ದಾಕ್ಷಾಯಣಿ ಮಸೂತಿ
**
ಕವಿ ನಿಝಾಮ್ ಗೋಳಿಪಡ್ಡು ಅವರ ಕವನ ಸಂಕಲನ ಬಿಡುಗಡೆಯಾಗಿದೆ.
‘ಪದ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ದಾಕ್ಷಾಯಣಿ ಮಸೂತಿ ಅವರು ಬರೆದ ಬರಹ ಇಲ್ಲಿದೆ.
**
“ಮಳೆಯೆಂದರೆ ಪೇಪರ್
ಆಯುವವ ನಗುತ್ತಾನೆ
ಮಳೆಯ ನಂತರದ
ಬೀದಿಯಲ್ಲಿ
ನಿಮ್ಮೆಲ್ಲ ಕೊಚ್ಚೆಯನ್ನು
ದೂಡಿ ರಾಶಿಯಾಕುತ್ತದೆ”
ಈ ಸಾಲುಗಳು ಶಿರ್ಷೀಕೆಗಳಿರದ ‘ಅನಾಮಧೇಯ ಗೀರುಗಳು’ ಕೃತಿಯ ಒಂದು ಕವಿತೆಯದ್ದು. ಈ ಸಾಲುಗಳು ಪೇಪರ್ ಆಯುವವನ ಕಷ್ಟವನ್ನಷ್ಟೇ ಹೇಳುವುದಿಲ್ಲ. “ನಿಮ್ಮ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ.” ಎಂದು ಹೇಳುವುದರ ಮೂಲಕ ನಮ್ಮ ಅಂತರಂಗವನ್ನು ಪ್ರಶ್ನಿಸುತ್ತದೆ.
“ಅಕ್ಷರಕ್ಕೆ ಬಟ್ಟೆ
ತೊಟ್ಟಂತಲ್ಲ ಬದುಕ
ಉಡುವುದು ಮಹಾಜನಗಳೇ”
ಈ ಸಾಲುಗಳಲಿ ಬದುಕಿನ ತಿಳಿವನ್ನು ಅದೆಷ್ಟು ಚೆಂದವಾಗಿ ಬಿಚ್ಚಿಡುತ್ತಾರೆ ಕವಿ. ‘ಅನಾಮಧೇಯ ಗೀರುಗಳಲ್ಲಿನ’ ಕವಿತೆಗಳು ಹಲವು ಒಳನೋಟಗಳನ್ನು ಹೊಂದಿದ್ದು, ನಮ್ಮದೇ ನೋವು, ನಮ್ಮದೇ ಮಾತುಗಳು ಎನ್ನುವಷ್ಟು ಆಪ್ತವಾಗಿವೆ. ಇಲ್ಲಿ ತಣ್ಣನೆಯ ನೋವಿದೆ. ಅದಮ್ಯ ಪ್ರೇಮದ ಪರಿಮಳವಿದೆ. ಕಾತುರತೆ ಒಸರುತ್ತದೆ. ನಿತ್ಯ ಬದುಕಿನ ದುಗುಡಗಳ ಆಲಾಪವಿದೆ. ಸಾಮಾಜಿಕ ಕಳಕಳಿಯ ಪ್ರಶ್ನೆಗಳಿವೆ. ಅಪಾರ ಜೀವನ ಪ್ರೀತಿಯ ಹರಿವು ಜಿನುಗುತ್ತದೆ. ಸಮಕಾಲೀನ ಆಗು-ಹೋಗುಗಳಿಗೆ ಸ್ಪಂದಿಸಲು ಕವಿತೆ ಒಂದು ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ.
“ಈಗಿಲ್ಲಿ,,,
ಕುರುಡರ ಊರಿನಲ್ಲಿ
ಕಣ್ಣಿದ್ದವ ತಪ್ಪಿತಸ್ಥ “
ಈ ಸಾಲುಗಳ ಮೂಲಕ ಕವಿ ಪ್ರಸ್ತುತ ಉಸಿರುಗಟ್ಟಿವಿಕೆ ಸನ್ನಿವೇಶಗಳನ್ನು ಮಾರ್ಮಿಕವಾಗಿ ವ್ಯಕ್ತಪಡಿಸುತ್ತಾರೆ.
“ಕಂಬನಿ ಮಾರುವ ಸಂತೆಯಲ್ಲಿ
ಫಕೀರನೂ ಗಿರಾಕಿ
ಖಾಲಿ ಶಿಲುಬೆಯ ಗಿರಾಕಿ..!”
“ಅವಳು
ಕೊಳೆತ ನಗುವಿನೊಂದಿಗೆ
ಅಳುವನ್ನು ತಿಂದು
ಹರಿವ ನಿರ್ಲಿಪ್ತ
ನದಿಯಾಗಿರುವಾಗ”
ಸಣ್ಣ ಸಣ್ಣ ಸಾಲುಗಳಲ್ಲಿ ವಿಭಿನ್ನ ರೂಪಕಗಳೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸುವ ಕವಿ ನಿಝಾಮ್ ಗೋಳಿಪಡ್ಡು ಅವರ ಕಾವ್ಯ ಕಲೆ ಓದುಗರ ಮನ ಸೆಳೆಯದೆ ಇರಲಾರದು. ‘ಪದ ಪ್ರಕಾಶನ‘ ತಮ್ಮ ಮೊದಲ ಕೂಸಾದ ‘ಅನಾಮಧೇಯ ಗೀರುಗಳು’ ಕೃತಿಯನ್ನು ತುಂಬಾ ಆಸ್ಥೆಯಿಂದ ಗುಣಮಟ್ಟದೊಂದಿಗೆ ಪ್ರಕಟಿಸಿದ್ದಾರೆ. ಶುಭವಾಗಲಿ.
0 ಪ್ರತಿಕ್ರಿಯೆಗಳು