’ಮನೆಗೆ ಬಂದ ಮೇಲೆ ಭೇಟಿಯಾಗುತ್ತೇನೆ ಅಂತ ಸುಮ್ ಸುಮ್ನೇ ಹೇಳಿದ್ದರಾ?’ – ಬಿ ವಿ ಭಾರತಿ

ಯೂ ಆರ್ ಅನಂತಮೂರ್ತಿ ಜೊತೆ ಲೇಖನದ ಬರಹಗಾತಿ ಬಿ ವಿ ಭಾರತಿ

2011-12 ರ ಪೂರ್ತಿ ನನ್ನ ಕ್ಯಾನ್ಸರ್ ಟ್ರೀಟ್‌ಮೆಂಟಿನಲ್ಲೇ ಕಳೆದು ಹೋಗಿದ್ದ ದಿನಗಳವು. ಒಂದಿಷ್ಟು ಭಯ, ಮತ್ತಿಷ್ಟು ಭರವಸೆ, ಸ್ವಲ್ಪವೇ ಆತಂಕ, ನಡು ನಡುವೆ ಪೊರೆಯುತ್ತಿದ್ದ ಸುಂದರ ಬದುಕು ಇವುಗಳ ನಡುವಲ್ಲಿ ಸಮಯ ಕಳೆದು ಹೋಗುತ್ತಿತ್ತು. ನಿಂತು ಬದುಕನ್ನು ನೋಡಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ನಿಂತು ನೋಡಿದರೆ ಎಲ್ಲಿ ಒಂದಿಷ್ಟು ಕ್ಷಣಗಳು ವ್ಯರ್ಥವಾಗಿ ಬಿಡುತ್ತದೋ ಅನ್ನುವಂತೆ ಆತುರದಿಂದ ಬದುಕುವ ನಿರ್ಧಾರ ಮಾಡಿದ್ದ ದಿನಗಳವು. ಆ ಸಮಯದಲ್ಲೇ ಯು. ಆರ್ ಸರ್ ಕೂಡಾ ಡಯಾಲಿಸಿಸ್‌ಗೆ ದೇಹ ಒಡ್ಡಿದ್ದರು. ಆದರೂ ಯಾವುದೋ ಸಭೆಯಲ್ಲಿ ಭಾಗವಹಿಸಿದ್ದರು ಅಂತಲೋ, ಇನ್ನೆಲ್ಲಿಯೋ ಯಾವುದೋ ಹೇಳಿಕೆ ಕೊಟ್ಟರು ಅಂತಲೋ ಯಾವಯಾವುದೋ ಕಾರಣಗಳಿಗಾಗಿ ಅವರು ತುಂಬ ಸುದ್ಧಿಯಾಗಿ ಬಿಡುತ್ತಿದ್ದರು. ಸುದ್ಧಿಗಳ ಪರ – ವಿರೋಧ ಇವೆಲ್ಲವೂ ನನ್ನ ತಲೆಗೆ ನಾಟುತ್ತಲೇ ಇರಲಿಲ್ಲ. ಆದರೆ ಆ ಸ್ಥಿತಿಯಲ್ಲಿರುವ ಅನಂತಮೂರ್ತಿ ಸರ್ ಜಗತ್ತಿನ ಆಗುಹೋಗುಗಳ ಬಗ್ಗೆ ಅಷ್ಟೆಲ್ಲ ಸ್ಪಂದಿಸುವ ಮನಃಸ್ಥಿತಿ ಹೊಂದಿದ್ದರಲ್ಲ, ಅದು ನನ್ನನ್ನು ಅವರ ಕಡೆಗೆ ತೀವ್ರವಾಗಿ ಆಕರ್ಷಿಸಿ ಬಿಟ್ಟಿತು. ಡಯಾಲಿಸಿಸ್‌ಗೆ ಒಳಪಟ್ಟ ದೇಹ ಜರ್ಝರಿತವಾಗಿ, ಬದುಕಿನಲ್ಲೇ ಆಸಕ್ತಿ ಕಳೆದುಕೊಂಡಂತ ಕೆಲವು ಹಿರಿಯ ಜೀವಗಳು ನನ್ನ ಸುತ್ತ ಮುತ್ತಲೇ ಇದ್ದರು. ಅವರೆಲ್ಲ ಬದುಕಿನ ಬಗ್ಗೆ ತುಂಬ ನಿರಾಸಕ್ತಿ ಬೆಳೆಸಿಕೊಂಡು, ಬದುಕೇ ಭಾರ ಅನ್ನುವ ಹಾಗೆ ಜೀವಿಸುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೆ. ಅಂಥ ಸಂದರ್ಭದಲ್ಲಿ ನನಗೆ ಯಾಕೋ ಯು ಆರ್ ಸರ್ ಜೀವನ ಪ್ರೀತಿಯ ಒಂದು ಸಂಕೇತವಾಗಿ ಕಂಡುಬಿಟ್ಟರು. ಅರೆರ್ರೇ! ಬದುಕನ್ನು ಈ ರೀತಿಯೂ ಬದುಕ ಬಹುದಾ!! ಅದೂ ಈ ಇಳಿ ವಯಸ್ಸಿನಲ್ಲಿ, ಇಂಥಹ ಸ್ಥಿತಿಯಲ್ಲಿರುವ ವ್ಯಕ್ತಿ !!! ಅಂತ ಬೆರಗುಗಣ್ಣಿಂದ ಅವರನ್ನು ನೋಡಲಾರಂಭಿಸಿದೆ. ಅವರನ್ನು ಒಂದು ಸಲ ಭೇಟಿಯಾಗಬೇಕು ಅನ್ನುವ ಹುಚ್ಚು ಹತ್ತಿತು. ಆದರೆ ಹೇಗೆ ಅವರನ್ನು ಕಾಣುವುದು, ಎಲ್ಲಿ ಅಂತಲೇ ಅರ್ಥವಾಗಲಿಲ್ಲ. ಗೆಳೆಯನೊಬ್ಬ ಅವರ ಫೋನ್ ನಂಬರ್ ಕೊಟ್ಟ. ಕರೆ ಮಾಡಲು ಸಿಕ್ಕಾಪಟ್ಟೆ ಅಧೈರ್ಯ. ಕೊನೆಗೊಂದು ದಿನ ಹೇಗೋ ಸಾಹಸ ಮಾಡಿ ಅವರಿಗೆ ಕಾಲ್ ಮಾಡಿ ಅವರನ್ನು ನೋಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದೆ. ಆದರೆ ನನ್ನ ಖಾಯಿಲೆಯ ವಿಷಯವನ್ನಾಗಲೀ, ನಾನು ಯಾಕೆ ಅವರನ್ನು ಭೇಟಿ ಮಾಡಲು ಬಯಸುತ್ತಿದ್ದೇನೆ ಅನ್ನುವುದನ್ನಾಗಲೀ ಹೇಳಲು ಹೋಗಲಿಲ್ಲ. ಸುಮ್ಮನೆ – ನಿಮ್ಮನ್ನು ಭೇಟಿಯಾಗಬೇಕು ಅಂದೆ. ಅವರು ಕೂಡಾ ಸಧ್ಯಕ್ಕೆ ಸ್ವಲ್ಪ ಆಗುತ್ತಿಲ್ಲವೆಂತಲೂ, ಸ್ವಲ್ಪ ದಿನಗಳ ಒಳಗೆ ತಾವೇ ಬಿಡುವಿದ್ದಾಗ ಸಮಯ ನೋಡಿಕೊಂಡು ನನ್ನನ್ನು ಭೇಟಿಯಾಗಲು ಕರೆಯುತ್ತೇನೆಂದು ಹೇಳಿದರು. ನಾನು ಅವರ ಕರೆಯ ನಿರೀಕ್ಷೆಯಲ್ಲಿ ದಿನ ಕಳೆದೆ ….
ಸುಮಾರು ದಿನಗಳೇ ಕಳೆದು ಹೋದವು. ಅವರಿಂದ ಯಾವ ಸುದ್ಧಿಯೂ ಇಲ್ಲ. ನಾನೇ ಭಂಡತನಕ್ಕೆ ಬಿದ್ದು ಮತ್ತೊಮ್ಮೆ ಕರೆ ಮಾಡಿದೆ. ಅಷ್ಟರಲ್ಲಿ ಅವರು ನನ್ನನ್ನು ಮರೆತೇ ಬಿಟ್ಟಿದ್ದರು. ನಾನು ಅವರಿಗೆ ನನ್ನ ನೆನಪು ಮಾಡಿಕೊಡುವ ಪ್ರಯತ್ನ ಮಾಡಿದಾಗ – ಹೋ ಅವಳಲ್ಲವಾ ನೀನು! ಮರೆತೇ ಬಿಟ್ಟಿದ್ದೆ. ಈಗ ಸ್ವಲ್ಪ ಕಷ್ಟವಿದೆ. ಸಮಯವಾದಾಗ ನಾನೇ ಕರೆ ಮಾಡುತ್ತೇನೆ ಅಂದರು ಮತ್ತೆ! ಆಗ ಯಾಕೋ ನನಗೆ ಅವರು ನನ್ನನ್ನು ಭೇಟಿ ಮಾಡುವುದು ಸ್ವಲ್ಪ ಕಷ್ಟವೇ ಅನ್ನಿಸಲು ಶುರುವಾಯ್ತು. ಮತ್ತೆ ಮುಂದಿನ ದಿನಗಳಲ್ಲಿ ಆಗಾಗ ಕರೆ ಮಾಡಿ ಭೇಟಿಯ ಬಗ್ಗೆ ಕೇಳಿದಾಗಲೂ ಅವರ ಉತ್ತರ ಬದಲಾಗಲೇ ಇಲ್ಲ. ಒಂದಿಷ್ಟು ಕರೆಗಳ ನಂತರ ನಾನು ತೀವ್ರ ನಿರಾಶೆಗೊಳಗಾಗಿ, ನಂತರ ಅವರಿಗೆ ನನ್ನನ್ನು ಭೇಟಿ ಮಾಡುವುದು ಕಷ್ಟವಾಗುತ್ತಿರಬೇಕು ಅನ್ನಿಸಿ, ಕರೆ ಮಾಡುವುದನ್ನು ನಿಲ್ಲಿಸಿಬಿಟ್ಟೆ.
ಆ ನಂತರ ನನ್ನ ಕ್ಯಾನ್ಸರ್ ದಿನಗಳನ್ನು ಕುರಿತು ಒಂದಿಷ್ಟು ವಿಷಯಗಳನ್ನು ದಾಖಲೆಯ ದೃಷ್ಟಿಯಿಂದಲಾದರೂ ಬರೆದಿಡಬೇಕು ಅನ್ನುವ ಹಠಕ್ಕೆ ಬಿದ್ದೆ. ಮೊದಮೊದಲಲ್ಲಿ ತುಂಬ ಹಿಂಸೆ ಕೊಟ್ಟ ನೆನಪುಗಳ ಸಣ್ಣ ದಾಖಲೆ ಬರೆದಿಡುವ ಉದ್ದೇಶದಿಂದ ಬರೆಯಲು ಶುರು ಮಾಡಿದವಳು, ಆ ನಂತರ ಸುದೀರ್ಘ ಅನುಭವ ಬರಹವನ್ನೇ ಬರೆಯಲು ಶುರು ಮಾಡಿಬಿಟ್ಟೆ. ಅದನ್ನು ಬರೆಯುವಾಗ ಎಷ್ಟೊಂದು ಸಲ ಅನಂತಮೂರ್ತಿ ಸರ್ ನೆನಪಾಗುತ್ತಿದ್ದರು. ಅವರಿಗೆ ಒಂದು ಸಲ ನಾನು ಬರೆದಿರುವುದನ್ನು ತೋರಿಸಬೇಕು ಅನ್ನುವ ತೀವ್ರ ಆಸೆ ಹುಟ್ಟಿಬಿಡುತ್ತಿತ್ತು. ಆದರೆ ಯಾಕೋ ಧೈರ್ಯ ಸಾಲದೇ ಸುಮ್ಮನಾಗಿಬಿಟ್ಟೆ. ಹಾಗೆ ಬರೆದ ಲೇಖನ ಉದಯವಾಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ಆ ನಂತರ ಅದನ್ನು ಪುಸ್ತಕ ರೂಪದಲ್ಲಿ ತರುವ ಯೋಚನೆ ಮೊಳಕೆಯೊಡೆಯಿತು. ಆಗಲಾದರೂ ಅನಂತಮೂರ್ತಿ ಸರ್ ಅವರು ನನ್ನ ಪುಸ್ತಕಕ್ಕೆ ಮುನ್ನುಡಿಯನ್ನೇನಾದರೂ ಬರೆದುಕೊಟ್ಟರೆ ಎಂಥ ಚೆಂದ ಅಂದುಕೊಂಡೆ. ಆದರೆ ಹೊಸ ಬರಹಗಾರಳೊಬ್ಬಳ ಮೊದಲ ಪುಸ್ತಕಕ್ಕೆ ಯು ಆರ್ ಸರ್ ಅವರಂಥ ವ್ಯಕ್ತಿಯನ್ನು ಮುನ್ನುಡಿ ಕೇಳುವುದಕ್ಕೆ ಯಾಕೋ ಧೈರ್ಯವೇ ಬರಲಿಲ್ಲ. ಹೀಗೇ ಒಂದು ದಿನ ನನ್ನ ಗೆಳತಿ ಭಾನುಮತಿ ಸಿಕ್ಕಳು. ಅವಳಿಗೆ ನನ್ನ ಪುಸ್ತಕದ ಬಗ್ಗೆ ಹೇಳಿ, ಮೇಷ್ಟ್ರು ಒಂದೆರಡು ಸಾಲನ್ನಾದರೂ ಬರೆದುಕೊಡ್ತಾರಾ ಅಂತ ಕೇಳೋಣ ಅಂದರೆ ಯಾಕೋ ಭಯ ಅಂದೆ. ಅವಳಿಗೆ ಅಷ್ಟು ಹೇಳಿದರೆ ಆಗಿಯೇ ಹೋಯ್ತು. ಆತುರ ಪಡಿಸಿ ಮರುದಿನ ನನ್ನನ್ನು ಯು ಆರ್ ಸರ್ ಭೇಟಿಗೆ ಕರೆದುಕೊಂಡು ಹೋಗಿಯೇ ಬಿಟ್ಟಳು …


ಅವತ್ತು ಸಂಜೆ ಅವರ ಮನೆಯ ಮುಂದೆ ಹೋಗಿ ಇಳಿದಾಗ ಕಾಂಪೌಂಡಿನಲ್ಲಿ ಒಂದಿಬ್ಬರ ಜೊತೆ ಮಾತಾಡುತ್ತ ಕೂತ ಅನಂತಮೂರ್ತಿ ಸರ್ ಕಂಡರು. ಎಷ್ಟೊಂದು ದಿನಗಳ ಆಸೆಯದು … ಅಂತೂ ಅವತ್ತು ಕೈಗೂಡಿತ್ತು. ಭಾನುಮತಿ ನನ್ನ ಪರಿಚಯ ಮಾಡಿಕೊಟ್ಟಳು. ಅಲ್ಲೇ ಮತ್ತೆರಡು ಖುರ್ಚಿ ತರಿಸಿ ನಮ್ಮನ್ನೂ ಕೂರಿಸಿದರು. ನಾನು ಅವರೆದುರು ತುಂಬ ಸಂಕೋಚದಿಂದ ಮುದ್ದೆಯಾಗಿ ಕೂತಿದ್ದೆ. ಅಲ್ಲಿ ಕೂತ ಗೆಳೆಯರ ಜೊತೆಗೆ ಒಂದು ಮಾತುಕತೆ ಶುರುವಾಗಿತ್ತು. ಅಕ್ಕಮಹಾದೇವಿಯ ಬಗ್ಗೆ ಮಾತು ಶುರುವಾಯ್ತು. ಅಕ್ಕನಿಗೆ ಈ ಜಗತ್ತಿನ ಯಾವ ಗಂಡೂ ತನ್ನ ಪ್ರೀತಿಯಂಥ ಪ್ರೀತಿಯನ್ನು ಪಡೆಯಲು ಅರ್ಹನಿಲ್ಲ ಅನ್ನಿಸಿಯೇ ಚನ್ನಮಲ್ಲಿಕಾರ್ಜುನನ ಆರಾಧನೆಯಲ್ಲಿ ಮುಳುಗಿದಳೇ ಅಂತ ಶುರುವಿಟ್ಟ ಚರ್ಚೆ, ವೀಣಾ ಬನ್ನಂಜೆಯವರ ಅಕ್ಕಮಹಾದೇವಿಯ ದ್ವೈತ ಪುಸ್ತಕದ ಕಡೆಗೆ ತಿರುಗಿ, ಹೆಣ್ಣು ಮುಕ್ತಿಗೆ ಒಂದು means ಹೇಗಾದಳು ಅನ್ನುತ್ತ ಮೇಷ್ಟ್ರು ಒಂದು ಘಂಟೆ ಕಾಲ ಮಾತನಾಡಿದ್ದನ್ನು ನಾನು ಬೆರಗಾಗಿ ಕೇಳುತ್ತ ಕೂತಿದ್ದೆ. ಆ ಕುರಿತು ಓದಬೇಕಾದ ಒಂದೆರಡು ಪುಸ್ತಕಗಳ ರೆಫರೆನ್ಸ್ ಕೊಟ್ಟ ಯು ಆರ್ ಸರ್ ನಾವು ಬಂದ ಕಾರಣ ಕೇಳಿದರು. ಭಾನು ಅವಳು ಬರೆದಿದ್ದ ಪುಸ್ತಕದ ಹಸ್ತಪ್ರತಿ ಮತ್ತು ನನ್ನ ಪುಸ್ತಕದ ಹಸ್ತಪ್ರತಿ ಎರಡನ್ನೂ ಅವರಿಗೆ ಕೊಡಲು ನನ್ನ ಕಡೆ ಕೈ ನೀಡಿದಳು. ಅಲ್ಲಿಯವರೆಗೆ ನಾನು ಬರೆದಿದ್ದರ ಪ್ರಿಂಟ್ ಔಟನ್ನು ತೊಡೆಯ ಮೇಲೆಯೇ ಇಟ್ಟುಕೊಂಡು ಕೂತಿದ್ದ ನಾನು, ಆಗ ಅದರ ನೆನಪು ಮಾಡಿಕೊಂಡು ತುಂಬ ಸಂಕೋಚದಿಂದ ಅದನ್ನು ಅವರ ಕಡೆ ನೀಡಿದೆ. ಒಳಗಿದ್ದ ಸಹಾಯದ ಹುಡುಗನನ್ನು ಕರೆಸಿ ಅದನ್ನು ಒಳಗಿಡಲು ಹೇಳಿದರು. ಒಂದೆರಡು ಸಾಲನ್ನು ಬರೆದುಕೊಡಲು ಸಾಧ್ಯವೇ ಸರ್ ಅಂತ ನಾನೆನ್ನುವಷ್ಟರಲ್ಲಿ ಭಾನುಮತಿ – ಸರ್ ಎರಡು ಸಾಲು ಅಂತೇನಿಲ್ಲ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬರೆದುಕೊಡಿ ಅಂದವಳೇ ನನ್ನ ಕಡೆ ತಿರುಗಿ ನಗುತ್ತಲೇ – ಕೇಳುವಾಗ ಇಷ್ಟೇ ಸಾಕು ಅಂತ ಕೇಳಬಾರದು. ನಾನು ಕೇಳಿದ್ದೇನೆ. ನೀವು ಎಷ್ಟು ಕೊಟ್ಟರೂ ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆ ಅನ್ನೋ ಥರ ಬದುಕಬೇಕು ಅಂತ ಸಣ್ಣದಾಗಿ ಮಾತಿನಲ್ಲೇ ನಗುತ್ತಾ ತಿವಿದಳು. ನಾನು – ಹಾಗಲ್ಲ, ಅವರ ಆರೋಗ್ಯದ ದೃಷ್ಟಿಯಿಂದ ಹಾಗೆ ಹೇಳಿದೆನಷ್ಟೇ ಅಂತ ಸಮಜಾಯಿಷಿ ಕೊಟ್ಟೆ.
ತುಂಬ ಅರ್ಜೆಂಟಿದೆ ಅಂದರೆ ನನ್ನಿಂದ ಸಾಧ್ಯವಿಲ್ಲ ಭಾರತಿ. ಕನಿಷ್ಟ 15 ದಿನಗಳಾದರೂ ಬೇಕು ಅಂದರು ಮೇಷ್ಟ್ರು. ಕೂಡಲೇ ಜೊತೆಗಿದ್ದವಳು – ಸರ್, ನನ್ನ ಪುಸ್ತಕ ನಿಧಾನವಾಗಿ ಓದಿ, ಪರವಾಗಿಲ್ಲ. ಆದರೆ ಭಾರತಿಯ ಪುಸ್ತಕ ಬಿಡುಗಡೆಯಾಗುವ ದಿನ ಕೂಡ ಗೊತ್ತಾಗಿ ಹೋಗಿದೆ. ಅದೊಂದನ್ನಾದರೂ ಓದಲು ಸಾಧ್ಯವಾದರೆ ತುಂಬ ಥ್ಯಾಂಕ್ಸ್ ಅಂದಳು. ಮೇಷ್ಟ್ರು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಅಂತ ಹೇಳಿದರು. ಮತ್ತೊಂದಿಷ್ಟು ಹೊತ್ತು ಅವರ ಸಾಹಿತ್ಯದ, ಬದುಕಿನ, ಜಗತ್ತಿನ ಚರ್ಚೆಗೆ ಕಿವಿಗೊಟ್ಟು ಎದ್ದಾಗ ಕತ್ತಲಾಗಿ ಹೋಗಿತ್ತು. ವಾಪಸ್ ಹೊರಟಾಗ ಯಾಕೋ ಮನಸ್ಸಿಗೆ ಖುಷಿ ಖುಷಿ. ಬದುಕಿಗೆ ಉಪಯೋಗವಾಗುವಂಥ ಏನನ್ನೋ ಪಡೆದುಕೊಂಡೆ ಅನ್ನಿಸಿದ ಖುಷಿಯದು.
ಕೊಟ್ಟು ಬಂದು ಎರಡು ದಿನವಾಗಿತ್ತು. ಇದ್ದಕ್ಕಿದ್ದ ಹಾಗೆ ಭಾನು ಎಂದಿನಂತೆ ಏರೋಪ್ಲೇನ್ ಹತ್ತಿ ಹೊರಡುವ ಗಡಿಬಿಡಿಯಲ್ಲಿ ಫೋನ್ ಮಾಡಿ – ಮೇಷ್ಟ್ರು ಫೋನ್ ಮಾಡಿದ್ದರು. ನಿನ್ನ ಬುಕ್ ಓದಲು ಶುರು ಮಾಡಿದ್ದಾರಂತೆ. ಅದರ ವಿಷಯವಾಗಿ ನಿನ್ನ ಜೊತೆ ಮಾತಾಡಬೇಕಂತೆ. ಅರ್ಜೆಂಟಾಗಿ ಫೋನ್ ಮಾಡು ಅವರಿಗೆ ಅಂತ ಬಡಬಡನೆ ಹೇಳಿ ಫೋನ್ ಕಟ್ ಮಾಡಿದಳು. ನಾನು ಆಶ್ಚರ್ಯದಿಂದ ಕೂಡಲೇ ಯು ಆರ್ ಸರ್‌ಗೆ ಫೋನ್ ಮಾಡಿದೆ. ಮೇಷ್ಟ್ರು ಅದೇ ಮೃದುಲ ದನಿಯಲ್ಲಿ – ನಂದು ಇವತ್ತು ಡಯಾಲಿಸಿಸ್ ಇತ್ತು. ಅದನ್ನು ಮಾಡಿಸಿಕೊಳ್ಳುವಾಗ ಏನನ್ನಾದರೂ ಓದೋದು ನನ್ನ ಅಭ್ಯಾಸ. ಇವತ್ತು ನಿನ್ನ ಬುಕ್ ಓದಲು ಶುರು ಮಾಡಿದೆ. ಎಷ್ಟು ಚೆಂದ ಬರೆದಿದ್ದೀಯಮ್ಮ. ನನಗೆ ತುಂಬ ಇಷ್ಟವಾಯ್ತು…. ಅನ್ನುತ್ತಾ ಐದು ನಿಮಿಷ ಅದರ ಬಗ್ಗೆ ಮಾತಾಡಿ ಇನ್ನೊಂದೆರಡು ದಿನದಲ್ಲಿ ಓದು ಮುಗಿಸಿದ ನಂತರ ಮತ್ತೆ ಮಾತಾಡುವೆ ಅಂದರು. ನಾನು ಚಲನೆಯೇ ಇಲ್ಲದೆ ಕೂತಿದ್ದೆ. ಇಂಥ ವ್ಯಕ್ತಿ …. ಇಷ್ಟು ಸರಳತೆ !! ಇಂಥ ದೊಡ್ಡತನ !!! ಅವತ್ತಿನ ನನ್ನ ಭಾವನೆಯನ್ನು ಪದದಲ್ಲಿ ಕಟ್ಟಿಹಿಡಿಯುವುದು ಅಸಾಧ್ಯ.
ಅದಾದ ಎರಡೇ ದಿನದಲ್ಲಿ ಮತ್ತೆ ಅವರಿಂದ ಕರೆ. ನನ್ನ ಪುಸ್ತಕ ಓದಿ ಮುಗಿಸಿ ಆಯ್ತು ಅಂದರು! 15 ದಿನವಾದರೂ ಬೇಕು ಅಂದವರು ನಾಲ್ಕೇ ದಿನದಲ್ಲಿ ಮುಗಿಸಿದ್ದರು. ನನಗೆ ಟೈಪ್ ಎಲ್ಲ ಮಾಡೋದು ಕಷ್ಟ. ನೀನೇ ಬಂದರೆ ನಾನು ಬ್ಲರ್ಬ್ ಹೇಳುತ್ತೇನೆ, ನೀನದನ್ನು ಟೈಪ್ ಮಾಡಿಕೊಳ್ಳಲು ಸಾಧ್ಯವೇ- ಅಂದರು! ನಾನು ಸಂಭ್ರಮದಿಂದ – ಸರ್, ಯಾವಾಗ ಬರಲಿ ಎಂದು ಹೇಳಿದರೆ ನಾನಲ್ಲಿ ಆ ಸಮಯಕ್ಕೆ ಬರುತ್ತೇನೆ. ನೀವು ನಿಮ್ಮ ಅನುಕೂಲ ನೋಡಿಕೊಂಡು ಸಮಯ ಫಿಕ್ಸ್ ಮಾಡಿ ಅಂದೆ. ಆಗಲೇ ಸ್ವಲ್ಪ ತಡೆಯಲು ಹೇಳಿ, ಅವರ ಡೈರಿ ತೆಗೆಸಿ ಕೆಲಸಗಳನ್ನೆಲ್ಲ ಚೆಕ್ ಮಾಡಿ, ನಾನು ಯಾವತ್ತು ಬರಬೇಕೆಂದು ಹೇಳಿಯೂ ಬಿಟ್ಟರು! ನಿಜಕ್ಕೂ ಹೇಳುತ್ತೇನೆ ಅಂಥಹ ವ್ಯಕ್ತಿಯನ್ನು ನಾನು ಅದೇ ಮೊದಲು ಕಾಣುತ್ತಿದುದು. ಆ ಪರಿಯ ಸರಳತೆ ನನ್ನನ್ನು ಮೋಹಗೊಳಿಸಿಬಿಟ್ಟಿತು.
ಅವರು ಹೇಳಿದ ದಿನ ಅವರ ಮನೆಗೆ ಹೋದಾಗ ಯು ಆರ್ ಸರ್, ನನ್ನನ್ನು ಕಂಡ ಬಗೆಯನ್ನು ಮಾತ್ರ ಇನ್ನು ಬದುಕಿರುವವರೆಗೆ ಕಲ್ಲುಸಕ್ಕರೆಯ ಹಾಗೆ ಚಪ್ಪರಿಸಿಕೊಳ್ಳುತ್ತೇನೆ. ತುಂಬ ಅಕ್ಕರೆಯಿಂದ ಹತ್ತಿರ ಕೂರಿಸಿಕೊಂಡವರು ಪುಸ್ತಕದ ಬಗ್ಗೆ ತುಂಬ ಹೊತ್ತು ಮಾತಾಡಿದರು. ಕೆಲವು ಘಟನೆಗಳನ್ನು ನೆನಪಿಸಿಕೊಂಡು ನಕ್ಕರು. ಮತ್ತೆ ಕೆಲವನ್ನು ಮೆಚ್ಚಿದರು. ನಾನು ಅವರ ಸರಳತೆಯನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದೆ. ಮಾತಾಡುತ್ತಿದ್ದವರು ಇದ್ದಕ್ಕಿದ್ದ ಹಾಗೆ – ಈಗ್ಲೂ ನಿನ್ಗೆ ಅಷ್ಟೇ ಹಸಿವಾಗತ್ತಾ? ಛೇ! ನಿನ್ಗೆ ಏನಾದ್ರೂ ಕೊಡಬೇಕಿತ್ತು ಕುಡಿಯಕ್ಕೆ. ಮರೆತೇ ಹೋಯ್ತಲ್ಲ ಅಂತ ಪೇಚಾಡಿದರು. ನಾನು – ಇಲ್ಲ ಸರ್, ಅದು ಕೀಮೋ ಆಗುವಾಗ ಮಾತ್ರ. ಈಗ ನನಗೆ ಅಷ್ಟೆಲ್ಲ ಹಸಿವಾಗಲ್ಲ ಅಂದರೂ ಬಿಡದೇ ಜ್ಯೂಸ್ ಮಾಡಿಸಿದರು, ಟೀ ಮಾಡಿಸಿದರು. ಬಲವಂತ ಮಾಡಿ ಕೊಟ್ಟರು. ನನಗೆ ತುಂಬ ಸಂಕೋಚವೆನ್ನಿಸುತ್ತಿತ್ತು, ನಾನು ನನ್ನ ಕೆಲಸಕ್ಕೆಂದು ಬಂದು ಅವರಿಗೆ ತೊಂದರೆ ಕೊಡುತ್ತಿರುವೆನಲ್ಲಾ ಎಂದು. ಆದರೂ ಆ ಹಿರಿಯ ಜೀವ ನನ್ನನ್ನು ತುಂಬ ಪ್ರೀತಿಯಿಂದ ಕಂಡಿದ್ದು ಖುಷಿಯೂ ಆಗಿತ್ತು. ಆ ನಂತರ ನನ್ನ ಪುಸ್ತಕದ ಬೆನ್ನುಡಿ ಡಿಕ್ಟೇಟ್ ಮಾಡಿ ಬರೆಸಿ, ನಾನು ಬರೆದುಕೊಂಡಿರುವುದು ಸರಿ ಇದೆಯಾ ಅಂತ ಮತ್ತೆ ಓದಿಸಿ, ಕೆಲವನ್ನು ಮತ್ತೆ ತಿದ್ದಿಸಿ, ಕೊನೆಗೊಮ್ಮೆ ಅವರ ಮೂರು ಪುಸ್ತಕಗಳನ್ನು ಹಸ್ತಾಕ್ಷರ ಹಾಕಿ ನನಗೆ ಕೊಟ್ಟು , ಬೀಳ್ಕೊಟ್ಟಾಗ ನಾನು ಈ ಭೂಮಿಯ ಮೇಲೆಯೇ ಇರಲಿಲ್ಲ. ಒಂದು ವ್ಯಕ್ತಿ ಇನ್ನೊಂದು ವ್ಯಕ್ತಿಯನ್ನು … ಅದೂ ಕಂಡರಿಯದ ವ್ಯಕ್ತಿಯನ್ನು ಇಷ್ಟು ಪ್ರೀತಿಯಿಂದ ಕಾಣಬಲ್ಲರೆಂದರೆ ….
ಅದಾದ ನಂತರ ನನ್ನ ಪುಸ್ತಕ ಬಿಡುಗಡೆಯ ದಿನ ಅವರು ನಮ್ಮ ಜೊತೆಯಲ್ಲಿರುತ್ತೇನೆಂದು ಹೇಳಿದ್ದವರು, ಅವರ ಅನಾರೋಗ್ಯದ ಕಾರಣದಿಂದ ಬರಲಾಗಲೇ ಇಲ್ಲ. ನನಗೆ ತುಂಬ ನಿರಾಸೆಯಾಯಿತಾದರೂ, ಅದಕ್ಕಿಂತ ಹೆಚ್ಚಿನದನ್ನು ಬಯಸಿದರೆ ತುಂಬ ಸ್ವಾರ್ಥಿಯಾಗುತ್ತೇನೆ ಅನ್ನುವ ಅರಿವಿನಿಂದ ಸುಮ್ಮನಾದೆ.
ಅವತ್ತೊಂದು ದಿನ ಅವರಿಗಾಗಿ ಒಂದು ಜುಬ್ಬಾ ಮತ್ತು ವೇಸ್ಟ್ ಕೋಟ್ ತೆಗೆದುಕೊಂಡು ಅವರ ಮನೆಗೆ ಹೋದೆ. ಹಿಂದಿನ ದಿನದ ಡಯಾಲಿಸಿಸ್‌ನಿಂದ ಅವರು ತುಂಬ ಬಳಲಿದ್ದರು. ಭೇಟಿ ಕಷ್ಟವೆಂದು ಅವರ ಆಪ್ತ ಸಹಾಯಕ ಹೇಳುತ್ತಿರುವಾಗಲೇ ಒಳ ಕೋಣೆಯಿಂದ ಅವರನ್ನು ಕರೆದ ಯು ಆರ್ ಸರ್ ಅಷ್ಟು ದೂರದಿಂದ ಬಂದಿದ್ದೀಯ ನೀನು. ಹಾಗೇ ಕಳಿಸುವುದು ಹೇಗೆ ಅನ್ನುತ್ತ ನನ್ನನ್ನು ಭೇಟಿಯಾಗಲು ಕರೆಸಿಕೊಂಡರು! ಉಹೂಂ, ಒಬ್ಬ ಮನುಷ್ಯನಿಗೆ ಆ ಮಟ್ಟದ ಸೂಕ್ಷ್ಮತೆ ಇರುವುದು ತುಂಬ ಕಡಿಮೆ ಜನರಲ್ಲಿ ಕಂಡಿದ್ದೇನೆ. ನಾನು ತಂದ ಜುಬ್ಬಾ ಅವರಿಗೆ ಸಂಕೋಚದಿಂದಲೇ ಕೊಟ್ಟೆ. ಮೇಷ್ಟ್ರು ಸಣ್ಣ ಮಗುವಿನ ಹಾಗೆ ಅದನ್ನು ನೇವರಿಸಿದರು. ಈ ನೀಲಿ ಬಣ್ಣದ್ದೆಲ್ಲ ನನಗೆ ಚೆನ್ನಾಗಿ ಕಾಣುತ್ತಾ ಹೇಳು ಅಂತ ನಕ್ಕರು. ನಿಮಗೆ ಎಲ್ಲ ಚಂದ ಕಾಣುತ್ತದೆ ಸರ್ ಅಂತ ನಾನು ಸಮಾಧಾನಿಸಿದೆ. ಸೈಜ಼್ ಸರಿಹೋಗುತ್ತದಾ ಅಂತ ನಾನು ಅನುಮಾನಿಸಿದ ಕೂಡಲೇ ಅಷ್ಟು ಸುಸ್ತಾಗಿ ಕೂತಿದ್ದ ಸರ್, ಸಹಾಯಕನನ್ನು ಕರೆದು ಸುಸ್ತಿನಲ್ಲೇ ಹೊಸ ಜುಬ್ಬಾ ಧರಿಸಿ, ವೇಸ್ಟ್ ಕೋಟನ್ನೂ ಹಾಕಿದವರು, ಪುಟು ಪುಟು ಹೆಜ್ಜೆ ಹಾಕುತ್ತಾ ಕನ್ನಡಿಯೆದುರು ನಿಂತು ತನ್ನನ್ನು ನೋಡಿಕೊಂಡರು! ನನ್ನೆದುರಿಗಿದ್ದ ಮನುಷ್ಯನ ಜೀವನ ಪ್ರೀತಿಯ ಆಳವನ್ನು ಅಳೆಯುತ್ತಾ ಕೂತಿದ್ದೆ ನಾನು! ಈ ಬಣ್ಣ ಚೆನ್ನಾಗಿ ಕಾಣ್ತಿದೆ. ನೀನು ಹೇಳಿದ್ದು ಸರಿ. ಆದರೆ ನನ್ನ ಸಣ್ಣ ಹುಡುಗನ ಥರ ಡ್ರೆಸ್ ಮಾಡಿಸಿ you are spoiling me – ಅಂದಿದ್ದು ಈಗ ಅವರು ಎದುರಲ್ಲೇ ನಿಂತು ಹೇಳುತ್ತಿರುವ ಹಾಗೆ ಅನ್ನಿಸುತ್ತಿದೆ….
ಇದ್ದಕ್ಕಿದ್ದ ಹಾಗೆ ವಾಟ್ಸ್ ಅಪ್‌ನಲ್ಲಿ how are you bharathi ಅನ್ನುವ ಮೆಸೇಜ್ ಬರುತ್ತಿತ್ತು. ವಾಕಿಂಗ್ ಹೋಗುವಾಗ ತೆಗೆದ ಫೋಟೋ ಕಳಿಸುತ್ತಿದ್ದರು. ಈ ಮನುಷ್ಯನ ಜೀವನ ಪ್ರೀತಿಗೆ, ಕಲಿಯುವಿಕೆಗೆ ಅಳತೆಯೇ ಇಲ್ಲ ಅಂತ ನಾನು ಬೆರಗಾಗುತ್ತಿದ್ದೆ. ಆ ನಂತರ ನಾನು ಸ್ವಲ್ಪ ದಿನ ಯೂರೋಪ್ ಪ್ರವಾಸಕ್ಕೆ ಹೋದೆ. ಹೋಗುವ ಮುಂಚೆ ಅವರನ್ನು ಕಾಣಬೇಕು ಅಂದುಕೊಂಡೆ. ಆಗಲೇ ಇಲ್ಲ. ಬಂದ ನಂತರ ಒಂದಿಷ್ಟು ದಿನ ಸುಧಾರಿಸಿ ಕೊಳ್ಳುವಷ್ಟರಲ್ಲಿ ಮತ್ತೆ ಕಾಶ್ಮೀರಕ್ಕೆ ಹೋದೆ. ಅಲ್ಲಿಂದ ಮೈ ಕೈ ನಜ್ಜು ಗುಜ್ಜಾಗಿಸಿಕೊಂಡು ಬಂದವಳು ಮತ್ತಿಷ್ಟು ದಿನ ಸುಧಾರಿಸಿಕೊಂಡೆ. ಆಮೇಲೆ ಅವರನ್ನು ನೋಡಲು ಹೋಗಬೇಕು ಅಂದುಕೊಳ್ಳುತ್ತಲೇ ಯಾಕೋ ನನ್ನ ಬದುಕಿನಲ್ಲಿ ಎಲ್ಲವನ್ನೂ ಆತುರದಲ್ಲಿ ಮಾಡಿ ಮುಗಿಸುವ ನಾನು, ಈ ವಿಷಯದಲ್ಲಿ ನನಗೆ ಗೊತ್ತಿಲ್ಲದೇ ಒಂದಿಷ್ಟು ಕಾಲ ಆ ಭೇಟಿಯನ್ನು ಮುಂದೂಡಿಬಿಟ್ಟೆ. ಹೋದ ವಾರ ಭಾನು ಅವರಿಗೆ ಕರೆ ಮಾಡಿದಾಗ ಹುಷಾರಿಲ್ಲ ಅಂದರು ಅಂದಳು. ಇಬ್ಬರೂ ಅವರನ್ನು ನೋಡಲು ಓಡಿ ಹೋಗಬೇಕು ಅಂದುಕೊಳ್ಳುವಷ್ಟರಲ್ಲೇ ಅವರು ಆರೋಗ್ಯ ಸ್ವಲ್ಪ ಸರಿ ಇಲ್ಲದಿರುವುದರಿಂದ, ಮಗಳ ಮನೆಯಲ್ಲಿರುವುದಾಗಿಯೂ, ಮನೆಗೆ ವಾಪಸ್ಸಾದ ಕೂಡಲೇ ಭೇಟಿಯಾಗುವುದಾಗಿಯೂ ಹೇಳಿದರಂತೆ. ಅವರು ವಾಪಸ್ಸಾದ ದಿನ, ಅವರನ್ನು ಭೇಟಿಯಾಗಿ ಜೊತೆ ಕೂತು ಅವರದ್ದೇ ಒಂದಿಷ್ಟು ಕವನಗಳನ್ನು ಅವರ ಮುಂದೆಯೇ ಓದಿ ಬರಬೇಕು ಅಂತ ನೀಲಿ ನಕ್ಷೆ ಹಾಕಿ ಕಾಯುತ್ತ ಕೂತಿದ್ದೆವು … ಬೆಳಿಗ್ಗೆ ಮೇಷ್ಟ್ರ ಸ್ಥಿತಿ ಸ್ವಲ್ಪ ಸೀರಿಯಸ್ ಅಂತ ತಿಳಿಯಿತು. ಸಂಜೆಗೆ ಅವರಿಲ್ಲ ಅನ್ನುವ ಸುದ್ದಿಯೂ ಬಂದಿತು …
ಮೇಷ್ಟ್ರು ಮನೆಗೆ ಬಂದ ಮೇಲೆ ಭೇಟಿಯಾಗುತ್ತೇನೆ ಅಂತ ಸುಮ್ ಸುಮ್ನೇ ಹೇಳಿದ್ದರಾ ….
 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. malini guruprasanna

  novaaguttide Bharathi . namma maneya hiriyaranne kaledu kondante. nimma baravanige hididitta kannirannu horahaakitu.

  ಪ್ರತಿಕ್ರಿಯೆ
 2. rameswari varma

  nija –neevu barediruvante anathamurtyyavaru tamma saralatheya preeti oddi bahala bega aatmeeyaraaguttare.aa aatmiyateya anubhava innu nenapu maatra-

  ಪ್ರತಿಕ್ರಿಯೆ
 3. kusumabaale

  Touching ….ಭಾರತಿ ಅಕ್ಕ ಕಣ್ಣಾಲಿಗಳು ತುಂಬಿದವು.

  ಪ್ರತಿಕ್ರಿಯೆ
 4. mmshaik

  naanuu bhetiyaagabekenididde..aase kamarihoytu..devaru avara aatamakke santi needali..!!nijavaagalu saahitya khetra badavaayitu..!!!!!!!!!!!!!!!!!!

  ಪ್ರತಿಕ್ರಿಯೆ
 5. GURURAJA KATRIGUPPE

  VERY GOOD ARTICLE, TOUCHING TO HEART. AVRU HODA MELE AVARA BELE GOTTHAGUTHA IDE……

  ಪ್ರತಿಕ್ರಿಯೆ
 6. Anil Talikoti

  ಓದಿ ಆದ ಮೇಲೆ ಕಣ್ಣೆಲ್ಲಾ ಒದ್ದೆ ಒದ್ದೆ …

  ಪ್ರತಿಕ್ರಿಯೆ
 7. N,VISWANATHA

  Lekhana URA avara saralatheyannu etthi hididu torisuttade.Sooper narration
  N.VISWANATHA

  ಪ್ರತಿಕ್ರಿಯೆ
 8. shrikrishnayya ananthapura

  nanage bandhuvu aagiruva u r ananthamoorthy avaru nijakku adbhutha vyakthi annuvudaralli aradu maathilla-avara jeevanothsaha,saralathe,toruva atmeeyathe,savndarya prajne,aakarshakavagi mathanaduva bage,prakhravada pandithyavannu yaradaru mechikollalebeku-lekhana mana muttuvanthide-ananthamoorthy avara jagavannu yarindalu thumbalagadu

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: