ಮನೋರಂಜನೆಯ ಜೊತೆಗೆ ಗಂಭೀರ ಚಿಂತನೆ ಮೂಡಿಸುವ ಸಿನೆಮಾಗಳು

ಗೊರೂರು ಶಿವೇಶ್

**

ಕಾಂತಾರ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿಯವರಿಗೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಒಟ್ಟಾರೆ ಏಳು ಚಲನಚಿತ್ರ ಪ್ರಶಸ್ತಿಗಳು ದೊರಕಿದ್ದು ಅವಸಾನದ ಅಂಚಿಗೆ ತಲುಪುತ್ತಿರುವ ಕನ್ನಡ ಚಿತ್ರೋದ್ಯಮಕ್ಕೆ ಭರವಸೆಯ ಬೆಳಕು ಮೂಡಿಸಿದೆ. ಆದರೆ ಪೃಥ್ವಿ ಕೊಣನೂರು ರವರ 17/18, ನಟೇಶ್ ಹೆಗಡೆ ಅವರ ಪೆಡ್ರೊ, ಚಿತ್ರಗಳನ್ನು ಮೀರಿ ಕೆಜಿಎಫ್ 2 ವಂತಹ ಕಮರ್ಷಿಯಲ್ ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ ದೊರಕಿರುವುದು ಮತ್ತು ಈ ಬಾರಿಯ ಪ್ರಮುಖ ಪ್ರಶಸ್ತಿಗಳೆಲ್ಲವೂ 100 ಕೋಟಿ ಮೀರಿ ಗಳಿಕೆ ಮಾಡಿರುವ ಸಿನಿಮಾಗಳಿಗೆ ದೊರಕಿದ್ದು ಕಡಿಮೆ ಬಜೆಟ್ ನ ಪ್ರಶಸ್ತಿ ಹಾಗೂ ಫೆಸ್ಟಿವಲ್ ಗಾಗಿ ನಿರ್ಮಿಸಲ್ಪಡುತ್ತಿರುವ ಚಿತ್ರಗಳು ಯಾವುದೇ ಪ್ರಶಸ್ತಿ ಪಡೆಯದಿರುವುದು ನಿರಾಸೆ ಮೂಡಿಸಿದೆ. ಕಡಿಮೆ ಬಜೆಟ್ ನ ಈ ಚಿತ್ರಗಳು ತಮ್ಮ ಯಶಸ್ಸು ಮತ್ತು ಮಾರ್ಕೆಟಿಂಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಅವಲಂಬಿಸಿದ್ದು ಇಂತಹ ಚಿತ್ರಗಳ ನಿರ್ಮಾಣಕ್ಕೆ ಬೆನ್ನೆಲುಬಾಗಿದ್ದ ರಿಷಬ್ ಶೆಟ್ಟರು ಮುಂದೆ ಇಂತಹ ಕಲಾತ್ಮಕ ಚಿತ್ರಗಳ ನಿರ್ಮಾಣವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ ಕೂಡಾ. ಇದು ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ನಾಗಭರಣ, ಪಿ ಶೇಷಾದ್ರಿ ಮುಂತಾದ ನಿರ್ದೇಶಕರ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ, ಸೆಳೆಯುವ ಕನ್ನಡ ಚಿತ್ರಗಳ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ.

ಫಿಲಂ ಫೆಸ್ಟಿವಲ್ ಸರ್ಕ್ಯೂಟ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ಚಿತ್ರಗಳೆಂದರೆ ಅವು ಪೃಥ್ವಿ ಕೊಣನೂರು ಚಿತ್ರಗಳು. ‘ಅಲೆಗಳು’ ಚಿತ್ರದಿಂದ ಆರಂಭವಾದ ಅವರ ಚಿತ್ರ ಯಾನ ರೈಲ್ವೆ ಚಿಲ್ಡ್ರನ್, ಹದಿನೇಳೇಂಟು, ಪಿಂಕಿ ಎಲ್ಲಿ? ಚಿತ್ರಗಳಲ್ಲಿ ಮುಂದುವರೆದಿದೆ. ಕಲಾತ್ಮಕ ಚಿತ್ರಗಳೆಂದರೆ ನೀರಸ ನಿರೂಪಣೆ ಎಂದು ಸಾಮಾನ್ಯ ಜನರ ಭಾವನೆ ಇರುವ ಸಂದರ್ಭದಲ್ಲಿ ಪೃಥ್ವಿ ಕೊಣನೂರ್ ರವರ ಸೋಶಿಯಲ್ ಥ್ರಿಲ್ಲರ್ ಸಿನಿಮಾಗಳು ಕೊನೆಯವರೆಗೂ ಕುತೂಹಲವನ್ನು ಮೂಡಿಸಿ ಮನೋರಂಜನೆಯ ಜೊತೆಗೆ ಗಂಭೀರ ಚಿಂತನೆಯನ್ನು  ಮೂಡಿಸುತ್ತವೆ.

ಟೈಟಲ್ ನಿಂದಲೇ ಗಮನ ಸೆಳೆಯುವ  ಹದಿನೇಳೆಂಟು (17/18) 

ಹದಿನೇಳೆಂಟು ಶೀರ್ಷಿಕೆ ಹೇಳುವಂತೆ ಹದಿಹರೆಯದವರ ಸಮಸ್ಯೆಗಳ ಕುರಿತ ಚಿತ್ರ. ಸಹಜ ಆಕರ್ಷಣೆಯ ಹದಿಹರೆಯದ ಪಿಯುಸಿ ವಿದ್ಯಾರ್ಥಿಗಳು, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಪರಿಣಾಮ ಅವರು ಎದುರಿಸುವ ಸಮಸ್ಯೆಗಳು ಚಿತ್ರದ ಕಥಾಹಂದರ ಎನಿಸಿದರೂ ಅದರ ಹಿನ್ನೆಲೆಯಲ್ಲಿ ನಿರ್ದೇಶಕ ಪೃಥ್ವಿ ಕೊಣನೂರು ಸಮಾಜದ ಹಲವಾರು ಸಂಕೀರ್ಣ ಸಮಸ್ಯೆಗಳೆಗೆ ಕ್ಷ ಕಿರಣ ಬೀರುತ್ತಾರೆ. ಹದಿಹರೆಯದ ಹುಡುಗ ಹುಡುಗಿಯ ನಡುವಿನ ಸಮಸ್ಯೆ ಮುಂದೆ ಜಾತಿ ವರ್ಗಗಳ ಕುರಿತಾದ ಸಂಘರ್ಷಗಳನ್ನು ಹೇಳುತ್ತಾ ಕೊನೆಗೆ ಸಂಕೀರ್ಣ ಕಾನೂನಿನ ವ್ಯವಸ್ಥೆಯ ಕಡೆಗೆ ಮುಖ ಮಾಡುತ್ತದೆ. ಪ್ರೇಕ್ಷಕರ ಕಲ್ಪನೆಗೆ ವಿರುದ್ಧವಾಗಿ ಚಲಿಸುವ ಚಿತ್ರದ ಅಂತ್ಯ ಪ್ರೇಕ್ಷಕನಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿಸಿ ಮುಕ್ತಾಯವಾಗುವುದರಲ್ಲಿ ನಿರ್ದೇಶಕರ  ನಿರೂಪಣಾ ಕಥಾ ಕೌಶಲ್ಯ ಅಡಗಿದೆ. ಎಲ್ಲ ಪಾತ್ರಗಳ ತುಂಬಾ ಸಹಜವೆನಿಸುವ ಅಭಿನಯ ಮತ್ತು ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆ, ಚಿತ್ರದ ಪ್ರಮುಖ ಘಟನಾವಳಿಗಳ ಕೇಂದ್ರವಾದ ಪ್ರಿನ್ಸಿಪಾಲರ ಕೊಠಡಿ ಮತ್ತು ಅಲ್ಲಿನ ಸಂಭಾಷಣೆ, ಮುಖ್ಯವಾಗಿ ಪ್ರಿನ್ಸಿಪಾಲ್ ಪಾತ್ರಧಾರಿಯ ಅಭಿನಯ ವಿಶೇಷವಾಗಿ ಗಮನ ಸೆಳೆಯುತ್ತದೆ.

ಹಳಿ ತಪ್ಪಿದ ಮಕ್ಕಳ ಜೀವನಗಾಥೆ ರೈಲ್ವೆ ಚಿಲ್ಡ್ರನ್

ಕೆಲವು ವರ್ಷಗಳ ಹಿಂದೆ ಶಾಂತಿ ಗ್ರಾಮದ ದೊಡ್ಮನೆ ಆವರಣದಲ್ಲಿ ‘ರೈಲ್ವೆ ಚಿಲ್ಡ್ರನ್’ ಸಿನಿಮಾ ನೋಡುವ ಅವಕಾಶ ದೊರೆಯಿತು. ಕನ್ನಡದ ಅತ್ಯುತ್ತಮ ಚಲನಚಿತ್ರಗಳನ್ನು ಪ್ರತಿ ತಿಂಗಳು ತಮ್ಮ ಮನೆ ಅಂಗಳದಲ್ಲಿ ಗ್ರಾಮಸ್ಥರು ಮತ್ತು ಆಸಕ್ತರಿಗಾಗಿ ಗ್ರಾಮ ಸಿನಿಮಾ ಸಮುದಾಯದ ಸಂಚಾಲಕ ಜಿ.ಆರ್. ಮಂಜೇಶ್ ಆಯೋಜಿಸುತ್ತಿದ್ದಾರೆ. ಇದರ ಜೊತೆಗೆ ಚಿತ್ರ ಕುರಿತಾದ ಸಂವಾದವನ್ನು ಚಿತ್ರದ ನಿರ್ದೇಶಕರು, ನಟರು, ತಂತ್ರಜ್ಞರೊಂದಿಗೆ ಏರ್ಪಡಿಸುತ್ತಿದ್ದಾರೆ. ಚಿತ್ರ ಕುರಿತಾಗಿ ಮಕ್ಕಳಿಗೆ ಸ್ಪರ್ದೆಗಳನ್ನು ಏರ್ಪಡಿಸುತ್ತಿದ್ದಾರೆ. ಗೋವಾದ ಪ್ರತಿಷ್ಠಿತ ಪನೋರಮಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿದ್ದ ರೈಲ್ವೆ ಚಿಲ್ಡ್ರನ್‍ನ ನಿರ್ದೇಶಕ ಪೃಥ್ವಿ ಕೊಣನೂರು. ಪಬ್ಲಿಕ್ ಫಂಡಿಂಗ್ ಮೂಲಕ ಚಿತ್ರ ನಿರ್ಮಾಣವಾಗಿತ್ತು. ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿಯ ಜೊತೆಗೆ ರಾಜ್ಯ ಮಟ್ಟದ 2016ರ ಎರಡನೇ ಅತ್ಯುತ್ತಮ ಚಿತ್ರವೆಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ.

ರೈಲ್ವೆ ಚಿಲ್ಡ್ರನ್ ಹೆಸರೇ ಹೇಳುವಂತೆ ರೈಲ್ವೆ ಸ್ಟೇಷನ್‍ನ್ನು ತಮ್ಮ ಮನೆಯಾಗಿಸಿಕೊಂಡು ವಾಸ ಮಾಡುತ್ತಿರುವ ಮಕ್ಕಳ ಕಥೆ. ರೈಲ್ವೆ ಹಳಿಗುಂಟ ಹಾದು ಹೋಗುವ ನಿಯಂತ್ರಿತ ಪ್ರದೇಶಗಳಲ್ಲಿ ಸ್ಲಂಗಳು ತಲೆ ಎತ್ತಿರುವುದನ್ನು ಅನೇಕ ಕಡೆ ನೋಡಬಹುದು. ಬೇರೆ ಬೇರೆ ಕಾರಣಗಳಿಗಾಗಿ ಮೂಲೆ ಸೇರಿರುವ ರೈಲ್ವೆ ಬೋಗಿಗಳು, ಅದರ ಆಚೀಚೆ ದೊಡ್ಡ ದೊಡ್ಡ ಪೈಪ್‍ಗಳು, ಸುರಂಗಗಳಿಗಾಗಿ ತಂದ ದೊಡ್ಡ ದೊಡ್ಡ ಪೈಪ್‍ಗಳು ನಿರಾಶ್ರಿತರನ್ನು ಕೂಗಿಕೂಗಿ ಕರೆಯುತ್ತವೆ. ಭಿಕ್ಷುಕರು, ತಂದೆ ತಾಯಿಗಳ ನಿರ್ಲಕ್ಷ್ಯಕ್ಕೆ ಒಳಗಾದವರು, ಕುಡುಕ ತಂದೆ, ಅಸಹಾಯಕ ತಾಯಿ, ಇಲ್ಲವೆ ಓದುವ ಭಯ, ದುಶ್ಚಟಗಳನ್ನು ಚಿಕ್ಕ ವಯಸ್ಸಿನಲ್ಲಿ ಕಲಿತು ತಂದೆ ತಾಯಿಗಳಿಗೆ ಬುದ್ದಿ ಕಲಿಸಲೆಂದೇ ಹೊರಟವರು, ಹೀಗೆ ಎಲ್ಲರಿಗೂ ಇದುವೆ ಆಶ್ರಯ ತಾಣ. ಹೀಗೆ ಓಡಿ ಬಂದ ಬಹುತೇಕರು ತಮ್ಮ ಮೂಲ ಹೆಸರನ್ನು ಮರೆಮಾಚಿ ಇತರರು ನೀಡುವ ಅಡ್ಡ ಹೆಸರುಗಳಲ್ಲಿ ಜೀವಿಸುತ್ತಾರೆ. ಅಂತಯೇ ಈ ಸಿನಿಮಾದಲ್ಲಿ ಸಲ್ಯೂಷನ್, ಜೊಲ್ಲು ಮುಂತಾದ ಹೆಸರಿನ ಜೀವಿಗಳಿವೆ.

ನಟ ರಿಷಬ್ ಶೆಟ್ಟಿ

ಹೀಗೆ ತನ್ನ ಊರಿನಿಂದ ಓಡಿಬರುವ ಹುಡುಗ (?) ನಿಧಾನವಾಗಿ ಅಲ್ಲಿನ ವಿಷವರ್ತುಲಕ್ಕೆ ಸಿಲುಕುತ್ತಾನೆ. ಅಲ್ಲಿಯೆ ತಲೆಯತ್ತಿರುವ ಮಕ್ಕಳ ಮಾಫಿಯವು ಅವರ ಕೈಲಿ ಭಿಕ್ಷಾಟನೆ, ಚಿಂದಿ ಆಯುವ, ಪ್ರಯಾಣಿಕರು ಎಸೆದು ಹೋದ ಬಾಟಲ್, ಲೋಟಗಳನ್ನು ಆಯುವ ಕೆಲಸಕ್ಕೆ ಹಚ್ಚುತ್ತದೆ. ಅವರ ಕೈಯಲ್ಲಿ ದುಡಿಸಿಕೊಂಡು ಊಟಕ್ಕೆಂದು ಅಷ್ಟೋ ಇಷ್ಟೋ ನೀಡಿ, ಆಗೀಗ ಬಿರ್ಯಾನಿ ತಿನ್ನಿಸಿ ಟ್ಯೂಬ್‍ಗೆ ಹಚ್ಚುವ ಸಲ್ಯೂಷನ್‍ನ್ನು ಮೂಸಲು ನೀಡಿ ಅದಕ್ಕೆ ದಾಸರನ್ನಾಗಿಸುತ್ತದೆ. ತಾವು ಗಳಿಸಿದ ಹಣವನ್ನು ಸರಿಯಾಗಿ ನೀಡದ, ತಿರುಗಿ ಬೀಳುವವರಿಗೆ ಅಮಾನವೀಯವಾದ ಕ್ರೂರ ಶಿಕ್ಷೆ, ಒಮ್ಮೊಮ್ಮೆ  ಮರಣ ಮೃದಂಗವೂ ಆಗುವುದುಂಟು. ಇಂಥ ಬೆಂಕಿಯ ಬಲೆಗೆ ಬೀಳುವ ಮಕ್ಕಳಲ್ಲಿ ಅನೇಕ ಕನಸುಗಳಿವೆ. ಆದರೆ ಕನಸುಗಳನ್ನು ಸಾಕಾರಗೊಳಿಸುವ ಹಾದಿ ಮಾತ್ರ ದುರ್ಗಮ. ಚಿಂದಿ ಆಯುವವರಿಗೆ ಒಮ್ಮೊಮ್ಮೆ ರೈಲಿನಲ್ಲಿ ತಿಂಡಿ, ನೀರು ಮಾರಲು ಹೋಗುವ ಪ್ರಮೋಷನ್ ಸಿಗುವ ಕನಸು ಉಂಟು. ಆದರೆ ಅದು ಆಯ್ದ ಕೆಲವರಿಗೆ ಮಾತ್ರ ದಕ್ಕುತ್ತದೆ. ಈ ಮಾಫಿಯಾದಿಂದ ತಪ್ಪಿಸಿಕೊಂಡು ತನ್ನದೆ ನೀರಿನ ಉದ್ಯಮ (ಪ್ರಯಾಣಿಕರು ಎಸೆದು ಹೋದ ಬಾಟಲ್‍ಗಳಿಗೆ ನಲ್ಲಿ ನೀರು ತುಂಬಿ ಮಾರುವ) ಮಾಡಲು ಹೊರಟು, ಕೊನೆಗೆ ಮಾಫಿಯಾದ ಕೈಗೆ ಸಿಲುಕಿ ಅನುಭವಿಸುವ ಯಾತನೆ ನಡೆಸುವ ಹೋರಾಟ ಚಿತ್ರವನ್ನು ಮುನ್ನಡೆಸುತ್ತಾ ಹೋಗುತ್ತದೆ. ರೈಲ್ವೆ ಸ್ಟೇಷನ್, ರೈಲ್ವೆ ಹಳಿಯ ಸುತ್ತಲೆ ಚಿತ್ರಿತವಾದ ಸಿನಿಮಾವನ್ನು ಸಾಕ್ಷ್ಯಚಿತ್ರವಾಗುವ ಸಾಧ್ಯತೆಯಿಂದ ಪಾರು ಮಾಡುವುದು ಕುತೂಹಲಕಾರಿ ಕಥಾ ಹೆಣಿಗೆ. ತನ್ನ ಊರಿನಲ್ಲಿ ತನ್ನ ಸ್ನೇಹಿತೆಯಿರುವಳೆಂದು ಹೇಳುವ ಅವಳನ್ನು ತನ್ನಲ್ಲಿಗೆ ಕರೆಯಿಸಿಕೊಳ್ಳುತ್ತೇನೆಂದು ಹೇಳುವ ಹುಡುಗನ ಹಿಂದೆ ಒಂದು ರಹಸ್ಯವಿದೆ. ಅಂತ್ಯದಲ್ಲಿ ಸ್ಪೋಟವಾಗುವ ರಹಸ್ಯ ಚಿತ್ರಕ್ಕೆ ಅನೇಕ ತಿರುವುಗಳನ್ನು ನೀಡುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಉತ್ತಮ ಬಾಲ ನಟ ಪ್ರಶಸ್ತಿ ಪಡೆದಿರುವುದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪಾತ್ರಧಾರಿ ಬದಲಾಗಿ ಜೊಲ್ಲು ಪಾತ್ರ ನಿರ್ವಹಿಸಿರುವ ಮನೋಹರನೆಂಬ ಹುಡುಗ.

ಉತ್ತಮ ಛಾಯಾಗ್ರಹಣ ಬಿಗಿ ನಿರೂಪಣೆಯಿಂದಾಗಿ ಚಿತ್ರ ಗೆಲ್ಲುತ್ತದೆ. ದಿವ್ಯ ಪರಿಮಳ, ಮನೋಹರ, ಯಶಶೆಟ್ಟಿ, ಸಯ್ಯದ್, ಪರ್ವಿಜ್, ಕಾರ್ತಿಕ್ ಪ್ರಮುಖ ಪಾತ್ರವರ್ಗದಲ್ಲಿರುವ ಚಿತ್ರಕ್ಕೆ ಚಂದನ್‍ಶೆಟ್ಟಿ ಸಂಗೀತವಿದ್ದು ಈಶ್ವರನ್ ತಂಗವೇಲುರವರ ಛಾಯಾಗ್ರಹಣವಿದೆ. ಎಲ್ಲಾ ಹೊಸ ಕಲಾವಿದರಿಂದ ಅತ್ಯುತ್ತಮ ಅಭಿನಯ ಪಡೆದ ಶ್ರೇಯ ಚಿತ್ರನಿರ್ದೇಶಕರಿಗಿದೆ. ಆದರೆ ಚಿತ್ರದಲ್ಲಿ ‘ಸಲ್ಯೂಷನ್‍ಗೆ ದಾಸನಾಗಿರುವ ಮಕ್ಕಳನ್ನು ತೋರಿಸುವ ಭರದಲ್ಲಿ ಚಿತ್ರದ ಬಹಳಷ್ಟು ಸಮಯ ಅದನ್ನೆ ಮತ್ತೆ ಮತ್ತೆ ತೋರಿಸುವುದು ನೋಡುಗರ, ಮಕ್ಕಳಲ್ಲಿ ಭಯ ಹುಟ್ಟಿಸುವಿಕೆಯ ಕಾರಣಕ್ಕೆ ಇರಬಹುದಾದರೂ ಜಿಗುಪ್ಸೆ ಮೂಡಿಸುತ್ತದೆ. ಆದರೆ ಬೇರೆ ಬೇರೆ ಕಾರಣಗಳಿಗಾಗಿ ಮನೆ ಬಿಟ್ಟು ಓಡಿಹೋಗುವ ಮಕ್ಕಳಿಗೆ ಎಚ್ಚರಿಕೆಯ ಸಂದೇಶವಂತೂ ಚಿತ್ರದಲ್ಲಿದೆ. ಈಗ ಎರಡು ಚಿತ್ರಗಳು ಯೂಟ್ಯೂಬ್ ನಲ್ಲಿ ಇದೆ. ಚಿತ್ರದ ನಿರ್ದೇಶಕ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಕೊಣನೂರಿನವರು. ಚಿತ್ರದ ಬ್ಯಾನರ್ ಕೂಡ ಕೊಣನೂರ್ ಪ್ರೊಡಕ್ಷನ್ ಎಂಬುದು ಒಂದು ವಿಶೇಷ. ಮನರಂಜನಾ ದೃಷ್ಟಿಯಿಂದ ನೋಡಿದರೂ ಪ್ರೇಕ್ಷಕರಿಗೆ ಈ ಎರಡು ಚಿತ್ರಗಳು ಖಂಡಿತ ನಿರಾಸೆ ಉಂಟು ಮಾಡುವುದಿಲ್ಲ.

‍ಲೇಖಕರು Admin MM

August 30, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: