ಮನುಷ್ಯರ ಜೊತೆ ನಿಲ್ಲುವುದು ಎಲ್ಲಾ ಕಾಲದ ತುರ್ತು!

ಎನ್. ರವಿಕುಮಾರ್ ಟೆಲೆಕ್ಸ್

ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ದೆಹಲಿಯ ಜೆಎನ್‌ಯು ಗೆ ಭೇಟಿ ನೀಡಿ ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಸಂತೈಸಿದ್ದನ್ನು ದೊಡ್ಡ ಸಾಧನೆ, ಮಹಾ ಸ್ಪಂದನೆ ಎಂದು ಕೊಂಡಾಡುವಂತದ್ದು ಏನಿದೆ ಎಂದು ಯಾರಾದರೂ ಕೇಳಬಹುದು. ( ಅದು ಮಹಾಪರಾಧವೆಂಬಂತೆ ಈಗಾಗಲೆ ಭಕ್ತಗಣ ಕಿರುಚುತ್ತಿದೆ). ಹೌದು, ಅದೊಂದು ಮಹಾಸಂವೇದನೆಯೇ ಎಂದು ಭಾವಿಸಲೇಬೇಕು, ಭಾರತದ ಸಾಂಸ್ಕೃತಿಕ ವಲಯದ ಸಾಮಾಜಿಕ ಹೊಣೆಗಾರಿಕೆ ಮತ್ತು ಮನುಷ್ಯ ಸಹಜ ಸ್ಪಂದನೆಗೆ ಇನ್ನೂ ಗೆದ್ದಲು ಹಿಡಿದಿಲ್ಲ ಎಂಬುದರ ಧ್ಯೋತಕ ದೀಪಿಕ ಅವರ ಜೆಎನ್‌ಯು ಭೇಟಿ ಸೂಚಿಸುತ್ತಿದೆ.

ಮನುಷ್ಯ ತನ್ನ ಜೀವಿತ ಕಾಲದ ರಾಜಕೀಯ, ಸಾಮಾಜಿಕ,ಸಾಂಸ್ಕೃತಿಕ ತಲ್ಲಣಗಳನ್ನು ಎದುರುಗೊಳ್ಳುವುದು ಆ ಕಾಲದ ತುರ್ತು ಮತ್ತು ಹೊಣೆಗಾರಿಕೆಯೇ ಆಗಿರುತ್ತದೆ. ಅದರಲ್ಲೂ ಕಲಾವಿದರು, ನಟರು, ಸಾಹಿತಿಗಳು, ಬರಹಗಾರರ ಸಾಮಾಜಿಕ ಹೊಣೆಗಾರಿಕೆ ಎಂಬುದು ಜನಸಾಮಾನ್ಯರ ಪ್ರಚೋದಕ ಶಕ್ತಿಯಂತೆ ಕೆಲಸ ಮಾಡುವಷ್ಟು ಪ್ರಭಾವಿತಗೊಂಡಿರುವಾಗ ಈ ವಲಯಗಳು ಹೆಚ್ಚು ಜವಾಬ್ದಾರಿ ಮತ್ತು ಸಂವೇದನಾಶೀಲರಾಗಿ ವರ್ತಿಸಬೇಕು. ಆಂಧ್ರದ ಎನ್.ಟಿ ರಾಮರಾಮ್ ಕೇವಲ ನಟರಾಗಿದ್ದ ಮಾತ್ರಕ್ಕೆ ಜನರ ದೇವರಂತೆ ಆರಾಧಿಸಲ್ಪಡಲಿಲ್ಲ. ಚಿತ್ರದಲ್ಲಿ ತಮ್ಮ ಪಾತ್ರದ ಒಂದು ಸನ್ನಿವೇಶಕ್ಕೆ ಅಗತ್ಯವಿರಬಹುದಾದ ಒಂದು ಜೊತೆ ಬಟ್ಟೆಗೆ ಹತ್ತರಷ್ಟು ಬಟ್ಟೆಯನ್ನು ನಿರ್ಮಾಪಕರು ತಂದು ಕೊಡಬೇಕಿತ್ತು. ಇದು ಕಾಲ್ ಶೀಟ್ ಕೊಡುವಾಗ ಅವರು ವಿಧಿಸುತ್ತಿದ್ದ ಷರತ್ತು. ಒಂದು ಟೇಕ್‌ಗೆ ಬಳಸಿದ ಬಟ್ಟೆಯನ್ನು ಮತ್ತೆ ಅವರು ಬಳಸುತ್ತಿರಲಿಲ್ಲ. ಹೀಗೆ ಬಳಸಿದ ಬಟ್ಟೆಗಳನ್ನು ಅವತ್ತಿನ ಷೂಟಿಂಗ್ ಮುಗಿದ ತಕ್ಷಣ ತಮ್ಮ ಕಾರಿನ ಡಿಕ್ಕಿಗೆ ತುಂಬಿಕೊಂಡು ಹೊರಡುತ್ತಿದ್ದರು. ದಾರಿಯುದ್ದಕ್ಕೂ ಕಾಣ ಸಿಗುವ ಬಡವರು, ಭಿಕ್ಷುಕರು, ಎಳನೀರು , ಟೀ ಪೆಟ್ಟಿಗೆ ಅಂಗಡಿಯ ಬಡ ವ್ಯಾಪಾರಿಗಳಿಗೆ ಹಂಚುತ್ತಾ ಹೋಗುತ್ತಿದ್ದರು. ಎನ್‌ಟಿಆರ್ ಈ ಕಾರಣಕ್ಕಾಗಿಯೇ ಪಾತ್ರಗಳ ಆಚೆಗೂ ನಿಜ ಕೃಷ್ಣನಂತೆಯೂ, ಶ್ರೀರಾಮನಂತೆಯೂ ಜನರ ಮನಸ್ಸಿನಲ್ಲಿ ಭರವಸೆಯನ್ನು ಮೂಡಿಸಿದರು.

ಕನ್ನಡದ ವರನಟ ಡಾ ರಾಜಕುಮಾರ್ ಅವರು ಜನಪರವಾದ ಗೋಕಾಕ್ ಚಳವಳಿಯ ಮುಂಚೂಣಿಗೆ ನಿಂತದ್ದು, ಅವರ ಪಾತ್ರಗಳಂತೆ ಬದುಕಿದ್ದು, ಇಂದಿಗೂ ಆದರ್ಶವಾಗಿ ಉಳಿಯಲು ಮತ್ತು ಅದರಂತೆ ಅನೇಕ ಜನರಿಗೆ ಬದುಕಲು ಪ್ರೇರಣೆಯಾಗಿದ್ದನ್ನು ಮೆರೆಯಲಾದೀತೆ? ಇದರೊಂದಿಗೆ ಇತ್ತೀಚೆಗೆ ಭಾರತದ ಅನೇಕ ನಟ, ನಟಿಯರು ಕಳೆದ ಏಳು ವರ್ಷಗಳ ಹಿಂದಿನವರೆಗೂ ಈ ದೇಶದ ಸಾಮಾಜಿಕ,ರಾಜಕೀಯ, ಸಾಂಸ್ಕೃತಿಕ ದೋಷಗಳ, ಸಂಚುಗಳ ಬಗ್ಗೆ ನಿರ್ಭಯವಾಗಿ ದನಿ ಎತ್ತುತ್ತಾ ಬಂದಿದ್ದರು.ಅದಕ್ಕೊಂದು ಅವಕಾಶವೂ ಇತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅಭಿವ್ಯಕ್ತಿತನಗಳೇ ದೇಶದ್ರೋಹ ಎಂಬ ಕಟಕಟೆಗೆ ತಂದು ನಿಲ್ಲಿಸುವ ಪ್ರಭುತ್ವ ಪ್ರೇರಿತ ದ್ವೇಷಮಯ ವಾತಾವರಣವೊಂದು ನಿರ‍್ಮಾಣವಾಗಿರುವುದರಿಂದ ಈ ದನಿಗಳು ಅಜ್ಞಾತ ವನವಾಸಕ್ಕೆ ತೆರಳಿದಂತಿವೆ. ಹಾಗಂತ ಈ ಜನ ದನಿಗಳು ಸಂಪೂರ್ಣವಾಗಿ ನಿಂತಿಲ್ಲ, ಜೀವಂತವಾಗಿವೆ ಎಂಬುದನ್ನು ಟಿ.ಎಂ ಕೃಷ್ಣ ರಂತಹ ಸಂಗೀತ ಕಲಾವಿದನಲ್ಲಿ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚೇತನ್, ಬಹುಭಾಷಾ ನಟ ಮಾಧವನ್, ನಿರ್ದೇಶಕರುಗಳಾದ ಅನುರಾಗ್ ಕಶ್ಯಪ್, ವಿಶ್ವಾಸ್ ಭಾರಧ್ವಜ್ , ಟ್ವಿಂಕಲ್ ಖನ್ನ …..ಹೀಗೆ ಸಾಲು ಸಾಲು ಕಲಾವಿದರಲ್ಲಿ ಕಾಣಬಹುದಾಗಿದೆ. ಅವರ ಸಾಲಿಗೆ ಈಗ ದೀಪಿಕಾಪಡುಕೋಣೆ.

ಪತ್ರಕರ್ತೆ , ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯ ಬೆನ್ನಲ್ಲಿ ಪ್ರಶ್ನೆಗಳ ಎತ್ತಿದ ನಟ ಪ್ರಕಾಶ್ ರಾಜ್ ( ರೈ) ಅವರ ದನಿ ಅಡಗಿಸುವ ಏನೆಲ್ಲಾ ನಡೆದು ಹೋಯಿತು.? ಜೆಎನ್‌ಯು ಅಂಗಳದಲ್ಲಿ ನಿಂತು ಹಲ್ಲೆಗೆ ತುತ್ತಾದ ವಿದ್ಯಾರ್ಥಿನಿ ಆಯಿಷಾ ಘೋಷ್ ಗೆ ಕೈಮುಗಿದು ಸಾಂತ್ವಾನ ಹೇಳಿರುವ ದೃಶ್ಯ ಮತ್ತು ಆ ನಡೆಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಪಡುಕೋಣೆಯ ತೇಜೋವಧೆ ಶುರುವಿಟ್ಟುಕೊಂಡಿದೆ. ಆಕೆಯ ಹೊಸ ಚಿತ್ರ “ಛಾಪಕ್” ಮೇಲೆ ದಾಳಿ ಆರಂಭವಾಗಿದೆ. ಆಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್‌ವಾಲ್ ಎನ್ನುವ ಸಂತ್ರಸ್ತ ಹೆಣ್ಣು ಮಗಳೊಬ್ಬಳ ಕಥೆ ಆಧರಿಸಿದ ಚಿತ್ರ ಇದು. ಇಂತಹದ್ದೊಂದು ಸಾಮಾಜಿಕ ಕಳಕಳಿಯ ಚಿತ್ರವೊಂದರ ಸಂದೇಶ, ಸತ್ಯ ದೇಶದ ವಾರುಸುದಾರರು ಎಂದು ಬೊಬ್ಬೆ ಹಾಕುತ್ತಿರುವವರಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ದ್ವೇಷ-ಹಿಂಸೆ ಮಾತ್ರ . ಬಹುಶಃ ಮುಂದಿನ ದಿನಗಳಲ್ಲಿ ಆಕೆಯ ಮೇಲೆ ಇಡಿ. ಸಿಬಿಐ, ಮುಸುಕುಧಾರಿಗಳ ದಾಳಿ ನಡೆದರೂ ಆಶ್ಚರ್ಯವಿಲ್ಲ. ಬಾಲಿವುಡ್ ನ ಘಟಾನುಘಟಿ ತಾರೆಗಳು ದಿವ್ಯಮೌನಹೊದ್ದು ಮೋಜಿನಲ್ಲಿ ಮುಳುಗಿರುವಾಗ ದೀಪಿಕಾ ಎಂಬ ಹೆಣ್ಣು ಮಗಳು ಧೈರ್ಯವಾಗಿ ತನ್ನ ಜೆಎನ್‌ಯು ಅಂಗಳಕ್ಕೆ ನಡೆದು ಬಂದದ್ದು ಪಾತ್ರಗಳ ಆಚೆ ಜಿಗಿದ ನಿಜನಾಯಕಿಯಂತೆ ಕಂಡರೆ ತಪ್ಪೇನು?

“ನಿಜವಾದ ಕಲೆಯ ಮೂಲತತ್ವಗಳು ಎಂದರೆ ಅದೊಂದು ವರ್ಣನೆಯಲ್ಲ; ಅದೊಂದು ಜಾಗ್ರತ ಪ್ರಜ್ಞೆ” (The principles of tru art is not portray , but to Evoke ) ಖ್ಯಾತ ಕಾದಂಬರಿಕಾರ Jerzy kosiniski ನ ಈ ಮಾತಿನಂತೆ ಕಲೆ ಮತ್ತು ಕಲಾವಿದ ಕೇವಲ ಬಣ್ಣನೆಗಳ ಸರಕಾಗದೆ ಜನರಲ್ಲಿ ತಮ್ಮ ಸಮಕಾಲೀನ ತಲ್ಲಣಗಳ ಬಗ್ಗೆ ಜಾಗೃತಿ ಮೂಡಿಸುವ ಆದರ್ಶರೂಪವಾಗಿ ಎದೆ ತುಂಬಿಕೊಳ್ಳಬೇಕು. ಚಾಪ್ಲಿನ್ ಎಂಬ ಅಪ್ರತಿಮ ನಟ ಇಂದು ಮಿಲಿಯನ್ ಮನಸ್ಸಿನಲ್ಲಿ ಉಳಿದಿರುವುದೇ ಆತನ ಸಾಮಾಜಿಕ ಕಳಕಳಿ, ಹೊಣೆಗಾರಿಕೆಯ ಅಭಿವ್ಯಕ್ತಿತನಗಳಿಂದ ಎಂಬುದನ್ನು ಇಂದಿನ ಷೋಕಾಲ್ಡ್ ಸೂಪರ್‌ಸ್ಟಾರ್ ಗಳು ಅರ್ಥವಾದೀತೆ?

ಮನೋ ವಿಜ್ಞಾನಿ ‘ಫ್ರಾಯ್ಡ್ ‘ ಪ್ರಕಾರ “ಲೇಖಕ ತನ್ನ ಸುಪ್ತ ಸ್ತರದಲಿರುವ ಗೆಲ್ಲುವ, ಪ್ರೇಮಿಸುವ ಖ್ಯಾತಿಪಡೆವ ಬಯಕೆಗಳನ್ನು ಹೀರೋನ ಮೂಲಕ ಈಡೇರಿಸಿಕೊಳ್ಳುತ್ತಾನೆ” .

ಈ ಮಾತಿನ ಪ್ರಕಾರ ಅಸಲಿಗೆ ಹೀರೋ ಕಥೆಯೇ ಆಗಿರುತ್ತದೆ ವಿನಃ ಪಾತ್ರಧಾರಿಯಾಗಿರುವ ಮನುಷ್ಯನಲ್ಲ. ಆದರೆ ಪಾತ್ರಧಾರಿ ಕಥೆಯ ಆಚೆ ಬಂದು ನಿಜ ಬದುಕಿನಲ್ಲಿ ಜನರ ನಾಯಕನಾದಾಗಲೆ ಆತನಲ್ಲಿನ ಕಲೆ ಸಾರ್ಥಕಗೊಳ್ಳುತ್ತದೆ. ಕಥೆಯ, ನಾಟಕದ, ಚಿತ್ರದ ಹೀರೋ ಸಮಾಜದ ನಿಜ ಹೀರೋ/ ಹೀರೋಯಿನ್ ಆಗಿ ಹೊರಹೊಮ್ಮಬೇಕಾದರೆ ಆತನೊಳಗೆ ಸಾಮಾಜಿಕ ಹೊಣೆಗಾರಿಕೆಯ ಸಂವೇದನೆಯೊಂದು ಅಂತರ್ಗತವಾಗಿರಬೇಕು . ಪಾತ್ರದಲ್ಲಿ ತಲ್ಲೀನನಾಗಿ ಜನರ ನಾಯಕ/ಕಿ ನಂತೆ ಮನೋಜ್ಞವಾಗಿ ಅಭಿನಯಿಸುವ ಕಲಾವಿದ ಅಂತಿಮವಾಗಿ ನಿಜ ಜೀವನದಲ್ಲಿ ದುರಳರಂತೆಯೂ , ಹೊಣೆಗೇಡಿಯಂತೆಯೂ ಬದುಕಿರುತ್ತಾನೆ/ಳೆ. ಜನ ಅವರನ್ನು ಆರಾಧಿಸುವುದು ತೆರೆಯ ಮೇಲೆ ಕಾಣುವ ಪಾತ್ರಗಳ ಪ್ರಭಾವದಿಂದಲೆ ಹೊರತು ಅಸಲಿ ಅವರ ವ್ಯಕ್ತಿತ್ವದಿಂದಲ್ಲ ಎಂಬ ಸತ್ಯವು ಹುಚ್ಚು ಅಭಿಮಾನದ ಹಾಲಾಭಿಷೇಕ, ಜಯಕಾರಗಳ ಗದ್ದಲದಲ್ಲಿ ಮುಳುಗಿರುವ ಅವರಿಗೆ ಅರಿವಾಗುವುದೇ ಇಲ್ಲ. ಇಂತಹ ನಟರು , ಕಲಾವಿದರು, ಬರಹಗಾರರು ಕೇವಲ ಮಳೆಗಾಲದ ಅಣಬೆಗಳಂತೆ ಹುಟ್ಟಿ ಸಾಯುತ್ತಾರೆ. ಒಂದು ದೇಶದಲ್ಲಿ ಕವಿಗಳು, ಕಲಾವಿದರು, ಬರಹಗಾರರು ಎಷ್ಟರ ಮಟ್ಟಿಗೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದ್ದರು ಎಂಬುದು ಆ ದೇಶದ ನಾಗರೀಕತೆಯ ಉತ್ಕೃಷ್ಟತೆಯನ್ನೂ, ರಾಜಕೀಯವನ್ನು ನಿರ್ಧರಿಸುತ್ತದೆ.

ಹಿಂಸೆ ಮತ್ತು ದ್ವೇಷವನ್ನು ವಿರೋಧಿಸಲು ಬೇಕಿರುವುದು ಸಿದ್ದಾಂತಗಳಲ್ಲ, ಮನುಷ್ಯತ್ವ.; ದೇವರ ಪರಿಕಲ್ಪನೆಯ ಆಧಾರದಲ್ಲೇ ಹೇಳುವುದಾದರೆ ದೇವರಿಂದ ಸೃಷ್ಟಿಯಾದ ಮನುಷ್ಯರು ದೇವರಂತೆ ಬದುಕಬೇಕು. ದೇವರು ಎನ್ನುವುದು “ಕರುಣೆ-ಮೈತ್ರಿ-ಪ್ರೀತಿಯ ಮೊತ್ತ.” ಇಂತಹ ತಾತ್ವಿಕ ಗುಣವನ್ನು ಧರಿಸಿದವರು ತಾನು ಬದುಕು ಕಾಲಘಟ್ಟದ ಎಲ್ಲಾ ಬಗೆಯ ಹಿಂಸೆ,ದ್ವೇಷಗಳನ್ನು ವಿರೋಧಿಸಬಲ್ಲರು. ನೋವಿಗೆ ತುತ್ತಾದವರ ಜೊತೆ ಮನುಷ್ಯರಂತೆ ನಿಲ್ಲಬಲ್ಲರು. ಮನುಷ್ಯರು ಮತ್ತು ದುಷ್ಟರು ಎರಡೇ ವರ್ಗ ಇರುವ ಹೊತ್ತಿನಲ್ಲಿ ನಾವುಗಳು ಯಾರ ಜೊತೆ ನಿಲ್ಲಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ದ್ವೇಷ -ಹಿಂಸೆಗೆ ತುತ್ತಾಗಿ ಲೀಟರ್ ಗಟ್ಟಲೆ ರಕ್ತ ಹರಿದು, ಹೋಳಾದ ತಲೆಗೆ ದಾರಗಳ ನೇಯಿಸಿಕೊಂಡು ಸ್ವಲ್ಪವೂ ವಿಚಲಿತಗೊಳ್ಳದೆ ನಿಂತ ವಿದ್ಯಾರ್ಥಿಗಳ ಮುಂದೆ ನಿಂತು ಮಿಡಿದು ಸಂತೈಸಿದ ದೀಪಿಕಾ ಪಡುಕೋಣೆ ಎಂಬ ಅಪ್ಪಟ ಪ್ರತಿಭೆಯದ್ದು ತಮ್ಮ ಚಿತ್ರದ ಪ್ರಮೋಷನ್ ಗಿಮಿಕ್ ಎಂದು ಯಾರಿಗಾದರೂ ಅನಿಸಿದರೆ ಮೊದಲು ಅವರು ತಮ್ಮ ಕಣ್ಣು,ಹೃದಯಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು, ಸ್ವಚ್ಛ ಅಭಿಯಾನ ಆಗಬೇಕಿರುವುದು ಬೀದಿಗಳಲ್ಲಿ ಅಲ್ಲ., ದ್ವೇಷ, ಹಿಂಸೆಯ ಗಟಾರವಾಗಿರುವವರ ಅವರವರ ಎದೆಗಳಲ್ಲಿ.

 

‍ಲೇಖಕರು avadhi

January 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: