ಮರೆಯಾದ ಹಾಡಿನ ಹಡಗು ಹನುಮಿ ಗೌಡರೂ ಮತ್ತು ಪಗಡೆಯಾಟದಲಿ ಗೆದ್ದ ರೋಪತಿಯೂ…

ಸುಧಾ ಆಡುಕಳ

ಸುಮಾರು ಐದಾರು ವರ್ಷಗಳ ಹಿಂದೆ ಒಂದು ರಾತ್ರಿ ಕರೆಮಾಡಿದ ವಿಠ್ಠಲ ಭಂಡಾರಿ ಸರ್ ‘ನಿಮಗೊಂದು ಹೋಮ್‌ವರ್ಕ ಇದೆ. ಹತ್ತೇ ದಿನಗಳ ಕಾಲಾವಕಾಶ. ಡಾ. ಎನ್. ಆರ್. ನಾಯಕರು ಸಂಗ್ರಹಿಸಿದ ಗ್ರಾಮೊಕ್ಕಲ ಮಹಾಭಾರತ ಕೃತಿಯನ್ನು ಆಧರಿಸಿ ಒಂದು ನಾಟಕ ಬೇಕು. ತಯಾರಿಗಳೆಲ್ಲ ಶುರುವಾಗಿದೆ. ಸ್ಕ್ರಿಪ್ಟ್ ಸಿಕ್ಕ ಕೂಡಲೇ ನಾಟಕ ಮಾಡಿಸೋದೆ. ಪುಸ್ತಕ ನಾಳೆಯೇ ನಿಮ್ಮನ್ನು ತಲುಪಲಿದೆ’ ಎಂದರು. ಅವರು ನನ್ನ ಗುರುಗಳಾದ್ದರಿಂದ ಅವರು ನೀಡಿದ ಹೋಮ್‌ವರ್ಕ ಮಾಡದಿರುವಂತಿರಲಿಲ್ಲ. ‌

ಬಾಲ್ಯದಿಂದಲೂ ಗ್ರಾಮೊಕ್ಕಲ ಜನಾಂಗದವರ ಹಾಡು ಕೇಳುತ್ತಲೇ ಬೆಳೆದ ನನಗೆ ಅದನ್ನು ಸಮಗ್ರವಾಗಿ ಓದುವ ಅವಕಾಶವೊಂದು ಹೀಗೆ ಅಚಾನಕ್ಕಾಗಿ ಒದಗಿಬಂತು. ನನ್ನೊಳಗೆ ರಾಗವಾಗಿ ಇಳಿದಿದ್ದ ಜಾನಪದ ಗಾಥೆಯೊಂದು ನಾಟಕದ ರೂಪ ಧರಿಸತೊಡಗಿತು. ಸಮಯಾವಕಾಶದ ತೀವ್ರ ಕೊರತೆಯಿಂದಾಗಿ ಆ ಯೋಜನೆ ಮುಂದಕ್ಕೆ ಹೋಯಿತಾದರೂ ನಾಟಕ ಪೂರ್ಣಗೊಂಡಿತು. ಆ ಸಲದ ಸಹಯಾನ ಸಾಹಿತ್ಯೋತ್ಸವದ ಶೀರ್ಷಿಕೆ ‘ಹೊಸತಲೆಮಾರು ಮತ್ತು ಜಾನಪದ’ವಾದ್ದರಿಂದ ಗ್ರಾಮೊಕ್ಕಲ ಮಹಾಭಾರತವನ್ನು ಹಾಡುತ್ತಿದ್ದ ಹನುಮಿಗೌಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತಮ್ಮ ಸುಶ್ರಾವ್ಯ ಕಂಠದಿಂದ ಜಾನಪದ ಹಾಡುಗಳನ್ನು ಹಾಡಿ ರಂಜಿಸಿದ್ದರು. ಮುಂದೆ ಚಂದನಕ್ಕಾಗಿ ಅವರನ್ನು ಸಂದರ್ಶಿಸುವ ಇರಾದೆಯನ್ನೂ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಎಚ್. ಎನ್. ಆರತಿಯವರು ವ್ಯಕ್ತಪಡಿಸಿದ್ದರು. ಹೀಗೆ ಪರಿಚಿತರಾದ, ‘ಉತ್ತರಕನ್ನಡದ ಹಾಡಿನ ಹಡಗು’ ಎಂದು ಡಾ. ಎನ್. ಆರ್. ನಾಯಕರಿಂದ ಹೊಗಳಿಸಿಕೊಂಡ ಹನುಮಿಗೌಡ ಅವರು ನಮ್ಮನ್ನು ಅಗಲಿದ್ದಾರೆ. ಸಾವಿರಕ್ಕೂ ಹೆಚ್ಚು ಪುಟಗಳಲ್ಲಿ ಅಚ್ಚು ಹಾಕಿಸಬಹುದಾದಷ್ಟು ಹಾಡುಗಳನ್ನು ತಮ್ಮ ಸ್ಮೃತಿಯಲ್ಲಿ ಧರಿಸಿದ ಅವರಿಗೆ ಈ ಬಿರುದು ಖಂಡಿತಕ್ಕೂ ಸೂಕ್ತವಾಗಿದೆ.

ಎರಡು ಸಲ ಜಾನಪದಶ್ರೀ ಪ್ರಶಸ್ತಿಗೆ ಹೆಸರು ಸೂಚಿಸಿದರೂ ಪ್ರಶಸ್ತಿಗೆ ಭಾಜನರಾಗದೇ ಉಳಿದ ಹನುಮಿಗೌಡರು ನಿಜಕ್ಕೂ ಹಾಡುಗಳ ಕಣಜವೇ ಆಗಿದ್ದರು ಎಂದು ಡಾ. ಎನ್. ಆರ್. ನಾಯಕರು ಅಭಿಪ್ರಾಯಪಡುತ್ತಾರೆ. ಅಂಥದೊಂದು ಹಡಗು ಇಂದು ಸಾಗರದ ಪರಿಧಿಯಾಚೆಗೆ ಜಾರಿದೆ. ಆದರೆ ಅವರು ಕಟ್ಟಿಕೊಟ್ಟ ವಿಭಿನ್ನವಾದ ಭಾರತದ ಕತೆಯನ್ನು ಡಾ. ಎನ್. ಆರ್. ನಾಯಕರಂತಹ ಜಾನಪದ ತಜ್ಞರು ಸಂಗ್ರಹಿಸಿಟ್ಟಿದ್ದರಿಂದ ಎಂದೆಂದಿಗೂ ನಮ್ಮೊಂದಿಗೆ ನೆಲದ ಕಥನವಾಗಿ ಉಳಿದುಕೊಂಡಿದೆ.

ಗ್ರಾಮೊಕ್ಕಲ ಜನಾಂಗದವರು ಶ್ರೀಮಂತವಾದ ಕೃಷಿ ಸಂಸ್ಕೃತಿಯ ವಾರಸುದಾರರು. ಹಾಡು ಹೇಳುವುದರಲ್ಲಿ, ಹಸೆ ನೇಯುವುದರಲ್ಲಿ, ತುಳಸಿಯ ಎದುರು ರಂಗೋಲೆ ಬಿಡಿಸುವುದರಲ್ಲಿ ಅವರ ಹೆಂಗಸರು ನಿಪುಣರು. ಶನಿವಾರ ಬಂತೆಂದರೆ ಮನೆಯೆದುರಿನ ಅಂಗಳದಲ್ಲಿ ಸೆಗಣ ಸಾರಿಸಿ, ತುಳಸಿಗೆ ಕೆಂಬಣ್ಣ ಬಳಿದು, ಮನೆಯ ಮುಂದೆಲ್ಲ ಚೆಂದದ ಹಸೆಚಿತ್ತಾರ ಬಿಡಿಸಿಮ ತರಕಾರಿಯ ಅಡುಗೆ ಮಾಡಿ, ಹಿರೀಕರಿಗೆಲ್ಲ ಮೀಸಲಿಟ್ಟು ಊಟಮಾಡುವಾಗ ಸೂರ್ಯ ಮುಳುಗುವ ಹೊತ್ತಾದರೂ ಆದೀತು. ನೆಟ್ಟಿ ನೆಡುವಾಗ, ಕಳೆ ಕೀಳುವಾಗ, ಪೈರು ಕೊಯ್ಯುವಾಗ, ಮನೆಗೆ ದೇವಿಯ ಪಲ್ಲಕ್ಕಿ ಬಂದಾಗ, ಹಬ್ಬ ಹರಿದಿನಗಳಲ್ಲಿ, ಮದುವೆ ಮಂಗಲ ಕಾರ್ಯಗಳಲ್ಲಿ ಹೆಂಗಸರ ಹಾಡುಗಳದೇ ಮೇಲುಗೈ. ಒಬ್ಬರು ಹಾಡುತ್ತಿದ್ದರೆ ಅವರ ಸುತ್ತ ಇರುವ ನಾಲ್ಕಾರು ಜನರು ಅದರೊಂದಿಗೆ ದನಿ ಸೇರಿಸುತ್ತಾ ಸುವ್ವೇ… ಎಂದು ಹಾಡಿಗೆ ಉತ್ಸವದ ಕಳೆಯೇರಿಸುತ್ತಾರೆ.

ಸದಾ ಕವಳ ಜಗಿದು ಕೆಂಪಾದ ಬಾಯಿಂದ ಹಾಡಿನೊಂದಿಗೆ ತೇಲಿಬರುವ ಘಮವು ಸುತ್ತಲಿನ ವಾತಾವರಣಕ್ಕೆ ರಂಗೇರಿಸುತ್ತದೆ. ಅವರ ಎಲ್ಲ ಹಾಡುಗಳಲ್ಲಿ ಈ ವೀಳ್ಯಕ್ಕೆ ಮಹತ್ವದ ಸ್ಥಾನವಿದೆ. ಅದನ್ನು ಯಾರು, ಯಾರಿಗೆ ಕೊಡಬಹುದು? ಯಾರಿಗೆ ಕೊಡಬಾರದು? ಎಂಬುದಕ್ಕೆಲ್ಲ ರೀತಿನೀತಿಗಳಿವೆ. ಎಲ್ಲ ಶುಭಕಾರ್ಯಗಳು ವೀಳ್ಯದ ವಿನಿಮಯದಿಂದಲೇ ಆರಂಭಗೊಳ್ಳುವುದು ಮತ್ತು ಮನೆಗೆ ಬಂದವರಿಗೆ ಕೈಕಾಲು ತೊಳೆಯಲು ನೀರು ಕೊಟ್ಟ ನಂತರ ಮೊದಲು ನೀಡುವುದು ವೀಳ್ಯವನ್ನೆ. ಹಾಗಾಗಿ ಗ್ರಾಮೊಕ್ಕಲ ಜನಾಂಗದವರ ಹಾಡಿನಲ್ಲಿ ಅನ್ನದ ಋಣದಷ್ಟೇ ಪ್ರಾಮುಖ್ಯತೆ ಸುಣ್ಣದ ಋಣಕ್ಕೂ ಇದೆ.

ಆಯೊಳ್ಳ ಹಣ್ಣಡಕೆ ಸೋಯಿಸಿದ ಬಿಳಿಎಲೆ
ಹಾಲಿನಲಿ ಚಿಂದಾ ತೆನೆಸುಣ್ಣ | ತಡಕಂಡಿ
ಮಾಳಿಗ್ಗಿಂದೆರಗೆ ಬರೋವಾಳು |ಅತಕುಂತಿ
ರೋಪತಿ ಒಡನೋಗಿ ನಿಲೋವಾಳು |ಅತಕುಂತಿ
ರೋಪತಿಗೊಂದೀಳ್ಯಾ ಕೊಡೋವಾಳು
ಇದು ಅತ್ತೆ ಕುಂತಿ ಸೊಸೆ ರೋಪತಿಗೆ ವೀಳ್ಯ ಕೊಟ್ಟು ಸ್ವಾಗತಿಸುವ ಪರಿ.

ವೀರಾಧಿವೀರರೆಂದು ಪುರಾಣಗಳಲ್ಲಿ ಚಿತ್ರಿತರಾದ ಪುರುಷರನ್ನು ತಮ್ಮ ದೈನಂದಿನ ಜೀವನದಲ್ಲಿ ಬರುವ ಸಾಮಾನ್ಯ ಜನರಂತೆ ಚಿತ್ರಿಸುತ್ತಾ, ಪುಣ್ಯಸ್ತ್ರೀಯರನ್ನು ತಮ್ಮೊಳಗೊಬ್ಬರನ್ನಾಗಿ ಕಾಣುವ ವಿಶಿಷ್ಟವಾದ ಒಳನೋಟಗಳು ಜಾನಪದ ಹಾಡುಗಳಲ್ಲಿರುತ್ತವೆ. ತಮ್ಮ ಹೊಲಗಳಲ್ಲಿ ಜಾಗ ಸಿಕ್ಕಿದಲ್ಲೆಲ್ಲಾ ತರಕಾರಿಗಳ ರಾಶಿಯನ್ನೇ ಬೆಳೆಸುವ ಇವರ ಹಾಡುಗಳಲ್ಲಿಯೂ ವಿವಿಧ ತರಕಾರಿಗಳಿಂದ ಮಾಡುವ ನೂರೊಂದು ಬಗೆಯ ಅಡುಗೆಯ ಪ್ರಸ್ತಾಪ ಆಗಾಗ ಬರುತ್ತದೆ.

ಹಿತ್ತಲ ಕಣಕೀನ್ನಾ ಬೊಟ್ಟು ಕೆಂಬರಗೀಯಾ
ಬೊಟ್ಟೆ ಕಟ್ಟೇ ಬೆಗೋರೀಸಿ
ಬೇಲಿ ಮೆನನ ದಾರೆ ಹೀರೆಯಕಾಯಾ
ದಾರೆಯನರದೇ ಮೆಣಸಿಟ್ಟೇ
ರ‍್ದಬ್ಬು ಹಾಗಿಲಾ ಮುರ್ದಬ್ಬೊ ತೊಂಡೀಲಾ
ಪಲಬೆರಸಬ್ಬು ಬಸಳೀಯಾ| ಕೊಡಿಯಾತಂದೆ
ತಪ್ಪಾದಲ್ಲದ್ರಾ ಬೆಗೋರೀಸೇ
ಎಲಮೆರಂಬತ್ ಬಗೆ ಕಾಯ್ ಮೆರ್‌ತೊಂಬತ್ ಬಗೆ
ನೂರೊಂದು ಬಗೆಯ ಅಡಗೀಯಾ | ಕಜ್ಜಾಯವಾ
ಅನುಮಾಡಿದಳೊಂದೋ ಗಳಗ್ಯಲ್ಲೇ
ಇದು ಪಾಂಡವರು ಕುರುರಾಯನೊಡನೆ ಪಗಡೆಯಾಡಲು ಹೊರಡುವ ಮೊದಲು ರೋಪತಿ ಅಡುಗೆ ಮಾಡುವ ರೀತಿ. ಹರಿವೆ, ಹೀರೆ, ಹಾಗಿಲ, ತೊಂಡೆಕಾಯಿ, ಬಸಳೆ ಹೀಗೆ ಎಂಬತ್ತು ಬಗೆಯ ಎಲೆಗಳು, ತೊಂಬತ್ತು ಬಗೆಯ ಕಾಯಿಗಳಿಂದ ನೂರೊಂದು ಬಗೆಯ ಅಡುಗೆಯನ್ನು ರೋಪತಿ ಗಳಿಗೆಯಲ್ಲಿ ಮಾಡಿಬಿಡುತ್ತಾಳೆ.

ಗ್ರಾಮೊಕ್ಕಲ ಮಹಾಭಾರತದಲ್ಲಿ ಬರುವ ದ್ರೌಪದಿ ಮತ್ತು ಕರ್ಣನ ಪಾತ್ರಗಳು ಒಂದಕ್ಕೊಂದು ಪೈಪೋಟಿಗಿಳಿಯುವಂತೆ ಉದಾತ್ತವಾಗಿ ಚಿತ್ರಣಗೊಂಡಿವೆ. ಕಾವ್ಯದಲ್ಲಿ ಬರುವ ದ್ರೌಪದಿಗಿಂತ ಇಲ್ಲಿ ಚಿತ್ರಿತವಾಗುವ ರೋಪತಿ ನೆಲಮೂಲದ ಎಲ್ಲ ಜಾಣ್ಮೆಯನ್ನು ಮೈಗೂಡಿಸಿಕೊಂಡವಳಾಗಿದ್ದಾಳೆ. ಅವಳಿಗೆ ಕೆಟ್ಟ ಕನಸು ಬೀಳುವ ಮೂಲಕವೇ ಇಡಿಯ ಮಹಾಭಾರತದ ಕಥೆ ತೆರೆದುಕೊಳ್ಳುತ್ತದೆ.

ಕನಸಿನ ಪರಿಹಾರವಾಗಿ ಅತ್ತೆ ಕುಂತಿ ಹೇಳುವಂತೆ ಬಗೆಬಗೆಯ ದಾನಗಳನ್ನು ಮಾಡಿದರೂ ಗುರುರಾಯನ ಪಗಡೆಯಾಟದ ಆಹ್ವಾನ ಧರ್ಮರಾಜನನ್ನು ತಲುಪಿಯೇಬಿಡುತ್ತದೆ. ಹೊರಡುವ ಗಳಿಗೆಯಲ್ಲಿ ಎದುರಾಗುವ ಅಪಶಕುನಗಳ ಸರದಿಯನ್ನೂ ಲೆಕ್ಕಿಸದೇ ಧರ್ಮರು ಪಗಡೆಯಾಟಕ್ಕೆ ಹೊರಡುತ್ತಾರೆ. ಉಪಾಯಗಾಣದ ಮಡದಿ, ತಮ್ಮಂದಿರು ಅಣ್ಣನನ್ನು ಹಿಂಬಾಲಿಸುತ್ತಾರೆ. ಪಗಡೆಯಾಟದಲ್ಲಿ ಧರ್ಮರು ಕೈಸೋತು ತಲೆಬಗ್ಗಿಸಿ ಕುಳಿತಾಗ ಗರ‍್ರಾಯ (ಕೌರವ) ಮಡದಿಯನ್ನು ಪಗಡೆಯಾಡಲು ಕರೆತರುವಂತೆ ಹೇಳುತ್ತಾನೆ. ಧರ್ಮರು ಹೋಗಿ ಕರೆದಾಗ ರೋಪತಿ
ಮುಟ್ಟೀಲಗುಂಡಿ ಮೂರ್ ನೀರು ಸಂದ್ಲಲ್ಲ
ತೊಳಚೀಯಾ ಕದ್ರಾ ಮೊಡೀಲಿಲ್ಲ | ಅದರಿನ್ನು
ಕಿಟ್ಟದೆ ತಾನು ಬರೋಲಾರೆ
ಎನ್ನುತ್ತಾಳೆ.

ವಾಡಿಕೆಯಂತೆ ನಾಲ್ಕು ದಿನಕ್ಕೆ ಮುಟ್ಟಾಗಿ ಮಿಂದರೆ ಗ್ರಾಮೊಕ್ಕಲ ಜನಾಂಗದವರು ಮೂರನೆಯ ದಿನ ಬೆಳಿಗ್ಗೆಯೇ ಮೀಯುವುದು ರೂಢಿ. ಅದನ್ನಿಲ್ಲಿ ರೋಪತಿ ಸಭೆಗೆ ಬರಲಾರದ ಕಾರಣವಾಗಿ ಬಳಸಿಕೊಳ್ಳುತ್ತಾಳೆ. ಇದರಿಂದ ಕೆರಳಿದ ಗರ‍್ರಾಯ ಅವಳನ್ನು ಕರೆತರಲು ತನ್ನ ಗೆಳೆಯ ಅಂಬಿಗರ ಕರ್ಣನಿಗೆ ಹೇಳುತ್ತಾನೆ. ಅದಕ್ಕೆ ಕರ್ಣ ಒಪ್ಪುವುದೇ ಇಲ್ಲ.
ಆರ‍್ನತಲಿತಾ ಅಂದರೆ ರ‍್ವೆ ಚರ‍್ನ ತಲಿ ತಾ ಅಂದ್ರ ತರ‍್ವೆ
ಹೀಲಿಸತ್ತಗೀಯಾ ನೆಳಲಾಡೇ| ಡ್ ಹೋಗ್ವನತಲೆ ತರ‍್ವೆ
ತರಲಾರೆ ಪರರಾ ಅರಸೀಯಾ
ಯಾರ ತಲೆ ತಾರೆಂದರೂ ತರುವೆ, ಆದರೆ ಪರನಾರಿಯನು ಕರೆತರಲಾರೆ ಎನ್ನುವ ಕರ್ಣನ ವಿವೇಕವನ್ನು ಗರ‍್ರಾಯ ಅನ್ನದ ಋಣ, ಸುಣ್ಣದ ಋಣದ ಮೂಲಕ ಕಟ್ಟಿಹಾಕುತ್ತಾನೆ. ಇನ್ನೊಬ್ಬರ ಊಳಿಗದಲ್ಲಿರುವುದು ಅತಿ ಕಷ್ಟವೆಂದು ಮನಗಂಡ ಕರ್ಣ ಅವರ ಆಜ್ಞೆಯನ್ನು ಪಾಲಿಸಲು ಬದ್ದನಾಗಿ ಹೊರಟವನು ತನ್ನ ತಂದೆ ಸೂಲಿದೇವನ (ಸೂರ್ಯದೇವ) ಸಲಹೆಯನ್ನು ಕೇಳುತ್ತಾನೆ. ಅದಕ್ಕೆ ಸೂಲಿದೇವ ಬರಿಯ ಬಾಯಿಮಾತಿನಲ್ಲಿ ಮಾತಾಡಿ ಬಾ ಎಂದು ಸಲಹೆ ನೀಡುತ್ತಾನೆ.

ರೋಪತಿ ಮತ್ತು ಕರ್ಣನ ಭೇಟಿಯ ದೃಶ್ಯ ಬಹಳ ಘನತೆಯಿಂದ ಕೂಡಿದೆ. ಅವಳಿಗೆ ಕರ್ಣ ತನ್ನ ಬಾವನೆಂಬುದು ಗೊತ್ತು. ಗುಟ್ಟುಗಳಿಗೆಲ್ಲ ಜಾನಪದ ಕಾವ್ಯಗಳಲ್ಲಿ ಜಾಗ ಕಡಿಮೆ, ಏನಿದ್ದರೂ ಎಲ್ಲವೂ ಸೀದಾ ಸಾಫ್. ಮನೆಗೆ ಬಂದ ಬಾವನವರಿಗೆ ಕಾಲಿಗೆ ನೀರುಕೊಟ್ಟು ರೋಪತಿ ಸ್ವಾಗತಿಸುತ್ತಾಳೆ. ಕುಳಿತುಕೊಳ್ಳಲು ತನ್ನ ಗಂಡಂದಿರ ಸೆಳಮಂಚ ತರಿಸಲೇ ಎಂದು ಕೇಳುತ್ತಾಳೆ. ಗಂಡಂದಿರು ಸೆರೆಯಲ್ಲಿರುವಾಗ ತಾನವರ ಸೆಳಮಂಚದಲ್ಲಿ ಕೂರಲಾರೆ ಎನ್ನುತ್ತಾನೆ ಕರ್ಣ. ಅಲ್ಲಿಯೇ ಒಂದು ಮಣೆಯಲ್ಲಿ ಕೂರುವ ಕರ್ಣನಿಗೆ ರೋಪತಿ ವೀಳ್ಯವನ್ನು ಕೊಡುತ್ತಾಳೆ.

ಜೊತೆಯಲ್ಲಿ ತಾನೂ ಒಂದು ವೀಳ್ಯವನ್ನು ತಿನ್ನುತ್ತಾಳೆ. ಅಡಕೆ ಸೊಕ್ಕಿ ಅವಳು ತಲೆಸುತ್ತು ಬಂದು ಬೀಳುವಾಗ ಕರ್ಣ ತನ್ನ ಹಚ್ಚಡದ ಸೆರಗಿನಿಂದ ಅವಳನ್ನು ಬೀಳದಂತೆ ಹಿಡಿಯುತ್ತಾನೆ. ತನ್ನನ್ನು ಮುಟ್ಟದೇ ಸೆರಗಿನಿಂದ ಹಿಡಿದ ಬಾವನಲ್ಲಿ ರೋಪತಿ ಅಂಬಿಗರಿಗೆ, ಗೋವಳರಿಗೆ ಹೊಲೆತನವಿದೆಯೇನು? ಎಂದು ಪ್ರಶ್ನಿಸುತ್ತಾಳೆ. ಆಗ ಕರ್ಣ ಬಾವನಾದವನು ಮೈದಿನಿಯನ್ನು ಮುಟ್ಟಬಾರದೆಂದು ಹಾಗೆ ಮಾಡಿದೆ ಎಂದು ನೀತಿ ಹೇಳುತ್ತಾನೆ.

ಗುರುರಾಯನ ಆಸ್ಥಾನಕ್ಕೆ ಬಾರೆಂದು ಅವಳನ್ನು ಬಾಯಿಮಾತಿನಲ್ಲಿ ಕರೆಯುತ್ತಾನೆ. ಅದಕ್ಕವಳು ಅಷ್ಟೇ ಜಾಣ್ಮೆಯಿಂದ ನಿಮ್ಮೊಂದಿಗೆ ನಾನು ಬರಲಾಗದು, ನಿಮ್ಮ ಮುಂದೆ ನಾನು ನಡೆದರೆ ಜನರು ನನ್ನನ್ನು ನಿಮ್ಮ ತಂಗಿಯೆನ್ನುತ್ತಾರೆ, ಹಿಂದೆ ನಡೆದು ಬಂದರೆ ಹೆಂಡತಿಯೆನ್ನುತ್ತಾರೆ. ಹಾಗಾಗಿ ಬರಲಾರೆ ಎಂದು ಕಾರಣ ಹೇಳುತ್ತಾಳೆ. ಅವಳ ಜಾಣ್ಮೆಗೆ ತಲೆದೂಗುವ ಕರ್ಣ ಅವಳನ್ನು ಕರೆಯಲು ಮುಂದೆ ದುಸುವಯ್ಯ (ದುಶ್ಶಾಸನ) ಬಂದೇ ಬರುವನೆಂದು ತಿಳಿಸಿ, ಮಾಳಿಗೆಯಲ್ಲಿ ಭದ್ರವಾಗಿರುವಂತೆ ಹೇಳಿ ಮರಳುತ್ತಾನೆ.

ಗರ‍್ರಾಯ್ನ ತಮ್ಮ ದುಸುವಯ್ಯ ಇಲ್ಲಿಯೂ ಖಳನಾಯಕನೆ. ಅವನ ದುಷ್ಟ ಯೋಚನೆಯನ್ನು ಜಾನಪದರು ಕಟ್ಟಿಕೊಡುವುದು ಹೀಗೆ,
ಹಿತ್ತೀಲ ಕಣಕೇ ಚವ್ತೀಯ ನೆಟ್ಟೀದೆ
ನೆಟ್ಟವರಿಗರ್ಧ ನೆರಿಗರ್ಧಾ | ಅಣ್ ತಂದಾ ಮಡದಿ
ಅಣ್ಣಗೆ ಅರ್ಧಾ ತನಗರ್ಧಾ…
ಹಿತ್ತಿಲಲ್ಲಿ ಸವತೆಕಾಯಿ ಬಳ್ಳಿಯನ್ನು ನೆಟ್ಟರೆ ಹೇಗೆ ನೆರಮನೆಯವರು ಅರ್ಧವನ್ನು ಅಪಹರಿಸುತ್ತಾರೋ ಹಾಗೆ ಅಣ್ಣ ಬಯಸುವ ರೋಪತಿ ನನಗೂ ಸಿಗುತ್ತಾಳೆ ಎಂಬುದು ಅವನ ಅಂಬೋಣ. ಅತ್ತಿಗೆಯೆಂಬ ಗೌರವವಿಲ್ಲದೇ ಅವಳ ಮನೆಯ ಮಣ ಮಾಡು ಮುರಿದು, ಕಡಮಾಡು ಕಡಿದು ಒಳಗೆ ನುಗ್ಗುವ ದುಸುವಯ್ಯ ಮಾಳಿಗೆಯ ಮೇಲಿರುವ ಅವಳ ಮುಡಿಯನ್ನು ಹಿಡಿದೆಳೆದು ರಾಜಬೀದಿಗೆ ಕರೆತರುತ್ತಾನೆ. ಆಗ ಅವಳುಟ್ಟ ಸೀರೆಯ ನೆರಿ ಜಾರಿಹೋಗುತ್ತದೆ. ಆದರೆ ಅಣ್ಣ ನಾರ್ಣದೇವನ ಕೃಪೆಯಿಂದ ಎದೆಯ ಮೇಲಿನ ಸೆರಗು ಮಾತ್ರ ಸ್ಥಿರವಾಗಿಯೇ ಇರುತ್ತದೆ.

ರಾಜಬೀದಿಯಲ್ಲಿ ಹೋಗುವಾಗ ನೋಡುವವರೆಲ್ಲ ಏನಾದರೂ ಅಂದುಕೊಳ್ಳುವರೆಂದು ಸೀರೆಯ ನೆರಿಗೆ ಸರಿಮಾಡಿಕೊಳ್ಳುವಂತೆ ಮತ್ತು ಮುಡಿಯನ್ನು ಕಟ್ಟಿಕೊಳ್ಳುವಂತೆ ಅತ್ತಿಗೆಗೆ ದುಸುವಯ್ಯ ಹೇಳುತ್ತಾನೆ. ಆದರೆ ರೋಪತಿ ಅವನ ಈ ಅನುಕಂಪವನ್ನು ನಿರಾಕರಿಸಿ ತನ್ನ ಗಂಡ ಭೀಮ ನಿನ್ನ ಬಡಿದು ರಕ್ತದ ಕೋಡಿ ಹರಿಸಿದಾಗ ಅದರಲ್ಲಿ ಒದ್ದೆಮಾಡಿದ ನಂತರವೇ ಸರಿಮಾಡಿಕೊಳ್ಳುವುದಾಗಿ ಹೇಳುತ್ತಾಳೆ. ಬಿಚ್ಚಿದ ಮುಡಿಯಲ್ಲೇ ಅವನ ಹಿಂದೆ ನಡೆಯುತ್ತಾಳೆ.

ಸಭೆಯಲ್ಲಿ ಗರ‍್ರಾಯ ನೀಡುವ ವೀಳ್ಯವನ್ನು ಪುಡಿಮಾಡಿ ಬಿಸುಟು ಕರ್ಣನ ಕೈಯ್ಯ ವೀಳ್ಯವನ್ನು ತಿನ್ನುತ್ತಾಳೆ. ತನ್ನ ಹಾಸಿಗೆಗೆ ಬಾರೆಂದು ಕರೆಯುವ ಗರ‍್ರಾಯನಿಗೆ ನಿನ್ನ ತಾಯಿ ಮತ್ತು ತಂಗಿಯರನ್ನು ಕರೆದುಕೋ ಎಂದು ಹೇಳುವುದರ ಮೂಲಕ ತಾನವನ ಸೋದರಿಯ ಸಮಾನವೆಂಬ ಪಾಠವನ್ನು ಹೇಳುತ್ತಾಳೆ. ಅವಳ ಮಾತಿಗೆ ಉತ್ತರ ಕೊಡಲಾಗದ ಗರ‍್ರಾಯ ಅವಳನ್ನು ತನ್ನೊಡನೆ ಪಗಡೆಯಾಡಲು ಕರೆಯುತ್ತಾನೆ.

ಪಗಡೆಯ ಮಣೆಯನ್ನು ನೋಡಿದೊಡನೆಯೇ ರೋಪತಿಗೆ ಅದರೊಳಗಿರುವ ಮೋಸದಾಟದ ಗುಟ್ಟು ತಿಳಿಯುತ್ತದೆ. ಅದನ್ನು ಕುಟ್ಟಿ ಪುಡಿಗಟ್ಟಿ ಮೂರುಹಾದಿಯಲ್ಲಿ ಚೆಲ್ಲಿಬರಲು ಕೂಸನಿಗೆ ಹೇಳುತ್ತಾಳೆ. ಹೊಸ ಪಗಡೆಯ ಮಣೆಯನ್ನು ತನ್ನಣ್ಣನಿಂದ ತರುವಂತೆ ಕರ್ಣನಿಗೆ ಹೇಳುತ್ತಾಳೆ. ಮಣೆಯನ್ನು ಕೊಡುವ ನಾರ್ಣದೇವ ಪಗಡೆಯಾಡುವಾಗ ಗಾಳಿಗೆ ರೋಪತಿಯ ಸೆರಗು ಜಾರುವುದೆಂದೂ, ಅದನ್ನು ನೋಡುತ್ತ ಮೈಮರೆಯುವ ಗುರುರಾಯ ಪಗಡೆಯಲ್ಲಿ ಸೋಲುವನೆಂದೂ ಹೇಳುತ್ತಾನೆ.

ಇದರ ಅರಿವಿರದ ರೋಪತಿ ಒಂದೊಂದೇ ದಾಳವನ್ನುರುಳಿಸುತ್ತಾ ತನ್ನ ಗಂಡಂದಿರೆಲ್ಲರನ್ನೂ ಗೆಲ್ಲುತ್ತಾಳೆ. ಕೆಂಡದ ಕೋಟೆಯಲ್ಲಿ ಬಂಧಿಸಿಟ್ಟ ಅವರನ್ನೆಲ್ಲಾ ಬಿಡುಗಡೆಗೊಳಿಸಿ ಮತ್ತೆ ಸಭೆಗೆ ಕರೆತರುತ್ತಾನೆ ಗರ‍್ರಾಯ. ಎಲ್ಲರಿಗೂ ಮತ್ತೆ ವೀಳ್ಯವನ್ನು ಕೊಡುತ್ತಾನೆ. ಯಥಾಪ್ರಕಾರ ರೋಪತಿ ಅವನ ಕೈಯ್ಯ ವೀಳ್ಯವನ್ನು ಪುಡಿಮಾಡಿ ಒಗೆದು ಕರ್ಣನ ಕೈಯ್ಯ ವೀಳ್ಯವನ್ನು ಮೆಲ್ಲುತ್ತಾಳೆ. ಆಗ ಗರ‍್ರಾಯ ಮತ್ಸರದಿಂದ ನುಡಿಯುತ್ತಾನೆ,
ಅಂಬೀರ ಕರನ ಕಡುಚೆಲುವ ಕೊಟ್ಟೀಳ್ಯ
ಇಂಬಾಗೇ ನಾರೀ ಮೆಳೋವಾಳೇ|ಳು ಅಂದೇಳಿ
ತುಂಬಿದ ಸಬಿಯಲ್ಲೇ ನುಡೀದಾನೆ
ಇಲ್ಲಿಯವರೆಗೆ ಸಹನೆಯಿಂದ ಸಹಿಸಿಕೊಂಡಿದ್ದ ಕರ್ಣ ತನ್ನ ಜಾತಿಯ ಬಗ್ಗೆ ಕೇಳಿದ್ದೇ ಸಿಟ್ಟಿಗೆದ್ದು ದೊರೆಯನ್ನೇ ಹೊಡೆಯಲು ತನ್ನ ಸೈನ್ಯದೊಡನೆ ನಿಲ್ಲುತ್ತಾನೆ.
ಅರ್ಜೇರು ಇನ್ನೂರು ಕೋಟಿ ಬಿಲ್ನರು ಮುನ್ನೂರು ಕೋಟಿ
ಇಂದ್ರಾಕ್ಷರ ಕೋಟೀ ಗಡಿಯಿಲ್ಲ | ಸಯ್ಯ
ಕರ್ಣನ ಬೆನ್ನತ್ತೇ ನೆಡೆದಾರೆ | ಗರ‍್ರಾಯ್ನ
ಒಂದೇ ಕೊಡಲ್ಲಿ ಉಳದದೆ
ಇದು ಕರ್ಣನ ಸೈನ್ಯಬಲದ ವಿವರ. ಎಲ್ಲರೂ ಈಗ ಕರ್ಣನ ಪರವಾಗಿ ನಿಂತು ಗುರುರಾಯ ಒಬ್ಬನೇ ಆಗಿ ಉಳಿದಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗುರುರಾಯನ ತಾಯಿ ಬೋನ್ಪತಿ ನಡುವೆ ಪ್ರವೇಶಿಸಿ, ಮಗನಿಗೆ ಬುದ್ದಿ ಹೇಳಿ ಕೂಸನನ್ನು ಕರೆಸಿ ಮುನಿಸಿಕೊಂಡ ಕರ್ಣನನ್ನು ಮತ್ತೆ ಕರೆಸುತ್ತಾಳೆ. ಇತ್ತ ಧರ್ಮರಾಯ ತಾನು ಮನಸಿನಲ್ಲಿ ಎಣ ಸಿದಂತೆ ನಡೆದುಕೊಳ್ಳಬೇಕೆಂದು ವನವಾಸಕ್ಕೆ ಹೊರಡಲು ಅನುವಾಗುತ್ತಾನೆ.

ಗ್ರಾಮೊಕ್ಕಲ ಮಹಾಭಾರತದ ಮುಖ್ಯಭಾಗವಾದ ಧರ್ಮರ ಹಾಡಿನಲ್ಲಿ ಚಿತ್ರಣಗೊಂಡ ರೋಪತಿ ಮತ್ತು ಕರ್ಣರ ಪಾತ್ರದ ವ್ಯಾಪ್ತಿ ಇದು. ಇಲ್ಲಿ ವಸ್ತಾçಪಹರಣವಾಗಲೀ, ವಿದುರನ ರಾಜನೀತಿಯ ವಿವರಗಳಾಗಲೀ ಇಲ್ಲ. ಇಲ್ಲಿ ಕಥೆಯ ಕೇಂದ್ರ ಬಿಂದು ರೋಪತಿ. ಎಲ್ಲ ಸಂದಿಗ್ಧಗಳನ್ನೂ ಮೊದಲೇ ಊಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಗಟ್ಟಿಗಿತ್ತಿಯಾಗಿ ರೋಪತಿ ಇಲ್ಲಿ ಚಿತ್ರಣಗೊಂಡಿದ್ದಾಳೆ. ವನವಾಸವನ್ನು ಮುಗಿಸಿ, ಅಜ್ಞಾತವಾಸಕ್ಕೆ ಹೊರಡುವ ಮುನ್ನ ಧರ್ಮರಾಯ ತನಗೊಂದು ತಂಗಿಯಿದ್ದರೆ ಅವಳ ಮನೆಯಲ್ಲಾದರೂ ಉಂಡು ಹೋಗಬಹುದಿತ್ತು ಎಂದು ಸಂಕಟಪಡುವಾಗಲೂ ರೋಪತಿಗೆ ನೆರವಾಗುವವನು ಕರ್ಣನೆ. ಭೂಮಿತೂಕದ ಹಲಸಿನ ಹಣ್ಣನ್ನು ತಂದಿಟ್ಟು ಅವರ ಹಸಿವೆಯನ್ನು ಕಳೆಯುತ್ತಾನೆ.

ಜಾನಪದ ಹಾಡುಗಳ ಸಂಗ್ರಹವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಡಾ. ಎನ್. ಆರ್. ನಾಯಕ್ ಮತ್ತು ಶಾಂತಿ ನಾಯಕ ದಂಪತಿಗಳು ಉತ್ತರಕನ್ನಡದಾದ್ಯಂತ ನೆಲಸಿರುವ ವಿವಿಧ ಬುಡಕಟ್ಟುಗಳಿಗೆ ಸೇರಿದ ಅನೇಕ ಹಾಡುಗಾರರ ಹಾಡುಗಳನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಅವರು ಹೇಳುವಂತೆ ಅನೇಕ ಹಾಡುಗಾರರನ್ನು ಸಂದರ್ಶಿಸಿದರೂ ಹನುವಿ ಗೌಡರಂತ ಅದ್ಭುತ ಪ್ರತಿಭೆಯನ್ನು ಅವರು ನೋಡಿದ್ದು ಅಪರೂಪ. ತನ್ನ ತಾಯಿಯಿಂದ ಬಳುವಳಿಯಾಗಿ ಪಡೆದ ಸಾವಿರಾರು ಹಾಡುಗಳನ್ನವರು ನೆನಪಿನ ಕೋಶದಿಂದ ಹಾಡುತ್ತಿದ್ದರು.

ಈ ಹಾಡುಗಾರ್ತಿಯರ ಬದುಕು ಸುಖದ ಸೋಪಾನವಲ್ಲ. ದಿನದ ದಂದುಗವನ್ನು ಮುಗಿಸುವ ಚಿಂತೆಯೇ ಅವರನ್ನು ಅನುದಿನವೂ ಕಾಡುತ್ತಿರುತ್ತದೆ. ಹಾಡುವುದರಿಂದ ಕಷ್ಟಗಳನ್ನು ಮರೆಯಬಹುದಲ್ಲದೇ ಇನ್ನೇನೂ ಆರ್ಥಿಕ ಬೆಂಬಲಗಳಿರುವುದಿಲ್ಲ. ಹೊಸದಕ್ಕೆ ತುಡಿಯುವ ಕಾಲದಲ್ಲಿ ಅವರ ಹಳೆಯ ಹಾಡುಗಳ ಬಗ್ಗೆ ಸುತ್ತಮುತ್ತಲಿನವರಿಗೆ ಸ್ವಲ್ಪಮಟ್ಟಿನ ಅಸಡ್ಡೆಯೂ ಇರುತ್ತದೆ. ಇವೆಲ್ಲವುಗಳ ನಡುವೆ ಕಾಡುಹಕ್ಕಿಯ ಹಾಡಿನಂತೆ ಎಷ್ಟೊಂದು ಹಾಡುಗಳು ಈ ಹೆಂಗಳೆಯರ ಕಂಠದಲ್ಲಿ ಕಾದು ಕುಳಿತಿರುತ್ತವೆ. ಹಾಡುವುದು ಅವರಿಗೆ ನಿಜಕ್ಕೂ ಅನಿವಾರ್ಯ ಕರ್ಮ.

ಬುಡಕಟ್ಟುಗಳ ಬೀಡು ಎಂದೆನಿಕೊಂಡ ಉತ್ತರಕನ್ನಡದ ಹಾಡಿಯ ಹಾದಿ ಹಿಡಿದು ಹೊರಟರೆ ಇನ್ನೆಷ್ಟು ಹಾಡುಹಕ್ಕಿಗಳು ತಮ್ಮ ಉಸಿರಲ್ಲಿ ಬಚ್ಚಿಟ್ಟ ಹಾಡುಗಳು ದಾಖಲಾಗದೇ ಹಾಗೆಯೇ ಉಳಿದಿವೆಯೋ? ಅದೆಷ್ಟು ಹಾಡುಗಳು ತಮ್ಮನ್ನು ಧರಿಸಿಕೊಂಡವರ ಉಸಿರಿನೊಂದಿಗೆ ತಾವೂ ಪ್ರಕೃತಿಯಲ್ಲಿ ಲೀನವಾಗಿಹೋಗಿವೆಯೋ ಬಲ್ಲವರಾರು? ಹಾಡಿನ ಮೂಲಕವೇ ನನಗೆ ದಕ್ಕಿದ, ಮತ್ತೀಗ ಹಾಡು ನಿಲ್ಲಿಸಿ ಹೊರಟ ‘ಹಾಡಿನ ಹಡಗು ಹನುಮಿ ಗೌಡ’ರ ನೆನಪಿಗೆ ಇದನ್ನಲ್ಲದೇ ಇನ್ನೇನು ಬರೆಯಬಲ್ಲೆ?

‍ಲೇಖಕರು Admin

June 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: