ಮಹಾಮನೆ ಅಂಕಣ – ಕುದಿವ ಕರಂಡಿಕೆಯಲ್ಲಿ ಅಗ್ನಿಜಲ…!!

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

16

ಡಾಲಿ… ಡಾಲಿ… ಏಯ್ ಡಾಲಿ… ಡಾಲಿ
ಆ ಮನೆಯ ತಲೆ ಬಾಗಿಲಿನಿಂದ ಹಾಗೂ ರಸ್ತೆಯ ಕಡೆಯಿಂದ ಡಾಲಿ ಡಾಲ ಎಂದು ಕರೆದ ಹಾಗಾಯಿತು…!

ಇದೇನಿದು… ಡಾಲಿ ಡಾಲಿ ಎಂದು ಯಾರನ್ನು ಕರೆಯುತ್ತಿರುವುದೋ… ಮದುವೆಗೆ ಮುಂಚೆಯೇ ಆ ಮೆಳ್ಳಗಣ್ಣಿ ನನ್ನ ʼಡಾರ್ಲಿಂಗ್ ಡಾರ್ಲಿಂಗ್’ ಎಂದು ಕರೆಯುತ್ತಿದ್ದಾಳಾ…!! ಡಾರ್ಲಿಂಗ್ ಡಾರ್ಲಿಂಗ್ ಎಂದು ಅನ್ನುವುದನ್ನು ಶಾರ್ಟಾಗಿ ಡಾಲಿ… ಡಾಲಿ ಎನ್ನುತ್ತಿದ್ದಾಳಾ…!!! ಅಲ್ಲಾ… ಮದುವೆ ಆಗುವ ಹುಡುಗನನ್ನು; ಮದುವೆಗೆ ಮುಂಚೆಯೇ ‘ಡಾರ್ಲಿಂಗ್’ ಅನ್ನುವಷ್ಟು ಹೈ-ಪೈ ಇದೆಯಾ ಈ ಹುಡುಗಿ… ಈ ಹುಡುಗಿ ನೋಡಿದರೆ… ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು… ನೆಲಮಂಗಲದ ಬಳಿಯ ಮೈಲಿನ ಹಳ್ಳಿಯಲ್ಲಿ ತನ್ನ ತಾತನ ಮನೆಯಲ್ಲಿ ಬಾಲ್ಯ ಕಳೆದವಳು… ಆ ಮೇಲೆ… ಬೆಂಗಳೂರಿನ ಶ್ರೀರಾಮಪುರ… ಪ್ರಕಾಶನಗರದ ಸುತ್ತಮುತ್ತಲ ಪರಿಸರದಲ್ಲಿ ಬೆಳೆದವಳು… ಶ್ರೀರಾಮಪುರದ ಕಾರ್ಪೊರೇಷನ್ ಹೈಸ್ಕೂಲಿನಲ್ಲಿ ಓದಿದ ಹುಡುಗಿ… ಕುರುಬರ ಹಳ್ಳಿಯಂತಾ ಅಪ್ಪಟ ಬೆಂಗಳೂರಿನಲ್ಲಿಯಾದ ಕುರುಬರ ಹಳ್ಳಿಯಲ್ಲಿ ವಾಸವಿರುವವಳು… ಇವಳ ಬಾಯಿಂದ ಮದುವೆಯಾಗಲಿರುವ ಹುಡುಗನನ್ನು… ಮದುವೆಗೆ ಮುಂಚೆಯೇ ‘ಡಾರ್ಲಿಂಗ್’ಎಂದು ಕರೆಯುವ ಹೈ-ಪೈ ಸಂಸ್ಕೃತಿ ಎಲ್ಲಿಂದ ಬಂದಿರಬೇಕು…!!!… ಸೋಜಿಗವಪ್ಪಾ….!!!

ಛೇ… ಛೇ… ಹಾಗಿರಲಾರದು… ನನ್ನದೆಲ್ಲೋ ಕಿವಿ ಮಂದವಾಗಿರಬೇಕು…

ಏಯ್ ಡಾಲಿ… ಏಯ್ ಡಾಲಿ… ಎಂಬ ಮತ್ತೆ ಅದೇ ಶಬ್ದ…. !!!

ಹೌದು ಡಾಲಿ ಅಂತಾನೇ ಕರೆದಿದ್ದು…!!! ನನ್ನ ಕಿವಿ ಸರಿಯಾಗೇ ಇದೇ…. ಯಾರು ಕರೆದಿದ್ದು… ಅವಳು ಮನೆಯಲ್ಲಿ ಇಲ್ಲಿ…. ಆ ಮೆಳಗಣ್ಣಿ ಆದಿವಾಲದಲ್ಲಿ ಇದ್ದಾಳೆ!!!….

ನೋಡಿ ಇವರೇ…. ‘ನಮ್ಮ ಮನದಲ್ಲಿ ಇರುವವರು ನಮ್ಮ ಮುಂದೆನೇ ಇರುತ್ತಾರೆ’ ಎನ್ನುವ ಮಾತಿದೆ… ಈ ಸ್ಥಿತಿ ಇದೆಯಲ್ಲ ಇದೊಂದು ಮನೋವ್ಯಾಪಾರ.

ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೇ ನಾನಾಗ

ವಾಸಂತಿ ನಲಿದಾಗ…
ಮನವೆರಡು ಬೆರೆತಾಗ…

ಹ್ಞಾಂ… ವಾಸಂತಿ ನಲಿದಾಗ…. ಮನೆವೆರಡು ಬೆರತಾಗ ಹೀಗೆ ಆಗುವುದು ಸಹಜ… ಕಣ್ಣು ಮುಂದೆ ಇಲ್ಲದಿದ್ದರೂ ಅವನು ಅಥವಾ ಅವಳು ಮುಂದೆ ನಿಂತಿದ್ದಾರೇನೂ… ಸನಿಹದಲ್ಲೇ ಇದ್ದಾರೇನೂ ಅನ್ನುವ… ಯಾರೇ ಕೂಗಿದರೂ… ಅವನೇ ಅಥವಾ ಅವಳೇ ಕೂಗುತ್ತಿದ್ದಾಳೆಯಾ ಅನ್ನುವ… ಯಾರದೋ ನಗುವಿನ ಶಬ್ದ ಬಂದರೂ ಅವನೇ ಅಥವಾ ಅವಳೇ ನಗುತ್ತಿದ್ದಾಳೆ ಅನ್ನುವ ಒಂದು ‘ಮನೋಲೋಕ’ ಸೃಷ್ಟಿಯಾಗುತ್ತಿಲ್ಲಾ ಅಥವಾ ‘ಭ್ರಮಲೋಕ’ ಅನ್ನುವ ಆಲೋಕ ಸೃಷ್ಟಿಯಾಗುತ್ತದಲ್ಲಾ ಅದೊಂದು ಮನೋವ್ಯಾಪಾರವೇ ಕಣ್ರೀ… ಇದೊಂದು ಮನಸ್ಸಿನ ಕ್ರಿಯೆ… ಭಾವಾಲೋಕದ ವಿಸ್ಮಯ… ಮನಸ್ಸಿನ ಸುಪ್ರಸ್ಥಿತಿಯಲ್ಲಿ ಯಾರಿರುತ್ತಾರೋ ಅವರೇ ಕಣ್ಮುಂದೆ ಬಂದಂತೆ… ಅವರೇ ಎದುರು ನಿಂತಂತೆ ಅವರೆ… ಅವರೇ…. ಅವರೇ… ಸುಪ್ತದೊಳಗಿನ ಬಿಂಬ… ಮನದೊಳಗಿನ ಮಮಕಾರದಿ ಯಾವುದೇ… ಆದಾವುದೇ ಶಬುದವೋ ತೇಲಿ ಬಂದರು ಮನದೊಳಗಿನ ಮಾಯೆಯಿಂದ ಸುಪ್ತದೊಳಗಿನ ಶಬುದ ಅಪ್ಯಾಯಮಾನವಾದ ಶಬುದವೇ ಆಗಿ ಕೇಳುತ್ತದಲ್ಲ ಅದೇ ಸುಪ್ತ ಶಬುದ…

ಈ ‘ಸುಪ್ತಬಿಂಬ’ ಹಾಗೂ ‘ಸುಪ್ತ ಶಬುದ’ ನಮ್ಮೊಳಗೆ ಸದಾ ಕಾಲವೂ ಇರುತ್ತದೆ… ಇರಬೇಕು… ಅದೊಂದು ಮಾಯಾಲೋಕವೇ? ಭ್ರಮಾಲೋಕವೇ…? ಅದು ಏನಾದಾರಾಗಲಿ ಅದು ನೀಡುವ ಅಪ್ಯಾಯಮಾನ… ಅದು ಸೃಷ್ಟಿಸುವ ಸೌಂದರ್ಯ ಅಮೋಘವಾದದ್ದು… ಅದ್ಭುತವಾದದ್ದು…

ಎಲ್ಲೆಲ್ಲಿ ನೋಡಲಿ ಅವಳನ್ನೇ ಕಾಣುವೇ….
ಕಣ್ಣಲ್ಲಿ ತುಂಬಿರುವೆ ಮನದಲ್ಲಿ ಮನೆ ಮಾಡಿ ಹಾಡುವೆ…
ಅವಳನ್ನೇ ಕಾಣುವೆ…

ಡಾಲಿ… ಡಾಲಿ ಎಂದು ಕರೆದದ್ದು ಅವಳಲ್ಲ… ಆ ಮೆಳ್ಳಗಣ್ಣಿಯೂ ಅಲ್ಲ… ಅವಳು ಅಲ್ಲವೇ ಅಲ್ಲ…

ಡಾರ್ಲಿಂಗ್… ಆ ಡಾರ್ಲಿಂಗ್…. ಎಂದೂ ಯಾರೂ ಕರೆಯಲೂ ಇಲ್ಲ… ಈ ಮೆಳ್ಳಗಣ್ಣಿಯಂತೂ ಹಾಗೆ ಕರದೇ ಇಲ್ಲ… ಅವಳು ಹಾಗೆ ಕರೆಯಲು ಸಾಧ್ಯವೇ ಇಲ್ಲ… ಏಕೆಂದರೆ ಅವಳು ಬೆಂಗಳೂರಿನ ಕುರುಬರಹಳ್ಳಿಯ ಆ ಮನೆಯಲ್ಲಿ ಇರಲೇ ಇಲ್ಲ… ಅಲ್ಲಿರುವವಳು ನನ್ನ ಹಾಗೆ… ಅದೂ ‘ಡಾರ್ಲಿಂಗ್’ ಅಂತ ಕರೆಯುವುದಕ್ಕೆ ಆಗುತ್ತದೇನ್ರೀ… ನೀವೇ ಯೋಚನೆ ಮಾಡಿ… ಸಾಧ್ಯವಿಲ್ಲವೇ ಅಲ್ವಾ….

ನನ್ನೆದರು…

ಅವಳು ಒಂದು ನಿಲ್ಲಲೂ ಇಲ್ಲ.
ನಿಂತು ಅವಳು ನಗಲೂ ಇಲ್ಲ.
ನಕ್ಕು ಅವಳು ಸೆಳೆಯಲೂ ಇಲ್ಲ…

ಆದರೆ ಎಲ್ಲವೂ ಸಂಭವಿಸಿತ್ತು… ಎಲ್ಲವೂ ಆಗಿತ್ತು… ಎಲ್ಲವೂ ಘಟಿಸಿತ್ತು.
ಅವಳು ನಿಂತ್ಹಾಗೆ… ನಕ್ಹಾಗೆ… ಅವಳು ನನ್ನ ಸೆಳೆವ ಹಾಗೆ ಎಲ್ಲವೂ ಆಗಿತ್ತು ಅಂತೀನಿ…
ಏಕೆಂದರೆ ಅವಳು ನನ್ನೊಳಗಿದ್ದಳು…

ನನ್ನ ಮನದಲ್ಲಿ ಮೊಗಾಗ್ಗಿದಳು.
ಆ ಮೊಗ್ಗು ಅರಳಿ ಸಮಯ ಬಂದಾಗೆಲ್ಲ ಕಂಪ ಸೂಸುತ್ತಿತ್ತು…

ಯಾರೇ ನನ್ನ ಬಂದು ನನ್ನ ಎದುರು ನಿಂತರೂ ಅವಳೇ ನಿಂತ್ಹಾಗೆ

ಯಾರೇ ನನ್ನೆದುರು ನಿಂತು ನಕ್ಕರೂ ಅವಳೇ ನಕ್ಕ ಹಾಗೆ.

ಆ ನಿಲುವು… ಆ ನಗು… ನನ್ನ ಸೆಳೆದಿತ್ತು… ನನ್ನ ಮನದೊಳಗೆ ಇಳಿದಿತ್ತು… ಇಳಿದು ತಿಳಿ ಬಣ್ಣಗಳಾಗಿ ಮೋಹಕ ಚಿತ್ರಗಳಾಗಿ ನನ್ನ ಸೆರೆ ಹಿಡಿದಿತ್ತು… ಆ ಬಣ್ಣ ಬಣ್ಣದ ಚಿತ್ರಗಳಿಗೆ ನಾನು ಸೋತಿದ್ದೆ…

ಅಲ್ರೀ…. ವಾಸಂತಿ ನಲಿದಾಗ… ಮನವೆರಡು ಬೆರೆತಾಗ ಅನುರಾಗ ಅರಳಲ್ವೇನ್ರೀ…

ಅನುರಾಗ ಅರಳಿದಾಗ ಹೀಗೆಯೇ ಆಗುವುದು… ಗೊತ್ತಾ…

ನನ್ನೊಳಗೆ ಇಳಿದಿದ್ದ ಆ ಮೆಳ್ಳಗಣ್ಣಿಯ ದನಿಯು… ನನ್ನ ಅಂತರಂಗದ ‘ಸುಪ್ತದನಿ’ಯಾಗಿ ಮಾರ್ಪಟ್ಟು ಡಾಲಿ… ಡಾಲಿ ಎಂಬ ಶಬುದವೋ ‘ಡಾರ್ಲಿಂಗ್… ಡಾರ್ಲಿಂಗ್’ ಎಂದು ಮಾರ್ಪಟ್ಟು ನನ್ನ ಕಿವಿಯಾಲಿಗಳನ್ನು ತಲುಪಿತ್ತು…

‘ಶಬ್ದ’ ಮೊದಲು ಆಮೇಲೆ ‘ದೃಶ್ಯ’ ಅಂತಾರೆ ತಿಳಿದವರು…

ಆ ಶಬ್ದವೇ ಅವಳಾಗಿದ್ದಳು… ಅವಳೇ ಆ ಶಬ್ದವಾಗಿದ್ದಳು…
ಆ ಶಬ್ದವೇ ದೃಶ್ಯವು ಆಗಿತ್ತು…

ಹಾಗಾಗಿ… ‘ಡಾಲಿ… ಡಾಲಿ… ಎಂದು ಕರೆದವರಾರೆಂಬುದು ನನಗೆ ಕಾಣಲೇ ಇಲ್ಲ… ಕರೆದವರು ಯಾರೆಂದರೆ ಅವಳೇ… ಆ ಮೆಳ್ಳಗಣ್ಣಿಯೇ ಎಂದು ಭಾವಿಸಿದ್ದೇ… ನಿಂತಾಗ… ನುಡಿದಾಗ… ನಕ್ಕಾಗಲೆಲ್ಲ ಅವಳೆ… ಅವಳೇ…. ಅವಳೇ… ಸುಪ್ತಬಿಂಬ… ಸುಪ್ತ ಶಬುದ… ಎಲ್ಲವೂ ಅವಳೇ.

ಬಾನಲು ಅವಳೆ…. ಭುವಿಯಲ್ಲೂ ಅವಳೇ….
ಎಲ್ಲೆಲ್ಲೂ ಅವಳೇ…. ನನ್ನಲ್ಲೂ ಅವಳೇ…

ಚರಾಚರವೂ ಅವಳೇ ಆಗಿರಬೇಕಾದರೆ… ಅದೂ ಮದುವೆಯಾಗುವ ಬೆಡಗಿಯೇ ಮನವನ್ನೆಲ್ಲಾ ಆವರಿಸಿಕೊಂಡಿರಬೇಕಾದರೆ… ಯಾರು ಬಂದು ನಿಂತರೂ ಅವಳೇ ಕಾಣ್ತಾ ಇರುತ್ತಾಳೆ ಅಲ್ಲೇನ್ರಿ… ಡಾಲಿ… ಡಾಲಿ ಎಂಬುದು ಡಾರ್ಲಿಂಗ್… ಡಾರ್ಲಿಂಗ್ ಎಂದು ಕೇಳಿಸದೇ ಇನ್ನೇನು ಮಾಡುತ್ತೇ ಇನ್ಹೇಗೆ ಕೇಳಿಸುತ್ತೆ ಹೇಳ್ರಪ್ಪಾ….

ಹರೆಯದಲ್ಲಿ…. ಯೌವ್ವನದಲ್ಲಿ ಮನ ಏನನ್ನೋ ಅನುರಣಿಸುತ್ತಾ ಇರುತ್ತೆ… ಕಿವಿ ಸವಿಯನ್ನೇ ಆಲಿಸುತ್ತಾ ಇರುತ್ತೆ… ಇನ್ನು ಮದುವೆಯ ಸಂರ‍್ಭದಲ್ಲಂತೂ ಹುಡುಗ-ಹುಡುಗಿ ಕತೆ ಏನಾಗಿರಲ್ಲ ಹೇಳಿ…

ಈ ಲೋಕವೆಲ್ಲಾ ಅವಳೇ ಇರುವ ಪ್ರೇಮಾ ಮಂದಿರಾ…!!!
ಎಲ್ಲೆಲ್ಲೋ ಅವನೇ ಕಾಣುವ ಜಗವೇ ಸುಂದರಾ….!!!
ಆ ಗಳಿಗೆಯಲ್ಲಿ ನನಗೆ ಹಾಗಾಯಿತು ಕಣ್ರೀ…!
‘ಡಾಲಿ’ ಎಂದು ಕರೆದವಳು ಅವಳಾಗಿರಲಿಲ್ಲ…!!
‘ಡಾರ್ಲಿಂಗ್’ ಎಂದೇನೂ ಯಾರೂ ಕರೆದಿರಲಿಲ್ಲ!!
ಅವಳು ಆ ಮೆಳ್ಳಗಣ್ಣಿ ಅಲ್ಲಿರಲೇ ಇಲ್ಲ!!!!

ಆಗ ಆಗಿದ್ದೇ ಬೇರೆ…!!!!

‘ಡಾಲಿ’ ಆ ನಾಯಿಯ ಹೆಸರು…!!!!!

‘ಡಾಲಿ… ಡಾಲಿ’ ಎಂದು ಕರೆದದ್ದು ನನ್ನ ನಾದಿನಿಯಾಗುವವಳಿದ್ದ ‘ರೇಣುಕಾ’ ಮುಂಬಾಗಿಲಿಂದ ಬಂದವಳು… ‘ಡಾಲಿ… ಏಯ್ ಡಾಲಿ’ ಎಂದು ಕರೆದದ್ದು… ಆ ಮೆಳ್ಳಗಣ್ಣಿಯ ಇನ್ನೊಬ್ಬಳು ತಂಗಿ ‘ಪ್ರೇಮ’ ಮೀನುಗಾರಿಕೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದವಳು… ಆ ಮನೆಗೆ ಹಾಕಿದ್ದ ಬೇಲಿಯ ತಡಿಕೆʼ ತೆಗೆದು ಹಜಾರದೊಳಗೆ ಪ್ರವೇಶಿಸಿ ನನ್ನ ಹಿಂಬದಿ ನಿಂತಿದ್ದ ‘ಪ್ರೇಮಕುಮಾರಿ’… ನನ್ನ ಅವಸ್ಥೆಯನ್ನು ಕಂಡು… ನನ್ನ ನಾಯ್ಪಾಡನ್ನು ನೋಡಿ… ಆ ನಾಯಿ ಮುಂಡೇದು… ಆ ಡಾಲಿಯು ನನ್ನ ಮೇಲೆ ಎಗರಿ ನಿಂತಿದ್ದನ್ನು ವೀಕ್ಷಿಸಿ… ಕೋಪಗೊಂಡು ‘ಡಾಲಿ… ಡಾಲಿ… ಏಯ್ ಡಾಲಿ’ ಎಂದು ಕೂಗಿದ್ದರು ಅವರು…

‘ಡಾಲಿ’ ಎಂಬ ಶಬುದವೇ ‘ಡಾರ್ಲಿಂಗ್’ ಎಂದು ಕೇಳಿಸಿತ್ತು ಕಣ್ರಪ್ಪಾ.

‘ಡಾಲಿ’ ಹೋಗಿ ‘ಡಾರ್ಲಿಂಗ್ಗ್’ ಆಯ್ತು ಡುಂಡುಂ… ಅಷ್ಟೇ

ಮಧುರ… ಮಧುರಾ
ಲಲಲ… ಲಲಲಾ
ಡಾಲಿ… ಡಾಲೀ
ಲಲಲ… ಲಲಲಾ
ಡಾರ್ಲಿಂಗ್… ಡಾರ್ಲಿಂಗ್
ಮಧುರ… ಮಧುರಾ…

ಆ ಇಬ್ಬರೂ ನನ್ನನ್ನು ಆ ಡಾಲಿ ಎಂಬ ನಾಯ್ಮುಂಡೇದರಿಂದ ಕಾಪಾಡಿದ್ದರು. ಆ ಇಬ್ಬರು ಬಾಲಕಿಯರ ಬಾಯಿ ಚೋರಿಗೆ ಆ ನಾಯಿ ಕುಯ್ ಗುಟ್ಟುತ್ತಾ ಬಾಲ ಮುದುರಿಕೊಂಡು ಮೂಲೆ ಸೇರಿತ್ತು…

ಆ ಶ್ವಾನ ಮಹಾರಾಜರು ತೆಪ್ಪಗಾಗಿದ್ದರು…
ಸದ್ಯ ನಾನು ಬಚಾವಾಗಿದ್ದೆ…

ಆ ನಾಯಿಯಿಂದ ತಪ್ಪಿಸಿಕೊಂಡು ಈ ಇಬ್ಬರು ನಾದಿನಿಯರ ಕೈಯಲ್ಲಿ ಸಿಕ್ಕಿಹಾಕಿಕೊಂಡೆ…

ಆ ನಾಯಿಯದು ಕೋಪೋದ್ರೇಕದ ಸ್ವಾಗತವಾದರೆ…

ಈ ನಾದಿನಿಯರದು ಪ್ರೀತ್ಯಾದರದ ಸ್ವಾಗತ…

ಒಬ್ಬಳು ಕಾಲಿಗೆ ಬಿಸಿನೀರು ಕೊಟ್ಟರೆ…

ಮತ್ತೊಬ್ಬಳ ಮನೆಯೊಳಗೋಡಿ ಟವೆಲ್ ತಂದುಕೊಟ್ಟಳು…

ಬಿಸಿನೀರು ಬೇಕಮ್ಮ ಎಂದೆ…

ಆಗಲಿ ಬಾವಾ ಕಾಯಿಸಿ ತರುತ್ತೇನೆ ಎಂದು ಕಿರಿಯವಳು ಒಳ ಹೋದಳು.

ಒಬ್ಬಳು ಕಾಫಿ ನಾ ಟೀ ನಾ ಎಂದರೆ…

ಮತ್ತೊಬ್ಬಳು ತಿಂಡಿ ಏನ್ಮಾಡ್ಲಿ ಬಾವಾ ಎಂದಳು…

ಕುಡಿಯಲು ನೀರು ಕೊಡಮ್ಮ ಎನ್ನುತ್ತಾ ಬಸಿನೀರು ಬೇಕಮ್ಮ ಎಂದೆ.

ಎಲ್ಲಮ್ಮಾ ಅಪ್ಪ-ಅಮ್ಮ ಇಲ್ವಲ್ಲಾ ಎಂದು ಹಿರಿಯವಳನ್ನು ಕೇಳಿದೆ…

ಅವರು ಅಜ್ಜಿನ ಕರ‍್ಕೊಂಡು ಬರಕ್ಕೇ ಅಂತಾ ಮೈಲನಹಳ್ಳಿಗೆ ಬೆಳಗ್ಗೆಯೇ ಹೋಗಿದ್ದಾರೆ ಎಂದಳು ಹಿರಿಯವಳು. ಒಳಮನೆಯಿಂದಲೇ ಇನ್ನೇನು ಬರುತ್ತಾರೆ ಎಂದಳು ಕಿರಿಯವಳು.

ಹೋ… ಅದದ್ಕೇ ಮನೆ ಬಾಗಿಲು ಹಾಕಿಕೊಂಡು ಮಲಗಿಬಿಟ್ಟಿದ್ದೇನಮ್ಮ ಎಂದಿದ್ದಕ್ಕೆ ಕಿರಿಯವಳು ಕಿಲಕಿಲ ನಕ್ಕಿದ್ದು ಕೇಳಿಸಿತು.

ಏನೇ ಇಷ್ಟೊತ್ತನಲ್ಲಿ ಮಲಗುವಂತಾದ್ದು ಏನಾಗಿತ್ತು ನಿನಗೆ… ಎಂದು ಹಿರಿಯವಳು ಕೋಪ ತೋರಿದಳು… ‘ನೀನು ಬಾಗಿಲು ತೆಗೆದು ಮನೆಯೊಳಗೆ ಎಚ್ಚರದಿಂದ್ದರೆ ಬಾವಾ ಬಂದಿದ್ದು ಗೊತ್ತಾಗುತ್ತಿತ್ತು… ಆ ಡಾಲಿ ಬೊಗುಳ್ತಾ ಬಾವನನ್ನು ನಿಲೆಹಾಕಿ ಬೊಬ್ಬೆ ಹಾಕುತ್ತಿದ್ದದ್ದೂ ಕೇಳಿಸಿದಂತೆ ಮಲಗಿದ್ದೆಲ್ಲಾ… ಅಂದೆಂತಾ ನಿದ್ದೇನೇ ನಿಂದು’ ಎಂದು ಜೋರು ಮಾಡಿದಳು ಹಿರಿಯವಳು.

ಅಷ್ಟರಲ್ಲಿ ಊರಿಗೆ ಹೋಗಿದ್ದ ಯಜಮಾನರು… ಯಜಮಾನತಿ ಹಾಗೂ ಆ ಅಜ್ಜಿ ಆಟೋದಿಂದ ಇಳಿದರು…

ಆ ಯಜುಮಾನತಿ ನನ್ನನ್ನು ಕಂಡು ವರ್ಷದ ಹೊಳೆಯನ್ನೇ ಹರಿಸಿದರು… ಆ ಅಜ್ಜಿಗೆ ನನ್ನ ಪರಿಚಯಿಸಿದರು… ಯಜಮಾನರು ನನ್ನ ಯೋಗಕ್ಷೇಮ ವಿಚಾರಿಸಿದರು… ಮನೆಕಡೆಯಲ್ಲಾ ಸೌಖ್ಯವೇ ಎಂದುಕೇಳಿದರು…

ಒಳಮನೆಯಿಂದ ಬಂದ ಕಿರಿಯವಳು ಬಿಸಿನೀರ ಲೋಟವನ್ನು ನನ್ನ ಮುಂದಿದ್ದ ಟೀಪಾಯಿಯ ಮೇಲಿಟ್ಟಳು…

ಬಿಸಿನೀರಿದ್ದ ಲೋಟಕ್ಕೆ ಕೈ ಹಾಕಿದೆ…
ಆ ಲೋಟವನ್ನು ಮುಟ್ಟಿ… ತುಟಿಗಿಟ್ಟೆ…
ನನ್ನ ದೇಹವೆಲ್ಲಾ ಅದುರಿ ಹೋಯಿತು.
ಕುದಿವ ಕರಂಡಿಕೆಯಲ್ಲಿ ಅಗ್ನಿಜಲ…!!
ಗಣಗಣಗುಡುವ ಗಂಗೆ…!!!

ಜಮದಗ್ನಿಯ ಸತಿಯಲ್ಲವೇ ಆ ರೇಣುಕಾ…
ಅದಕ್ಕೇ ಏನೋ ಪೂರ್ವ ಜನ್ಮದ ವಾಸನೆ ಹೋಗಿರಲಿಲ್ಲ. ಅಂತಾ ಕಾಣುತ್ತೆ…
ಜಲದಗ್ನಿಯನ್ನೇ ನನ್ನ ಮುಂದಿರಿಸಿದ್ದಳು ಈ ರೇಣುಕಾ…

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: