ರಾಜೇಶ್ವರಿ ಹುಲ್ಲೇನಹಳ್ಳಿ
**
ಸಾಹಿತಿ ಸ ವೆಂ ಪೂರ್ಣಿಮಾ ಅವರ ಹೊಸ ಕೃತಿ ‘ಒಂದೆಲೆ ಮೇಲಿನ ಕಾಡು.’
ಈ ಕೃತಿಯನ್ನು ‘ಹಾಡ್ಲಹಳ್ಳಿ ಪಬ್ಲಿಕೇಷನ್ಸ್’ ಪ್ರಕಟಿಸಿದೆ.
ಈ ಕೃತಿಯ ಕುರಿತು ಸಾಹಿತಿ ರಾಜೇಶ್ವರಿ ಹುಲ್ಲೇನಹಳ್ಳಿ ಅವರು ಬರೆದ ಬರಹ ಇಲ್ಲಿದೆ.
**
ಗೆಳತಿ ಪೂರ್ಣಿಮಾ, ನನ್ನ ಬಾಯಲ್ಲಿ ಅವಳು ‘ಹುಣ್ಣಮೆ’ ಎಂದೇ ಕರೆಯಲ್ಪಡುವವಳು. ಅವಳೆಂದರೆ ಜನಪದ, ಸೋಬಾನೆ, ಭಾವಗೀತೆ. ಚಂದದ ನಿರೂಪಕಿ. ಹುಣ್ಣಿಮೆ ಫೋನಾಯಿಸಿ “ರಾಜೇಶ್ವರಿ ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ ಬನ್ರಪ್ಪಾ. ಎಲ್ಲಾ ಮಹಿಳೆಯರು ಚಂದವಾಗಿ ಮುಂದಿನ ಸಾಲನ್ನು ಅಲಂಕರಿಸಿ. ಸಮಾರಂಭ ಗಲ ಗಲ ಎನ್ನುವಂತಿರಲಿ. ಎಲ್ಲಾ ಮಹಿಳಾ ಲೇಖಕಿಯರ ಸಮಾಗಮ ಕಾರ್ಯಕ್ರಮವನ್ನು ಇನ್ನೂ ಅಂದಗೊಳಿಸುತ್ತದೆ.” ಎಂದು ಕರೆದಾಗ “ಬಂದೇ ಬರುವೆ ಹುಣ್ಣಿಮೆ.” ಎಂದೆ. ಆದರೆ ಯಥಾ ರೀತಿ ತಡವಾಗಿ ಹೋದೆ, ಆದರೆ ಮುಂದಿನ ಸೀಟಿನಲ್ಲೇ ಕುಳಿತೆ. ಪುಸ್ತಕ ಬಿಡುಗಡೆಯಾಗಿ ಉದ್ಘಾಟಕರ ಭಾಷಣ ಆಗಷ್ಟೇ ಆರಂಭವಾಗಿತ್ತು. ಕೃತಿಯ ಹೆಸರು ಕೇಳಿ ವಿಶೇಷವೆನಿಸಿತು. ‘ಒಂದೆಲೆ ಮೇಲಿನ ಕಾಡು.’ ಹೇಳಿ ಕೇಳಿ ‘ಮಲೆ ಸೀಮೆಯ’ ಹೆಣ್ಣು ಮಗಳು ಹಸಿರು, ಗಿಡ-ಮರ ಕಾಡು, ಎಲ್ಲವೂ ಉಸಿರಿನೊಂದಿಗೆ ಬೆರೆತಿರುವಾಗ ಈ ಹೆಸರ ಇಟ್ಟಿರಬಹುದೆಂದುಕೊಂಡೆ! ಇಡೀ ಕಾರ್ಯಕ್ರಮದಲ್ಲಿ ನಾವುಗಳು ಹಲವಾರು ಗೆಳತಿಯರು ಹಾಜರಿದ್ದು ಊಟ ಮಾಡಿ ಪುಸ್ತಕವನ್ನು ಕೊಂಡು, ಪುಸ್ತಕಕ್ಕೆ ಹುಣ್ಣಿಮೆಯ ಹಸ್ತಾಕ್ಷರವನ್ನು ಬರೆಸಿ ಮನೆಗೆ ತಂದು ಕಪಾಟಿನಲ್ಲಿಟ್ಟರೆ, ಮರೆಯಬಹುದೆಂದು ಟೀಪಾಯ್ ಮೇಲಿಟ್ಟೆ. ಸದಾ ಕಣ್ಣಿಗೆ ಬೀಳುವಂತಿದ್ದಲ್ಲಿ ಓದಬಹುದೆಂದು.
ಪುಸ್ತಕವನ್ನು ಕೈಗೆತ್ತಿಕೊಂಡು ಮೊದಲ ಪುಟ ತಿರುವಿ, ಸೀದಾ ಕೊನೆಯ ಪುಟಕ್ಕೆ ಕೊನೆಯ ಲೇಖನಕ್ಕೆ ಹೋದೆ. ಅದು “ಹಸಿದವಳಿಗೆ ಅನ್ನವಿಕ್ಕಿ ತಾಯಿಯಾದವಳು ಸಿಕ್ಕ ದಿನ”. (ಇದು ನನ್ನ ಅಭ್ಯಾಸ ಅಲ್ಲಾ ದುರಭ್ಯಾಸ! ಯಾವುದೇ ಮಾಸ ಪತ್ರಿಕೆ, ವಾರ ಪತ್ರಿಕೆಗಳಾಗಲಿ ಮುಖ ಪುಟ ಸವರಿ, ಮೊದಲ ಪುಟ ನೋಡಿ ಸೀದಾ ಹಿಂದಿನ ಪುಟಕ್ಕೆ ಹಾರುವುದು ಕೂರುವುದು.) ಓದಿದೆ, ಓದುತ್ತಾ ಓದುತ್ತಾ, ಒಮ್ಮೊಮ್ಮೆ ಒಂದು ಹೊತ್ತು ತಿನ್ನದಿದ್ದರೆ, ಹಸಿವಿಗೆ ತಲೆ ನೋವು ಬರುವಾಗ ಇಡೀ ಒಂದು ದಿನದ ಹಸಿವು ಹೇಗಿದ್ದಿರಬಹುದೆಂದು ಊಹಿಸಿಕೊಂಡೆ! ಹಾಗೇ ಆ ಹಸಿವ ನೀಗಿಸಿದ ಅಮ್ಮನಿಗೆ ನಮಿಸಿದೆ. ಇದು ಲೇಖಕಿಯ ಒಂದು ಸ್ವಾನುಭವವಾದರೆ, ಮತ್ತೆ ಹಿಂದಿನಿಂದಲೇ ಎರಡನೆಯದಾದ “ಅಣ್ಣನಾಗಿ ಸಿಕ್ಕ ವಿನ್ಸೆಂಟ್” ಲೇಖನ ಕೂಡ ಅನುಭವವೇ! ಹಿಂದಿನಪುಟದಿಂದ ಆರಂಭಿಸಿ ನಾಲ್ಕಾರು ಲೇಖನ ಓದಿದೆ. ಹಲವಾರು ದಿನಗಳು ಕಳೆದು ಮುಂದಿನ ಪುಟದಿಂದ ಓದಿನ ಪಯಣ ಆರಂಭಿಸಿದೆ.
ಅಲ್ಲಿನ ಹಲವಾರು ಲೇಖನಗಳನ್ನು ನಾನು ಪತ್ರಿಕೆಯಲ್ಲಿ ಓದಿ ಆ ಕುರಿತು ಕೆಲವು ಬಾರಿ ಲೇಖಕಿಯೊಂದಿಗೆ ಚರ್ಚಿಸಿದ್ದೆ ಕೂಡ. ಮೊದಲಿಗೇ ಗೆಳತಿ ‘ರಜಿಯಾ’ಳ ಬದುಕಿನ ಚಿತ್ರಣ. ಅನಾಥ ಹಿಂದೂ ಮಗುವಾದ ರಜಿಯಾಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ ಮುಸಲ್ಮಾನ್ ತಂದೆ ತಾಯಿ. ಎಲ್ಲಕೂ ಮಿಗಿಲಾಗಿ ಬೂಬಮ್ಮ ತನ್ನ ಮಗಳ ಅಂಗವೈಕಲ್ಯತೆಯನ್ನು ಹಾಗೂ ತನ್ನ ಕುರೂಪ, ಪತಿಯ ಅನಾರೋಗ್ಯವನ್ನು ಬೇರೆಯದೇ ಕಾರಣಗಳನ್ನು ಕೊಟ್ಟು ಸಮರ್ಥಿಸಿಕೊಳುವ ಪರಿ. ಹೆತ್ತವರನ್ನು ಕಳೆದುಕೊಂಡ ರಜಿಯಾ ಪ್ರೀತಿಸಿ ಮದುವೆಯಾಗಿ ಮಗುವಿಗೆ ಜನ್ಮವಿತ್ತು, ಪ್ರೀತಿಸಿ ಮದುವೆಯಾದವರ ಮನೆಯ ತಿರಸ್ಕಾರಕ್ಕೊಳಗಾಗಿ ಮನೆಯವರು ಬಲವಂತವಾಗಿ ಪತಿಗೆ ಬೇರೊಂದು ಮದುವೆ ಮಾಡಿದಾಗ ಪತಿ ಅವಳಿಂದ ದೂರವಾದರೂ ಆತನನ್ನು ಅಸಹಾಯಕನೆಂದು ಸಮರ್ಥಿಸಿಕೊಂಡು, ತನ್ನ ಅಸಹಾಯಕತೆಯಿಂದ ಮಗುವನ್ನು ಮದರಸಾಗೆ ಸೇರಿಸಿದ ಕಥೆ.
ಇನ್ನು ತವರಿನ ಗೌರಿ ಬಾಗಿನದ ನಿರೀಕ್ಷೆ, ಸಂಭ್ರಮ ಯಾವ ಆಸ್ತಿಗೂ ಮೀರಿದ್ದು ಎನ್ನುವ ಭಾವ. ಮಳೆಗಾಲದಲ್ಲಿ ಸಕಲೇಶಪುರದ ಮಳೆ, ಆಗ ಸಿಗುವ ವೈವಿಧ್ಯಮಯ ಮೀನು, ಕಳಲೆ, ಕೆಸವಿನ ಪಲ್ಯ ದಂಟು, ಕೋಳಿ ಸಾರು, ಅಕ್ಕಿ ಕಡುಬು ಹೀಗೆ ಸ್ಥಳೀಯ ಖಾದ್ಯಗಳನ್ನು ನೆನಪಿಸುತ್ತಾ ಬಾಯಲ್ಲಿ ನೀರು ತಂದುಕೊಂಡಿರುವ ಪರಿ. ‘ಹೇಮೆಯ ದಡದಲ್ಲಿ’ ಬಟ್ಟೆ ಒಗೆಯುವ ಕಲ್ಲು, ಅದರ ಒಡೆತನ, ಅಲ್ಲಿ ನೀರಿನಲ್ಲಿ ಕರಗಿ ಹೋದ ಹೆಣ್ಣು ಮಕ್ಕಳ ಕಣ್ಣೀರು, ಕಷ್ಟ ಸುಖದ ಮಾತುಗಳು ಅದೊಂದು ಹೆಣ್ಣುಮಕ್ಕಳ ನೋವು ನಲಿವುಗಳ ಅನಾವರಣದ ತಾಣವೆನಿಸುವುದರೊಂದಿಗೆ ಬಟ್ಟೆ ಒಗೆದು ಬದುಕ ಸಾಗಿಸುವವರ ಕಥೆ ಕೂಡ ಚಿತ್ರಿಸಲ್ಪಟ್ಟಿರುವುದು ಸೂಕ್ಷ್ಮ ಸಂವೇದನೆಯೆನಿಸಿತು.
‘ನಕ್ಷತ್ರ ಮೀನಿನ ಮಾಮು’ ಕುರಿತು, ಮಾಮು ತನ್ನ ವಯಸ್ಸಿನ ಮಗಳನ್ನು ಕಳೆದುಕೊಂಡ ಕಾರಣ ಲೇಖಕಿಯನ್ನು ವಿಶೇಷ ಪ್ರೀತಿಯಿಂದ ಕಾಣುವುದು ಒಂದೋ ಎರಡೋ ನಕ್ಷತ್ರ ಮೀನನ್ನು ಹೆಚ್ಚಾಗಿ ಕೊಟ್ಟು ಹೋಗುವುದು, ಆತ ಕಳೆದುಕೊಂಡ ಮಗಳನ್ನು ಇವಳಲ್ಲಿ ಕಾಣುವ ಚಿತ್ರಣ ಸೊಗಸಾಗಿದೆ. ಹಾಗೇ ವಠಾರದ ಹೆಂಗಸರೆಲ್ಲಾ ಮೀನಿಗಾಗಿ ಮುಗಿಬಿದ್ದು ಚೌಕಾಸಿ ಮಾಡಿ, ಜಗಳ ಮಾಡಿ ಕೊನೆಗೆ ದೊಡ್ಡ ಲೋಟದಲ್ಲಿ ಕಾಫಿ ಕೊಟ್ಟು ಕಳಿಸುವ ಹೆಂಗಸರ ಮನಸ್ಥಿತಿ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪದ್ದತಿ, ಆಚಾರ, ವಿಚಾರಗಳಲ್ಲಿ ಒಂದು ಮೂವತ್ತು ಐವತ್ತು ಕಿಲೋ ಮೀಟರುಗಳ ಅಂತರದಲ್ಲಿ ಬಹಳಷ್ಟು ವೆತ್ಯಾಸಗಳಿದ್ದು. ಮಲೆನಾಡಿನ ಷಷ್ಟಿ, ಸಂಕ್ರಾಂತಿ, ಸುಗ್ಗಿ ಆಚರಣೆಯನ್ನು ಲೇಖಕಿ ಕಣ್ಣಮುಂದೆ ತಂದಿದ್ದಾರೆ. ಸಣ್ಣ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಎಂದೂ ಹೊರ ಹೋಗದ ಮುಗ್ದ ಅಮ್ಮ , ಹೆತ್ತ ನಾಲ್ಕುಮಕ್ಕಳ ಹೊಟ್ಟೆ ತುಂಬಿಸುವ ಸಲುವಾಗಿ ಏಲಕ್ಕಿ ಮಂಡಿಯಲ್ಲಿ ಕೆಲಸ ಮಾಡಿ ಪಟ್ಟ ಪಾಡನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ, ಕಾಫಿಗಾಗಿ ಹಟ ಮಾಡುತ್ತಿದ್ದ ಚಿಕ್ಕ ಮಗಳಿಗೆ ಕಾಫಿ ಪುಡಿಯೇ ಇಲ್ಲದ ಕರ್ರನೆಯ ಕಾಫಿ ಪುಡಿ ಡಬ್ಬಕ್ಕೆ ಬೆಲ್ಲ ನೀರು ಹಾಕಿ ಕರಗಿಸಿ ಕೊಟ್ಟ ಸಂದರ್ಭ ಕರುಳು ಕಲಕಿಸುತ್ತದೆ. ಬಡತನದ ಶಾಪದಲ್ಲಿ ಬದುಕ ಸಾರ್ಥಕ್ಯಗೊಳಿಸಿದ ಅಮ್ಮನ ಪಾತ್ರ ನಮನಾರ್ಹ.
ಸುಮಾರು ಮೂವತ್ತೊಂಬತ್ತು ಲೇಖನಗಳನ್ನೊಳಗೊಂಡ ಈ ಪುಸ್ತಕದಲ್ಲಿ ಬಾಲ್ಯದಲ್ಲಿ ಲೇಖಕಿ ತಾನು ಬೆಳೆದ ಊರಿನ ಹಾದಿಯ, ಬೀದಿಯ, ಹಿತ್ತಲ, ಸುರಿವ ಮಳೆಯ ಸದ್ದು, ಏಲಕ್ಕಿಯ ಘಮ, ಹಿತ್ತಲ ಹಾವಿ ಇಲಿ, ಸುಂಡ, ಶಾಲಾ ದಿನಗಳ ಸಹಪಾಠಿಗಳ ಪರಿಚಯದೊಂದಿಗೆ ಸಹಪಾಠಿ ಫರ್ವೇಜ್ ಬದುಕಿನ ಕುರಿತು ಮನದೊಳಗೇ ಮರುಗಿದ್ದು, ಬೂಬಮ್ಮನ ಮಗಳು ಫರ್ವೇಜನ ಅಮ್ಮ, ಗೆಳತಿ ರಜಿಯಾ, ಗೆಳತಿ ಗೀತಾಳ ಮಲ ತಂದೆಯ ಮೇಲಿನ ಕೋಪ, ತಿರಸ್ಕಾರ, ಬಾಲ್ಯದ ದಿನಗಳ ಲೇಖಕಿಯ ಪ್ರತಿಭೆ, ಆಟ, ಪಾಠ, ಹಾಡು-ಹಸೆ ನೃತ್ಯ-ನಾಟಕ, ಅಭಿನಯ ಹಾಗೇ ಶಾಲಾ ವಾರ್ಷಿಕೋತ್ಸವದಲ್ಲಿ ಊರಿಗೊಬ್ಬನೇ ಇದ್ದ. ಓದಲು ಬಾರದ ಮೈಕ್ ಸೆಟ್ ರಫೀಕಣ್ಣ “ಕರೆದರೂ ಕೇಳದೆ” ಎಂಬ ರಾಜ್ ಕುಮಾರ್ ಸಿನೆಮಾದ ಹಾಡನ್ನು ಹಾಕುವ ಬದಲಿಗೆ ಪ್ಲೇಟಿನ ಮೇಲೆ ರಾಜ್ ಕುಮಾರ್ ಚಿತ್ರವಿದ್ದ “ಚಂದಿರ ತಂದಾ ಹುಣ್ಣಿಮೆ ರಾತ್ರಿ” ಹಾಡು ಹಾಕಿ ಮಾಡಿದ ಗ್ರಾಮಾಫೋನಿನ ಅವಾಂತರ.
ಹಾಗೇ ಅಜ್ಜಿ ಮನೆಯ ಸುಗ್ಗಿಗೆ ಬಸ್ಸಿಳಿದು ನಡೆದು ಹೋಗುವಾಗ ಊರಿನ ಎಲ್ಲರಿಂದ ಅಕ್ಕಯ್ಯನೆಂದೇ ಕರೆಸಿಕೊಳ್ಳುತ್ತಿದ್ದ ತಾಯಿ, ಕಾಲು ಹಾದಿಯುದ್ದಕ್ಕೂ ಅತ್ತಿತ್ತ ದಾರಿಗೆ ಅಡ್ಡಲಾದ ಗಿಡದ ರೆಂಬೆಗಳನ್ನು ಮುರಿಯುತ್ತಾ ಮಕ್ಕಳಿಗೂ ಮುರಿಯಲು ಹೇಳಿ ಎಲ್ಲವನ್ನೂ ಒಂದೆಡೆ ಗುಡ್ಡೆ ಹಾಕಿ ಹೇಳುವ ಮಾತು, “ಅಡವಿ ತಾಯಿ ಎಲ್ಲರನ್ನೂ ಕಾಪಾಡವ್ವ” ದಾರಿಗೆ ಅಡ್ಡಲಾದ ರೆಂಬೆ ಕೊಂಬೆ ಮುರಿದದ್ದಕ್ಕೆ ಅಡವಿ ತಾಯಿ ಕೋಪಿಸಿಕೊಳ್ಳದಿರಲೆಂದು ಪ್ರಾರ್ಥಿಸಿದ ಪರಿ, ಹಾದಿಯಲ್ಲಿ ಸಿಕ್ಕ ಕಲ್ಲು ಬಸವನಿಗೆ “ಕೈ ಬಿಡ ಬೇಡ ಕಣಪ್ಪಾ” ಎಂಬ ಪ್ರಾರ್ಥನೆ, ಹಾಗೇ ಹಳ್ಳದ ನೀರನಲ್ಲಿ ಕೈ ಕಾಲು ತೊಳೆದು ತಲೆಗೆ ಚುಮುಕಿಸಿಕೊಂಡು “ಹಿಂಗೇ ಇರವ್ವ ಬತ್ತ ಬೇಡ”. ಎಂದು ಗಂಗೆಯನ್ನು ಬೇಡುವ ಪರಿ ಎಲ್ಲವೂ ಅನಕ್ಷರಸ್ಥ ತಾಯಿಗೆ ಪ್ರಕೃತಿಯ ಮೇಲಿದ್ದ ಭಕ್ತಿ ಗೌರವ ಪೂಜನೀಯ ಭಾವವನ್ನು ತೋರುತ್ತದೆ.
“ಏಲಕ್ಕಿ ಮಂಡಿ ಇಂದಿನ ಗಾರ್ಮೆಂಟ್ಸ್” ಎಂಬ ಲೇಖನದಲ್ಲಿ ಅವಿದ್ಯಾವಂತ ಹೆಣ್ಣು ಮಕ್ಕಳು ಮನೆಯ ಮುಂದೆ ಇದ್ದ ಏಲಕ್ಕಿ ಮಂಡಿಯಲ್ಲಿ ದುಡಿದು ಬದುಕು ಕಟ್ಟಿಕೊಂಡ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಹಲವಾರು ಲೇಖನಗಳಲ್ಲಿ ಜಾನಪದ ಹಾಡುಗಳ ಸಾಲುಗಳು ತಂತಾನೇ ನುಸುಳಿ ಅವರ ಜಾನಪದ ಪ್ರೀತಿ ಆಸ್ಥೆಯನ್ನು ಪ್ರತಿಬಿಂಬಿಸುತ್ತವೆ. ಹಾಗೇ ಅಪ್ಪನ ಗೆಳೆಯರಾದ ಜನಪದ ಕವಿ ಎಸ್ ಕೆ. ಕರೀಮ್ ಖಾನರು ಅವರ ಮೇಲೆ ಬೀರಿದ ಪ್ರಭಾವವನ್ನು ಅರುಹಿದ್ದಾರೆ. ಲೇಖಕಿ ಪ್ರತಿಯೊಂದು ಲೇಖನದಲ್ಲೂ ಬಾಲ್ಯದ ಎಲ್ಲ ಸಂತಸ ಸಂಭ್ರಮವನ್ನು ಇಂದು ಕಳೆದು ಕೊಂಡಿರುವುದಕ್ಕೆ ವ್ಯಥಿಸುತ್ತಾರೆ. ಒಟ್ಟಾರೆ ಇಡೀ ಕೃತಿ ಲೇಖಕಿಯ ಅನುಭವದ ಸಾರ ಎಂದರೆ ತಪ್ಪಾಗಲಾರದು. “ತಡವಾಗಿ ಕೊಟ್ಟರೂ ಅಡವಾಗಿ ಕೊಟ್ಟರು” ಎಂಬಂತೆ ಎಂದೋ ಆಗಬೇಕಿದ್ದ ಬರಹ ಒಂದು ಕೃತಿ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ನಿಂತಿದೆ. ಇನ್ನೂ ಹೆಚ್ಚಿನ ಅನುಭಾವಿಕ ಕೃತಿಗಳು ಅವರ ಅನುಭವದ ಮೂಸೆಯಿಂದ ಹೊರ ಬರಲಿ ಎಂಬ ಆಶಯದೊಂದಿಗೆ.
Super well work