ಮಹಾಮನೆ ಅಂಕಣ – ಕಲ್ಯಾಣವೆನ್ನೀರೀ ಕಾರುಣ್ಯ ಮೂರ್ತಿಗೆ – ಕಲ್ಯಾಣವೆನ್ನೀ ಜಗವೆಲ್ಲಾ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

25

ಮದುವೆ ದಿನ ನಿಗದಿಯಾಗಿತ್ತು… ಅಂದೇ ಲಗ್ನ ಕಟ್ಟಿಸುವುದೆಂತಲೂ ಮಾತಾಗಿತ್ತು. ಲಗ್ನ ಕಟ್ಟಿಸುವುದಕ್ಕೇ ಒಂದು ದಿನ ನಿಗದಿ ಮಾಡುವುದು ಬೇಡ… ಅದಕ್ಕೆ ಪ್ರತ್ಯೇಕವಾಗಿ ಛತ್ರ ಬುಕ್ ಮಾಡಬೇಕು. ನೆಂಟರಿಷ್ಟರನ್ನು ಆಹ್ವಾನಿಸಬೇಕು… ಆದಾರ ಅತಿಥ್ಯಗಳು ಸಾಂಗವಾಗಿ ನಡೆಯಬೇಕು… ಅದಕ್ಕೇ ಅಂತಲೇ ಓಡಾಡಬೇಕು… ಮತ್ತೆ ಹೆಚ್ಚಿನ ಖರ್ಚು ಇವ್ಯಾವೋ ಬೇಡವೆಂದು ಮದುವೆಯ ದಿನವೇ ಲಗ್ನ ಕಟ್ಟಿಸಿ… ಮದುವೆಯ ಶಾಸ್ತ್ರಗಳನ್ನು ಮಾಡುವುದೆಂದು ತೀರ್ಮಾನಿಸಿದ್ದರಿಂದ ಲಗ್ನ ಕಟ್ಟಿಸುವ ಶಾಸ್ತ್ರವನ್ನು ಅಂದೇ ಇಟ್ಟುಕೊಳ್ಳಲಾಯಿತು. ಮದುವೆಯ ಛತ್ರಗಳಿಗಾಗಿ ಹುಡುಕಾಟ ನಡೆಸಲಾಯಿತು.

ಈಗಿನಂತೆ ಆಗೇನು ಗೂಗಲ್ ಸರ್ಚ್ ಇರಲಿಲ್ಲ. ಆನ್‌ಲೈನ್ ವಿಚಾರಣೆಯೂ… ಬುಕ್ಕಿಂಗೂ ಇರಲಿಲ್ಲ ಹಾಗಾಗಿ ಸಾಂಪ್ರದಾಯಿಕ ರೀತಿಯಲ್ಲೇ… ಗೆಳೆಯರು… ಬಂಧುಗಳು… ಮದುವೆ ಬ್ರೋಕರ್‌ಗಳು ಅವರಿವರನ್ನು ಛತ್ರಗಳಿಗಾಗಿ ವಿಚಾರಿಸಲಾಯಿತು. ಎಲ್ಲಿ ಯಾವ ಛತ್ರ ಖಾಲಿ ಇದೆ… ಏನೇನು ಅನುಕೂಲಗಳಿದೆ… ಇವೆಲ್ಲವನ್ನೂ ಆಯಾ ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಬೇಕಾಗಿತ್ತು. ಫೋನು ಮಾಡಲು ಅಂತಹ ಅನುಕೂಲವೇನೂ ಇರಲಿಲ್ಲ. ಕೆಲವು ಛತ್ರಗಳಿಗೆ ಹಾಗೂ ದೊಡ್ಡ ದೊಡ್ಡ ಛತ್ರಗಳಲ್ಲಿ ಮಾತ್ರ ಲ್ಯಾಂಡ್ ಫೋನ್ ಇದ್ದ ಕಾಲ… ಈಗಿನಂತೆ ಅತ್ಯಾಧುನಿಕವಾದ ಚೌಲ್ಟ್ರಿಗಳೇನಲ್ಲ ಆಗ ಇದ್ದವು… ಈಗೇನ್ರೀ ಎಕರೆಗಟ್ಲೆ ಜಾಗದಲ್ಲಿ ಚೌಲ್ಟ್ರಿ ಎಂಬ ಇಂದ್ರನರಮನೆಯನ್ನೇ ನಿರ್ಮಾಣ ಮಾಡಿರುತ್ತಾರೆ… ಅಥವಾ ಇನ್ನೂ ಶ್ರೀಮಂತರು… ಕೋಟ್ಯಾಧಿಪತಿಗಳು ಅರಮನೆ ಮೈದಾನದಲ್ಲೋ ಅಥವಾ ನಗರ ಹೊರವಲಯದ ಬಹುವಿಸ್ತೀರ್ಣದ ಜಾಗಗಳಲ್ಲೋ… ರೇಸಾರ್ಟ್ಗಳಲ್ಲೋ… ಮದುವೆಗಳನ್ನು ಮಾಡುವವರಿದ್ದಾರೆ… ಮದುವೆ ಮಾಡಿಸಲೆಂದೇ ಏಜೆನ್ಸಿಗಳು ಹುಟ್ಟಿಕೊಂಡಿದ್ದಾವೆ… ಮ್ಯಾರೇಜ್ ಬ್ಯೂರೋಗಳು… ಮ್ಯಾಟ್ರಿಮೋನಿ ಇವೆಂಟ್ ಕಂಪನಿಗಳು… ಹಿಂಗೆ ಏನೇನು ಕಣ್ರೀ… ಮದುವೆ ಆಗುವುದು ಹೆಣ್ಣು ಮತ್ತು ಗಂಡಿನ ನಡುವೇ ಆದರೂ ಅದರ ತಯಾರಿ ಕ್ರಿಯಾವಿಧಾನಗಳು… ಸ್ಥಳಗಳು… ಅದು ಆಗುವ ಪರಿ ಈ ಎಲ್ಲವೋ ಜಾತಿ, ವರ್ಗಗಳ ಮೇಲೆ ಅವಲಂಬಿತವಾಗಿದೆ ಈಗ… ಹಾಗಾಗಿ ಎಲ್ಲಿ… ಹೇಗೆ ಮದುವೆ ಮಾಡುತ್ತೇವೆ ಎಂಬುದು ಒಂದು ಸ್ಟೇಟಸ್ ಆಗಿದೆ… ಮದುವೆ ಎಂಬುದು ವ್ಯವಹಾರವೂ ಆಗಿದೆ… ಆಡಂಬರವೂ ಆಗಿದೆ ರೀ…

ನಾನು ಮದುವೆ ಆದಾಗ ಇಂತಹ ಕ್ರಮ ಅಷ್ಟಾಗಿ ಇರಲಿಲ್ಲ… ಎಲ್ಲೋ ಅಲ್ಲೋ… ಇಲ್ಲೋ ಕೆಲವು ಮದುವೆಗಳು… ಅಥವಾ ಶ್ರೀಮಂತರ ಮದುವೆಗಳು ಬಹಳ ವೈಭವದಿಂದ ಕೂಡಿರುತ್ತಿದ್ದವು. ಮಧ್ಯಮವರ್ಗದ ನಮ್ಮಂತವರ ಮದುವೆಗಳು ಛತ್ರಗಳಲ್ಲಿ ಮದುವೆ ಮಾಡಲು ಪ್ರಾರಂಭಿಸಿದ್ದ ದಿನಗಳು. ಇನ್ನು ಹಳ್ಳಿಗಾಡಿನ ಅಥವಾ ಸಾಮಾಜಿಕವಾಗಿ… ಆರ್ಥಿಕವಾಗಿ ಕೆಳಹಂತದಲ್ಲಿದ್ದ ಕುಟುಂಬದ ಮದುವೆಗಳು ಹಟ್ಟಿ ಮುಂದೆಯೂ… ಮನೆಯ ಮುಂದೆಯೂ ಚಪ್ಪರ ಹಾಕಿ ಅಲ್ಲೇ ಮದುವೆ ಮಾಡುತ್ತಿದ್ದನ್ನು ನಾನೂ ಕಂಡಿದ್ದೇನೆ. ಊರಿನ ಯಾವುದೋ ಕುಟುಂಬದಲ್ಲಿ ಒಂದು ಮದುವೆ ಆಗುತ್ತದೆ ಎಂದರೆ ಆ ಊರಿನವರೆಲ್ಲರೂ ಮದುವೆಯ ಬೇರೆ ಬೇರೆ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರೂ… ಊರಿನ ಪ್ರತಿಯೊಬ್ಬರೂ ಸಹ ಹೆಗಲು ಕೊಡುತ್ತಿದ್ದರು… ಮದುವೆ ಎಂಬುದು ಸಮುದಾಯದ ಕಲ್ಯಾಣದ ಕಾಯಕವಾಗಿತ್ತು… ಆದರೆ ಇಂದು ಆ ವಾತಾವರಣ… ಆ ಮನೋಭಾವ ಇಲ್ಲವಾಗಿದೆ… ಆ ಜಾಗಗಳನ್ನು ವ್ಯವಹಾರ ಆಕ್ರಮಿಸಿಕೊಂಡಿದೆ. ಹಳ್ಳಿಗಳಲ್ಲೂ ಈಗ ಮದುವೆ ಛತ್ರಗಳು ಬಂದುಬಿಟ್ಟಿವೆ… ಹಟ್ಟಿಯ ಮುಂದೆಯೋ ಮನೆಯ ಪಡಸಾಲೆಯಲ್ಲೋ ಮದುವೆಗಳನ್ನು ಮಾಡುತ್ತಿದ್ದ ಕಾಲ ಹಿಂದೆ ಸರಿದಿದೆ. ಮಠ ಮಾನ್ಯಗಳಲ್ಲೂ ದೇವಾಲಯಗಳ ಸರಹದ್ದಿನಲ್ಲೂ ಛತ್ರಗಳನ್ನು ಕಟ್ಟುವುದು ಆಯಾ ಸ್ಥಳದ ವ್ಯವಹಾರದ ಮೂಲವಾಗಿದೆ… ಮದುವೆ ಕಾಲದಲ್ಲಿ ಎಲ್ಲಾ ಮದುವೆ ಛತ್ರಗಳು ಬಿಜಿ ಇರುತ್ತವೆ ಹಾಗೂ ಕಿಕ್ಕಿರಿದಿರುತ್ತವೆ. ಮದುವೆ ಕಾಲಗಳಲ್ಲಿ ಛತ್ರಗಳು ಸಿಗುವುದೇ ದುರ್ಲಭ… ಮದುವೆ ಛತ್ರಗಳನ್ನು ಬುಕ್ ಮಾಡಿದ ಮೇಲೆ ಮದುವೆಗಳನ್ನು ನಿಗದಿ ಮಾಡಿರುವ ಪ್ರಸಂಗಗಳೂ ಇದ್ದಾವೆ.

ಇರಲಿ ಅದೆಲ್ಲ… ಆಗಿನ ಕಾಲಕ್ಕೆ ಬೆಂಗಳೂರಿನಲ್ಲಿ ಮದುವೆ ಛತ್ರಗಳನ್ನು ಹುಡುಕುವುದೇ ಕಷ್ಟವಾಗಿತ್ತು… ಅವುಗಳನ್ನು ತಲಾಷ್ ಮಾಡಲು ಯಾವ ಮಾರ್ಗಸೂಚಿಯೂ ಇರಲಿಲ್ಲ… ಯಾವ ಮದುವೆ ಗೈಡು ಇರಲಿಲ್ಲ… ಗೂಗಲ್ ಮ್ಯಾಪು ಇರಲಿಲ್ಲ ಮದುವೆ ಮಾಡುವವರು ಅವರಿವರನ್ನು ಕೇಳಿ ನಾಲ್ಕೂ ದಿಕ್ಕುಗಳಿಗೂ ಅಲೆದಾಡಿ ತಮಗೆ ಸರಿಹೊಂದುವ ಮದುವೆ ಛತ್ರಗಳನ್ನು ಹುಡುಕಬೇಕಾಗಿತ್ತು…

ನನಗೆ ಇಬ್ಬರು ಅಕ್ಕಂದಿರ ಮದುವೆಯನ್ನು ಮಾಡಿದ ಅನುಭವ ಇತ್ತಲ್ಲ ಅದರ ಆಧಾರದ ಮೇಲೆ ನನ್ನ ಮದುವೆಗೆ ನಾನೂ ಸಹ ಛತ್ರ ಹುಡುಕಲು ಹೊರಟೆ… ಮದುವೆ ಛತ್ರ ಹುಡುಕುವುದು… ಮದುವೆ ಮಾಡುವುದು ಹೆಣ್ಣಿನವರ ಮನೆಯ ಜವಾಬ್ದಾರಿಯಾದರೂ ಸಹ ನಾನು ಅವರಿಗೆ ಸಹಕರಿಸೋಣವೆಂದು ಆ ಜವಾಬ್ದಾರಿಯನ್ನು ನಾನೂ ಹೊತ್ತೇ ಕಣ್ರೀ… ಹೀಗೆ ನನ್ನ ಛತ್ರದ ಅನ್ವೇಷಣೆಯಲ್ಲಿದ್ದಾಗ ಸಿಕ್ಕ ಪುಸ್ತಕವೇ ಉದಯಭಾನು ಕಲಾಸಂಘದವರ ಛತ್ರಗಳ ಮಾಹಿತಿ ಪುಸ್ತಕ ಅರೆರೇ ಈ ತರದ್ದೂ ಒಂದು ಪುಸ್ತಕವನ್ನು ಮಾಡಬಹುದಾ ಎಂಬ ಕಲ್ಪನೆಯೇ ನನಗಿರಲಿಲ್ಲ… ಅದೇಗೂ ನನಗೆ ಆ ಪುಸ್ತಕ ಸಿಕ್ಕಿತು… ಅದರಲ್ಲಿ ಬೆಂಗಳೂರಿನ ಅದರಲ್ಲೂ ಬಸವನಗುಡಿ… ಮಲ್ಲೇಶ್ವರಂ… ಚಾಮರಾಜಪೇಟೆ… ರಾಜಾಜಿನಗರ… ಜಯನಗರ… ಎನ್.ಆರ್. ಕಾಲೋನಿ… ವಿ.ವಿ.ಪುರಂಗಳ ಸುತ್ತಮುತ್ತಾ ಇದ್ದ ಛತ್ರಗಳ ಬಗ್ಗೆ ವಿವರಗಳು… ಮಾಹಿತಿಗಳು… ಅವುಗಳ ವಿಳಾಸ… ಫೋನ್ ನಂಬರ್ ಎಲ್ಲವೂ ಇತ್ತು… ಅದರ ಜೊತೆಗೆ ವ್ಯಾಪಾರ ಕೇಂದ್ರಗಳು… ಹೋಟೆಲ್‌ಗಳು… ಶಾಲೆಗಳು… ಆಸ್ಪತ್ರೆಗಳು… ಹೀಗೆ ಯಾವ ಯಾವುದರೋ ಮಾಹಿತಿಗಳು ಇರುವ ಪುಸ್ತಕವದು… ಬಹಳ ಉಪಯುಕ್ತವೂ ಆದದ್ದಾಗಿತ್ತು ಆ ಪುಸ್ತಕ.

ಆ ಪುಸ್ತಕವನ್ನು ಹಿಡಿದು ನನ್ನ ಮೆಳ್ಳಗಣ್ಣಿಯ ಮನೆಯ ಕಡೆ ಹೊರಟೆ… ಗಂಗಳ ಮನೆಗೆ ಹೋಗಲು ಇಂತಹ ಅನೇಕ ರಹದಾರಿಗಳನ್ನು ಕಂಡುಕೊಂಡಿದ್ದೇ ಕಣ್ರೀ… ಕಾರಣವಿಲ್ಲದೆ… ಸುಮ್ಮಸುಮ್ಮನೆ ಹುಡುಗಿಯ ಮನೆಗೆ ಹೋಗುವುದು ಚಂದವಲ್ಲ ಅಲ್ಲವೇ ನೀವೇ ಹೇಳ್ರಪ್ಪಾ…
ನನ್ನ ಭಾವೈದನಾದ ರೇಣಕಪ್ಪನು ಮಲ್ಲೇಶ್ವರಂನಲ್ಲೊಂದು ಛತ್ರವನ್ನು ಆಗಲೇ ನೋಡಿಕೊಂಡು ಬಂದಿದ್ದನು. ಆದರೆ ಅದು ನನಗ್ಯಾಕೋ ಇಷ್ಟವಾಗಲಿಲ್ಲ. ನಾನು ಬಸವನಗುಡಿಯ ಬುಲ್‌ಟೆಂಪಲ್ ರಸ್ತೆಯಲ್ಲಿರುವ ಗುರುನರಸಿಂಹ ಕಲ್ಯಾಣಮಂದಿರ’ವನ್ನು ಅವರಿಗೆ ತೋರಿದೆ ಅದೇ ಛತ್ರದಲ್ಲಿ ಮದುವೆ ನಡೆಯುವುದೆಂದು ತೀರ್ಮಾನಿಸಲಾಯಿತು ನಮ್ಮ ಮದುವೆಯ ದಿನಾಂಕಕ್ಕೆ ಆ ಛತ್ರವು ಖಾಲಿಯೂ ಇತ್ತು… ಹಾಗಾಗಿ ಅದೇ ಛತ್ರವನ್ನೇ ಬುಕ್ ಮಾಡಲಾಯಿತು. ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು ೧೯೧೨ನೇ ಶ್ರೀ ಪ್ರವೋದನಾಮ ಸಂವತ್ಸರದ ಶ್ರಾವಣ ಶುದ್ಧ ಭಾನುವಾರ ಪ್ರಥಮಶಾಸ್ತ್ರ, ಸಪ್ತಮಿ ಸೋಮವಾರ ತಾ|| ೧೩-೮-೧೯೯೦ರ ಬೆಳಗ್ಗೆ ೬.೩೦ರಿಂದ ೭.೨೫ ಘಂಟೆಯೊಳಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ಚಿ||ಸೌ|| ಕೆ.ಎಸ್. ಗಂಗಾಂಬಿಕೆ ಮತ್ತು ಚಿ||ರಾ|| ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಇವರ ವಿವಾಹ ಮಹೋತ್ಸವವನ್ನು ಬೆಂಗಳೂರಿನ ಸಿಟಿ ಬುಲ್‌ಟೆಂಪಲ್ ರಸ್ತೆಯಲ್ಲಿರುವ ಶ್ರೀ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ನಡೆಯುವಂತೆ ಗುರುಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಈ ಶುಭ ಮುಹೂರ್ತಕ್ಕೆ ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ವಧೂ-ವರರನ್ನು ಆಶೀರ್ವದಿಸಿ ನಮ್ಮ ಮನಸ್ಸಂತೋಷಪಡಿಸಬೇಕಾಗಿ ವಿನಂತಿ ಆರತಕ್ಷತೆ : ಸಂಜೆ ೬.೩೦ರಿಂದ ೯.೩೦…. ತಮ್ಮ ವಿಶ್ವಾಸಿಗಳು ಶ್ರೀಮತಿ ಮತ್ತು ಶ್ರೀ ಸಿದ್ದಲಿಂಗಯ್ಯ… ಶ್ರೀಮತಿ ಮತ್ತು ಶ್ರೀ ಡಿ.ಎಸ್. ಬಸೆಟ್ಟಪ್ಪ ಹಾಗೂ ಬಂಧುಮಿತ್ರರು ಎಂದು ಪ್ರಿಂಟ್ ಹಾಕಸಿ ಎಲ್ಲಾ ನೆಂಟರಿಷ್ಟರಿಗೂ ಬಂಧುಬಳಗಕ್ಕೂ ಹಾಗೂ ಮಿತ್ರವರ್ಗಕ್ಕೂ ಆಹ್ವಾನ ಪತ್ರಿಕೆಯನ್ನು ಕೊಡಲಾಯಿತು… ನಾನು ಸಹ ಲಗ್ನಪತ್ರಿಕೆಯನ್ನು ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಅಧ್ಯಾಪಕರು ಹಾಗೂ ಕಛೇರಿ ವರ್ಗಕ್ಕೆ ಹಾಗೂ ನನ್ನ ರಂಗಮಿತ್ರರಿಗೆ… ನಾನು ಓದಿನ ಕಾಲೇಜಿನ ಹಾಗೂ ನನ್ನ ಊರಿನ ಬಾಲ್ಯ ಮಿತ್ರರಿಗೆ ನೀಡಿ ಆಹ್ವಾನ ಕೋರಿದೆ… ನನ್ನ ತಂದೆ ತಾಯಿ ಹಾಗೂ ಅಕ್ಕ ಭಾವಂದಿರಿಗೂ ಸಹ ಲಗ್ನ ಪತ್ರಿಕೆಯನ್ನು ಕೊಡಲು ನೆಂಟರಿಷ್ಟರ ಊರುಗಳಿಗೆ ತೆರಳಿದರು… ಹಾಗೆಯೆ ಹೆಣ್ಣಿನ ಮನೆಯಲ್ಲೂ ಲಗ್ನಪತ್ರಿಕೆಯನ್ನು ಹಂಚುವ ಕರ‍್ಯ ನಡೆಯಿತು. ಮದುವೆಯ ದಿನ ಹತ್ತಿರ ಬಂದೇ ಬಿಟ್ಟಿತು. ವೈವಾಹಿಕ ಜೀವನ ಶುಭವಾಗಿರಲಿ ಎಂದು ಮನೆ ದೇವರಾದ ಮುಡುಕುತೊರೆ ಭ್ರಮರಾಂಭ ಮತ್ತು ಮಲ್ಲಿಕಾರ್ಜುನಸ್ವಾಮಿ ಹಾಗೂ ಮಲೆ ಮಹದೇಶ್ವರನಿಗೆ ಪೂಜೆ, ಅಭಿಷೇಕ, ಕುಂಕುಮಾರ್ಚನೆಗಳನ್ನು ಮಾಡಿಸಿಕೊಂಡು ಬಂದಿದ್ದಾಯಿತು. ಮದುವೆ ವಯಸ್ಸಿಗೆ ಬಂದ ಹೆಣ್ಣಿಗೆ ಗಂಡು ಹುಡುಕುವುದು ಗಂಡಿಗೆ ಹೆಣ್ಣು ಹುಡುಕುವುದು. ಅದರ ನಂತರ ಹೆಣ್ಣು-ಗಂಡು ನೋಡುವ ಶಾಸ್ತ್ರ… ಒಪ್ಪಿಗೆಯಾದ ಮೇಲೆ ನಿಶ್ಚಿತಾರ್ಥ… ಆನಂತರ… ಲಗ್ನ ಕಟ್ಟಿಸುವುದು… ಆದಾದ ನಂತರ ವಧು-ವರರ ಸಂಬಂಧಿಕರು ಸೋದರ ಮಾವನ ಮನೆಯವರು, ಸೋದರತ್ತೆ ಮನೆಯವರು… ಅಕ್ಕತಂಗಿಯ ಮನೆಯವರು ವಧು-ವರರನ್ನು ಕರೆದು ಅಟಿಕ್ಕು’ವುದು (ವಿಶೇಷವಾದ ಅಡಿಗೆ ಮಾಡಿ ಉಣಬಡಿಸುವುದು) ಆ ನಂತರ ಮದುವೆ ಮುನ್ನಾದಿನ ಚಪ್ಪರದ ಶಾಸ್ತ್ರ… ಆನಂತರ ವರ ಮತ್ತು ವಧುವಿನ ಮನೆಗಳಲ್ಲಿ ಕಳಸ ಕೂರಿಸಿ… ಮಧು ಮಕ್ಕಳಿಗೆ ಹರಿಸಿನದ ನೀರಾಕಿ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಶಾಸ್ತ್ರ… ಹೀಗೆ ಮದುವೆ ಯಾನ ಸಾಗುತ್ತದೆ… ನನ್ನ ಮದುವೆಯ ಸಂದರ್ಭದಲ್ಲೂ ಈ ಇಂತಹ ಹಲವು ಸಂಪ್ರದಾಯಗಳು ಆಚರಣೆಗಳು ನಡೆದವು.

ನನಗೆ ಈ ಎಲ್ಲಾ ಶಾಸ್ತ್ರ ಸಂಪ್ರದಾಯಗಳು ರೂಢಿಗತ ಆಚರಣೆಗಳಷ್ಟೇ ಎನಿಸಿಬಿಟ್ಟಿತ್ತು… ಅಷ್ಟೊತ್ತಿಗಾಗಲೇ ಬಸವನವಚನ ಮಾಂಗಲ್ಯ’ವೂ ಹಾಗೂ ಕುವೆಂಪು ಅವರ ಮಂತ್ರ ಮಾಂಗಲ್ಯವೂ’ ನನ್ನ ಮೇಲೆ ಪ್ರಭಾವ ಬೀರಿದ್ದವು… ನನ್ನ ಕೆಲವು ಗೆಳೆಯರು ಕುವೆಂಪು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರು… ಕೆಲವರು ಸರಳ ವಿವಾಹಗಳನ್ನು ಮಾಡಿಕೊಂಡಿದ್ದರು… ಇದೆಲ್ಲವೂ ಸಹ ನನಗೂ ಒಪ್ಪಿಗೆಯಾಗಿತ್ತು ಹಾಗೂ ಇಷ್ಟವೂ ಆಗಿತ್ತು… ನಾನು ಮದುವೆಯಾದರೆ ಹೀಗೇ ಆಗಬೇಕು ಎಂದೆನಿಸಿತ್ತು… ಆದರೆ ನಮ್ಮ ಮನೆತನದ ಸಂಪ್ರದಾಯಗಳು… ಕುಲದ ಆಚರಣೆಗಳು ಅದೆಲ್ಲಕ್ಕಿಂತ ಹೆಚ್ಚಾಗಿ ಬಹುಜನ ಒಪ್ಪಿಕೊಂಡಿರುವ ಪದ್ಧತಿಗಳಿಗೆ ನಾನು ತಲೆಬಾಗಲೇಬೇಕಾಯಿತು… ನಾನು ನನ್ನ ಕುಟುಂಬಕ್ಕೆ ಬದ್ಧನಾಗಲೇಬೇಕಾಗಿತ್ತು… ಹಾಗಾಗಿ ಆ ಎಲ್ಲಾ ಆಚರಣೆಗಳಲ್ಲಿ ಭಾಗಿಯಾದೆ.

ಆದರೆ… ಈ ಆಚರಣೆಗಳೆಲ್ಲವೂ… ಎರಡು ಕುಟುಂಬಗಳನ್ನು ಹತ್ತಿರ ಮಾಡುತ್ತವೆ… ಸಂಬಂಧಗಳನ್ನು ಬೆಸೆಯುತ್ತೇವೆ. ಮದುವೆಗೆ ಮುಂಚೆಯೆ ಹೆಣ್ಣು-ಗಂಡುಗಳನ್ನು ಹತ್ತಿರ ತಂದು ಅವರಿಬ್ಬರು ಪರಸ್ಪರ ಅರಿತುಕೊಳ್ಳಲು ಅನುವು ಮಾಡಿಕೊಡುತ್ತದೆ… ಸಹಬಾಳ್ವೆ ಮಾಡಲು ಬುನಾದಿ ಹಾಕುತ್ತದೆ…

ನಮ್ಮ ನಾಗಮಂಗಲದ ಮನೆಯಲ್ಲಿ ಚಪ್ಪರ ಹಾಕಿ ಚಪ್ಪರ ಶಾಸ್ತ್ರ ಆನಂತರದ ಉಳಿದ ಶಾಸ್ತ್ರಗಳನ್ನೆಲ್ಲ ಮುಗಿಸಿ ಬೆಂಗಳೂರಿಗೆ ಬಂದೆವು… ನನ್ನ ಬೆಂಗಳೂರಿನ ಶ್ರೀನಿವಾಸನಗರದ ಮನೆಯಲ್ಲೂ ಪುಟ್ಟ ಚಪ್ಪರ ಹಾಕಿ ಅಲ್ಲಿಯೂ ಪೂಜೆ, ಪುನಸ್ಕಾರಗಳನ್ನು ಮಾಡಿ ಮದುವೆ ಮನೆಗೆ ದಿಬ್ಬಣ ಹೊರಡಲು ಸಿದ್ಧವಾದೆವು.

ಇಷ್ಟಾದರೂ ನಾನು ಶೇವ್ ಮಾಡಿಸಿರಲಿಲ್ಲ. ದಟ್ಟವಾದ ಗಡ್ಡ ಬೆಳೆಸಿಕೊಂಡು ಅಡ್ಡಾಡುತ್ತಿದ್ದೆ… ನನ್ನ ಅಪ್ಪಾಜಿಗೆ ನನ್ನ ಗಡ್ಡದ್ದೆ ಒಂದು ಚಿಂತೆಯಾಯಿತು… ನನಗೆ ಹೇಳೋಷ್ಟು ಹೇಳಿದರು… ಆಮೇಲೆ ನನ್ನ ಅಕ್ಕಪಕ್ಕದ ಮನೆಯವರಿಗೆ ನನ್ನ ಅಕ್ಕಂದಿರಿಗೆ… ಭಾವಂದಿರಿಗೆಲ್ಲ ಹಾಗೂ ನನ್ನ ಪಕ್ಕದ ಮನೆಯ ಮಾಧವನ್‌ಗೂ ನನ್ನ ಗಡ್ಡದ ವಿಷಯ ಹೇಳಿ ಅವನಿಗೆ ಶೇವ್ ಮಾಡಿಸಿಕೊಳ್ಳಲು ಹೇಳಿ… ಮದುವೆ ದಿನ ಬಂದ್ರೂ ಇವನು ಗಡ್ಡ ಬಿಟ್ಕೊಂಡು ಇದಾನೆ… ಅದೇನ್ ಚೆನ್ನಾಗಿರುತ್ತೆ…. ನೋಡೋರು ಏನಂತರೆ ಅಂತೆಲ್ಲಾ ಹೇಳಿ ಅವರೆಲ್ಲ ಏನ್ರಿ ಇದು ಸ್ವಾಮಿ ಮೊದ್ಲು ಗಡ್ಡ ತೆಗೀರಿ’ ಎಂತಲೂ `ಯಾನೊ ಮಲ್ಲಿ ಇದೇಯಲ್ಲಾ ಚೆರೆಯಿಲ್ಲಾಂ… ಕಲ್ಯಾಣಯ್ಯಾಗುವ ಹುಡ್ಕ ನ್ಯೀನು ಗಡ್ಡ ತೆಗೆ… ಇದ್ಯಾಲ್ಲಾಂ ನಾಟಕಕ್ಕೆ ಚರಿ… ಮೊದಲಾ ದ್ಯಡ್ಡ ತೆಗಿಯಪ್ಪ ನೀನು’ ಎಂದು ಮಾಧವನ್ ನನಗೆ ಬೋಧನೆ ಮಾಡಿದ ಮೇಲೆ ನಾನು ಆಯುಷ್ಕರ್ಮ ಶಾಲೆಗೆ ಪಾದ ಬೆಳೆಸಿದೆನು… ಬಹು ದಿನಗಳಿಂದ ಹುಲುಸಾಗಿ ಬೆಳೆಸಿದ ನನ್ನ ಗಡ್ಡ ಬೋಳಿಸಿದೆನು…

ಮದುವೆಯ ದಿನ ಬಂದೇ ಬಿಟ್ಟಿತು…
ಮಾಧವನ್ ತನ್ನ ಟ್ಯಾಕ್ಸಿಯನ್ನು ದಿಬ್ಬಣಕ್ಕೆಂದು ಸಿಂಗಾರಗೊಳಿಸಿದ್ದ… ಮಾಧವನ್ ಸಾರಥಿಯಾದ… ಅಕ್ಕ ಕಳಸ ಹಿಡಿದಳು… ಅಮ್ಮ… ಅಪ್ಪಾಜಿ… ನಾನು ಎಲ್ಲರೂ ಆ ಅಂಬಾಸಿಡರ್ ಕಾರಲ್ಲಿ ಕುಳಿತೆವು… ಅಕ್ಕ ಪಕ್ಕದವರೆಲ್ಲ ನಮ್ಮನ್ನು ಸಂತೋಷದಿಂದ ಬೀಳ್ಕೊಟ್ಟರು.
ಕಾರು ಹೊರಟಿತು… ಛತ್ರ ಕಡೆಗೆ
ಕಲ್ಯಾಣವೆನ್ನಿರೀ ಕಾರುಣ್ಯ ಮೂರ್ತಿಗೆ
ಕಲ್ಯಾಣವೆನ್ನಿ ಜಗವೆಲ್ಲ
ಕಲ್ಯಾಣವೇ ಸೀತೇ ಕಲ್ಯಾಣವೇ
ಕಲ್ಯಾಣವೇ ಗೌರೀ ಕಲ್ಯಾಣವೇ
ಅತ್ತಿಂದಾ ಕನ್ಯಾಮಣಿ
ಇತ್ತಿಂದಾ ಕನ್ಯಾಮಗ
ಮದ್ಯದೆಡೇಲಿ ಹಾರೂವಯ್ಯ
ಮದ್ವೆದೆಡೇಲಿ ಹಾರೂವಯ್ಯ ನಿಂತೂಕೊಂಡು
ಸೋಬಾನೆ ನುಡಿಯ ನುಡಿದಾನೋ
ಚಪ್ಪಾರದಟ್ಟಲಿ…
ಕಲ್ಯಾಣವೆನ್ನೀರೀ ಕಾರುಣ್ಯಮೂರ್ತಿಗೆ
ಕಲ್ಯಾಣವೆನ್ನೀ ಜಗವೆಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: