ಶಶಿಧರ ಬಾರಿಘಾಟ್
ಕಳೆದ ಎರಡು ದಿನಗಳಿಂದ ಹಲ್ಲಾ ಬೋಲ್-ಸಫ್ದರ್ ಹಶ್ಮಿ ನೆನಪಿನಲ್ಲಿ ಸಾಕಷ್ಟು ಹಳತನ್ನು ನೆನಪಿಸಿಕೊಳ್ಳುವ ಸಂದರ್ಭ ಉಂಟಾಗಿತ್ತು. ಬೀದಿನಾಟಕ ಮಾಧ್ಯಮದ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಈ ಕೆಳಗಿನ ಚಿತ್ರಗಳು ಬೆಂಗಳೂರು ಸಮುದಾಯ ಅಭಿನಯಿಸಿದ ಬೊಳುವಾರು ಮಹಮ್ಮದ್ ಕುಂಇ್ಞ ಅವರ ಕತೆ ಆಧರಿಸಿದ ‘ಕೇಸರಿ ಬಿಳಿ ಹಸಿರು’ ನಾಟಕದವು.
ಕಥೆಯನ್ನು ರಂಗಕ್ಕೆ ಅಳವಡಿಸುವಾಗ ಪ್ರೊ.ಹೆಚ್.ವಿ.ವೇಣುಗೋಪಾಲ ಪೂರಕ ಹಾಡುಗಳನ್ನು ಬರೆದರು. ಖ್ಯಾತ ಬೆಳಕು ತಜ್ಞ, ಸಂಗೀತ ನಿರ್ದೇಶಕ, ಹಿರಿಯರಾದ ವಿ.ರಾಮಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಮೊದಲ ಪ್ರದರ್ಶನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಏಎಸ್ಎಂ 70 (ಎ.ಎಸ್.ಮೂರ್ತಿ ಅವರಿಗೆ ಅಭಿನಂದನಾ ಸಮಾರಂಭ, ಆಯೋಜನೆ:: ಭಾರತಯಾತ್ರಾ ಕೇಂದ್ರ, ಪ್ರಯೋಗರಂಗ) ಕಾರ್ಯಕ್ರಮದಲ್ಲಿ ನಡೆದು, ಅಂದೇ ರಾತ್ರಿ ಕಲ್ಕತ್ತಾಗೆ ರಾಷ್ಟ್ರೀಯ ಬೀದಿ ನಾಟಕೋತ್ಸವದಲ್ಲಿ ಪಾಲ್ಗೊಳ್ಳಲು ಸಮುದಾಯದ ಕಲಾವಿದರು ತೆರಳಿದರು.
ಮುಂದೆ, ಸಮುದಾಯ ಬೆಂಗಳೂರು ‘ವಿವೇಕ – ವಿಚಾರ ವೇದಿಕೆ’ ಕರ್ನಾಟಕದೊಂದಿಗೆ ಕೋಮು ಸೌಹಾರ್ದತಾ ಬೀದಿ ನಾಟಕ ಜಾಥವನ್ನು 1998ರ ಮೇ ತಿಂಗಳಲ್ಲಿ ಪ್ರಾರಂಭಿಸಿತು. ನಮ್ಮ ತಾಲೀಮು ಸಾಣೆಹಳ್ಳಿಯಲ್ಲಿ ನಡೆಯಿತು. ಏಪ್ರಿಲ್ 30ರಂದು ದೇವನಹಳ್ಳಿಯಲ್ಲಿ ಉದ್ಘಾಟನೆ ನಡೆದು ದೊಡ್ಡಬಳ್ಳಾಪುರ, ಹೊಸಕೋಟೆಗಳಲ್ಲಿ ಮಾಡಿದ್ದಾಯಿತು.
ಮಾರನೇ ದಿನ ಮೇ ಡೇ, ನಮ್ಮ ಜಾಥ ಆನೇಕಲ್ ನಲ್ಲಿ ನಾಟಕ ಮಾಡಲು ತೆರಳಿತು. ಗುಂಡಣ್ಣ ಅವರು ತಂಡವನ್ನು ಲೀಡ್ ಮಾಡುತ್ತಿದ್ದರು. ಕಾ.ಮೀನಾಕ್ಷಿ ಸುಂದರ್ ಸ್ಥಳೀಯ ಸಂಘಟನೆಯ ಜವಾಬ್ದಾರಿ ಹೊತ್ತಿದ್ದರು. ತಂಡ ಸ್ಥಳಕ್ಕೆ ಹೋಗಿ ನಾಟಕದ ಸಿದ್ಧತೆಯಲ್ಲಿ ತೊಡಗಿತು.
ತುಂಬಾ ಬಿಸಿಲು. ಒಂದು ದೊಡ್ಡ ಅರಳಿಮರದ ಕೆಳಗೆ ನಾಟಕ ಮಾಡಲು ತೀರ್ಮಾನಿಸಿ ಗುಂಡಣ್ಣ, ಮೀನಾಕ್ಷಿ ಸಂದರ್ ಅವರು ಹತ್ತಿರದ ಪೋಲಿಸ್ ಸ್ಟೇಷನ್ ಬಳಿ ಸಾಗುವಷ್ಟರಲ್ಲಿ ಒಂದು ಗೂಂಡಾಪಡೆ ಗುಂಡಣ್ಣ, ಮೀನಾಕ್ಷಿ ಅವರ ಮೇಲೆ ಹಲ್ಲೆ ನಡೆಸಿತು. ಇನ್ನೊಂದು ಗುಂಪು ಕಲಾವಿದರ ಮೇಲೆ.
ಕೃಷ್ಣಕುಮಾರ್ ಯಾದವ್ ಸೇರಿದಂತೆ ಒಂದಷ್ಟು ಹುಡುಗರಿಗೆ ಏಟಿನ ರುಚಿ, ನಾವು ಕೆಲವರು ಹೆಣ್ಣುಮಕ್ಕಳ ರಕ್ಷಣೆಗೆ ನಿಂತಿದ್ದೆವು. ಗುಂಪು ಗುಂಡಣ್ಣ ಅವರನ್ನು ಅಟ್ಟಿಸಿಕೊಂಡು ಬಂದು ಒಂದು ದೊಡ್ಡ ಕಲ್ಲಿನಿಂದ ಹೊಡೆಯಲು ಬಂದ. ಅವನನ್ನು ಒದ್ದು ತಪ್ಪಿಸಿಕೊಂಡು ಬರುವಾಗ ಹೊಟ್ಟೆಗೆ ಚೂರಿಹಾಕಲು ಬಂದ, ಖಾದಿ ಜುಬ್ಬ ಹರಿಯಿತು.
ಮತ್ತೊಬ್ಬ ಒಂದು ಮರದ ತುಂಡಿನಿಂದ ಬಲವಾಗಿ ಹೊಡೆದ. ಅಂದು ನಮ್ಮೆಲ್ಲರ ಪಾಲಿಗೆ ಅದೃಷ್ಟವೋ, ಏನೋ ಬಲವಾಗಿತ್ತು. ಮುಖ್ಯವಾಗಿ ಗುಂಡಣ್ಣ ಅವರ ಪಾಲಿಗೆ ದೊಡ್ಡದಿತ್ತು. ಮಾರಣಾಂತಿಕ ಹಲ್ಲೆಯಾದರು ಬದುಕಿ ಉಳಿದರು. ಈ ಕೃತ್ಯವನ್ನು ಖಂಡಿಸಿ ರಾಷ್ಟ್ರಾದ್ಯಂತ ಪ್ರಜ್ಜಾವಂತರು, ಸಾಹಿತಿ ಕಲಾವಿದರು ಈ ಘಟನೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು.
ಒಂದು ವಾರದ ಒಳಗೇ ಮತ್ತೆ ಸಮುದಾಯ ಅದೇ ಆನೇಕಲ್ ನಲ್ಲಿ ನಾಟಕ ಮಾಡಿತು. ಪ್ರೊ.ಬಿಕೆಸಿ, ಡಾ. ಕೆಎಂಎಸ್, ಗಿರೀಶ್ ಕಾರ್ನಾಡ್ ಸೇರಿದಂತೆ ಬೆಂಗಳೂರಿನ ಎಲ್ಲಾ ರಂಗತಂಡಗಳ ಮುಖ್ಯರು, ಸಿಐಟಿಯು, ಡಿವೈಎಫ್ಐ, ಎಸ್ ಎಫ್ಐ ಕಾರ್ಯಕರ್ತರು ಮಾಧ್ಯಮದವರು, ಸಾರ್ವಜನಿಕರು ಸಾಕ್ಷಿಯಾದರು.
ಮೈಸೂರಿನ ರಂಗ ಗೆಳೆಯರು, ಸಮಾನ ಮನಸ್ಕರು ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮೈಸೂರಿನ ಡಿಸಿ ಕಛೇರಿಯ ಮುಂದೆ ಇದೇ ಪ್ರದರ್ಶನ ನಡೆಯಿತು. ಆ ನಂತರದಲ್ಲೂ ಈ ನಾಟಕ ಪ್ರದರ್ಶಿತವಾಯಿತು. ಯಾಕೋ ಇದೆಲ್ಲಾ ನೆನಪಾಯಿತು. ಏಕೆಂದರೆ ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿ ಗುಂಡಣ್ಣ, ಮತ್ತಿತರ ಕಲಾವಿದರ ಮೇಲಾದ, ಸಾಂಸ್ಕೃತಿಕ ಸಂಘಟನೆಯ ಮೇಲಾದ ಹಲ್ಲೆ ಮತ್ತು ಮಾನಸಿಕ ಆಘಾತಗಳನ್ನು ಮರೆಯಬಾರದು. ಅಲ್ಲವೆ?!
0 Comments