ಮಹಾಮನೆ ಅಂಕಣ – ಆಗ ಸಂಜೆಯಾಗಿತ್ತಾ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

15

ರಾಯರು ಬಂದರು ಮಾವನ ಮನೆಗೆ ಸಂಜೆಯಾಗಿತ್ತು…

ಮದುವೆಗಳು ಸ್ವರ್ಗದಲ್ಲಿ ಆಗುತ್ತವಂತೆ… ಹೌದಾ?

ಯಾರೇಳಿದ್ರೋಪ್ಪಾ… ನನಗಂತೂ ಗೊತ್ತಿಲ್ಲ…

ಇದು ಸತ್ಯವಾ…? ಹೌದಾ…?

ಸ್ವರ್ಗ ಅನ್ನುವುದು ಒಂದು ‘ಮಿಥ್’ ಅಲ್ಲವಾ…?

ಸ್ವರ್ಗವನ್ನು ನಾವ್ಯಾರೂ ಕಂಡಿಲ್ಲ. ಕೇಳಿದ್ದೇವೆ ಅಷ್ಟೇ… ಅಲ್ವೇ…? ಕಂಡಿರುವವರು ಅಲ್ಲಿಂದ ವಾಪಸ್ಸು ಬಂದಿದ್ದಾರೆ…? ಅದು ಗೊತ್ತಿಲ್ಲ… ಅದು ಹೇಗಿದೆಯೋ… ಎಲ್ಲಿದೆಯೋ… ಯಾವೂರ ದಾಸಯ್ಯನಿಗೆ ಗೊತ್ತು…?

ಆದರೆ ಮದುವೆಗಳು ಸ್ವರ್ಗದಲ್ಲಿ ಆಗುತ್ತವೆ ಅನ್ನುವ ಮಾತಂತೂ ರೂಢಿಯಲ್ಲಿವೆ… ಅಲ್ವಾ?

ಯಾಕೆ ರೂಢಿಯಲ್ಲಿದೆ…?

ಅಂದ್ರೇ…

‘ಸ್ವರ್ಗ…’ ಅನ್ನುವುದು ಒಂದು ಸುಂದರ ಕಲ್ಪನೆ
‘ಸ್ವರ್ಗ…’ ಅನ್ನುವುದು ಸುಖದ ಅರಮನೆ…
‘ಸ್ವರ್ಗ…’ ಅನ್ನುವುದು ನೆಮ್ಮದಿಯ ತಾಣ…
‘ಸ್ವರ್ಗ…’ ಅನ್ನುವುದು ಸುಕೋಮಲ ಭಾವ…
‘ಸ್ವರ್ಗ…’ ಅನ್ನುವುದು ಮದರಂಗಿ ತುಂಬಿದ ಮಾಯಾಲೋಕ…

ಸವಿಯ ಸಿಂಚನ… ಸಂತಸದ ಸೋನೆಮಳೆ…
ಸುಮಧುರ ಸವಿಗಾನ… ಸೊಗದ ಸಾಗರ…
ಲಲಲಾ… ಲಲಲಾ… ಮಧುರ… ಮಧುರಾ
ಹಾಹಾ… ಮಧುರ… ಮಧುರಾ… ಹಾಹಾ
ಲಲಲಾ ಲಲಿಲಾ… ಲಲಲಾ ಲಲಲಾ…

ಸ್ವರ್ಗ ಅಂದ್ರೇ ಇಷ್ಟೇ ರೀ… ಲಲಲಾ… ಲಲಲಾ…

ಅದೊಂದು ರೂಪವಿಲ್ಲದ… ಎಲ್ಲೆ ಇಲ್ಲದ ಮನೋತಾಣ…

ಅದೊಂದು ಕುರೂಪವಿಲ್ಲದ… ಸುರಸುಂದರ ಭಾವ ತಾಣ…

ಹಾಗಾಗಿ… ಆ ಸೀಮಾತೀತಾವಾದ… ಆ ಸುರಲೋಕವಾದ… ಆ ಸುಖದ ಬೀಡಾದ… ಆ ಸಿರಿಯ ನಾಡಾದ… ಆ ಸ್ವರ್ಗದಲ್ಲಿ ಮದುವೆಗಳು ಆಗುತ್ತವೆ… ಆಗಬೇಕು ಎಂಬುದು ಒಂದು ಆಶಯ… ಅಲ್ಲಿ… ಆ ತಾಣದಲ್ಲಿ ಮದುವೆಯಾಗಬೇಕು… ಎಂಬುದು ಎಲ್ಲರ ಕನಸು… ಹಾಗೆ ಮದುವೆಯಾದರೆ ದಾಂಪತ್ಯ ಸುಖಸಂತೋಷದಿಂದ ಇರುತ್ತದೆ. ಬಾಳು ಬೆಳಕಾಗುತ್ತದೆ. ಕುಡಿಹೊಡೆಯುತ್ತದೆ… ನಗು ಚೆಲ್ಲುತ್ತದೆ… ಅನ್ನುವ ನಂಬಿಕೆ.

ಮದುವೆಯ ಸಂಭ್ರಮವೆಲ್ಲ ಮುಗಿದು ಆ ನಂತರದ ಘಳಿಗೆ ಸನ್ನಿಹ ಬಂದಾಗ ಹುಣ್ಣಿಮೆಯ ಚಂದ್ರನು ಬೆಳದಿಂಗಳ ಬೆಳ್ಗೊಡೆಯನ್ನು ನಮಗಾಗೇ ಹಿಡಿದು ನಸುನಗೆ ಬೀರಿ ನಿಂತಿರುತ್ತಾನೆ. ನಂತರ ನವದಂಪತಿಗಳ ಸರಸಲ್ಲಾಪವ ಆಲಿಸಿ, ವೀಕ್ಷಿಸಲು ಬಾರದೆ ಸಭ್ಯತೆ ತೋರಿ ಆ ಬೆಳ್ಗೊಡೆಯನ್ನೇ ಮರೆ ಹಿಡಿದಾಗ… ಆ ನವದಂಪತಿಗಳ ಏಕಾಂತದ ತಾಣವೆಲ್ಲ ಕತ್ತಲಾಗುತ್ತದೆ… ಆಗ ಆ ಸ್ಥಳವೆಲ್ಲ ಅಗಣಿತ ತಾರೆಗಳ ಆಗಮನದಿಂದ ಆಲೋಕವೊಂದು-ತಾರಾಲೋಕವೊಂದು ಸೃಷ್ಟಿಯಾಗಿ ಆ ಇರ್ವರು ಸ್ವರ್ಗದಲ್ಲಿ ವಿಹರಿಸುತ್ತಿದ್ದೆವೇನೂ ಎಂಬ ಅವರ್ಣನೀಯ ಅವ್ಯಕ್ತ ಆನಂದಾನುಭವವಾಗಿ ಆ ಅನುಬಂಧದ… ಆ ಆಲಿಂಗನದಲ್ಲಿ ಲೀನವಾಗುವ… ಸತಿಪತಿಗಳು ಒಂದಾಗುವ… ಕೂಡಿ ಬಾಳಲು ಅಡಿ ಇಡುವ… ಪದಾರ್ಪಣೆ ಮಾಡುವ ತಾಣವಿದೆಯಲ್ಲಾ ಅದೇ ಸ್ವರ್ಗ ಕಣ್ರೀ… ಅದಕ್ಕೆ ಮದುವೆಗಳು ಸ್ವರ್ಗದಲ್ಲಿ ಆಗುತ್ತವೆ ಎಂದು ಹೇಳುವುದು… ಮತ್ಯಾವುದಕ್ಕೂ ಅಲ್ಲ… ತಿಳಿತಾ… ಆ ಮಾತಿನ ವಾಚ್ಯಾರ್ಥಕ್ಕೆ ಅರ್ಥ ಹುಡುಕಬಾರದು… ಭಾವಾರ್ಥಕ್ಕೆ ಬೆಲೆ ಕಟ್ಟಲಾಗದು… ತಿಳಿತಾ ಮಿತ್ರರೇ…

ಬನ್ನಿ ಗೆಳೆಯರೇ…. ನಾನು ನನ್ನ ಭಾವಿ ಪತ್ನಿ… ಆ ಮೆಳ್ಳಗಣ್ಣಿಯ ಮನೆಗೆ ಮದುವೆಗೆ ಮುಂಚೆಯೇ ಹೋಗಬೇಕಾದ ಸಂದರ್ಭದಲ್ಲಿ ನಡೆದ ಪ್ರಸಂಗವನ್ನು ಕೇಳುವಿರಂತೆ…

ಅದೇನು ಸಡಗರ… ಅದೇನು ಸಂಭ್ರಮ… ರೀ… ಭಾವಿ ಅಳಿಯ ಮನೆಗೆ ಬರುತ್ತಾನೆ ಎಂದು ತಿಳಿದಾಗ ಆತ ಮನೆಯೊಳಗೆ ಅಡಿ ಇಟ್ಟಾಗ ಆ ಆಧರಣೆ ಆ ಉಪಚಾರ… ಆ ಆತಿಥ್ಯ… ಗಿರಿಜಾ ಕಲ್ಯಾಣದ ಸಂದರ್ಭದಲ್ಲಿ ಇಂಥಾ ಸ್ವಾಗತ… ಆ ಶಿವನಿಗೂ ಸಿಕ್ಕಿರಲಿಲ್ಲವೇನೋ… ಇಂಥಾ ಸ್ವಾಗತ ಸೀತಾರಾಮ ಕಲ್ಯಾಣ ಮಹೋತ್ಸವದ ಮುನ್ನಾ ದಿನಗಳಲ್ಲಿ ಆ ಶ್ರೀರಾಮನಿಗೂ ಸಿಕ್ಕಿರಲಿಕ್ಕಿಲ್ಲ. ಬಿಡ್ರೀ… ಇಂತಹ ಆತಿಥ್ಯ ನನಗೆ ಸಿಕ್ಕಿತು ನೋಡ್ರಪ್ಪಾ…

ಅಂದು ಸೋಮವಾರ… ನಾನು ನನ್ನ ಭಾವಿ ಮಾನವ ಮನೆಗೆ ಹೋದೆ… ನಾನು ಇನ್ನೇನು ಆ ಮನೆಯ ತಡಿಕೆ ಗೇಟನ್ನು ತೆಗೆದುಕೊಂಡು ಹಜಾರಕ್ಕೆ ಕಾಲಿಡುತ್ತಿದ್ದಂತೆಯೇ ಅವರು ಸಾಕಿದ್ದ ನಾಯಿ ಬೊವ್‌ಬೊವ್ ಎಂದು ಅರುಚಾಡುತ್ತಾ… ಕೂಗಾಡುತ್ತಾ… ಕಿರುಚಾಡುತ್ತಾ ಎಂದು ಹೇಳುವುದಕ್ಕಿಂತ ʻನಾಯಿ ಭಾಷೆಯಲ್ಲಿ’ ಹೇಳುವುದಾದರೆ ʻಬೊಗಳುತ್ತಾ… ಅರ್ಭಟಿಸಿ… ನನ್ನ ನಾಲ್ಕಾರು ಬಾರಿ ಸುತ್ತಾಕಿ ನನ್ನ ಸೊಂಟದವರೆಗೂ ತನ್ನ ಎರಡೂ ಕಾಲುಗಳು ಹಾಕಿ ಎಗರಾಡತೊಡಗಿತು… ನಾನು ಒಂದೆಜ್ಜೆಯೂ ಮುಂದಡಿ ಇಡದಂತೆ ನನ್ನನ್ನು ನಿಲೆಯಾಕಿ ಬಿಟ್ಟಿತು.

ಆ ನಾಯ್ಮುಂಡೆದಕ್ಕೇನ್ರೀ ಗೊತ್ತು… ನಾನು ಆ ಮೆಳ್ಳಗಣ್ಣಿಯನ್ನು ಒರಿಸುವ ಬಂದಿರುವ ಪತಿರಾಯ ಎಂದು… ಆ ಮನೆಗೆ ಅಳಿಯನಾಗಿ ಬರುವ ವರ ಮಹಾಶಯ ನಾನೇ ಎಂದು…

ಅಲ್ಲಾ… ನನ್ನನ್ನು ಕಳ್ಳನ್‌ಥರ… ಟ್ರಿಟ್ ಮಾಡ್ತೆಲ್ರೀ… ನಾನೇನು ಅವರ ಮನೆಯಲ್ಲಿ ಕದಿಯೋಕ್ಕೆ ಹೋಗಿದ್ಯಾ ನೀವೇ ಹೇಳಿ… ಆ ಮೆಳ್ಳಗಣ್ಣಿಯ ಹೃದಯ ಕದ್ದಿದ್ದೇ… ಅದೇನೋ ನಿಜ… ಹಾಗಂತಾ ನಾನೇನು ಕಳ್ಳನಾ… ಒಂದು ಹಜ್ಜೆ ಮುಂದೆ ಇಡಕ್ಕೂ ಬಿಡ್ರಿಲ್ಲಾ… ನನಗೋ ನಾಯಿಗಳು ಅಂದ್ರೇ ತುಂಬಾ ಭಯಬೇರೆ. ಏಕೆಂದರೆ… ಚಿಕ್ಕಂದಿನಲ್ಲಿ ಮೂರು ಸರ್ತಿ ನಾಯಿಂದ ಕಚ್ಚಿಸಿಕೊಂಡಿದ್ದೆ… ಏಳು… ಹದಿನಾಲ್ಕು… ಇಪ್ಪತ್ತೊಂದು ಇಂಜೆಕ್ಷನ್… ಅದೂ ಹೊಕ್ಕಳದ ಸುತ್ತಾ… ಯಪ್ಪಾ ಶಿವನೇ… ಅಲ್ಲಾ ಅವೇನು ಸೂಜಿಯೋ… ದಬ್ಬಳವೋ… ಅಥವಾ ಈಟಿಯೋ… ಭರ್ಜಿಯೋ ಅಂತ ಆ ಡಾಕ್ಟರ್‌ಗಳು ಕೊಡುತ್ತಿದ್ದ ಇಂಜೆಕ್ಷನ್‌ಗಳು… ಭಯಾನಕ… ಭೀಭತ್ಸ… ಇದೆಲ್ಲಾ ಅನುಭವಿಸುವಾಗ ಆ ಇಂಜೆಕ್ಷನ್‌ಗಳಿಗಿಂತ ನಾಯಿಗಳ ಕಡಿತವೇ ಸಾವಿರ ಪಾಲು ವಾಸಿ ಅನ್ನಿಸಿಬಿಟ್ಟಿತ್ತು… ಆದರೂ ನಾಯಿಗಳ ಕೈಯಲ್ಲಿ ಕಡಿಸಿಕೊಳ್ಳೋವುದಿರುತ್ತಲ್ಲಾ ಅದಕ್ಕಿಂತ ʻನಾಯ್ಪಾಡು’ ಇನ್ನೊಂದು ಇರೋಲ್ಲ ಕಣ್ರೀ… ನನ್ನ ʻನಾಯ್ಪಾಡಿನ ಕತೆಯನ್ನು ಇನ್ನೊಮ್ಮೆ ಬೇರೆಲ್ಲಾದರೂ ಹೇಳುತ್ತೇನೆ… ಈಗ ಬೇಡ ಅದು… ಏನಂದ್ರೀ… ಇಲ್ಲೇ… ಈಗಲೇ ಹೇಳಿ ಅಂತೀರಾ… ಬೇಡ ಬೇಡ… ಕತೆಗಿಂತಾ ಉಪಕತೆಯೇ… ಊಟಕ್ಕಿಂತ ಉಪ್ಪಿನಕಾಯೇ ಹೆಚ್ಚು ರುಚಿಸಬಾರದು… ಆಗ ಕತಾ ಭೋಜನದ ಸವಿ ಇರೋಲ್ಲ… ರಸಾಭಾಸವಾಗುತ್ತೆ ಕಣ್ರೀ… ಹಾಗಾಗಿ ನನ್ನ ʻನಾಯ್ಪಾಡಿ’ನ ಕಥೆ ಇಲ್ಲಿ ಬೇಡ…

ನಾನು ಎಲ್ಲೇ ನಾಯ್‌ಗಳು ಕಾಣಲಿ… ಈ ನಾಯ್ಗಳ ಸಹವಾಸವೇ ಬೇಡ ಅಂತ ದೂರ ಸರಿದುಬಿಡುತ್ತೇನೆ… ʻBlade dogs…’ ʻಡೊಂಕೂ ಬಾಲದ ನಾಯಕ’ಕರು’…ಕುತ್ತೇಸ್… ಕುನ್ನೀಸ್… ಶ್ವಾನ ಮುಂಡೇವೂ…

ಅಲ್ಲಾ… ನಾನು ಮೊದಲ ಬಾರಿಗೆ ನನ್ನ ಭಾವಿ ಮಾನವ ಮನೆಗೆ ಹೋದಾಗ ಇಂತಹ ಸ್ವಾಗತ ಸಿಗಬೇಕೇನ್ರೀ… ಎಲ್ಲೂ ಓಡುವ ಆಗಿಲ್ಲ ನಾನು… ಕೂಗುವ ಆಗೂ ಇಲ್ಲ… ಕಿರುಚಾಡುವ ಆಗೂ ಇಲ್ಲ… ಎಂಥಾ ಪೀಕಲಾಟರೀ ಇದು… ನಾನು ಓಡಿದರೆ… ಇದೇನು ನಮ್ಮ ಅಳಿಯಂದಿರು ನಾಯಿಗೆ ಎದುರುಕೊಂಡು ಓಡ್ತಾ ಇದಾರೇ ಅಂದುಕೊಳ್ಳಲ್ಲಲ್ವಾ… ನಾನು ಓಡುವುದನ್ನು ಆ ಮಂದಿಯೆಲ್ಲಾ… ಆ ರೋಡಿನವರೆಲ್ಲಾ ಮೆರವಣಿಗೆಯನ್ನು ನಿಂತು ನೋಡುವಂತೆ ನನ್ನ ಓಟವನ್ನು ನೋಡಲ್ವಾ… ಎಂಥಾ ಪಜೀತಿರೀ ಇದು… ನನ್ನ ನಾದಿನಿಯರ ಮುಂದೆ ನನ್ನ ಕಥೆ ಏನಾಗಬೇಕು… ಆಮೇಲೆ ನಾನು ನಾಯಿಗೆ ಎದುರುಕೊಂಡು ಓಡಿಹೋದ ಸುದ್ದಿ ಬಣ್ಣ ಬಣ್ಣದ ರೆಕ್ಕೆ ಪುಕ್ಕನೆಲ್ಲಾ ಕಟ್ಟಿಕೊಂಡು ಆ ಮೆಳ್ಳಗಣ್ಣಿಗೂ ತಲುಪಿ… ಅವಳು ನಾನು ಸಾಯುವವರೆಗೋ ʻಹೆದರ್‌ಪುಕ್ಲಾ’ ಅಂತ ಆಗಾಗ ಹಂಗಿಸುತ್ತಾ… ನಮಗೆ ಹುಟ್ಟುವ ಮಕ್ಕಳಿಗೂ ನನ್ನ ʻನಾಯಿಕಥೆ’ಯನ್ನು ಹೇಳಿ ಅವರೂ ಸಮಯ ಸಿಕ್ಕಾಗಲೆಲ್ಲಾ ʻನಾಯ್‌ಪುಕ್ಲಾ… ಹೆದರಪುಕ್ಲಾ… ಹೆದರ್‌ಪುಕ್ಲಾ ನಾಯ್‌ಪುಕ್ಲಾ’ ಎಂದೆಲ್ಲಾ ಕಿಚಾಯಿಸಿದರೆ ಗತಿಯೇನ್ರೀ… ನನ್ನ ಮರ‍್ಯಾದೆ ಏನಾಗಬೇಕು… ನನ್ನ ಪ್ರೇಸ್ಟೀಜಸ್ ಕಥೆ ಏನು… ನೀವು ಲೆಕ್ಕಾಚಾರ ಮಾಡಿದಿರಾ ಗೆಳೆಯರೇ… ಅಲ್ವಾ… ನಾನು ನಾಯಿಗೆ ಹೆದರಿ ಓಡಿ ಹೋಗುವುದನ್ನು ನೀವೊಮ್ಮೆ ಇಮೇಜ್ ಮಾಡ್ಕೊಳ್ಳಿ… you think it.

ಅದಕ್ಕಾಗಿ ಆ ನಾಯ್ಮುಂಡೇದೂ ಎಷ್ಟು ಎಗರಾಡಿದರೂ ನಾನು ಸ್ತಂಭೀಭೂತನಾಗಿ… ಕಲ್ಲಿನ ಬಂಡೆ ತರ ಸುಮ್ಮನೆ ನಿಂತೇ ಇದ್ದೆ…. ಆದರೆ ಒಳಗೆ ಪುಕ ಪುಕ ಅನ್ನುತ್ತಿತ್ತು…. ಆ ಸಿರಂಜ್‌ಗಳು ನೆನಪಾದೆವು… ದೇಹವೆಲ್ಲಾ ತರಗುಟ್ಟುವುದಕ್ಕೆ ಶುರುವಾಯಿತು… ಆ ಇಂಜೆಕ್ಷನ್‌ಗಳು ಕಣ್ಮುಂದೆ ಮೆರವಣಿಗೆ ಬಂದೋ… ನಡುಕ… ಆ ನಾಯಿ ಬೇರೆ ಮೇಲೆ ಎಗರಿ ಎಗರಿ ಬೀಳುತ್ತಲೇ ಇದೆ… ಒಂದ್ಸರ್ತಿ… ಜಾಡ್ಸಿ ಒದ್ಬಿಡೋಣ ಅನ್ಸಿತು… ಆಮೇಲೆ ಆ ಶ್ವಾನ ಮುಂಡೆದು ಇನ್ನೂ ರಾಂಗ್ ಆದರೆ… ಬೇಡ ಅಂದಿತು ಮನಸ್ಸು… ಬಂದಿದೆಲ್ಲಾ ಬರಲಿ ಗಂಗೆಯ ದಯೆ ಇರಲಿ… ಸುಮ್ಮನೆ ತೆಪ್ಪಗಿರು ಎಂದು ಕೂಗಿ ಹೇಳಿದಾಂಗಾಯಿತು ಅಶರೀರವಾಣಿ…

ಅಯ್ಯೋ ಶಿವನೇ… ಕೂಗುವ ಆಗೂ ಇಲ್ಲ… ಕಿರುಚುವ ಆಗೂ ಇಲ್ಲ… ಓಡುವ ಆಗೂ ಇಲ್ಲ… ಮಾವನ ಮನೆ… ಮರ‍್ಯಾದೆ ಪ್ರಶ್ನೆ… ನಾನೇನೋ ಓಡದೆ ಅನ್ನಿ ಅದು ಅಟ್ಟಿಸಿಕೊಂಡು ಬಂದ್ರೇ… ಹಿಂಭಾಗದ ತೊಡೆಗೂ… ಅಥವಾ ‘ಅಲ್ಲಿಗೋ’ ಬಾಯಿ ಹಾಕಿಬಿಟ್ಟರೇ… ರೇ… ರೇ… ರೇ… ಯಪ್ಪಾ ಆ ಸಿರಂಜ್‌ಗಳು… ಆ ಇಂಜೆಕ್ಷನ್‌ಗಳು…

ಅದು ಹಾಳಗೋಗಲಿ… ‘ನಾಯಿಗೆ ಹೆದರುಕೊಂಡು ಓಡಿ ಹೋಗುವ ಹುಡುಗನಿಗೆ… ನನ್ನ ಮಗಳನ್ನು ಕೊಡಲ್ಲಾ’ ಅಂತ ನಮ್ಮ ಮಾವ ಅಂದ್ಬಿಟ್ಟರೇ… ರೇ ರೇ… ರೇ… ಅರೇ ಕ್ಯಾರೆ ಐಸಾ ಹೋಗಾ…

ಆ ಸಂದರ್ಭದಲ್ಲಿ ಆ ಮೆಳ್ಣಗಣ್ಣಿಯಾದರೂ ಮನೆಯ ಬಾಗಿಲು ತೆಗೆದುಕೊಂಡು ಬಂದು ನನ್ನ ಈ ದುಸ್ಥಿತಿಯಿಂದ… ಈ ದುರ್ಗತಿಯಿಂದ ಪಾರು ಮಾಡಬಾರದೇ ಅನ್ನಿಸಿತು…

ಅಂದು ಸೋಮವಾರ ಬೇರೆ… ಅವಳು ಅಲ್ಲೇ… ಆದಿವಾಲದಲ್ಲೇ ಇದ್ದಳು… ಇಲ್ಲಿ ಗಂಗೆಯ ಮನೆಯ ಮುಂದೆ ಶ್ವಾನದ ಎದುರು ನಾನು ಸ್ವಾಮಿ… ಸ್ವಾಮಿ ಮಹಾರಾಜ್… ‘The Greate’ ‘ಅಳಿಯ ದೇವರು’…

ರಾಯರು ಬಂದರು ಮಾನವ ಮನೆಗೆ ಸಂಜೆಯಾಗಿತ್ತು….
ಶ್ವಾನವು ಬಂದರು ಎದುರು ನಿಂದರೂ ಯಾರೂ ಬರಲಿಲ್ಲ…
ಪದುಮಳು ಒಳಗಿಲ್ಲ… ಪದುಮಳ ಬಳೆಗಳ ಸದ್ದಿಲ್ಲಾ…

ಶಿವನೇ… ಆಹಾ… ಸ್ವರ್ಗವೇ…!!!
ಸವಿಯ ಸಿಂಚನವೇ… ಸಂತಸದ ಸೋನೆ ಮಳೆಯೋ…
ಸೊಗದ ಸಾಗರವೇ… ಸುಮಧುರ ಸವಿಗಾನವೇ…
ಆಹಾ… ಹೋ ಹೋ…

ಲಲಲ… ಲಲಲಾ…. ಮಧುರ… ಮಧುರಾ
ಹಹಹ… ಮಧುರ… ಮಧುರಾ… ಹಹಹಾ
ಲಲಲಾ… ಲಲಲ… ಲಲಲಾ… ಲಲಲಾ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: