
ವೀಣಾ ರಮೇಶ್
ಒಂದು ಹೆಣ್ಣು ಒಂದು ಸರಹದ್ದು ಇತ್ತು ಅಂದ್ರೆ ಒಂದು ಕಥೆ ತನ್ನನ್ನ ತಾನು ಬರಕೊಂಡು ಬಿಡತ್ತೆ ಅಂತಾರೆ ಗೀತಾಂಜಲಿ ಶ್ರೀ.
ಮಾಯಿ ಎಂಬ ಕೃತಿಯಿಂದ 2000ರಲ್ಲಿ ಹಿಂದಿ ಸಾಹಿತ್ಯಕ್ಷೇತ್ರದಲ್ಲಿ, 2017 ರಲ್ಲಿ ಅದರ ಅನುವಾದದೊಂದಿಗೆ ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಗೀತಾಂಜಲಿ ಶ್ರೀ ಅವರು 2018 ರಲ್ಲಿ ರೇತ್ ಸಮಾಧಿ ಕೃತಿಯನ್ನು ಬಿಡುಗಡೆ ಮಾಡಿದರು. ಬರೆಯುವುದಕ್ಕೆ ಪೂರಾ ೬ ವರ್ಷ ತೆಗೆದುಕೊಂಡ ರೇತ್ ಸಮಾಧಿ ಕೃತಿಯು ತನ್ನ ಸೃಷ್ಟಿಯಲ್ಲಿನ ತಪಸ್ಸಿಗೆ ಸಂಪೂರ್ಣ ನ್ಯಾಯ ಒದಗಿಸಿದೆ. 2018 ರಲ್ಲಿ ಇದರ ಫ್ರೆಂಚ್ ಅನುವಾದ ಪ್ರಕಟವಾಗಿ ಅದು ಸಹ ಹೆಸರು ಮಾಡಿತು. ಡೈಸಿ ರಾಕ್ವೆಲ್ ಅವರಿಂದ ಆಂಗ್ಲಕ್ಕೆ ಅನುವಾದಗೊಂಡು 2022 ರಲ್ಲಿ ಪ್ರಕಟಗೊಂಡ ಟೂಂಬ್ ಆಫ್ ಸ್ಯಾಂಡ್ ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿರುವಂಥ ಬುಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಭಾಷೆಯ ಕೃತಿ ಎಂಬ ಹೆಗ್ಗಳಿಕೆಯೂ ಸೇರಿದೆ. ಇದು ಭಾರತದ ಎಲ್ಲ ಭಾಷೆಗಳ ಸಾಹಿತ್ಯಪ್ರೇಮಿಗಳಿಗೂ, ಅನುವಾದೋತ್ಸಾಹಿಗಳಿಗೂ ಅತೀವ ಸಂತೋಷವನ್ನ ತಂದುಕೊಟ್ಟಿತು.
ಈ ಕೃತಿಯ ಕಥೆಯ ಎಳೆಯನ್ನು ಹಿಡಿದರೆ ಒಂದು ಮುಷ್ಠಿಯೊಳಗೆ ನಿಲುಕುವ ಹಂದರ ಒಂದೊಂದು ಕಣದಲ್ಲೂ ವಿಸ್ತರಿಸುತ್ತ ಆಕಾಶದ ಹಾಗೆ ವ್ಯಾಪಿಸಿಕೊಂಡು ಸಾಗರದ ಹಾಗೆ ಆಳವಾಗುತ್ತ ಓದುಗರಿಗೆ ಒಂದು ಘನವಾದ ಅನುಭವವೇ ಆಗಿಬಿಡುತ್ತದೆ.
ತಾಯಿಯ ಬೆನ್ನು ಎಂದೇ ಮೊದಲಾಗುವ ಈ ಕೃತಿಯಲ್ಲಿ, ತನ್ನ ಬೆನ್ನ ಹಿಂದೆ ಆಕೆ ಕಳೆದ ತನ್ನದಾಗಿಲ್ಲದ ಎಂಭತ್ತು ವರ್ಷಗಳ ಒಟ್ಟನುಭವಕ್ಕೆ ಬೆನ್ನು ಮಾಡಿ ಗೋಡೆಯ ಕಡೆ ತಿರುಗಿ ಆಕೆ ಮಲಗಿಬಿಟ್ಟಿದ್ದಾಳೆ. ಮೇಲೇಳಳು. ಎಂಟು ದಶಕಗಳಿಂದ ಆಕೆಯ ಬೆನ್ನನ್ನೇ ಕಾಣದ ಕುಟುಂಬಕ್ಕೆ ಈಗ ದಿಗಿಲು, ಕಾಳಜಿ.

ಬೆಳೆದು ಚಿಕ್ಕದಾಗುತ್ತಾ ಒಂದು ತಾಯಿ ಆಕೆ. ಚಿಕ್ಕದಾಗುತ್ತ ಆಗುತ್ತ ತಾನು ಮುಖಮಾಡಿದ ಗೋಡೆಯ ಬಿರುಕುಗಳಿಂದ ತೂರಿ ದೃಶ್ಯದ ಗಡಿಯಿಂದಾಚೆ ದಾಟಿ ಅದೃಶ್ಯವಾಗಬೇಕೆಂದು ಇರುವಂತೆ. ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ, ಶತಮಾನಗಳ ನಡುವೆ, ಶಾಶ್ವತಗಳ ನಡುವೆ ಓಡಾಡುವವರ ಸುಳಿವನ್ನಷ್ಟೇ ಅಲ್ಲದೆ, ಇಲ್ಲದವರ ಅನುಪಸ್ಥಿತಿಯನ್ನೂ ನೋಡುವ ಬಾಗಿಲುಗಳ ಮಧ್ಯೆ ಮನೆಗಳುಳಿಸಿಕೊಂಡ ಗೋಡೆಬುರುಕತನದ್ಲಲೂ ನಿಷಿದ್ಧದ ಕಡೆಗೆ ಆಗಾಗ್ಗೆ ಹಾರಲು ಮಗಳಿಗಾಗಿ ಕಿಟಿಕಿಗಳನ್ನು ತೆರೆದಿಡುವ ‘ಮಾ’, ಮಾಡಲು ಬಲು ಯೋಗ್ಯವಾದದ್ದೆಲ್ಲ ಬೇಲಿಯಿಂದಾಚೆ ಬರುವಂಥದೇ ಎಂದರಿತವಳು. ಬೇಲಿಯಾಚೆಯ ಅಳು-ನಗು, ಸೊಕ್ಕು-ದುಗುಡ ಎಲ್ಲದರಲ್ಲೂ ಇಬ್ಬರೂ ಭಾಗಿಗಳೇ.
ಏಳೆನು ಏಳೆನು ಎನ್ನುತ್ತಲೇ ಎಳೆ-ಎಳೆಯಾಗಿ ಬಿಡಿಸಿಕೊಂಡು, ಎಳೆಯದಾದ ಎಲೆಗಳೊಡೆದಂತೆ ಮೇಲೆದ್ದೇ ಬಿಡುವ ‘ಮಾ’ ಎಲ್ಲೆಲ್ಲಿಯ ಎಲ್ಲೆಮೀರುತ್ತ ಹೋಗುತ್ತಾಳೋ! ತನ್ನ ಬೆನ್ನಿಗೆ ಬೆನ್ನು ಮಾಡಿದವಳ ಎದೆಯಲ್ಲಿ ಎಷ್ಟು ಮುಖಗಳಿವೆಯೋ. ಅನ್ನಿಸಿದ್ದನ್ನು ಹೇಳಲು ಬಾರದೆ ಅನ್ನಿಸದ್ದನ್ನು ಒದರುವ ಮಗ, ಅತ್ತೆಯೆಂದರೆ ಕಸಿವಿಸಿ-ಕಾಳಜಿಗಳ ನಡುವೆ ಕನಲುವ ಸೊಸೆ, ಬೇಲಿಕಿತ್ತೆಸೆದ ಬದುಕಿಗೆ ಅಮ್ಮನಿಗೆ ಜೊತೆಯಾಗುವ ಮಂಗಳಮುಖಿ ರೋಸಿ ಎಡೆಗೆ ಹೇಗೆ ಸ್ಪಂದಿಸುವುದೋ ತಿಳಿಯದೆ ತಬ್ಬಿಬ್ಬಾಗುವ ಗೋಡೆಗಳೊಲ್ಲದ ಮಗಳು, ಇವರ ಒಡಂಬಡಿಕೆಗಳ ಮಧ್ಯೆ ನಡೆಯುವ ಘಟನೆಗಳು, ‘ಯಾವುದೇ ವಿಚಾರವೂ ಅಂತ್ಯವಿಲ್ಲದ್ದು; ಯಾವುದೇ ಕಥೆಯೂ ಸಂಪೂರ್ಣವಲ್ಲದ್ದು’ ಎಂಬಂತೆ ಅಲೆಯುತ್ತ, ಆ ಅಲೆಯುವಿಕೆಯಲ್ಲೇ ಅರ್ಥಗಳನ್ನ ಸೃಷ್ಟಿಸುತ್ತ ಹೋಗುತ್ತೆ. ‘ಕೇಳಲರ್ಹವಾದ ಪ್ರಶ್ನೆಗಳಿಗೆ ಹೇಳಲರ್ಹವಾದ ಉತ್ತರಗಳು ಸಿಗೋದೇ ಇಲ್ಲ’ ಅನ್ನೋ ತನ್ನ ಮಾತನ್ನ ಕೃತಿ ಸಾಕಾರ ಮಾಡುತ್ತದೆ.
‘ಬದುಕಿನ ಕುರಿತು ಏನಂತ ಹೇಳೋದು? ಶುರುವಾಗುತ್ತಲೇ ಮುಗಿದುಹೋಗುವ ಕಿರಿದಾದ ಪರಿಧಿಯನ್ನು ತಿಳಿದಂತೆಯೇ ಕಾಲದ ವಿಸ್ತಾರವನ್ನೂ ಅದು ತಿಳಿದಿದೆ; ಸಣ್ಣ ಓಣಿಯೊಳಗಿಂದ ದೊಡ್ಡ ಬೀದಿಯೊಳಗೆ ಚಲಿಸುತ್ತ ಹಾಗೆಯೇ ಚರಿತ್ರೆಯೇ ಘಟಿಸಿರುವಂಥ ಹೆದ್ದಾರಿಯೊಳಗೆ ಹೆಜ್ಜೆಯಿಡುವಂತೆ..’ ಎಂದು ಲೇಖಕಿಯೇ ಹೇಳುವಂತೆ ಈ ಕೃತಿಯೂ ಸಾಗುತ್ತದೆ. ಪ್ರತಿ ಒಂದನ್ನೂ ಸೂಕ್ಷ್ಮವಾಗಿಯೂ ಇಡಿಯಾಗಿಯೂ ದಿಟ್ಟಿಸುತ್ತ, ಯಾವುದೇ ಸಿದ್ಧಮಾದರಿಗಳನ್ನು (stereotypes) ಒಪ್ಪದೇ, ಯಾವುದೇ ಒಂದು ಶೈಲಿಗೂ (genre) ಸೇರಲು ಒಲ್ಲದೆ, ಒಮ್ಮೆ ಕಾದಂಬರಿ -ಒಮ್ಮೆ ಪ್ರಬಂಧ-ಒಮ್ಮೆ ಮಂಥನ-ಒಮ್ಮೆ ಕಾವ್ಯ-ಒಮ್ಮೆ ರೂಪಕ ಹೀಗೆಲ್ಲ ಬದಲಾಗುತ್ತ ಅಲೆಮಾರಿಯಂತೆ ಅಲೆಯುತ್ತ ಮೂರು ಭಾಗಗಳಲ್ಲಿ ಮೂರು ಗತಿಗಳಲ್ಲಿ ಕ್ರಮಿಸುತ್ತ ಸಾಗುತ್ತದೆ.

ಇಲ್ಲಿ ಕಾಗೆಗಳೂ, ನಾಯಿಗಳೂ, ಚಿಟ್ಟೆಗಳೂ ಸ್ಪಂದಿಸಬಲ್ಲವು. ಮನುಷ್ಯನ ಮನಸ್ಸಿನಲ್ಲಿ ಮೂಡುವ ತಳಮಳಗಳು ಅವುಗಳ ಸಂವೇದನೆಗೆ ಸಿಲುಕಬಲ್ಲವು. ಕಥೆಗಳಿಗೆ ಕಿವಿಯಾಗಬಲ್ಲವು. ಆಗಲಾರದವರು ಮನುಷ್ಯರಷ್ಟೇಯೇನೋ. ಹಾಗೆಂದೇ, ಬೇಲಿಯಾಚೆಗಿನ ಬದುಕನ್ನು ಆಯ್ದುಕೊಂಡ ತಂಗಿಯೆಡೆಗೆ ಅಣ್ಣನಿಗೆ ಬಿಂಕ; ಅವಳ ಮನೆಯಲ್ಲುಳಿದ ತಾಯಿಯನ್ನು ಕದ್ದುನೋಡಲು ಮಗ ಮರವೇರಿ ಮಂಪರಾದಾಗ, ಅವನ ನೆನಹುಗಳ ಕನಸುಗಳಿಂದ ಮೂಡಿಬಂದು ಮರದಿಂದ ತೆರೆತೆರೆಯಾಗಿ ಇಳಿದು ತೂಗುವ ಅಮ್ಮನ ಚೆಂದಚೆಂದದ ಸೀರೆಗಳನ್ನು ನೋಡುತ್ತ, ಮನುಷ್ಯನೇ ಮಾಡಿಟ್ಟ ತಮ್ಮ ಸಮಸ್ಯೆಗಳ ಚರ್ಚೆಗಾಗಿ ಸಮಾವೇಶಗೊಂಡ ಆ ಕಾಗೆಗಳು, ತಮ್ಮ ಒತ್ತಡಗಳನ್ನ ಬದಿಗಿಟ್ಟು ಸಹಾನುಭೂತಿಯಿಂದ ಕಲರವ ಮಾಡುವುದನ್ನು ಓದುವುದೇ ಒಂದು ಬಲು ಸೊಗಸಾದ ಅನುಭವ.
‘ಯಾವುದೇ ವಿಚಾರದ ಸತ್ಯವೆಂದರೆ ಇದು: ಅದರ ಎಲ್ಲ ಮುಖಗಳೂ ಒಮ್ಮೆಲೇ ತೆರೆದುಕೊಳ್ಳೋದಿಲ್ಲ.’ ಎನ್ನುತ್ತಾರೆ ಲೇಖಕಿ. ಒಮ್ಮೆಲೇ ತೆರೆದುಕೊಳ್ಳೋದಾದ್ರೆ ಜೀವನದಲ್ಲಿ ಕಥೆಗಳಾದ್ರೂ ಎಲ್ಲುಳಿಯುತ್ತವೆ? ‘ಹೊಸ ಅರ್ಥಗಳನ್ನ ಅಪಾದಿಸೋದನ್ನೇ ಅರ್ಥಮಾಡಿಕೊಳ್ಳೋದು ಅನ್ನೋದಾದ್ರೆ, ಯಾರು ಅಸಲು ಯಾರು ನೆರಳು ಅಂತ ಗೊತ್ತಾಗೋದು ಹೇಗೆ?’ ಈ ಪ್ರಶ್ನೆಯ ಒಳಭಾವ ಕೃತಿಯ ಉದ್ದಕ್ಕೂ ನಮ್ಮೊಂದಿಗೆ ನಡೆದುಬರುತ್ತೆ.
ಸಣ್ಣ ಓಣಿಯೊಳಗಿಂದ ಹೋರಟ ಕಥೆ ಚರಿತ್ರಾರ್ಹ ಹೆದ್ದಾರಿಗೆ ಹೆಜ್ಜೆಯಿಟ್ಟಂತೆ ಮನೆಯ ಗೋಡೆಗಳನ್ನು ದಾಟಿ ಮನದ ಗೋಡೆಗಳಿಂದಾದ ಗಡಿಗಳ ಆಚೆ-ಈಚೆ ಬೇರ್ಪಟ್ಟು ಮರೆಯಾಗಿ ಮರಳ ಸಮಾಧಿಯಿಂದ ಎದ್ದುಬರುವ ಎದೆಗಳಾಳದ ವಿಯೋಗವೇದನೆಯಾಗುವತ್ತ ನಡೆದಾಗ ಗಡಿಗಳ ಮೇಲೊಂದು ಮನೋಜ್ಞವಾದ ವ್ಯಾಖ್ಯಾನ! ಗಡಿ ಒಂದು ತಡೆಯಲ್ಲ; ಅಸ್ತಿತ್ವಕ್ಕೊಂದು ಅಂಚು ಅದು. ಎರಡು ಅಸ್ತಿತ್ವಗಳು ಭೇಟಿಯಾಗಿ ಸುಖಿಸೋ ಸ್ಥಳ. ಸಂಬಂಧಿಗಳ ಮಧ್ಯ ಸೇತುವೆ…..ಈ ಸುದೀರ್ಘ ವ್ಯಾಖ್ಯಾನವೇ ಒಂದು ಕಾವ್ಯದಂತೆ ಮೂಡಿಬಂದಿದೆ.
ಆಂಗ್ಲ ಅನುವಾದದಲ್ಲಿ 700 ಪುಟಗಳಿಗೂ ಮೇಲ್ಪಟ್ಟ ಈ ಕೃತಿಯ ಅನುವಾದವೂ ಸಹ ಅತಿ ಮನೋಹರವಾಗಿದೆ. ಭಾಷೆಯೇ ಮತ್ತು ಭಾಷೆಯ ಧ್ವನಿಯೇ ಮುಖ್ಯವಾಗಿರುವ ಈ ಸಂಕೀರ್ಣ ಕೃತಿಯ ಅನುವಾದ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಪ್ರತಿಯೊಂದು ಪುಟದಲ್ಲೂ ಈ ಅದ್ಭುತ ಅಭಿವ್ಯಕ್ತಿಯ ಮೂಲ ಏನಿರಬಹುದಪ್ಪ ಎಂಬ ಕೌತುಕ ಮತ್ತು ಅಚ್ಚರಿ ಮೂಡುತ್ತವೆ. ಒಂದು ಅನನ್ಯ ಅನುಭವ ಈ ಕೃತಿ.
0 ಪ್ರತಿಕ್ರಿಯೆಗಳು