ಮಹಾದೇವ ಎಸ್ ಪಾಟೀಲ
ಈಗ ಸಾಯಲೆಂದು
ಹಗ್ಗ ಹಿಡಿದು ಹೊರಟಿರುವೆ
ಆದರೂ ನೆನಪಾಗುತ್ತಾರೆ
ಹಡೆದ ಅವ್ವ, ಪಡೆದ ಅಪ್ಪ
ಮಡದಿ, ಮಕ್ಕಳು; ಇವರಿಗಿಂತಲೂ
ಇನ್ನೂ ಹೆಚ್ಚು ಹೆಚ್ಚು ಸಾಲಗಾರರು
ಅಮ್ಮನ ಮೂಗಿನ ನತ್ತು
ಹೆಂಡತಿಯ ತಾಳಿ
ಅಪ್ಪನು ಮಾಡಿದ ಆಸ್ತಿ
ಇದೆಲ್ಲವೂ ಮಾರಿದೆ
ಇನ್ನೂ ತೀರದಾಗಿದೆ ಸಾಲ
ಬಿಡದೆ ಕಟ್ಟಿ ಕಾಡುವ ಬಡತನ
ಮಗಳ ಮದುವೆ
ಮಗನ ಓದು, ಬರಹ
ತಾಳದಾದ ಹಸಿದ ಒಡಲು
ಕಾಸಿಲ್ಲದ ಖಾಲಿ ಜೇಬು
ಭಿಕ್ಷೆ ಬೇಡಲು ಅವಮಾನ

ಯಾರಿಗೆ ಹೇಳಲಿ
ಯಾರ ಮುಂದೆ ತೋಡಿಕೊಳ್ಳಲಿ
ನನ್ನ ಅಸಹನೀಯ ಬದುಕು
ಧಗಧಗ ಉರಿಯುವ ನಾಭಿ
ಈಗ ರಕ್ತಕಾರುವುದೊಂದೆ ಬಾಕಿ
ನೆನಪಾದಾಗಲೆಲ್ಲ
ಎದೆ ಮೇಲೆ ನಿಂತು
ಕುತ್ತಿಗೆಗೆ ಚಾಕು ಹಿಡಿದಂತೆ
ಭಾಸವಾಗುವ ಸಾಲದ ಭಾದೆ
ಇದ್ದು ಸಾಯುವದಕ್ಕಿಂತ
ಸತ್ತು ಮಣ್ಣಾಗುವುದೇ ಲೇಸು
ಸಾಲಗಾರನಾಗಿ
ಸಾವಿನ ದವಡೆಯಲಿ
ನಳನಳಿಸುವದಕ್ಕಿಂತ
ನೇಣಿಗೆ ಶರಣಾಗಿ
ಅಸುನೀಗುವುದೇ ವಾಸಿ…
0 ಪ್ರತಿಕ್ರಿಯೆಗಳು