಷಕರಲ್ಲಿ ರೋಚಕತೆಯನ್ನು ಕೆರಳಿಸದೇ ಹೋಗಿದ್ದಲ್ಲಿ, ಶೀಲಾರ ಭಾರತ ಪ್ರವಾಸವು ಈ ಮಟ್ಟಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿತ್ತೇ ಎಂಬುದು ನಮಗೆ ನಾವೇ ಅಂದು ಕೇಳಿಕೊಳ್ಳುತ್ತಿದ್ದ ಪ್ರಶ್ನೆಯಾಗಿತ್ತು.

ಅಸಲಿಗೆ ‘ವೈಲ್ಡ್ ವೈಲ್ಡ್ ಕಂಟ್ರಿ’ ಮತ್ತು ‘ಸರ್ಚಿಂಗ್ ಫಾರ್ ಶೀಲಾ’ ಸಾಕ್ಷ್ಯಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸಂಗತಿಯಂತೂ ಸ್ಪಷ್ಟವಾಗಿ ಕಾಣತೊಡಗುತ್ತದೆ. ಅದೇನೆಂದರೆ ವಿವಾದಗಳಿಂದಲೇ ಮನೆಮಾತಾಗಿದ್ದ ಓಶೋರ ಜನಪ್ರಿಯತೆಯನ್ನು ಇಂದಿಗೂ ಕೆಲವರು ಎನ್-ಕ್ಯಾಶ್ ಮಾಡಿಕೊಳ್ಳುತ್ತಿರುವ ಬಗೆ ಮತ್ತು ಮೊದಲ ಡಾಕ್ಯುಮೆಂಟರಿಯು ಹುಟ್ಟುಹಾಕಿದ್ದ ಅಷ್ಟಿಷ್ಟು ರೋಚಕತೆಯನ್ನು ವಿನಾಕಾರಣ ಮತ್ತಷ್ಟು ಮುಂದುವರಿಸುವ ವ್ಯರ್ಥಪ್ರಯತ್ನ. ಅಷ್ಟಕ್ಕೂ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶೀಲಾ ಸ್ವತಃ ಭಾಗವಹಿಸಿದ್ದರು ಎಂಬ ಒಂದು ಅಂಶವನ್ನು ಬಿಟ್ಟರೆ, ಡಾಕ್ಯುಮೆಂಟರಿಯಲ್ಲಿ ಈಗಾಗಲೇ ಹೇಳಿರುವ ವಿಚಾರಗಳನ್ನು ಹೊರತುಪಡಿಸಿ ಬರ‍್ಯಾವ ಹೊಸ ಮಾಹಿತಿಗಳೂ ಅಲ್ಲಿ ಬಂದವರಿಗೆ ಸಿಕ್ಕಿರಲಿಲ್ಲ.

‘ಸರ್ಚಿಂಗ್ ಫಾರ್ ಶೀಲಾ’ ಸಾಕ್ಷ್ಯಚಿತ್ರದಲ್ಲಿ ತೋರಿಸಿರುವಂತೆ ತಮ್ಮ ಭಾರತ ಪ್ರವಾಸದ ಕಾರ್ಯಕ್ರಮಕ್ಕೆಂದು ದಿಲ್ಲಿಗೆ ಬಂದಿಳಿಯುವ ಶೀಲಾ, ತಮ್ಮ ಜನ್ಮಸ್ಥಳವಾದ ಗುಜರಾತ್ ಸೇರಿದಂತೆ ಭಾರತದ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಖ್ಯಾತನಾಮರ ಜೊತೆ, ಕೋಟ್ಯಾಧಿಪತಿಗಳ ಜೊತೆ, ತಮ್ಮ ಜೊತೆ ಸೆಲ್ಫಿಗಳನ್ನು ಪಡೆದುಕೊಳ್ಳಬಯಸುವ ಸೋಕಾಲ್ಡ್ ಶ್ರೀಮಂತ ಅಭಿಮಾನಿಗಳ ಜೊತೆ ವಿಲಾಸಿ ತಾಣಗಳಲ್ಲಿ ಪಾರ್ಟಿ ಮಾಡುತ್ತಾರೆ. ಈ ಮಧ್ಯೆ ಹೋದಲ್ಲೆಲ್ಲಾ ಶೀಲಾ ಈವರೆಗೆ ಹೇಳಿದ್ದನ್ನೇ ಬೋಲ್ಡ್ ಶೈಲಿಯಲ್ಲಿ ಮತ್ತೆ ಪುನರುಚ್ಚರಿಸುತ್ತಾರೆ. ತಾನು ಪೂರ್ವನಿರ್ಧಾರಿತ ಸ್ಕ್ರೀಪ್ಟ್ ಒಂದಕ್ಕೆ ನಿಷ್ಠಳಾಗಿದ್ದೇನೆ ಎಂಬಂತೆ! ಶೀಲಾರ ಒಟ್ಟಾರೆ ನಡೆಗಳು ಗೊಂದಲವನ್ನು ತರುವುದೇ ಇಲ್ಲಿ.

ಏಕೆಂದರೆ ‘ಒರೆಗಾನ್ ಹಗರಣದಲ್ಲಿ ನಿಜಕ್ಕೂ ಆಗಿದ್ದೇನು ಎಂಬುದನ್ನು ಹೇಳಲು ಕಾಲ ಕೂಡಿ ಬಂದಿದೆ. ಓಶೋರ ಇತಿಹಾಸವನ್ನು ನೀವು ತಿಳಿದುಕೊಂಡಾಯಿತು. ಇನ್ನಾದರೂ ಈ ಶೀಲಾಳ ಇತಿಹಾಸವನ್ನು ತಿಳಿದುಕೊಳ್ಳಿ’, ಎಂದು ಹೇಳುವ ಶೀಲಾ ಒಂದು ಕಡೆ. ಜೊತೆಗೇ, ‘ಮೂವತ್ತು ವರ್ಷಗಳಿಂದ ಕೇಳಿದ್ದನ್ನೇ ಕೇಳುತ್ತೀರಲ್ಲಾ. ನಾನು ಯಾವ ಅಪರಾಧವನ್ನೂ ಮಾಡಿಲ್ಲ. ಅಷ್ಟಕ್ಕೂ ಈ ಅಪರಾಧಗಳ ಬಗ್ಗೆ ನಿಮಗ್ಯಾಕೆ ಅಷ್ಟು ಕುತೂಹಲ? ನಿಮಗೂ ಇಂಥದ್ದೆಲ್ಲಾ ಮಾಡುವ ಯೋಜನೆಗಳಿವೆಯೋ ಹೇಗೆ?’, ಎಂದು ಉಡಾಫೆಯಿಂದ ಮಾತನಾಡುವ ಶೀಲಾ ಇನ್ನೊಂದು ಕಡೆ. ಒಟ್ಟಿನಲ್ಲಿ ಇಡೀ ‘ಸರ್ಚಿಂಗ್ ಫಾರ್ ಶೀಲಾ’ ಡಾಕ್ಯುಮೆಂಟರಿಯು ಕೇವಲ ಆಕೆಯ ಕ್ಷುಲ್ಲಕ ಪಿ.ಆರ್ ಚಟುವಟಿಕೆಯಂತಷ್ಟೇ ವೀಕ್ಷಕನಿಗೆ ಕಂಡರೆ ಅದರಲ್ಲಿ ಅಚ್ಚರಿಯೇನಿಲ್ಲ.

ಹಾಗೆ ನೋಡಿದರೆ ಮಾ ಆನಂದ್ ಶೀಲಾ ತನ್ನ ‘ಡೋಂಟ್ ಕಿಲ್ ಹಿಮ್’ ಕೃತಿಯಲ್ಲಿ ಬರೆದಿರುವುದು ಒರೆಗಾನ್ ವಿವಾದದ ಹಿನ್ನೆಲೆಯುಳ್ಳ ತನ್ನ ಇತಿಹಾಸವನ್ನೇ. ಆದರೆ ಆಚಾರ್ಯ ರಜನೀಶರ ಕಮ್ಯೂನಿನಲ್ಲಿ ನಡೆಯುತ್ತಿದ್ದ ಘೋರ ಅಕ್ರಮಗಳ ಮತ್ತು ಆ ದಿನಗಳಲ್ಲಿ ಅಧಿಕಾರ-ಐಷಾರಾಮಿ ಜೀವನಶೈಲಿ-ಖ್ಯಾತಿಗಳ ಬಗ್ಗೆ ಶೀಲಾರಿಗಿದ್ದ ಅಪಾರ ಮೋಹವನ್ನು ತಿಳಿಯಬೇಕಾದರೆ ಹ್ಯೂ ಮಿಲ್ನೆಯವರು ಬರೆದ ‘ಭಗವಾನ್: ದ ಗಾಡ್ ದಾಟ್ ಫೇಯಿಲ್ಡ್’ ಕೃತಿಯನ್ನು ಓದಬೇಕು (ಕಮ್ಯೂನ್ – ಆಚಾರ್ಯ ರಜನೀಶರ ಅನುಯಾಯಿಗಳ ಗುಂಪು). ಮಾ ಆನಂದ್ ಶೀಲಾ ಎಲ್ಲೂ ಹೇಳದುಳಿದ ಕತೆಗಳು ನಮಗೆ ತಕ್ಕಮಟ್ಟಿಗೆ ಮುಖಾಮುಖಿಯಾಗುವುದು ಇಲ್ಲಿ.

ಸ್ವತಃ ಮಿಲ್ನೆ ಆ ಅವಧಿಯಲ್ಲಿ ರಜನೀಶರ ಖಾಸಾ ಅಂಗರಕ್ಷಕನಾಗಿ ಸೇವೆ ಸಲ್ಲಿಸುತ್ತಲೇ, ನಂತರ ಕಮ್ಯೂನಿನಿಂದ ನಿರ್ದಯವಾಗಿ ಹೊರದಬ್ಬಲ್ಪಟ್ಟವರು. ಹೀಗೆ ರಜನೀಶರ ಕಮ್ಯೂನಿನಿಂದ ಬಹಿಷ್ಕೃತನಾಗಿ ಮಿಲ್ನೆಗೆ ಬಂದ ಪರಿಸ್ಥಿತಿಯು ಮುಂದೆ ಶೀಲಾರಿಗೂ ಬಂದೊದಗಿದ್ದು ಮಾತ್ರ ವಿಧಿಯಾಟ. ‘ಫೇಲಾದ ಭಗವಂತ’ ಎಂದು ಆಚಾರ್ಯ ರಜನೀಶರನ್ನು ಕರೆದಿರುವ ಮಿಲ್ನೆ, ರಜನೀಶರ ಬಗ್ಗೆ ತನಗಿರುವ ಅಪಾರ ಅಭಿಮಾನದ ಹೊರತಾಗಿಯೂ ಕಮ್ಯೂನಿನಲ್ಲಿ ತನಗಾದ ಭ್ರಮನಿರಸನಗಳನ್ನು ಪುಸ್ತಕದಲ್ಲಿ ನಿಸ್ಸಂಕೋಚವಾಗಿ ದಾಖಲಿಸುತ್ತಾರೆ.

ವಿಚಿತ್ರವೆಂದರೆ ದಿಲ್ಲಿಯಲ್ಲಿ ತನ್ನ ಕತೆಯನ್ನು ಹೇಳಲು ಹೊರಡುವ ಶೀಲಾ ಇಂಥಾ ಸೂಕ್ಷ್ಮಸಂಗತಿಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬದಲಾಗಿ ಆಧ್ಯಾತ್ಮ-ಕಮ್ಯೂನ್ ಹೆಸರಿನಲ್ಲಿ ಇತರರನ್ನು ಪ್ರಾಣಾಪಾಯಕ್ಕೆ ದೂಡುವಂತಹ ಅಪಾಯಕಾರಿ ದುಸ್ಸಾಹಸಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದ ಶೀಲಾ, ಇದಕ್ಕೆಲ್ಲಾ ದಿಟ್ಟತನದ ಲೇಬಲ್ ಹಚ್ಚಿ ಇಂದು ಮಿಲೇನಿಯಲ್ ಮಂದಿಯೆದುರು ಪ್ರಸ್ತುತಪಡಿಸುತ್ತಿರುವುದು ಮಾತ್ರ ವಿಪರ್ಯಾಸ. ‘ಶೀಲಾಳನ್ನು ಕ್ರಿಮಿನಲ್ ಎಂದರೂ ಸರಿಯೇ. ಆದರೆ ಸ್ಪಿರಿಚುವಲ್ ಅಥವಾ ಎನ್ಲೈಟನ್ಡ್ ಎಂದೆಲ್ಲಾ ಸುಮ್ಮನೆ ಕರೆಯಬೇಡಿ’, ಎಂದು ಒಂದು ಕಡೆ ಸ್ವತಃ ಅವರೇ ಹೇಳುತ್ತಾರೆ ಕೂಡ.

‘ನ್ಯಾಯಾಲಯದ ಆದೇಶದ ಪ್ರಕಾರ ನಾನು ನನ್ನ ಜೈಲುಶಿಕ್ಷೆಯ ಅವಧಿಯನ್ನು ಈಗಾಗಲೇ ಅನುಭವಿಸಿಯಾಗಿದೆ. ಇನ್ನು ಈ ವಿವಾದಗಳ ಬಗ್ಗೆ ಮಾತನಾಡಿ ಫಲವಿಲ್ಲ’, ಎನ್ನುವ ಶೀಲಾರ ಮಾತುಗಳಲ್ಲಿರುವುದು ಅರ್ಧಸತ್ಯ. ಹಾಗಿರುವುದೇ ಆದಲ್ಲಿ ಬಹುತೇಕರಿಗೆ ಮರೆತೇಹೋಗಿದ್ದ ಈ ವಿವಾದವನ್ನು ಮತ್ತೆ ನೆನಪಿಸಿಕೊಂಡು ಮುಖ್ಯವಾಹಿನಿಗೆ ತರುವ ಅವಶ್ಯಕತೆಯೇ ಶೀಲಾರಿಗೆ ಇರುತ್ತಿರಲಿಲ್ಲ. ಜೊತೆಗೇ ಇದು ಹೊತ್ತು ತಂದಿದ್ದ ಪಬ್ಲಿಸಿಟಿಯ ಬಿಸಿಯನ್ನು ಉಳಿಸಿಕೊಳ್ಳುವ ಅರ್ಥವಿಲ್ಲದ ಪ್ರಯತ್ನವೂ. ಸಾಲದ್ದೆಂಬಂತೆ ತಮ್ಮ ಬದುಕಿನ ರೋಚಕ ಕತೆಯು ಚಲನಚಿತ್ರವಾಗಬೇಕಿರುವ ತಮ್ಮಿಚ್ಛೆಯ ಬಗ್ಗೆ, ಶೀಲಾ ಆಗಾಗ ಸೂಕ್ಷ್ಮವಾಗಿ ಸುಳಿವನ್ನು ಕೊಡುವವರೂ ಕೂಡ ಹೌದು.

ಅಷ್ಟಕ್ಕೂ ಹತ್ಯೆ, ಷಡ್ಯಂತ್ರಗಳಂಥಾ ಹಲವು ಗಂಭೀರ ಆರೋಪಗಳಿಗೆ ಗುರಿಯಾಗಿ, ಕೆಲವನ್ನು ತಪ್ಪೊಪ್ಪಿಕೊಂಡು, ಮೂವತ್ತೊಂಭತ್ತು ತಿಂಗಳುಗಳ ಕಾಲ ಕಾರಾಗೃಹವಾಸವನ್ನೂ ಅನುಭವಿಸಿದ ಶೀಲಾರನ್ನು ಇಂದು ಸೆಲೆಬ್ರಿಟಿಯಂತೆ ಪ್ರಸ್ತುತಪಡಿಸುವ ಸದ್ಯದ ಮಾರ್ಕೆಟಿಂಗ್ ಟ್ರೆಂಡೇ ಅಪಾಯಕಾರಿ. ಹೀಗಾಗಿ ತನ್ನ ಭಾರತ ಪ್ರವಾಸದುದ್ದಕ್ಕೂ ಡಿಸೈನರ್ ದಿರಿಸುಗಳಲ್ಲಿ ಮಿಂಚುವ, ಪಂಚತಾರಾ ಹೋಟೇಲುಗಳಲ್ಲಿ ಶ್ರೀಮಂತರೊಂದಿಗೆ ಭೋಜನಕೂಟಗಳಲ್ಲಿ ಪಾಲ್ಗೊಳ್ಳುವ, ಸ್ಕೂಪ್ ಆಮಿಷವುಳ್ಳ ಸಂದರ್ಶನಗಳನ್ನು ಒಂದೆರಡು ಪನ್ ಗಳಿಗಷ್ಟೇ ಮುಗಿಸಿ ಕೈತೊಳೆದುಕೊಳ್ಳುವ ಶೀಲಾರ ನಡೆಗಳನ್ನೂ, ಅವರನ್ನು ವಿಪರೀತವೆಂಬಷ್ಟು ವೈಭವೀಕರಿಸುವ ಗುಂಪುಗಳನ್ನೂ ನೋಡಿದಾಗ ಗಾಬರಿಯಾಗುವುದು ಸಹಜ.

ದಿಲ್ಲಿಯ ಕಾರ್ಯಕ್ರಮದಲ್ಲಿ ಮಾ ಆನಂದ ಶೀಲಾ ಸಾಕಷ್ಟು ಹುಮ್ಮಸ್ಸಿನಲ್ಲೇ ಪಾಲ್ಗೊಂಡಿದ್ದರು. ಸಂವಾದದ ತರುವಾಯ ಸಭಿಕರ ಪ್ರಶ್ನೆಗಳ ಸಂಖ್ಯೆಯು ಹೆಚ್ಚಿದ್ದರಿಂದ, ಆಸಕ್ತರು ತಮ್ಮ ಪ್ರಶ್ನೆಗಳನ್ನು ಚೀಟಿಯೊಂದರಲ್ಲಿ ಬರೆದು, ಬುಟ್ಟಿಯೊಂದರಲ್ಲಿ ಹಾಕಿ, ನಂತರ ಅವುಗಳನ್ನು ಲಕ್ಕಿ ಡ್ರಾ ವಿಧಾನದಲ್ಲಿ ಆರಿಸಲಾಗಿತ್ತು. ಹಾಗೆ ನೋಡಿದರೆ ಘಾಟಿ ಪತ್ರಕರ್ತರ ಖಾರದ ಪ್ರಶ್ನೆಗಳನ್ನು ನಿಭಾಯಿಸುವುದರಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದ ಶೀಲಾರಿಗೆ ಇದೊಂದು ಸವಾಲೇ ಆಗಿರಲಿಲ್ಲ. ಇನ್ನು ಡಾಕ್ಯುಮೆಂಟರಿಯ ಹೊರತಾಗಿ ಕುಖ್ಯಾತ ಒರೆಗಾನ್ ವಿವಾದವನ್ನು ಬೇರೆ ದೃಷ್ಟಿಕೋನಗಳಲ್ಲಿ ನೋಡಲು ಪ್ರಯತ್ನಿಸಿದ್ದ ಯುವಜನರ ಸಂಖ್ಯೆಯೂ ಅಲ್ಲಿ ಸಾಕಷ್ಟು ಕಮ್ಮಿಯಿತ್ತು. ಹೀಗಾಗಿ ಶೀಲಾರ ಪಾಲಿಗೆ ಎಲ್ಲವೂ ಸುಸೂತ್ರ.

ಅಸಲಿಗೆ ತನ್ನ ಕಮ್ಯೂನ್ ಬಗ್ಗೆ ಆಚಾರ್ಯ ರಜನೀಶರಿಗೆ ನಿಜಕ್ಕೂ ಕಾಳಜಿಯಿತ್ತೇ ಎಂಬ ಪ್ರಶ್ನೆಯು ಇಂದಿಗೂ ಬಹುತೇಕರನ್ನು ಕಾಡುವಂಥದ್ದು. ಏಕೆಂದರೆ ಸಂಕಷ್ಟದ ಸಮಯವು ಬಂದಾಗಲೆಲ್ಲಾ ಆಚಾರ್ಯ ರಜನೀಶರಿಗೆ ಆದ್ಯತೆಯಾಗಿ ಕಂಡಿದ್ದು ಸ್ವಂತ ಹಿತಾಸಕ್ತಿಯೇ ಹೊರತು ಕಮ್ಯೂನ್ ಅಲ್ಲ. ಮೊದಲು ಶೀಲಾರ ನೆರವಿನೊಂದಿಗೆ ಪೂನಾ ಆಶ್ರಮದಿಂದ ಅಮೆರಿಕಾಗೆ ರಹಸ್ಯವಾಗಿ ಹಾರಿದ ರಜನೀಶರು, ಮುಂದೆ ಒರೆಗಾನ್ ವಿವಾದವು ಗಬ್ಬೆದ್ದುಹೋದಾಗ ತನ್ನ ಬೆರಳೆಣಿಕೆಯ ಕೆಲವು ಆಪ್ತರು ಮತ್ತು ದುಬಾರಿ ವಜ್ರಖಚಿತ ಕೈಗಡಿಯಾರಗಳೊಂದಿಗೆ ರಾತ್ರೋರಾತ್ರಿ ರಹಸ್ಯವಾಗಿ ಬರ್ಮುಡಾ ಪ್ರದೇಶಕ್ಕೆ ಸಾಗಿದ್ದರು. ಈ ಎರಡೂ ಪ್ರಕರಣಗಳಲ್ಲಿ ಅನಾಥರಾಗಿ ಉಳಿದುಹೋಗಿದ್ದು ಮಾತ್ರ ರಜನೀಶರ ಕಮ್ಯೂನ್ ಕನಸನ್ನು ನನಸಾಗಿಸಲು, ತಮ್ಮದಾದ ಎಲ್ಲವನ್ನೂ ತ್ಯಜಿಸಿ ವಿವಿಧ ದೇಶಗಳಿಂದ ಬಂದಿದ್ದ ಅವರ ಅನುಯಾಯಿಗಳು.

ಆಚಾರ್ಯರ ರಜನೀಶರ ಈ ಮಾದರಿಯು ಅವರ ಆಪ್ತವಲಯದ ವ್ಯಕ್ತಿಗಳನ್ನು ಅವರು ನಡೆಸಿಕೊಂಡ ರೀತಿಯಲ್ಲೂ ಕಾಣಬಹುದು. ಆರಂಭದಲ್ಲಿ ರಜನೀಶರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಮಾ ಯೋಗಲಕ್ಷ್ಮಿಯವರ ಪ್ರಾಮುಖ್ಯತೆಯು, ರಾಜಕೀಯ ಒಳಸುಳಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಮಾ ಆನಂದ್ ಶೀಲಾರ ಆಗಮನದೊಂದಿಗೆ ಅಂತ್ಯವಾಯಿತು. ಮುಂದೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ತನಗೆ ಧಾರೆಯೆರೆಯಬಲ್ಲ ಹಾಲಿವುಡ್ ಶಿಷ್ಯರ ಪಡೆಯು ಆಗಮಿಸಿದ ನಂತರ, ರಜನೀಶರಿಗೆ ಶೀಲಾ ಬೇಡವಾಗಿಬಿಟ್ಟರು. ಒಂದು ಕಾಲದಲ್ಲಿ ರಜನೀಶರ ಅಂಗರಕ್ಷಕನಾಗಿದ್ದ ಮಿಲ್ನೆ ಕೂಡ ಇಂಥದ್ದೊಂದು ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಿದ್ದು ಸತ್ಯ.

ಇನ್ನು ೧೯೮೫ ರಲ್ಲಿ ಶೀಲಾ ಒರೆಗಾನ್ ಕಮ್ಯೂನನ್ನು ಗಡಿಬಿಡಿಯಿಂದ ತ್ಯಜಿಸಿ ಪಲಾಯನಗೈದ ನಂತರವಂತೂ, ರಜನೀಶರು ಶೀಲಾರ ವಿರುದ್ಧ ಬಹಿರಂಗವಾಗಿಯೇ ಯುದ್ಧ ಸಾರಿದ್ದರು. ಉತ್ಪ್ರೆಕ್ಷೆಯ ಆರೋಪಗಳು, ಅಸಭ್ಯ ಹೆಸರುಗಳು, ಕಮ್ಯೂನ್ ಸಂಪರ್ಕಗಳಿಂದ ಬಹಿಷ್ಕಾರ, ಎಂಥವರನ್ನೂ ಕಂಗೆಡಿಸಬಲ್ಲ ಮಾನವಬೇಟೆ… ಹೀಗೆ ಆಗಬಾರದ್ದೆಲ್ಲವೂ ಆಗಿಹೋಯಿತು.

‘ಇಷ್ಟೆಲ್ಲಾ ಆದರೂ ನಿಮಗೆ ಓಶೋ ಬಗ್ಗೆ ಕೋಪವಿಲ್ಲವಲ್ವಾ? ನಿಮ್ಮ ಬಗ್ಗೆ ನನಗದೇ ಆಶ್ಚರ್ಯ ಮತ್ತು ಅಸಮಾಧಾನ’, ಎಂದು ಸಂದರ್ಶನವೊಂದರಲ್ಲಿ ಬರ್ಖಾ ದತ್ ಶೀಲಾರನ್ನು ಕೇಳುತ್ತಾರೆ. ‘ಸ್ಸಾರಿ, ಇದೊಂದು ವಿಷಯದಲ್ಲಿ ನಿಮ್ಮನ್ನು ಖುಷಿಪಡಿಸುವುದು ನನ್ನಿಂದ ಸಾಧ್ಯವಿಲ್ಲ’, ಎಂದು ಇದಕ್ಕೆ ನಗುತ್ತಾ ಉತ್ತರಿಸುತ್ತಾರೆ ಶೀಲಾ. ಅಂತೂ ಓಶೋ ಬಗೆಗಿನ ಅವರ ಪ್ರೇಮವು ಇಂದಿಗೂ ಸಮೃದ್ಧ.

ಸಂವಾದದ ಮುಕ್ತಾಯವು ಸಾಕಷ್ಟು ತಡವಾದರೂ ಬಂದವರೊದಿಗೆ ಆಟೋಗ್ರಾಫ್-ಸೆಲ್ಫೀಗಳೆಂದು ಮುಕ್ತವಾಗಿ ಬೆರೆಯುತ್ತಾ, ಅಂದು ತನ್ನ ಇಳಿವಯಸ್ಸನ್ನು ಮರೆತಂತಿದ್ದರು ಶೀಲಾ. ಈ ನೆಪದಲ್ಲೇ ಅವರ ‘ಡೋಂಟ್ ಕಿಲ್ ಹಿಮ್’ ಕೃತಿಯ ಸಾಕಷ್ಟು ಪ್ರತಿಗಳು ಕೂಡ ಆ ಸಂಜೆ ಬಿಕರಿಯಾಗಿದ್ದವು. ಉಳಿದಂತೆ ಬಂದ ಆಸಕ್ತರಿಗೆ ಸಿಕ್ಕಿದ್ದು ಶೀಲಾ ಹೇಳಿದ ಕೆಲ ಬೋಲ್ಡ್ ಶೈಲಿಯ ಜೋಕುಗಳು, ಓದಲು/ಕೇಳಲು ಸ್ವಾರಸ್ಯಕರ ಕೋಟ್ ಗಳಂತೆ ಭಾಸವಾಗುವ ಒಂದೆರಡು ಸಾಲಿನ ಹೇಳಿಕೆಗಳು ಮತ್ತು ಓಶೋ ಬಗೆಗಿನ ಅವರ ಮುಗಿಯದ ಆರಾಧನಾಭಾವ ಮಾತ್ರ.

ನನ್ನ ಮಟ್ಟಿಗೆ ದಿಲ್ಲಿಯ ‘ಝೋರ್ಬಾ ದ ಬುದ್ಧ’ ಧ್ಯಾನಕೇಂದ್ರವು ಮಾ ಆನಂದ್ ಶೀಲಾರಿಂದಾಗಿ ಸದಾಕಾಲ ನೆನಪಿನಲ್ಲುಳಿಯುವ ಒಂದು ತಾಣವಾಗಿಬಿಟ್ಟಿದೆ.

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: