ಚಂದ್ರಪ್ರಭ ಕಠಾರಿ
**
ಮಾನವನನ್ನು ಒಳಗೊಂಡು ಸಕಲ ಜೀವರಾಶಿಯು ಸಹಬಾಳ್ವೆಯಿಂದ ಸುಖವಾಗಿ ಬಾಳುವ ಆದರ್ಶ ಕಲ್ಪನೆಯ ರಾಜ್ಯ –ಯುಟೊಪಿಯ (utopia). ಇದಕ್ಕೆ ತದ್ವಿರುದ್ಧವಾಗಿ ಅಶಾಂತಿಯಿಂದ ಕೂಡಿದ ಹಿಂಸೆ, ಭಯದ ವಾತಾವರಣದಲ್ಲಿ ಮಾನವ ಹತ್ಯೆಗಳು ಸಹಜವೆಂಬಂತೆ ಆಗಿ ಬದುಕು ಸಾಗಿಸುವುದಿರಲಿ, ಪ್ರತಿಕ್ಷಣ ಜೀವಂತವಾಗಿ ಉಳಿಯುವುದಕ್ಕೆ ಹೆಣಗಾಡ ಬೇಕಾದ ಸಮಾಜವನ್ನು ಡಿಸ್ಟೊಪಿಯ (dystopia) ಎಂದು ಕರೆಯುತ್ತಾರೆ. ‘ರೂಪಾಂತರ’ ಕನ್ನಡ ಸಿನಿಮಾವು ಹಾಗೆ ಡಿಸ್ಟೊಪಿಯ ಜಗತ್ತನ್ನು ಹೋಲುವ, ಮನಸ್ಸನ್ನು ಘಾಸಿಗೊಳಿಸುವಂಥ ದೃಶ್ಯಗಳಿಂದ
ಆರಂಭವಾಗುತ್ತದೆ. ದೂರದಲ್ಲಿ ಹೊತ್ತಿ ಉರಿದು ಹೋದ ಕಟ್ಟಡಗಳು. ಹೊಗೆ ತುಂಬಿದ ವಾತಾವರಣದಲ್ಲಿ ನೆಲ ಸೇರಿ ಮರಗಿಡಗಳು ಎಲ್ಲವೂ ಕಪ್ಪುಕಪ್ಪು. ಕೈಯಲ್ಲಿ ಚಿತ್ರವಿಚಿತ್ರ ಬಂದೂಕುಗಳನ್ನು ಹಿಡಿದು ಬದುಕುಳಿದವರ ಬೇಟೆಗಾಗಿ ಕಾದ ಅಲ್ಲೊಂದಷ್ಟು ಮನುಷ್ಯರು ಅವರೂ ಕಪ್ಪುಕಪ್ಪು. ಯುದ್ಧ ಮುಗಿದು ಮನುಜಕುಲ ಸೇರಿ ಎಲ್ಲವೂ ನಾಶವಾಗುತ್ತಿರುವ ಹೊತ್ತಲ್ಲಿ ಹಿನ್ನೆಲೆಯಲ್ಲಿ ಆಗಾಗ ಕೇಳಿ ಬರುವ ಬಂದೂಕು ಸಿಡಿಮದ್ದುಗಳ ಸದ್ದು.
ಉಸಿರಾಡಲು ಗಾಳಿ ಇಲ್ಲ. ತಿನ್ನಲು ಅನ್ನವಿರಲಿ ದಾಹಕ್ಕೆ ತೊಟ್ಟು ನೀರಿಗಾಗಿ ಹಾಹಾಕಾರ, ಹಿಂಸಾಚಾರ. ಹಸಿರು ತುಂಬಿ, ಸುಖ ಸಂತೋಷದಿಂದ ನಳನಳಿಸುತ್ತಿದ್ದ ಭೂಮಿಗೆ ಇಂತಹ ದುರ್ಗತಿ ಬಂದದ್ದಾದರೂ ಹೇಗೆ? ʼಒಳ್ಳೆಯತನ ಸತ್ತು ಈ ನರಕ ಸೃಷ್ಟಿಯಾಯಿತು ಅಂತಾದರೆ ಒಳ್ಳೆಯತನವನ್ನು ಕೊಂದವರಾರು?ʼ ಎಂದು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಹುಡುಕಲೆಂಬಂತೆ, ಎಲ್ಲವೂ ನಾಶವಾಗುವಾಗ ಕತೆಗಳನ್ನು ಹೇಳುತ್ತ ಅವುಗಳನ್ನೇ ಜೀವಂತವಾಗಿರಿಸುವ ಉಮೇದು ಹೊತ್ತ ಅಲೆಮಾರಿ ವೃದ್ದನೊಬ್ಬನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಕತೆಯನ್ನು ಹೇಳುವ ಮೂಲಕ ಸಿನಿಮಾ ತೆರೆದುಕೊಳ್ಳುವುದು ಕುತೂಹಲವನ್ನು ಹುಟ್ಟು ಹಾಕುತ್ತದೆ. ವೃದ್ದ ಹೇಳುವುದು, ಒಂದಲ್ಲ ನಾಲ್ಕು ಕತೆಗಳು.
ಜನರನ್ನು ಹಿಂಸಿಸಿ ಅನೈತಿಕ ಬದುಕು ಸಾಗಿಸುವ ಬಾಡಿಗೆ ಪುಡಿರೌಡಿ, ಮಳೆ ಬಾರದೆ ಸಾಲದ ಸುಳಿಯಲ್ಲಿ ಸಿಕ್ಕ ವಯಸ್ಕ ರೈತ, ಹರೆಯಕ್ಕೆ ಬಂದ ದಾರಿ ತಪ್ಪಿದ ಯುವಕ ಮತ್ತು ಪುಟ್ಟಮಗುವನ್ನು ಹೊತ್ತು ಹಸಿವು ನೀಗಿಸಲು ಭಿಕ್ಷಾಟನೆ ಮಾಡುವ ಯುವತಿ ಈ ನಾಲ್ಕು ಕತೆಗಳ ಮುಖ್ಯ ಪಾತ್ರಧಾರಿಗಳು. ಕತೆಯೊಳಗೆ ಕತೆಗಳಾಗಿ, ದೃಶ್ಯಗಳು ಪೋಣಿಸಿಕೊಂಡು ಒಂದಾದ ಮೇಲೊಂದರಂತೆ ಪದರಗಳಲ್ಲಿ (in layers) ಬಿಚ್ಚಿಕೊಳ್ಳುವ ʼರೂಪಾಂತರʼ ಅಂಥಾಲಜಿ ಪ್ರಕಾರದ ಸಿನಿಮಾವನ್ನು ನಿರ್ದೇಶಕ ಮಿಥಿಲೇಶ್ ಎಡವಲತ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ನಾಲ್ಕೂ ಕತೆಗಳಲ್ಲಿ ಅನಿರೀಕ್ಷಿತ ಘಟನೆಗಳನ್ನು ಸೃಷ್ಟಿಸಿ, ಅದರ ಸುತ್ತ ಚಿತ್ರಕತೆಯನ್ನು ಜಾಣ್ಮೆಯಿಂದ ನಿರ್ದೇಶಕ ಮಿಥಿಲೇಶ್ ಅವರೇ ರಾಜ್ ಬಿ ಶೆಟ್ಟಿ ಜೊತೆಗೂಡಿ ಹೆಣೆದಿದ್ದಾರೆ. ಆ ಘಟನೆಗಳು ಸಿನಿಮಾದ ಪ್ರಮುಖ ಪಾತ್ರಧಾರಿಗಳೇ ಆಗಿ ಕಾಡುವಂತಿವೆ. ಮನುಷ್ಯ ಸೇರಿ ಜೀವಸಂಕುಲಗಳು ಜೈವಿಕತೆಯಿಂದ ಭೌತಿಕವಾಗಿ ರೂಪಾಂತರವಾಗುವುದು ನಿಸರ್ಗ ಸಹಜ ಕ್ರಿಯೆ. ಆದರೆ, ಬೌದ್ಧಿಕವಾಗಿ ರೂಪಾಂತರಗೊಳ್ಳುವ ಅಸಹನೀಯವಾದ ಪ್ರಕ್ರಿಯೆಗೆ ಮನೋಬಲದ ಅಗತ್ಯತೆ ಅನಿವಾರ್ಯವಾದುದು ಎಂದು ಅಂಥಾಲಜಿ ಸಿನಿಮಾ ಪ್ರತಿಪಾದಿಸುತ್ತದೆ.
ಅದನ್ನು ಡಿಸ್ಟೊಪಿಯದ ವೃದ್ಧ ಹೊಂದಿದ್ದ ಪುಟ್ಟ ಪೆಟ್ಟಿಗೆಯಲ್ಲಿ ಕೂಡಿಟ್ಟ ಚಿಟ್ಟೆಯ ಗೂಡನ್ನು ಪ್ರತಿಮಾತ್ಮಕವಾಗಿ ಆಗಾಗ್ಗೆ ತರುವ ಮೂಲಕ ನಿರೂಪಿಸುತ್ತಾರೆ. ಕೈಕೆಯೀ ತನ್ನ ಗಂಡ ದಶರಥನಿಂದ ಪಡೆದ ವರದಂತೆ, ಜೀವನದ ಮಹದಾಸೆಯಾದ ನಗರ ವೀಕ್ಷಣೆಯ ವರವನ್ನು ಪತಿಯಲ್ಲಿ ಕೇಳುವ ರೈತನ ಹೆಂಡತಿ, ಬೆಂಗಳೂರಿಗೆ ಬಂದು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸಿಲುಕಿ ಚಿಕಿತ್ಸೆಗೆ ದುಡ್ಡಿಲ್ಲದೆ ಗಂಡನಲ್ಲಿಯೇ ದಯಾಮರಣ ಬೇಡುವ ದೃಶ್ಯ ಮಾನವೀಯತೆಗಿಂತ ಹಣವೇ ಹೆಚ್ಚೆನ್ನುವ ನಗರೀಕಲೋಕದ ನಿಷ್ಕುರಣೆ, ಕೌರ್ಯವನ್ನು ಬಯಲು ಮಾಡುತ್ತದೆ. ಆದರೆ – ಅದೇ ನಗರದಲ್ಲಿ, ಅತ್ಯಾಚಾರಕ್ಕೆ ಒಳಗಾಗಿ ಮಗುವನ್ನು ಹೊಂದಿದ ಭಿಕ್ಷುಕಿಯ ಚರ್ಮದ ಬಣ್ಣದ ಕಾರಣಕ್ಕಾಗಿ ಮಕ್ಕಳ ಕಳ್ಳಿಯೆಂದು ಬಿಂಬಿಸಿ ಅಪಹರಣದ ಆರೋಪವನ್ನು ಸುಶಿಕ್ಷಿಕ ಸಮಾಜ, ಪೊಲೀಸ್ ವ್ಯವಸ್ಥೆ ಹೊರಿಸಿ ಬಂಧಿಸಿದಾಗ, ತಪ್ಪಿಸಿಕೊಳ್ಳಲು ನೆರವಾಗುವ ಮನುಷ್ಯತ್ವ ಮೆರೆಯುವ ಹೃದಯವು ಇವೆ. ಯಾರೂ ಕೇಳಿರದ ಭಿಕ್ಷುಕಿ ಆಡುವ ಅರ್ಥವಾಗದ ಭಾಷೆ ರೂಪಕವಾಗಿ, ನಾಗರೀಕತೆ ಕಂಡ ವ್ಯವಸ್ಥೆಗೆ ಬಡವರ ಹಸಿವಿನ ಭಾಷೆ ಅರ್ಥವಾಗುವುದಿಲ್ಲ ಎಂದು ಸಂಕೇತಿಸುತ್ತದೆ. ಅಂಥಾಲಜಿಯಲ್ಲಿ ಬರುವ ಇವೆರೆಡು ಕಥಾದೃಶ್ಯಗಳು ಉಳಿದೆರೆಡು ಉಪಕತೆಗಳಿಗಿಂತ ಮಾನವೀಯ ಮೌಲ್ಯವನ್ನು ಶೋಧಿಸುತ್ತವೆ.
ಪಬ್ ಜಿ ಗೇಮಿನಂತೆ ಕಾಣುವ ಕಂಪ್ಯೂಟರ್ ಆಟದಲ್ಲಿ ನಿರಂತರ ತೊಡಗಿ ಆ ಮೂಲಕ ಮಾದಕವಸ್ತು ವ್ಯಸನಿಯಾಗುವ ಯುವಕನ ಕತೆಯ ಅಂಥಾಲಜಿಯಲ್ಲಿ – ಬಾಲಕನಿಗೆ ಬಿಗಿದ ಸರಪಳಿಯ ದೃಶ್ಯಗಳು, ಬಾಲ್ಯದಲ್ಲಿ ಪೋಷಕನಿಂದ ಅನುಭವಿಸಿದ ಹಿಂಸೆಯ ಮರೆಯಲಾರದ ನೆನಪುಗಳನ್ನು ತೂಗು ಹಾಕಿದ ಸೊಂಟದ ಬೆಲ್ಟ್ ಗಳ ಮಧ್ಯೆ ಸಿಲುಕಿದಂತೆ ತೋರುವ ದೃಶ್ಯಗಳು ರೂಪಕವಾಗಿ ಗಮನ ಸೆಳೆಯುತ್ತದೆ. ಆದರೆ ಬಾಲ್ಯದ ಕಹಿ ನೆನಪುಗಳಲ್ಲಿ ನರಳುವ, ಕೊನೆಯಲ್ಲಿ ರೂಪಾಂತರಗೊಂಡು ಹಲವು ಪುಟ್ಟಮಕ್ಕಳ ಜೀವಕ್ಕೆ ಮಾರಕವಾಗದೆ ತಾನೇ ಸ್ಪೋಟಗೊಳ್ಳುವ ಯುವಕ ಪಾತ್ರ ಪೋಷಣೆಯಲ್ಲಿ ಅವಸರಿಸುತ್ತದೆ. ಇನ್ನು, ಕ್ಷುಲ್ಲಕ ಸಂಗತಿಯನ್ನು ಪ್ರಮಾದವಾಗಿ ಪರಿಗಣಿಸಿದ ಪುಡಿರೌಡಿ ಮುಗ್ಧ ಯುವಕನನ್ನು ಹೊಡೆದಾಟಕ್ಕಿಳಿಸಿ ಕಾದಾಡುವ ದೃಶ್ಯಗಳು ಲಂಬಿತವಾಗಿವೆ. ಅಂಥಾಲಜಿಗೆ ಈ ಭಾಗವು ಹೊಂದಿಕೆಯಾಗದೆ ಪ್ರತ್ಯೇಕವಾಗಿ ಉಳಿಯುತ್ತವೆ. ಸಿನಿಮಾದಲ್ಲಿ ಕಲಾವಿಭಾಗ ಮತ್ತು ಪ್ರಸಾದನವು ಮೆಚ್ಚುವಂತಿದೆ, ಶ್ಲಾಘನೀಯವಾಗಿದೆ. ಅದನ್ನು ಡಿಸ್ಟೊಪಿಯನ್ ಜಗತ್ತಿನ ದೃಶ್ಯಗಳನ್ನು ಕಟ್ಟುವಲ್ಲಿ ಮತ್ತು ಭಿಕ್ಷುಕಿ ನಟಿಯನ್ನು ರೂಪಿಸಿರುವುದರಲ್ಲಿ ಗುರುತಿಸಬಹುದು.
ಪಾತ್ರವರ್ಗದಲ್ಲಿ ರೈತನ ಮಡದಿಯಾಗಿ ಹನುಮಕ್ಕ ಮತ್ತು ಬಡರೈತನಾಗಿ ಹಿರಿಯ ರಂಗಕಲಾವಿದ ಸೋಮಶೇಖರ್ ಬೋಳೆಗಾಂವ್
ಸಹಜ ನಟನೆಯಿಂದ ಮನಮುಟ್ಟುತ್ತಾರೆ. ಈ ದಂಪತಿಗಳಾಡುವ ಬಾಗಲಕೋಟೆಯ ಕನ್ನಡ ಸೊಗಡಿನ ಸಂಭಾಷಣೆಯು ಸಹಜವಾಗಿ
ಹರಿದು ಮತ್ತೆ ಮತ್ತೆ ಕೇಳುವಂತಿದೆ. ಕಾನ್ಸ್ ಟೇಬಲ್ ಆಗಿ ಸಂಯಮದ ನಟನೆಯಿಂದ ಭರತ್ ಜಿಬಿ ಗಮನ ಸೆಳೆದರೆ, ಭಿಕ್ಷುಕಿಯಾಗಿ ಲೇಖಾ ನಾಯ್ಡು ಅವರ ಅದ್ಭುತ ನಟನೆ ಮನದಲ್ಲಿ ಕೆಲ ಕಾಲ ಉಳಿದು ಬಿಡುತ್ತದೆ. ಅಂಜನ್ ಭಾರದ್ವಾಜ್ ಡಾರ್ಕ್ ವೆಬ್ ವ್ಯಸನಿಯಾಗಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರದು ಎಂದಿನ ಸಹಜ ನಟನೆ. ಶಿವಮ್ಮ ಯರೇಹಂಚಿನಾಳ ಸಿನಿಮಾದ ಯುವ ನಿರ್ದೇಶಕ ಜೈಶಂಕರ್ ಆರ್ಯನ್ ನಟಿಸಿರುವುದು ವಿಶೇಷವಾಗಿದೆ. ಅಂಥಾಲಜಿ ಪ್ರಕಾರದ ಸಿನಿಮಾದಲ್ಲಿ ಹಲವು ಕತೆಗಳು ವಿಭಿನ್ನ ಸ್ತರಗಳಲ್ಲಿ ಹರಿದು ಕೊನೆಗೆ ಒಂದೆಡೆ ಸಮಾಪ್ತಿಯಾಗುವಂತೆ ಇಲ್ಲಿ ಕೂಡ ನಾಲ್ಕು ಕಥಾದೃಶ್ಯಗಳ ಪಾತ್ರಗಳು ಊರದೇವಿಯ ಮೆರವಣಿಗೆಯ ಸನ್ನಿವೇಶದಲ್ಲಿ ಒಂದೆಡೆ ಸೇರುತ್ತಾರೆ. ಆದರೆ ಅವರನ್ನು ಬಲವಂತವಾಗಿ ತಂದಂತಿದೆ.
ಬೆಂಗಳೂರೆಂಬ ನಗರದಲ್ಲಿ ಸಾಗುವ ಸಿನಿಮಾ, ನಗರೀಕತೆಯ ಅಪಸವ್ಯಗಳನ್ನು, ಸುಶಿಕ್ಷಿತ ಸಮಾಜದ ಸೊಗಲಾಡಿತನವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡ ಸಿನಿಮಾಕ್ಕೆ ಡಿಸ್ಟೊಪಿಯನ್ ಪ್ರಕಾರವನ್ನು ಚಿಕ್ಕದಾಗಿಯಾಗಿದರೂ ʼರೂಪಾಂತರʼ ಸಿನಿಮಾ ಪರಿಚಯಿಸುವುದು ಸ್ವಾಗತಾರ್ಹ. ಆದರೆ, ವಾಸ್ತವದ ನೆಲೆಯ ಕತೆಗಳನ್ನು ಡಿಸ್ಟೊಪಿಯನ್ ಜಗತ್ತಿನ ಮೂಲಕ ಹೇಳುವ ಔಚಿತ್ಯವೇನು? ತಿಳಿಯುವುದಿಲ್ಲ. ಭಿಕ್ಷುಕಿ, ರೈತರ ಸಂವೇದನಾಶೀಲ ಕಥಾಚಿತ್ರಗಳು ಡಿಸ್ಟೊಪಿಯನ್ ಸಿಂಹಾವಲೋಕನದಲ್ಲಿ ಹೇಳುವಾಗ, ಅವು ಕಟ್ಟಿಕೊಡುವ ಅಮಾನುಷ ಭೀಕರತೆಯನ್ನು ತೆಳುಗೊಳಿಸಿದಂತೆ ಆಗುತ್ತದೆ. ಇಂತಹ ಕೆಲವು ಗಮನಿಸಲೇಬೇಕಾದ ಕುಂದುಗಳು ಸಿನಿಮಾದಲ್ಲಿ ಇವೆಯಾದರೂ ಒಮ್ಮೆ ನೋಡಿ ಮೆಲುಕು ಹಾಕಬೇಕಾದ ಚರ್ಚಿಸಬೇಕಾದ ಸಿನಿಮಾ ʼರೂಪಾಂತರʼವಾಗಿದೆ.
0 ಪ್ರತಿಕ್ರಿಯೆಗಳು