ಮನುಷ್ಯನನ್ನು ಕುರುಡಾಗಿಸುವ ದ್ವೇಷ …

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ಸಹಾಯ ಕೇಳಲು ಹೊರಡುವಾಗ ಪೋಲೆಂಡ್ ಸಮಸ್ಯೆಯನ್ನು ಹೇಳುವುದು ಬಿಟ್ಟು, ಜ್ಯೂಗಳ ಸಮಸ್ಯೆಯನ್ನೇ ಹೈಲೈಟ್ ಮಾಡಿದರೆ, ನಮ್ಮ ಮುಖ್ಯ ವಿಷಯವೇ ಅಮುಖ್ಯವಾಗಿ ಬಿಡಬಹುದಾದ ಸಾಧ್ಯತೆಯಿದೆ. ಈಗ ಮುಖ್ಯವಾಗಿರುವುದು ಪೋಲೆಂಡ್‌ ನಮ್ಮ ಕೈ ಸೇರುವುದು. ನಾವು ಅದರ ಬಗ್ಗೆ ಮಾತನಾಡಬೇಕು. ನಾವು ಮತ್ತೆ ನಮ್ಮ ದೇಶದಲ್ಲಿ ಕಾಲಿಡಬೇಕು, ಜರ್ಮನ್ನರನ್ನು ಸೋಲಿಸಬೇಕು. ಅದಕ್ಕಾಗಿ ಮಿತ್ರರಾಷ್ಟ್ರಗಳ ಸಹಾಯ ಬೇಡಬೇಕು. ಈಗ ಅದರ ಬಗ್ಗೆ ಮಾತನಾಡೋಣ ಎನ್ನುತ್ತಾರೆ ಪೋಲೆಂಡ್ ಪ್ರಧಾನಿ! 

ಇನ್ನು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ‘ನಾವು ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ರೆಫ್ಯೂಜಿಗಳನ್ನು ನಮ್ಮ‌ ದೇಶದೊಳಗೆ ಬಿಟ್ಟುಕೊಂಡಾಗಿದೆ. ಇನ್ನೇನು ಮಾಡಲು ಸಾಧ್ಯ ನಮ್ಮಿಂದ’ ಎನ್ನುತ್ತಾರೆ ಅಮೆರಿಕಾದ ಫ಼್ರಾಂಕ್‌ಫರ್ಟ ಎನ್ನುವ ನ್ಯಾಯಾಧೀಶ ಎಲ್ಲ ವಿಷಯ  ಕೇಳಿದ ನಂತರ ತುಂಬ ತಣ್ಣಗಿನ ದನಿಯಲ್ಲಿ ‘ನೀನು ಹೇಳುವುದನ್ನು ನಂಬಲಾಗುತ್ತಿಲ್ಲ’ ಎನ್ನುತ್ತಾರೆ! ಕರ್ಸ್ಕಿ ‘ನಾನು ಸುಳ್ಳಾಡುತ್ತಿಲ್ಲ’ ಎಂದರೆ ‘ಅರೆ ನೀನು ಸುಳ್ಳಾಡುತ್ತಿದ್ದೀ ಎಂದು ನಾನೆಲ್ಲಿ ಹೇಳಿದೆ… ನನಗೆ ನಂಬಲಾಗುತ್ತಿಲ್ಲ ಎಂದಷ್ಟೇ ಹೇಳಿದೆ’ ಎನ್ನುತ್ತಾರೆ!

ಇನ್ನು ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್ ಜೊತೆಗೆ ಕರ್ಸ್ಕಿ ಯಹೂದೀಯರ ದಾರುಣ ಸ್ಥಿತಿಯ ಬಗ್ಗೆ ಹೇಳಿ ಇದರಲ್ಲಿ ನಿಮ್ಮ ಹಸ್ತಕ್ಷೇಪವಾಗದಿದ್ದರೆ ಪೋಲೆಂಡ್‌ನಲ್ಲಿ ಜ್ಯೂಗಳ ಸಂತತಿ ನಾಶವಾಗುತ್ತದೆ ಎನ್ನುತ್ತಾರೆ. ಆಗ ರೂಸ್‌ವೆಲ್ಟ್ ಅದೊಂದು ಮುಖ್ಯ ವಿಷಯವೇ ಅಲ್ಲ ಎನ್ನುವಂತೆ ಅದನ್ನು ಬದಿಗೆ ಸರಿಸಿ ದೊಡ್ಡ ದನಿಯಲ್ಲಿ ‘ಮಿತ್ರರಾಷ್ಟ್ರಗಳು ಗೆಲ್ಲುತ್ತವೆ. ಯುದ್ದ ಕೊನೆಗೊಳ್ಳುತ್ತದೆ. ಇನ್ನು ಜಗತ್ತಿನಲ್ಲಿ ಯುದ್ದವೆನ್ನುವುದೇ ಇರುವುದಿಲ್ಲ. ನ್ಯಾಯ ದೊರಕುತ್ತದೆ. ಪೋಲೆಂಡ್ ಮೊದಲಿಗಿಂತ ಸುಭಿಕ್ಷವಾಗುತ್ತದೆ. ತಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ನಮ್ಮ ದೇಶ ಯಾವಾಗಲೂ ನಿಮ್ಮ ಜೊತೆಗಿರುತ್ತದೆ’ ಎಂದು ವೀರಾವೇಶದ ಮಾತುಗಳನ್ನಾಡುತ್ತಾರೆ. 

ಅವರ ಮಾತುಗಳಲ್ಲೆಲ್ಲಿಯೂ ಜ್ಯೂಗಳ ಬಗ್ಗೆ ಪ್ರಸ್ತಾಪವೇ ಇರುವುದಿಲ್ಲ! ‘ಅಂದರೆ ಅವರಿಗೆ ನನ್ನ ಮಾತು ಅರ್ಥವಾಗಲಿಲ್ಲ ಎಂದಲ್ಲ. ಯಹೂದೀಯರ ಅಳಿವು ಉಳಿವಿನ ಬಗ್ಗೆ ಮಾತನಾಡುವುದು ಅವರಿಗೆ ಬೇಕಿರಲಿಲ್ಲ ಅಷ್ಟೇ. ಎಲ್ಲರ ಗಮನ ಹಿಟ್ಲರ್‌ನ third reich ಮುಗಿಸುವ ಕಡೆಗೆ ಇತ್ತೇ ಹೊರತು ಜ್ಯೂಗಳ ಬಗ್ಗೆ ಯಾರಿಗೂ ಗಮನವಿರಲಿಲ್ಲ’ ಕರ್ಸ್ಕಿ ವಿಷಾದದಿಂದ ಹೇಳುತ್ತಾರೆ. ಆ ನಂತರ ಕರ್ಸ್ಕಿಯ ಚಹರೆ ಜರ್ಮನ್ ಪೊಲೀಸರಿಗೆ ಗುರುತಾದ್ದರಿಂದ ಮತ್ತೆ ಅವರು ಪೋಲೆಂಡಿಗೂ ಹೋಗಲಾಗುವುದಿಲ್ಲ. ಅವರು ಅಮೆರಿಕಾದಲ್ಲೇ ಉಳಿಯಬೇಕಾಗುತ್ತದೆ. ಅದಾದ ಒಂದು ವರ್ಷಕ್ಕೆ ಯುದ್ದ ಕೊನೆಗೊಳ್ಳುತ್ತದೆ. 

ಪೋಲೆಂಡ್ ಜರ್ಮನ್ನರಿಂದ ಮುಕ್ತಿ ಹೊಂದಿ ಸೋವಿಯೆಟ್ ಕೈ ಸೇರುತ್ತದೆ. ಕರ್ಸ್ಕಿಗೆ ಮತ್ತೆ ತನ್ನ ದೇಶಕ್ಕೆ ವಾಪಸ್ಸಾಗಬೇಕು ಅನ್ನಿಸುವುದೇ ಇಲ್ಲ.1952ರಲ್ಲಿ ಅಮೆರಿಕಾದಲ್ಲಿಯೇ P hd ಮಾಡಿ, ಜಾರ್ಜ್‌ಟೌನ್ ಯೂನಿವರ್ಸಿಟಿಯಲ್ಲಿ ಪ್ರೊಫ಼ೆಸರ್ ಆಗಿ ಕೆಲಸ ಮಾಡುತ್ತಾರೆ. ಅಲ್ಲಿ ಯಾರಿಗೂ ಎರಡನೆಯ ಮಹಾಯುದ್ದದ ವಿಷಯದಲ್ಲಿನ ತನ್ನ ಭಾಗವಹಿಸುವಿಕೆಯ ಬಗ್ಗೆ ಮಾತನಾಡದೇ ಉಳಿದು ಬಿಡುತ್ತಾರೆ 1978ರವರೆಗೆ! 1978ರಲ್ಲಿ ಫ್ರೆಂಚ್ ನಿರ್ದೇಶಕ ಕ್ಲೂದ್ ಲಾನ್ಸ್‌ಮನ್ ಹಾಲೋಕಾಸ್ಟ್ ಬಗ್ಗೆ ಶೂವಾ ಅನ್ನುವ ಸಿನೆಮಾ ಮಾಡಲು ಹೊರಟಾಗಲೇ ಕರ್ಸ್ಕಿ ಮೊತ್ತಮೊದಲ ಬಾರಿಗೆ ತಮ್ಮ ಮೌನ ಮುರಿಯುತ್ತಾರೆ.

ಅವರು ತಮ್ಮ ವಿಷಯವನ್ನೆಲ್ಲ ಬಹಿರಂಗಗೊಳಿಸಿದಾಗ ಅವರ ಸಹೋದ್ಯೋಗಿಗಳು ಇಷ್ಟು ಕಾಲ ನಮ್ಮೊಡನೆ ಇರುವ ಮನುಷ್ಯನ ಹಿಂದೆ ಇಂಥ ದೊಡ್ಡ ಚರಿತ್ರೆ ಇದೆಯೇ ಎಂದು ಆಶ್ಚರ್ಯಗೊಳ್ಳುತ್ತಾರಂತೆ! ಯಹೂದೀಯರ ಪ್ರಾಣ ಉಳಿಸಲು ಕರ್ಸ್ಕಿ ತೆಗೆದುಕೊಂಡ ರಿಸ್ಕ್‌ಗೆ, ಪಟ್ಟ ಕಷ್ಟಕ್ಕೆ ಇಸ್ರೇಲ್ ‌ಅವರನ್ನು ಮೆಚ್ಚಿ, ಅಲ್ಲಿಯ ಪೌರತ್ವ ನೀಡುತ್ತದೆ. 2000ನೇ ಇಸವಿಯಲ್ಲಿ ಅವರ ಸಾವಿನ ನಂತರ ಅಮೆರಿಕಾದ ಅಧ್ಯಕ್ಷ ಒಬಾಮ ಅಮೆರಿಕಾದ ಅತ್ಯುನ್ನತ ಪದವಿ ‘presidential medal for freedom’ ನೀಡಿ ಕರ್ಸ್ಕಿ ಅವರನ್ನು ಗೌರವಿಸುತ್ತಾರೆ. 

ಯಾದ್ ವಶೇಮ್ ಅವರನ್ನು Righteous among Nations ಎಂದು ಗುರುತಿಸಿ ಗೌರವಿಸುತ್ತದೆ. ಕರ್ಸ್ಕಿಯವರನ್ನು ಅಷ್ಟು ದೀರ್ಘಕಾಲ ಮೌನವಾಗಿ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದಾಗ ‘ಮಾತನಾಡಿ ಏನಾಗುವುದಿತ್ತು? ನಾನು ಜ್ಯೂಗಳನ್ನು ಉಳಿಸಲಾಗದ ಮೇಲೆ ಮಾತನಾಡಿ ಏನಾಗಬೇಕಿತ್ತು’ ಎಂದಿದ್ದರಂತೆ. The world suffers not because of the violence of bad people but because of the silence of good people ಎಂಬ ಮಾತಿದೆ. ಕರ್ಸ್ಕಿ ಮಾತನಾಡಿದ್ದರು! ಕೇಳಿಸಿಕೊಳ್ಳುವವರಿರಲಿಲ್ಲ ಅಂದರೆ ಅದು ಜಗದ ಕಳಂಕವಷ್ಟೇ…

****************

ಇದೇ ಭೂಮಿಯಲ್ಲಿ ಹುಟ್ಟಿದ ಮನುಷ್ಯ, ಇಲ್ಲೇ ಹುಟ್ಟಿದ ಮತ್ತೊಬ್ಬ ಮನುಷ್ಯನ ಬಗೆಗೆ ಹೇಗೆ ಅಷ್ಟು ನಿರ್ದಯೆಯಿಂದ ವರ್ತಿಸುತ್ತಾನೆ ಅನ್ನುವುದು ಯಾವತ್ತಿಗೂ ಅರಗಿಸಿಕೊಳ್ಳಲಾಗದ ವಿಷಯ. ಜಾತಿ, ಚರ್ಮದ ಬಣ್ಣ, ಧರ್ಮ, ಜನಾಂಗೀಯ ಶ್ರೇಷ್ಠತೆ ಈ ರೀತಿಯ ಕಾರಣಗಳಿಗಾಗಿ ದ್ವೇಷ ಹುಟ್ಟುವುದು ನಾಗರಿಕತೆ ತಲೆ ತಗ್ಗಿಸುವಂಥ ವಿಚಾರ. ಇಂಥವು ಚರಿತ್ರೆಯಲ್ಲಿ ಹಲವು ದಾಖಲಾಗಿವೆ… ಮತ್ತೆ ಕೆಲವು ಇವತ್ತಿಗೂ ಮುಗಿಯದೇ ನಡೆಯುತ್ತಲೇ ಇದೆ.

ಹೀಗೆ ಚರಿತ್ರೆಯಲ್ಲಿ ದಾಖಲಾದ ಒಂದು ಅಮಾನವೀಯ ಕತೆ ಹಿಟ್ಲರ್‌ನ ಯಹೂದಿ ದ್ವೇಷ. ಅದೇನು ಕಾರಣವಿದ್ದೀತು ಆ ಹಿಟ್ಲರ್ ಎನ್ನುವ ಮನುಷ್ಯನಿಗೆ ಒಂದು ಇಡೀ ಜನಾಂಗವನ್ನೇ ಒರೆಸಿ ಬಿಸಾಡುವಂಥ ದ್ವೇಷ? ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ದ್ವೇಷಿಸಲು ದ್ರೋಹ, ಭೂಮಿ, ರಾಜ್ಯ, ಅಧಿಕಾರ ಹೀಗೆ ನಾನಾ ಕಾರಣಗಳಿರಬಹುದು. ಆದರೆ ಒಂದು ವ್ಯಕ್ತಿ ಇನ್ನೊಂದು ಜನಾಂಗವನ್ನೇ ದ್ವೇಷಿಸಬೇಕೆಂದರೆ ಏನು ಕಾರಣವಿರಬಹುದು? ಈ ಪ್ರಶ್ನೆ ನನ್ನೊಬ್ಬಳದ್ದು ಮಾತ್ರವಲ್ಲ, ನನ್ನಂತೆ ಸಾವಿರಾರು ಜನ ಈ ಬಗ್ಗೆ ಯೋಚಿಸಿದ್ದಾರೆ.

ಎರಡನೆಯ ಮಹಾಯುದ್ದದ ನಂತರದ ದಿನಗಳಿಂದ ಇವತ್ತಿನವರೆಗೂ. ಆದರೆ ಯಾರಿಗೂ ಈವರೆಗೂ ಉತ್ತರ ಸಿಕ್ಕಿಲ್ಲ. ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಆದರೆ ಗ್ಯಾಸ್ ಛೇಂಬರ್‌ಗೆ ತಳ್ಳಿ ಲಕ್ಷಗಟ್ಟಳೆ ಜನರನ್ನು ಕೊಲ್ಲಿಸಿದ್ದಕ್ಕೆ ಯಾವುದು ಉತ್ತರವಾದೀತು? ಚರಿತ್ರೆಯಲ್ಲಿ ಯುದ್ದಗಳು, ರಕ್ತಪಾತ, ಹಿಂಸೆ, ಆಸೆಬುರುಕತನ, ಆಕ್ರಮಣ, ಅತಿಕ್ರಮಣ ಸಾಕಷ್ಟು ಸಾಮಾನ್ಯವಾದರೂ ಹಿಟ್ಲರ್‌ ರೀತಿಯಲ್ಲಿ ವ್ಯವಸ್ಥಿತವಾಗಿ ಗ್ಯಾಸ್ ಛೇಂಬರ್‌ ಕಟ್ಟಿಸಿ, ಅದರಲ್ಲಿ ಕೂಡಿ ಹಾಕಿ, ವಿಷಾನಿಲ ಹಾಯಿಸಿ, ಉಸಿರುಗಟ್ಟಿಸಿ… ಉಹು, ಇಂಥ ಮಟ್ಟದ ಕ್ರೌರ್ಯಕ್ಕೆ ಯಾವ ಸಮಜಾಯಿಷಿ ಕೊಡಲಾದೀತು? ಹಾಗೆ ನೋಡಲಿಕ್ಕೆ ಹೋದರೆ ಯಹೂದೀಯರ ಮೇಲಿನ ದ್ವೇಷ ಶುರುವಾದದ್ದು ಹಿಟ್ಲರ್‌ನಿಂದ ಅಲ್ಲವೇ ಅಲ್ಲ ಅನ್ನುತ್ತದೆ ಚರಿತ್ರೆಯ ಪುಟಗಳು. 

ಜೀಸಸ್‌ ನನ್ನು ಶಿಲುಬೆಗೇರಿಸಿ ಕೊಂದದ್ದು ಜ್ಯೂಗಳು, ಹಾಗಾಗಿಯೇ ಕ್ರಿಶ್ಚಿಯನ್ನರಿಗೆ ಜ್ಯೂಗಳ ಮೇಲೆ ತೀವ್ರ ದ್ವೇಷವಿತ್ತು ಎನ್ನಲಾಗುತ್ತದೆ. ನಮ್ಮ ದೇವರನ್ನೇ ಹೊಡೆದು ಸಾಯಿಸಿದ ಎನ್ನುವುದು ಕ್ರಿಶ್ಚಿಯನ್ನರ ಸಿಟ್ಟು. ಆದರೆ ಜ್ಯೂಗಳಲ್ಲಿ ಶಿಲುಬೆಗೇರಿಸಿ ಮರಣದಂಡನೆ ನೀಡುವ ಪದ್ದತಿಯೇ ಇರಲಿಲ್ಲವಂತೆ! ಅವರಲ್ಲಿ ಮರಣದಂಡನೆ ಎಂದರೆ ಕಲ್ಲಿನಿಂದ ಹೊಡೆದು ಸಾಯಿಸುವುದು. ರೋಮನ್ನರಲ್ಲಿ ಮಾತ್ರ ಮರಣದಂಡನೆಗೆ ಗುರಿಪಡಿಸಿದವರನ್ನು ಶಿಲುಬೆಗೇರಿಸಿ ಕೊಲ್ಲುವ ಪದ್ದತಿ ಇತ್ತಂತೆ. 

ಹಾಗಾಗಿ ಅಧಿಕಾರದಲ್ಲಿದ್ದ ರೋಮನ್ನರು ಜ್ಯೂಗಳಿಗೆ ಆ ಅಧಿಕಾರವನ್ನೇ ಕೊಟ್ಟಿರಲಿಲ್ಲವೆಂದೂ, ಹಾಗಿದ್ದಲ್ಲಿ ಜೀಸಸ್‌ನನ್ನು ಶಿಲುಬೆಗೇರಿಸಿಕೊಂದಿದ್ದು ಜ್ಯೂಗಳು ಎನ್ನುವ ವಾದವೇ ತಪ್ಪು ಎಂದೂ ಹೇಳಲಾಗುತ್ತದೆ. ವಾದ ಪ್ರತಿವಾದಗಳೇನೇ ಇರಲಿ, ಒಟ್ಟಿನಲ್ಲಿ ಈ ರೀತಿಯಲ್ಲಿ ಶುರುವಾದ ದ್ವೇಷ ಜ್ಯೂಗಳ ಹೆಗಲೇರಿ ಕುಳಿತೇ ಬಿಟ್ಟಿತು ಯಾವ ಕಾಲಕ್ಕೂ. ಚರಿತ್ರೆಯಲ್ಲಿ ಜ್ಯೂಗಳ ದ್ವೇಷದ ಬಗ್ಗೆ ಮತ್ತೂ ಹಲವು ಘಟನೆಗಳು ದಾಖಲಾಗಿವೆ. 

12ನೆಯ ಶತಮಾನದಲ್ಲಿ ಯಾರ್ಕ್ 1190 ಹತ್ಯಕಾಂಡ ಎಂದು ಗುರುತಿಸಲ್ಪಡುವ ಘಟನೆಯಲ್ಲಿ 1190 ಮಾರ್ಚ್ 16ರಂದು ಇಂಗ್ಲೆಂಡಿನ ಯಾರ್ಕ್ ನಗರದಲ್ಲಿ ಯಾರ್ಕ್ ಕ್ಯಾಸಲ್‍ನಲ್ಲಿ ಆಶ್ರಯ ಬೇಡಿ ಅಡಗಿದ್ದ 150 ಜನ ಜ್ಯೂಗಳನ್ನು- ಆ ಊರಿನಲ್ಲಿ ಇದ್ದಿದ್ದೇ ಅಷ್ಟು ಜನ ಜ್ಯೂಗಳು – ಅಷ್ಟೂ ಜನರನ್ನು ಹತ್ಯೆಗೈಯಲಾಗಿತ್ತಂತೆ.

ಅದೇ ಉರಿಯೇ 14ನೆಯ ಶತಮಾನದಲ್ಲಿ ಮತ್ತೆ ಯಹೂದೀಯರನ್ನು ಸುಟ್ಟಿದ್ದು. 14ನೆಯ ಶತಮಾನದಲ್ಲಿ ಯೂರೋಪ್‌ನಲ್ಲಿ ಪ್ಲೇಗ್ ರೋಗ ಹರಡಿತ್ತು. ಅದನ್ನು black death ಎಂದು ಕರೆಯಲಾಗುತ್ತದೆ. ಆಗ ಆ ರೋಗದ ಬಗ್ಗೆ ಸರಿಯಾಗಿ ತಿಳಿದಿಲ್ಲದ ಕಾರಣ ಬಾವಿಯ ನೀರಿಗೆ ವಿಷ ಬೆರೆಸಿದ್ದರಿಂದ ಬಂದಿತು ಎಂದು ಸುದ್ದಿ ಹಬ್ಬುತ್ತದೆ. ಅದನ್ನು ಬೆರೆಸಿದ್ದು ಜ್ಯೂಗಳು ಎಂದೂ ಸುದ್ದಿ ಹರಡುತ್ತದೆ. 

ನಿಜಕ್ಕೂ ಹೇಳಬೇಕೆಂದರೆ ಅದಕ್ಕೆ ಜ್ಯೂಗಳು ಸಾರ್ವಜನಿಕ ಬಾವಿಯನ್ನು ಹೆಚ್ಚು ಉಪಯೋಗಿಸದೇ ಇದ್ದ ಕಾರಣಕ್ಕೆ, ತಿನ್ನುವ ಮೊದಲು ಕೈ ತೊಳೆಯುವುದು ಒಂದು ಧಾರ್ಮಿಕ ಪದ್ದತಿಯಾದ್ದರಿಂದ ತಪ್ಪದೇ ಕೈ ತೊಳೆಯುತ್ತಿದ್ದಿದ್ದಕ್ಕೆ, ಶೌಚಕ್ಕೆ ಹೋಗಿ ಬಂತರ ಕೈ ತೊಳೆಯುವುದು ಕಡ್ಡಾಯವಾಗಿದ್ದಕ್ಕೆ…ಹೀಗೆ ನಾನಾ ಕಾರಣಗಳಿಗಾಗಿ ಸತ್ತವರಲ್ಲಿ ಜ್ಯೂಗಳ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ‘ಅಲ್ಲಾ ಎಲ್ಲರಿಗೂ ಬರುವ ಈ ರೋಗ ಇವರಲ್ಲಿ ಮಾತ್ರ ಜಾಸ್ತಿ ಜನಕ್ಕೆ ಬರಲ್ಲ. ಅಂದರೆ ಅವರೇ ವಿಷ ಬೆರೆಸುತ್ತಿದ್ದಾರೆ’ ಎಂದುಕೊಂಡು ಅಪಾರ ಸಂಖ್ಯೆಯಲ್ಲಿ ಯಹೂದೀಯರನ್ನು ಕೊಂದುಹಾಕಿದ್ದರಂತೆ! ದ್ವೇಷ ಎಂಬುದು ಮನುಷ್ಯನನ್ನು ಕುರುಡಾಗಿಸುವ ಪರಿ ಇದು! 

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು Avadhi

November 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: