‘ಮಲ್ಲಿಗೆ’ಯ ಘಮ

ತಮ್ಮಣ್ಣ ಬೀಗಾರ

**

ಪ್ರಸಿದ್ಧ ಜಾನಪದ ವಿದ್ವಾಂಸ ಡಾ ಕುರುವ ಬಸವರಾಜ್ ಅವರ ಕೃತಿ ‘ಮಲ್ಲಿಗೆ’.

ಈ ಕೃತಿಯ ಕುರಿತು ಖ್ಯಾತ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರು ಬರೆದ ಬರಹ ಇಲ್ಲಿದೆ.

**

ಜಾನಪದ ವಿದ್ವಾಂಸರಾದ ಡಾ.ಕುರುವ ಬಸವರಾಜ್ ಅವರಿಗೆ ಮಕ್ಕಳ ಸಾಹಿತ್ಯ ಬರೆಯುವ ತುಡಿತ ಮೊದಲಿನಂದಲೂ ಇದೆ. ಅವರ ‘ಹುಲ್ಲೆಯ ಹಾಡು’ ಕೃತಿ ಎಲ್ಲರ ಗಮನ ಸೆಳೆದುದ್ದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈಗ ಅವರು ಬರೆದಿರುವ ‘ಮಲ್ಲಿಗೆ’ ಎನ್ನುವ ಮಕ್ಕಳ ಕಥನ ಕಾವ್ಯವನ್ನು ಓದಿ ಒಂದಿಷ್ಟು ಅನಿಸಿಕೆಗಳನ್ನು ಆಪ್ತವಾಗಿ ಹಂಚಿಕೊಂಡಿದ್ದೇನೆ. ಬಾಲ್ಯ ಹಾಗೂ ವೃದ್ಧಾಪ್ಯ ಎರಡೂ ಬದುಕಿನಲ್ಲಿ ಬಹು ಸೂಕ್ಷ್ಮವಾದದ್ದು. ಎರಡೂ ಬೇರೆಯವರ ಆಸರೆಯನ್ನು ಅನಿವಾರ್ಯವಾಗಿ ಬೇಡುತ್ತಿರುತ್ತವೆ. ಡಾ. ಕುರುವ ಬಸವರಾಜ್ ಅವರ ‘ಮಲ್ಲಿಗೆ’ ಎನ್ನುವ ಕಥನ ಕಾವ್ಯದಲ್ಲಿ ಬಾಲ್ಯದಲ್ಲಿಯೇ ಅನಾಥಳಾದ ಮಲ್ಲಿಗೆ ಎಂಬ ಹುಡುಗಿಯ ಕಥೆ ಇದೆ.

ಡಾ ಕುರುವ ಬಸವರಾಜ್

**

ಏಳು ವರ್ಷದ ಬಾಲೆ ಮಲ್ಲಿಗೆ ದಿಕ್ಯಾರಿಲ್ಲ
ಉಂಡೆಯ ಉಟ್ಟೆಯ ಅನ್ನೋರಿಲ್ಲ

ಎಂದೆಲ್ಲಾ ಶುರುವಾಗುವ ಕವನ ಹುಡುಗಿಯ ಚಿತ್ರವನ್ನು ಕಣ್ಣ ಮುಂದೆ ತಂದು ನಿಲ್ಲಿಸಿ ಆರ್ದ್ರತೆಯನ್ನು ಉಂಟುಮಾಡುತ್ತದೆ. ಬಾಲ್ಯದಲ್ಲಿ ಏನೇ ಕಷ್ಟ ಬಂದರೂ ಅದನ್ನು ಹೇಗೋ ಎದುರಿಸುತ್ತೇವೆ. ಅಂದರೆ ಚಿಂತೆಯಲ್ಲಿ ಮುಳುಗಿ ಹೋಗುವುದಿಲ್ಲ. ಒಂದು ತುತ್ತು ಊಟ ಹೊಟ್ಟೆ ತುಂಬಿಸಿದರೂ ಸಂತಸದಿಂದ ಆಟಕ್ಕಿಳಿಯುತ್ತೇವೆ. ಏನೇನೋ ಖುಷಿಯ ಕನಸು ಕಾಣತೊಡಗುತ್ತೇವೆ. ಇಂತಹವನ್ನೆಲ್ಲ ಕವನದಲ್ಲಿ ನಿರೂಪಿಸಿರುವ ಬಸವರಾಜ್ ಅವರು ಮಗುವಿನ ಬದುಕಿನಲ್ಲಿ ಇನ್ನೊಂದು ತಿರುವನ್ನು ತರುತ್ತಾರೆ.

‘ಡೊಗ್ಗಲು ಡೊಗ್ಗಲು ಹಳೆ ಗಾಡಿಯಂತೆ
ಊರಿಂದ ಊರಿಗೆ ಹೋಗುತ್ತಿತ್ತು
ಮುದುಕಿ’

ಎಂದು ಮುದುಕಿಯ ಚಿತ್ರವನ್ನು ನೀಡುತ್ತಾರೆ. ಬಿದ್ದಿರುವ ಮುದುಕಿಯನ್ನು ಹುಡುಗಿ ಎದ್ದು ಕುಳ್ಳಿರಿಸಿ ಉಪಚಾರ ಮಾಡುವುದು. ಮುದುಕಿ ಪ್ರೀತಿಯಿಂದ ಉಪಚರಿಸಿದ ಮಲ್ಲಿಗೆಯನ್ನು ತನ್ನ ಮನೆಗೆ ಒಯ್ಯುವುದು ಎಲ್ಲ ಇದೆ.

‘ಗರಿ ಗರಿ ಲಂಗವ ತೊಟ್ಟು
ಮಿರಮಿರ ಬ್ಯಾಗು ಹೆಗಲಿಗೇರಿಸಿ
ಶಾಲೆಗೆ ಹೋಗೋ ಹುಡುಗೇರ ಕಂಡೋ
ಒಳಗಿದ್ದ ಆಸೆ ಹೊರ ಹಣಕಿತು
ಅಜ್ಜಿ ಅಜ್ಜಿ ನಾನೂ ಹೋಗತೀನಿ ಶಾಲೆಗೆ’

ಎನ್ನುತ್ತಾ ಮಲ್ಲಿಗೆ ಶಾಲೆಗೆ ಸೇರುವುದೆಲ್ಲ ಖುಷಿ ನೀಡುತ್ತದೆ. ಆದರೆ ಖುಷಿ ಬಹಳ ದಿನ ಉಳಿಯದು. ಮುದುಕಿ ಅವಳ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡುತ್ತಾಳೆ. ಆದರೆ ಶಾಲಾ ಶಿಕ್ಷಕಿ ಹಾಗೂ ಇತರರಿಂದಾಗಿ ಆಗುವ ಅನಾಹುತ ತಪ್ಪುತ್ತದೆ. ನಂತರ ಮಲ್ಲಿಗೆ ಶಾಲೆ ಕಲಿತು ಊರಿನಲ್ಲಿ ಏನೆಲ್ಲಾ ಬದಲಾವಣೆ ಹುಟ್ಟು ಹಾಕುವುದೆಲ್ಲ ಕಾವ್ಯದಲ್ಲಿ ಹರಡಿಕೊಂಡಿದೆ.

‘ದುಂಡು ಮಲ್ಲಿಗೆಯಂತ ದವನಾದ ಕುಡಿಯಂತ
ಎಲೆ ಬಳ್ಳಿ ಎಲೆಯಂತ ಬೆಳದಿಂಗಳ ಬೆಳಕಂತ ಮಲ್ಲಿಗೆ
ಯಾರ ಕೈಗೆ ಕೊಡಲಿ? ಹೆಂಗೆ ಕೊಡಲಿ?’

ಎನ್ನುವ ಸಾಲುಗಳೆಲ್ಲ ತಾಯಿಯ ಪ್ರೀತಿಯನ್ನು ನಮಗೆ ಆಪ್ತವಾಗಿ ಮುಟ್ಟಿಸುತ್ತಾ ನಮ್ಮಲ್ಲಿ ಉಳಿದುಕೊಳ್ಳುವಂತೆ ಮಾಡಿದೆ. ಕಮಲಿ ಎನ್ನುವುದು ಈ ಪುಸ್ತಕದ ಮತ್ತೊಂದು ಕಥನ ಕಾವ್ಯ.

‘ತುತ್ತಿಟ್ಟು ಮುತ್ತಿಟ್ಟು
ಮಾಯದ ಮನವಿಟ್ಟು
ಕಣ್ ಕನಸ ಒಡನಿಟ್ಟು
ಜ್ವಾಕೀಲಿ ಸಾಕಿದ ಬಾಲೆ
ಎತ್ತೆಲ್ಲಿ ಹೋದಳೋ ಕಂಡಿರ್ಯಾ?’

ಎಂದೆಲ್ಲ ಹೇಳುತ್ತ ಕೆಂಚವ್ವ ಎನ್ನುವ ತಾಯಿ ತನ್ನ ಮಗಳಾದ ಕಮಲಿಯನ್ನು ಹುಡುಕ ಹೊರಟಿರುವುದು ಕುತೂಹಲ ಉಂಟುಮಾಡುತ್ತದೆ.

‘ಕಾಳವ್ನ ಗುಡಿಯಾಗೆ
ಕತ್ತಲ ಪಂಜರದಾಗೆ
ಕರಿ ಹುಲ್ಲು ಸೊಪ್ಪಂಗೆ
ಕಾರಿರುಳ ಮಡಿಲಾಗೆ
ಬಿಳಿ ಮುತ್ತೆ ಬಿದ್ದಂಗೆ
ನಡಮುರಿದ ಮರದಂಗೆ’

ಎನ್ನುವುದು ಅವಳ ಮಗಳ ಸ್ಥಿತಿಯನ್ನು ಕಣ್ಣು ಮುಂದೆ ತಂದು ನಿಲ್ಲಿಸುತ್ತದೆ. ಬಸವರಾಜ್ ಅವರಲ್ಲಿರುವ ಜಾನಪದ ವಿದ್ವತ್ತು, ಸೌಲಭ್ಯ ವಂಚಿತರಾಗಿ ಬಡತನದೊಂದಿಗೆ ಅರಿವಿಗೂ ತೆರೆದುಕೊಳ್ಳಲಾಗದವರ ಕುರಿತಾದ ಅರಿವು ಮತ್ತು ಆಪ್ತತೆಗಳೆಲ್ಲ ಕಾವ್ಯದುದ್ದಕ್ಕೂ ಕಾಣಿಸಿಕೊಂಡು ಓದುಗರಿಗೂ ವಿಸ್ತರಿಸುವಂತಾಗಿದೆ. ಮಂತ್ರವಾದಿಯನ್ನು ಕರೆಸಿ ಅವಳಿಗೆ ದೆವ್ವ ಬಿಡಿಸಲು ಪ್ರಯತ್ನಿಸುವುದು, ಆ ಯಾತನೆಯನ್ನು ಅನುಭವಿಸುವ ಮಗುವನ್ನು ನೋಡಲಾಗದೆ ತಾಯಿ ಎತ್ತಿ ಒಯ್ಯುವುದು ಇದೆ. ನಂತರ ವೈದ್ಯರಿದ್ದಲ್ಲಿಗೆ ಒಯ್ದು ಪ್ರೀತಿಯಿಂದ ಕೌನ್ಸಿಲಿಂಗ್ ಮಾಡಿದಾಗ ನಿಜದ ಅರಿವಾಗುತ್ತದೆ. ಸಮಾಜದಲ್ಲಿ ಇನ್ನೂ ಅಳಿಸಲಾಗದೆ ಇರುವ ಲಿಂಗ ಅಸಮಾನತೆಯು ಹೇಗೆಲ್ಲಾ ಮಕ್ಕಳ ಭವಿಷ್ಯ ನುಂಗಿ ಹಾಕುತ್ತದೆ
ಎನ್ನುವುದನ್ನೆಲ್ಲ ಈ ಕಾವ್ಯ ಚೆನ್ನಾಗಿ ನಿರೂಪಿಸಿದೆ.

‘ಚಿಗುರಿದ ಚಿಕ್ಕಣ್ಣ’ ಈ ಪುಸ್ತಕದ ಇನ್ನೊಂದು ಕಥನ ಕಾವ್ಯ. ಇದರಲ್ಲಿಯೂ ಶಾಲೆ ಕಲಿಯದ ಚಿಕ್ಕಣ್ಣನ ಕುಟುಂಬ ಮೋಸಕ್ಕೆ ಒಳಗಾಗುವುದು ಹಾಗೂ ಅವನು ಶಾಲೆ ಕಲಿತು ಕಳೆದುಕೊಂಡಿದ್ದನ್ನು ಪಡೆಯುವ ಕಥೆಯನ್ನು ಹೇಳಲಾಗಿದೆ. ಡಾ ಕುರುವ ಬಸವರಾಜ ಅವರ ಈ ಕಥನ ಕಾವ್ಯ ಪುಸ್ತಕವು ಹದಿ ಹರೆಯದ ಮಕ್ಕಳು ಓದಲು ಸೂಕ್ತವಾಗಿದೆ ಎಂದು ನನಗೆ ಅನಿಸುತ್ತದೆ. ತೀರಾ ಸಣ್ಣ ಮಕ್ಕಳಿಗೆ ಇದರ ಅರಿವು ಕಷ್ಟವಾಗಬಹುದು. ಹದಿಹರೆಯದವರಿಗಾಗಿ ಸಾಹಿತ್ಯ ಕಡಿಮೆ ಇರುವ ಇಂತಹ ಸಂದರ್ಭದಲ್ಲಿ ಬಸವರಾಜ್ ಅವರ ಕಾವ್ಯ ಹದಿಹರೆಯದ ಮಕ್ಕಳಿಗೆ ಒಂದು ಕೊಡುಗೆಯಾಗಿ ಗಮನ ಸೆಳೆಯುತ್ತದೆ ಎಂದು ದೃಢವಾಗಿ ಹೇಳುತ್ತೇನೆ. ರಾಗಬದ್ಧವಾಗಿ ಹಾಡಲು, ಕಥೆಯನ್ನು ರೂಪಕವಾಗಿ ಬಳಸಲು ಎಲ್ಲಾ ಸೂಕ್ತವಾಗಿರುವ ಜಾನಪದ ಸೊಗಡಿನಲ್ಲಿ ಮೂಡಿ ಬಂದಿರುವ ಈ ಮೂರು ಕಥನ ಕಾವ್ಯಗಳು ಎಲ್ಲ ಓದುಗರಿಗೂ ಆಪ್ತವಾಗುವಂತಿವೆ. ಆತ್ಮೀಯರಾದ ಬಸವರಾಜ ಅವರನ್ನು ಅಭಿನಂದಿಸುತ್ತಾ ಮಲ್ಲಿಗೆಯ ಘಮ ಕರ್ನಾಟಕದದ್ಯಂತ ಓದುಗರು ಆಸ್ವಾದಿಸಲಿ ಎಂದು ಹೇಳುತ್ತಾ ವಂದಿಸುತ್ತೇನೆ.

‍ಲೇಖಕರು Admin MM

August 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: