ಮಹಾಮನೆ ಅಂಕಣ – ಆಳರಸನ ಮನೆಯೊಳಗೆ ಕಾಲ ಕಸವಾದವಳು…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

20

ಮದುವೆಗೆ ಬಟ್ಟೆ ತೆಗೆಯುವುದು… ಇಂತಹ ದಿನ ಅದಕ್ಕಾಗಿ ಬೆಂಗಳೂರಿನ ಚಿಕ್ಕಪೇಟೆಗೆ ಅಮ್ಮಾ, ನಾನು ನೆಲಮಂಗಲ ಅಕ್ಕ ಡಿ.ಬಿ. ಸುಮಂಗಲ ಹಾಗೂ ಭಾವಾಜಿ ರಾಜಶೇಖರ್ ಎಲ್ಲರೂ ಹೋಗುವುದೆಂತಲೂ ನಿರ್ಧರಿಸಲಾಯಿತು… ಹೆಣ್ಣಿನ ಧಾರೆ ಸೀರೆ… ಆರತಕ್ಷತೆ ಸೀರೆ… ವೀಳ್ಯದ ಸೀರೆ… ಮೇಲು ಮುಸುಕಿನ ಸೀರೆ ಮತ್ತೆ ಐದಾರೂ ದಿನ ಬಳಕೆಯ ಸೀರೆ ಅದಕ್ಕೆ ಮ್ಯಾಚಿಂಗ್ ಆಗುವಂತ ಕುಪ್ಪಸದ ಬಟ್ಟೆ ಹಾಗೂ ನನ್ನ ತಾಯಿಗೆ ಒಂದು ಸೀರೆ ಮೂವರು ಅಕ್ಕಂದಿರಿಗೂ ಒಂದೊಂದು ಸೀರೆ ಹಾಗೂ ನಮ್ಮ ಅತ್ತೆಯವರಿಗೊಂದು ಮತ್ತು ಅಜ್ಜಿ ನಂಜಮ್ಮನವರಿಗೊಂದು ಸೀರೆ ತೆಗೆಯುವುದೆಂತಲೂ… ಹಾಗೂ ನನ್ನ ಅಪ್ಪಾಜಿಗೆ ಹಾಗೂ ಮಾವನವರಿಗೆ ಶರ್ಟಿನ ಬಟ್ಟೆ…. ರೇಷ್ಮೆ ಪಂಚೆಗಳು ಹಾಗೂ ಇಬ್ಬರಿಗೂ ಒಂದೊಂದು ಟರ್ಕಿ ಟವಲ್ ಹಾಗೂ ಪೂಜೆ ವೇಳೆಗೆ ಕೆಂಪುವಸ್ತç ಮತ್ತು ಮುತ್ತೈದೆಯವರಿಗೆ ಕೊಡಲೆಂದು ನೂರನೂರಪ್ಪತ್ತೈದು ರವಿಕೆ ಖಣ ಇದೆಲ್ಲವನ್ನುಕೊಳ್ಳುವುದೆಂತಲೂ ತೀರ್ಮಾನಿಸಲಾಯಿತು.

ಮದುವೆ ಸೀಸನ್ ಶುರುವಾಯಿತು ಎಂದರೆ ಬಟ್ಟೆಯ ವ್ಯಾಪಾರ, ಚಿನ್ನ ಬೆಳ್ಳಿಯ ವ್ಯಾಪಾರ, ಆಹಾರ ಧಾನ್ಯಗಳಕೊಳ್ಳುವಿಕೆ ಹಾಗೆಯೇ ಹೂ, ಹಣ್ಣು ಹಂಪಲುಗಳ ವ್ಯಾಪಾರ ವಹಿವಾಟಗಳು ಜೋರಿರುತ್ತವೆ. ಮದುವೆ ಸಂಬಂಧಿ ಹಲವು ವೃತ್ತಿಯವರಿಗೆ ಉದ್ಯೋಗದ ಅವಕಾಶ ಎಲ್ಲವೂ ಇರುತ್ತವೆ. ಮದುವೆ ಅನ್ನುವುದು ಗಂಡು ಹೆಣ್ಣಿನ ನಡುವೆ ನಡೆಯುವ ಭಾವಾನಾತ್ಮಕ ಬೆಸುಗೆ… ಜೈವಿಕ ಮಿಲನದ ರಹದಾರಿ. ಕುಟುಂಬಗಳ ಸಮಾಗಮ… ಹೆಣ್ಣು-ಗಂಡು ಕೂಡಿ ಬಾಳುವೆ ಮಾಡಲು ಸಮಾಜದ ಒಪ್ಪಿಗೆ. ವಂಶ ಬೆಳೆಯಲು ಅಂದರೆ ಈ ಮಾನವ ಜನಾಂಗದ ಮುಂದಿನ ಪೀಳಿಗೆ ಮುನ್ನಡೆಯಲು… ಹೊಸ ಜೀವ ತಾಳಲು ಈ ಜನ ಸಮುದಾಯ ಮಾಡಿಕೊಂಡಿರುವ ಸಾಮಾಜಿಕ ವ್ಯವಸ್ಥೆ… ಮದುವೆಗೆ ಅದೆಷ್ಟು ಮುಖಗಳಿವೆ.

ಮದುವೆ ಅದೊಂದು ಸಂಸ್ಕೃತಿ, ಸಂಪ್ರದಾಯಗಳ ಪಯಣವೂ ಹೌದು…. ಪೀಳಿಗೆಯಿಂದ ಪೀಳಿಗೆಗೆ ನಡೆದ ಸಂಸ್ಕೃತಿಯ ಹಸ್ತಾಂತರವೂ ಹೌದು… ಹೀಗೆ ಮದುವೆಯೆಂಬ ಸಾಮಾಜಿಕ… ಕೌಟುಂಬಿಕ ವ್ಯವಸ್ಥೆಗೆ ನಾನಾ ಮುಖಗಳಿರುತ್ತವೆ.

ಮದುವೆಗೆ ಸೀರೆ ತರಲು… ಶ್ರೀಮಂತರು ಅದರಲ್ಲೂ ಕಾಸು ಹೆಚ್ಚಿರುವವರು ಕಂಚಿಗೆ ಹೋಗುವುದು ಒಂದು ಪರಿಪಾಠವಾಗಿದೆ… ಬಟ್ಟೆ ಒರೆ ತರಲು ಬಾಂಬೆ, ಸೂರತ್, ಪುಣೆ ಕಡೆಗೆ ಹೋಗುವುದು ಆಯಾ ಶ್ರೀಮಂತ ಕುಟುಂಬಗಳ ಪ್ರತಿಷ್ಠೆಯೂ ಹೌದು… ಎರಡು ಮೂರು ಸಾವಿರ ಬೆಲೆ ಬಾಳುವ ರೇಷ್ಮೆ ಸೀರೆಗಳಿಂದ ಹಿಡಿದು ಲಕ್ಷಾಂತರ ರೂಪಾಯಿಯ ಸೀರೆಗಳನ್ನುಕೊಳ್ಳುವವರೂ ಇರುತ್ತಾರೆ. ಮೈಸೂರು ಸಿಲ್ಕು, ಧರ್ಮಾವರಂ, ಕಂಚಿ ಸೀರೆಗಳು. ಕಾಂಜಿವರ, ಬನಾರಸ್ ಸೀರೆಗಳು, ಪೋಚಂಪಲ್ಲಿ ಸೀರೆಗಳು, ಇಳಕಲ್ ಸೀರೆಗಳು, ಹುಬ್ಳಿ ಸೀರೆಗಳು ವರೆಯೂರ್ ಸೀರೆಗಳು ಹೀಗೆ ನಾನಾ ವೆರೈಟಿ ಸೀರೆಗಳು… ಕೈಮಗ್ಗದ ಸೀರೆಗಳಿಂದ ಹಿಡಿದು ಬೃಹತ್ತಾದ ಆಧುನಿಕ ಯಂತ್ರಗಳವರೆಗೆ… ಗುಡಿ ಕೈಗಾರಿಕೆಯಿಂದ ಬಹುಕೋಟಿ ಉದ್ಯಮದವರೆಗೆ… ಕುಶಲಕಲೆಯಿಂದ ಕಂಪ್ಯೂಟರ್ ವಿನ್ಯಾಸದವರೆಗೆ ಸೀರೆಗಳ ಮಹಾನ್ ಭಿತ್ತಿಯ ಚರಿತ್ರೆ ಇದೆ.

ಪ್ರಕೃತಿಯಿಂದ ಜನಿತವಾದ ಹಿಪ್ಪುನೇರಳೆ ಸೊಪ್ಪು ಹಾಗೂ ರೇಶಿಮೆ ಹುಳ (ಸಿಲ್ಕ್ವರ್ಮ್) ಒಂದು ಸಸ್ಯ ಮತ್ತೊಂದು ಜೀವಿ. ಇವೆರಡರ ಸಂಯೋಗದಿಂದ ಪ್ರೋಟೀನ್‌ಯುಕ್ತ ನಾರು… ಸೂಕ್ಷ್ಮ ಎಳೆ… ಎಂಜಲಿನಿಂದಾದ ಕಾಂತಿಯುಕ್ತ ನೂಲೇ ರೇಷ್ಮೆ ದಾರವೆನಿಸಿಕೊಂಡು… ನೂಲುಗಳ ರಾಣಿ’ಯಾಗಿ ಅನೇಕ ಸಂಸ್ಕಾರಗಳನ್ನು ಹೊಂದಿ… ಹಲವು ಅವಸ್ಥಾಂತರಗಳನ್ನು ಕಂಡು ರೂಪಾಂತರಗೊಳ್ಳುತ್ತಲೇ ಹೋಗುವ ಪಂತಂಗ’ದಂತೆ ಆ ನೂಲು ಸಹ ರೂಪಾಂತರಗೊಳ್ಳುತ್ತಾ ಸೀರೆಯಾಗಿ ಮಹಿಳೆಯರ ವೈಭವದ ಉಡುಪಾಗಿದೆ. ಹೆಣ್ಣುಮಕ್ಕಳ ಸೀರೆಯ ನಡೆಗಾಗಿದೆ. ಸ್ತ್ರೀತ್ವದ ಸಂಕೇತವಾಗಿದೆ.

ಮದುವೆ ಮನೆಗಳಲ್ಲಿ ಅದರಲ್ಲೂ ದಕ್ಷಿಣ ಭಾರತದ ಮನೆಗಳ ಮದುವೆಗಳಲ್ಲಿ ರೇಷ್ಮೆ ಸೀರೆಗಳದೇ ಸಾಮ್ರಾಜ್ಯ… ವಿವಿಧ ವಿನ್ಯಾಸಗಳಲ್ಲಿ… ವಿವಿಧ ಬಣ್ಣಗಳಲ್ಲಿ ವಿವಿಧ ಅಳತೆ-ತೂಕಗಳಲ್ಲಿ (ಎಂಟುಮೊಳದ ಸೀರೆ… ಒಂಭತ್ತು ಮೊಳದ ಸೀರೆ… ಗಜಗಾತ್ರದ ಸೀರೆ… ಮಣಭಾರದ ಸೀರೆ) ವಿವಿಧ ಕಸೂತಿಗಳು… ವಿವಿಧ ಹರವುಗಳಲ್ಲಿ ರೇಷ್ಮೆ ಸೀರೆಗಳು ತಯಾರಾಗುತ್ತವೆ. ಒಡಲು… ಸೆರಗು… ಪಲ್ಲೂ… ಬಾರ್ಡರ್… ಕುಚ್ಚು… ಓಹೋ… ಈ ಸೀರೆ ಜಗತ್ತು ಅಗಾಧ ಕಣ್ರೀ… ಗಂಡಸರಿಗೆ ಮೊದಲಿಗೆ ಉಡುಪಿನಲ್ಲಿ ಯಾವ ವೈವಿಧ್ಯತೆ ಇತ್ರೀ… ಅದೇ ಚಡ್ಡಿ… ಅದೇ ಅಂಗಿ… ಅದೇ ಪಂಚೆ ಮತ್ತು ಕಚ್ಚೆ… ಅದೂ ದಟ್ಟಿಪಂಚೆ’… ಅಬ್ಬಾಬ್ಬ ಅಂದರೆ ಮೇಲುಕೋಟೆ ಪಂಚೆ’ ನಂತರ ಹೆಗಲಮೇಲೆ ಒಂದು ವಲ್ಲಿ ಅಗತ್ಯಕ್ಕೆ ಬೇಕಾಗಿ ಒಂದು ಅಂಗವಸ್ತ್ರ ಅಥವಾ ಟವಲ್ಲೂ… ಉತ್ತರ ಕರ್ನಾಟಕದ ಮಂದಿಗೆ ತಲೆಗೊಂದು ರುಮಾಲು ಅಥವಾ ಗಾಂಧಿಟೋಪಿ ವಿಶೇಷ ಸಂದರ್ಭಗಳಲ್ಲಿ ಒಂದು ಕರೀಕೋಟು ಬಂದು ಮೈಸೂರು ಪೇಟ ಅದೂ ಉಳ್ಳವರಿಗೆ ಮಾತ್ರ.

ಉತ್ತರ ಭಾರತದವರು ಹಾಗೂ ಕೇರಳದವರ ಪ್ರಭಾವದಿಂದ ಬಣ್ಣ ಬಣ್ಣದ ಲುಂಗಿಗಳು ಬಂದ್ವಪ್ಪ… ಇಲ್ಲದಿದ್ದರೆ ಅದೇ ಪಟಾಪಟಿ ಚಡ್ಡಿ ಅಥವಾ ಬಿನ್ನಿಮಿಲ್ಲಿನ ಕಾಕಿ ಮತ್ತೆ ನೀಲಿ ಬಣ್ಣದ ಬಟ್ಟೆಗಳ ನಿಕ್ಕರ್‌ಗಳು… ಇಂಗ್ಲಿಷ್‌ನೋರು ಭಾರತವನ್ನು ಪ್ರವೇಶ ಮಾಡಿದ ಮೇಲೆ ಸೂಟು… ಬೂಟು… ಟೈ… ಹ್ಯಾಟು… ಪ್ಯಾಂಟು… ಈ ತರದ್ದು ಬಂದ್ತಪ್ಪಾ… ಅದರಲ್ಲೂ ಅಂತಹದ್ದೇನೂ ವೈವಿಧ್ಯತೆ ನನಗೆ ಕಂಡುಬಂದಿಲ್ಲ. ಇತ್ತೀಚೆಗೆ ಉತ್ತರ ಭಾರತದ ಅದರಲ್ಲೂ ರಾಜಾಸ್ಥಾನದ ರಾಜಮಹಾರಾಜರು ತೊಡುತ್ತಿದ್ದಂತಹ ಷೆರ್‌ವಾನಿಗಳನ್ನು ಗಂಡಸರು ವಿಶೇಷ ಸಂದರ್ಭಗಳಲ್ಲಿ ತೊಡುತ್ತಿದ್ದಾರೆ. ಷೆರ್‌ವಾನಿಗಳಲ್ಲಿ ಕೆಲವು ವೈವಿಧ್ಯತೆಗಳನ್ನು ಕಾಣಬಹುದೇನೋ. ಅಷ್ಟೇ ರೀ… ಆದರೆ ಈ ಹೆಣ್ಣುಮಕ್ಕಳು ತೊಡುವ ಉಡುಪುಗಳಲ್ಲಿ ಎಂತೆಂತಾ ವೈವಿಧ್ಯತೆ ರೀ.

ಪ್ರದೇಶದಿಂದ ಪ್ರದೇಶಕ್ಕೆ ನಾಡಿನಿಂದ ನಾಡಿಗೆ ರಾಜ್ಯದಿಂದ ರಾಜ್ಯಕ್ಕೆ ಎಂಥಾ ವೈವಿಧ್ಯತೆ ಇದೆ. ಉಡುವ ವಿನ್ಯಾಸದಿಂದ ಹಿಡಿದು ಅವುಗಳನ್ನು ತೊಡುವ ರೀತಿಯೊಳಗೆ ಬಹು ಬಗೆ… ತರ ತರವಾದ ರೀತಿ ನೀತಿಗಳು… ವಿವಿಧ ಸೊಬಗಿನ ಶೃಂಗಾರದ ಸಿರಿ ಕಲಾಲೋಕ ಹೆಣ್ಣಿನ ಮೈಮೇಲಿರುತ್ತದೆ. ಕಣ್ರೀ… ಇನ್ನು ಒಡವೆಗಳ ಲೋಕವಂತೂ ಕೇಳಲೇ ಬೇಡಿ. ನೂರೆಂಟು ತರ ಹೆಣ್ಣಿನ ದೇಹದ ಒಂದೊಂದು ಅಂಗಕ್ಕೂ ಒಂದೊಂದು ರೀತಿಯ ಒಡವೆಗಳು. ಹೆಣ್ಣು ಮೊದಲೇ ಸುಂದರಿ. ಪ್ರಕೃತಿದತ್ತವಾಗಿ ಅವಳಿಗೆ ಸೌಂದರ್ಯ ಒಲಿದು ಬಂದಿರುತ್ತದೆ. ಇನ್ನೂ ನಾನಾ ಬಗೆಯ ಒಡವೆಗಳನ್ನು ತೊಟ್ಟ ಬಣ್ಣ ಬಣ್ಣದ ಕಲಾಪತ್ತಿನ ಸೀರೆ ಕುಪ್ಪಗಳನ್ನು ಉಟ್ಟು ನಿಂತರಂತೂ ಅಂದಚಂದದ ಬೊಂಬೆಯಾಗಿ… ಸೌಂದರ್ಯದ ಖನಿಯಾಗಿ… ಇಂದ್ರಲೋಕದ ಸುಂದರಿ ಆಗಿ… ಆಗಸದ ಅಪ್ಸರೆಯಾಗಿ… ಸಪ್ನಲೋಕದ ಕಿನ್ನರಿಯಾಗಿ… ಬೆಳದಿಂಗಳಬಾಲೆಯಾಗಿ… ಏಳು ಮಲ್ಲಿಗೆ ತೂಕದ ರಾಜಕುವರಿಯಂತೆ ಕಂಗೊಳಿಸುತ್ತಾ ಇರುತ್ತಾಳೆ.

ನನ್ನ ಮದುವೆಗೆ ಅಂತ ನಾನೇನು ಹಣ ಇಟ್ಟುಕೊಂಡಿರಲಿಲ್ಲ. ಹಣವನ್ನು ಕೂಡಿಡುವಂತ ಮನುಷ್ಯನು ನಾನಲ್ಲ. ಮತ್ತೆ ನನ್ನ ಬಳಿ ಹಣವೂ ನಿಲ್ಲುವುದಿಲ್ಲ… ಮೊದಲೂ ಇಲ್ಲ… ಈಗಲೂ ಇಲ್ಲ… ನನ್ನ ಹತ್ತಿರ ಅಕಸ್ಮಾತ್ ಹಣ ಇದ್ದು… ಯಾರಾದ್ರೂ ಕಷ್ಟ ಅಂತ ಕೇಳಿದರೆ ಇಂದು ಮುಂದು ನೋಡದೆ ಕೊಟ್ಟು ಬಿಡುವ ಸ್ವಭಾವ ನನ್ನದು… ನನ್ನ ತುರ್ತು ಅನಿವಾರ್ಯಗಳಿಗೂ ಅಲ್ಪ ಸ್ವಲ್ಪ ಹಣವನ್ನು ನಾನು ಇಟ್ಟುಕೊಳ್ಳದೇ ಗೆಳೆಯರ ಅಥವಾ ಹಣದ ಅಗತ್ಯತೆ ಇದೆ ಎಂದು ಕೇಳುವವರಿಗೆ ಕೊಟ್ಟುಬಿಡುತ್ತೇನೆ. ನನ್ನಿಂದ ಹಣ ಪಡೆದವರು ನನ್ನ ಸಮಯಕ್ಕೆ ನನ್ನ ಹಣವನ್ನು ಹಿಂದಿರುಗಿಸುತ್ತಾರೆ ಎಂದು ನಂಬಿ ಕೇಳಿದವರಿಗೆ ಸಹಾಯ ಮಾಡಿರುತ್ತೇನೆ… ಆದರೆ ನನ್ನಿಂದ ಹಣ ಸಹಾಯ ಪಡೆದವರು ನನ್ನ ತುರ್ತಿಗೆ ನನ್ನ ಹಣವನ್ನು ಕೊಡುವುದಿರಲಿ. ಎದುರಿಗೆ ಸಿಕ್ಕರೂ ಕಾಣದಂಗೆ ಮರೆಯಾಗುವುದು. ಅಪ್ಪಿತಪ್ಪಿ ಭೇಟಿಯಾಗಿ ವಾಪಸ್ ಹಣ ಕೇಳಿದರೂ ಈಗ ಇಲ್ಲ’ಆಮೇಲೆ ನೋಡೋಣ….’ ಯಾರ‍್ಹತ್ರ ಇದೆ ದುಡ್ಡು… ನಾನೇ ತೊಂದ್ರೇಲಿದಿನೀ’ ಇಂತ ಮಾತುಗಳನ್ನು ಮುಖಕ್ಕೆ ಹೊಡ್ದಾಂಗೆ ಹೇಳುತ್ತಾರೆ.ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರ‍್ಭದ್ರ’ ಅಂತ ಒಂದು ಗಾದೆನೇ ಇದೆಯಲ್ಲ… ಈಗಲೂ ಇಂತಹ ಸ್ಥಿತಿಯೇ ನನ್ನದು.

ಈ ಹಣಕಾಸಿನ ವಿಚಾರದಲ್ಲಿ ನಾನು ಸ್ವಲ್ಪ ವೀಕು… ಲೆಕ್ಕಾಚಾರದ ಮನುಷ್ಯನು ನಾನಲ್ಲಾ… ನಾನು ಹಣದ ವಿಚಾರದಲ್ಲಿ ಖಡಕ್’ ಸ್ವಭಾವ ನನ್ನದಲ್ಲ...ಇದ್ರೆ ಚಕ್ರವರ್ತಿ ಇಲ್ಲದಿದ್ರೆ ಚಪ್ರಾಸಿ’ ಅಂತವನು ನಾನು… ನನ್ನ ಬಳಿ ಕಡು ಕಷ್ಟ ಅಂತ ಹೇಳಿ ಬಂದವರು… ನೀ ಕೊಡಲಿಲ್ಲ ಅಂದ್ರೆ ನನ್ನ ಮನೆ ಓಲೇನೇ ಉರಿಯಲ್ಲ… ಅಂತಾನೋ ನನ್ನ ಮಗಳಿಗೆ ಆರೋಗ್ಯ ಹದಗೆಟ್ಟದೆ ಡಾಕ್ಟರ್ ಬಳಿ ರ‍್ಕೊಂಡ್ಹೋಗಬೇಕು ಸ್ವಲ್ಪ ಹಣ ಕೊಟ್ಟಿರು. ಮೂರ್ ವಾರ‍್ದೊಳಗೆ ಹಿಂದಿರುಗಿಸಿ ಬಿಡುತ್ತೇನೆ ಅಂತಾನೋ… ಅರ್ಜೆಂಟ್ಗೆ ಹಣಬೇಕಾಗಿತ್ತು. ನಿಮ್ಮ ಹತ್ತಿರ ಕೇಳ್ದೆ ಇನ್ನಾರ‍್ಹತ್ತೀರ ಕೇಳಲಿ… ಅಂತಾನೋ… ಅಂತ ಬಂದವರಿಗೆ ಅಷ್ಟೋ ಇಷ್ಟೋ ಉಳಿಸಿಕೊಂಡಿದ್ದ ಹಣವನ್ನು ಎತ್ತಿಕೊಟ್ಟುಬಿಡುತ್ತೇನೆ… ದಾನ ಶೂರ ಕರ್ಣ ಕಣಪ್ಪ ನೀನು’ ಅಂತಾ ನನ್ನಮ್ಮ ಹೇಳುತ್ತಲೇ ಇರುತ್ತಾಳೆ… ಮದುವೆ ಆದ ಮೇಲೂ ನನ್ನ ಹೆಂಡತಿಯರೂ ಸಹ ಹಣದ ಬಗ್ಗೆ ಎಚ್ಚರಿಕೆ ಕೊಡುತ್ತಲೇ ಇದ್ರೂ…’ ನಿಮ್ಮ ಕಷ್ಟ ಕಾಲಕ್ಕೆ ಅಂತ ಹಣ ಇಟ್ಕೊಳ್ರೀ… ಹಿಂಗೇ ಅವರಿವರಿಗೆ ಕೊಟ್ಟು ಕಳ್ಕೋಬೇಡಿ’ ನಿಮ್ಮ ಕಷ್ಟಕ್ಕೆ ಯಾವ ಗೆಳೆಯರು ಬರಲ್ಲಾ… ಯಾವ ಗೆಳತಿಯರೂ ಬರಲ್ಲಾ ಅಂತ… ಅದು ನಿಜವೂ ಸಹ ಹಣ ನನ್ನ ಕೈಯಲ್ಲಿ ನಿಲ್ಲದೇ ಇರುವುದಕ್ಕೆ ಮತ್ತೆಷ್ಟು ಕಾರಣಗಳೂ ಇವೆ… ಒಂದು… ನಾನು ನಾಟಕ ತಂಡದ ನಾಟಕಗಳಿಗೆ ನನ್ನ ದುಡಿಮೆಯ ಹಣವನ್ನು ಖರ್ಚು ಮಾಡುತ್ತಿದ್ದದ್ದು…

ಎರಡನೆಯದು ಅಂದ್ರೆ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಕೆಲ ಬಡ ಹುಡುಗರಿಗೆ ಫೀಸು… ಊಟಕ್ಕೆ ಅಂತ ಕೊಡುತ್ತಿದ್ದುದು… ವಿದ್ಯಾರ್ಥಿಗಳಿಗೆ ಖರ್ಚು ಮಾಡುತ್ತಿದ್ದ ಹಣ ಸದ್ವಿನಿಯೋಗವಾಗುತ್ತಿದ್ದುದ್ದು ನನಗೆ ಆಗಲೂ ತೃಪ್ತಿಕೊಟ್ಟಿದೆ. ನನ್ನ ಬದುಕನ್ನು ಸಾರ್ಥಕ್ಯಗೊಳಿಸಿದೆ. ಈಗಲೂ ಅದೇ ಭಾವ ನನ್ನಲ್ಲಿದೆ… ಆದರೆ ಕಷ್ಟ ಅಂತ ಬಂದವರಿಗೆ ಹಣ ಕೊಟ್ಟು… ಅವರು ನನ್ನ ಕಷ್ಟಗಳಿಗೆ ಸ್ಪಂದಿಸಿದೇ… ಮುಖವನ್ನು ತೋರದೆ ಮಾತೂ ಆಡದೆ… ಏನೂ ಗೊತ್ತಿಲ್ಲದಂತೆ ಇರುವವರನ್ನು ನೆನೆದು ನೋವಾಗುತ್ತದೆ… ಖೇದವೆನಿಸುತ್ತದೆ…. ನಾನು ಇಂತಹ ಕೃತಘ್ನರಿಗೆ ಹಣ ಕೊಡಬಾರದಿತ್ತು… ಸಹಾಯ ಮಾಡಬಾರದಿತ್ತು ಅಂತ ಒಮ್ಮೊಮ್ಮೆ ಅನಿಸುತ್ತದೆ… ಮರುಕ್ಷಣವೇಹೋಗಲಿ ಬಿಡು ಅವರ ಕಷ್ಟ ಏನಿದೆಯೋ… ಅದಕ್ಕಾಗಿ ಅವರು ನನಗೆ ಹಣ ಹಿಂದಿರುಗಿಸಲಾಗುತ್ತಿಲ್ಲವೇನೋ’ ಎಂದು ಮನ ಮರುಗುತ್ತದೆ ಕಣ್ರೀ… ನನ್ನ ಮದುವೆಗೆ ಹಣಬೇಕಲ್ಲ ಈಗ… ಬಟ್ಟೆ, ಬರೆ ತಗಿಯಲಿಕ್ಕಾದರೂ ದುಡ್ಡು ಬೇಕಲ್ಲ… ಏನ್ಮಾಡೋದು… ಏನ್ಮಾಡೋದು… ಯಾರನ್ನ ಕೇಳಲಿ… ಯಾರನ್ನ ಕೇಳಲಿ… ಎಲ್ಲಿ ತರಲಿ ಹಣ ಏನ್ಮಾಡೋದು… ಯಾರನ್ನ ಕೇಳೋದು…

ಹಣವೇ ನಿನ್ನ ಮಹಿಮೆಯ ಏನು ತಾನೇ ಹೇಳಲಿ
ಬಂದಾಗ ಹಿಡಿಯದೆ ಹರಿಬಿಟ್ಟು ಕೆಟ್ಟವರು
ಕಣ್‌ಕಣ್ ಬಿಟ್ಟು ತಲೆ ಬಗ್ಗಿಸಿ ಕುಂತವರು
ಅಲ್ಲಿ ಇಲ್ಲಿ ಕೈಯೊಡ್ಡಿ ಬಿಡುಗಾಸಿಗೆ ಬಾಯ್‌ಬಾಯ್ ಬಿಟ್ಟವರು
ರಾಜಾದಿರಾಜರು ಕಿಲುಬುಕಾಸಿಗೆ ದಾಸಾನುದಾಸರಾದವರು
ಏನು ಹೇಳಲಿ ನಿನ್ನ ಮಹಿಮೆಯ ಹಣವೇ
ಶೆಟ್ಟರಂಗಡಿಯ ಖಜಾನೆಯಲ್ಲಿ ಕಾಲು ಮುರಿದು ಬಿದ್ದವಳು
ಊರ ಗೌಡನ ಲೋಲುಪತೆಗೆ ಟೊಂಕಕಟ್ಟಿ ನಿಂತವಳು
ಆಳರಸನ ಮನೆಯೊಳಗೆ ಕಾಲ ಕಸವಾದವಳು
ಮೋಸಗಾರರ ಮಡಿಲೊಳಗೆ ಹಾಸಿ ಮಲಗಿದವಳು
ಲಕುಮಿ ನಿನ್ನ ಮಹಿಮೆಯ ಏನು ತಾನೇ ಹೇಳಲಿ

ಗೆಳೆಯರೆ… ಬಂದ ಹಣವನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳಬೇಕು… ನಿಮಗೆ ಅಂತ… ನಿಮ್ಮ ಅಗತ್ಯಕ್ಕೆ ಅಂತ… ನಿಮ್ಮ ಕಷ್ಟಗಳಿಗೆ ಅಂತ ಇಟ್ಟುಕೊಳ್ಳಬೇಕು ನೀವು… ನೀವು ಬೇಕಾಬಿಟ್ಟಿ ಖರ್ಚು ಮಾಡ್ತಾ ಇದ್ರೆ… ಹಣ ಹರಿದು ಹೋಗುತ್ತದೆ… ಏನೇನೋ ಕಾರಣ ಹೇಳಿ ನಿಮ್ಮಲ್ಲಿಗೆ ಹಣ ಕೇಳಿ ಬರುವವರಿಗೆ ನೀವು ನಿಮ್ಮ ದುಡಿಮೆಯ ಹಣವನ್ನು ಕೊಡ್ತಾ ಹೋದರೆ ಪಡೆದುಕೊಳ್ಳುವವರು ನಿಮ್ಮ ಮನೆಯ ಮುಂದೆ ಸಾವಿರ ಸಾವಿರ ಕಾರಣ ಹೇಳಿ ಕ್ಯೂ ನಿಲ್ಲುತ್ತಾರೆ… ನೀವು ಕೊಟ್ರೊ… ನಿಮ್ಮ ಕಡೆ ತಿರುಗಿಯೂ ನೋಡದೆ ಅಡ್ಡಾಡುತ್ತಾರೆ… ಕೊಡುಗೈ ದಾನಿ’ ಅನ್ನಿಸಿಕೊಳ್ಳುವುದು ದೊಡ್ಡದಲ್ಲ… `ದಾನ ಶೂರ ಕರ್ಣ’ ಎಂದು ಹೊಗಳಿಸಿಕೊಳ್ಳುವುದು ದೊಡ್ಡದಲ್ಲ… ತಿಳಿತೋ…

ನಿಮ್ಮಲ್ಲಿ ಹಣ ಕೊಳಿತಾ ಬಿದ್ದಿದ್ರೇ… ಕೊಡ್ರಿಪ್ಪಾ…
ನಿಮ್ಮ ಬಳಿಯೇ ಹಣಕ್ಕೆ ಪರದಾಟ ಇದ್ರೇ…?
ನಿಮ್ಮ ಕಷ್ಟಗಳೇ ನೂರೆಂಟು ಇದ್ದೂ ಪರರ ಭಂಗಕ್ಕೆ ಬಂಧುವಾಗಬಹುದೇ…?
ನಿಮ್ಮ ಮನೆಯ ಹಂಚುಗಳೆ ತತಾಂತು ತೂತಾಗಿರಬೇಕಾದರೇ
ಇನ್ನೊಬ್ಬರ ಮನೆಯ ಕಾವಲಿಯ ತೂತನ್ನು ಮುಚ್ಚಲು ಹೋಗುವುದು ಸರಿಯೇ…?

ನನ್ನ ಕಥೆಯೂ ಇಂಥಹದ್ದೇ… ಅದಕ್ಕೆ ನನ್ನ ಅನುಭವದ ಮಾತುಗಳನ್ನು ಹೇಳುತ್ತಾ ಇದ್ದೇನೆ… ಅನೇಕ ಬಾರಿ ನನ್ನ ಅಗತ್ಯಗಳಿಗೆ… ನನ್ನ ತುರ್ತುಗಳಿಗೆ… ನನ್ನ ಕಷ್ಟಗಳಿಗೆ ಹಣವಿಲ್ಲದೆ ಒದ್ದಾಡಿದ್ದೇನೆ. ಈಗ ಅದೇ ಸ್ಥಿತಿ ನನ್ನದು… ಈಗ ನನ್ನ ಮದುವೆಯ ಸಂದರ್ಭ… ನನ್ನ ಬಳಿ ಹಣ ಇಲ್ಲ…

ಯಾರನ್ನೂ ಕೇಳಲಿ…? ಈಗ ಏನ್ಮಾಡೋದು? ಎಲ್ಲಿ ತರಲಿ ಹಣ…?

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: