ಮತ್ತೆ ಮಳೆ
–ಅಪರ್ಣಾ ಹೆಗಡೆ ಇಟ್ಗುಳಿ
**
ಮತ್ತೆ ಮಳೆ ಕಾವೆದ್ದ ಧರೆಗೆ ತುಸು ಸಾಂತ್ವನ
ಅವಿತು ಹನಿಗಳ ಎದೆಯಲ್ಲಿ ಸುಮ್ಮನೊಂದಷ್ಟು ಹೊತ್ತು ಮಲಗಿ ಬಿಡುವಂತೆ
ಕತ್ತಲಲ್ಲಿ ಒಂದು ಮಧುರ ಸಂಗೀತ ಕೇಳಿದಂತೆ
ರಚ್ಚೆ ಹಿಡಿದ ಮಗು ಬೆಚ್ಚಗೆ ತೋಳಲ್ಲಿ ಮಲಗಿದಂತೆ
ಮತ್ತೆ ಮಳೆ ತುಂಟಾಟವಾಡುವ ಇನಿಯನಂತೆ
ಮುಂಗುರುಳ ಸೋಕಿ ಕಚಗುಳಿಯಿಟ್ಟು ರೇಗಿಸಿದಂತೆ ತಟ್ಟನೆ ಅಡಗಿ ಮಾಯವಾದಂತೆ ಪ್ರತ್ಯಕ್ಷವಾದರೆ ತೆಕ್ಕೈಸಿ ಉಸಿರುಗಟ್ಟುವಂತೆ
ಮತ್ತೆ ಮಳೆ ತವರ ಬಿಟ್ಟ ನವ ವಧುವಂತೆ
ಮಬ್ಬು ಕವಿದು ತಾಸುಗಟ್ಟಲೆ ಬಿಕ್ಕುವಿಕೆ
ಒಮ್ಮೊಮ್ಮೆ ತುಸು ನಗುವರಳಿಸಿ ಚೈತನ್ಯ ಬರುವಂತೆ
ಅಪ್ಪನ ಹೆಗಲಿಗೆ ಆತುಕೊಳುವಂತೆ
ಮತ್ತೆ ಮಳೆ ಹಳೆಯ ಸರಕುಗಳ ಮೂಟೆಯಂತೆ
ಬಿಚ್ಚಿದರೆ ನೆನಪ ಧಾರೆ ಮುಗಿಯುವುದೇ ಇಲ್ಲ
ಕ್ಷಣ ನಿಂತರೂ ತೊಟ್ಟಿಕ್ಕುವ ಹನಿಗಳ ಟಪ್ ಟಪ್ ಸದ್ದು
ಮಿಡಿಯು ಹೃದಯ ಬಡಿತದಂತೆ
0 ಪ್ರತಿಕ್ರಿಯೆಗಳು