ಮನಸು ಕಳೆದ ಕಾಲದ ಕಡೆ ತಿರುಗಿ ನೋಡಲಾರoಭಿಸುತ್ತದೆ..

ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್ ಅವರ ಹೊಸ ಕೃತಿ- ಬೆಂಚಿನ ನೆಪದಲ್ಲಿ

ಮೈಸೂರಿನ ‘ಅಭಿರುಚಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಹಿರಿಯ ಸಾಹಿತಿ ಡಾ ಎಲ್ ಸಿ ಸುಮಿತ್ರಾ ಅವರು ಈ ಕೃತಿಯನ್ನು ಕಂಡ ರೀತಿ ಇಲ್ಲಿದೆ.

**

ಲೇಖಕ ಕಡಿದಾಳ್ ಪ್ರಕಾಶ್ ಅವರು ಬರೆದ ಮೂರನೇ ಪುಸ್ತಕ. ಇದು ಸ್ಮೃತಿ ಚಿತ್ರಗಳನ್ನು ಒಳಗೊಂಡಿದೆ. ನನ್ನ ಪರಿಸರದ ಚಿತ್ರಗಳು ಎಂಬ ಉಪ ಶೀರ್ಷಿಕೆ ಇದೆ. ಲೇಖಕರ ಬಾಲ್ಯದ ನೆನಪುಗಳನ್ನು ನವಿರು ಹಾಸ್ಯದ ಜತೆಗೆ ಬರೆದಿದ್ದಾರೆ. ಸರಾಗವಾಗಿ ಓದಿಸಿಕೊಳ್ಳುತ್ತದೆ. ಅರವತ್ತು ದಾಟಿದ ನಂತರ ಮುಂದೆ ನೋಡಲು ಬಹಳ ದೂರ ಇರುವುದಿಲ್ಲ ಆದ್ದರಿಂದ ಮನಸು ಕಳೆದ ಕಾಲದ ಕಡೆ ತಿರುಗಿ ನೋಡಲಾರoಭಿಸುತ್ತದೆ ಎಂದು ನನ್ನ ಅನುಭವ ಸಹಾ

ಇದು ಕಳೆದ ಕಾಲದ ಕುರಿತ ಹಳಹಳಿಕೆ ಅಲ್ಲ. ಹೀಗಿತ್ತು ಅಂತ ಹೇಳುವ ಅಪೇಕ್ಷೆ. ಲೇಖಕ ಪ್ರಕಾಶ್ ಅವರ ಊರು ನಾನು ಹುಟ್ಟಿ ಬೆಳೆದ ಲಕ್ಷ್ಮೀಪುರದ ಸಮೀಪ ಎರಡು ಕಿ ಮೀ ಅಂತರದಲ್ಲಿ ಇರುವುದರಿಂದ ಈ ಪುಸ್ತಕದ ಪರಿಸರ ಮತ್ತು ವ್ಯಕ್ತಿಗಳು ನನಗೂ ಪರಿಚಿತ. ಕಡಿದಾಳು ಶಾಮಣ್ಣ ನನಗೆ ಹೈಸ್ಕೂಲ್ ನಲ್ಲಿ ಮೇಷ್ಟ್ರು ಆಗಿದ್ದರು. ಪ್ರಕಾಶ್ ಅವರ ಅವರ ಮೂರನೇ ಅಣ್ಣ ದಯಾನಂದ ತೀರ್ಥಹಳ್ಳಿಯಲ್ಲಿ ಆರಂಭಿಸಿದ ಉದ್ಯಾನ ಕಲಾ ಸಂಘ ಮತ್ತು ಅವರ 'ವಿಹಂಗಮ' ನರ್ಸರಿಗಳ ಕಾರಣದಿಂದ ಅವರ ಒಡನಾಟ ಇದೆ. ಪ್ರಕಾಶ್ ಅವರು ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಆದಮೇಲೆ ಅವರ ಚಟುವಟಿಕೆಗಳನ್ನು ಗಮನಿಸುತ್ತಿರುವ ನನಗೆ, ಯಾವಾಗಲೂ ಒಂದಿಲ್ಲೊಂದು ಸಾರ್ವಜನಿಕರ ಕೆಲಸ ಮಾಡುವ ಅವರು ಹಿರಿಯ ನಾಗರಿಕ ಆದಮೇಲೆ ಮೂರು ಪುಸ್ತಕ ಬರೆದು ನಾಲ್ಕನೆಯದು ಪ್ರಕಟಣೆಯ ಹಂತದಲ್ಲಿರುವುದು ಆಶ್ಚರ್ಯವಲ್ಲ. ಅಷ್ಟು ಸಮೃದ್ಧ ಅನುಭವಗಳು ಅವರಲ್ಲಿವೆ.

ಸಹಜವಾಗಿಯೆ ಬಾಲ್ಯದ ನೆನಪು, ಅಜ್ಜಿಮನೆ, ತೀರ್ಥಹಳ್ಳಿ ಹಾಸ್ಟೆಲ್, ಸೋಮಾಚಾರ್ ಅಂಗಡಿ ಪ್ರಬಂಧಗಳು ಇಷ್ಟವಾದವು. ಐದಾರು ದಶಕಗಳ ಹಿಂದಿನ ನಮ್ಮ ಗ್ರಾಮೀಣ ಪರಿಸರದಲ್ಲಿ ಮನೆಯಲ್ಲಿ, ಸ್ಕೂಲ್ ನಲ್ಲಿ ಹಿರಿಯರ ಮಾತಿಗೆ ವಿಧೇಯರಾಗಿರುತ್ತಿದ್ದ ಒಂದು ಚಿತ್ರ ಇಲ್ಲಿ ಮತ್ತೆ ಮತ್ತೆ ಕಾಣುತ್ತದೆ. ಆಗಿನ ನಮ್ಮ ಅವಶ್ಯಕತೆಗಳೇ ಕಡಿಮೆ. ಬೇಡ ಅಂದುದನ್ನು ಮಾಡುತ್ತಿರಲಿಲ್ಲ. ಈ ಆರು ದಶಕಗಳಲ್ಲಿ ಎಲ್ಲವೂ ಬದಲಾಗಿ ಟೀನ್ ಏಜ್ ಅನ್ನುವುದು ಸೆಲೆಬ್ರೇಶನ್ ವಿಷಯ ಆಗಿದೆ. ಮಕ್ಕಳು ತಮಗೂ ಪ್ರೈವೆಸಿ ಬೇಕು, ತಮ್ಮ insta ಖಾತೆಗಳನ್ನು ಅಮ್ಮಂದಿರು ನೋಡಬಾರದು ಅಂತ ಹೇಳುವ ಸ್ಥಿತಿ ಬಂದಿದೆ. 

ಪ್ರಕಾಶ್ ಬರೆದಿರುವ ಹಾಸ್ಟೆಲ್ ವಾಸದ ವಿವರ ಓದುವಾಗ ಒಂದೇ ಕೊಠಡಿಯಲ್ಲಿ ಆರೆಂಟು ಜನ ಹೈಸ್ಕೂಲ್ ಮಕ್ಕಳು ಇರುವುದು, ಒಟ್ಟಿಗೆ ಸ್ನಾನ ಮಾಡುವುದು ಇತ್ಯಾದಿ ಓದುವಾಗ ನನಗೆ ಈಗಿನ ಮಕ್ಕಳ ಪ್ರೈವಸಿ ಕುರಿತು ಕೇಳಿದ ನೆನಪಾಯ್ತು. ಮೊದಲ ವರ್ಷದ ಪದವಿಗೆ ಹಾಸ್ಟೆಲ್ ಸೇರಿದ ಕೂಡಲೇ ತಮ್ಮ ಮಕ್ಕಳು ಹಾಸ್ಟೆಲ್ ನಿಯಮಗಳು ವಿಪರೀತ ತಾವು ಪ್ರತ್ಯೇಕವಾಗಿ ಇರಬೇಕು ಎಂದು ಮನೆ ಮಾಡಿಕೊಂಡು ಇರುವುದನ್ನು, ಇಬ್ಬರು ಮೂವರು ಪರಿಚಿತರ ಮಕ್ಕಳು ಹಾಗೆ ಮಾಡಿರುವುದನ್ನು ಕೇಳಿದೆ. ಈ ಪ್ರೈವಸಿಗು ಮದುವೆಯ ನಂತರ ಇಬ್ಬರು ಒಟ್ಟಿಗೆ ಇರಲಾರದ್ದಕ್ಕೂ ಸಂಬಂಧ ಇದೆ ಅನ್ನಿಸಿತು. 

ಒಂದು ಕಾಲದ ಕೌಟುಂಬಿಕ ಮೌಲ್ಯಗಳು ಹೇಗಿದ್ದವು ಆಗಿನ ಜೀವನ ಶೈಲಿ ಎಲ್ಲವೂ ಗಮನ ಸೆಳೆಯುತ್ತವೆ. ಬ್ಯಾಡ್ಮಿಂಟನ್ ಆಟ ಮತ್ತು ಸೋಮಾಚಾರರ ಅಂಗಡಿ ಎರಡೂ ಪ್ರಬಂಧಗಳಲ್ಲಿ ಹೀಗೆ ಸಾಮೂಹಿಕ ಬದುಕಿನ ಚೇತೋಹಾರಿ ಸನ್ನಿವೇಶಗಳ ವರ್ಣನೆ ಇದೆ. ಸೋಮಾಚಾರರ ಅಂಗಡಿ ಸಂಜೆಯ ಸಮಯ ಎಲ್ಲರೂ ಸೇರಿ ಹರಟೆ ಹೊಡೆಯುವ ಜಾಗ ವೂ ಆಗಿತ್ತು. ಯಾರ ಮನೆಗೆ ನೆಂಟರು ಬಂದಿದ್ದಾರೆ ಊರಿನಲ್ಲಿ ಆ ದಿನದ ಸಮಾಚಾರ ಎಲ್ಲಾ ವಿನಿಮಯ ಆಗುತ್ತಿತ್ತು. ಒಂದು ರೀತಿಯಲ್ಲಿ ಅದು ಹಳ್ಳಿಯ ಕ್ಲಬ್. ಟಪಾಲ್ ಬಾಬಣ್ಣ ಅನ್ನುವವರು ತೀರ್ಥಹಳ್ಳಿಗೆ ನಡೆದು ಹೋಗಿ ಟಪಾಲ್ ತರುತ್ತಿದ್ದರು. ಅದರ ಜತೆಗೆ ಪ್ರಜಾವಾಣಿ ಪತ್ರಿಕೆಯು ಅವರ ಮೂಲಕವೇ ಬಂದು ಸೋಮಾಚರರ ಅಂಗಡಿ ಮೂಲಕ ವಿತರಣೆ ಆಗುತ್ತಿತ್ತು.  ಇವರ ಅಂಗಡಿ ಪಕ್ಕದಲ್ಲಿ ಮಂಜುನಾಥಯ್ಯ ಅವರ ಚಿಕ್ಕ ಹೋಟೆಲ್, ಅದರ ಪಕ್ಕದಲ್ಲಿ ಗುಂಡಾಚಾರ್ ಕುಲುಮೆ. ಹೀಗೆ ಅಕ್ಕಪಕ್ಕದ ಹಳ್ಳಿಯವರಿಗೆ ಬೇಕಾದದ್ದು ಹಾರೋಗೊಳಿಗೆಯಲ್ಲಿ ಇತ್ತು. ಮುಂದೆ ಸರ್ಕಾರದ ಹೆಂಡದ ಅಂಗಡಿಗಳು ಗ್ರಾಮ ಕೇಂದ್ರಗಳಿಗೆ ಬಂದಾಗ ಕಡಿದಾಳ್, ಹಾರೋಗೊಳಿಗೆಯವರು ಅವರ ಊರಿನಲ್ಲಿ ಸಾರಾಯಿ ಮಾರಲು ಅವಕಾಶ ಕೊಡಲಿಲ್ಲ. ಅಷ್ಟರ ಮಟ್ಟಿಗೆ ಊರಿನ ಯೋಗಕ್ಷೇಮದ ಚಿಂತನೆ ಆಯಾ ಕಾಲದ ಹಿರಿಯರಿಗೆ ಇತ್ತು.

ಊರಿನ ಬ್ಯಾಡ್ ಮಿಂಟನ್ ಟೂರ್ನಮೆಂಟ್ ನಲ್ಲಿ ಒಮ್ಮೆ ಪ್ರಕಾಶ್ ಅಣ್ಣಂದಿರು ಗೋಪಾಲ್, ದಯಾನಂದ್, ಸದಾನಂದ್ ಎಲ್ಲರೂ ತಮ್ಮದೇ ಒಂದು ಟೀಮ್ ಮಾಡಿಕೊಂಡು ಆಡುತ್ತಾರೆ. ಅವರ ತಾಯಿ ನೀವೇ ಹೀಗೆ ಒಂದು ಟೀಮ್ ಆಗಿ ಆಡಿದರೆ ಜನರ ಕಣ್ಣು ತಾಗಿ ದೃಷ್ಟಿ ಆಗಬಹುದು, ಹಾಗೆ ಮಾಡಬೇಡಿ ಅನ್ನುತ್ತಾರೆ. ಬರವಣಿಗೆಯಲ್ಲಿ ಅಲ್ಲಲ್ಲಿ ಲಘು ಹಾಸ್ಯವೂ ಇದೆ. ಹೈಸ್ಕೂಲ್ ನಲ್ಲಿದ್ದಾಗ ಖರ್ಚಿಗೆ ಅಮ್ಮನ ಹತ್ತಿರ ಬೆಳ್ಳಿ ರೂಪಾಯಿ ತೆಗೆದು ಕೊಂಡು ಒಂದು ರೂಪಾಯಿಗೆ ಎರಡು ರೂಪಾಯಿ ಮಾಡಿದ್ದು ಅಂತಹ ಒಂದು ಸನ್ನಿವೇಶ. ಅಮ್ಮ ಮಗ ಇಬ್ಬರ ಮುಗ್ಧತೆಯೂ ಇಲ್ಲಿದೆ.
ಅಜ್ಜಿ ಮನೆ ಪ್ರಬಂಧ ಸಹಾ ಹೀಗೆ ಸ್ವಾರಸ್ಯ ಕರ ಸನ್ನಿವೇಶಗಳನ್ನು ಹೊಂದಿದೆ. ಅಜ್ಜನ ಮನೆಯಿಂದ ಕಾರಿನಲ್ಲಿ ಬಂದು ತೀರ್ಥ ಮತ್ತೂರು ಹೊಳೆಯನ್ನು ದಾಟುವುದು, ರಜೆ ಕಳೆದು ಬರುವಾಗ ಅಜ್ಜಿ ಎಲ್ಲ ಮೊಮ್ಮಕ್ಕಳಿಗೂ ಒಂದೇ ತರಹದ ಬಟ್ಟೆ ಹೊಲಿಸುವು ದು, ಹೀಗೆ. ಆ ಕಾಲದ ಬದುಕಿನ ಚಿತ್ರಗಳು.

ಈ ಪುಸ್ತಕದಲ್ಲಿ ಮೊದಲ ಲೇಖನ ಲೇಖಕರ ಮನೆಯ ಕುರಿತೇ ಇದೆ. ತಂದೆಯ ಕಾಲದಲ್ಲಿ ಪಾಲಿಗೆ ಬಂದ ಹಳೆ ಮನೆಯನ್ನು ಬೀಳಿಸಿ ಅದೇ ಜಾಗದಲ್ಲಿ ಹೊಸಮನೆ ನಿರ್ಮಿಸಿದರು. ಮನೆಯ ಭೌತಿಕ ಪರಿಸರದ ವಿವರಗಳು ವಿವರವಾಗಿವೆ. ಶೀರ್ಷಿಕೆ ಯ ಲೇಖನದ ಬೆಂಚ್ ಸಹ ಮಲೆನಾಡಿನ ಹೆಚ್ಚಿನ ಮನೆಗಳಲ್ಲಿ ಇರುತ್ತಿತ್ತು. ಹಾಸ್ಟೆಲ್ ಬಗ್ಗೆ ಬರೆಯುತ್ತಾ ಐದಾರು ದಶಕಗಳ ಹಿಂದಿನ ತೀರ್ಥಹಳ್ಳಿ ಹೇಗೆ ಪ್ರಶಾಂತವಾಗಿತ್ತು. ಈಗಿನ ಆಧುನಿಕ ಊರು ಮೂರು ಕಿ ಮೀ ಉದ್ದದ ಹೆದ್ದಾರಿ ಉದ್ದಕ್ಕೂ ಒಂದು ಕಾರು ಪಾರ್ಕ್ ಮಾಡಲು ಜಾಗ ಇಲ್ಲದೆ ಇರುವಂತೆ ಆಗಿರುವುದನ್ನು ಬರೆಯುತ್ತಾರೆ.

ಒಂದು ಕಾಲದ ಬದುಕಿನ ಗುಣಾತ್ಮಕ ಅಂಶಗಳನ್ನು ಲೇಖಕರು ಬರೆದಿದ್ದಾರೆ. ಆರ್ಥಿಕವಾಗಿ ಸಾಮಾಜಿಕವಾಗಿ ಅನುಕೂಲವಂತ ಹಿನ್ನೆಲೆಯ ಲೇಖಕರಿಗೆ ಹಾಸ್ಟೆಲ್ ನಲ್ಲಿ ಇದ್ದು ಓದುವ ಅವಕಾಶ ಸಿಕ್ಕಿತು. ಆದರೆ ಎಷ್ಟೋ ಮಕ್ಕಳು ಸಂಪರ್ಕದ ಕೊರತೆಯಿಂದ ವಿದ್ಯಾಭ್ಯಾಸ ನಿಲ್ಲಿಸಬೇಕಾಗಿತ್ತು. ಆ ದೃಷ್ಟಿಯಿಂದ ಈಗ ಪರಿಸ್ಥಿತಿ ಸುಧಾರಿಸಿದೆ. ಎಲ್ಲರೂ ವಿದ್ಯಾವಂತರಾಗಿ ಬೇರೆ ಬೇರೆ ವೃತ್ತಿ ಆಧರಿಸಿರುವುದರಿಂದ ಕೃಷಿ ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಮಲೆನಾಡಿಗೆ ದೂರದ ಅಸ್ಸಾಂ, ಬಿಹಾರದ ಜನ ಬಂದಿದ್ದಾರೆ. ತೀರ್ಥಹಳ್ಳಿಯಲ್ಲಿ ಗಾರೆ ಕೆಲಸ, ಮನೆ ಕಟ್ಟುವ ಕೆಲಸಗಳಿಗೆ ಉತ್ತರ ಭಾರತದ ಕಾರ್ಮಿಕರೇ.

ಕೃಷಿಕರಿಗೆ ಆದಾಯ, ವೆಚ್ಚಗಳ ಲೆಕ್ಕ ಪತ್ರ ಬರೆದು ಇಡುವುದು ಎಷ್ಟು ಮುಖ್ಯ ಎಂಬುದು ಲೆಕ್ಕ ಪತ್ರ ಎಂಬ ಲೇಖನದಲ್ಲಿ ತಿಳಿಯುತ್ತದೆ.
ಮುಂದಿನ ತಲೆಮಾರಿನವರು ಇಪ್ಪತ್ತನೇ ಶತಮಾನದ ಮಲೆನಾಡಿನ ಗ್ರಾಮೀಣ ಬದುಕನ್ನು ಪುಸ್ತಕದ ಮೂಲಕವೇ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಇದೆ. ತಮ್ಮ ಅನುಭವ ಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಕ್ಕೆ ಪ್ರಕಾಶ್ ಅವರನ್ನು ಅಭಿನಂದಿಸುತ್ತೇನೆ.

‍ಲೇಖಕರು avadhi

May 16, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: