
ಮಾಲಾ ಮ ಅಕ್ಕಿಶೆಟ್ಟಿ
ಈ ವರ್ಷದ ಓದನ್ನು ಬೇರೊಂದು ಪುಸ್ತಕದಿಂದ ಪ್ರಾರಂಭಿಸಿದ್ದೆ. ಹೀಗೆ ನಾಲ್ಕು ಪುಟ ಓದಿರಲಿಲ್ಲ “ನದಿಯೊಂದು ನಿದ್ರಿಸಿದಾಗ” ಮನೆಗೆ ಬಂದಿತ್ತು. ಮುದಿರಾಜ್ ಅವರು ಈ ಪುಸ್ತಕವನ್ನು fb ನಲ್ಲಿ ಪೋಸ್ಟ್ ಮಾಡಿದಾಗ ಮುಖಪುಟ ತುಂಬಾ ಆಕರ್ಷಿಸಿತ್ತು. ಪುಸ್ತಕ ಬಂದಿದ್ದೆ ತಡ, ಸಂಜೆ ಕಾಲೇಜಿನಿಂದ ಬಂದವಳೇ ಬರೀ ಎರಡು ಪುಟ ಓದಿದೆ… ಅಷ್ಟೇ. ರಾತ್ರಿ ಇನ್ನಷ್ಟು ಓದಿದೆ. ಮೊದಲು ಓದುತ್ತಿರುವ ಪುಸ್ತಕ ಅರ್ಧಕ್ಕೆ ಬಿಟ್ಟು ಈ ಪುಸ್ತಕ ತೆಗೆದುಕೊಂಡೆ.

ಮನುಷ್ಯ ಕೆಲವು ಸಲ ಏತಕ್ಕಾಗಿ ಬದುಕುತ್ತಿದ್ದಾನೆ? ಯಾರಿಗಾಗಿ ಬದುಕುತ್ತಿದ್ದಾನೆಂದು ಹೇಳುವುದು ಕಷ್ಟ. ದೇವರು ಕೊಟ್ಟ ಈ ಜೀವನವನ್ನು ಸಾಗಿಸಲು ಏನೋ ಒಂದು ಉದ್ದೇಶ ಬೇಕಿರುತ್ತೆ, ಅದರ ಬೆನ್ನು ಹತ್ತಿದಾಗ ಸಾರ್ಥಕ ಅನಿಸುತ್ತೆ. ಆ ಬೆನ್ನು ಹತ್ತುವಿಕೆ ಜೀವನೋತ್ಸಾಹವನ್ನು ತುಂಬುತ್ತದೆ. ಪ್ರತಿಯೊಬ್ಬ ತನ್ನ ನೇರ ಸಂಬಂಧಿಕರು ಮಾತ್ರ ತನ್ನ ಮೇಲೆ ಹಕ್ಕಿರುವವರು ಎಂದುಕೊಂಡಿರುತ್ತಾರೆ ಆದರೆ ದೂರದಲ್ಲೆಲ್ಲೋ ಇರುವವರು ತಮ್ಮ ಜೀವನದ ಹಕ್ಕುದಾರರಾಗಿರುವುದು ಮನವರಿಕೆಯಾಗುತ್ತದೆ. ತನಗ್ಯಾರು ಇಲ್ಲ ಎಂದುಕೊಂಡಾಗ ಹೆಸರಿಸಲಾಗದ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಅದು ನಿಸ್ವಾರ್ಥ ಸಂಬಂಧವೂ ಆದಾಗ ಜಗದ ಸೋಜಿಗವಾಗಿ ಕಾಣುತ್ತದೆ. ಇಂಥ ಒಂದು ಸಂದರ್ಭ ಕ್ಲಿಷ್ಟ ಎನಿಸಿದರೂ ಈ ಕಾದಂಬರಿ ಅದನ್ನು ಸಾಧಿಸುತ್ತದೆ.
ಕಾದಂಬರಿಯಲ್ಲಿ ಬರುವ ಕಾಡಿನ ಪ್ರಯಾಣ ಮತ್ತು ಸಾಹಸಗಳು “ಮೋಟರ್ ಸೈಕಲ್ ಡೈರೀಸ್” ಕೃತಿಯನ್ನು ಮತ್ತು ಹಳೆ ಸಿಲಬಸ್ ನಲ್ಲಿ PU 2 ವಿದ್ಯಾರ್ಥಿಗಳಿಗೆ ಇಂಗ್ಲಿಷ್ ನಲ್ಲಿಯ “Girl Against the Jungle” ಎಂಬ ಪಾಠವನ್ನು ತುಂಬಾ ನೆನಪಿಸಿತು. ಚೆ.ಗೆವಾರ ಪ್ರಯಾಣಿಸುತ್ತ, ಸಮಸ್ಯೆಗಳನ್ನು ಎದುರಿಸುತ್ತಾ, ಜನರ ನೋವುಗಳನ್ನು ಅರಿಯುತ್ತ, ಹೋಗುವ ಮತ್ತು ಆ ಪಾಠದಲ್ಲಿಯ ಹುಡುಗಿ ಕಾಡಿನಲ್ಲಿ ಸಂಕಷ್ಟಕ್ಕೆ ಸಿಕ್ಕು ಅವುಗಳನ್ನು ಎದುರಿಸಿ ಹೊರಬರುವ ಸನ್ನಿವೇಶಗಳನ್ನೂ ಈ ಕಾದಂಬರಿ ತುಂಬಾನೇ ಜ್ಞಾಪಿಸಿತು.
ಇಂಗ್ಲೀಷ ಸಾಹಿತ್ಯದ ಪ್ರಭಾವ ಈ ಕಾದಂಬರಿಯ ಮೇಲೆ ತುಂಬಾನೇ ಇದೆ ಅನ್ನಿಸ್ತು. ಕಥೆ, ಅದರ ನಿರೂಪಣೆ ತಂತ್ರ, ಓದುಗರನ್ನು ಹಿಡಿದಿಟ್ಟುಕೊಳ್ಳುವ ಸರ್ವ ಮಾಂತ್ರಿಕ ಶಕ್ತಿ ಈ ಕಾದಂಬರಿಗಿದೆ. ಓದುಗ ಅತಿ ವೇಗದಲ್ಲಿ ಇದನ್ನು ಓದಿ ಮುಗಿಸುತ್ತಾನೆ. ಫ್ಯಾಂಟಸಿ ಕಾದಂಬರಿಗಳನ್ನು ನಾನು ಅಷ್ಟಾಗಿ ಇಷ್ಟ ಪಡದಿದ್ದರೂ ಇದರಲ್ಲಿ ಬರುವ ಫ್ಯಾಂಟಸಿ ಬೇರೆ ತರಹದ್ದೆ ಇದೆ. ಓದುಗ ಏನೋ ಒಂದು ಆಗಬಹುದೆಂದು ಯೋಚಿಸುತ್ತಿರುವಾಗಲೇ ಅಲ್ಲಿ ಬೇರೊಂದು ಘಟಿಸಿ, ತಿರುಗು ಬಂದಿರುತ್ತದೆ.

ನಾಗಾಲ್ಯಾಂಡ ಜನರು, ಅವರ ಜೀವನ, ಸಂಸ್ಕೃತಿ, ನಂಬಿಕೆ, ಸಂಪ್ರದಾಯ ಇತ್ಯಾದಿಗಳ ಬಗ್ಗೆ ಜಿಜ್ಞಾಸೆಯನ್ನು ಹುಟ್ಟಿಸಿದ್ದೂ ಸುಳ್ಳಲ್ಲ.
ಓದಿ ಮುಗಿಸಿ ಈ ಅನಿಸಿಕೆ ಬರಿಯೋ ಹೊತ್ತಲ್ಲಿ, ಸಂಜೆ ಪಕ್ಕದ ಮನೆಯ ಕರಿಬೆಕ್ಕು ನನ್ನ ರೂಮ್ ಮುಂದೆ ಧುತ್ ಅಂತ ಬಂದು ನಿಂತಿತ್ತು. ಉಷ್ …ಉಷ್..ಅಂದರೂ ಕದಲಲಿಲ್ಲ.ಒಂದು ಕ್ಷಣ ದಿನವೂ ನೋಡುವ ಬೆಕ್ಕನ್ನೇ ನೋಡಿ ಹೆದರಿದೆ. ಅದು ಕಾದಂಬರಿಯ ಪ್ರಭಾವ. ಕೃತಿಯ ಮೂಲ ಸ್ವಾದ ಹಾಗೆ ಇರಲೆಂದು ಬಯಸುವ ನಾನು, ಹೆಚ್ಚಿಗೆ ಹೇಳಲಾರೆ. ಒಮ್ಮೆ ಓದಿ ನೋಡಿ.
0 ಪ್ರತಿಕ್ರಿಯೆಗಳು