ಮಹಮ್ಮದ್ ರಫೀಕ್ ಕೊಟ್ಟೂರು
—
ಮೌಲ್ವೀ ರಾಗಬದ್ಧವಾಗಿ
ಕುರಾನಿನ ಆಯತ್ ಗಳಿಗೆ ಜೀವ ತುಂಬಿತ್ತಿದ್ದ
ಹಿಂದಿನವರೆಲ್ಲಾ ಕಿವಿಯಾಗಿದ್ದರು
ಆಕಳಿಸುವವರು,
ಸಮಯ ಮೀರಿ
ವಜೂವಿನಲ್ಲಿ ಮುಕ್ಕಳಿಸುವವರು
ಸಾಲಾಗಿ ನಿಂತು-ಕುಂತು
ಇಬಾದತ್‌ನಲ್ಲಿ ತೊಡಗಿಸಿಕೊಂಡಿದ್ದಾರೆ
ಮೂಲೆಯಲ್ಲಿ ಜೇಡವೊಂದು
ತನ್ನ ಬಲೆಯಂತಹ
ಮುಸಲ್ಲಾ ಹಾಸಿ ಧ್ಯಾನದಲ್ಲಿದೆ
ಬಲೆಯ ಎಲ್ಲಾ ಜಾಲಗಳಿಗೂ
ತನ್ನ ಮನವ ಕೀಲಿಸಿ
ಧ್ಯಾನದೊಳಿದೆ
ಆಕಳಿಸುವ ಮುಕ್ಕಳಿಸುವ
ನಿಂತಿರುವ ಕುಳಿತಿರುವ
ಯಾವ ಛಾಯೆಗಳೂ ಇಲ್ಲ
ಧ್ಯಾನ ಕೇವಲ ಧ್ಯಾನ
ಮೌಲ್ವಿ ಆಯತ್ ಗಳೊಂದಿಗೆ
ಆಕಳಿಸಿ, ಮುಕ್ಕಳಿಸುವವರಿಗೆ
ಐದು ಹೊತ್ತು
ಐದೇ ಹೊತ್ತು!
ಜೇಡ ಹಾಗಲ್ಲ
ಇಪ್ಪತ್ನಾಲ್ಕು ಗಂಟೆ ನಿರೀಕ್ಷೆ
ಗುಡಿ, ಮಸೀದಿ, ಇಗರ್ಜಿ
ಎಲ್ಲಾ ಮೂಲೆಗಳಲ್ಲೂ ಜೇಡ ಧ್ಯಾನದೊಳಿದೆ!
(ಆಯತ್= ಸಾಲುಗಳು, ವಝೂ=ಸಂಪ್ರದಾಯಬದ್ಧವಾಗಿ ಮುಖ ತೊಳೆಯುವುದು, ಮುಸಲ್ಲಾ= ನಮಾಜ್ ಮಾಡುವ ಹಾಸು, ಇಬಾದತ್= ದೇವರ ಧ್ಯಾನ, ಪೂಜೆ)
————————————————————————–
ತುಂಬಾ ಚೆನ್ನಾಗಿದೆ. ಈ ಜೇಡನ ಬಗ್ಗೆ ಇನ್ನಷ್ಟು ಬರೆಯಿರಿ
ನಿಮ್ಮ ಪ್ರತಿಕ್ರಿಯೆಯನ್ನು ಈಗ ನೋಡುತ್ತಿರುವ ನತದೃಷ್ಟ ನಾನು. ಒಂದು ವರ್ಷದ ನಂತರ. ತುಂಬಾ ಧನ್ಯವಾದಗಳು ಮೇಡಂ ಬಹಳ ಅಂದರೆ ಬಹಳ ಖುಷಿಯಾಯಿತು ನಿಮ್ಮ ಪ್ರತಿಕ್ರಿಯೆಯಿಂದ
ಮಹಮ್ಮದ್ ರಫೀಕ್ ಕೊಟ್ಟೂರು