ಮಾಧ್ಯಮರಂಗಕ್ಕೆ ವೈರಸ್‌: ಅದನ್ನು ಗೆದ್ದ ಪತ್ರಕರ್ತರಿಗೆ ನೊಬೆಲ್‌…

ನಾಗೇಶ್‌ ಹೆಗಡೆ

ವಾರ್ತಾವೃತ್ತಿಯಲ್ಲಿರುವ ಇಬ್ಬರಿಗೆ ಇದೇ ಮೊದಲ ಬಾರಿ ನೊಬೆಲ್‌ ಶಾಂತಿ ಪುರಸ್ಕಾರ ಸಿಕ್ಕಿದೆ. ಈ ಹಿಂದೆ ಬೆಲಾರಸ್‌ ದೇಶದ ಪತ್ರಕರ್ತೆಯೊಬ್ಬರಿಗೆ ನೊಬೆಲ್‌ ಸಿಕ್ಕಿತ್ತಾದರೂ ಅದು ಅವರ ಸಾಹಿತ್ಯ ಕೃತಿಗೆ ಸಿಕ್ಕಿತ್ತು; ಪತ್ರಿಕೆಯನ್ನು/ವಾರ್ತಾ ಸಂಸ್ಥೆಯನ್ನು ನಡೆಸುವವರಿಗೆ ಇದೇ ಮೊದಲ ಬಾರಿ ನೊಬೆಲ್‌ ಸಿಕ್ಕಿದೆ.

ಈ ವರ್ಷ ಪತ್ರಕರ್ತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲು ವಿಶೇಷ ಕಾರಣಗಳಿವೆ. ಜಗತ್ತಿನಾದ್ಯಂತ ಸಾಮಾಜಿಕ ಮೌಲ್ಯಗಳು ಬಲು ಶೀಘ್ರವಾಗಿ ಪತನಗೊಳ್ಳುತ್ತಿವೆ. ಅಂಥ ಅವನತಿಯ ಕಡೆ ಕಣ್ಣಿಡಬೇಕಾದ ಮಾಧ್ಯಮಗಳು ತಮ್ಮ ಮೌಲ್ಯವನ್ನು ಇನ್ನಷ್ಟು ವೇಗವಾಗಿ ಕಳೆದುಕೊಳ್ಳುತ್ತಿವೆ.
‘ಪತ್ರಕರ್ತರು ತಮ್ಮ ಹೊಣೆಯನ್ನು ನಿಭಾಯಿಸಿದರೆ ಮಾತ್ರ ನಾಳಿನ ಸಮಾಜ ಸ್ವಸ್ಥವಾಗಿರಲು ಸಾಧ್ಯ’ ಎಂಬ ಸಂದೇಶದೊಂದಿಗೆ ಈ‌ ವರ್ಷದ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಗೆ ನಿಭಾಯಿಸಿದ ಇಬ್ಬರನ್ನು ಗುರುತಿಸಲಾಗಿದೆ.

ವಾರ್ತಾವೃತ್ತಿಯಲ್ಲಿರುವ ಎಲ್ಲರೂ ಕಣ್ಣುಜ್ಜಿಕೊಂಡು ಈ ಇಬ್ಬರ ಹೋರಾಟವನ್ನು ಅರಿತುಕೊಳ್ಳಬೇಕಾಗಿದೆ. ಚಿಂತೆಯ ವಿಷಯ ಏನೆಂದರೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಒಂದು ಟ್ರೆಂಡ್‌ ಕಾಣುತ್ತಿದೆ. ರಾಷ್ಟ್ರನಾಯಕನ ಏಕಾಧಿಪತ್ಯ, ಆತನ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಿರಂತರ ಅತಿರಂಜಿತ ಪ್ರಚಾರ, ಆತನ ಸಾಧನೆಯ ಡೋಲು ಬಜಾಯಿಸುವ ಬಾಲಂಗೋಚಿ ಮಾಧ್ಯಮ ಸಂಸ್ಥೆಗಳ ಸಂಖ್ಯೆಯ ನಿರಂತರ ಏರಿಕೆ; ತನ್ನನ್ನು ಪ್ರಶ್ನಿಸುವವರನ್ನು ಬಗ್ಗು ಬಡಿಯಲು ಆತನೇ ಸೃಷ್ಟಿಸಿಕೊಂಡ ಟ್ರೋಲ್‌ ಫ್ಯಾಕ್ಟರಿ, ಅವುಗಳ ಮೂಲಕ ಸುಳ್ಳುಸುದ್ದಿಗಳ ಪ್ರಸಾರ… ಇವೆಲ್ಲವೂ ಕಳೆದ ಆರೆಂಟು ವರ್ಷಗಳಿಂದ ಹೆಚ್ಚುತ್ತಿವೆ.

ಈ ಎಲ್ಲ ಕಿರಿಕಿರಿಗಳನ್ನು ಎದುರಿಸಿಯೂ ವೃತ್ತಿಧರ್ಮಕ್ಕೆ ಬದ್ಧರಾಗಿ, ನಿರಂಕುಶ ಪ್ರಭುತ್ವವನ್ನು ಪ್ರಶ್ನಿಸಬಲ್ಲ ತಾಕತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ.
ನಾಯಕನ ನಿಯಂತ್ರಣದಲ್ಲಿರುವ ಸರಕಾರಿ ಯಂತ್ರಗಳು ನೀಡುವ ಎಲ್ಲ ಬಗೆಯ ಹಿಂಸಾತ್ಮಕ ದಾಳಿಗಳನ್ನೂ ವೈಯಕ್ತಿಕ ನಿಂದನೆಯನ್ನೂ ಎದುರಿಸಿ ನ್ಯಾಯಕ್ಕಾಗಿ, ಸತ್ಯಕ್ಕಾಗಿ, ಪ್ರಜಾತಂತ್ರದ ಮೌಲ್ಯಗಳ ರಕ್ಷಣೆಗಾಗಿ ಎದೆಯೆತ್ತಿ ನಿಲ್ಲುವೆನೆಂಬ ಛಾತಿ ತೋರಿಸುವವರ ಸಂಖ್ಯೆ ದಿನದಿನಕ್ಕೆ ಕಮ್ಮಿ ಆಗುತ್ತಿದೆ. ಅಂಥ ಅಪರೂಪದವರನ್ನು ಗುರುತಿಸಬೇಕು, ಕುಸಿಯುತ್ತಿರುವ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂಬ ಆಶಯದಿಂದ ಈ ಬಾರಿಯ ನೊಬೆಲ್‌ ಶಾಂತಿ ಪುರಸ್ಕಾರವನ್ನು ಪತ್ರಕರ್ತರಿಗೆ ನೀಡಲಾಗಿದೆ.

ಫಿಲಿಪ್ಪೀನ್ಸ್‌ನ ಮಹಿಳೆ ಮೇರಿಯಾ ರೆಸ್ಸಾ ಒಬ್ಬ ತನಿಖಾ ಪತ್ರಕರ್ತೆ. ಅವರೇ ಖುದ್ದಾಗಿ Rappler ಹೆಸರಿನ ಆನ್‌ಲೈನ್‌ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಫಿಲಿಪ್ಪೀನ್ಸ್‌ ಮತ್ತು ಇತರ ಪೂರ್ವ ಏಷ್ಯಗಳ ವಾರ್ತೆಗಳನ್ನು ಜಗತ್ತಿಗೆ ಬಿತ್ತರಿಸುವ ಸಂಸ್ಥೆಯ ಮುಖ್ಯಸ್ಥೆ ಅವರು.
ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುತೆರ್ತಿಯ (76) ಆಡಳಿತದಲ್ಲಿ ಜನರ ಹಕ್ಕುಗಳ ದಮನ ಹೇಗೆ ಹೇಗೆ ನಡೆಯುತ್ತಿದೆ, ಎಷ್ಟು ಜನ ನಿರಪರಾಧಿಗಳ ಹತ್ಯೆ ಆಗುತ್ತಿದೆ; ಸತ್ಯ ಹೇಳುತ್ತಿರುವವರು ಎಂತೆಂಥ ಬಗೆಯ ದೌರ್ಜನ್ಯಗಳನ್ನು ಎದುರಿಸಬೇಕಾಗಿ ಬರುತ್ತಿದೆ ಎಂಬುದನ್ನು ಸಾಕ್ಷ್ಯಾಧಾರ ಸಮೇತ ತೋರಿಸುತ್ತಿರುವ ಪತ್ರಕರ್ತೆ. ಹೇಗೆ ಅಲ್ಲಿನ ಪ್ರಮುಖ ವಾರ್ತಾ ಸಂಸ್ಥೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಧ್ಯಕ್ಷರ ಆಡಳಿತ ವೈಖರಿಯ ಭೋಪರಾಕ್‌ ಹಾಕಲೇಬೇಕಾದಂಥ ಪರಿಸ್ಥಿತಿ ಬಂದಿದೆ ಎಂಬ ಸತ್ಯವನ್ನು ಬಯಲಿಗೆಳೆಯುತ್ತಿರುವ ಧೀಮಂತೆ.
ಪತ್ರಿಕೋದ್ಯಮದ ಗುಣಮಟ್ಟ ಮತ್ತು ನೈತಿಕತೆ ಎರಡನ್ನೂ ತುಳಿಯಲು ರಾಜಕೀಯ ಶಕ್ತಿಗಳು ಮಾಹಿತಿ ತಂತ್ರಜ್ಞಾನವನ್ನು ಪಳಗಿಸಿಕೊಂಡು ಪ್ರಜೆಗಳಿಗೆ ಭ್ರಾಮಕ ಸತ್ಯವನ್ನು ಹಂಚುತ್ತಿರುವ ಬಗ್ಗೆ ಎಚ್ಚರಿಸುತ್ತಿರುವ ಮೇರಿಯಾ ಸ್ವತಃ ಅಲ್ಲಿನ ಗುಪ್ತದಳದವರಿಂದ ಅನೇಕ ಬಾರಿ ಬಂಧನಕ್ಕೊಳಗಾಗಿ ಸೆರೆವಾಸ ಅನುಭವಿಸಿದ್ದಾರೆ.

‘ಪತ್ರಿಕೆಯನ್ನು/ಚಾನೆಲ್ಲನ್ನು ನಡೆಸಲು ಬೇಕಾದ ಸ್ವಾಯತ್ತ ಬಿಸಿನೆಸ್‌ ಮಾಡೆಲ್ ಸತ್ತು ಹೋಗಿದೆ. ಸತ್ಯವನ್ನು ತಮಗೆ ಬೇಕೆಂದಂತೆ ತಿರುಚಬಲ್ಲ ಟೆಕ್ನಾಲಜಿ ಕಂಪನಿಗಳೇ ಜಾಹೀರಾತಿನ ಲಗಾಮನ್ನೂ ಹಿಡಿದಿವೆ. ಮಾಧ್ಯಮಗಳನ್ನು ಕುಣಿಸುತ್ತಿವೆ. ಪತ್ರಕರ್ತರಿಗೆ ಲಭ್ಯವಿರಬೇಕಿದ್ದ ಮಾಹಿತಿ ಜಾಲಕ್ಕೇ ವೈರಸ್‌ ತಗುಲಿದೆ. ಸತ್ಯಾಂಶಗಳನ್ನೆಲ್ಲ ಅದುಮಿಟ್ಟು ಶಕ್ತರನ್ನು ಹಾಡಿ ಹೊಗಳುವ ಈ ವೈರಸ್‌ಗೆ ನಾವೆಲ್ಲ ಸೇರಿ ಒಂದು ಲಸಿಕೆಯನ್ನು ಕಂಡುಹಿಡಿಯಬೇಕಿದೆ. ಜರ್ನಲಿಸಂ ಮತ್ತು ಟೆಕ್ನಾಲಜಿ ಎರಡನ್ನೂ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕಾದ ಕಾಲ ಬಂದಿದೆ’ ಎಂದು ಹೇಳುವ ಮಾರಿಯಾ ಈಗಾಗಲೇ ತಮ್ಮ ಸುದ್ದಿ ಸಂಸ್ಥೆಯ ದಿಟ್ಟ ವರದಿಗಳಿಂದಾಗಿ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಷ್ಯದ ಪತ್ರಕರ್ತ ಡಿಮಿತ್ರಿ ಮುರಾಟೊವ್‌ (59) ಕೂಡ ತಾನೇ ಸ್ಥಾಪಿಸಿದ ‘ನೊವಾಯಾ ಗೆಝೆಟಾ’ ಪತ್ರಿಕೆಯಲ್ಲಿ ನಿರ್ಭೀತ ವರದಿಗಾರಿಕೆ ಮತ್ತು ಅಂಕಣ ಬರಹಗಳ ಮೂಲಕ ಪುತಿನ್‌ ಆಡಳಿತದ ದಬ್ಬಾಳಿಕೆ, ಕ್ರೌರ್ಯ ಮತ್ತು ಕೊಂಕು-ಕೊಳಕುಗಳನ್ನು ಎತ್ತಿ ತೋರಿಸುತ್ತಲೇ ಅನೇಕ ಜಾಗತಿಕ ಪ್ರಶಸ್ತಿಗಳನ್ನು ಪಡೆದವರು.

ರಷ್ಯದಲ್ಲಿ ನಿರಂತರ ಹೆಚ್ಚುತ್ತಿರುವ ಭ್ರಷ್ಟಾಚಾರ, ಪೊಲೀಸ್‌ ಮತ್ತು ಮಿಲಿಟರಿ ಹಿಂಸಾಕೃತ್ಯಗಳು, ಅವನ್ನು ಪ್ರಶ್ನಿಸಹೊರಟ ಪ್ರಜೆಗಳ ಕಾನೂನುಬಾಹಿರ ಬಂಧನಗಳು, ಮತಗಟ್ಟೆಯ ವಂಚನೆಗಳು ಮತ್ತು ‘ಟ್ರೋಲ್‌ ಫ್ಯಾಕ್ಟರಿ’ಗಳ ನಿರಂತರ ದಾಳಿಯ ಬಗ್ಗೆ ದನಿ ಎತ್ತುತ್ತಲೇ ಬಂದವರು. ಅವರ ಪತ್ರಿಕೆಯ ಆರು ವರದಿಗಾರರ ಕಗ್ಗೊಲೆಯಾಗಿದೆ. ಪ್ರಕಟನೆಯನ್ನು ನಿಲ್ಲಿಸುವಂತೆ ಏನೆಲ್ಲ ಬಗೆಯ ಒತ್ತಡಗಳು, ಬೆದರಿಕೆಗಳು ಬಂದಿವೆ. ಅವೆಲ್ಲವನ್ನೂ ಎದುರಿಸುತ್ತಲೇ ಈಗಲೂ ರಷ್ಯದಲ್ಲಿ ಡಿಮಿತ್ರಿಯವರ ‘ನೊವಾಯಾ ಗೆಝೆಟಾ’ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂಬ ಹೆಗ್ಗಳಿಕೆಯೊಂದಿಗೆ ತನ್ನ ಸ್ಥಾನದಲ್ಲಿ ಗಟ್ಟಿಯಾಗಿ ನಿಂತಿದೆ.

(ಲೆನಿನ್‌, ಬ್ರೇಝ್ನೇವ್‌ ಕಾಲದಲ್ಲಿ ಸೋವಿಯತ್‌ ರಷ್ಯದಲ್ಲಿ ಸರಕಾರಿ ಸ್ವಾಮ್ಯದ ಎರಡು ಪತ್ರಿಕೆಗಳಿದ್ದವು: 1 ಪ್ರಾವ್ದಾ (ಸತ್ಯ) ಮತ್ತು 2. ಇಝ್ವೆಸ್ತಿಯಾ (ಸುದ್ದಿ). ಆಗಿನ ಕಾಲದ ಜೋಕ್‌ ಏನಿತ್ತೆಂದರೆ ಸುದ್ದಿ ಬೇಕಿದ್ದರೆ ಅದರಲ್ಲಿ ಸತ್ಯ ಇಲ್ಲ; ಸತ್ಯ ಬೇಕಿದ್ದರೆ ಅದರಲ್ಲಿ ಸುದ್ದಿ ಇಲ್ಲ”! ಈಗ ಅನೇಕ ಪತ್ರಿಕೆಗಳು, ಚಾನೆಲ್‌ಗಳು ಅಲ್ಲಿವೆ. ಆದರೆ ಹೆಚ್ಚಿನವೆಲ್ಲ ಭೋಪರಾಕ್‌ ವರ್ಗಕ್ಕೆ ಸೇರಿವೆ).

ಭಾರತದಲ್ಲೂ ಸ್ವತಂತ್ರ ಮಾಧ್ಯಮಸಂಸ್ಥೆಗಳ ಸ್ಥಿತಿ ಈಚೀಚೆಗೆ ಶೋಚನೀಯವಾಗುತ್ತ ನಡೆದಿದೆ. ಸರಕಾರವನ್ನು ಓಲೈಸದಿದ್ದರೆ ಉಳಿಗಾಲವಿಲ್ಲ ಎಂಬ ಸ್ಥಿತಿ ಉಂಟಾಗಿದೆ. ಕೋಟ್ಯಧೀಶ ಉದ್ಯಮಿಗಳು ಒಂದರಮೇಲೊಂದರಂತೆ ಮಾಧ್ಯಮ ಸಂಸ್ಥೆಗಳನ್ನು ಖರೀದಿಸುತ್ತಿರುವುದೂ ಸೃಷ್ಟಿಸುತ್ತಿರುವುದೂ ಅಲ್ಲದೆ, ಡಿಜಿಟಲ್‌ ಜಾಲಗಳನ್ನೂ ಜಾಹೀರಾತು ಸಂಸ್ಥೆಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿವೆ. ಸರಕಾರದ ನಿಲುವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳ ಮೇಲೆ ನಾನಾ ಬಗೆಯ ಒತ್ತಡ, ಬೆದರಿಕೆ, ಸಿಬಿಐ ದಾಳಿ ಪದೇ ಪದೇ ನಡೆಯುತ್ತಿವೆ. ಸುಳ್ಳು ಸುದ್ದಿ, ಟ್ರೋಲ್‌ ಫ್ಯಾಕ್ಟರಿಗಳ ಹಾವಳಿ ಇಲ್ಲೂ ಅತಿಯಾಗಿದೆ.

ಅಂತರರಾಷ್ಟ್ರೀಯ ಮಾಧ್ಯಮರಂಗದ ʼಪ್ರೆಸ್‌ ಫ್ರೀಡಮ್‌ʼ ಸೂಚ್ಯಂಕದಲ್ಲಿ ಭಾರತದ ಸ್ಥಾನ 2016ರೀಚೆ ಸತತ ಕುಸಿಯುತ್ತ ಬಂದಿದೆ. ಪತ್ರಿಕಾ ಸ್ವಾತಂತ್ರ್ಯದ ಮಾನದಂಡಗಳ ಪ್ರಕಾರ ಜಗತ್ತಿನ 180 ದೇಶಗಳಲ್ಲಿ ಭಾರತದ ಸ್ಥಾನ 142ಕ್ಕೆ ಕುಸಿದಿದೆ. ಫಿಲಿಪ್ಪೀನ್ಸ್‌ ಸ್ಥಾನ 130, ರಷ್ಯದ ಸ್ಥಾನ 150. ಭಾರತದಲ್ಲಿ ಕಳೆದ ವರ್ಷ ಕನಿಷ್ಠ 22 ಪತ್ರಕರ್ತರು ಹಿಂಸೆಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊನೆಯ ಕುಟುಕು:
ಪತ್ರಕರ್ತರಿಗೆ ನೊಬೆಲ್‌ ಪ್ರಶಸ್ತಿ ಸಿಕ್ಕಿರಲಿಲ್ಲ. ಆದರೆ ಟ್ರಂಪ್‌ ಮಹಾಶಯನ ಎಡವಟ್ಟು ಟ್ವೀಟ್‌ಗಳಲ್ಲಿ ಇದೂ ಒಂದು: ‘ಇಂಥ ಪತ್ರಕರ್ತರಿಗೆ ನೀಡಲಾದ ನೋಬಲ್‌ ಪ್ರಶಸ್ತಿಗಳನ್ನು ಆ ಸಮಿತಿಯವರು ಹಿಂತೆಗೆದುಕೊಳ್ಳಬೇಕು. ವಾಮಮಾರ್ಗದಿಂದ ಅಂಥ ಪ್ರಶಸ್ತಿ ಗಳಿಸಿದ ಪತ್ರಕರ್ತರ ಪಟ್ಟಿಯನ್ನೇ ನಾನು ಬೇಕಿದ್ದರೆ ನೋಬಲ್‌ ಸಮಿತಿಗೆ ಕೊಡಬಲ್ಲೆ’ ಇದರಲ್ಲಿ ಎರಡೆರಡು ಎಡವಟ್ಟುಗಳಿವೆ.

ಮೊದಲನೆಯದಾಗಿ ಪತ್ರಕರ್ತರಿಗಿರುವ ಅತಿ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಪುಲಿಟ್ಸರ್‌ ಪ್ರಶಸ್ತಿ. ಅದನ್ನು ತಪ್ಪಾಗಿ ಈತ ನೊಬೆಲ್‌ ಎಂದು ಹೇಳಿದ್ದು. ಎರಡನೆಯದಾಗಿ ನೊಬೆಲ್‌ ಪ್ರಶಸ್ತಿಯನ್ನು ನೋಬಲ್‌ ಎಂದು ಕರೆದಿದ್ದು.

‍ಲೇಖಕರು Admin

October 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. ಡಿ ಎಂ ನದಾಫ

  ಭಾರತೀಯ ಮಾಧ್ಯಮ ಕ್ಷೇತ್ರ ವನ್ನು ಹಳಿಯುತ್ತ ಪರ್ಯಾಯವೇ ಇಲ್ಲವೆಂಬಂತೆ
  ಅಳುವನ್ನು ತೋಡಿ ಕೊಳ್ಳುತ್ತಿದ್ದ ಭಾರತೀಯ ಓದುಗ ವರ್ಗ ಇತ್ತ ಚಿತ್ತ ಹರಿಸುವಂತೆ ಮಾಡುವ ಲೇಕನ “ಮಾಧ್ಯಮ ರಂಗಕ್ಕೆ ವೈರಸ್.
  ಅವಧಿಗೆ ಧನ್ಯವಾದ.
  ಡಿ ಎಂ ನದಾಫ್ ಅಫಜಲಪುರ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಡಿ ಎಂ ನದಾಫCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: