ಮನ ಗೆದ್ದ ‘ಚಾರು ವಸಂತ’

ಚಿತ್ತಬಿತ್ತಿಯೊಳಗೆ ಚಿಂತನೆಗಳನ್ನು ಒರೆಗೆ ಹಚ್ಚಿದ ‘ಚಾರು ವಸಂತ’

ಶಶಿರಾಜ್ ರಾವ್ ಕಾವೂರು

ಚಿತ್ರಗಳು: ರವಿ, ಮಾನಸ ಸ್ಟುಡಿಯೊ, ಮೂಡಬಿದಿರೆ

—-

ಪ್ರಾಚೀನ ಕಥಾನಕವನ್ನು ದೇಸಿ ಶೈಲಿಯಲ್ಲಿ 2003 ರಲ್ಲಿ ಬರೆದು, ಲೋಕಾರ್ಪಣೆ ಮಾಡಿದ್ದ ಡಾ.ಹಂಪನಾ ಅವರಿಗೆ ಈ ಕಾವ್ಯ ನಾಟಕವಾದರೆ ಬಹಳ ಜನರನ್ನು ತಲುಪುತ್ತದೆ ಎಂಬ ಯೋಚನೆಯಿತ್ತು. ಆ ಹೊತ್ತಿಗೆ ನಾಡಿನ ಸಾಂಸ್ಕೃತಿಕ ರಾಯಭಾರಿ ಡಾ.ಎಂ ಮೋಹನ ಆಳ್ವಾರ ಜೊತೆ ಇದನ್ನು ಅವರು ಪ್ರಸ್ತಾಪಿಸಿದ್ದರು. ಡಾ.ನಾ.ದಾಮೋದರ ಶೆಟ್ಟಿ ಈ ಮಹಾಕಾವ್ಯವನ್ನು ರಂಗರೂಪಕ್ಕೆ ಇಳಿಸಿದರು. ಅದನ್ನು ಕೈಗೆತ್ತಿಕೊಂಡು ರಂಗಕ್ಕೆ ಅಳವಡಿಸಿದವರು ನಾಡಿನ ಪ್ರಸಿದ್ಧ ರಂಗ ನಿರ್ದೇಶಕ ಡಾ.ಜೀವನ್‌ರಾಮ್ ಸುಳ್ಯ.

ಈ ನಾಟಕದ ಕತೆ ನಡೆಯುವುದು ರೇವು ಪಟ್ಟಣ ಚಂಪಾಪುರದಲ್ಲಿ. ಭಾನುದತ್ತ ಊರಿನ ಧನಿಕ ವ್ಯಾಪಾರಿ. ಊರಿಗೆ ಊರೆ ಅವನನ್ನು ಕಂಡರೆ ಬಹಳ ಗೌರವ ತೋರಿಸುತ್ತದೆ. ಭಾನುದತ್ತ ಬಹಳ ಉದಾರಿ. ಅವನ ಮಡದಿ ದೇವಿಲ. ಆದರೆ ಅವರಿಗೆ ಮಕ್ಕಳಿಲ್ಲದ ಕೊರಗು.

ಊರಿನ ಹೊರಗೆ ತಪಸ್ವಿಗಳಾದ ಚಾರಣರೋರ್ವರು ಬಂದ ವಿಷಯ ತಿಳಿದು ಭಾನುದತ್ತ ಮತ್ತು ದೇವಿಲ ಅಲ್ಲಿಗೆ ಹೋಗಿ ಬೇಡುತ್ತಾರೆ. ಚಾರಣ ಅವರಿಗೆ ‘ನಿನಗೊಬ್ಬ ಅಸಾಮಾನ್ಯ, ಉದಾರಚರಿತ ಮಗ ಹುಟ್ಟುವನು’ ಎಂದು ಆಶೀರ್ವದಿಸುತ್ತಾರೆ. ಹಾಗೆಯೇ ಮುಂದೆ ಅವರಿಗೆ ಒಂದು ಮಗು ಹುಟ್ಟುತ್ತದೆ. ಅದಕ್ಕೆ ಭಾನುದತ್ತ ದಂಪತಿಗಳು ಚಾರುದತ್ತ ಎಂದು ನಾಮಕರಣ ಮಾಡುತ್ತಾರೆ.

ಚಾರುದತ್ತ ಬೆಳೆಯುತ್ತಾ ಬಂದಂತೆ ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಾನೆ. ಓರಗೆಯವರೊಂದಿಗೆ ಪ್ರಕೃತಿಯ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿಯ ಮಾತುಗಳನ್ನಾಡುತ್ತಾನೆ. ಬೇಟೆ ಬೇಡವೆಂದು ಹಿಂಸೆಯನ್ನು ತ್ಯಜಿಸಲು ಹೇಳುತ್ತಾನೆ. ಒಮ್ಮೆ ಕಾಡಿನ ದಾರಿಯಲ್ಲಿ ಯಕ್ಷನೋರ್ವನನ್ನು ಬದುಕಿಸುತ್ತಾನೆ.

ಈ ನಡುವೆ ಭಾನುದತ್ತ ತನ್ನ ಭಾವನ ಮಗಳು ಮಿತ್ರಾವತಿಯೊಂದಿಗೆ ಚಾರುದತ್ತನ ಮದುವೆ ನಿಶ್ಚಯಿಸುತ್ತಾನೆ. ಮದುವೆ ವೈಭವದಿಂದ ನಡೆಯುತ್ತದೆ. ಆದರೆ ಚಾರುದತ್ತನಿಗೆ ಸಾಂಸಾರಿಕ ವ್ಯವಹಾರದಲ್ಲಿ ಯಾವೊಂದೂ ಆಸಕ್ತಿಯಿರುವುದಿಲ್ಲ. ಅವನು ಯಾವಾಗಲೂ ತನ್ನ ಪುಸ್ತಕಗಳ ಒಳಗೆ ಮುಳುಗಿರುತ್ತಾನೆ. ಬೇಸತ್ತ ಹೆಂಡತಿ ತನ್ನ ತಾಯಿಯ ಬಳಿ ತನ್ನ ಕಷ್ಟ ತೋಡಿಕೊಳ್ಳುತ್ತಾಳೆ. ಆ ತಾಯಿ ದೇವಿಲೆಗೆ ವಿಷಯ ಅರುಹುತ್ತಾಳೆ. ಆಗ ದೇವಿಲೆ ಬಹಳ ಯೋಚಿಸಿ ಕೂಡಲೇ ತನ್ನ ತಮ್ಮ ರುದ್ರದತ್ತನನ್ನು ಬರಹೇಳುತ್ತಾಳೆ. ಚಾರುದತ್ತನ ಮನಸ್ಸು ತನ್ನ ಹೆಂಡತಿಯಲ್ಲಿ ಮೂಡಲು ಏನಾದರೂ ಮಾಡುವಂತೆ ಸಹಾಯ ಯಾಚಿಸುತ್ತಾಳೆ.

ರುದ್ರದತ್ತ ಸ್ವಭಾವತಃ ಬಹಳ ಕಾಮುಕ ಮತ್ತು ದುಷ್ಟನಾಗಿರುತ್ತಾನೆ. ಅವನು ಚಾರುದತ್ತನ ಬಳಿಗೆ ಹೋಗುತ್ತಾ ಮತ್ತೆ ಮತ್ತೆ ಭೇಟಿಯಾಗುತ್ತಾ ಚಾರುದತ್ತನಲ್ಲಿ ವಿಷಯಾಸಕ್ತಿ ಮೂಡುವಂತೆ ಮಾಡಲು ಶಕ್ತನಾಗುತ್ತಾನೆ. ಊರಿನ ಪ್ರಸಿದ್ಧ ವೇಶ್ಯೆಯ ಬಳಿಗೆ ಕರೆದುಕೊಂಡು ಹೋಗುತ್ತಾನೆ. ಆ ವೇಶ್ಯೆಯ ಮಗಳು ವಸಂತತಿಲಕಳ ನೃತ್ಯಕ್ಕೆ ಚಾರುದತ್ತ ಮನಸೋಲುತ್ತಾನೆ. ಅವರಿಬ್ವರೂ ಹತ್ತಿರವಾಗುತ್ತಾ ಒಬ್ಬರನ್ನೊಬ್ಬರು ಹಚ್ಚಿಕೊಳ್ಳುತ್ತಾರೆ. ಚಾರುದತ್ತನ ಸಂಪತ್ತೂ ಕರಗತೊಡಗುತ್ತದೆ. ಅವನ ಗೆಳೆಯರು ಚಾರುದತ್ತನನ್ನು ವಾಪಾಸು ಕರೆತರಲು ಪ್ರಯತ್ನಿಸಿದರೂ ವೇಶ್ಯೆ ಅನಾಮಿಕೆ ಬಿಡುವುದಿಲ್ಲ.

ಚಾರುದತ್ತನ ತಂದೆ ಭಾನುದತ್ತನಿಗೆ ಚಿಂತೆ ಹತ್ತುತ್ತದೆ. ಮಂದಿಯ ಕುಹಕ ಮಾತುಗಳಿಗೆ ಅವನು ಬೇಸರಿಸಿ ಮುನಿದೀಕ್ಷೆಯನ್ನು ಪಡೆದು ಎಲ್ಲವನ್ನೂ ತೊರೆದು ಊರುಬಿಟ್ಟು ಕಾಡಿಗೆ ಹೋಗುತ್ತಾನೆ.

ದೇವಿಲ ಮತ್ತು ಸೊಸೆ ಮನೆಯನ್ನು ಮಾರಿ ಸಾಲಮುಕ್ತರಾಗುತ್ತಾರೆ. ಈ ನಡುವೆ ಚಾರುದತ್ತ ದಿವಾಳಿಯಾದದ್ದರಿಂದ ವೇಶ್ಯೆ ಅವನನ್ನು ಮನೆಯಿಂದ ಹೊರಹಾಕುತ್ತಾಳೆ. ತಿಪ್ಪೆಗೆ ಬಿಸಾಕುತ್ತಾಳೆ. ಅಲ್ಲಿಂದ ಹೊರಟ ಚಾರುದತ್ತ ಮತ್ತೆ ತಾಯಿ ಮತ್ತು ಮಡದಿಯನ್ನು ಹುಡುಕಿಕೊಂಡು ಹೊರಡುತ್ತಾನೆ. ಅವರನ್ನು ಕಂಡು ಅವರಲ್ಲಿ ಕ್ಷಮೆ ಕೇಳುತ್ತಾನೆ.. ಇತ್ತಕಡೆ ವಸಂತತಿಲಕೆ ಗರ್ಭಿಣಿಯಾಗಿರುತ್ತಾಳೆ. ಚಾರುದತ್ತನನ್ನು ಕಳುಹಿಸಿದ್ದಕ್ಕೆ ಅತ್ತು ಕೂಗಾಡುತ್ತಾಳೆ. ತಾಯಿಯ ಮನ ಕರಗಿ ಅವರು ಚಾರುದತ್ತನ ಬಳಿಗೆ ಹೋಗಿ ತಾವು ಸಂಪಾದಿಸಿದ ಒಡವೆ ಆಸ್ತಿ ಎಲ್ಲವನ್ನೂ ಹಿಂತಿರುಗಿಸಿ ವಸಂತತಿಲಕೆಯನ್ನು ವರಿಸಲು ಕೋರುತ್ತಾರೆ. ಮೊದಲ ಹೆಂಡತಿ ಮಿತ್ರೆ ಸವತಿಯನ್ನು ಒಪ್ಪಿಕೊಳ್ಳುತ್ತಾಳೆಯೆ? ಚಾರುದತ್ತ ಇಬ್ಬರು ಮಡದಿಯರೊಡಗೂಡಿ ಮತ್ತೆ ಸುಖ ಸಂಸಾರ ಮಾಡುತ್ತಾನೆಯೆ? ಚಾರುದತ್ತ ಕಳೆದುಕೊಂಡ ಸಿರಿಸಂಪತ್ತನ್ನು ಮತ್ತೆ ಹಿಂಪಡೆದುಕೊಳ್ಳುತ್ತಾನೆಯೆ? ಚಾರುದತ್ತ ವ್ಯಾಪಾರಕ್ಕೆ ಹೋದವನು ಬದುಕಿ ಉಳಿಯುತ್ತಾನೆಯೆ? ಉಳಿದೆಲ್ಲ ಕತೆಗಳು ರೋಚಕವಾಗಿ ಸಾಗುತ್ತದೆ.

ನಾಟಕದಲ್ಲಿ ಕೃತಿಕಾರರ ಆಶಯ ಎಲ್ಲೂ ಮಾಸದಂತೆ ಆಗಾಗ ನಕ್ಷತ್ರದಂತೆ ಹೊಳೆಹೊಳೆದು ನೋಡುಗರ ಮನಸು ಸೆಳೆದು ಚಿಂತನೆಗೆ ಹಚ್ಚುತ್ತದೆ. ಜನಪದ ಶೈಲಿಯಲ್ಲಿ ಸಾಗುವ ಕಥಾಹಂದರ ಎಲ್ಲೂ ಬೇಸರ ತರಿಸುವುದಿಲ್ಲ. ಅನೇಕಾನೇಕ ತಿರುವುಗಳನ್ನು ಕಾಣುತ್ತಾ ಸಾಗುವ ನಾಟಕದಲ್ಲಿ ರಂಜನೆ ಮತ್ತು ಬೌದ್ಧಿಕ ವಿಷಯಗಳು ಸಮಾನವಾಗಿದೆ. ಜಿನವಾಣಿಯ ಉಲ್ಲೇಖಗಳೂ ಅಲ್ಲಲ್ಲಿ ಬಂದು ಅಧ್ಯಾತ್ಮವೂ ಕಾಣಿಸುತ್ತದೆ.

ಹಳೆಗನ್ನಡ ಭಾಷೆಯ ಸೊಗಡು ನಾಟಕದುದ್ದಕ್ಕೂ ಮೇಳೈಸಿದೆ. ತೂಕದ ಮಾತುಗಳು, ಕೆಲವೊಮ್ಮೆ ಚುರುಕು ಸಂಭಾಷಣೆ, ಕೆಲವೊಮ್ಮೆ ದೀರ್ಘ ಸಂಭಾಷಣೆ ನಟ-ನಟಿಯರಿಗೆ ಸವಾಲೆನಿಸಿದರೂ ಅದನ್ನು ಬಹಳ ಸಮರ್ಥವಾಗಿ ಮತ್ತು ಸಲೀಸಾಗಿ ರಂಗದಲ್ಲಿ ನಟ-ನಟಿಯರು ಪ್ರಸ್ತುತಪಡಿಸಿದ ರೀತಿ ಶ್ಲಾಘನೀಯ.

ದೃಶ್ಯದಿಂದ ದೃಶ್ಯಕ್ಕೆ ಚಕಚಕನೆ ಬದಲಾಗುವ ರಂಗ ಪರಿಕರಗಳು, ಚಿಗರೆಯಂತೆ ಅತ್ತಿತ್ತ ಸಾಗುವ ಲವಲವಿಕೆಯ ನಟ-ನಟಿಯರು, ಬೆಳಕಿನ ವಿನ್ಯಾಸ, ಬೆಳಕಿನಾಟದಲ್ಲಿ ನಡೆಯುವ ಸನ್ನಿವೇಶಗಳು, ನಡುವೆ ಉಲ್ಲಾಸದ ಹರ್ಷೋದ್ಗಾರ ನೀಡುವ ಇಂದ್ರಜಾಲದ ಚಮತ್ಕಾರ ಎಲ್ಲವೂ ಸೇರಿ ಚಾರುವಸಂತವನ್ನು ಮತ್ತಷ್ಟು ಮೇಲಕ್ಕೆತ್ತಿದೆ ಮಾತ್ರವಲ್ಲ ಮೂರು ಗಂಟೆ ನಡೆಯುವ ಸುದೀರ್ಘ ರಂಗ ಪ್ರಕ್ರಿಯೆಯ ಪ್ರಯಾಸವನ್ನು ತಿಳಿಗೊಳಿಸುತ್ತದೆ. ಭಾನುಶೆಟ್ಟಿ ಪಾತ್ರ ಮಾಡಿದ ನವೀನ್ ಕಾಂಚನ್, ದೇವಿಲೆ ಪಾತ್ರದ ಸುಮನಾ ಪ್ರಸಾದ್, ಚಾರುದತ್ತ ಪಾತ್ರದ ಹಾರಂಬಿ ಯತೀನ್ ವೆಂಕಪ್ಪ, ದೊರೆಸಾನಿ ಪಾತ್ರದ ವಸಂತಲಕ್ಷ್ಮಿ, ವಸಂತತಿಲಕೆ ಪಾತ್ರದ ತೃಷಾ ಶೆಟ್ಟಿ, ಉಳಿದಂತೆ ಪ್ರಮೋದ್, ರಾಜೇಂದ್ರ, ರಕ್ಷಿತಾ ಸೇರಿದಂತೆ ಎಲ್ಲಾ ಕಲಾವಿದರು ತಮ್ಮ ತಾದಾತ್ಮ್ಯದ ಅಭಿನಯದ ಮೂಲಕ ನಾಟಕಕ್ಕೆ ಮೆರುಗು ನೀಡಿದರು. ಸಾತ್ವಿಕ್‌ನ ರಂಗತಂತ್ರ, ಮನುಜ ನೇಹಿಗನ ಸಂಗೀತ, ಶಿಶಿರನ ಬೆಳಕು ಎಲ್ಲವೂ ಗಮನಾರ್ಹವಾದದ್ದು.

ಡಾ.ಹಂಪನಾ ತಮ್ಮ ಅಪೂರ್ವ ಕೃತಿಯಲ್ಲಿ ಮಾನವೀಯ ಮೌಲ್ಯಗಳನ್ನು ಹೇರಳವಾಗಿ ತುಂಬಿ ನಾಟಕದುದ್ದಕ್ಕೂ ತ್ಯಾಗ ಜೀವನದ ಮಹತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅದನ್ನು ಅಷ್ಟೇ ರಸವತ್ತಾಗಿ ಮತ್ತು ಆಳವಾಗಿ ರಂಗರೂಪಕ್ಕೆ ಇಳಿಸಿದ್ದಾರೆ ಡಾ.ನಾ.ದಾಮೋದರ ಶೆಟ್ಟಿಯವರು ಮತ್ತು ಡಾ.ಜೀವನ್‌ರಾಮ್ ಸುಳ್ಯರವರು. ತ್ಯಾಗಜೀವನದ ಮಹತ್ವ, ಅಹಿಂಸೆಯ ಅಗತ್ಯತೆಯನ್ನು ಮತ್ತು ಜೈನಧರ್ಮದ ಸಾರವನ್ನು ಮಾತು-ಮಂತ್ರಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಾಟಕ ಯಶಸ್ಸು ಕಂಡಿದೆ.

ಇಂತಹ ನಾಟಕಗಳ ನಿರ್ಮಾಣಕ್ಕೆ, ತಯಾರಿಗೆ ವಿಷೇಶ ಶಕ್ತಿ ಬೇಕು. ಸಾಮಾನ್ಯ ತಂಡಗಳಿಗೆ ಇದು ಸಾಧ್ಯವಾಗುವ ಮಾತಲ್ಲ. ಡಾ.ಮೋಹನ ಆಳ್ವರಂತಹ ಅಪಾರ ರಂಗಕಾಳಜಿಯುಳ್ಳ ಆಶ್ರಯದಾತರಿದ್ದಾಗ ಮಾತ್ರ ಈ ರೀತಿಯ ದೊಡ್ಡ ಮಟ್ಟದ ನಾಟಕ ನಿರ್ಮಾಣ ಸಾಧ್ಯ. ಹಾಗೆಯೇ ಪ್ರಾಣಿ, ಪಕ್ಷಿ ಸೇರಿದಂತೆ ನೂರಾರು ಪಾತ್ರಗಳನ್ನು ಬೆರಳೆಣಿಕೆಯ ಮಂದಿಯೇ ನಿರ್ವಹಿಸಿದ್ದು ಸಾಧನೆಯೇ ಸರಿ. ಪ್ರಸಾದನ, ಉಡುಪು, ಬೆಳಕು, ಸಂಗೀತ ಸೇರಿದಂತೆ ನೇಪಥ್ಯದ ತಂತ್ರಜ್ಞರ ಸಹಕಾರ ಮತ್ತು ನಿರ್ದೇಶಕರ ಪ್ರತಿಭೆ, ಸೃಜನಶೀಲತೆ ನಾಟಕದಲ್ಲಿ ಎದ್ದು ಕಾಣುತ್ತದೆ. ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರೇಕ್ಷಕರ ಸಹನೆ ಬೇಡಿದರೂ, ನಾಟಕ ಕೊನೆಗೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ.

‍ಲೇಖಕರು avadhi

November 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: