ಡಾ. ನಾ.ದಾಮೋದರ ಶೆಟ್ಟಿ
**
ಪುತ್ತೂರಿನಲ್ಲಿ ಜನುಮವೆತ್ತಿದ ಮನೋರಮಾ ಅವರು ತಮ್ಮ ತಂದೆಯವರಾದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಯವರ ಗರಡಿಯಲ್ಲಿ ತರಬೇತಾದವರು. ತಂದೆಯವರು ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಸಂಸ್ಕೃತ ಪಂಡಿತರಾಗಿದ್ದರು. ಅವರಿಗೆ ಆರು ಮಂದಿ ಮಕ್ಕಳು. ಮನೋರಮಾ ಅವರಲ್ಲಿ ಐದನೆಯವರು. ಮನೆಯಲ್ಲಿ ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯಕ್ಕೆ ಆದ್ಯತೆಯಿದ್ದ ನಿಮಿತ್ತವಾಗಿ ಭಾಷೆಯ ಪ್ರೇಮ ಅವರಿಗೆ ಎಳವೆಯಲ್ಲೇ ಒಲಿದಿತ್ತು.
ಅದಕ್ಕೆ ಹೊಂದಿಕೊಂಡಂತೆ ನಾಡೋಜ ಮುಳಿಯ ತಿಮ್ಮಪ್ಪಯ್ಯನವರ ದ್ವಿತೀಯ ಪುತ್ರ ಮಹಾಬಲ ಭಟ್ಟರ ಪತ್ನಿಯಾಗಿ ಬಂದುಸೇರಿದ್ದು ಸಾಹಿತ್ಯದ ಒಲವಿದ್ದವರ ಮನೆಗೇ. ಮಹಾಬಲ ಭಟ್ಟರು ವೃತ್ತಿಯಲ್ಲಿ ವಕೀಲರು. ಯಕ್ಷಗಾನದ ಅರ್ಥಗಾರಿಕೆಯಲ್ಲಿ ತೊಡಗಿ, ಕನ್ನಡ ಸಾಹಿತ್ಯವನ್ನು ಅರಗಿಸಿಕೊಂಡಿದ್ದರು.
ಮದುವೆಗೂ ಮೊದಲು ಮನೋರಮಾ ಭಟ್ಟರು ತಮ್ಮ ಭಾವೀ ಪತಿಗೆ ಕದ್ದುಮುಚ್ಚಿ ಇಂಗ್ಲಿಷ್‌ನಲ್ಲಿ ಒಂದು ʼಲವ್ ಲೆಟರ್ʼ ಬರೆದಿದ್ದರಂತೆ. ಅದನ್ನು ಓದಿದ ಭಟ್ಟರು ʻಕನ್ನಡದಲ್ಲಿ ಶುದ್ಧವಾಗಿ ಬರೆಯುವುದು ಬಿಟ್ಟು ಇದ್ಯಾಕೆ ಈ ಭಾಷೆಯ ಗೀಳು?ʼ ಎಂದು ಕೇಳಿ ಮರುಪತ್ರ ಬರೆದಿದ್ದರಂತೆ! ಪುತ್ತೂರಿನ ಕಲಿಕೆಯ ಸಮಯದಲ್ಲಿ ಶಿವರಾಮ ಕಾರಂತ ಅವರಿಗೆ ʻಕಿಸಾ ಗೋತಮಿʼ ನಾಟಕ ಮಾಡಿಸುವಾಗ ಉಚ್ಛಾರದಲ್ಲಿ ತುಸು ಏರುಪೇರು ಕಾಣಿಸಿದರೂ ಸರಿಯಾಗಿ ಬೆವರಿಳಿಸಿಬಿಡುತ್ತಿದ್ದರಂತೆ! ಇದೆಲ್ಲವೂ ಅವರ ಭಾಷಾಶುದ್ಧಿಯಲ್ಲಿ ಪಾತ್ರವಹಿಸಿತ್ತು ಎಂದು ಮಾತಿನ ನಡುನಡುವೆ ಅವರು ಉಲ್ಲೇಖಿಸುತ್ತಿದ್ದರು.
ಅವರ ಮೊದಲ ಕಥಾ ಸಂಕಲನ ʻಸ್ವಯಂವರʼದಲ್ಲಿ ಹಳ್ಳಿಯ ಬ್ರಾಹ್ಮಣರ ಬದುಕಿನ ನೈಜ ಘಟನೆಗಳ, ಕೆಳವರ್ಗದವರ ಶೋಷಣೆ ಸಂಬಂಧವಾದ ವಿಚಾರಗಳ ಕುರಿತ ಮಂಥನವಿದೆ. ಅದರಲ್ಲೂ ಅಂದಿನ ಹೆಣ್ಣುಮಕ್ಕಳ ಬದುಕಿನ ಹೀನಾಯ ಸ್ಥಿತಿಯ ಕುರಿತ ಅವರ ಚಿಂತನೆಗಳು ಗಂಭೀರ ರೂಪದ್ದಾಗಿದ್ದವು. ತಲೆಬೋಳಿಸಿದ ವಿಧವೆಯರ ಭವಿಷ್ಯದ ಕುರಿತು ಮಾತನಾಡಿ ತನ್ನ ಸಮಾಜದವರನ್ನೇ ಎದುರು ಹಾಕಿಕೊಂಡಿದ್ದರು. ತನ್ನ ಮನೆಯ ಕೆಲಸದಾಕೆಗೆ ಮನೆಯೊಳಗೆ ನೀಡಿದ್ದ ಸ್ವಾತಂತ್ರ್ಯವನ್ನು ಕಂಡವರು ʻಮನೋರಮಾ ಅಬ್ರಾಹ್ಮಣರಿರಬೇಕುʼ ಎಂದೂ ವ್ಯಂಗ್ಯ ನುಡಿದದ್ದುಂಟು.
ಸುತ್ತ ಹತ್ತೂರಲ್ಲಿ ಯಾರೋ ಗಂಡನನ್ನು ಕಳೆದುಕೊಂಡ ವಾರ್ತೆ -ಅವರು ಯಾರೇ ಆಗಿರಲಿ- ಕಿವಿಗೆ ಬಿದ್ದೊಡನೆಯೆ ಎದ್ದು ಹೊರಟೇ ಬಿಡುತ್ತಿದ್ದರು. ಗಂಡನ ಶವವನ್ನು ಅತ್ತ ಸ್ಮಶಾನಕ್ಕೆ ಒಯ್ಯುವ ವೇಳೆಯಲ್ಲಿ ಇತ್ತ ಅಲ್ಲಿ ನೆರೆದ ಹೆಂಗಸರೇ ಆಕೆಯ ಹಣೆಯ ಕುಂಕುಮವನ್ನೂ ಕೊರಳ ಮಾಂಗಲ್ಯವನ್ನೂ ಕಿತ್ತು ತೆಗೆಯುವ ಸಂಪ್ರದಾಯವಿತ್ತು. ಅದು ಹೇಗೋ ಮನೋರಮಾ ಭಟ್ಟರ ಕಿವಿಗೆ ತಲುಪಿಬಿಡುತ್ತಿತ್ತು. ಅವರು ಮಾಡುತ್ತಿದ್ದ ಕೆಲಸವೆಂದರೆ ಆಕೆಗೆ ಸಮಾಧಾನ ಹೇಳುವ ನೆಪದಲ್ಲಿ ʻನಿನ್ನ ಗಂಡ ಎಲ್ಲೂ ಹೋಗಿಲ್ಲ. ನಿನ್ನ ಜೊತೆಗೇ ಇದ್ದಾನೆ. ಯಾವುದೇ ಕಾರಣಕ್ಕೂ ಹಣೆಯ ಬೊಟ್ಟನ್ನೂ ಕೊರಳ ಮಾಂಗಲ್ಯ ಸೂತ್ರವನ್ನು ತೆಗೆಯಬೇಡ, ತೆಗೆಯಲು ಬಿಡಬೇಡʼ ಎಂದು ಮಾರ್ಮಿಕವಾಗಿ ಹೇಳುತ್ತಿದ್ದರು. ಅವರ ಈ ನಡೆಯನ್ನು ವಿರೋಧಿಸಿದವರಿಗೆ ʻಶಾಸ್ತ್ರ ಏನು ಹೇಳಿದೆ? ತಿಳ್ಕೊಂಡು ಮಾತನಾಡಿ, ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ, ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಶ್ಯತಮ್ ಎಂಬುದರ ಅರ್ಥಗೊತ್ತಾ ನಿಮಗೆ?ʼ ಎಂದು ಹೇಳಿ ಅವರ ಬಾಯಿ ಮುಚ್ಚಿಸುತ್ತಿದ್ದರು. ಆ ಕುರಿತು ಅವರು ಬರೆದ ʻಹೆಣ್ಣಿಗೇಕೆ ಈ ಶಿಕ್ಷೆ?ʼ ಎಂಬ ಲೇಖನವು ಕಿರುಹೊತ್ತಿಗೆಯ ರೂಪದಲ್ಲಿ ಪ್ರಕಟಗೊಂಡು ಕರಾವಳಿಯುದ್ದಕ್ಕೂ ಸಂಚಲನವನ್ನುಂಟುಮಾಡಿತ್ತು..
ಅವರ ಎರಡನೆಯ ಕಥಾ ಸಂಕಲನ ʻಶಬ್ದಗಳಾಗದ ಧ್ವನಿಗಳುʼ ಇದೇ ಆಶಯವನ್ನು ಪ್ರಬಲವಾಗಿ ಪ್ರತಿಪಾದಿಸಿತ್ತು.
ತಾವು ಬರೆದ ನಲುವತ್ತಕ್ಕೂ ಹೆಚ್ಚು ಬಾನುಲಿ ನಾಟಕಗಳಲ್ಲಿ, ಎರಡು ಕವನ ಸಂಕಲನಗಳಲ್ಲಿ, ಅಂಕಣಗಳಲ್ಲಿ, ಶೋಷಣೆಗೆ ಗುರಿಯಾದ ಹೆಣ್ಣುಮಕ್ಕಳ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದು ಕಂಡುಬರುತ್ತದೆ. ಸಮಾಜವು ಅವರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಮಾರ್ಮಿಕವಾಗಿ ಬರೆಯುತ್ತ ಪುರುಷ ಸಮಾಜದ ತಪ್ಪನ್ನು ಮನೋರಮಾಭಟ್ಟರು ಎತ್ತಿತೋರಿಸಿದ್ದಾರೆ. ಬಸ್ಸಿನಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಕೀಟಲೆಗೆ ಪರಿಹಾರವಾಗಿ, ಅವರಿಗೆ ಪ್ರತ್ಯೇಕ ಜಾಗ ಒದಗಿಸುವಂತೆಯೂ ಅವರ ಜಾಗದಲ್ಲಿ ಕುಳಿತ ಗಂಡಸರನ್ನು ಅಲ್ಲಿಂದ ಎಬ್ಬಿಸುವ ಧೈರ್ಯ ನಿರ್ವಾಹಕರು ತೋರಬೇಕೆಂದೂ ಪತ್ರಿಕೆಗಳಿಗೆ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಸ್ತ್ರೀಯರೆಂದಲ್ಲ, ಪುರುಷರಲ್ಲೂ ಶೋಷಣೆಗೆ ಒಳಗಾಗುವ ಅದೆಷ್ಟೋ ಮಂದಿಯಿದ್ದಾರೆ. ಅವರನ್ನೂ ಬೆಂಬಲಿಸುವ ಕೆಲಸವನ್ನು ಕೂಡ ಮನೋರಮಾ ಭಟ್ಟರು ಮಾಡಿದ್ದಾರೆ. ಪೋಲಿಸರನ್ನು ಕರೆಯಲು ಬಳಸುವ ʻಪೇದೆʼ ಎಂಬ ಪದವನ್ನು ಕಡತದಿಂದಲೇ ಕಿತ್ತು ಹಾಕಬೇಕೆಂದು ಪೋಲಿಸ್ ಅಧಿಕಾರಿಗಳ ಮುಂದೆ, ಅವರ ಸಭೆಗಳಲ್ಲಿ ಪ್ರಬಲವಾಗಿ ವಾದಿಸಿದ್ದಾರೆ. ಉರ್ವಾ ಸ್ಟೋರಿನ ಎಲ್ಲ ಪೋಲಿಸರಿಗೆ ಅವರು ʻಅಮ್ಮʼನೇ ಆಗಿದ್ದರು. ನಿತ್ಯ ಅವರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿ, ಅವರು ಕೊಡುವ ಶುಂಠಿ ಜ್ಯೂಸನ್ನೋ ಮಜ್ಜಿಗೆಯನ್ನೋ ಕುಡಿದು ಹೊಟ್ಟೆಯ ಜೊತೆಗೆ ಮನಸ್ಸನ್ನೂ ತಂಪು ಮಾಡಿ ಬರುವ ಎಷ್ಟೋ ಮಂದಿ ಪೋಲಿಸರು ಅವರಿಗೆ ಮಕ್ಕಳಂತಿದ್ದರು. ಸಮಾಜದ ವಿವಿಧ ಅಂಕುಡೊಂಕುಗಳನ್ನು ಸರಿಪಡಿಸಲು ತನ್ನಿಂದಾದ ಅಳಿಲ ಸೇವೆಯನ್ನು ಕೊನೆಯ ಉಸಿರಿನ ತನಕವೂ ಸಲ್ಲಿಸುತ್ತ ಬಂದವರು ಮನೋರಮಾ ಎಂ.ಭಟ್ಟರು.
ಅವರ ಈ ಬಗೆಯ ಸಮಾಜಸೇವೆಯನ್ನು ಅವರ ಪತಿ ಮುಳಿಯ ಮಹಾಬಲ ಭಟ್ಟರು ಬೆಂಬಲಿಸುತ್ತಿದ್ದರು. ಭಟ್ಟರ ನಿಧನದ ಬಳಿಕ ಅಮೇರಿಕದಲ್ಲಿರುವ ಹಿರಿಯ ಮಗ ಜಯರಾಮ ಭಟ್‌ರ ಜೊತೆಗಾಗಲೀ ಬೆಂಗಳೂರಿನಲ್ಲಿರುವ ಕಿರಿಯ ಮಗ ಮಹೇಶ್ ಭಟ್‌ರ ಜೊತೆಗಾಗಲೀ ಹೋಗಿ ಇರುವಂತೆ ಮಕ್ಕಳು ಕೇಳಿಕೊಂಡರೂ ʻಮಂಗಳೂರೇ ತನ್ನ ಕಾರ್ಯಕ್ಷೇತ್ರ, ಬದುಕಿನ ಮುಸ್ಸಂಜೆಯಲ್ಲಿ ಎಲ್ಲೆಲ್ಲೋ ಹೋಗಿ ತಾನು ಏನೂ ಸಾಧಿಸುವುದಕ್ಕಿಲ್ಲʼ ಎಂಬ ಹಠವನ್ನೇ ಮುಂದುಮಾಡಿ ಜನರ ನಡುವೆಯೇ ಕಾಲ ಕಳೆದರು. ಕೊನೆಯ ಕೆಲ ವರ್ಷ ತನ್ನ ಒಂಟಿ ಬದುಕು ಕಷ್ಟವೆನಿಸಿದ ಬಳಿಕ ಮಂಗಳೂರಿನ ಹೊರವಲಯದ ಉಳಾಯಿಬೆಟ್ಟುವಿನ ʼಅವತಾರ್ʼ ಎಂಬ ಸಂಸ್ಥೆಯ ಮನೆಯೊಂದನ್ನು ಕೊಂಡುಕೊಂಡು ಅಲ್ಲಿಯೇ ಸಾಮುದಾಯಿಕ ಬದುಕನ್ನು ಕಂಡುಕೊಂಡರು.
ಕೊನೆಯ ತನಕ ತಾನೂ ಸ್ವತಂತ್ರವಾಗಿದ್ದು, ಸಮಾಜದ ಮಹಿಳೆಯರಲ್ಲಿ -ತಮ್ಮ ಬರಹದ ಮೂಲಕ, ಮಾತಿನ ಮೂಲಕ- ʻಸ್ವತಂತ್ರ ಮನೋಭಾವʼವವನ್ನು ಬಿತ್ತಿ ಬೆಳೆಸಿದ ೯೨ರ ಹರೆಯದ ಇವರು ನಡೆದ ದಾರಿಯನ್ನು ನಮಗೆ ಬಿಟ್ಟು ಮುಂದಕ್ಕೆ ಹೊರಟುಹೋದರು!
0 ಪ್ರತಿಕ್ರಿಯೆಗಳು