‘ ಮನು ಸ್ಮೃತಿ ‘ ಯ ಹೆಸರು ಎತ್ತಿದಾಕ್ಷಣವೇ …- ಜಿ ಎನ್ ನಾಗರಾಜ್

ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ

ಜಿ.ಎನ್. ನಾಗರಾಜ್


ದೆಹಲಿಯ ಗ್ಯಾಂಗ್ ರೇಪ್ ನ ಹಿಂದೆ,ಯಾವುದೇ ರೇಪ್,ಯಾವುದೇ ಮಹಿಳಾ ಪೀಡನೆಯ ಹಿಂದೆ ಮಹಿಳೆಯರ ಬಗೆಗಿನ ಕುತ್ಸಿತ ಭಾವದ ಪಾತ್ರವೇ ಪ್ರಧಾನ. ಮಹಿಳೆಯರು ಕೀಳು ಎಂಬ ಭಾವ ಸಮಾಜದ ಎಲ್ಲ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಡಿದೆ. ,ಮಹಿಳೆಯರೂ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಆಳವಾಗಿ ಬೇರೂರಿದೆ. ಪುರುಷರಲ್ಲಿಯಂತೂ ಮಹಿಳೆ ಒಬ್ಬ ವ್ಯಕ್ತಿಯಲ್ಲ. ಒಂದು ಭೋಗ ವಸ್ತು, ಅವರ ಅಸ್ತಿ ಎಂಬುದು ಅವರ ತಲೆಯಲ್ಲಿ ತುಂಬಿ ಹೋಗಿದೆ. ಈ ಭಾವನೆ ಪ್ರಜ್ಞಾವಂತ ಮಹಿಳೆಯರನ್ನು ಹೊರತುಪಡಿಸಿ ಬಹುಮಟ್ಟಿಗೆ ಅನೇಕ ಮಹಿಳೆಯರಲ್ಲಿಯೂ ಇದೆ.
ಹೆಣ್ಣು, ಹೊನ್ನು, ಮಣ್ಣು
ಹೆಣ್ಣು, ಹೊನ್ನು, ಮಣ್ಣು ಎಂದು ಎಂಬ ನುಡಿಗಟ್ಟಿನ ಬಳಕೆ ಬಹಳ ಜನಜನಿತವಾಗಿದೆ. ಉತ್ತಮ ಸಾಹಿತ್ಯದಲ್ಲಿ ಮಾತ್ರವೇ ಅಲ್ಲ ,ಹರಿಕಥೆ, ಪುರಾಣಗಳಲ್ಲಿ, ಯಕ್ಷಗಾನ, ಬಯಲಾಟಗಳಲ್ಲಿ, ದಿನ ನಿತ್ಯದ ಮಾತು, ಹರಟೆಗಳಲ್ಲಿ, ಗಾದೆ ಮಾತುಗಳಲ್ಲಿ ಈ ಸಮೀಕರಣವನ್ನು ಪದೇ ಪದೇ ಕೇಳುತ್ತೇವೆ, ಸಂಪತ್ತಿನ ವಸ್ತು ರೂಪಗಳ ಜೊತೆಗೆ ಮಾನವ ವ್ಯಕ್ತಿಯನ್ನೂ ಕೂಡಿಸುವ ಈ ಸಮೀಕರಣ ಸಾಮಾನ್ಯ ಜನರ ಮನಸ್ಸಿನಲ್ಲಿ ಎಷ್ಡು ಆಳವಾಗಿ ಬೇರೂರಿದೆಯೆಂದರೆ ಗಂಡಸರಾಗಲಿ, ಹೆಂಗಸರಾಗಲಿ ನಿದ್ದೆಗಣ್ಣಿನಲ್ಲಿ ಕೂಡ ಯಾರಾದರು ಈ ಮೂರರಲ್ಲಿ ಒಂದನ್ನ ಉದಾಹರಣೆಗೆ ತೆಗೆದುಕೊಂಡರೆ ಉಳಿದೆರಡನ್ನೂ ತಮ್ಮಿಂ ದ ತಾವೇ ಅದಕ್ಕೆ ಜೋಡಿಸಿ ಹೇಳಬಿಡುತ್ತಾರೆ. ಸಾವಿರಾರು ವರ್ಷಗಳಿಂದ ಹರಿದು ಬಂದ ಈ ಭಾವನೆಗಳನ್ನು ಇಂದು ಸಿನೆಮಾ ಟಿವಿ ಧಾರಾವಾಹಿಗಳು ಮುಂದುವರೆಸಿ ಜನ ಮಾನಸದಲ್ಲಿ ಈಗಾಗಲೇ ಇರುವ ಮಹಿಳಾ ವಿರೋಧೀ ಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ.
ಅದೇನು ಅಷ್ಡೊಂದು ಮುಖ್ಯ ವಿಷಯವೇ ಎಂದು ಕೆಲವರಿಗೆ ಅನ್ನಿಸಬಹುದು. ಇಂತಹ ತಿಳುವಳಿಕೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಹೆಣ್ಣು, ಹೊನ್ನು,ಮಣ್ಣು ಮಾಯೆ ಎಂಬುದು ಅದರ ಸಹಜ ಮುಂದುವರಿಕೆಯಂತೆ ಬಳಸಲಾಗುತ್ತದೆ. ಈ ಮಾಯೆ ಗೆ ಮನುಷ್ಯ ಸಿಲುಕುವುದು ಸಹಜ ಪ್ರವೃತ್ತಿ. ಇದೊಂದು ದೊಡ್ಡ ತಪ್ಪೇನೂ ಅಲ್ಲ. ಈ ಮಾಯೆಗೆ ‘ ಸಿಲುಕದಣ್ಣಗಳು ‘ ಯಾರು ? ಹೀಗೆ ಪುರುಷರು ತಮ್ಮ ಕ್ರೌರ್ಯವನ್ನು ಸಮರ್ಥಿಸಿಕೊಳ್ಳಲು ಹಾದಿ ಮಾಡಿಕೊಡುತ್ತದೆ. ಭೂಮಿಯ ಅತಿಕ್ರಮಣ, ಹಣದ ಕಳ್ಳತನ ಅಥವಾ ಲಪಟಾವಣೆಗಳಂತೆಯೇ ಹೆಣ್ಣಿನ ಮಾನಭಂಗವೂ ಕೂಡ ಸಮಾಜದಲ್ಲಿ ನಡೆಯುವಂತಹವೇ. ನೀವು ನಿಮ್ಮ ಎಚ್ಚರದಲ್ಲಿ ಇರಬೇಕು ಅಷ್ಟೇ. ಆದ್ದರಿಂದ ಹಣವನ್ನು ತಿಜೋರಿಯಲ್ಲಿ, ಭೂಮಿಯನ್ನು ಬೇಲಿಕಟ್ಟಿ ಅಥವಾ ಕಾಂಪೌಂಡ್ ಹಾಕಿ ರಕ್ಷಿಸುವಂತೆ ಹೆಣ್ಣನ್ನೂ ಪೂರ್ಣ ಮೈ ಮುಚ್ಚಿ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು .ಅದು ಭಾರತೀಯ ಸಂಸ್ಕೃತಿ.. ಹಾಗೆ ಮಾಡದಿದ್ದರೆ ಆ ಹೆಣ್ಣಿನದೇ ತಪ್ಪು ಅಥವಾ ಆ ಹೆಣ್ಣನ್ನು ಹಾಗೆ ಇರಿಸಿಕೊಳ್ಳದ ಗಂಡಸರ ಅಥವಾ ಅವರ ತಲೆಯಲ್ಲಿರುವ ವಿದೇಶೀ ಸಂಸ್ಕೃತಿಯ ತಪ್ಪು.ಇಂತಹ ವಾದಗಳು ಯಥೇಚ್ಚವಾಗಿ ದೆಹಲಿ ರೇಪ್ ವಿರುದ್ಧ ಎದ್ದ ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ ಕೇಳಿ ಬಂದಿದೆ.

ಹೆಣ್ಣು : ವ್ಕಕ್ತಿಯೋ ಭೋಗ ವಸ್ತುವೋ?

ಹೆಣ್ಣು ಒಂದು ಭೋಗವಸ್ತುವಷ್ಟೇ ಎಂಬ ಅಮಾನವೀಯ ಭಾವನೆಯನ್ನು ಪಾಳೆಯಗಾರೀ ಸಮಾಜದಲ್ಲಿ ಹುಟ್ಟಿದ ಪ್ರಾಚೀನ ಕಾವ್ಯ ನಾಟಕಗಳು ಬಿತ್ತಿರುವ ಹಲವು ರೀತಿಗಳಲ್ಲಿ ಮತ್ತೊಂದು ಮುಖ್ಯವಾದ ವಿಧಾನವೆಂದರೆ ಹೆಣ್ಣಿನ ವರ್ಣನೆ. (ಹಾಗೆಂದ ಮಾತ್ರಕ್ಕೆ ಪ್ರಾಚೀನ ಸಾಹಿತ್ಯವನ್ನೇ ಒಟ್ಟಾರೆಯಾಗಿ ತಳ್ಳಿ ಹಾಕುತ್ತಿದ್ದೇನೆಂದು ಯಾರೂ ಭಾವಿಸಬಾರದು.) ಗುರು ನಿತಂಬಿನಿ, ಪೀನ ಪಯೋಧರೆ, ಬಿಂಬಾಧರೆ, ಮೀನ ಲೋಚನೆ, ಕಮಲಮುಖಿ-ಚಂದ್ರ ಮುಖಿ ಇಂತಹ ನೂರಾರು ವರ್ಣನೆಗಳು ಕವಿಗಳ ಹೆಗ್ಗಳಿಕೆಗಳಾಗಿದ್ದುವು. ಹೆಣ್ಣಿನ ಮನಸ್ಸು, ಅಭಿಪ್ರಾಯ, ವ್ಯಕ್ತಿತ್ವಗಳಿಗೆ ಬಹಳ ಅಪರೂಪವಾಗಿ ಮಾತ್ರವೇ ಗಮನವೀಯುತ್ತಿದ್ದ ಈ ಸಾಹಿತ್ಯ ಹೆಣ್ಣೊಂದು ಭೋಗವಸ್ತು, ಇಂತಹ ಹೆಣ್ಣನ್ನು ‘ ಹೇಗಾದರೂ ’ ಮಾಡಿ ಪಡೆಯಬೇಕು ಇಲ್ಲದಿದ್ದರೆ ಅನುಭವಿಸಬೇಕು ಎಂಬ ಕೀಳು ಕಾಮನೆಯನ್ನು ಮೂಡಿಸದೇ ಬೇರೇನು ಮಾಡಲು ಸಾಧ್ಯ. ಇಂದಿನ ಸಿನೆಮಾ ರಂಗ ಈ ವರ್ಣನೆಯನ್ನು ಡಗಾರ್, ಫಿಗರ್ ಎಂದು ಇನ್ನೂ ಕೀಳು ಹಂತಕ್ಕೊಯ್ದು ಜನ ಮಾನಸವನ್ನು ಹದಗೆಡಿಸುತ್ತಿರುವುದು ಬಹು ಚರ್ಚಿತ ವಿಷಯ.
ಮನುಸ್ಮೃತಿಯ ಪಾತ್ರ
ನಮ್ಮ ದೇಶದ ಪುರಾಣ, ಮಹಾಕಾವ್ಯಗಳಲ್ಲಿ,ಪತಿವ್ರತೆಯರ ಕಥೆ, ಹರಿಕಥೆ, ಯಕ್ಷಗಾನ- ಬಯಲಾಟಗಳಲ್ಲಿ, ಆಚರಣೆ,ವ್ರತಗಳಲ್ಲಿ ಗಂಡಿನ ಮೇಲ್ಮೆ,,ಹೆಣ್ಣಿ ಅಧೀನತೆ, ಹೆಣ್ಣು ಮಾಯೆ, ಭೋಗ ವಸ್ತು, ಮನೆಗೆಲಸ, ಮಕ್ಕಳನ್ನು ಪಡೆಯುವುದು, ಸಾಕುವುದು, ಪುರುಷರ ಸೇವೆ ಮಾಡುವುದು ಮೊದಲಾದ ಮೌಲ್ಯಗಳೇ ಮಹಿಳೆಗೆ ಅತ್ಯುನ್ನತ ಮೌಲ್ಯಗಳು ಎಂದು ಪ್ರತಿಪಾದಿತವಾಗಿರುವುದನ್ನು ಕಾಣುತ್ತೇವೆ. ‘ಮನುಸ್ಮೃತಿ’ ಈ ಎಲ್ಲ ಪುರಾಣ, ಮಹಾಕಾವ್ಯ, ಗಳಿಗಿಂತ ಸ್ವಲ್ಪ ಮೊದಲೇ ಹುಟ್ಟದ ಕೃತಿಯಾಗಿ, ಇಂತಹ ಹಲವು ಸ್ಮೃತಿಗಳಿಗಿಂತ ಹೆಚ್ಚು ಪ್ರಚಲಿತವಾಗಿ ಮಹಿಳೆಯರ ಬಗೆಗಿನ ಭಾರತೀಯ ಸಮಾಜದ ಭಾವನೆಯನ್ನು ರೂಪಿಸಿದ ಗ್ರಂಥಗಳಲ್ಲಿ ಒಂದು ಪ್ರಧಾನ ಕೃತಿ. ಅದರಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳುವುದು ನಾವುಎದುರಿಸುತ್ತಿರುವ ಸಮಸ್ಯೆಯನ್ನು ಅದರ ಎಲ್ಲ ಆಯಾಮಗಳಲ್ಲಿ ಅರ್ಥ ಮಾಡಿಕೊಳ್ಳಲು ಅವಶ್ಯಕ.
ಕೆಲವೇ ಶ್ಲೋಕಗಳ ಮೂಲಕ ಮನುಸ್ಮೃತಿಯ ಭಾವವನ್ನು ಇಲ್ಲಿ ಪರಿಚಯಿಸಲು ಪ್ರಯತ್ನಿಸಲಾಗಿದೆ. ಈ ಶ್ಲೋಕಗಳು ಹೆಣ್ಣು ಗಂಡನ ಆಸ್ತಿ,ಪತಿ ಸೇವೆಯೇ ಪರಮ ಕರ್ತವ್ಯ,ಹೆಣ್ಣೇ ಗಂಡಸರು ಕೆಡುವುದಕ್ಕೆ ಕಾರಣ , ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಇತ್ಯಾದಿ ಇಂದು ಜನಜನಿತವಾಗಿರುವ ಮಹಿಳಾ ವಿರೋಧೀ ವಿಚಾರಗಳನ್ನು ಪ್ರತಿಬಿಂಬಿಸುತ್ತವೆ. ಮನುಸ್ಮೃತಿಯ ಶ್ಲೋಕಗಳು ಮತ್ತು ಅದಕ್ಕೆ ಪಂಡಿತರು ನೀಡಿದ ವಿವರಣೆಯನ್ನು ಇದ್ದ ಹಾಗೇ ಇಲ್ಲಿ ನೀಡಲಾಗಿದೆ. ಸಮಾಜ ಪುಸ್ತಕಾಲಯ, ಧಾರವಾಡ ಪ್ರಕಟಿಸಿರುವ ಶೇಷ ನವರತ್ನರವರ ಹಾಗೂ ಅವರೇ ಪ್ರಕಟಿಸಿರುವ ವಿದ್ವಾನ್ ಚಕ್ರಕೋಡಿ ಈಶ್ವರ ಶಾಸ್ತ್ರಿಯವರ ಅನುವಾದಗಳಿಂದ ಈ ಶ್ಲೋಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅನುವಾದಕರು / ಪ್ರಕಾಶಕರು ಮನು ಸ್ಮೃತಿಯನ್ನು ಹಿಂದೂ ಧರ್ಮ ಶಾಸ್ತ್ರಕ್ಕೆ ಬುನಾದಿಯಾಗಿರುವ ಗ್ರಂಥ ಎಂದು ವರ್ಣಿಸಿದ್ದಾರೆ.
ಶಯ್ಯಾಸನಮಲಂಕಾರಂ ಕಾಮಂ ಕ್ರೋಧಂ ಅನಾರ್ಜವಂ/
ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ ಮನುರಕಲ್ಪಯತ್ – (9-17)
ಮಲಗುವುದು,ಕುಳಿತುಕೊಂಡಿರುವುದು,ಅಲಂಕಾರ,ಕಾಮ,ಕ್ರೋಧ, ಅಪ್ರಾಮಾಣಿಕತೆ, ಪತಿ ದ್ರೋಹ ಮತ್ತು ದುರ್ನಡತೆ ಇವು ಸ್ತ್ರೀಯರಿಗೆ ಸ್ವಾಭಾವಿಕ ಗುಣಗಳೆಂದು ಮನು ಹೇಳುತ್ತಾನೆ.
ತಥಾ ಚ ಶ್ರುತಯೋ ಬಹ್ವೋ ನಿಗೀತಾ ನಿಗಮೇಷ್ವಪಿ/-(9-19)
ಸ್ತ್ರೀಯರು ಹೀಗೆಂದು ವೇದಗಳಲ್ಲಿಯೇ ಪ್ರಮಾಣಗಳಿವೆ.
ಸ್ವಭಾವ ಏಷ ನಾರಿಣಾಂ ನರಾಣಾಮಿಹ ದೂಷಣಂ/-(2-213)
ಪುರುಷರ ಮನಸ್ಸು ಕೆಡಿಸುವುದೇ ನಾರಿಯರ ಸ್ವಭಾವವಾಗಿದೆ.
ಅವಿದ್ವಾಂಸಮಲ ಲೋಕೇ ವಿದ್ವಾಂಸಮಪಿ ವಾ ಪುನಃ/
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಂ-(2-214)
ಅವನು ಪಂಡಿತನೇ ಇರಲಿ,ಪಾಮರನೇ ಆಗಿರಲಿ ಕಾಮ ಕ್ರೋಧ ವಶನಾದ ಮನುಷ್ಯನನ್ನು ಮಾರ್ಗ ಭ್ರಷ್ಟನನ್ನಾಗಿ ಮಾಡಲು ಸ್ತ್ರೀ ಸಮರ್ಥಳು.
ನೈತಾ ರೂಪಂ ಪರೀಕ್ಷಂತೇ ನಾಸಾಂ ವಯಸಿ ಸಂಸ್ಥಿತಿಃ/
ಸುರೂಪಂ ವಾ ವಿರೂಪಂ ವಾ ಪುಮಾನಿತ್ಯೇವ ಭುಂಜತೇ//-(9-14)
ಸ್ತ್ರೀಯರು ಪುರುಷರ ರೂಪ ಹಾಗೂ ವಯಸ್ಸುಗಳನ್ನು ಕುರಿತು ಹೆಚ್ಚು ವಿಚಾರಿಸಲು ಹೋಗುವುದಿಲ್ಲ.ಕುರೂಪಿಯಾಗಿರಲಿ,ಸುರೂಪಿಯಾಗಿರಲಿ ಪುರುಷನನ್ನು ಭೋಗಿಸುವರು.
ಪಿತ್ರಾ ಭರ್ತಾ ಸುತೈರ್ವಾಪಿ ನೇಚ್ಛೇದ್ವಿರಹಮಾತ್ಮನಂ/
ಏಷಾಂ ಹಿ ವಿರಹೇಣ ಸ್ತ್ರೀ ಗರ್ಹ್ಯೇ ಕುರ್ಯಾಭೇ ಕುಲೇ//-(5-149)
ಸ್ತ್ರೀಯರು ತಂದೆ,ಗಂಡ,ಮಕ್ಕಳನ್ನು ಬಿಟ್ಟು ಒಬ್ಬಳೇ ಇರಬಾರದು.ಹಾಗೆ ಒಬ್ಬಳೇ ಇದ್ದರೆ ಉಭಯ ಕುಲಗಳಿಗೂ ಕೆಟ್ಟ ಹೆಸರು ತರುತ್ತಾಳೆ.
ಅಸ್ವತಂತ್ರಾಃ ಸ್ತ್ರೀಯಃ ಕಾರ್ಯಾಃ ಪುರುಷ್ಯೆಃ ಸ್ವೈರ್ ದಿವಾನಿಶಂ/
ವಿಷಯೇಷು ಚ ಸಜ್ಜಂತ್ಯಃ ಸಂಸ್ಥಾಪ್ಯಾ ಆತ್ಮನೋ ವಶೇ//-(9-2)
ಹಗಲೂ ಇರುಳೂ ಪುರುಷರು ಸ್ತ್ರೀಯರನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಸುಖ-ಭೋಗಾದಿ ವಿಷಯಾಭಿಲಾಷೆಗಳಲ್ಲಿ ಪ್ರವರ್ತಿಸುವ ಸ್ತ್ರೀಯರನ್ನು ಅಂಕೆಯಲ್ಲಿ ಇರಿಸಿಕೊಳ್ಳಬೇಕು.
ಬಾಲ್ಯೇ ಪಿತುರ್ವಶೇ ತಿಷ್ಠೇತ್ಪಾಣಿಗ್ರಾಹಸ್ಯ ಯೌವನೇ/
ಪುತ್ರಾಣಾಂ ಭರ್ತರಿ ಪ್ರೇತೇ ಭಜೇತ್ ಸ್ತ್ರೀ ಸ್ವತಂತ್ರತಾಂ//-(5-148)
ಬಾಲ್ಯದಲ್ಲಿ ತಂದೆಯ ವಶದಲ್ಲಿ ಯೌವ್ವನದಲ್ಲಿ ಗಂಡನ ವಶದಲ್ಲಿ ಗಂಡ ಸತ್ತ ನಂತರ ಪುತ್ರರ ಅಧೀನದಲ್ಲಿ ಬಾಳಬೇಕಲ್ಲದೇ ತಾನೇ ಸ್ವತಂತ್ರವಾಗಿ ವ್ಯವಹರಿಸಬಾರದು.

(ಮನುಸ್ಮೃತಿಯ ಬಹಳ ಪ್ರಸಿದ್ಧವಾದ ಶ್ಲೋಕ-
ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ/
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ//-(9-3)
ಇದಕ್ಕೆ ಸಮಾನಾರ್ಥಕವಾದ (5-148 )ರ ಮೇಲಿನ ಶ್ಲೋಕ ಹೇಗೆ ಮತ್ತೆ ಮತ್ತೆ ಮನು
ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ವೆಂದು ಪ್ರತಿಪಾದಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿದೆ.
ಅದಕ್ಕೆ ಅವನು ಕೊಡುವ ಕಾರಣ ಪುರುಷರು ಮಹಿಳೆಯರನ್ನು ಬಲಾತ್ಕರಿಸಿ “ಕೆಡಿಸುತ್ತಾರೆ” ಎಂದಲ್ಲ. ಬದಲಾಗಿಮಹಿಳೆಯರನ್ನು ನಂಬುವುದಕ್ಕೆ ಆಗುವುದಿಲ್ಲ. ಅವರು ಕಾಮಾಸಕ್ತರಾಗಿ ತಾವೇ ಯಾರೊಂದಿಗಾದರೂ ಭೋಗಕ್ಕ ಎಳಸುತ್ತಾರೆ ಎಂದು. ಎಂಥಹಾ ವಿಚಿತ್ರ ! ವಾಸ್ತವಕ್ಕೆ ಪೂರ್ಣ ವಿರುದ್ಧವಾದ ಈ ಕಲ್ಪನೆಯನ್ನು ಹಲವಾರು ಬಾರಿ ಗಟ್ಟಿಯಾಗಿ ಹೇಳಿ ಅದನ್ನೇ ಸತ್ಯ ಎಂದು ಸಮಾಜ ಒಪ್ಪಿಕೊಳ್ಳುವಂತೆ ಮಾಡುವ ಈ ಪ್ರಯತ್ನವನ್ನು ಮುಂದೆ ಕೆಲ ಅಂಶಗಳಲ್ಲಿ ನೋಡೋಣ. )
ಪ್ರಯುಜ್ಯತೇ ವಿವಾಹೇಷು ಪ್ರದಾನಂ ಸ್ವಾಮ್ಯ ಕಾರಣಂ/-(5-152)
ವಿವಾಹದಲ್ಲಿ ಕನ್ಯಾದಾನ ಮಾಡುವುದೆಂದರೆ ಅವಳ ಮೇಲೆ ಒಡೆತನವನ್ನು,ಅಧಿಕಾರವನ್ನು ನೀಡುವುದಾಗಿದೆ.
ಬೀಜಸ್ಯ ಚೈವ ಯೋನಾಸ್ಚ ಬೀಜಮುತ್ಕೃಷ್ಟಮುಚ್ಯತೇ/
ಸರ್ವ ಭೂತ ಪ್ರಸೂತಿರ್ಹಿ ಬೀಜ ಲಕ್ಷಣ ಸಂಹಿತಾ // -(9-35)
ಬೀಜದ ಹಾಗೂ ಕ್ಷೇತ್ರದ ತುಲನೆಯಲ್ಲಿ ಬೀಜಕ್ಕೇನೆ ಹೆಚ್ಚಿನ ಮಹತ್ವವಿದೆ.ಏಕೆಂದರೆ ಸರ್ವ ಪ್ರಾಣಿಗಳ ಉತ್ಪತ್ತಿಯಲ್ಲಿ ಆ ಬೀಜದ ಲಕ್ಷಣಗಳೇ ಪ್ರಧಾನ ಪಾತ್ರ ವಹಿಸುತ್ತವೆ.
( ಆದ್ದರಿಂದ ಪುರುಷನೇ ಶ್ರೇಷ್ಠ, ಮಹಿಳೇ ಅವನಿಗೆ ಅಧೀನಳಾಗಿರಬೇಕು. ಅನೇಕ ಅಮ್ಮಗಳ ಪೂಜೆಯಿಂದ ಶ್ರೀಮಂತವಾಗಿರುವ ಜಾನಪದ ಮೌಲ್ಯಗಳನ್ನು ತುಳಿದು ಪುರುಷಾಧಿಕಾರವನ್ನು ಸ್ಥಾಪಿಸಲು ಏನೆಲ್ಲ ಕಸರತ್ತು ಮಾಡಿದ್ದಾರೆ ಎನ್ನುವುದಕ್ಕೆ ಬೇರೆ ಉದಾಹರಣೆ ಬೇಕೇ. ಈ “ತತ್ವ”ದಿಂದ ುದ್ಭವಿಸುತ್ತವೆ ಮುಂದಿನ ಸ್ತ್ರೀ ನಿಬಂಧನೆಗಳು.)
ನಾಸ್ತಿ ಸ್ತ್ರೀಣಾಂ ಪೃಥಗ್ಯಜ್ಞೋ ನವ್ರತಂ ನಾಪ್ಯು ಪೋಷಿತಂ/
ಪತಿಂ ಶುಶ್ರೂಷತೇ ಯೇನ ತೇನ ಸ್ವರ್ಗೇ ಮಹಿಯತೇ// (5-155)
ಪತಿಯನ್ನು ಬಿಟ್ಟು ಸ್ತ್ರೀಗೆ ಬೇರೇ ಯಜ್ಞವೇ ಇಲ್ಲ.ವ್ರತವೂ ಇಲ್ಲ. ಉಪವಾಸವೂ ಇಲ್ಲ.ಪತಿ ಸೇವೆ ಮಾಡುವುದರಿಂದಲೇ ಸ್ತ್ರೀಯು ಸ್ವರ್ಗದಲ್ಲಿ ಗೌರವ ಪಡೆಯುತ್ತಾಳೆ.
ವಿಶೀಲಂ ಕಾಮವೃತ್ತೋ ವಾಗುಣೈರ್ವಾ ಪರಿವರ್ಜಿತಃ/
ಉಪಚರ್ಯಃ ಸ್ತ್ರೀಯಾ ಸಾಧ್ವಾ ಸತತಂ ದೇವತ್ಪತಿಃ//-(95-154)
ಪತಿಯ ನಡತೆಯು ಚೆನ್ನಾಗಿರದಿದ್ದರೂ, ಕಾಮಾತುರನಾಗಿ ಅವನು ಬೇರೆ ಹೆಣ್ಣಿನ್ನು ಮೋಹಿಸಿದರೂ , ದುರ್ಗುಣಿಯಾಗಿದ್ದರೂ ಸಹ ಸಾಧ್ವಿಯಾದ ಹೆಂಡತಿಯು ತನ್ನ ಪತಿಯನ್ನು ದೇವರೆಂದೇ ಭಾವಿಸಿ ಸೇವೆ ಮಾಡಬೇಕು.
ಪ್ರಜನಾರ್ಥಂ ಮಹಾಭಾಗಃ ಪೂಜಾರ್ಹಾ ಗೃಹದೀಪ್ತಯಃ
ಸ್ತ್ರೀಯಃ ಶ್ರೀಯಸ್ಚ ಗೇಹೇಷು ನ ವಿಶೇಷೋಸ್ತಿ ಕಶ್ಚನ//-(9-26)
ಮನೆಯ ದೀಪಗಳಾದ ಈ ಸ್ತ್ರೀಯರು ಸಂತಾನವನ್ನು ಉತ್ಪಾದಿಸಲಿಕ್ಕೆಂದೇ ಇದ್ದಾರೆ. ಸ್ತ್ರೀ ಹಾಗೂ ಐಶ್ವರ್ಯಗಳಲ್ಲಿ ಭೇದವಿಲ್ಲ.
ಉತ್ಪಾದನಮಪತ್ಯಸ್ಯ ಜಾತ್ಯಸ್ಯ ಪರಿಪಾಲನಂ/
ಪ್ರತ್ಯಹಂ ಲೋಕಯಾತ್ರಾ ಯಾಃ ಪ್ರತ್ಯಕ್ಷ ಸ್ತ್ರೀ ನಿಬಂಧನಂ// -(9-27)
ಮಕ್ಕಳನ್ನ ಹಡೆಯುವುದು,ಸಾಕುವುದು,ಸಂಸಾರವನ್ನ ನಿರ್ವಹಿಸುವುದು ಇವು ಸ್ತ್ರೀಯರ ಕರ್ತವ್ಯಗಳಾಗಿವೆ.
ಈ ಮೇಲಿನ ಶ್ಲೋಕಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಶ್ಲೋಕ ಇದೆ.
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ/
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ// (3-56)
ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಎಲ್ಲ ಯಜ್ಞ ಪೂಜೆಗಳು ನಿಷ್ಪಲವಾಗುತ್ತವೆ.
ಇದು ದೇವರೇ ರೂಪಿಸಿದ್ದು, ಅನುಲ್ಲಂಘನೀಯ
ಮಹಿಳೆಯರ ಬಗ್ಗೆ ಸಮಾಜದ ಅಭಿಪ್ರಾಯವನ್ನು ರೂಪಿಸಿದ ಮನುಸ್ಮೃತಿಯಲ್ಲಿರುವ ಶ್ಲೋಕಗಳಲ್ಲಿ ಕೆಲವನ್ನು ಇಲ್ಲಿ ನೀಡಿರುವಾಗಲೇ ಮಹಾಭಾರತ, ರಾಮಾಯಣಗಳಲ್ಲಿ ಅಲ್ಲಲ್ಲಿ ಬರುವ ವಿದುರ ನೀತಿ, ಸನತ್ಸುಜಾತ ನೀತಿ ಇತ್ಯಾದಿ ಉಪದೇಶಗಳು, ಅನೇಕ ದೃಷ್ಟಾಂತ ಕಥೆಗಳು, ಉಪಕಥೆಗಳು ಇಂತಹದೇ ವಿಚಾರಗಳನ್ನು ಬೇರೆ ಬೇರೆ ರೀತಿಯಲ್ಲಿ ಪ್ರತಿಪಾದಿಸುತ್ತವೆ.ಈ ಗ್ರಂಥಗಳು ಕೇವಲ ಒಂದು ಗ್ರಂಥ ಎಂದಷ್ಟೇ ಪರಿಗಣಿತವಾಗದೇ ಶಾಸ್ತ್ರ, ಎಲ್ಲರೂ ಪಾಲಿಸಬೇಕಾದ ಕಟ್ಟಳೆ, ಸ್ವತಃ ದೇವರೇ ರೂಪಿಸಿದ್ದು. ಆದ್ದರಿಂದ ಅನುಲ್ಲಂಘನೀಯ ಎಂಬ ಪರಿವೇಷದೊಂದಿಗೆ ಭಾರತದ ಜನಮಾನಸದಲ್ಲಿ ಪ್ರವಹಿಸುತ್ತರುವುದರಿಮದ ವಿಶೇಷ ಮಹತ್ವ ಪ್ರಾಪ್ತವಾಗಿದೆ. ಆದ್ದರಿಂದ ಮಹಿಳೆಯರ ಬಗೆಗೆ ಭಾರತೀಯ ಸಂಸ್ಕೃತಿಯಲ್ಲಿ ರೂಪುಗೊಂಡ ದೃಷ್ಠಿಕೋನವನ್ನು ಆಳವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಆದ್ದರಿಮದ ಎಲ್ಲ ಮಹಿಳಾ ಪರ ಚಿಂತಕರೂ ಮೂಲ ಕೃತಿಯನ್ನು ಓದಬೇಕೆಂದು ವಿನಂತಿಸುತ್ತೇನೆ.
‘ ಮನು ಸ್ಮೃತಿ ‘ ಯ ಹೆಸರು ಎತ್ತಿದಾಕ್ಷಣವೇ ಕೆಲವರಿಗೆ ವಿಪರೀತ ಬಾಧೆಯುಂಟಾಗುವುದನ್ನು ಹಲವು ಅಂತರ್ಜಾಲ ಚರ್ಚೆಗಳಲ್ಲಿ ಕಂಡಿದ್ದೇನೆ. ಅವರೆಲ್ಲರಲ್ಲಿಯೂ ನನ್ನ ವಿನಂತಿಯಿಷ್ಟೇ : ದಯವಿಟ್ಟು ಮೂಲವನ್ನು ಅಭ್ಯಾಸ ಮಾಡಿ. ಅದರಲ್ಲಿಯ ವಿಚಾರಗಳಿಗೂ ಇಂದಿಗೂ ಸಮಾಜದಲ್ಲಿ ಪ್ರಚಲಿತವಾಗಿರುವ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ಮೇಲೆ ಇಂತಹ ವಿಚಾರಗಳ ಪ್ರಭಾವವಿಲ್ಲವೇ ಎಂಬುದನ್ನು ವಸ್ತು ನಿಷ್ಠ ದೃಷ್ಠಿಯಿಂದ ವಿಶ್ಲೇಷಿಸಿ ತೀರ್ಮಾನ ಮಾಡಿ. ನಂತರ ವಿಷಯಾಧಾರಿತವಾಗಿ ಚರ್ಚಿಸೋಣ.
ಪಾಳೆಯಗಾರೀ ಮೌಲ್ಯಗಳು ಹಾಗೂ ಸಿನೆಮಾಗಳ ಲಾಭಕೋರತನ
ಒಂದು ಚರ್ಚೆಯಲ್ಲಿ ನಾನು ಪ್ರತಿಕ್ರಿಯಿಸಿದಂತೆ ಮಹಿಳೆಯರ ಬಗ್ಗೆ ಸಾವಿರಾರು ವರ್ಷಗಳಿಂದ ಹರಿದು ಬಂದ ಪಾಳೆಯಗಾರೀ ಮೌಲ್ಯಗಳು ನಮ್ಮ ಸಮಾಜವನ್ನು ಇನ್ನೂ ಗಾಢವಾಗಿ ಪ್ರಭಾವಿಸಿರುವಾಗಲೇ ಲಾಭಕೋರ ಮಾಧ್ಯಮಗಳು, ಮನರಂಜನಾ ಉದ್ದಿಮೆಗಳು ಸ್ತ್ರೀಯರನ್ನು ಮತ್ತಷ್ಟು ಕೀಳಾಗಿ, ಭೋಗವಸ್ತುವಾಗಿ ಚಿತ್ರಿಸಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಬಲಾತ್ಕಾರವೆಸಗುವ ಕ್ರೂರ ಮನಸ್ಸುಗಳನ್ನು ಸೃಷ್ಠಿಸುತ್ತಿದ್ದಾರೆ. ಅದರಲ್ಲಯೂ ಇಂದು ಅಂತರ್ಜಾಲದಲ್ಲಿ ಸುಲಭ ಲಭ್ಯವಿರುವ ಅಶ್ಲೀಲ ಸಾಹಿತ್ಯದ ಪರಿಣಾಮವನ್ನು ಅಧ್ಯಯನಕ್ಕೊಳಪಡಿಸಬೇಕು. ಇವೆರಡನ್ನೂ ಒಟ್ಟಾಗಿಯೇ ತೊಡೆದು ಹಾಕಲು ಬೃಹತ್ ಪ್ರಮಾಣದ ಸಾಮೂಹಿಕ ಪ್ರಯತ್ನ ಕೈಗೊಳ್ಳಬೇಕು. ನಮ್ಮ ದೇಶದಲ್ಲಿ ಮಹಿಳಾ ಸಮಾನತೆಯ ಮೌಲ್ಯಗಳನ್ನು ಪ್ರಧಾನ ನೆಲೆಗೆ ತರುವುದೊಂದೇ ಮೂಲಭೂತ ಪರಿಹಾರ. ಕಠಿಣ ಕಾನೂನು, ಅದರ ಕಟ್ಟು ನಿಟ್ಟಿನ ಜಾರಿಗಾಗಿ ನಾವೆಲ್ಲರೂ ನಡೆಸುವ ಚಳುವಳಿ ಸಮಾನತೆಗಾಗಿ ನಡೆಸುವ ಹೋರಾಟದ ತಕ್ಷಣದ ಆಯಾಮ ಮಾತ್ರ ಎಂಬ ಸ್ಪಷ್ಟತೆ ಬೇಕು. ಇದು ನನ್ನ ಒಟ್ಟು ಅಭಿಪ್ರಾಯದ ಸಾರಾಂಶ.

‍ಲೇಖಕರು avadhi

July 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

40 ಪ್ರತಿಕ್ರಿಯೆಗಳು

 1. Amaresh

  He he! This is funny! What at a ‘serious’ attempt to link rapes with Manu smriti! (edited)

  ಪ್ರತಿಕ್ರಿಯೆ
  • Narayan

   ನಾಗರಾಜ್ ರ ಲೇಖನದ ಉದ್ದೇಶ ದೆಹಲಿ ರೇಪ್ ಪ್ರಕರಣವೋ ಅಲ್ಲಾ ಮನು ಸ್ಮ್ಱುತಿ ನಿಂದನೆಯೋ?ಇದೇ ವಿಮರ್ಶ ಚಾತುರ್ಯ ಭಯೋತ್ಪಾದಕರ ವಿಷಯದಲ್ಲೂ ನಾಗರಾಜ್ ರವರೆ, ಅನ್ವಯಿಸಬಹುದೇ?ಇಷ್ಟಕ್ಕೂ ಈ ಮನುಸ್ಮ್ರುತಿ ಈಗ ಅಷ್ಟು ಪ್ರಸ್ತುತವೇ? ವ್ಯಕ್ತಿಯ ಸಂಸ್ಕಾರ ಹೀನತೆಗೂ, ಧರ್ಮ ಬೋಧೆಗೂ ಅಂತರ ತಿಳಿಯದ ನಿಮ್ಮ ಚಿಂತನೆ ಬೇಸರ ಮೂಡಿಸಿದೆ.ಎಲ್ಲದಕ್ಕೂ ಧರ್ಮ ಬೋಧೆಯೇ ಕಾರಣ ಅಂತ ನೀವು ವಾದಿಸುತ್ತೀರಾದರೆ ಇಂದು ಭಾರತ ಸರ್ವ ಧರ್ಮ ಸಹಿಷ್ಣು ದೇಶವಾಗಿದೆ ಎಂದರೆ ಅದಕ್ಕೆ ಇಲ್ಲಿನ ಬಹುಸಂಖ್ಯಾತ ಜನರ ನಂಬಿಕೆಯ ವೇದವೋ, ಉಪನಿಷತ್ತೋ ಅಲ್ಲಾ ಮನುಸ್ಮ್ರುತಿ ನಂಬಿಕೆಯ ಕಾರಣದಿಂದಲೆ ಅಂತ ಒಪ್ಪುತ್ತೀರಾ?ನಿಮ್ಮ ಇದೆ ತರಹದ ಚಿಂತನೆ ನೀವು ನಂಬುವ ಚೀನಾ ದಲ್ಲಿ ಸಾಧ್ಯವೆ? ದೇಶದಲ್ಲಿ ಏನೇ ಕೆಟ್ಟದ್ದು ನಡೆಯಲಿ, ನಮ್ಮ ವರ್ತಮಾನ ದ ಚಿಂತಕರು ಕೂಡಲೆ ಮನು ಜಪ ಆರಂಭಿಸುತ್ತಾರೆ. ಇದೇ ಜಪ ಮಾಡುವವರು ಒಳ್ಳೆಯದಕ್ಕೂ ಧರ್ಮದ ಲಿಂಕ್ ಕೊಡಲ್ಲ.ಯಾಕೆ ಸ್ವಾಮಿ,

   ಪ್ರತಿಕ್ರಿಯೆ
 2. Annapoorna

  ಸನ್ಮಾನ್ಯ ನಾಗರಾಜ್ ಅವರೇ, ಕೇರಳ ಹಾಗೂ ಬಂಗಾಳದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿ ಆಗಿರುವವರಲ್ಲಿ ಬಹು ಪಾಲು ಕ್ರಿಮಿನಲ್ ಗಳು ಕಮ್ಯುನಿಷ್ಟ್ ಕಾರ್ಯಕರ್ತರು ಅಂತ ಈ ಹಿಂದೆ ಓದಿದ ನೆನಪು. ಮಹಿಳೆಯರ ಬಗ್ಗೆ ಅಭಿಪ್ರಾಯಗಳನ್ನು ಇಂತಹವರಲ್ಲೂ ರೂಪಿಸಿದ್ದು ಮನುಸ್ಮೃತಿ ಅಂತ ತಮ್ಮ ಅಭಿಪ್ರಾಯವೇ? ಅಥವಾ ಮಾರ್ಕ್ಸಿಸ್ಟ್ ಐಡಿಯಾಲಾಜಿ ಇರಬಹುದಾ?
  ಅಂದ ಹಾಗೆ ಅತ್ಯಾಚಾರ ಪ್ರಕರಣಗಳು ಸ್ವಾತಂತ್ರ್ಯಪೂರ್ವದ ಅನಕ್ಷರಸ್ಥ ಸಂಪ್ರದಾಯಶರಣ ಸಮಾಜಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸ್ವತಂತ್ರ ಭಾರತದ ಅಕ್ಷರಸ್ಥ ಸೆಕ್ಯೂಲರ್ ಆಧುನಿಕ ಸಮಾಜದಲ್ಲಿ ಆಗುತ್ತಿವೆ. ಇದರರ್ಥ ಸ್ವಾತಂತ್ರ್ಯಪೂರ್ವದ ಕಾಲಕ್ಕಿಂತ ಇಂದೇ ಮನುಸ್ಮೃತಿಯ ಪ್ರಭಾವ ಹೆಚ್ಚಿದೆ ಅನ್ತಾಯಿತಲ್ಲವೇ? ಅದಕ್ಕೆ ಏನು ಕಾರಣ ಅಂತ ಜಿಜ್ಞಾಸೆ ಮಾಡಿದ್ದೀರಾ?

  ಪ್ರತಿಕ್ರಿಯೆ
 3. Annapoorna

  ಸನ್ಮಾನ್ಯ ನಾಗರಾಜ್ ಅವರೇ, ನಮ್ಮ ಅಣ್ಣ ಬಸವಣ್ಣನವರು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ:
  ಜಗವೆಲ್ಲಾ ಅರಿಯಲು
  ಎನಗೊಬ್ಬ ಗಂಡನುಂಟು!
  ಆನು ಮುತ್ತೈದೆ;
  ಆನು ನಿಟ್ಟೈದೆ.
  ಕೂಡಲಸಂಗಮದೇವನಂತಪ್ಪ
  ಎನಗೊಬ್ಬ ಗಂಡನುಂಟು.
  ಈ ಮುತ್ತೈದೆ, ನಿಟ್ಟೈದೆ ಪರಿಕಲ್ಪನೆಗಳೆಲ್ಲ ಮನುಸ್ಮ್ರುತಿಯಿಂದಲೇ ಆಯ್ದುಕೊಂಡದ್ದು ಅಲ್ಲವೇ?!!
  ಹಾಗೆ ಮತ್ತೊಂದು ವಚನದಲ್ಲಿ “ಊರ ಸೀರೆಗೆ ಅಸಗ ಬಡಿವಡೆದಂತೆ | ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,| ಎಂದು ಮರುಳಾದೆ” ಅಂತ ಹೇಳಿದ್ದಾರೆ. ಇಲ್ಲಿ ಹೆಣ್ಣು ಭೋಗ ವಸ್ತು ಎಂಬ ಭಾವ ಇದೆಯಲ್ಲ!

  ಪ್ರತಿಕ್ರಿಯೆ
  • Annapoorna

   ನಮ್ಮ ಸತ್ಯನಾರಾಯಣ ಅವರು ಬಸವಣ್ಣ ‘ಬಡವ’ ಎಂಬ ಪದವನ್ನು ಮೂಢಮತಿ, ವಿಚಾರಶೂನ್ಯ ಎಂಬ ಅರ್ಥದಲ್ಲಿ ಬಳಸಿದ್ದಾರೆ ಅಂತ ಈ ಹಿಂದೆ ಇದೇ ವೇದಿಕೆಯಲ್ಲಿ ಹೇಳಿದ್ದರು. ಸತ್ಯನಾರಾಯಣ ಅವರ ಅರ್ಥೈಸುವಿಕೆ ಸರಿ ಎಂದೇ ತಿಳಿಯೋಣ. ಈಗ ನೋಡಿ ಬಸವಣ್ಣನವರ ಒಂದು ವಚನ ಹೀಗೆ ಇದೆ:
   ಮನೆ ನೋಡಾ ಬಡವರು,
   ಮನ ನೋಡಾ ಧೀರರು
   ಸೋಂಕಿನಲ್ಲಿ ಶುಚಿ;
   ಸರ್ವಾಂಗಕಲಿ.
   ಪರಸಕ್ಕನುವಿಲ್ಲ; ಬಂದ ತತ್ಕಾಲಕ್ಕುಂಟು.
   ಕೂಡಲಸಂಗನ ಶರಣರು ಸ್ವತಂತ್ರಧೀರರು.
   ಸತ್ಯನಾರಾಯಣ ಅವರ ಅರ್ಥೈಸುವಿಕೆಯ ಪ್ರಕಾರ ಬಸವಣ್ಣನವರು ಇಲ್ಲಿ ಶರಣರನ್ನು ಬಡವ ಎಂದು ಕರೆದಿರುವುದು ಶರಣರು ಮೂಢಮತಿಗಳು, ವಿಚಾರಶೂನ್ಯರು ಆಗಿದ್ದರಿಂದ ಅಂತಾಯಿತು! ಇಲ್ಲೇ ಇದೆ ನೋಡಿ ರಂಜಾನ್ ದರ್ಗಾ, ಸತ್ಯನಾರಾಯಣ ಹಾಗೂ ಜಿ ಏನ್ ನಾಗರಾಜ ಮೊದಲಾದವರ ಸಮಸ್ಯೆ. ಇವರಿಗೆ ಭಾರತದ ಬಹುಮುಖಿ ಸಂಪ್ರಾದಯಗಳೆಂದರೆ ಪೂರ್ವಗ್ರಹವಿದೆ. ಜೊತೆಗೆ ಬ್ರಹ್ಮದ್ವೇಶ ಬೇರೆ. ಆದುದರಿಂದ ತಮ್ಮ ಗೃಹೀತಗಳಿಗೆ ಪೂರಕವಾಗಿ ವಚನಗಳನ್ನೂ ಮನುಸ್ಮೃತಿಯನ್ನೂ misinterpret ಮಾಡುತ್ತಾರೆ. ಸಂಬಂಧವಿಲ್ಲದಿದ್ದರೂ ಸಂಬಂಧ ಕಲ್ಪಿಸಿ ತಾವು ಭಾವಿಸಿದ್ದೆ ಸತ್ಯ ಎಂಬ ರೀತಿಯಲ್ಲಿ ಬರೆಯುತ್ತಾರೆ. Facts ಹಾಗೂ evidence ಗೆ ಸಾಸಿವೆಯಷ್ಟೂ ಬೆಲೆ ಕೊಡುವುದಿಲ್ಲ ಇವರುಗಳು. ಪೂರ್ವಗ್ರಹ ಪೀಡಿತರಾಗಿ ವಾದ ಮಾಡುವುದರಿಂದ ಸಮಕಾಲೀನ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ.

   ಪ್ರತಿಕ್ರಿಯೆ
   • Satyanarayana BR

    ಅನ್ನಪೂರ್ಣ ಅವರೇ, ನಿಮ್ಮ ಉತ್ಸಾಹಕ್ಕೆ ಅಭಿನಂದನೆಗಳು. ಅದು ನಿರಂತರವಾಗಿರಲಿ.
    “ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ” ಎಂಬ ಸಾಲಿಗೂ,
    “ಮನೆ ನೋಡಾ ಬಡವರು” ಎಂಬ ಸಾಲಿಗೂ ಇರುವ ವ್ಯತ್ಯಾಸವನ್ನು ಗಮನಿಸಿ. ಅಲ್ಲಿ ‘ಬಡ’ಎಂಬುದು ಸ್ಫುರಿಸುವ ಧ್ವನಿಗೂ, ಇಲ್ಲಿಯ ‘ಬಡವರು’ ಎಂಬುದು ಸ್ಫುರಿಸುವ ಅರ್ಥಕ್ಕೂ ವ್ಯತ್ಯಾಸವಿದೆ. ಅದೇನು ನಿಮಗೆ ಕಾಣಿಸದಿರುವಂತದಲ್ಲ. ಏಕೆಂದರೆ ಸರಸ್ವತಿ ನಿಮ್ಮ ವಿಷಯದಲ್ಲಿ ಕೃಪಣೆಯಾಗಿಲ್ಲ.

    ಪ್ರತಿಕ್ರಿಯೆ
    • Annapoorna

     ಸರ್, ವ್ಯತ್ಯಾಸ ಏಕೆ ಇದೆ ಎಂದರೆ ತಮ್ಮಲ್ಲಿ ಪೂರ್ವಗ್ರಹವಿದೆ, ಅದಕ್ಕೆ ವ್ಯತ್ಯಾಸ ಹೇರುತ್ತಿದ್ದೀರಿ. ಇಲ್ಲಿ ತಮ್ಮ ಸಾಹಿತ್ಯಕ ಸಂವೇದನೆ ಕೆಲಸ ಮಾಡಿಲ್ಲ, ಬದಲಿ ತಮ್ಮ ರಾಜಕೀಯ ನಂಬಿಕೆ ಕೆಲಸ ಮಾಡಿದೆ.

     ಪ್ರತಿಕ್ರಿಯೆ
   • rangaswamy mookanahalli

    ಅಕ್ಕ , ನೀವ್ಯಾರೋ ನಾನರಿಯೆ, ಆದರೆ ನಿಮ್ಮ ಹೇಳಿಕೆ /ವಿಚಾರದಲ್ಲಿ ಶಕ್ತಿ ಇದೆ. ವಂದನೆಗಳು .

    ಪ್ರತಿಕ್ರಿಯೆ
 4. Kiran

  What is written 50 years back does not become pertinent now. How can something written 1500 years back get so much relevance? Is there any proof that MANUSMRITI was followed as the ultimate code-of-conduct by anyone at any time in this country? When it was not relevant even in the past, how does it become relevant now? There are huge number of SMRITIs in India, largely because the code of conduct keeps changing. Why do we need retrograde thinking? How is MANUSMRITI affecting daily life of common man today? You bash sentiments by quoting something which was never considered germane even in the past. It is more like punishing you because your great-grandfather did not wear a trouser. No wonder the so called intellectuals are hated to the hilt by common readers like us.

  ಪ್ರತಿಕ್ರಿಯೆ
 5. ವಿಜಯ್

  [ಪುರುಷರಲ್ಲಿಯಂತೂ ಮಹಿಳೆ ಒಬ್ಬ ವ್ಯಕ್ತಿಯಲ್ಲ. ಒಂದು ಭೋಗ ವಸ್ತು, ಅವರ ಅಸ್ತಿ ಎಂಬುದು ಅವರ ತಲೆಯಲ್ಲಿ ತುಂಬಿ ಹೋಗಿದೆ. ಈ ಭಾವನೆ ಪ್ರಜ್ಞಾವಂತ ಮಹಿಳೆಯರನ್ನು ಹೊರತುಪಡಿಸಿ ಬಹುಮಟ್ಟಿಗೆ ಅನೇಕ ಮಹಿಳೆಯರಲ್ಲಿಯೂ ಇದೆ.]
  ಸನ್ಮಾನ್ಯ ನಾಗರಾಜರವರಿಂದ ಖಚಿತವೆನಿಸುವ ಈ ಹೇಳಿಕೆ ನೋಡಿ ನನಗೆ ಸಖೇದಾಶ್ಚರ್ಯವಾಯಿತು.. ಅದೂ ‘ಬಹುಮಟ್ಟಿಗೆ’ ಎಲ್ಲ ಮಹಿಳೆಯರಲ್ಲೂ ಅಂತ ಬರೆದಿದ್ದೀರಿ..ಅಂದರೆ ಈಗಿರುವ ಮಹಿಳೆಯರಲ್ಲಿ ಹೆಚ್ಚಿನ ಮಹಿಳೆಯರು ಪ್ರಜ್ಞಾವಂತರಲ್ಲವೆಂದಾಯಿತು. ಇದನ್ನು ಓದಿದವರು ನಿಮ್ಮಲ್ಲಿ ನಿಮಗೆ ಗೊತ್ತಾಗದಂತೆಯೇ ಪುರುಷಪ್ರಧಾನ ಮನಸ್ಥಿತಿ ಬೀಡುಬಿಟ್ಟಿದೆಯೆಂದು ಕೆಲವರು ತಪ್ಪು ಕಲ್ಪನೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಮನುವಿನ ಪ್ರಭಾವ ಅಸಾಧ್ಯವಾದದ್ದು!.
  ಈಗ ಸಿನೆಮಾ ಮಾಡುವವರು, ಜಾಹಿರಾತು ಮಾಡುವವರು, ಕತೆ, ಹಾಡು ಬರೆಯುವವರು ಎಲ್ಲ ಮನುಸ್ಮೃತಿ ಓದಿಯೇ ಅಥವಾ ಅದರ ಪ್ರಭಾವಕ್ಕೊಳಗಾಗಿಯೇ ಬರೆಯುತ್ತಾರೆಂದು, ಶತ ಶತಮಾನಗಳಿಗೂ ತಾನಿಷ್ಟು ಪಾಪ್ಯುಲರ್ ಲೇಖಕನಾಗಿ ಉಳಿಯುತ್ತೇನೆಂದು ಸ್ವತಹ ಮನುಗೆ ಗೊತ್ತಿರಲಿಲ್ಲವೇನೊ. ಅಂದ ಹಾಗೆ ಭಾರತ ಬಿಟ್ಟು ವಿಶ್ವದ ಉಳಿದ ದೇಶಗಳಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಯಾರು ಕಾರಣರು ಎಂಬ ಕುತೂಹಲ ನನಗಿದೆ? ಬಹುಶಃ ಮನುಸ್ಮೃತಿ ಆಗಿನ ಕಾಲದಲ್ಲಿ ಜಾಗತಿಕವಾಗಿ ಪಬ್ಲಿಶ್ ಆಗಿರಬೇಕು..ಆದ್ದರಿಂದ ಆ ದೇಶ,ಜನಾಂಗಗಳ ಜನ ಮಾನಸದಲ್ಲೂ ಅದು ಬೀಡುಬಿಟ್ಟಿದೆ ಅನಿಸುತ್ತೆ.
  ಮಹಿಳೆಯರ ಮೇಲೆ ಹೇಗೆ ಅತ್ಯಾಚಾರ, ಅನಾಚಾರ ಮಾಡಬೇಕೆಂದು ಬರೆದು ಆಗಿನ ಪುರುಷ ಸಮಾಜದಲ್ಲಿ ಪಾಪ್ಯುಲರ್ ಆದ ಮನು ಕೊನೆಗೆ ‘ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಎಲ್ಲ ಯಜ್ಞ ಪೂಜೆಗಳು ನಿಷ್ಪಲವಾಗುತ್ತವೆ.’ ಎಂದೇಕೆ ಅಸಂಬದ್ಧ ಮಾತನಾಡಿದನೊ ಗೊತ್ತಾಗಲಿಲ್ಲ. ಮನುವಿನ ವಿಚಾರಕ್ಕೂ ಮತ್ತು ಈ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಕ್ಕೂ ಅಜಗಜಾಂತರ. ಮುಲ್ಲಾಸಾಬರಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧದಂತಿದೆ. ಆದ್ದರಿಂದ ಮನು ಬಹುಶ: ಈ ಹೇಳಿಕೆಯನ್ನು ಬೇರೆಯವರಿಂದ ಕದ್ದಿರಬಹುದು ಅಥವಾ ವೈದಿಕ ಕುಲದವರು ಕುತಂತ್ರದಿಂದ ಈ ಹೇಳಿಕೆಯನ್ನು ಮನುಸ್ಮೃತಿಯಲ್ಲಿ ಸೇರಿಸಿರಬೇಕು ಎಂಬ ಬಲವಾದ ಅನುಮಾನ ನನಗಿದೆ. ನಾಗರಾಜರವರು ಇದರ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಬೇಕೆಂದು ನಮೃ ಕೋರಿಕೆ.
  [ಅದರಲ್ಲಯೂ ಇಂದು ಅಂತರ್ಜಾಲದಲ್ಲಿ ಸುಲಭ ಲಭ್ಯವಿರುವ ಅಶ್ಲೀಲ ಸಾಹಿತ್ಯದ ಪರಿಣಾಮವನ್ನು ಅಧ್ಯಯನಕ್ಕೊಳಪಡಿಸಬೇಕು]
  ಮನು ಇದನ್ನು ಬರೆದ ಅಥವಾ ಈ ಸಾಹಿತ್ಯ ಪ್ರಕಾರಕ್ಕೆ ಅಡಿಗಲ್ಲು ಹಾಕಿಕೊಟ್ಟ ಎಂಬುದಕ್ಕೆ ದಾಖಲೆಗಳು ಲಭ್ಯವಿಲ್ಲವೆಂದೆನಿಸುತ್ತದೆ..ಹೆಚ್ಚಿನ ಸಂಶೋಧನೆ ಮಾಡಿದಲ್ಲಿ ಲಭ್ಯವಾಗುವ ಸಾಧ್ಯತೆ ಖಂಡಿತವಾಗಿಯೂ ಇದೆ. ಪ್ರಾಜ್ಞರು ಹೆಚ್ಚಿನ ಬೆಳಕು ಚೆಲ್ಲಬೇಕು ಮತ್ತು ಮನುವನ್ನು ಈ ಕೇಸಿನಲ್ಲೂ ಕೂಡ ಫಿಟ್ ಮಾಡಬೇಕು ಎಂದು ನನ್ನ ಕಡೆಯಿಂದ ಮತ್ತೊಂದು ನಮೃ ಕೋರಿಕೆ.

  ಪ್ರತಿಕ್ರಿಯೆ
  • Annapoorna

   ಅವಧಿಯ ಪುರುಷ ಓದುಗರಲ್ಲಿ ಎಷ್ಟು ಜನರು “ಪುರುಷರಲ್ಲಿಯಂತೂ ಮಹಿಳೆ ಒಬ್ಬ ವ್ಯಕ್ತಿಯಲ್ಲ. ಒಂದು ಭೋಗ ವಸ್ತು, ಅವರ ಅಸ್ತಿ ಎಂಬುದು ಅವರ ತಲೆಯಲ್ಲಿ ತುಂಬಿ ಹೋಗಿದೆ” ಎಂಬ ನಾಗರಾಜ್ ಅವರ ಗೃಹೀತವನ್ನು ಒಪ್ಪುತ್ತಾರೆ ಅಂತ ಕುತೂಹಲ.
   “ಹೆಣ್ಣು, ಹೊನ್ನು, ಮಣ್ಣು ಎಂದು ಎಂಬ ನುಡಿಗಟ್ಟಿನ ಬಳಕೆ ಬಹಳ ಜನಜನಿತವಾಗಿದೆ” ಇವರುಗಳು ಬಹಳ ಪುರೋಗಾಮಿ ಎಂದು ಹೇಳಿಕೊಂಡು ಬಂದಿರುವ ಬಸವಣ್ಣನವರ ವಚನದಲ್ಲೇ “ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂದು ಮರುಳಾದೆ” ಅಂತ ಇದೆಯಲ್ಲ! ನಮ್ಮ ನಾಗರಾಜ್ ಅವರ ಪ್ರಕಾರ ಬಸವಣ್ಣನವರೂ “ಮಹಿಳೆ ಒಬ್ಬ ವ್ಯಕ್ತಿಯಲ್ಲ ಒಂದು ಭೋಗ ವಸ್ತು” ಎಂದು ತಿಳಿದವರೇ ಆಗಿದ್ದರು ಅಂತಾಯಿತಲ್ಲ! ಮನುಸ್ಮೃತಿಯ ಪ್ರತಿಗಾಮಿ ಪ್ರಭಾವದಿಂದ ಕಲ್ಯಾಣದ ಕ್ರಾಂತಿಕಾರ ಬಸವಣ್ಣನವರೂ ತಪ್ಪಿಸಿಕೊಂಡಿಲ್ಲ ಅಂತಾಯಿತಲ್ಲ! ರಂಜಾನ್ ದರ್ಗಾ ಅವರು ನಾಗರಾಜ್ ಅವರ ಗೃಹೀತಗಳನ್ನು ಒಪ್ಪಿಯಾರೆ? ಅಥವಾ ‘ಹೆಣ್ಣು’ ಪದ ಬಸವಣ್ಣನವರ ವಚನಗಳ ಸಂದರ್ಭದಲ್ಲಿ ಬೇರೆ ಅರ್ಥವನ್ನು ಸ್ಫುರಿಸುತ್ತದೆಯೇ (ಸತ್ಯನಾರಾಯಣ ಅವರು ಈ ಕುರಿತು ಬೆಳಕು ಚೆಲ್ಲಿಯಾರು)?

   ಪ್ರತಿಕ್ರಿಯೆ
   • ವಿಜಯ್

    ಮನುಸ್ಮೃತಿಯ ಪ್ರಭಾವ ಅಗಾಧ..ನಮ್ಮ ದೇಶದ ಮೇಲಷ್ಟೇ ಅಲ್ಲ..ಇಡಿ ವಿಶ್ವದ ಮೇಲೆಯೇ ಅದರ ಪ್ರಭಾವ ಕಂಡುಬಂದಿದೆ..ದೊಡ್ಡವರು,ಸಣ್ಣವರು,ಜ್ಞಾನಿಗಳು,ಅಜ್ಞಾನಿಗಳು,ಗಂಡು,ಹೆಣ್ಣು ಹೀಗೆ ಯಾರನ್ನೂ ಬಿಟ್ಟಿಲ್ಲ..ಅಂದ ಮೇಲೆ ನಿಮ್ಮ ಈ ಪ್ರಶ್ನೆ ಅಪ್ರಸ್ತುತವಾಗುತ್ತದೆ!

    ಪ್ರತಿಕ್ರಿಯೆ
 6. rangaswamy mookanahalli

  ಸ್ವಾಮಿ ನಾನು ನಿಮ್ಮಂತೆ ತಿಳಿದವನಲ್ಲ , ಮನು ಸ್ಮೃತಿ ಬಗ್ಗೆ ಅವರಿವರ ಬಾಯಿಂದ ಕೇಳಿದ್ದು ಬಿಟ್ಟರೆ ಮತ್ತೇನೂ ಗೊತ್ತಿಲ್ಲ , ಆದರೆ ಭಗವಂತನ ದಯೆ ಯಿಂದ ೩೪ ದೇಶ ಸುತ್ತುವ ಅಲ್ಲಿನ ಸಂಸ್ಕೃತಿ ಆಭ್ಯಸಿಸಿವ ಯೋಗ ಸಿಕ್ಕಿದೆ, ಇಂದಿಗೂ ಹೊಸ ಭಾಷೆ , ಸಂಸ್ಕೃತಿ ಬಗ್ಗೆ ಕಲಿಯುತ್ತಲೇ ಇದ್ದೇನೆ, ದೇಶ, ಹಾಗು ಪ್ರಾಂತ್ಯ ಅನಗುಣವಾಗಿ ನಿಮಗೆ ಮಾಹಿತಿ ನಿಡಬಲ್ಲೆ , ನಮಲ್ಲಿರುವ ಜನಸಂಖ್ಯೆ , ನಿರಕ್ಷರತೆಗೆ ಹೋಲಿಸಿದರೆ , ನಮಲ್ಲಿ ನಡಯುತ್ತಿರುವ ಕ್ರೈಂ ತುಂಬಾನೇ ಕಮ್ಮಿ , ಏಕೆಂದರೆ ನಾವು ದೇವರಿಗೆ ಅಂಜುವ ಜನ, ಇಂಟರ್ನೆಟ್ ನಲ್ಲಿ ಸಿಗುವ ಆಶ್ಲೀಲಲತೆ ಸಿಗದಂತೆ ಮಾಡಿ , ಆರ್ಧ ಕ್ರೈಂ ಕಮ್ಮಿ ಯಾಗುತ್ತೆ , ಅದು ಬಿಟ್ಟು ಸಂಸ್ಕೃತ ಗೊತ್ತು ಅಂತ ಬಡ ಬಡಿಸ ಬೇಡಿ. ಯೂರೋಪಿಯನ್ನರಿಗೆ ಮನು ಯಾವಾಗ ತಲೆ ಕೆಡಿಸಿದನೋ ? ನಾಕಾಣೆ . ಯುರೋಪಿನಲ್ಲಿ ಮಹಿಳೆ ಮೇಲೆ ಆಗುವ ದೌರ್ಜನ್ಯ ಎಷ್ಟು ಅಂತ ಗೊತ್ತಾಗ ಬೇಕಾದರೆ ಸುಮ್ನೆ ಗೂಗಲಿಸಿ ಸಾಕು . ಬರೆಯುವ ಮುನ್ನ ಚಿಂತಿಸಿ , ಪೂರ್ವಗ್ರಹ ತೊರೆದು ಮುಕ್ತ ಮನಸ್ಸು ನಿಮ್ಮದಾಗಲಿ. ಹೊಸಿದವರು ಯಾರು ಎಂದರೆ ಮಾಸಿದ ಬಟ್ಟೆ ಉಟ್ಟವನು ಅಂದಂತೆ ಎಲ್ಲಕ್ಕೂ ಮನು ವೆ ಕಾರಣನೆ ?

  ಪ್ರತಿಕ್ರಿಯೆ
 7. pravara kottur

  ನಮಸ್ಕಾರ ಅನ್ನಪೂರ್ಣಮ್ಮನವರೆ,
  ಬಸವಣ್ಣನವರು ತಮ್ಮ ವಚನಗಳಲ್ಲಿ ಮಾತ್ರವಲ್ಲದೇ ವಾಸ್ತವವಾಗಿಯೂ ಮಹಿಳೆಯನ್ನು ಗಂಡಿನ ಸರಿ ಸಮಾನವಾಗಿ ತರಲು ಹೋರಾಡಿದವರು, ಮನುಸೃತಿಯಂಥಹ ಕೀಳು ಗ್ರಂಥಕ್ಕೆ ದಯವಿಟ್ಟು ಹೋಲಿಕೆ ಮಾಡಬೇಡಿ. ಮನುಸೃತಿ ಕೇವಲ ಹೆಣ್ಣಿನ ವಿಚಾರದಲ್ಲಷ್ಟೇ ಅಲ್ಲದೇ ಜಾತಿಗಳಲ್ಲಿ ಶ್ರೇಷ್ಠ ನಿಕೃಷ್ಠ ಅಂತಾ ಕೊರೆದ ಗೆರೆಯ ನೋವೂ ಇನ್ನೂ ಮಾಸಿಲ್ಲ. ಇನ್ನೂ ಮುಂದೆ ಹೋಗಿ, ಮನುಸೃತಿಯಲ್ಲಿ, ಮುಟ್ಟಾದ ಹೆಣ್ಣು ಮೈಲಿಗೆಯಾದವಳು ಎನ್ನುವುದನ್ನು ಬಿಂಬಿಸುತ್ತಾನೆ.
  ನೀವು ವಿಚಾರಗಳನ್ನು ಸಮಾಧಾನವಾಗಿ ಅವಲೋಕಿಸಿ, ರೇಪು ಮಾಡಿದವರು ಕಮ್ಯುನಿಷ್ಟರೋ, ಬಿ.ಜೆ.ಪಿ ಯ ಭಟ್ಟಂಗಿಗಳೋ, ಕಾಂಗ್ರೇಸ್ಸಿಗರೋ, ತಪ್ಪು ತಪ್ಪೇ…

  ಪ್ರತಿಕ್ರಿಯೆ
  • Annapoorna

   “ಬಸವಣ್ಣನವರು ತಮ್ಮ ವಚನಗಳಲ್ಲಿ ಮಾತ್ರವಲ್ಲದೇ ವಾಸ್ತವವಾಗಿಯೂ ಮಹಿಳೆಯನ್ನು ಗಂಡಿನ ಸರಿ ಸಮಾನವಾಗಿ ತರಲು ಹೋರಾಡಿದವರು” ಏನೋ ಗೊತ್ತಿಲ್ಲ ಸಾರ್, ಈ ಬಗ್ಗೆ ನನಗಿಂತ ತಮಗೆ ಹೆಚ್ಚು ಮಾಹಿತಿ ಇರಬಹುದು. ಆದರೆ ಅವರು “ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂದು ಮರುಳಾದೆ” ಅಂತ ಒಂದು ವಚನದಲ್ಲಿ ಹೇಳಿದ್ದಾರೆ. ನಮ್ಮ ಕಾಮ್ರೇಡ್ ನಾಗರಾಜ್ ಅವರು ಪ್ರಸ್ತುತ ಲೇಖನದಲ್ಲಿ ಯಾವ ನುಡಿಗಟ್ಟಿನ ಬಗ್ಗೆ ತಾತ್ವಿಕ ವಿರೋಧ ವ್ಯಕ್ತಪದಿಸಿದ್ದಾರೋ ಆ ನುಡಿಗಟ್ಟನ್ನು ಬಸವಣ್ಣ ಅಲ್ಲಮ ಆದಿ ವಚನಕಾರರು ಬಳಸಿದ್ದಾರೆ. “ಹೊನ್ನು ಹೆಣ್ಣು ಮಣ್ಣು” ಎಂಬ ನುಡಿಗಟ್ಟು ಹಾಗೂ ಅದರ ಭಾವಾರ್ಥ ವಚನಕಾರರಿಗೆ ಸಮ್ಮತವಾಗಿದ್ದರಿಂದಲೇ ಅವರು ಅದನ್ನು ವಚನಗಳಲ್ಲಿ ಬಳಸಿದ್ದಾರೆ. ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಅನ್ನುವುದಷ್ಟೇ ನನ್ನ ಅಭಿಪ್ರಾಯ.

   ಪ್ರತಿಕ್ರಿಯೆ
  • Annapoorna

   ಸಾರ್, “ಮನುಸೃತಿ ಕೇವಲ ಹೆಣ್ಣಿನ ವಿಚಾರದಲ್ಲಷ್ಟೇ ಅಲ್ಲದೇ ಜಾತಿಗಳಲ್ಲಿ ಶ್ರೇಷ್ಠ ನಿಕೃಷ್ಠ ಅಂತಾ ಕೊರೆದ ಗೆರೆಯ ನೋವೂ ಇನ್ನೂ ಮಾಸಿಲ್ಲ” ಮನುಸ್ಮೃತಿ ನಮ್ಮ ಯಾವ ಯಾವ ಜಾತಿಗಳನ್ನು ನಿಕೃಷ್ಠ ಅಂತ ಹೇಳಿದೆ ಅಂತ ದಯವಿಟ್ಟು ಒಂದು ಪಟ್ಟಿ ಮಾಡಿ ಇಲ್ಲಿ ಕೊಡಿ ಅಂತ ತಮ್ಮಲ್ಲಿ ಕಳಕಳಿಯ ಕೋರಿಕೆ.

   ಪ್ರತಿಕ್ರಿಯೆ
  • ವಿಜಯ್

   @ ಪ್ರವರಾ ಕೊಟ್ಟುರ
   ನಮಗ್ಯಾರಿಗೂ (ಅಂದರೆ ಈ ಸ್ವಘೋಶಿತ ‘ಪ್ರಜ್ಞಾವಂತ,ಪ್ರಗತಿಪರ’ಸಾಕ್ಷಿಪ್ರಜ್ಞೆ’ಗಳ ವಿರೋಧಿಗಳಿಗೆ) ಮನುಸ್ಮೃತಿಯನ್ನು ಪ್ರಮೋಟ್ ಮಾಡಬೇಕು ಎಂಬ ಇಚ್ಚೆಯಿಲ್ಲ. ಆದರೆ ಕೆಲವರಿಗೆ ಇನ್ನೂ ಈ ದೇಶ ಮನುಸ್ಮೃತಿಯನ್ನೇ ಆಧಾರವಾಗಿಟ್ಟುಕೊಂಡು ನಡೆಯುತ್ತಿದೆ..ಈ ಸಾಕ್ಷಿಪ್ರಜ್ಞೆಗಳ ತಲೆಯಲ್ಲಿ ವೈದಿಕ ಕುಲದವರು (ಇವರ ಕಲ್ಪನೆಯ ಪುರೋಹಿತಶಾಹಿಗಳು,ವೈದಿಕಶಾಹಿಗಳು,ಮನುಧರ್ಮ ಸಿಂಹಾಸನದ ಪ್ರತಿಪಾದಕರು*) ಬೆಳಗ್ಗೆ ಎದ್ದ ಕೂಡಲೇ ಮನುಸ್ಮೃತಿಯ ಪೂಜೆಮಾಡಿ,ಅದಕ್ಕೆ ಕೈಮುಗಿದು ದಿನ ಪ್ರಾರಂಭ ಮಾಡುತ್ತಾರೆ ಎಂಬ ಕಲ್ಪನೆಯಿದೆ. ಪ್ರತಿಯೊಬ್ಬ ಬ್ರಾಹ್ಮಣನು ಕಡ್ಡಾಯವಾಗಿ ಮನುಸ್ಮೃತಿಯನ್ನು ಅಭ್ಯಾಸ ಮಾಡಿ, ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾನೆ ನಂತರ ಇಡಿ ಸಮಾಜದ ಮೇಲೆ ಹೇರುತ್ತಾನೆ ಎಂಬ ತರ್ಕವಿದೆ. ಅಂತವರಿಗೆ ಒಂದು ವಿನಂತಿ ದಯವಿಟ್ಟು ಚಸ್ಮಾ ನಂಬರ ಮತ್ತೊಮ್ಮೆ ಪರಿಕ್ಷಿಸಿಕೊಳ್ಳಿ ಅಂತ.
   ವೈದಿಕ ಮನು ಸತ್ತು ಸಾವಿರಾರು ವರ್ಷಗಳಾದವು. ಅದರ ನಂತರ.ಕ್ರಾಂತಿ ಮಾಡಿದ ಬಸವಣ್ಣನವರು , ಸರ್ವಧರ್ಮ ಸಮಾನತಾ ತತ್ವದ ಮುಸ್ಲಿಂ ದೊರೆಗಳು, ವೈಜ್ಞಾನಿಕತೆಯನ್ನು, ಶಿಕ್ಷಣವನ್ನು ಕೊಟ್ಟ ತಂದ ಬ್ರಿಟೀಶರು ಆಗಿ ಹೋದರು, ಅದಾದ ನಂತರ ದೇಶ ಸ್ವತಂತ್ರವಾಗಿ ೬ ದಶಕಗಳ ಮೇಲಾಯಿತು..ಕನಿಷ್ಟ ಈಗಲಾದರೂ ಯಾವುದಾದರೂ ಬ್ರಾಹ್ಮಣನು ನಿಮ್ಮನ್ನು ಬಲತ್ಕಾರವಾಗಿ ಎಳೆದೊಯ್ದು ದೇವರ ಪೂಜೆ ಮಾಡಿಸುವಂತಿಲ್ಲ, ಒತ್ತಾಯದಿಂದ ಯಾವುದೇ ಆಚರಣೆಗಳ ಹೇರುವಂತಿಲ್ಲ..ಹೇರಿದರೆ ಹತ್ತಿರದ ಪೋಲಿಸ ಠಾಣೆಗೆ ದೂರು ಕೊಡಿ!. ಪ್ರಗತಿಪರ ಹೋರಾಟ ವೇದಿಕೆಗಳನ್ನು ಸಂಪರ್ಕಿಸಿ. ಇಲ್ಲಿವರೆಗೆ ನೀವು ಪೋಷಿಸಿಕೊಂಡು ಬಂದಂತಹ ಆಚರಣೆಗಳಿಗೆ, ನಿಮ್ಮ ಮನೆಯಲ್ಲಿ ನಡೆದುಕೊಳ್ಳುವ ಪದ್ಧತಿಗೆ ಬ್ರಾಹ್ಮಣರು (ಐ ಮೀನ ಮನುವಾದಿಗಳು, ಮನುಧರ್ಮ ಸಿಂಹಾಸನದ ಪ್ರತಿಪಾದಕರು*) ಕಾರಣರಾಗಿದ್ದರೂ, ಅವರನ್ನು ಹೇಗಾದರೂ ಮಾಡಿ ದೊಡ್ಡ ಮನಸ್ಸಿನಿಂದ ಕ್ಷಮಿಸಿ, ಇನ್ನು ಮುಂದಾದರೂ ಸ್ವತಂತ್ರ ವಿಚಾರ ಮಾಡಿ ಮುಂದೆ ಬನ್ನಿ..ಕನಿಷ್ಟ ನಮ್ಮ ಮುಂದಿನ ಪೀಳಿಗೆಯಾದರೂ ಇದೇ ಹಳೆಯ ಕ್ಯಾಸೆಟ್ ನ್ನು ಕೇಳವುದರಿಂದ ಮುಕ್ತಿ ಪಡೆಯಲಿ ಎಂಬ ಬಯಕೆ ನನ್ನದು.
   [ರೇಪು ಮಾಡಿದವರು ಕಮ್ಯುನಿಷ್ಟರೋ, ಬಿ.ಜೆ.ಪಿ ಯ ಭಟ್ಟಂಗಿಗಳೋ,ಕಾಂಗ್ರೇಸ್ಸಿಗರೋ, ತಪ್ಪು ತಪ್ಪೇ]
   ನಮ್ಮ ಪ್ರಗತಿಪರ,ಪ್ರಜ್ಞಾವಂತ,ಸಾಕ್ಷಿಪ್ರಜ್ಞೆಗಳಿಗೆ ನಿಮ್ಮ ಈ ಅಭಿಪ್ರಾಯ ಹಿಡಿಸುವುದಿಲ್ಲ. ರೇಪನ್ನು ಯಾರು ಮಾಡಿದ್ದಾರೆ ಎನ್ನುವುದರ ಮೇಲೆ ಅವರ ಸಂವೇದನಾಶೀಲತೆ ಕೆಲಸ ಮಾಡುತ್ತದೆ. ಏನು ಮಾಡುವುದು?
   * ಮನುಧರ್ಮ ಸಿಂಹಾಸನದ ಪ್ರತಿಪಾದಕರು – ಈ ನುಡಿಗಟ್ಟಿನ ಹಕ್ಕು ಶ್ರೀಯುತ ರಂಜಾನ ದರ್ಗಾರವರದು.

   ಪ್ರತಿಕ್ರಿಯೆ
   • rajashekhar hosalli

    yes your right , these type writers prejudice regarding Hinduism and culture purposely want be in news , that,s all .

    ಪ್ರತಿಕ್ರಿಯೆ
  • Suresh Vastha

   ಪ್ರವರ ಅವರೇ,
   ಮೊದಲು ಮನುಸ್ಮೃತಿಯನ್ನು ಓದಿ, ಅರ್ಥೈಸಿಕೊಂಡು. ಆ ಕಾಲಗಟ್ಟದ ಸ್ಥಿತಿಗಳ ಅರಿವಿನೊಡನೆ ತುಲನೆ ಮಾಡಿ, ನಂತರ ಇಂತಹ ವಿಷಯದಲ್ಲಿ ಕಮೆಂಟು ಮಾಡಿದರೆ ಒಳ್ಳೆಯದು. ಯಾರೋ ಹೇಳಿದ್ದನ್ನೇ ತಾವೂ ನಂಬಿಕೊಂಡು ಹೀಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ.

   ಪ್ರತಿಕ್ರಿಯೆ
 8. Annapoorna

  ಅಲ್ಲಮ ಪ್ರಭುಗಳ ಒಂದು ವಚನ ಸಾಲುಗಳು:
  ಆಸೆಗೆ ಸತ್ತುದು ಕೋಟಿ !
  ಆಮಿಷಕ್ಕೆ ಸತ್ತುದು ಕೋಟಿ !
  ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
  ಗಮನಿಸಬೇಕಾದ ವಿಷಯ ಇದು: ಅಲ್ಲಮರು “ಹೊನ್ನು ಹೆಣ್ಣು ಮಣ್ಣು” ಎಂಬ ನುಡಿಗಟ್ಟನ್ನು ವಚನದಲ್ಲಿ ಬಳಸಿರುವುದು. ನಮ್ಮ ಪ್ರಗತಿಪರ ಮಿತ್ರ ನಾಗರಾಜರು ಈ ನುಡಿಗಟ್ಟಿನ ಬಳಕೆ ಬಗ್ಗೆ, ಅದರ ಹಿಂದಿರುವ ಭಾವದ ಬಗ್ಗೆ ತಕರಾರು ತೆಗೆದಿದ್ದಾರೆ. ಆದರೇನು ಮಾಡುವುದು ಇಡೀ ವಿಶ್ವಕ್ಕೆ ಆದರ್ಶಪ್ರಾಯವಾಗಿದ್ದ ಒಂದು ಅನನ್ಯ ಸಾಮಾಜಿಕ ಕ್ರಾಂತಿಯ ಮುಂಚೂಣಿಯಲ್ಲಿದ್ದ ಅಲ್ಲಮರೇ “ಹೊನ್ನು ಹೆಣ್ಣು ಮಣ್ಣು” ಎಂಬ ನುಡಿಗಟ್ಟನ್ನು ಬಳಸಿರುವರು! ಅವರಷ್ಟೇ ಅಲ್ಲ ಅಣ್ಣ ಬಸವಣ್ಣನವರೂ ಬಳಸಿರುವರು! ಹುಡುಕಿದರೆ ಇನ್ನೂ ಅನೇಕ ವಚನಕಾರರು ಸಿಕ್ಕಿಬಿದ್ದಾರು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಮ್ಮ ನಾಡಿನ ಮಹಾಮಹಿಮ ಪ್ರಗತಿಪರ ಚಿಂತಕರು ಎದುರಿಸಬೇಕಾಗಿ ಬಂದಿದೆ. ನಮ್ಮ ಸತ್ಯನಾರಾಯಣ ಅವರಿನ್ನೂ ‘ಹೆಣ್ಣು’ ಪದಕ್ಕೆ ‘ಹೆಣ್ಣು’ ಅರ್ಥವಲ್ಲದೆ ಬೇರೆ ಅರ್ಥವನ್ನು ಆರೋಪಿಸಿ ಅಲ್ಲಮ ಹಾಗೂ ಬಸವಣ್ಣನವರನ್ನು ಅಪರಾಧದಿಂದ ಮುಕ್ತಮಾಡಿಲ್ಲ! ಈಗ ಏನು ಮಾಡುವುದು?

  ಪ್ರತಿಕ್ರಿಯೆ
 9. Umesh

  I do not understand why this article is published. Manu smriti is no longer being followed in India. So what is the purpose behind publishing irrelevant articles which have no standing. Times have changed, and people have moved past Manu long time ago. Hindu Religion has undergone many changes and still surviving because of its intrinsic Upanishadic truths not because of Manu Smriti.

  ಪ್ರತಿಕ್ರಿಯೆ
 10. Mohan V Kollegal

  ‘ಒಂದು ಪರಿಧಿಯಲ್ಲಿ ಮೂಡುವ ಕೆಟ್ಟ ವಿಚಾರಗಳು, ಮೂಲದಲ್ಲಿಯೇ ನಾಶಗೊಳ್ಳದಿದ್ದಾಗ ಬೆಳೆದು ಬೆಳೆದು, ಅಭ್ಯಾಸವಾಗಿ, ಆಚರಣೆಯಾಗಿ, ಬಾಲ್ಯಾವಸ್ಥೆಯಲ್ಲಿಯೇ ಪಠ್ಯವಾಗಿ, ದೈವತ್ವದ ಲೇಪನವಾಗಿ, ಕ್ರಮೇಣವಾಗಿ ಶ್ರೇಷ್ಟಗೊಂಡುಬಿಡುತ್ತದೆ. ಗಂಡೆಂದರೆ ಮೇಲೆ, ಹೆಣ್ಣು ಕೆಳಗೆ ಎಂಬ ಭಾವ ಸಾಂಪ್ರದಾಯಿಕವಾಗಿ ಬಂದಿದ್ದರೂ ಮುಂದೆ ಅದು ಪ್ರಕೃತಿದತ್ತವಾಗಿಯೇ ಬಂದದ್ದೇನೋ ಎಂಬಂತೆ ಬಿಂಬಿತವಾಗಿ ಸಾಗಿಕೊಂಡೇ ಇರುತ್ತದೆ. ನಾವು ಓದುವ ಪುಸ್ತಕಗಳು, ಪುರಾಣ ಕಥೆಗಳು, ಸಿನಿಮಾಗಳು ಹೆಣ್ಣನ್ನು ಭೋಗದ ವಸ್ತುವಾಗಿಯೇ ಬಿಂಬಿಸುತ್ತದೆ. ಈ ನಂಬಿಕೆ ತಪ್ಪಸ್ಸಿನಲ್ಲಿ ಕುಳಿತ ಋಷಿಮುನಿಗಳನ್ನು ಹೆಣ್ಣಿನ ಮೂಲಕ ಸೋಲಿಸುತ್ತದೆ. ಹೆಣ್ಣೆಂದರೆ ಗಂಡಿನ ಅನುಯಾಯಿಯಷ್ಟೇ ಎಂಬುದನ್ನು ಬಿಂಬಿಸುತ್ತದೆ. ಅವಳ ಸುತ್ತ ಸಾವಧಾನವಾಗಿ ಗೋಡೆ ಕಟ್ಟುತ್ತದೆ. ಗೋಡೆಯೊಳಗೆ ಗೋಡೆಗಳು ಮೂಡಿ ಅಡುಗೆ ಮನೆಯೊಳಗೆ ಕೂಡಿ ಹಾಕುತ್ತದೆ.ಎಂದೋ ಬಿಂಬಿತವಾದ ಆಚರಣೆ, ಅಭ್ಯಾಸಗಳು ಅದನ್ನು ಪಾಲಿಸಿಕೊಂಡು ಬರುವವರಿಂದ ಜೀವಂತವಾಗಿಯೇ ಇರುತ್ತದೆ. ಮನುಸ್ಮೃತಿಯೇ ಆಗಲಿ, ಇಂದಿನ ಗ್ರಂಥಗಳೇ ಆಗಲಿ, ವಚನಗಳೇ ಆಗಲಿ, ಅರಿಯದೇ ಮೂಡಿಕೊಂಡ ಎಡವಟ್ಟುಗಳೇ ಆಗಲಿ, ಇನ್ನೊಂದೇ ಆಗಲಿ, ಎಲ್ಲೆಯಿಲ್ಲದ ಪ್ರಪಂಚಕ್ಕೆ ಚೌಕಟ್ಟನ್ನು ಕಟ್ಟಿದರೆ ತಪ್ಪೆ. ‘ಕೆಟ್ಟದ್ದು’ ಎಂಬ ಪದ ಹುಟ್ಟಿದ್ದೇ ‘ಒಳ್ಳೆಯದು ‘ಎಂದು ಏನನ್ನೋ ಗುರುತಿಸಿದ್ದರಿಂದ…

  ಪ್ರತಿಕ್ರಿಯೆ
 11. Prathibha Bhadravathi

  ಪಿ. ಲಂಕೇಶ್ ಅವರ ಸಂಕ್ರಾಂತಿ ನಾಟಕದಲ್ಲಿ ಬರುವ ಒಂದು ಡೈಲಾಗ್-
  “ಬ್ರಾಹ್ಮಣರ ಮಂತ್ರಗಳಂತೆ ಶರಣರ ವಚನಗಳು ಕೂಡ ಉತ್ತು ಬೆಳೆಕೊಡಲಾರವು ಬಸವಣ್ಣ”. ಇದರರ್ಥ ಇಷ್ಟೇ- ಮನುಸ್ಮೃತಿಯ ಪ್ರತಿಪಾದಕರಿರಲಿ, ವಚನಗಳನ್ನು ಬೋಧಿಸುವ- ಪ್ರತಿಪಾದಿಸುವ ಮಹಾನ್ ಪ್ರಗತಿಪರ ಪ್ರತಿಪಾದಕರೇ ಇರಲಿ, ಯಾರೇ ರಾಜ್ಯಭಾರ ಮಾಡಿದರೂ, ಮಹಿಳೆಯರ ಮೇಲಿನ ದೌರ್ಜನ್ಯ, ರೇಪ್ ನಿಲ್ಲುವುದಿಲ್ಲ. ಅಂದಹಾಗೆ ಇತ್ತೀಚೆಗೆ ವಿವಿಯೊಂದರಲ್ಲಿ ವರದಿಯಾದ(ಸಾಬೀತಾದ) ಎರಡು ಮಹಿಳಾ ದೌರ್ಜನ್ಯ ಪ್ರಕರಣದ ಅಪರಾಧಿಗಳು- ಮನುಸ್ಮೃತಿಯ ಪರಮ ವಿರೋಧಿಗಳು !

  ಪ್ರತಿಕ್ರಿಯೆ
 12. shivarama

  ಪುರೋಹಿತಶಾಹಿಗಳು ಹಲವು ಅರ್ಥವಿಲ್ಲದ ಕಂದಾಚಾರಗಳನ್ನು ಅವುಗಳಲ್ಲಿ ನಂಬಿಕೆಯಿಲ್ಲದ ಜನರ ಮೇಲೆಯೂ ಹೇರಿದ್ದಾರೆ. ಇವುಗಳನ್ನು ನಂಬಿಕೆ ಇರುವ ಜನ ನಡೆಸಿದರೆ ಸಾಕು, ನಂಬಿಕೆ ಇಲ್ಲದವರಿಗೆ ರಿಯಾಯತಿಯನ್ನೇನೂ ಕೊಟ್ಟಿಲ್ಲ. ಇಲ್ಲಿ ಪುರೋಹಿತಶಾಹಿಗಳು ಇವುಗಳನ್ನು ಅನುಸರಿಸದವರನ್ನು ಶಿಕ್ಷಿಸುವುದಿಲ್ಲ ಅಥವಾ ಅವುಗಳನ್ನು ಮಾಡಲೇಬೇಕೆಂದು ವಿಧಿಸುವುದಿಲ್ಲವಾದರೂ ಸಮಾಜ ಅಂದರೆ ನೆರೆಹೊರೆಯವರು ನೆಂಟರಿಷ್ಟರು ಪುರೋಹಿತಶಾಹೀ ಕಂದಾಚಾರಗಳನ್ನು ಆಚರಿಸದವರನ್ನು ಬಹಿಷ್ಕರಿಸುವ ಅಥವಾ ಕೀಳಾಗಿ ಕಾಣುವ ಒಂದು ಮನೋಭಾವವನ್ನು ಬೆಳೆಸಿದೆ. ಹೀಗಾಗಿ ಇವುಗಳಲ್ಲಿ ನಂಬಿಕೆ ಇಲ್ಲದವರೂ ಇವುಗಳನ್ನು ಕಡ್ಡಾಯವಾಗಿ ಆಚರಿಸಲೇಬೇಕಾದ ಅನಿವಾರ್ಯತೆಯನ್ನು ಸಮಾಜದಲ್ಲಿ ಸೃಷ್ಟಿಸಲಾಗಿದೆ. ಪುರೋಹಿತಶಾಹೀ ಈ ರೀತಿ ಪರೋಕ್ಷವಾಗಿ ಸಮಾಜದ ಮೇಲೆ ನಿಯಂತ್ರಣ ಸಾಧಿಸಿದೆ. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಅದರಲ್ಲಿಯೂ ಬ್ರಾಹ್ಮಣ ಜಾತಿಯಲ್ಲಿ ಹಲವು ಅರ್ಥವಿಲ್ಲದ ಆಚರಣೆಗಳನ್ನು ಒಬ್ಬ ವ್ಯಕ್ತಿ ಸತ್ತಾಗ ಆತನ ಮಕ್ಕಳು ಮಾಡಲೇಬೇಕಾಗುತ್ತದೆ (ಅಂತ್ಯಕ್ರಿಯೆ, ಶ್ರಾದ್ಧ, ಬೊಜ್ಜ ಕಾರ್ಯಕ್ರಮ ಇತ್ಯಾದಿ). ಈ ಎಲ್ಲ ಕಾರ್ಯಕ್ರಮಗಳು ಇಂದಿನ ವಿಜ್ಞಾನದ ಬೆಳಕಿನಲ್ಲಿ ಸಂಪೂರ್ಣ ಅರ್ಥಹೀನವಾಗಿವೆ. ಇವುಗಳನ್ನು ನಂಬಿಕೆ ಇಲ್ಲದವರೂ ಆಚರಿಸಬೇಕು ಎಂದು ಸಾಮಾಜಿಕ ಒತ್ತಡವನ್ನು ರೂಪಿಸಿರುವ ಪುರೋಹಿತಶಾಹೀ ಇವುಗಳನ್ನು ಆಚರಿಸದವರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ, ಕೀಳಾಗಿ ಕಾಣುವ ವಾತಾವರಣ ರೂಪಿಸಿರುವುದರಿಂದ ಇವುಗಳನ್ನು ಎಲ್ಲರೂ ಆಚರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಇವುಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿ ಅರ್ಥಹೀನ ಕಂದಾಚಾರಗಳನ್ನು ನಂಬಿಕೆ ಇದ್ದವರು ಮಾತ್ರ ಆಚರಿಸಿದರೆ ಸಾಕು ಎಂಬ ಸಾಮಾಜಿಕ ವಾತಾವರಣವನ್ನು ರೂಪಿಸಬೇಕಾದ ಅಗತ್ಯ ಇಂದು ಇದೆ. ಇದಕ್ಕೆ ಎಲ್ಲ ವಿದ್ಯಾವಂತರೂ ಮುಂದಾಗಬೇಕಾಗಿದೆ. ಮೊದಲು ಕಂದಾಚಾರಗಳನ್ನು ಸಡಿಲಗೊಳಿಸುವ ಕೆಲಸವನ್ನು ಸಮಾಜದ ಗಣ್ಯ ಎನಿಸುವ ಶ್ರೀಮಂತರು ಮಾಡಬೇಕು, ನಂತರ ಇದನ್ನು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರು ಅನುಸರಿಸುತ್ತಾರೆ . ಹೀಗೆ ಈ ಕಂದಾಚಾರಗಳನ್ನು ನಿಧಾನವಾಗಿ ಕಡಿಮೆಗೊಳಿಸುತ್ತಾ ಬರಬೇಕಾದ ಅಗತ್ಯ ಇದೆ.

  ಪ್ರತಿಕ್ರಿಯೆ
  • ವಿಜಯ್

   @ಶಿವರಾಮ್..
   ಯಾರಾದರೂ ನಿಮ್ಮನ್ನು ಒತ್ತಾಯದಿಂದ ಎಳೆದುಕೊಂಡು ಹೋಗಿ ಶ್ರಾದ್ಧ ಮಾಡಿಸಿದರೆ? ಮಾಡುವುದು ಮನಸ್ಸಿಲ್ಲದಿದ್ದರೆ ನೀವು, ನಿಮ್ಮ ಸ್ವಂತ ಬುದ್ಧಿ ಉಪಯೋಗಿಸಿ, ನಿಮಗೆ ಅವೈಜ್ಞಾನಿಕವೆನಿಸುವ, ಅನವಶ್ಯಕ ಅನಿಸುವ ಆಚರಣೆಗಳ ಬಗ್ಗೆ ನಿಮ್ಮ ಮನೆಯವರಿಗೆ ತಿಳುವಳಿಕೆ ಕೊಡಿ..ಇದು ಸಮಾಜವನ್ನು ತಿದ್ದುವುದಕ್ಕಿಂತ, ಪುರೋಹಿತ(?)ಶಾಹಿಯನ್ನು ತಿದ್ದುವುದಕ್ಕಿಂತ ಸುಲಭ ಕೆಲಸ. ಮನೆ ಹತ್ತಿರಾನೆ ದೇವಸ್ಥಾನವಿದೆ ಎಂದ ಮೇಲೆ ‘ಛೆ..ಇಲ್ಲೇ ಕಟ್ಟಿಬಿಟ್ಟಿದ್ದಾರೆ..ನಾನು ಹೋಗ್ಲೇ ಬೇಕಾಯ್ತು’ ಅಂತ ಕೊರಗಬೇಕಾಗಿಲ್ಲ. ಹೋಗುವುದು, ಬಿಡುವುದು ನಿಮ್ಮ ನಂಬಿಕೆಗೆ ಬಿಟ್ಟಿದ್ದು.. ಹೇಗೆ ಊರಲ್ಲಿ ಬಾರ್ ಗಳು ಇದ್ದಿದ್ದಕ್ಕೆ ನಾನು ಕುಡುಕನಾದೆ ಅಂತ ಸಮಜಾಯಿಶಿ ಕೊಡಲು ಬರುವುದಿಲ್ಲವೊ..ಇದು ಕೂಡ ಹಾಗೇಯೇ.
   ಇತ್ತೀಚಿಗೆ ಹಾಸನದ ರೈತ ಮುಖಂಡರೊಬ್ಬರ ಬಗ್ಗೆ ಓದಿದ್ದೆ..ಅವರು ತಾವು ತೀರಿಕೊಂಡ ಮೇಲೆ ಯಾವುದೇ ವಿಧಿ-ವಿಧಾನ ಮಾಡಬಾರದು..ನನ್ನ ಸಮಾದಿಯ ಮೇಲೆ ಒಂದು ತೆಂಗಿನಗಿಡ ನೆಡಬೇಕು, ಹಾಗೆ ಮಾಡಿದರೆ ಮಾತ್ರ ತನ್ನ ಆತ್ಮಕ್ಕೆ ಶಾಂತಿ ಸಿಗುವುದು ಅಂತ ತಮ್ಮ ಬಂಧು-ಬಳಗಕ್ಕೆ, ಸ್ನೇಹಿತರಿಗೆ ಹೇಳಿದ್ದರಂತೆ. ಅವರು ತೀರಿಕೊಂಡ ಮೇಲೆ ಉಳಿದವರು ಅದರಂತೆ ಮಾಡಿದರು. ಈ ರೈತ ಮುಖಂಡರು ತಮ್ಮ ಹೆಂಡತಿ ತೀರಿಕೊಂಡಾಗ ಕೂಡ ಹೀಗೇಯೇ ಮಾಡಿದ್ದರಂತೆ. ಈಗ ಉದಾಹರಣೆ ನಿಮ್ಮ ಮುಂದೆಯೇ ಇದೆ ಈಗ..ನಿಮ್ಮ ಸ್ವಂತ ವಿಚಾರದಿಂದ ನೀವು ನಡೆಯಿರಿ.. ಬೇರೆಯವರು ಅವರ ಶೃದ್ಧೆಗೆ ತಿಳಿದಂತೆ ನಡೆದುಕೊಳ್ಳುತ್ತಾರೆ..ಅದರ ಚಿಂತೆ ನೀವು ಮಾಡದಿರಿ.

   ಪ್ರತಿಕ್ರಿಯೆ
 13. ಓದುಗ, ಬೆಂಗಳೂರು

  ನಾನು ಅರ್ಥ ಮಾಡಿ ಕೊಂಡ ಮಟ್ಟಿಗೆ ನಾಗರಾಜ್ ಸರ್ ಕೂಡಾ ಮನುಸ್ಮೃತಿ/ಶ್ಲೋಕಗಳು ಮಹಿಳೆಯ ವಿರುದ್ಧ ನಡೆಯುವ ಅತ್ಯಾಚಾರಗಳಿಗೆ ನೇರಕಾರಣವೆಂದೇನೂ ಹೇಳಿಲ್ಲ. (ಸಾವಿರಾರು ವರ್ಷಗಳಿಂದ ಹರಿದು ಬಂದ ಈ ಭಾವನೆಗಳನ್ನು ಇಂದು ಸಿನೆಮಾ ಟಿವಿ ಧಾರಾವಾಹಿಗಳು ಮುಂದುವರೆಸಿ ಜನ ಮಾನಸದಲ್ಲಿ ಈಗಾಗಲೇ ಇರುವ ಮಹಿಳಾ ವಿರೋಧೀ ಭಾವನೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ.) ಏಕೆಂದರೆ, ಅವರಿಗೂ ನಮ್ಮೆಲ್ಲರಿಗೂ ಈ ವೇದೋಪನಿಷತ್ತುಗಳನ್ನು ಓದುವ ಹಾಗೂ ಅಂತಹ ಪ್ರವಚನಗಳಿಗಿಂದು ಬೆಲೆಕೊಡುವ ವರ್ಗ ಎಷ್ಟು ದೊಡ್ಡದಿದೆಯೆಂದು ತಿಳಿದಿದೆ. ಆ ವರ್ಗ ಅಂತಹ ಬಿಂಬಿಸುವಿಕೆಯಿಂದ ಪ್ರಭಾವಿತಗೊಂಡಿರುತ್ತಿದ್ದರೆ ಅತ್ಯಾಚಾರಿಗಳ ಲಿಸ್ಟ್ ನಲ್ಲಿಂದು ಪುರೋಹಿತರ ಹೆಸರು ಬಹುಸಂಖ್ಯೆಯಲ್ಲಿರಬೇಕಿತ್ತೂ ಅಂತ ಕೂಡಾ ಅರ್ಥವಾಗುವ ವಿಚಾರ.
  ಯಾವುದೇ ವಿಚಾರಸ್ಫೂರ್ತಿಯಿಲ್ಲದಿರುತ್ತಿದ್ದರೆ ಅಜಂತಾ, ಖಜುರಾವೋ, ಹಾಗೂ ದೇವಾಸ್ಥಾನಗಳ ಗೋಪುರಗಳಲ್ಲಿ ಮಹಿಳೆ ಯಾಕೆ ಆ ತರಹ ಬಿಂಬಿಸಲ್ಪಡುತ್ತಿದ್ದಾಳೆ?ಮೊತ್ತಮೊದಲಿಗೆ ಜಾಹೀರಾತು ಅಥವಾ ಸಿನೆಮಾದಲ್ಲಿ ಮಹಿಳೆಯನ್ನು ಭೋಗದ ವಸ್ತುವಾಗಿ ಬಿಂಬಿಸಿದಾತನಿಗೆ ಸ್ಫೂರ್ತಿಯ ಬ್ಯಾಕ್-ಅಪ್ ಏನಿದ್ದಿರಬಹುದು? ತಾನೇನು ಸಾಮಾಜಿಕ, ಧಾರ್ಮಿಕ ಅಥವಾ ಸಾಂಸ್ಕೃತಿಕ ಅಪರಾಧವನ್ನಂತೂ ಮಾಡುತ್ತಿಲ್ಲವಲ್ಲ ಎಂಬ ಸಬ್ ಕಾನ್ಷಿಯಸ್ ಮೆಂಟಾಲಿಟಿಯೆ ಹೊರತು ಬೇರೇನೂ ಅಲ್ಲ.
  ಸಮಾಜದಲ್ಲಿರುವ ಆಚಾರ ವಿಚಾರಗಳಿಗೆ ಸೈದ್ದಾಂತಿಕ ತಳಹದಿ ಇದ್ದೇ ಇರುತ್ತದೆ. ಜನರು ಆ ಸಿದ್ದಾಂತವನ್ನು ಅರಿತುಕೊಂಡೇ ಒಂದು ಕ್ರಿಯೆಯನ್ನು ಆಚರಿಸಬೇಕೆಂದಿಲ್ಲ. ಆ ಸಿದ್ದಾಂತದ ಪ್ರಭಾವ, ಆ ಪ್ರಭಾವ ಸೃಷ್ಟಿಸಿರುವ ವಾತಾವರಣಗಳೇ ಸಾವಿರ ವರ್ಷಗಳ ನಂತರವೂ ಜನರನ್ನು ಆ ಕ್ರಿಯೆಗೆ ಪ್ರೋತ್ಸಾಹಿಸಬಲ್ಲುದು ಅಥವಾ ಪ್ರಚೋದಿಸಬಲ್ಲುದಾಗಿದೆ. ಪುರಾತನ, ಸನಾತನತೆಯ ಹೆಸರಿನಲ್ಲಿ ಇಂದಿಗೂ ಬಹಳಷ್ಟು ಆಚರಣೆಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವಾಗ ಮನುವಿನ ಈ ವಿಚಾರಗಳು ಇಂದು ಯಾಕೆ ಪ್ರಭಾವ ಹೊಂದಿರಬಾರದು? ಮಹಿಳೆಯ ಮೇಲೆ ದೌರ್ಜನ್ಯಗಳನ್ನು ಪ್ರಾಮಾಣಿಕವಾಗಿ ತಡೆಗಟ್ಟಬಯಸುವ ಎಲ್ಲಾರೂ ಮುಲಕಾರಣಗಳನ್ನು ಹುಡುಕುವ ಅಗತ್ಯವಿದೆ. ಆ ಕಾರಣಗಳು ಮನುಸ್ಮೃತಿಯಲ್ಲಾಗಿರಬಹುದು ಅಥವಾ ಇಂಪೀರಿಯಲಿಸ್ಟ್ ಪ್ರಾಯೋಜಿತ ಲಿಬರಲಿಸಮ್ ನಲ್ಲೂ ಇಅರಬಹುದು, ಅಥವಾ ಅವೆರಡರ ಸಂಯೋಜನೆಯಿಂದ ಕೂಡಾ ಹುಟ್ಟಿಕೊಂಡಿರಬಹುದು.

  ಪ್ರತಿಕ್ರಿಯೆ
  • ವಿಜಯ್

   @ಓದುಗ, ಬೆಂಗಳೂರು
   – [ಅವರಿಗೂ ನಮ್ಮೆಲ್ಲರಿಗೂ ಈ ವೇದೋಪನಿಷತ್ತುಗಳನ್ನು ಓದುವ ಹಾಗೂ ಅಂತಹ ಪ್ರವಚನಗಳಿಗಿಂದು ಬೆಲೆಕೊಡುವ ವರ್ಗ ಎಷ್ಟು ದೊಡ್ಡದಿದೆಯೆಂದು ತಿಳಿದಿದೆ.]
   ಹಾಗಿದ್ದಲ್ಲಿ ಮನುಸ್ಮೃತಿಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳುವ ಕಾರಣವೇನು? ಯಾರೂ ಪ್ರಶ್ನಿಸುವವರಿಲ್ಲ ಎಂದೆ?
   – ಈಗ ಯಾವ ರೀತಿಯಿಂದಲೂ ಪ್ರಸ್ತುತವಲ್ಲದ ಅದರಲ್ಲಿಯ ನಮ್ಮ ಶ್ಲೋಕಗಳನ್ನು ಮುಂದಿಡಲು ಕಾರಣಗಳೇನು? ದೆಹಲಿಯಂತಹ ಅತ್ಯಾಚಾರಗಳಿಗೆ ಈ ಶ್ಲೋಕಗಳು ಕಾರಣವಾಗಿರಬಹುದು ಎಂದು ತಿಳಿದುಕೊಂಡಿರುವ ನಾಗರಾಜರವರ ‘ಮುಗ್ಧತೆ’ಯೆ?
   – ಮೂಲ ಓದಿ ನೋಡಿ ತೀರ್ಮಾನಕ್ಕೆ ಬನ್ನಿ ಎಂದರೇನರ್ಥ? ಈಗ ನಾವು ಮನುಸ್ಮೃತಿಯನ್ನು ಓದಿ, ವಿಶ್ಲೇಶಿಸಿ ಮಾಡುವುದೇನಾದರೂ ಇದೆಯೆ? ಮಾಡುವುದರಲ್ಲೇನಾದರೂ ಅರ್ಥ ಇದೆಯೆ?
   – ಭಾರತದಲ್ಲಿ ಒಂದೇ ಧರ್ಮ, ಆಚಾರದವರಿದ್ದಾರೆಯೆ , ಮನುಸ್ಮೃತಿಯ ಪ್ರಭಾವಕ್ಕೆ ಒಳಗಾಗಿ ಹೆಣ್ಣಿನ ಬಗ್ಗೆ ನಾಗರಾಜರವರು ಹೇಳಿದಂತಹ ದೃಷ್ಡಿಕೋನ ಬೆಳೆಸಿಕೊಂಡವರು?
   – [ಮನುಸ್ಮೃತಿಯಲ್ಲಿರುವ ಶ್ಲೋಕಗಳಲ್ಲಿ ಕೆಲವನ್ನು ಇಲ್ಲಿ ನೀಡಿರುವಾಗಲೇ ಮಹಾಭಾರತ, ರಾಮಾಯಣಗಳಲ್ಲಿ ಅಲ್ಲಲ್ಲಿ ಬರುವ ವಿದುರ ನೀತಿ, ಸನತ್ಸುಜಾತ ನೀತಿ ಇತ್ಯಾದಿ ಉಪದೇಶಗಳು, ಅನೇಕ ದೃಷ್ಟಾಂತ ಕಥೆಗಳು, ಉಪಕಥೆಗಳು]
   ಭಾರತದಲ್ಲಿರುವ ಇತರ ಧರ್ಮದವರು ಕೂಡ ಇವನ್ನು ಓದಿಯೇ ಬೆಳೆದರೆ? ಅಥವಾ ಇವನ್ನು ಓದಿ ಬೆಳದವರು ಮಾತ್ರ ಅತ್ಯಾಚಾರ ಮಾಡುತ್ತಿದ್ದಾರೆಯೆ?
   – ಮನುಸ್ಮೃತಿ ಬರೆಯುವ ಮೊದಲು ಮನುಷ್ಯ ಈ ತರಹದ ವರ್ತನೆಯನ್ನು ಮಾಡುತ್ತಿರಲಿಲ್ಲವೆ? ಹೆಣ್ಣಿನ ಮೇಲೆ ಅತ್ಯಾಚಾರವನ್ನು ನಡೆಸಲಿಲ್ಲವೆ?
   – ಕಜುರಾಹೊಗೆ, ಈಗಿನ ಜಾಹಿರಾತುಗಳಿಗೆ, ಸಿನೆಮಾಗಳಿಗೆ ಪ್ರೇರಕವಾಗುವಂತಹದ್ದು ಮನುಸ್ಮೃತಿಯಲ್ಲಿ ಏನಿದೆ ಅಂತ ಹೇಳ್ತಿರ ಸ್ವಲ್ಪ.
   – [ಪುರಾತನ, ಸನಾತನತೆಯ ಹೆಸರಿನಲ್ಲಿ ಇಂದಿಗೂ ಬಹಳಷ್ಟು ಆಚರಣೆಗಳು ಸಮಾಜದಲ್ಲಿ ಚಾಲ್ತಿಯಲ್ಲಿರುವಾಗ ಮನುವಿನ ಈ ವಿಚಾರಗಳು ಇಂದು ಯಾಕೆ ಪ್ರಭಾವ ಹೊಂದಿರಬಾರದು? ]
   ಯಾವ ತರಹದ ಪ್ರಭಾವ? ಹೆಣ್ಣನ್ನು ಹೇಗಾದರೂ ಮಾಡಿ ಅನುಭವಿಸಿ, ಬಲಾತ್ಕಾರ ಮಾಡಿಯಾದರೂ ಎಂದೊ? ನಿಮ್ಮ ಹತ್ತಿರ ಉದಾಹರಣೆಗಳಿದ್ದರೆ ಅವನ್ನು ದಯವಿಟ್ಟು ಮುಂದಿಡಿ.

   ಪ್ರತಿಕ್ರಿಯೆ
 14. Manoj

  To – Shivarama,
  “ಉದಾಹರಣೆಗೆ ಹಿಂದೂ ಧರ್ಮದಲ್ಲಿ ಅದರಲ್ಲಿಯೂ ಬ್ರಾಹ್ಮಣ ಜಾತಿಯಲ್ಲಿ ಹಲವು ಅರ್ಥವಿಲ್ಲದ ಆಚರಣೆಗಳನ್ನು ಒಬ್ಬ ವ್ಯಕ್ತಿ ಸತ್ತಾಗ ಆತನ ಮಕ್ಕಳು ಮಾಡಲೇಬೇಕಾಗುತ್ತದೆ (ಅಂತ್ಯಕ್ರಿಯೆ, ಶ್ರಾದ್ಧ, ಬೊಜ್ಜ ಕಾರ್ಯಕ್ರಮ ಇತ್ಯಾದಿ). ”
  please take out your time and do research on why and how rituals are done. There is a great meaning in doing shraddha and antya kriye…. there is a lot which science could not shed light. Accept it first.
  why you ( not only you, many) always think there is nothing more than science. If doing shraddha and all is dump, it would not have sustained till now. Not all are fools.

  ಪ್ರತಿಕ್ರಿಯೆ
  • shivarama

   ಶ್ರಾದ್ಧ, ಅಂತ್ಯವಿಧಿಯ ಹಲವಾರು ಬ್ರಾಹ್ಮಣ ಆಚರಣೆಗಳು ನಂಬಿದವರಿಗೆ ಅರ್ಥಪೂರ್ಣವೆನಿಸಬಹುದು ಆದರೆ ಇವುಗಳನ್ನು ನಂಬದವರಿಗೆ ಇದೊಂದು ಹೇರಿಕೆ . ಕಡ್ಡಾಯವಾಗಿ ಇವುಗಳನ್ನು ಆಚರಿಸಬೇಕು, ಆಚರಿಸದವರನ್ನು ಬಹಿಷ್ಕರಿಸುವ ಹಾಗೂ ಸಮಾಜದಲ್ಲಿ ಕೀಳಾಗಿ ನೋಡುವ ಕಾರಣ ನಂಬಿಕೆ ಇಲ್ಲದವರೂ ಇವುಗಳನ್ನು ಆಚರಿಸುವ ಸಾಮಾಜಿಕ ಒತ್ತಡಕ್ಕೆ ಸಿಲುಕಿದ್ದಾರೆ. ಇಂಥ ಒತ್ತಾಯದ ಸಾಮಾಜಿಕ ಹೇರಿಕೆ ನಿಲ್ಲಬೇಕು, ಹಾಗಾದಾಗ ಮಾತ್ರ ಅದು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸಿದಂತಾಗುತ್ತದೆ. ಆದರೆ ಪುರೋಹಿತಶಾಹಿ ಈ ರೀತಿಯ ಆಯ್ಕೆಯನ್ನು ನಂಬದವರಿಗೆ ನೀಡುವುದಿಲ್ಲ. ಹೀಗಾಗಿ ಪುರೋಹಿತಶಾಹಿ ಮೌಲ್ಯಗಳು ಸರ್ವಾಧಿಕಾರಿ ಧೋರಣೆಯವು ಎನ್ನದೆ ವಿಧಿ ಇಲ್ಲ. ಪುರೋಹಿತಶಾಹಿ ಉದಾರ ಧೋರಣೆಯನ್ನು ಹೊಂದಬೇಕಾದ ಅಗತ್ಯ ಇದೆ.

   ಪ್ರತಿಕ್ರಿಯೆ
 15. ಜಿ.ಎನ್ ನಾಗರಾಜ್

  ಮನುಸ್ಮೃತಿಯ ಮಾತೆತ್ತಿದರೆ ಕೆಲವರಿಗೆ ವಿಪರೀತ ಬಾಧೆಯುಂಟಾಗುತ್ತದೆ ಎಂದು ಲೇಖನದಲ್ಲಿಯೇ ಹೇಳಿದ್ದೆ.ಆದರೆ ಬಾಧೆ ಮಾತ್ರವಲ್ಲ ಅವರಿಗೆ ಕಣ್ಣು ಮಂಜಾಗಿ, ಬುದ್ಧಿ ಮಂಕಾಗಿ ಮುಂಗಾಣದಂತಾಗುತ್ತದೆಂದು, ಅದರಿಂದಾಗಿ ಇಲ್ಲದ ಅಪಾದನೆಗಳನ್ನು ತಾವೇ ತಮ್ಮ ಮೇಲೆ ಹಾಕಿಕೊಂಡು ಅದನ್ನು ಲೇಖಕ ಹಾಕಿದ್ದಾನೆಂದು ಆರೋಪಿಸುತ್ತಾ ತಾವು ಉತ್ತರಿಸುವ ಹೊಣೆಯನ್ನು ಮೈಮೇಲೆ ಹಾಕಿಕೊಳ್ಳತ್ತಾರೆಂದು ಈಗ ಗೊತ್ತಾಗುತ್ತಿದೆ. ಇನ್ನು ಕೆಲವರು ರಂಜಾನ್ ದರ್ಗಾರವರ ಲೇಖನ ಮಾಲೆಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆಂದು ಭ್ರಮಿಸಿದ್ದಾರೆ. ಆದರೆ ಮುಖ್ಯ ವಿಷಯದ ಬಗ್ಗೆ ಚರ್ಚೆ ಮಾಡುವುದರಿಂದ ಪಲಾಯನ ಮಾಡಿದ್ದಾರೆ. ಮನುಸ್ಮೃತಿಯಲ್ಲಿ ಈ ಶ್ಲೋಕಗಳು ಇದ್ದಾವೋ ಇಲ್ಲವೋ ? ಅದರ ಅರ್ಥ ನೀಡಿರುವುದರಲ್ಲಿ,(ಅದನ್ನು ವಾಖ್ಯಾನ ಎಂದು ಕೆಲವರು ಹೇಳಿದ್ದಾರೆ )ಏನಾದರೂ ವ್ಯತ್ಯಾಸವಾಗಿದೆಯೇ ? ಈ ರೀತಿಯ ಚಿಂತನೆಗಳು ಇಂದಿಗೂ ಸಮಾಜದಲ್ಲಿ ಇವೆಯೋ ಇಲ್ಲವೋ ? ಈ ಚಿಂತನೆಗಳು ಪುರುಷಹಂಕಾರಕ್ಕೆ ಇಂಬು ಕೊಟ್ಟವೆಯೋ ಇಲ್ಲವೋ ? ಪುರಾಣ, ಕಾವ್ಯಗಳ ಬಗ್ಗೆ, ಜನಜನಿತ ನಂಬಿಕೆಗಳ ಬಗ್ಗೆ ಹೇಳಿರುವುದನ್ನೆಲ್ಲಾ ಇವರು ಮನುಸ್ಮೃತಿಯ ಮೇಲೇಕೆ ಎಳೆದುಕೊಳ್ಳುತ್ತಿದ್ದಾರೆ ? ಇಲ್ಲಿ ಯಾರಾದರೂ ಪಾಶ್ಚಾತ್ಯ ದೇಶಗಳಲ್ಲಿ ಯಾವುದೇ ರೇಪ್ ಆಗುವುದಿಲ್ಲವೆಂದು ಹೇಳಿದ್ದಾರೆಯೇ ? ಆಧುನಿಕ ಸಿನೆಮಾ, ಟಿವಿಗಳಲ್ಲಿ, ಜಾಹಿರಾತುಗಳಲ್ಲಿ, ನೆಟ್ ಮೇಲೆ ಸಿಗುವ ಅಶ್ಲೀಲ ಸಾಹಿತ್ಯದಲ್ಲಿ ಮಹಿಳೆಯನ್ನು ಭೋಗವಸ್ತುವಾಗಿ ಚಿತ್ರಿತವಾಗುವುದು ಮನುಷ್ಯನನ್ನು ಮಾನವ ಮೃಗವಾಗಿಸುವುದನ್ನು ಲೇಖನದಲ್ಲಿ ಎತ್ತಿ ಹೇಳಲಾಗಿದೆ.ಭಾರತದ ಬಗ್ಗೆ ಚರ್ಚಿಸುವಾಗ ವಿದೇಶಗಳಲ್ಲಿನ ಮಹಿಳಾ ಅಸಮಾನತೆಯ ಸ್ವರೂಪದ ಬಗ್ಗೆ ಅದರ ಕಾರಣಗಳ ಬಗ್ಗೆ ಇಲ್ಲಿ ವಿವರಿಸುವ ಅಗತ್ಯ ಬರಲಿಲ್ಲ ಹಾಗೆಂದ ಮಾತ್ರಕ್ಕೆ ಅಲ್ಲಿ ಸಮಾನತೆಯಿದೆ,ದೌರ್ಜನ್ಯ,ರೇಪ್ ಗಳಿಲ್ಲ ಎಂದು ಅಭಿಪ್ರಾಯವಿದೆ ಎಂದು ಅರ್ಥವಾಗುತ್ತದೆಯೇ ?
  ಇನ್ನು ಬಸವಣ್ಣನವರ, ಅಲ್ಲಮ ಪ್ರಭುವಿನ ವಿಚಾರ ಅವರು ಮಹಿಳಾ ಸಮಾನತೆಯ ವಿಷಯದಲ್ಲಿ ನೀಡಿರುವ ಕೊಡುಗೆ ಭಾರತದಲ್ಲಿಯೇ ಅಸಾಧರಣವಾದದ್ದು ಎಂಬುದು ಅವರ ವಚನಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದ ಯಾರಿಗಾದರೂ ಅರ್ಥವಾಗುತ್ತದೆ. ಅದರಲ್ಲಿಯೂ ಮಹಿಳೆಯರಿಗೆ ಸಂತೋಷವಾಗುವ ವಿಚಾರ.ಇದು ಪ್ರತ್ಯೇಕ ಲೇಖನದ ವಿಷಯವಾಗುತ್ತದೆ. ಆದರೆ ಅವರ ಮಹಿಳಾ ಸಮಾನತೆಯ ವಿಚಾರಗಳಿಂದ ಅನ್ನಪೂರ್ಣರವರಿಗೆ ಏಕೆ ದುಃಖವಾಗುತ್ತದೆ ? ಇನ್ನು ಅವರು ಹೊನ್ನು,ಮಣ್ಣು,ಹೆಣ್ಣು ಇವುಗಳನ್ನು ಒಟ್ಟಿಗೇ ಬಳಸಿದ್ದಾರೆ ನಿಜ.ಅದು ಅಷ್ಟರಮಟ್ಟಿಗೆ ಅವರ ಚಿಂತನೆಯ ಮಿತಿ. ಅದನ್ನು ಅವರ ಇತರ ವಚನಗಳ ಜೊತೆ ಸಮಗ್ರವಾಗಿಯೇ ಅರ್ಥಮಾಡಿಕೊಳ್ಳಬೇಕು.
  ಇನ್ನು ವೇದಗಳ ಮತ್ತಿತರ ವೈದಿಕ ಸಾಹಿತ್ಯದ, ಇತರ ಸ್ಮೃತಿಗಳ ವಿಚಾರ. ಮಹಿಳಾ ಅಸಮಾನತೆಯ ಬೀಜ ಬಿತ್ತಲಾಗಿರುವುದೇ ವೇದಗಳಲ್ಲಿ. ಇತರ ಸ್ಮೃತಿಗಳು ಮನುಸ್ಮೃತಿಯ ವಿಚಾರಗಳನ್ನೇ ಪ್ರತಿಬಿಂಬಿಸಿವೆ.ಕೆಲವೊಮ್ಮೆ ಇನ್ನೂ ತೀವ್ರವಾಗಿ. ಉದಾಹರಣೆಗೆ ಯಾಜ್ಞವಲ್ಕ್ಯ ಸ್ಮೃತಿ. ವೇದಗಳಲ್ಲಿ, ಬೇರೇ ಸ್ಮೃತಿಗಳ ಬಗ್ಗೆ, ಗೋದಾನ, ಭೂದಾನಗಳ ಜೊತೆ ಕನ್ಯಾದಾನವೂ ಸೇರಿದ ಪರಿಣಾಮದ ಬಗ್ಗೆ,ಪಂಚ ಮಹಾ ಪತಿವ್ರತೆಯರ ಕಥೆಗಳ ಬಗ್ಗೆ ಬೇರೇ ಲೇಖನದಲ್ಲಿ ವಿವರಿಸೋಣ .

  ಪ್ರತಿಕ್ರಿಯೆ
  • Amaresh

   “ಅವರ ಮಹಿಳಾ ಸಮಾನತೆಯ ವಿಚಾರಗಳಿಂದ ಅನ್ನಪೂರ್ಣರವರಿಗೆ ಏಕೆ ದುಃಖವಾಗುತ್ತದೆ ? ” this is another example of shameless mud slinging at readers who point out contradictions in author’s thesis. What Annapurna did was to expose the shallowness of Nagaraj’s objection against the use of the phrase ‘hennu honnu mannu’. She gave examples of vachanas by none other than Basavanna and Allama which used the phrase in the same sense as common people. If the great revolutionary thinkers like Basavanna and Allama have used the phrase, then shouldn’t Nagaraj take a few minutes to reflect on it and do self-introspection? Instead he attacks Annapurna by making flimsy allegation against her.

   ಪ್ರತಿಕ್ರಿಯೆ
 16. ವಿಜಯ್

  ಇಲ್ಲಿ ಚರ್ಚೆ ಮಾಡುವಂತಹ ‘ಮುಖ್ಯ ‘ ವಿಷಯ ಇನ್ನೇನಿತ್ತೊ ಗೊತ್ತಾಗಲಿಲ್ಲ…
  [ದಯವಿಟ್ಟು ಮೂಲವನ್ನು ಅಭ್ಯಾಸ ಮಾಡಿ. ಅದರಲ್ಲಿಯ ವಿಚಾರಗಳಿಗೂ ಇಂದಿಗೂ ಸಮಾಜದಲ್ಲಿ ಪ್ರಚಲಿತವಾಗಿರುವ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ಮೇಲೆ ಇಂತಹ ವಿಚಾರಗಳ ಪ್ರಭಾವವಿಲ್ಲವೇ ಎಂಬುದನ್ನು ವಸ್ತು ನಿಷ್ಠ ದೃಷ್ಠಿಯಿಂದ ವಿಶ್ಲೇಷಿಸಿ ತೀರ್ಮಾನ ಮಾಡಿ. ನಂತರ ವಿಷಯಾಧಾರಿತವಾಗಿ ಚರ್ಚಿಸೋಣ.]
  ಇದು ಮುಖ್ಯ ವಿಷಯ ಆಗಿದ್ದಿದ್ದಲ್ಲಿ ಮನುಸ್ಮೃತಿ ಇಂದಿಗೆ ಪ್ರಸ್ತುತವಲ್ಲ..ಅದನ್ನು ಓದಿ, ವಿಶ್ಲೇಷಣೆ ಮಾಡಿ ಆಗಬೇಕಾದದ್ದೇನೂ ಇಲ್ಲ. ಆ ವಿಶ್ಲೇಶಣೆ ಈಗಿನ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ಕೊಡುವುದಿಲ್ಲ. ಹೇಗೆ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಮುತ್ತು-ರತ್ನಗಳನ್ನು ಬೀದಿಯ ಪಕ್ಕದಲ್ಲಿ ಬಳ್ಳಗಳಲ್ಲಿ ಮಾರುತ್ತಿದ್ದರು ಎಂಬ ವೈಭವಯುತ ಕಥೆ ಈಗಿನ ವಿಜಯನಗರವನ್ನು ಹೇಗೆ ಬದಲು ಮಾಡುವುದಿಲ್ಲವೊ (ಸಂತೋಷಪಟ್ಟು, ಅಬ್ಬಾ ಅನ್ನುವುದನ್ನು ಬಿಟ್ಟು), ಅಂದಕಾಲತ್ತಿಲ್ ಮನುಸ್ಮೃತಿಯ ಅಧ್ಯಯನದಿಂದ, ಪುರಾಣಗಳ ಅಧ್ಯಯನದಿಂದ ಈಗಿನ ಮಹಿಳಾ ದೌರ್ಜನ್ಯ ತಡೆಯಲಾಗುವುದಿಲ್ಲ..ಇನ್ನಷ್ಟು ಈ ತರಹದ ಲೇಖನ ಬರೆದು ರಾಡಿಯೆಬ್ಬಿಸಬಹುದಷ್ಟೆ!
  ಇನ್ನೂ ಹುಡುಕಲೇ ಬೇಕೆಂದರೆ ಶಿಲಾಯುಗದ ಗವಿಗಳಲ್ಲಿ ವಾಸಿಸುತ್ತಿದ್ದ ಮಾನವನ ಸ್ವಭಾವದ ಮೂಲವನ್ನು ಕೆದಕಬೇಕು, ವಿಶ್ಲೇಶಿಸಬೇಕು. ಗವಿಯಲ್ಲಿ ವಾಸಿಸುತ್ತಿದ್ದ ಮಾನವನ ಕಾಲದಲ್ಲಿಯೇ ಈ ಮಣ್ಣು ಮತ್ತು ಹೆಣ್ಣಿಗಾಗಿನ ಹೊಡೆದಾಟ ಇತ್ತು. ಗಂಡು ಗುಂಪು ಕಟ್ಟಿಕೊಂಡು ಇನ್ನೊಂದು ಗುಂಪಿನ ಮೆಲೆ ಆಕ್ರಮಣ ಮಾಡುತ್ತಿದ್ದ ಮತ್ತು ಆ ಪ್ರದೇಶ/ಹೆಣ್ಣುಗಳನ್ನು ವಶಪಡಿಸಿಕೊಳ್ಳುವುದು ಮಾಡುತ್ತಿದ್ದ. ಪುರುಷನಲ್ಲಿಯ ಆಕ್ರಮಣಶೀಲತೆ, ಹೆಣ್ಣಿನಲ್ಲಿಯ ಭೀತಿ ಅಂದಿನಿಂದ ಇಂದಿನವರೆಗೆ ಸುಪ್ತವಾಗಿಯೇ ಹರಿದುಬಂದಿದೆ. ಇದು ಆಗಾಗ ಬೇರೆ-ಬೇರೆ ರೂಪಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ನಾವೀಗ ಅದನ್ನು ಸಮಾಜದ ಹೆದರಿಕೆ,ಮನ್ನಣೆ, ಪಾಪ-ಪುಣ್ಯದ ಹೆದರಿಕೆ, ನ್ಯಾಯಾಂಗದ ಹೆದರಿಕೆ ಮುಂತಾದವುಗಳನ್ನು ತೋರಿಸಿ ಕಟ್ಟಿಹಾಕುತ್ತಿದ್ದೇವೆ. ಸಂಯಮವಿಲ್ಲದ ಒಬ್ಬ ಮನುಷ್ಯ ತನ್ನೀ ಆಕ್ರಮಣಶೀಲತೆಯನ್ನು ಇನ್ನೊಬ್ಬನಿಗೆ ಹಾನಿ ಮಾಡುವುದರ ಮೂಲಕ ಪ್ರಕಟಿಸಿದರೆ, ಇನ್ನು ಕೆಲವರಲ್ಲಿ ಇದು ಒಳ್ಳೆಯ ಕಾರ್ಯವಾಗಿಯೊ, ಸೃಜನಶಿಲರೂಪದಲ್ಲಿಯೂ ಪ್ರಕಟವಾಗುತ್ತದೆ. ಆದ್ದರಿಂದ ನಮ್ಮ ಮುಂದಿರುವುದು ಈ ಆಕ್ರಮಣಶೀಲತೆಯನ್ನು ಒಳ್ಳೆಯದಕ್ಕೆ ಉಪಯೋಗವಾಗುವಂತೆ ಮಾಡುವುದು ಹೇಗೆ ಎಂಬುದು.
  ನಾವು ಇಂದು ೨೧ನೆಯ ಶತಮಾನದಲ್ಲಿ ಕೂತು ಸಾವಿರ ವರುಷಗಳ ಹಿಂದಿನ, ಈಗ ‘ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ ಗಳ ಬಾಯಲ್ಲಿ ಬಿಟ್ಟರೆ ಬೇರೆಲ್ಲೂ ಪ್ರಸ್ತುತವಲ್ಲದ ಮನುಸ್ಮೃತಿಯನ್ನು ವಿಶ್ಲೇಶಿಸಿ ಇವತ್ತಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎನ್ನುವುದು ಎಷ್ಟು ಸಮಂಜಸ ಎಂಬುದನ್ನು ಕಣ್ಣು,ಬುದ್ಧಿ ಸುಸ್ಥಿತಿಯಲ್ಲಿದೆ ಎಂದು ಭಾವಿಸಿಕೊಂಡಿರುವ ‘ಪ್ರಾಜ್ಞ’ರೆ ವಿಚಾರ ಮಾಡಬೇಕು.

  ಪ್ರತಿಕ್ರಿಯೆ
 17. Amaresh

  “ಇದು ಪ್ರತ್ಯೇಕ ಲೇಖನದ ವಿಷಯವಾಗುತ್ತದೆ”
  ” ವೇದಗಳಲ್ಲಿ, ಬೇರೇ ಸ್ಮೃತಿಗಳ ಬಗ್ಗೆ, ಗೋದಾನ, ಭೂದಾನಗಳ ಜೊತೆ ಕನ್ಯಾದಾನವೂ ಸೇರಿದ ಪರಿಣಾಮದ ಬಗ್ಗೆ,ಪಂಚ ಮಹಾ ಪತಿವ್ರತೆಯರ ಕಥೆಗಳ ಬಗ್ಗೆ ಬೇರೇ ಲೇಖನದಲ್ಲಿ ವಿವರಿಸೋಣ ”
  This is promising to be a lot of fun! 😛

  ಪ್ರತಿಕ್ರಿಯೆ
 18. Sharadhi

  As Vijay pointed out, The crux of the article is out of scope and relevance. Criminals don’t consider Manu smriti as their ‘mannual of crime index’ while planning for a crime. Manu smriti has lost its relevance/scope/meaning long ago. This article merely makes Nagaraj as another writer in Avadhi, and not more than this. Please take a contemporary problem DIRECTLY related to real-life, and try to come up with some solution/insights, at least that will be useful to the society.

  ಪ್ರತಿಕ್ರಿಯೆ
 19. ಆನಂದ್ ಸಭಾಪತಿ

  ಧನ್ಯವಾದಗಳು
  ನಾಗರಾಜ್ ಅವರೇ ಧನ್ಯವಾದಗಳು
  ನೀವು ಬರೆದದ್ದಕ್ಕೆ ಅಲ್ಲವೇ
  ಇಷ್ಟೊಂದು ಅಭಿಪ್ರಾಯಗಳು
  ಇಷ್ಟೊಂದು ಭಿನ್ನಾಭಿಪ್ರಾಯಗಳು
  ನಾನಂತೂ ನಿಮ್ಮ ಲೇಖನವನ್ನು ಮೆಚ್ಚಿಕೊಂಡಿದ್ದೇನೆ

  ಪ್ರತಿಕ್ರಿಯೆ
 20. ಎಚ್. ಸುಂದರ ರಾವ್

  ಕುರಾನ್ ಹಾಗೂ ಬೈಬಲ್ ಗ್ರಂಥಗಳು ಮಹಿಳೆಯ ಬಗ್ಗೆ ಯಾವ ನಿಲುವು ಹೊಂದಿವೆ ಎಂಬುದರ ಬಗ್ಗೆಯೂ ಜಿ.ಎನ್. ನಾಗರಾಜ್ ಅವರು ಲೇಖನ ಬರೆಯಲೆಂದು ಆಶಿಸುತ್ತೇನೆ. ಏಕೆಂದರೆ ಭಾರತೀಯರೆಂದಾಗ ಮುಸಲ್ಮಾನರೂ ಕ್ರೈಸ್ತರೂ ಸೇರುತ್ತಾರೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: