ಮಾಲಕೌಂಸ್ ನ ಒಳಗೆ ಪಾಂಡುರಂಗನ ಕೇಳಿ…

ಗಿರಿಜಾ ಶಾಸ್ತ್ರೀ

ಗೆಳತಿ ಭಾಗ್ಯ ಸಿ.ಎಚ್. ರಾಹುಲ್ ದೇಶಪಾಂಡೆ ಮತ್ತು ಮಹೇಶ್ ಕಾಳೆಯವರು ಹಾಡಿದ ‘ಕಾನಡಾ… ರಾಜಾ ಪಂಢರೀಚ’ ಎನ್ನುವ ಒಂದು ಅದ್ಭುತ ಮರಾಠಿ ಅಭಂಗವನ್ನು ವಾಟ್ಸಾಪ್ ನಲ್ಲಿ ಕಳುಹಿಸಿದ್ದರು. ಸಹಿಸಲಸಾಧ್ಯವಾದ ಸಂಧಿವಾತದ ನೋವಿನಿಂದ ಬಳಲುತ್ತಿರುವ ಗೆಳತಿಗೆ ಹಾಡು ಆಸರೆ ಕೊಟ್ಟಿರಬಹುದು.

ಇಂತಹ ಯಮಯಾತನೆಗೆ ನಾವು ಆಧುನಿಕರು ಕಂಡುಕೊಂಡಿರುವ ಪರಿಹಾರವೆಂದರೆ ಸ್ಟಿರಾಯ್ಡ್ ಚಿಕಿತ್ಸೆ. ಅದು ಅನಿವಾರ್ಯವೂ ಹೌದು. ಸದ್ಯದ ನೋವಿನ ಕ್ಷಣಗಳಿಂದ ಪಾರಾಗಬೇಕಲ್ಲ? ಆದರೆ ನಮ್ಮೆಲ್ಲರ ಕಾಯಿಲೆಗಳೂ ಶುದ್ಧ ದೈಹಿಕವಲ್ಲ. ಅವು ಮನೋ ದೈಹಿಕ! ಹೀಗಾಗಿ ಹಾಡು! ಹಾಡು ಗೆಳತಿಯ ನೋವನ್ನು ದಡ ಹಾಯಿಸಲಿ.

ಈ ಹಾಡನ್ನು ಅನೇಕ ಸಲ ನಾನು ಕೇಳಿದ್ದೇನೆ. ಬೆಳಗಿನ ಕಾಫಿಯೊಂದಿಗೆ ಹೊರಗಿನ ಧೋ ಧೋ ಮಳೆಯ ಜೊತೆಯಲ್ಲಿ ಎಷ್ಟೋಬಾರಿ ತೊಯ್ದು ಹೋದದ್ದೂ ಇದೆ. ಅವು ನನ್ನ ಬದುಕಿನ ಅಮೃತ ಘಳಿಗೆಗಳು! ಮನಕಲಕುವ ಸಂಗೀತವೆಂದರೆ ನನಗೆ ಉಂಡಷ್ಟೂ ಹಸಿವು!! ಭಾಗ್ಯ ಕಳುಹಿಸಿದ ವೀಡಿಯೋ ಗೇಟ್ ವೇ ದ ಮುಂದಿನ ವಿಶಾಲ ಅಂಗಳದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯವರ ಪ್ರಾಯೋಜಕತ್ವದಲ್ಲಿ ನಡೆದ ಒಂದು ಲೈವ್ ಪ್ರದರ್ಶನ.

ರಾತ್ರಿಯ ಮಬ್ಬು ಬೆಳಕಿನ ನೀರವತೆಯಲ್ಲಿ ಕಾನಡಾ ವಿಟ್ಠಲನ ಸ್ಪರ್ಶಕ್ಕೆ ವಿದ್ಯುತ್ ಸಂಚಾರ ಮೈಯೊಳಗೆಲ್ಲಾ! ಇದರ ಹಿನ್ನೆಲೆಗೆ ಇರುವ ವಿಶಾಲ ಅರಬ್ಬಿ ಕಡಲು ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ ಅದು ಅನೇಕ ಸಲ ಅನುಭವಕ್ಕೇ ಬಂದ ವಿಷಯವಾಗಿತ್ತಲ್ಲ? ಹಾಡು ಅದರ ವೈಶಾಲ್ಯವನ್ನು ಮತ್ತೂ ಹೆಚ್ಚಿಸುತ್ತಿತ್ತಲ್ಲ? ಇನ್ನು ಕಡಲು ಕಣ್ಣಿಗೆ ಕಂಡರೆಷ್ಟು ಬಿಟ್ಟರೆಷ್ಟು?

ಈ ಪ್ರಸ್ತುತಿಯ ವಿಶೇಷವೆಂದರೆ ಮಾಲಕೌಂಸ್ ನ ಸ್ವರಪ್ರಸ್ತಾರದ ವಿದ್ಯುತ್ ಸಂಚಾರ. ಸಭಿಕರಲ್ಲಿ ಕುಳಿತಿದ್ದ ಪ್ರಸಿದ್ಧ ಜನರ ಮುಖಭಾವಗಳ ಮೇಲೆ ಅದು ಹಾದು ಹೋಗುತ್ತಿತ್ತು. ಅಪೂರ್ವ ಮಾಲಕೌಂಸ್!!!!

ಹೀಗೆ ರಾಗಗಳನ್ನು ಪತ್ತೆ ಹಚ್ಚುವುದು ಸಂಗೀತ ಶಾಸ್ತ್ರದ ಅಜ್ಞಾನಿಯಾದ ನನಗೆ ಕಷ್ಟ. ಅನೇಕ ಸಲ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ರಸಾಭಾಸಕ್ಕೆಕಾರಣವೂ ಆಗಬಹುದು!! ಆದರೂ ಮಾಲಕೌಂಸ್ ರಾಗದ ಕತೆಯೇ ಬೇರೆ!!! ಹಿಂದೋಳ’ ನನ್ನೊಳಗೆ ಊರಿ ಕುಳಿತ ರಾಗ. ಅದು ಸುವ್ವೀ ಅಂದರೂ ಸಾಕು ‘ನೀ ಯಾರೆಂದು’ ಥಟ್ ಅಂತ ಹೇಳಬಲ್ಲೆ. ಇದು ಬ್ರಾಹ್ಮೀ ಮುಹೂರ್ತದಲ್ಲಿ ಹಾಡುವ ರಾಗ. ಧ್ಯಾನಕ್ಕೆ ಪ್ರಶಸ್ತವಾದ ಸಮಯವೂ ಅದೇ ಎಂದು ಬಲ್ಲವರು ಹೇಳುತ್ತಾರೆ. ಹಿಂದೋಳ ಕರ್ನಾಟಕ ಸಂಗೀತದ ರಾಗ, ಇನ್ನು ವಿಟ್ಠಲ? ಅವನು ‘ಕಾನಡ ರಾಜ’!(ಕನ್ನಡದವನು) ‘ಪುರಂದರನ ಪರಮಾತ್ಮ’!! (ಪುರಂದರಾಚ ಹಾ ಪರಮಾತ್ಮ) ಆದರೆ ಅವನು ನಾಮದೇವನ ಕೈಯಾರೆ ಪಾಯಸ ಉಣ್ಣುತ್ತಾನೆ! ವೇದಗಳಿಗೇ ತನ್ನ ಅಂತರಂಗವನ್ನು ಬಿಟ್ಟುಕೊಡದವನು, ಚೋಖಾಮಿಳನಿಗೆ (ಮರಾಠಿ ದಲಿತ ಸಂತ) ತನ್ನ ಆಂತರ್ಯದ ನಡೆಮುಡಿ ಹಾಸಿಬಿಟ್ಟಿದ್ದಾನೆ!!!!

ಕನ್ನಡದ ನೆಲದಲ್ಲಿ ಹುಟ್ಟಿದವನು ಮರಾಠಿಗರ ಆದಿದೈವ! ಹಿಂದೋಳ ಮತ್ತು ಮಾಲಕೌಂಸ್ ಗಳ ಸ್ವರಗಳ ಚೌಕಟ್ಟು ಒಂದೇ!! ಅವುಗಳ ನಡೆ, ಏರಿಳಿತಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಅವು ದಾಟಿಸುವ ಅನುಭವ ಒಂದೇ. ಹೆಸರಷ್ಟೇ ಬೇರೆ!!!!

ಪಾಂಡುರಂಗನ ಧ್ಯಾನ ಮಾಲಕೌಂಸ್ ಒಳಗೆ ತಲ್ಲೀನವಾಗಿ ಕಣ್ಣುಮುಚ್ಚಾಲೆ ಆಡುತ್ತ ಆಡುತ್ತಲೇ ಅದು ‘ವಿಟ್ಠಲ ವಿಟ್ಠಲ….ಮಾಯ ಬಾಪ್ಪಾ…’ ಚಿಣ್ ಚಿಣ್, ಜೊತೆಗೆ, ತಬಲಾದ ಮೇಲಿನ ಉತ್ಸುಕ ಕೈಬೆರಳುಗಳ ಆವೇಶದ ಸಂಚಲನೆಯಲ್ಲಿ ತುರೀಯ ಸ್ಥಿತಿಯನ್ನು ಮುಟ್ಟಿ ಹಾಡು ನಿಂತು ಹೋಯಿತು. ಪಾಂಡುರಂಗ ಸಿಕ್ಕಮೇಲೆ ಇನ್ನು ಹಾಡಿನ ಗೊಡವೆಯೇಕೆ?, ಸ್ತುತಿಯ ಗೊಡವೆಯೇಕೆ? ಎಂದಿರಬೇಕು!! ಆದರೆ ನನಗೇನೋ ಈ ಹಾಡು ನಿಲ್ಲಬಾರದು!!! ಪಾಂಡುರಂಗ ದಕ್ಕಲೇ ಬಾರದು ಎಂದು ಎನಿಸುತ್ತದೆ.

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: