ಮಹಾಕವಿಯ ಮೈಬಣ್ಣ…

ಡಾ ಜೆ ಕೆ ರಮೇಶ

ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬೆಂಗಳೂರಿನಲ್ಲಿ ಮಹಾಕವಿ ಪಂಪನ ಹೆಸರು ಹೊತ್ತ ರಸ್ತೆಗೆ ಪರಿಷತ್ತಿನ ಹೆಸರಿಡುವ ಪ್ರಯತ್ನ ನಡೆಸಿದ್ದನ್ನು ವಿರೋಧಿಸುವ ಸಂದರ್ಭದಲ್ಲಿ ಪ್ರಸಿದ್ಧ ಸಾಹಿತಿ ಚಿಂತಕ ಪುರುಷೋತ್ತಮ ಬಿಳಿಮಲೆಯವರು ಪಂಪನನ್ನು ಕುರಿತು ಪ್ರಸ್ತಾಪಿಸುತ್ತಾ ಆತ ತನ್ನ ರೂಪವನ್ನು ಪರಿಚಯಿಸಿ ಕೊಡುವಾಗ ಕದಳೀಗರ್ಭ ಶ್ಯಾಮಂ ಎಂದು ಮೈಬಣ್ಣವನ್ನು ಹೇಳಿಕೊಂಡಿದ್ದಾನೆ, ಅಂದರೆ  ಬಾಳೆಯ ತೊಗಟೆಯನ್ನು ತೆಗೆಯುತ್ತಾ ಹೋದರೆ ಒಳಗೊಂಡು ಟ್ಯೂಬ್ ಲೈಟ್ನ ಹಾಗಿರುವ ರಚನೆ ಸಿಗುತ್ತದೆ ಅದರ ಬಣ್ಣವೇ ತನ್ನ ಬಣ್ಣ ಎಂದಿದ್ದಾನೆ ಎಂದು ಬರೆದಿದ್ದರು.

ಆ ಕುರಿತು ಮುಖ ಪುಸ್ತಕದ ಗೋಡೆಯಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದವು. ಪಂಪನದು ಬಾಳೆ ಗೆಡ್ಡೆಯ ಕೆಂಪು ಮಿಶ್ರಿತ ಕಪ್ಪು ಬಣ್ಣ, ಬಾಳೆದಿಂಡಿನ ಅಚ್ಚ ಬಿಳಿಯ ಬಣ್ಣ, ಅದು ದಂತದ ಬಣ್ಣ, ಬಾಳೆ ಕಾಯಾಗುವ ಮೊದಲಿನ ಹೂವಿನ ಮೇಲಿನ ಕವಚದ ಕೆಂಪು ಮಿಶ್ರಿತ ಕಪ್ಪು ಬಣ್ಣ, ಎಳೆಬಿದರಿನ ಬಣ್ಣ ಎಂಬ ವಿವಿಧ ಅಭಿಪ್ರಾಯಗಳು ಬಂದವು. ಬಾಳೆಯ ಭಾಗಗಳಿಗಿರುವ ಬೇರೆ ಬೇರೆ ಪ್ರದೇಶದ ಪದಗಳು ಪರಿಚಿತವಾದವು. ಪ್ರಸಿದ್ಧ ಲೇಖಕಿ ಪ್ರತಿಭಾ ನಂದಕುಮಾರ್ ಅವರು ಪಂಪನದು ಬಾಳೆಯದಿಂಡಿನ ಬಿಳಿಯ ಬಣ್ಣ. ಕನ್ನಡಿಗರು ಬೆಳ್ಳಗಿರುವುದಿಲ್ಲವೆಂದು ಯಾರು ಹೇಳಿದರು? ಪಂಪ ಕಪ್ಪಾಗಿದ್ದನೆಂಬುದಕ್ಕೆ ಪುರಾವೆ ಎಲ್ಲಿದೆ? ಎಂದು ಹಠಕ್ಕೆ ಬಿದ್ದರು. ಚರ್ಚೆ ಸ್ವಾರಸ್ಯಕರವಾಗಿ ಸಾಗಿತ್ತು.

ನಾನು ಕುತೂಹಲದಿಂದ ನಮಗಿಂತ ಹಿಂದಿನ ತಲೆಮಾರಿನ ಪಂಪನನ್ನು ಮೊದಮೊದಲು ಓದಿ ವಿಮರ್ಶಿಸಿದ ಹಿರಿಯ ವಿದ್ವಾಂಸರು ಏನು ಅರ್ಥ ಹೇಳಿದ್ದಾರೆ ಎಂಬುದನ್ನು ತಿಳಿಯಲು ನನ್ನಲ್ಲಿ ಲಭ್ಯವಿರುವ ಆಕರ ಗ್ರಂಥಗಳನ್ನು ತಡಕಾಡಿದೆ. ಅವರಲ್ಲಿ ಪಂಪಕವಿಯ ಮೈಬಣ್ಣದ ಬಗ್ಗೆ ಏಕಾಭಿಪ್ರಾಯವಿಲ್ಲ. ಅಲ್ಲೂ ವೈವಿಧ್ಯಪೂರ್ಣ ಅನಿಶ್ಚಿತ ಅರ್ಥಗಳನ್ನೇ ಹೇಳಲಾಗಿದೆ.

1938 ರಲ್ಲೇ ನಾಡೋಜ ಪಂಪ ಎಂಬ ಉದ್ಗ್ರಂಥ ರಚಿಸಿದ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಕೃತಿಯಲ್ಲಿ ಈ ಪದ್ಯವನ್ನೇನೋ ಒಮ್ಮೆ ಉಲ್ಲೇಖಿಸಿದ್ದಾರಾದರೂ ಕದಳೀಗರ್ಭ ಶ್ಯಾಮ ಎಂಬ ಶಬ್ದದ ಗೊಡವೆಗೆ ಹೋಗುವುದಿಲ್ಲ. ಅವರ ದೃಷ್ಟಿಗೆ ಪಂಪ ತನ್ನನ್ನು ಹಾಗೆ ಬಣ್ಣಿಸಿಕೊಂಡಿರುವುದು ಅನುಚಿತವಾಗಿ ಕಂಡಿದೆ. ಅಲ್ಲದೆ ಅದವನ ರಚನೆಯೇ ಆಗಿರದೆ ಪ್ರಕ್ಷಿಪ್ತವಾಗಿರಬಹುದೆಂಬ ಅಭಿಪ್ರಾಯದ ಆಯಾಮವೊಂದು ಅವರ ಮಾತಿನಿಂದ ಹೊಮ್ಮುತ್ತದೆ.

‘ಪಂಪ ಭಾರತ ದೀಪಿಕೆ’ ಎಂಬ ಅತ್ಯುಪಯುಕ್ತ ಗ್ರಂಥ ರಚಿಸಿರುವ ಘನ ವಿದ್ವಾಂಸರಾದ ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಬಾಳೆಯ ಹೂವಿನ ಮೋತೆಯಂತೆ ಕೆಂಪು ಕಪ್ಪು ಮಿಶ್ರಿತವಾದ ಬಣ್ಣ ಎಂದಿದ್ದಾರೆ. ಕದಳೀ ಗರ್ಭ ಎಂಬ ಶಬ್ದವನ್ನು ವಿಶೇಷವಾಗಿ ವಿವರಿಸುತ್ತಾ ಇದನ್ನು ಕುರಿತು ಕೋವೆಲ್ ತಾನ್ವೇ ಎಂಬ ಪಾಶ್ಚಾತ್ಯ ವಿದ್ವಾಂಸರು ಹೇಳಿರುವ ಬಾಳೆಯ ಕಾಯಿಯ ತಿರುಳು ಎಂಬ ಅರ್ಥವನ್ನೂ ಅದು ಸರಿಯಲ್ಲ ಕದಳೀ ಗರ್ಭವೆಂಬುದು ಬಾಳೆಯ ಕಂಬದೊಳಗಿನ ದಿಂಡು ಎಂಬ ಪಿ.ವಿ. ಕಾಣೆಯವರ ತಿದ್ದುಪಡಿಯನ್ನೂ ಪ್ರಸ್ತಾಪಿಸಿದ್ದಾರೆ. ಕದಳಿ ಎಂದರೆ ಬಾಳೆಕಾಯಿ ಅಥವಾ ಹಣ್ಣು ಎಂದರ್ಥ. ಅದರ ಗರ್ಭ ಎಂದರೆ ಬಾಳೆಯ ಮೋತೆ ಅದರ ಬಣ್ಣ ಕೆಂಪು ಮಿಶ್ರಿತ ಶಾಮಲ, ಎಣ್ಣೆಗೆಂಪಿನ ಬಣ್ಣ ಎಂದು ತೀರ್ಮಾನಿಸಿದ್ದಾರೆ.    

ಪ್ರೊ. ತೀ.ನಂ.ಶ್ರೀಕಂಠಯ್ಯನವರು ತಮ್ಮ ಪುಟ್ಟ ಆದರೆ ಪ್ರಭಾವೀ ಪುಸ್ತಕ ಪಂಪ (1942)ದಲ್ಲಿ ಈ ಕುರಿತು ವಿವರಿಸುತ್ತಾ ಪಂಪನದು ಕನ್ನಡಿಗರಿಗೆ ಸಹಜವಾದ ನಸುಗಪ್ಪುಬಣ್ಣ ಎಂದಿದ್ದಾರೆ.     

ಪಂಪನ ‘ಆದಿಪುರಾಣ’ವನ್ನು ಸಂಪಾದಿಸಿರುವ ಪ್ರೊ.ಎಲ್.ಬಸವರಾಜು ಅವರು ಕದಳೀ ಗರ್ಭವೆಂದರೆ ಬಾಳೆಯ ಮೋತೆ, ಪಂಪ ಅದರಂತೆ ಶ್ಯಾಮಲವಾದ  ಮೈಬಣ್ಣದವನು ಎಂದು ಹೇಳಿದ್ದಾರೆ.1964 ರಲ್ಲಿ ‘ಪಂಪ ಭಾರತ’ವನ್ನು ಸಂಗ್ರಹಿಸಿ ಸಂಪಾದಿಸಿದ ಶ್ರೀ ಎನ್. ಬಸವಾರಾಧ್ಯ, ಅ.ರಾ.ಮಿತ್ರ ಮತ್ತು ಹಂ. ಪ. ನಾಗರಾಜಯ್ಯ ಬಾಳೆಯ ಮೋತೆಯಂತೆ ಶ್ಯಾಮಲವಾದ ಮೈ ಬಣ್ಣದವನು ಎಂದಿದ್ದಾರೆ.  1974 ರಲ್ಲಿ ಪ್ರಕಟವಾದ ಬೆಂಗಳೂರು ವಿಶ್ವವಿದ್ಯಾಲಯದ ‘ಪಂಪ ಒಂದು ಅಧ್ಯಯನ ಎಂಬ ಜಿ.ಎಸ್. ಶಿವರುದ್ರಪ್ಪನವರು ಸಂಪಾದಿಸಿದ ಕೃತಿಯಲ್ಲಿ ಪ್ರೊ. ಹೂ.ಕ. ಜಯದೇವ ಅವರು ಒಂದೆಡೆ ಅವನ ಮೈಬಣ್ಣ ಬಾಳೆಯ ಸುಳಿಯ ಹಾಗೆ ನಸುಗಪ್ಪಾದದು ಎಂದಿದ್ದಾರೆ. ಮುಂದೆ ಅವರೇ ತಮ್ಮ ಅಭಿಪ್ರಾಯ ಪಂಪನ ಬಣ್ಣ ದ್ರಾವಿಡ ಜನಾಂಗಕ್ಕೆ ಸಹಜವಾದ ಎಣ್ಣೆಗೆಂಪು ಬಣ್ಣ ಎಂಬುದು ಎಂದು ತಿದ್ದಿದ್ದಾರೆ. ಅಲ್ಲೇ ಕದಳೀ ಗರ್ಭವೆಂದರೆ ಬಾಳೆಯ ಸುಳಿಯಲ್ಲಿ ಬಾಳೆಯ ಗೊನೆ ಒಡೆಯುವ ಮೊದಲು ಕಾಯಿಗಳ ಮೇಲೆ ಇರುವ ಹೊದಿಕೆ. ಅದು ಕೆಂಪಿನ ಕಡೆಗೆ ಒಲೆದ ಕಪ್ಪು ಎಂಬ ಅರ್ಥವನ್ನು ಕೊಟ್ಟು ಅದನ್ನು ಅನುಮೋದಿಸಿದ ಚೆನ್ನವೀರ ಕಣವಿ ಮತ್ತು ಹೆಚ್. ದೇವಿರಪ್ಪನವರ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ ಎಂದು ತಿಳಿಸಿದ್ದಾರೆ.

ಇನ್ನು ಈ ಶತಮಾನದ ಆರಂಭದಲ್ಲಿ ಪ್ರಕಟವಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಗ್ರ ಕನ್ನಡ ಜೈನ ಸಾಹಿತ್ಯ ಮಾಲಿಕೆಯಲ್ಲಿ ಪಂಪ ಸಂಪುಟದ ಸಂಪಾದನೆಯ ಮಹತ್ಕಾರ್ಯ ನಿರ್ವಹಿಸಿರುವ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಪಂಪಕವಿಯ ಮೈಬಣ್ಣ ಬಾಳೆಯ ಹೂವಿನ ಮೋತೆಯಂತೆ ಕೆಂಗಪ್ಪು  ಎಂದು ತೀರ್ಮಾನಿಸಿದ್ದಾರೆ.

ʼಪಂಪನ ಆದಿಪುರಾಣ ಪ್ರವೇಶʼ ಎಂಬ ಕೃತಿಯನ್ನು ರಚಿಸಿರುವ ಬಿ.ಆರ್. ವೆಂಕಟರಮಣ ಐತಾಳ್ ಬಾಳೆಯ ದಿಂಡಿನಂತೆ ಬಿಳಿ ಬಣ್ಣದವನು ಎಂದಿದ್ದಾರೆ.

ʼಕನ್ನಡ ರತ್ನಕೋಶʼ ಎಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ಜೇಬುಕೋಶದಲ್ಲಿ ಬಾಳೆಯ ಮೋತೆಯ ಒಳಭಾಗ ಎಂದು ಅರ್ಥ ಕೊಡಲಾಗಿದೆ. ಜೆಮ್ ಕನ್ನಡ ನಿಘಂಟಿನಲ್ಲಿ (ವಸಿಷ್ಠ) ಬಾಳೆಯ ಸಿಪ್ಪೆಯ ಒಳಗಿನ ಭಾಗ ಎಂಬ ಅರ್ಥ ಇದೆ. ಜಿ. ವೆಂಕಟಸುಬ್ಬಯ್ಯನವರ ʼಇಗೋ ಕನ್ನಡʼ ಮತ್ತು ʼಕ್ಲಿಷ್ಟಪದ ಕೋಶʼಗಳಲ್ಲಿ ಈ ಶಬ್ದವಿಲ್ಲ. ಕದಳಿ ಮಾತ್ರವಿದೆ. ಅದಕ್ಕೆ ಬಾಳೆಗಿಡ ಎಂಬ ಅರ್ಥ ನೀಡಲಾಗಿದೆ.

ಒಟ್ಟಿನಲ್ಲಿ ಏಕಾಭಿಪ್ರಾಯವಿಲ್ಲ. ಪಂಪ ಪದ್ಯ ರಚನೆಯ ಸಂದರ್ಭದಲ್ಲಿ  ಛಂದೋ ಬಂಧದ ಕಾರಣಕ್ಕೊ, ಧ್ವನಿ ಶಕ್ತಿಯ ಮೇಲಿನ ಭರವಸೆಯಿಂದಲೋ, ಇನ್ಯಾವುದಕ್ಕೋ ನಿರ್ದಿಷ್ಟವಾಗಿ ತಾನು ಉಪಮಿಸಿದ ಭಾಗದ ಅರ್ಥವನ್ನು ಹೇಳದೆ ಹೋಗಿರುವುದು ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎನ್ನಬಹುದು. ಕದಳಿ ಎಂದರೆ ಬಾಳೆ ಗಿಡ ಅಥವಾ ಮರ ಎಂಬುದು ತಿಳಿದದ್ದೇ. ಆದರೆ ಬಾಳೆಯ ಗರ್ಭ ಯಾವುದು? ಬಾಳೆಯ ಗರ್ಭ ಎಂಬ ಪದಕ್ಕೆ ನಿರ್ದಿಷ್ಟವಾದ ಅರ್ಥವೊಂದು ಪಂಪನ ಕಾಲದಲ್ಲಿ ಪ್ರಚಲಿತವಾಗಿದ್ದಿರಬಹುದು ಅದೇನೆಂಬುದು ನಮಗೆ ತಿಳಿಯದು. ಈಗ ನಮಗೆ ಬಾಳೆಯ ಗೆಡ್ಡೆ ಗೊತ್ತು, ಕಾಂಡ ಗೊತ್ತು, ಎಲೆ ಗೊತ್ತು, ಮೂತಿ ಅದರೊಳಗಿನ ಹೂ, ಕಾಯಿ ನಂತರ ಬೆಳೆವ ಹಣ್ಣು ಎಲ್ಲಾ ಗೊತ್ತು. ಇವುಗಳಲ್ಲಿ ಗರ್ಭವೆಂದು ಯಾವುದನ್ನು ಗುರುತಿಸಬಹುದು? ಗೆಡ್ಡೆ, ಮೂತಿ, ಎಲೆ, ಹಣ್ಣು, ಹೂಗಳು ಗರ್ಭ ಎನಿಸಿಕೊಳ್ಳಲಾರವು. ಇವು ಇಲ್ಲವೆ ಗರ್ಭದ ಮೊದಲು ಅಥವಾ ಪ್ರಸವದ ನಂತರದವು. ಯಾವುವೂ ಹೊಂದುವುದಿಲ್ಲ. ಗರ್ಭ ಒಡಲಿನೊಳಗಿರುವಂಥದ್ದು. ಬಾಳೆ ಮರದ ಒಡಲು ಅದರ ಉದ್ದನೆಯ ಕಾಂಡವೇ. ಅದರೊಳಗಿನ ತಿರುಳು ದಿಂಡು, ದಿಂಡು ಬೆಳ್ಳಗಿರುತ್ತದೆ. ಆದ್ದರಿಂದ ಪಂಪನ ಮೈಬಣ್ಣ ಬಿಳುಪು ಎಂಬಂತಿಲ್ಲ. ಪಂಪ ಶ್ಯಾಮ ಎಂಬ ಪದವನ್ನು ಹೇಳಿಬಿಟ್ಟಿದ್ದಾನಲ್ಲ. ಶ್ಯಾಮ ಎಂದರೆ ಕಪ್ಪು ಕಂದು. ಇನ್ನು ಅದನ್ನು ಅನ್ವಯಿಸುವುದಾದರೆ ಬಿಳಿಯ ದಿಂಡನ್ನು ಕತ್ತರಿಸಿದಾಗ ಅಲ್ಲಿ ಉಂಟಾಗುವ ಕಂದು ಕಪ್ಪು ಅಥವಾ ನಸುಗಪ್ಪು ಎಂದೇ ಹೇಳಬೇಕಾಗುತ್ತದೆ. 

ಪಂಪನಿಗೆ ಈ ಬಣ್ಣ ಪ್ರಿಯವಾದುದು ಎಂಬುದಕ್ಕೆ ಅವನ ಕೃತಿಗಳಲ್ಲೇ ಪುರಾವೆಗಳಿವೆ. ಅವನ ಭಾರತದ ನಾಯಕ ಅರ್ಜುನ ಅಥವಾ ಆಶ್ರಯದಾತ ಅರಿಕೇಸರಿಯ ಬಣ್ಣ ಇದೇ. ಆದಿಪುರಾಣದ ಸುಂದರಿ ಶ್ರೀಮತಿಯನ್ನು ವರ್ಣಿಸುವಾಗ ಅವಳ ಕಂಕುಳ ಬಣ್ಣವನ್ನು ಬಾಳೆಯ ಮೋತೆಯ ಕವಚದ ಒಳಭಾಗದ ತಿಳಿಗೆಂಪಿಗೆ ಹೋಲಿಸಿದ್ದಾನೆ. ಭೀಮ ನೀಲಮೇಘದ ವರ್ಣದವ ಎಂದಿದ್ದಾನೆ.

ಇದೇನು ಸೌಂದರ್ಯಕ್ಕೆ ಎರವಾದುದಲ್ಲವಲ್ಲ. ಬಿಳುಪು ಸುಂದರ ಎಂಬ ಭಾವ ಈ ದೇಶಕ್ಕೆ ಪಾಶ್ಚಾತ್ಯರ ಆಗಮನದೊಂದಿಗೆ ಬಂದಿರಬೇಕೆನ್ನಲಾಗಿದೆ. ರಾಮಮನೋಹರ ಲೋಹಿಯಾರವರು ಹಾಗೆ ತರ್ಕಿಸಿದ್ದಿದೆ. ಆ ಮೊದಲು ನಮ್ಮವರಿಗೆ ಕಪ್ಪೇ ಚಲುವಾಗಿತ್ತೆನಿಸುತ್ತದೆ. ರಾಮಕೃಷ್ಣರೂ ಸೇರಿದಂತೆ ಬಹುಮಂದಿ ಪುರಾಣ ಪುರುಷರು ಶ್ಯಾಮಲ ವರ್ಣದವರೇ. ಶಿಲಾಬಾಲಿಕೆಯರ ಸೌಂದರ್ಯ ಕರ್ರಗೆ ಮಿರ್ರಗೆ ಹೊಳೆಯುವಿಕೆಯಲ್ಲೇ  ಇದೆ. ಹೀಗಾಗಿ ಪಂಪ ತನ್ನ ಈ ಮೈಬಣ್ಣಕ್ಕೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರೆ ಅದು ಸಹಜ ಎನಿಸುತ್ತದೆ. ಕೆಲ ವಿದ್ವಾಂಸರು ಹೇಳಿರುವ ಬಣ್ಣಗಳು ಇಲ್ಲಿ ಹೊಂದುವುದಿಲ್ಲ. ಬಹುತೇಕರು ಇದನ್ನು ಅರ್ಥೈಸುವಾಗ ವೈಯಕ್ತಿಕ ರಾಗಗಳನ್ನು ಬೆರೆಸಿರುವಂತೆ ತೋರುತ್ತದೆ. ಕವಿ ತನಗೆ ಪ್ರಿಯವಾದ ಬಣ್ಣದವನಾಗಿರಬೇಕೆಂಬ ಅವರ ಅಪೇಕ್ಷೆ ಕೆಲಸ ಮಾಡಿದೆಯೇನೋ. ಕನ್ನಡತನ, ದ್ರಾವಿಡತನಗಳೂ ಇಣುಕು ಹಾಕಿವೆ. 

ಇಲ್ಲಿ ಆರೋಪಿತವಾಗಿರುವ ವರ್ಣಛಾಯೆಗಳನ್ನು ಮೂರು ಭಾಗ ಮಾಡಬಹುದು.1) ಪಂಪ ಬೆಳ್ಳಗೆ ಅಥವಾ ದಂತಕತೆಯ ಮಂದ ಬಿಳುಪಿನವನಾಗಿದ್ದ. 2) ಕೆಂಪು ಮಿಶ್ರಿತ ಕಪ್ಪು ಅಥವಾ ಎಣ್ಣೆಗೆಂಪು ಬಣ್ಣದವನಾಗಿದ್ದ.3) ಕಪ್ಪು ಅಥವಾ ನಸುಗಪ್ಪು ಬಣ್ಣದವನಾಗಿದ್ದ. ಬಹುಶಃ ಇವುಗಳಲ್ಲಿ ನಡುವಿನದನ್ನು ಒಪ್ಪಿಕೊಂಡರೆ ನ್ಯಾಯವಾದೀತು.ಬಲ್ಲವರು ಈ ಕುರಿತು ಹೆಚ್ಚು ಬೆಳಕು ಚೆಲ್ಲಬೇಕು.

ಪಂಪ ನಮ್ಮೊಡನಿಲ್ಲ. ಅವನನ್ನು ನೋಡಿದವರಿಲ್ಲ. ಅವನ ತದ್ವತ್ ಛಾಯಾ ಚಿತ್ರಗಳಿಲ್ಲ. ಹೀಗಾಗಿ ಕನ್ನಡಿಗರಿಗೆ ಸಹಜವಾಗದ ಬಣ್ಣವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಈ ಅನಿಶ್ಚಿತತೆಯ ಕಾರಣಕ್ಕೆ ಗ್ರಂಥ ಸಂಪಾದನೆಯಲ್ಲಿ ಶುದ್ಧ ರೂಪವನ್ನು ನಿರ್ಣಯಿಸಲು ಸಾಧ್ಯವಾಗದ ರೂಪಗಳನ್ನು ಪಾಠಗಳಲ್ಲಿ ಎಂದು ತೀರ್ಮಾನಿಸಿ ಒತ್ತಟ್ಟಿಗಿಡುವಂತೆ  ಕದಳೀಗರ್ಭವೆಂಬುದನ್ನು ಅರ್ಥಗ್ರಂಥಿ ಎಂದು ಪರಿಗಣಿಸಿಡಬೇಕಾಗುತ್ತದೆ.

ಹೇಗೂ ಇರಲಿ ಜಗದ ಮಹಾ ಕವಿಗಳಲ್ಲಿ ಕುರೂಪಕ್ಕೋ, ಅಂಗವಿಕಲತೆಗೋ, ಬಡತನ ಕಾರ್ಪಣ್ಯಕ್ಕೋ ವಿಶೇಷ ಗಮನ ಸೆಳೆದವರಿದ್ದಾರೆ. ನಮ್ಮ ಪಂಪ ಹಾಗಲ್ಲದೆ ಕವಿತೆಯೋಳ್ ಆಸೆಗೈವ ಫಲಗಳನ್ನು ಪಡೆದ ಶ್ರೀಮಂತ ರಸಿಕನೂ ಸಂತೃಪ್ತಿಯಾಗಿ ಬದುಕಿ ತನ್ನ ದೇಹ ಸೌಂದರ್ಯ ಅದರಲ್ಲೂ ಮೈಬಣ್ಣದ ಕಾರಣಕ್ಕೆ ಇಷ್ಟೆಲ್ಲ ಚರ್ಚೆಗೊಳಗಾಗುತ್ತಾನೆಂದರೆ ವಿಶೇಷ ಸಂಗತಿಯಲ್ಲವೇ?

ಡಾ ಪುರುಷೋತ್ತಮ ಬಿಳಿಮಲೆ ಅವರ ಮೂಲಕ

‍ಲೇಖಕರು Admin

September 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: