ತೇಜಾವತಿ ಎಚ್ ಡಿ
**
ದಿನವೂ ಅವಳು ಹೆಗಲಿಗೇರಿಸಿ ನೆರಿಗೆ ಹಿಡಿದು ಹೆಜ್ಜೆ
ಹಾಕುವಾಗ ದೂರದಲ್ಲಿ ದಿಟ್ಟಿಸುವ ಕಣ್ಣುಗಳ ಎಲ್ಲಿಲ್ಲದ
ಕುತೂಹಲ
ಏನಿರಬಹುದು
ಎಂದೆಂದೂ ಹೊಟ್ಟೆ ಉಬ್ಬಿಕೊಂಡ ಅವಳ ಆ ಮಾಯಾ
ಜೋಳಿಗೆಯಲ್ಲಿ
ಸ್ನೋ ಪೌಡರ್ ಲಿಪ್ಸ್ಟಿಕ್ ತಿಂಡಿ ಪಿಸ್ತಾ ಬಾದಾಮಿ
ಮತ್ತೇ..
ಮತ್ತೂ ಅದೇ ಕುತೂಹಲ
ತೆರೆದು ನೋಡುವ ತವಕ ಎದೆಯೊಳಗೆ
ನೂರಾರು ಗರಿಗೆದರಿದ ನವಿಲುಗರಿ
ಜೋಳಿಗೆಯೊಳಗೆ ಕೈ ಇಳಿ ಬಿಡುತ್ತಲೇ ಸ್ವಾಗತಿಸುವ
ಚಾಕೊಲೇಟ್ ತುದಿ ಸವೆದು ಅರೆಮುರಿದು
ಮೂಲೆಯಲ್ಲಿ ಅವಿತು ಕುಳಿತು ಮೊಂಡಾಗಿದ್ದ ಪೆನ್ಸಿಲ್ ಗೆ
ಶಾರ್ಪ್ ಮಾಡುವ ಮೆಂಡರ್
ಒಂದಕ್ಷರವು ತಪ್ಪಾಗದಂತೆ ಎಚ್ಚರ ವಹಿಸುವ ಮೃದುವಾದ
ರಬ್ಬರ್
ಮತ್ತಿನ್ನೇನು..
ತರಗತಿಯ ನಡು ನಡುವೆ ಆಡುತ್ತಿದ್ದ ಗಿರಗಿಟ್ಟಲೆ, ರೂಬಿಕ್ಸ್
ಕ್ಯೂಬ್, ಯಾವುದೋ ಕಾರು ಲಾರಿಯ ಮುರಿದ ಲೈಟು
ಇಬ್ಬರ ಜಗಳಕ್ಕೆ ಕಾರಣವಾಗಿದ್ದ ಚೆಂಡು,
ಮಾತು ಬಿಟ್ಟು ಒಂದಾಗಿದ್ದ ಹಕ್ಕಿಗಳು ಬರೆದ ಕ್ಷಮೆ ಪತ್ರ
ಇನ್ನೇನೇನೋ..
ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವಳು
ಸಂತನೊಬ್ಬ ದುಶ್ಚಟಗಳ ಭಿಕ್ಷೆ ಬೇಡಿದಂತೆ
ಬೆರಳ ಹಿಡಿದು ಸ್ಪರ್ಶ ಕಲಿಸಿ
ಅಮ್ಮನಾಗಿ ಅಪ್ಪುವಾಕೆ
ಬತ್ತದ ಬಟ್ಟಲ ಕಂಗಳಲ್ಲಿ ಕನಸು ಕಾಣುವಳು
ದೇಶ ಕಾಯುವ ಅನ್ನ ಹಾಕುವ ಪ್ರೀತಿ ಹಂಚುವ ಎಳೆ
ಹಕ್ಕಿಗಳಿಗೆ
ಅಕ್ಷರದ ಕಾಳನ್ನಿಟ್ಟು ಗುಟುಕು ನೀಡುವಳು
ಆರಕ್ಕೇರದ ಮೂರಕ್ಕಿಳಿಯದ
ಅವಳ ಬದುಕ ಜೋಳಿಗೆಯ ಅಕ್ಷಯವಾಗಿಸಲು
ಗುರು, ಮಾತೆಯ ಮಹತ್ವ ಸಾರಲು
0 ಪ್ರತಿಕ್ರಿಯೆಗಳು