ಮಧು ವೈ ಎನ್
ಮುದುಕಿ ಕಾಂತಮ್ಮಳಿಗೆ ಭರ್ತಿ ತೊಂಭತ್ತೇಳು ವರ್ಷ ತುಂಬಿದೆ. ಈ ಕಾಲಕ್ಕೆ ಹೋಗುವ ಜೀವವಲ್ಲ ಎನ್ನುತ್ತಾರೆ ಎಲ್ಲರೂ. ಅಂಥಾ ಗಟ್ಟಿಗಿತ್ತಿ. ಬಗ್ಗಿದರೆ ಒಂದಾಳಿನ ಶ್ರಮಕ್ಕೆ ಮೋಸವಿಲ್ಲ. ಆದಾಗ್ಯೂ ಇತ್ತೀಚೆಗೆ ಅದು ಯಾಕೋ ಆಕೆಯ ಎಡಗಣ್ಣು ಅದುರುತ್ತಿದೆ. ಜೈವಿಕ ಯಂತ್ರ ಸನ್ನೆ ಮಾಡುತ್ತಿದೆ. ಅದೇನು ಲಾಕ್ ಡೌನ್ ಪರಿಣಾಮವೇ? ದಿನಂಪ್ರತಿ ಟಿವಿ ಮಾಧ್ಯಮಗಳಿಂದ ಉಂಟಾಗುತ್ತಿರುವ ಭಯವೇ? ಅರವರತ್ತರ ನಂತರದವರು ಯಾರೂ ಹೊಸ್ತಿಲು ದಾಟಬೇಡಿ, ಹಿರಿಯರನ್ನು ರಕ್ಷಿಸಿ, ವೈರಸ್ಸಿನಿಂದ ಬಚ್ಚಿಡಿ. ತಗುಲಿದರೆ ಉಳಿಯೋಲ್ಲ-ಆಗೀಗ ಟಿವಿ ನೋಡುವ ಮುದುಕಿ ಬೆಚ್ಚಿರುವುದು ನಿಜ.
ತನಗೋ, ಅರವತ್ತರ ಮೇಲೆ ಮೂವತ್ತೇಳಾಗಿದೆ. ಇನ್ನು ಮೂರು ಕಳೆದರೆ ಶತಕಧಾರಿ. ತಪ್ಪಿದರೆ ಶತಕವಂಚಿತೆ. ಏನೇನೆಲ್ಲಎದುರಿಸಿ ಬಂದಿರುವೆ; ಇಳಿಗಾಲದಲ್ಲಿ ಇದೇನು ಬಂದು ವಕ್ಕರಿಸಿತು? ನೆಮ್ಮದಿಯಿಲ್ಲದೆ ಯಾವುದೋ ಆಸ್ಪತ್ರೆಯಲ್ಲಿ ಅನಾಥಳಂತೆ ಪ್ರಾಣ ಬಿಡಬೇಕೆ? ಐದು ಮಕ್ಕಳಿದ್ದಾರೆ. ಎಲ್ಲಾ ಗಂಡೇ. ಮೊಮ್ಮಕ್ಕಳೂ ಇದ್ದಾರೆ, ಎಷ್ಟು… ಲೆಕ್ಕ ಸಿಗುತ್ತಿಲ್ಲ. ಮಕ್ಕಳಿಗೇ ಮೊಮ್ಮಕ್ಕಳಾಗಿರುವಾಗ. ಇಷ್ಟಿದ್ದೂ ಒಬ್ಬರಿಂದ ಸೋಕಿಸಿಕೊಳ್ಳದೆ ನೀರು ಬಿಡಿಸಿಕೊಳ್ಳದೆ ಯಾರೊ ಅಪರಿಚಿತನಿಂದ ಕರೆಂಟಿಗೆ ದೂಕಿಸಿಕೊಳ್ಳಬೇಕೇ? ಜೆಸಿಬಿಗಳಿಂದ ಗುಂಡಿಗೆ ತಳ್ಳಿಸಿಕೊಳ್ಳಬೇಕೇ?
ಇಷ್ಟಿದ್ದೂ ಎಂದರೆ ಏನು? ಎಷ್ಟಿದೆ? ಮನಸು ವ್ಯಾಕುಲ. ಮರಿಮಕ್ಕಳಿಗೆ ನನ್ನ ಹೆಸರು ತಿಳಿದಿದೆಯೊ ಇಲ್ಲವೊ. ಇಂಥವಳು ಇನ್ನೂ ಬದುಕಿದ್ದಾಳೆ ಎಂಬ ಸಂಗತಿ ಗೊತ್ತಿದ್ದರೆ ಅದೇ ಹೆಚ್ಚು.

ಕಾಂತಮ್ಮ ನಡೂಲ ಮಗನೊಂದಿಗೆ ವಾಸಿಸುತ್ತಿದ್ದಾಳೆ. ಅವನಿಗೆ ನಾಲ್ಕೋ ಆರೋ ಮೊಮ್ಮೊಕ್ಕಳು. ಕಾಂತಮ್ಮಳು ಎದುರಾದಾಗ ಯಾರನ್ನೋ ನೋಡಿದಂತೆ ನೋಡುತ್ತವೆ. ಅವುಗಳ ಹೆಸರುಗಳನ್ನು ಹೇಳಲು ಆಕೆಯಲ ನಾಲಿಗೆ ತಿರುಗುವುದಿಲ್ಲ. ಇನ್ನು ನೆನಪಿನ ಮಾತೆಲ್ಲಿ ಎಂದು ಏನೇನೋ ಯೋಚಿಸುತ್ತಾಳೆ.
ಅಷ್ಟಕ್ಕೂ ಆ ಮನೆಯಲ್ಲಿ ಇದ್ದವರು ಮೂವರು. ಮುದುಕಿ, ಮಗ, ಸೊಸೆ. ಲೆಕ್ಕದಲ್ಲಿ ಮೂವರೂ ಮುದುಕರೇ. ಮೊಮ್ಮಗಳನ್ನು ದೂರದೂರಿಗೆ ಕೊಡಲಾಗಿದೆ. ಮೊಮ್ಮಗ ಕೇಂದ್ರ ಸರ್ಕಾರಿ ನೌಕರ, ಹೊರರಾಜ್ಯದಲ್ಲಿ ವಾಸ. ಸೊಸೆಗೆ ವಾಯು. ಎರಡೂ ಕಡೆ ವಾಲುತ್ತ ನಡೆಯುತ್ತಾಳೆ. ಮುಖವೆಲ್ಲ ಊದಿಕೊಂಡಿದೆ. ಮಗನಿಗೆ ಚಟಗಳಿಂದ ಅಂಗಗಳೆಲ್ಲ ಸುಟ್ಟಿವೆ- ಎದ್ದರೆ ಕೂರಲಾರನು, ಕೂತರೆ ನಿಲ್ಲಲಾರನು. ನಿಂತರೆ ನಡೆಯಲಾರನು. ಯಾವಾಗಲೂ ಸೋಫಾಗೆ ಅಂಟಿಕೊಂಡಿರುತ್ತಾನೆ. ಅದುವೆ ಆತನ ಹಾಸಿಗೆ. ಒಂದು ಕೈನಲ್ಲಿ ಯಾವಾಗಲೂ ರಿಮೋಟು ಹಿಡಿದಿರುತ್ತಾನೆ. ಟಿವಿ ನಿರಂತರ. ಎಷ್ಟು ಬದಲಿಸಿದರೂ ಅವವೇ ಸುದ್ದಿ ಚಾನೆಲ್ ಗಳು. ಎಲ್ಲೆಲ್ಲೂ ಮರಣ ಕಹಳೆ. ಮಗ ಸೊಸೆಗೆ ಹೋಲಿಸಿದರೆ ಕಾಂತಮ್ಮಳೇ ಚುಟುಪುಟು. ಎತ್ತರದ ಆಳು. ಸ್ವಲ್ಪವೂ ಗೂನಿಲ್ಲ. ವಯಸಿನಲ್ಲಿ ಚೆಲುವೆಯಿದ್ದಿರಬಹುದು. ಗಂಡ- ಆತ ಸತ್ತು ಅದೆಷ್ಟೋ ವರುಷಗಳಾಗಿವೆ. ಕಡೆಯ ಮಗನ ಮದುವೆಯ ಹಿಂದೋ ಮುಂದೋ, ಆಕೆಗೆ ಸ್ಪಷ್ಟವಿಲ್ಲ.
ಹೀಗಿದ್ದು ಮನೆಯ ಎಲ್ಲ ಕೆಲಸಗಳ ಜವಾಬ್ಧಾರಿ ಸೊಸೆಯ ಮೇಲಿದೆ. ಅಡಿಗೆ, ಕಸ, ಮುಸುರೆ, ನೆಲ, ಬಟ್ಟೆ ಇತ್ಯಾದಿ. ಕಾಂತಮ್ಮ ಆಗಾಗ್ಗೆ ಕೈಜೋಡಿಸುತ್ತಾಳೆ. ಬಿಟ್ಟಿ ಬಿದ್ದಿರುವೆ ಎಂದನಿಸಿಕೊಳ್ಳಬಾರದಲ್ಲ. ಹಾಗೆ ನೋಡಿದರೆ ಅದು ಬಹಳ ಪುಟ್ಟ ಮನೆ. ಇಬ್ಬರು ಎದುರು ಬದುರು ಗೋಡೆಗಳಿಗೆ ಒರಗಿ ಕಾಲು ಚಾಚಿದರೆ ತಾಕುತ್ತವೆ. ಮೇಲಿನ ಮನೆಗೆ ಬಾಡಿಗೆದಾರರು ಬರಲಾರರು ಎಂದು ಕೆಳಗಿನದನ್ನು ಬಾಡಿಗೆಗೆ ಬಿಟ್ಟು ಇವರು ಮೊದಲ ಮಹಡಿಯಲ್ಲಿ ವಾಸಿಸುತಿದ್ದಾರೆ. ಇಕ್ಕಟ್ಟು ಮೆಟ್ಟಿಲುಗಳ ಪುಟ್ಟ ಗೂಡು. ಸೊಸೆ ಮಗನಿಂದ ಕದ್ದು ಮುಚ್ಚಿ ಎತ್ತಿಟ್ಟು ಕೂಡಿಟ್ಟ ಹಣದಿಂದ ಕಟ್ಟಿಸಿದ್ದು. ಮಗ ದಂಡಿಯಾಗಿ ದುಡಿದರೂ ಅಷ್ಟೇ ಪೋಲುದಾರ. ಕಾಂತಮ್ಮಳಿಗೆ ಈ ಮಗನೆಂದರೆ ಅಷ್ಟಕ್ಕಷ್ಟೇ.
ಹಿರಿ ಮಗ ತಂದೆಯಿಂದ ಜವಾಬ್ಧಾರಿ ಪಡೆದು ಎಲ್ಲರನ್ನೂ ಸಾಕಿದ್ದಾನೆ ಎಂಬ ಗರ್ವ, ಗೌರವ. ಅವನದು ಬಹುಮಹಡಿಯ ಮನೆಯಿದೆ. ಕಿರಿ ಮಗ, ಕಿರಿ ವಯಸಿನಿಂದ ಬಹಳ ಮುದ್ದು. ಐವರಲ್ಲಿ ಏಕೈಕ ತಿಂಗಳ ಸಂಬಳದಾರ. ಶಿಕ್ಷಕನಾಗಿರುವನು. ಸರಕಾರಿ ಅನ್ನ ತಿನ್ನುವ ಮಗ ಎಂಬ ಹಿರಿಮೆ. ಇನ್ನಿಬ್ಬರೂ ಸದಾ ಅಮ್ಮಾ ಅಮ್ಮಾ ಎಂದು ಆತುಕೊಳ್ಳುತ್ತಿದ್ದಂತವರು. ಆಟಕ್ಕುಂಟು ಲೆಕ್ಕಕ್ಕಿಲ್ಲ, ಅಗತ್ಯ ಬಿದ್ದರೆ ಈಗಲೂ ಅಮ್ಮನ ಪಿಂಚಣಿ ಮೇಲೆ ಅವಲಂಬಿತರು. ಇವನೊಬ್ಬನೇ, ಕೋಪಿಷ್ಠ, ಗರ್ವಿಷ್ಠ, ಊರಿಗೆ ಮುಂಚೆ ಭಾಗವಾಗಿ ಹೊರಬಂದನು. ತಾಟಗಿತ್ತಿ ಇವಳೇ ಅದಕ್ಕೆಲ್ಲ ಕಾರಣ. ಚಟಗಳನ್ನು ಹತ್ತಿಸಿಕೊಳ್ಳಲು ಬಿಟ್ಟು ಮಗನನ್ನು ಹಾಳುಗೆಡವಿದಳು. ಕಟ್ಟಿಸಿರಬಹುದುಮನೆ, ಎತ್ತಿಕೊಂಡದ್ದು ಮಗನ ಜೇಬಿನಿಂದ ತಾನೆ.

ಲಾಕ್ ಡೌನ್ ಎಂದು ಘೋಷಿಸಿದಾಗ ಸಮಸ್ಯೆ ಎದುರಾಯಿತು. ಇರುವ ಮೂವರಲ್ಲಿ ಯಾರು ಹೊರಹೋಗಲು ತಯಾರಿ? ತರಕಾರಿ, ದಿನಸಿ, ನೀರು, ಮಾತ್ರೆ. ಯಾರೋ ಒಬ್ಬರು ಹೋಗಬೇಕು. ರೂಢಿಯನ್ನೇಕೆ ಮುರಿಯಬೇಕು. ತಿಂಗಳ ಅಂತ್ಯದಲ್ಲಿ ಸೊಸೆಗೆ ಶೀತವಾಗಿ ಶುರುವಾದದ್ದು ಕೆಮ್ಮಾಗಿ ಪರಿಣಮಿಸಿ ಕೋವಿಡ್ ಬಂದೇ ಬಿಟ್ಟಿತು. ಮನೆಯವರನ್ನೆಲ್ಲ ಪರೀಕ್ಷೆಗೆ ಒಳಪಡಿಸಲಾಯಿತು. ಪತಿಯೂ ಪಾಸಿಟಿವ್. ಲ್ಯಾಬೋರೇಟರಿಯವನಿಗೆ ಆಶ್ಚರ್ಯ. ಮುದುಕಿ ನೆಗೆಟಿವ್. ಕಾಂತಮ್ಮ ತನ್ನದನ್ನು ಮಗನದಲ್ಲಿ ಅಕ್ಕ ಪಕ್ಕ ಇಟ್ಟು ಬೆಳಕಿಗೆ ಹಿಡಿದು ಕೂಲಂಕಷ ವೀಕ್ಷಿಸಿದಳು. ಹೌದು, ಏನೊ ವ್ಯತ್ಯಾಸ ಇದೆ. ಎಂದಿನಂತೆ ಗಟ್ಟಿಪಿಂಡ ಎಂದುಕೊಂಡರು ಎಲ್ಲರೂ.
ಟೀವಿನವರಿಗೆ ಸಿಕ್ಕಿದರೆ ಒಂದು ದಿನದ ಶೋ ಮಾಡಬಲ್ಲರು, ನಾವು ಅವಳ ಬಗ್ಗೆಏನೆಲ್ಲ ಹೇಳಬಲ್ಲೆವು ಎಂದು ಮೆಲುಕು ಹಾಕಿದರು. ದಿನಕ್ಕೆ ನಾಲ್ಕು ಸಲ ಟೀ ಕುಡಿಯುತ್ತಾಳೆ. ಬೇಜಾರಾದಾಗೆಲ್ಲ ರಾಶಿ ರಾಶಿ ಕಡಲೆ ಕಾಯಿ ಹರಡಿಕೊಂಡು ಸುಲಿದು ತಿನ್ನುತ್ತಾಳೆ. ಲೀಟರುಗಟ್ಟಲೆ ನೀರು ಕುಡಿಯುತ್ತಾಳೆ. ಪ್ರತಿ ಟೀ ಸೇವನೆ ನಡುವೆ ಎಲಡಿಕೆ ಹಾಕುತ್ತಾಳೆ. ಹೊಗೆಸೊಪ್ಪು ಸೇವಿಸುತ್ತಾಳೆ. ಟೆರೇಸಿನ ಮೇಲೆ ಕುಳಿತುಇರುಳು ಕಾಯುತ್ತಾಳೆ.ನಮ್ಮವೇ ಹಲ್ಲುಗಳು ಅಲಲ ಎನ್ನುತ್ತಿರುವಾಗ ಮಠನ್ನಿನ ತುಂಡನ್ನು ಬಾಯಿಯೊಳಗಿಟ್ಟು ಬೆಲ್ಲದಂತೆ ನುರಿಸುತ್ತಾಳೆ, ಕರಗಿಸುತ್ತಾಳೆ… ಇತ್ಯಾದಿಯಾಗಿ.
ಒಂದು ಮನೆಯಿಂದ ಓಣಿಗೆ ಓಣಿಯನ್ನೆ ಸೀಲ್ ಡೌನ್ ಮಾಡಿದರು. ನಾಯಿಗಳು ಸಹ ಮೂಲೆ ಸೇರಿಕೊಂಡವು. ಬಹುಶಃ ಇನ್ನು ನಾನು ಹಿಂದಿರುಗಲಾರೆ ಎಂದು ಸೊಸೆ, ಕಟ್ಟಿಸಿದ ಮನೆಯನ್ನು ಮೇಲಿಂದ ಕೆಳಗೆ ನೋಡಿ ಗಳಗಳನೆ ಅತ್ತಳು. ಮಗ ಎಲ್ಲೋ, ಮಗಳು ಇನ್ನೆಲ್ಲೋ. ಸಾಕಿಕೊಟ್ಟ ಮೊಮ್ಮಕ್ಕಳು, ಎರಡು ಇನ್ನೂ ಕೂಸುಗಳು. ಕಡೆಯ ಸಾರಿ ಒಮ್ಮೆ ಎಲ್ಲರ ಮುಖ ನೋಡಬೇಕು ಎಂಬ ಹಂಬಲ. ಗಂಡನಿಗಾಗಿ, ಮಗನಿಗಾಗಿ, ಮಗಳಿಗಾಗಿ ಇಷ್ಟು ದಿವಸ ಮಾಡಿದ ಉಪವಾಸದ ವ್ರಥಗಳುಈಶ್ವರನನ್ನು ತಲುಪಿದ್ದರೆ ವಾಪಸ್ಸು ಕಳಿಸುವನು. ಆಕೆ ಈಶ್ವರಪ್ರಿಯೆ. ಅಷ್ಟು ಪೂಜಸ್ಥಳಾಗಿದ್ದರೂ ಬಹಳ ಬಹಳ ಹೆದರಿದ್ದಳು. ನಡುಗಿದ್ದಳು.
‘ಮಕ್ಕಳು ಬಂದರೂ ಅಷ್ಟೆ, ಮೊಮ್ಮಕ್ಕಳು ಬಂದರೂ ಅಷ್ಟೆ. ಆಸ್ಪತ್ರೆಯಲ್ಲಿ ಒಳಗೆ ಬಿಡಲ್ಲ, ನೀವು ಅರ್ಜೆಂಟರ್ಜೆಂಟು ಹತ್ತಿʼ, ದಾದಿಯರ ನಿರ್ದಾಕ್ಷಿಣ್ಯ ಕುಟುಕು. ಪೋಲೀಸರು ಜೀಪಿಗೆ ಹತ್ತಿಸಿಕೊಂಡಂತೆ ಆಂಬುಲೆನ್ಸ್ ದಂಪತಿಗಳನ್ನು ಎತ್ತಿಹಾಕಿಕೊಂಡು ಹೊರಟಿತು. ಮಂದಿ ಕದವನ್ನು ಕಿಟಕಿಯನ್ನು ಇಷ್ಟೆ ತೆರೆದು ಕಣ್ದುಂಬಿಕೊಂಡರು. ಕಾಂತಮ್ಮ ಮೆಟ್ಟಿಲ ಮೇಲೆ ನಿಂತು ಎಲ್ಲವನ್ನೂ ವೀಕ್ಷಿಸಿದಳು; ಮೊನ್ನೆ ಮೊನ್ನೆ ತನಕ ಜೀವಂತವಿದ್ದವಳು, ಎಡಗಣ್ಣು ಅದುರುದಾಗಿನಿಂದ, ಕೊರಡಾಗಿದ್ದಳು.
ದುಃಖ ಪಡುವ ಶಕ್ತಿ ಕಳೆದುಕೊಂಡಿದ್ದಳು. ಟೀವಿಯಲ್ಲಿನ ದೃಶ್ಯಕ್ಕಿಂತ ಹೆಚ್ಚೇನು ಆಪ್ತವಾಗಿರಲಿಲ್ಲ ಮಗ ಸೊಸೆಯರ ನಿರ್ಗಮನ. ಹಿಂದಿರುಗಲಾರರು, ಎಂದುಕೊಂಡಳು. ಮಗನನ್ನು ಮನೆಯಿಂದ ಹೊರಗೆಳೆದುಕೊಂಡು ಬಂದವಳು, ಸ್ಮಶಾನಕ್ಕೂ ಸಂಗಡ ಕಟ್ಟಿಕೊಂಡೇ ಹೋಗುತ್ತಿರುವಳು ಎಂಬ ಮುಳ್ಳು ತಾಗಿದರೂ, ವಿಷ ಮೈ ಮೇಲೆ ಹತ್ತಲಿಲ್ಲ. ಅವನೋ, ಕರುಳ ಸಂಬಂಧ ಬಿಟ್ಟರೆ ಯಾವ ಭಾವನಾತ್ಮಕ ಸಂಬಂಧವೂ ಉಳಿದಿರಲಿಲ್ಲ.

ಮೆಟ್ಟಿಲು ಹತ್ತಿ ಮನೆ ಹೊಕ್ಕ ತಕ್ಷಣ ಮದುಕಿಗೆ ಮನೆ ಗೌ ಎನ್ನಲಾರಂಭಿಸಿತು. ಸೋಫಾ ಖಾಲಿ. ಟೀವಿ ಆಫ್. ಅಡಿಗೆ ಕೋಣಯಿಂದ ಕಿಟಪಟ ಇಲ್ಲದೇ ಗಪ್ ಚುಪ್. ನಿಶಬ್ಧ. ಭಗವಂತ, ಬದುಕುವ ಹುಮ್ಮಸ್ಸು ಕ್ಷೀಣಿಸುತ್ತಿರುವಾಗ ಯಾತಕ್ಕಾಗಿ ಈ ಅವಕಾಶ? ಎಡಗಣ್ಣು ಅದುರಿಸಿದ್ದೇಕೆ? ಏನದರ ಅರ್ಥ?
ಕಾಂತಮ್ಮಳಿಗೆ ಒಳಗಿನ ತಳಮಳಗಳು ಒಂದು ಕಡೆಯಾದರೆ, ಹೊರಗಿನವು ಹಲವು. ತನಗಿನ್ನು ನಿತ್ಯದ ಊಟದ ಗತಿ? ಹೇಗೊ ಏನೋ, ತಕ್ಕಮಟ್ಟಿಗೆ ಚಾಕರಿ ಮಾಡುತ್ತಿದ್ದಳು ಸೊಸೆ. ಅವಳೇ ಇಲ್ಲ. ಈ ಆಸ್ಪತ್ರೆಯವರು ಒಂದು ವ್ಯವಸ್ಥೆ ಮಾಡಲಿಲ್ಲ. ಯಾವ ಯಾವುದೊ ಊರಿನಲ್ಲಿ ತರಕಾರಿ ದಿನಸಿಗಳನ್ನು ಮನೆಬಾಗಿಲಿಗೆ ತಂದುಕೊಡುತ್ತಾರಂತೆ.ಚಿಂತಾಕ್ರಾಂತಳಾದವಳಿಗೆ ತಕ್ಷಣ ಎಂದೋ ಮರೆತಿದ್ದ ಪರಿಹಾರ ಹೊಳೆಯಿತು: ಬಿಡು, ಇಲ್ಲೇ ಹತ್ತಿರದಲ್ಲಿ ದೊಡ್ಡವನಿದಾನಲ್ಲ, ಅವನ ಮನೆ ಸೇರಿಕೊಂಡರಾಯಿತು.
ಫೋನು ಮಾಡಿ ಕರೆಸಿಕೊಳ್ಳೋಣವೇ? ಅದೆಲ್ಲ ಯಾಕೆ, ಚೀಟಿ ವ್ಯವಹಾರಸ್ಥ. ಕಲೆಕ್ಷನ್ನಿಗೆ ಹೋಗಿರುತ್ತಾನೆ. ಕಾಂತಮ್ಮ ಅಡಿಗೆ ಮನೆ ಗ್ಯಾಸ್ ಪರೀಕ್ಷಿಸಿ ತಕ್ಕಮಟ್ಟಿಗೆ ಸ್ಚಿಚ್ಚುಗಳನ್ನು ಆಫ್ ಮಾಡಿ, ಒಂದು ಸೀರೆ, ಲಂಗ, ಕುಪ್ಪಸ, ತುಂಡು ಬಟ್ಟೆ- ಗಂಟು ಕಟ್ಟಿಕೊಂಡು ಮನೆಗೆ ಬೀಗ ಹಾಕಿ ಹೊರಟಳು. ಮೆಟ್ಟಿಲು ಇಳಿಯುತ್ತಿದ್ದಂತೆ ಧಿಗ್ಗನೆ ಪ್ರತ್ಯಕ್ಷನಾದ ಪಾಲಿಕೆಯ ಕಾವಲುದಾರ ಅಡ್ಡಗಟ್ಟಿದ.
‘ಎಲ್ಲಿಗೆ?’
‘ದೊಡ್ಡ ಮಗನ ಮನೆಗೆ’
‘ಹತ್ತು ದಿವಸ ಹೋಂ ಕ್ವಾರಂಟೇನಲ್ಲಿರಬೇಕು. ಹೊಸ್ತಿಲು ದಾಟುವಂತಿಲ್ಲ’
‘ಹತ್ತು ದಿವಸ ನೀನು ಅಡಿಗೆ ಮಾಡುತ್ತೀಯೇನು? ನನ್ನ ನಿಲ್ಲದ ಕಕ್ಕಸು ತೊಳೆಯುತ್ತೀಯೇನು? ಉಚ್ಚೆ ಹೊದಿಕೆ ಒಗೆದುಕೊಡುತ್ತೀಯೇನು?’ ಉತ್ಪ್ರೇಕ್ಷೆ ಸೇರಿಸಿ ಝಬರಿಸಿಬಿಟ್ಟಳು. ಕಾವಲುಗಾರ ಅಂಜಿದ.
‘ನಾನು ಬಿಡಬಹುದು, ಓಣಿಯ ಹೊರಗೆ ಪೋಲೀಸರ ಪಹರೆ ಇದೆ. ರಿಪೋರ್ಟು ತೋರಿಸಿ ಪುಸಲಾಯಿಸಿದರೆ ಬಚಾವಾಗಬಹುದೇನೋ’, ಎಂದು ಉಪಾಯ ಹೇಳಿಕೊಟ್ಟನು. ದಿನಪೂರ್ತಿ ಈ ಮನೆ ಕಾಯುವ ಕೆಲಸ ಯಾವನಿಗೆ ಬೇಕು, ಎಂದು ಅವನ ಲೆಕ್ಕಾಚಾರ. ರಿಪೋರ್ಟು ಎಂದಾಕ್ಷಣ ಕಾಂತಮ್ಮ ಪುನಃ ಮೆಟ್ಟಿಲು ಹತ್ತಿ ಬಾಗಿಲು ತೆಗೆದು ರಿಪೋರ್ಟನ್ನು ನಾಲ್ಕು ಸುತ್ತು ಮಡಚಿ ಗಂಟಿನೊಳಗೆ ಸಿಕ್ಕಿಸಿಕೊಂಡು ಪೊಲೀಸು ಎದುರು ಹೇಳಲಿಕ್ಕಿರುವ ಇನ್ನಷ್ಟು ಕತೆ ಕಲ್ಪಿಸಿಕೊಂಡು ಹೊರಟಳು.
ಪೋಲೀಸು ಆಕೆಯನ್ನು ಆಕೆಯ ಗಂಟನ್ನು ರಿಪೋರ್ಟನ್ನು; ಮುಖ್ಯವಾಗಿ ಆಕೆಯ ಹೃದಯ ವಿದ್ರಾವಕ ಸ್ಥಿತಿಯನ್ನು ನೋಡಿ ‘ಹೋಗ್ಲಿ ಬಿಡ್ರಿ, ಇಟ್ಕೊಂಡ್ರೆ ನಮಗೆ ತೊಂದರೆ’ ಎಂದು ಬಿಟ್ಟರು. ಮುದುಕಿ ನಡೆದೇ ನಡೆದು ದೊಡ್ಡಮಗನ ಮನೆಯ ಅಂಗಳಕ್ಕೆ ಬಂದಳು. ಎಂದೋ ಬಂದ ನೆನಪು. ಮನಸು ಭಾರವಾಯಿತು. ವಾಪಸ್ಸು ಹೋಗಿಬಿಡಲೇ, ಇರುವ ದಿನಸಿಯಲ್ಲಿ ಕತೆ ಹಾಕಿದರಾಯಿತು ಎಂದುಕೊಂಡಳು. ಭಯ! ಹಿರಿ ಸೊಸೆಯ ಭಯ. ಬೆಲ್ ಒತ್ತಿದಾಗ ಬಾಗಿಲು ತೆರೆದದ್ದು ಅದೇ ಭಯ.

‘ತಿರಗ ಯಾಕೇ ಬಂದೆ ಇಲ್ಲಿಗೆ ಬೋಸುಡಿ? ಎಷ್ಟು ಸಲ ಹೇಳಿಲ್ಲ ನಿನಗೆ ? ಅಗಗಲ ಬಂದರೆ ಬಿಟ್ಟುಕೊಳ್ತಾರೆ ಅಂದ್ಕೊಂಡಿಯೇನು? ಅವರು ಬರೋದ್ಕು ಮುಂಚೆ ಜಾಗ ಖಾಲಿ ಮಾಡಿದರೆ ಸೈ ಇಲ್ಲಾಂದರೆ ನಾನೆ ಏನಾರ ಮಾಡಬೇಕಾಗ್ತದೆ ನೋಡು’ – ಸೊಸೆ ಬಾಗಿಲ ಅಗಲ ಇದ್ದಳು.
‘… ‘
ಅದೇ ಮಾತು. ಒಂದು ಪದ ಅತ್ತಿತ್ತ ಇಲ್ಲ. ಗೊತ್ತಿದ್ದೂ ಬಂದೆನಲ್ಲ – ಕಾಂತಮ್ಮಗೆ ಸೊಸೆಯ ಮುಂದಿನ ವಾಕ್ ಸರಣಿಯೂ ಚನ್ನಾಗಿ ನೆನಪಿತ್ತು. ನಿಜ, ಪತಿ ತೀರಿಕೊಂಡ ನಂತರ ಹಿರಿಯವನೇ ಮನೆ ಮುನ್ನಡೆಸಿದ್ದನು. ನಿಜ, ಅವನ ಆಶ್ರಯದಲ್ಲೇ ಹಲವು ವರುಷಗಳನ್ನು ಕಳೆದೆನು. ಎಲ್ಲರೂ ಬೇರೆಯಾಗುವ ತನಕ. ನಿಜ, ನಡೂಲನು ಮದುವೆಯಾದ ಕೆಲವೇ ವರುಷಗಳಲ್ಲಿ ಬೇರೆ ಹೊರಟನು., ಅವನು ಇನ್ನೂ ನನ್ನನ್ನು ನೋಡಿಕೊಳ್ಳಬೇಕಾದ ವರುಷಗಳನ್ನು ತೀರಿಸಿಲ್ಲ; ಅನಿಸುತ್ತದೆ. ಎಷ್ಟು ವರುಷ ಬಾಕಿ? ಗೊತ್ತಿಲ್ಲ. ಇವನಲ್ಲದಿದ್ದರೆ ಹೋಯಿತು. ಸಣ್ಣವನು ಇರುವನಲ್ಲ. ನನ್ನ ರಾಜಕುಮಾರ. ಜಗತ್ತನ್ನು ತಿಳಿದವನು. ಕಿರಿಸೊಸೆಯೂ ಮೇಷ್ಟ್ರು. ಒಳ್ಳೆಯವರು. ಇವನಿಗಿಂತ ಹಣವಂತರು. ಕೈಬಿಡುವುದಿಲ್ಲ. ಎಂದು ಯೋಚಿಸಿದಳು.
ಯಾವುದಕ್ಕೂ ಫೋನು ಮಾಡಿ ಹೋಗುವುದು ಲೇಸು ಎಂಬ ಮುದಿ ಎಚ್ಚರ ಎಚ್ಚರಿಸಿತು.
ಅಷ್ಟರಲ್ಲಿ ಹಿರಿ ಸೊಸೆ ಬಾಗಿಲು ಮುಚ್ಚಿಕೊಂಡಿದ್ದಳು.
ಪಟ್ಟಣದ ಇನ್ನೊಂದು ಕೊನೆಯಲ್ಲಿ ಕಿರಿ ಮಗನ ಮನೆ. ಸುತ್ತಲಿನ ಊರುಗಳ ಸರಕಾರಿ ಶಾಲೆಗಳ ಮೇಷ್ಟ್ರುಗಳು ಸೇರಿಕೊಂಡು ಕಟ್ಟಿಕೊಂಡಿರುವ ವಠಾರ. ಒಂಥರ ಮೇಷ್ಟ್ರು ಜಾತಿಯ ಹಟ್ಟಿ.
ಮುದುಕಿ ಅಂಗಳಕ್ಕೆ ಬಂದು ಗೇಟ್ ಮೆತ್ತಗೆ ಸದ್ದಾಗದಂತೆ ತೆಗೆದಳು. ತಿಳಿದಿದ್ದಳು, ಈ ಮನೆಯಲ್ಲಿ ನಿಶಬ್ಧಕ್ಕೆ ಪ್ರಾಶಸ್ತ್ಯ. ಹಿರಿಮಗನದು ವ್ಯವಾರಹಸ್ಥ ಕುಟುಂಬ. ಅಲ್ಲಿ ಯಾವಾಗಲೂ ಧಂ ಧಂ ಧದಧಂ. ಕಿರಿಮಗನ ಮನೆಯಲ್ಲಿ ಉಸಿರಿಗೂ ಪರ್ಮಿಶನ್ ಬೇಕು, ನಿರ್ಭೀತಿಯಿಂದ ಹರಿಯಲು. ಟೀವಿಯಿಲ್ಲ, ಟೇಪ್ ರೆಕಾರ್ಡರ್ ಇಲ್ಲ. ಪರವಾಗಿಲ್ಲ. ಅದುವೇ ನೆಮ್ಮದಿ. ಮಕ್ಕಳು ಸದಾ ಪುಸ್ತಕದಲ್ಲಿ, ಮಗ ಸೊಸೆ ಪೇಪರು ಕರೆಕ್ಷನ್ನುಗಳಲ್ಲಿ ಮುಳುಗಿರುತ್ತಾರೆ. ಅಂಗಳದಲ್ಲಿ ಬುದ್ಧ ನಸುನಗುತ್ತ ಸ್ವಾಗತಿಸಿದ.
ಅಜ್ಜಿ ಕರೆಗಂಟೆ ಒತ್ತಿದಳು.
ಒಳಗೆ ಎಷ್ಟೊಂದು ನಿಶಬ್ಧ, ಬೆರಗಾದಳು. ಕಿಟಕಿ ಪರದೆ ಸರಿಸಿ ಮೊಮ್ಮಕ್ಕಳು ಕೈ ಬೀಸುವ ದೃಶ್ಯ ಕಣ್ಮುಂದೆ ಸುಳಿಯಿತು. ಕಿಟಕಿಯತ್ತಲೇ ದಿಟ್ಟಿಸಿದಳು. ಎಷ್ಟು ಹೊತ್ತಾದರೂ ಪರದೆ ಸರಿಯಲಿಲ್ಲ. ಮತ್ತೊಮ್ಮೆ ಬೆಲ್ ಒತ್ತಲು ಮುಂದಾಗಿ, ಮಗನಿಗೆ ಗದ್ದಲವೆಂದರೆ ಆಗಿಬರಲ್ಲ, ಅಗಗಲ ಬೆಲ್ ಒತ್ತುತ್ತೀಯಲ್ಲಮ್ಮ ಎಂದು ಸಿಡುಕುತ್ತಾನೆ. ಒಮ್ಮೆ ಫೋನ್ ಮಾಡಿ ಕಟ್ ಮಾಡಿದರೆ ಕಟ್ ಎಂದು ಅರ್ಥ, ಮತ್ತೆ ರಿಂಗ್ ಮಾಡಬಾರದು ಕ್ಲಾಸಿನಲ್ಲಿರುತ್ತೇನೆ ಎಂದು ಪಾಠ ಮಾಡಿದ್ದಾನೆ.
ಕಾದಳು.
ಕದ ತೆರೆಯಲಿಲ್ಲ. ಅಂಗಳ ವೀಕ್ಷಿಸಿದಳು. ಕಾರು ಇರಲಿಲ್ಲ. ಚಪ್ಪಲಿಗಳೂ ಇರಲಿಲ್ಲ. ಕಣ್ಣಾಲಿಗಳು ನೀರಾದವು. ಗಂಟಲು ಉಕ್ಕಿ ಬಂತು. ಯಾರಾದರೂ ನೋಡಿಯಾರು, ಮಗನ ಬಗ್ಗೆ ತಪ್ಪು ತಿಳಿದಾರು! ಬಾಯಿಗೆ ಸೆರಗು ಕಟ್ಟಿ ಸರಸರನೆ ಹೊರನಡೆದು, ತುಸು ದೂರ ನಡೆದು, ಭೋರ್ಗರೆಯಲು ಯತ್ನಿಸಿದರೆ, ಕಣ್ಣಿಂದ ನೀರು ಬರುತ್ತಿಲ್ಲ. ಬತ್ತಿ ಹೋಗಿವೆ. ಇದೆಂಥ ನಗೆಯಾಟ ನಿನ್ನದು?, ಮುದುಕಿ ಕೇಳುತ್ತಾಳೆ. ಆಕಳ ಕರುವಿನ ವಯಸಿನ ಮಕ್ಕಳೇ ಆಸ್ಪತ್ರೆಯಲ್ಲಿರುವಾಗ, ತೊಂಭತ್ತೇಳರ ಮುದುಕಿಯ ಮೇಲೆ ಎಷ್ಟು ತಾನ ಗಮನ ಹರಿಸಲು ಸಾಧ್ಯ?ಸೃಷ್ಟಿ ವಾಸ್ತವವಾದಿಯೋ, ಅತಿಸೂಕ್ಷ್ಮವಾದಿಯೋ?
ಒಂದು ನಾಯಿ ಹಂದಿ, ಇರುವೆ ಸಹ ಸುಳಿಯದ ಬೀದಿಗಳಲ್ಲಿ ಮುದುಕಿ ನಡೆದಳು. ಇನ್ನಿಬ್ಬರ ನೆನಪಾಯಿತು. ಮುಂದಿನ ಆಯ್ಕೆಯಾಗಿಯಲ್ಲ, ಅಲ್ಲಿನ ಸೃಜನಶೀಲ ಪ್ರತಿಕ್ರಿಯೆಗಳ ಕಲ್ಪನೆಯಾಗಿ. ಈ ನಡೂಲನ ಹೊರತು ಎಲ್ಲ ಒಟ್ಟಾಗಿದ್ದರು. ಒಟ್ಟಿಗೇ ಭಾಗವಾದರು. ಇವನು ಹೊರನಡೆದ ಮತ್ತುಅವರು ಭಾಗವಾದ ನಡುವಲ್ಲಿನ ವರುಷಗಳೆಷ್ಟು? ಪ್ರತಿಯೊಬ್ಬರೂ ಆ ವರುಷಗಳನ್ನು ತಮ್ಮ ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಾರಲ್ಲ? ಭಾಗಿಸಬೇಕಲ್ಲವೇ?.
ಭಾಗಿಸಬೇಕು ತಾನೆ?
ಹಾಗೆ ಯೋಚಿಸುತ್ತ ನಡೆಯುತ್ತಿರುವಾಗ ಕಾಂತಮ್ಮಳಿಗೆ ಮೋರಿ ಎದುರಾಯಿತು. ಅಲ್ಲಿ ಹಂದಿಗಳು ಉರುಳಾಡುತ್ತಿದ್ದವು. ಹಲವು ಹಂದಿಗಳು. ಎಷ್ಟೊಂದು ಹಂದಿಗಳು. ದೊಡ್ಡ, ದಪ್ಪ, ನಡೂಲ, ಗಂಡು, ಹೆಣ್ಣು, ಹಿರಿಯ ಕರಿಯ ಹಂದಿಗಳು. ಪುಟ್ಟ ಪುಟ್ಟ ಪುಟಾಣಿ ಹಂದಿಗಳು. ಕಪ್ಪು ಕೆಸರಲ್ಲಿ ಕಪ್ಪು ಕಪ್ಪಾದ ಹಂದಿಗಳು. ಸ್ವಚ್ಛಂದವಾಗಿಉರುಳಾಡುತ್ತಿವೆ. ಪಟ್ಟಣದ ಕಲ್ಮಶದಲ್ಲಿ. ಅವುಗಳಿಗೆ ಯಾವ ಲಾಕ್ ಡೌನ್ ಇಲ್ಲ. ಸೀಲ್ ಡೌನ್ ಇಲ್ಲ. ಮುದುಕಿಗೆ ಹಂದಿಗಳ ಮೇಲೆ ಅಕ್ಕರೆಯೇನು ಆಗಲಿಲ್ಲ; ಬದಲಾಗಿ ಅವನ್ನು ನೋಡುತ್ತ ಮನಸ್ಸಿನಲ್ಲಿ ವಿಚಿತ್ರ ಶಕ್ತಿಯ ಸಂಚಲನ ಉಂಟಾಯಿತು.
ಈಸಬೇಕು ಎಂಬಂಥದ್ದು. ಜೀವಾತ್ಮ ಇರುವವರೆಗೆ ಅದನ್ನು ಸಹಲಬೇಕು ಎಂಬಂಥದ್ದು. ಬಟ್ಟೆಗಂಟಿನಲ್ಲಿ ಪಿಂಚಣಿಯ ಹಣವಿತ್ತು. ಅರ್ಧ ಹೊಸ ನೋಟುಗಳು. ಅರ್ಧ ಹಳೆ ನೋಟುಗಳು. ಒಟ್ಟಿಗೆ ಬದಲಾಯಿಸಿದರೆ ಎಲ್ಲರಿಗೂ ಕಣ್ಣಾಗುವೆ ಎಂದು ಕಾದು ವಿಫಲಗೊಂಡು ಮುಂದೊಂದಿನಎಲ್ಲಿಯಾದರೂ ಇಸಕೊಳ್ಳುವರೇನೊ ಎಂದು ಹಾಗೆ ಉಳಿಸಿಕೊಂಡಿದ್ದಳು.
ಹಣವನ್ನು ಮೋರಿಗೆ ಎಸೆದಳು. ಹಂದಿಗಳ ಮೇಲೆ. ನರಮನುಷ್ಯೆ ತಿನ್ನಲು ಏನೊ ಕೊಡುತ್ತಿದ್ದಾಳೆ ಎಂದು ಭಾವಿಸಿದ ಹಂದಿಗಳು ಮೂತಿಯೆತ್ತಿ, ನಿರಾಶೆಗೊಂಡು ಗುಟುರ್ ಗುಟುರ್ ಎನ್ನುತ್ತ ತಮ್ಮ ಕ್ರೀಡೆಯನ್ನು ಮುಂದುವರೆಸಿದವು.
ಮುದುಕಿ ವಠಾರದ ಮುಂಬಾಗಿಲಿಗೆ ಬಂದಳು. ಪೊಲೀಸರು ಅಡ್ಡಗಟ್ಟಿದರು.
‘ಏನು ಆಟ ಆಡ್ತಿದೀಯಾ ನೀನು? ಅಲ್ಲೋಗ್ತೀನಿ ಇಲ್ಲೋಗ್ತೀನಿ, ಇಲ್ಲಿದ್ರೆ ಹೇತ್ಕೋತೀನಿ ತೊಳೆಯೋರಿಲ್ಲ ಎಂದು ಕತೆ ಕಟ್ಟಿ ಇವಾಗೇನು ನಿಮ್ಮಜ್ಜ ಬರ್ತಾನ ತೊಳಿಯೋದಕ್ಕೆ?’
‘ಏ ಎಳ್ಕೊಂಡೋಗಿ ಎರಡು ದಿವಸ ಸ್ಟೇಷನ್ನಿನಲ್ಲಿ ಕೂರಿಸಿರೋ. ತಲೆ ನೆಟ್ಟಗೆ ನಿಲ್ತದೆ’, ಕಾಂತಮ್ಮಳ ಜೋತುಬಿದ್ದ ಕಿವಿಗಳು ಅಳ್ಳಾಡುತ್ತಿದ್ದವು; ಕ್ರೋಧದಿಂದ.
‘ನಂದು ನಾನೇ ತೊಳ್ಕೋತೀನಿ, ತಿಕಾ ಮುಚ್ಕಂಡು ಒಳಹೋಗಲು ಬಿಡಿ, ನಿಮ್ಮ ನಾಲ್ಕು ಕಾಸು ಸಮಯ ಕೇಳೆನು’. ಗದ್ಗದಿತ ಗಂಟಲು.
ಕಾಂತಮ್ಮ ಬೀಗ ತೆರೆದು ಒಳಬಂದಳು. ಹೋಗುವಾಗ ಗೌಎನ್ನುತ್ತಿದ್ದ ಮನೆ ಗಾಳಿಬೆಳಕಿನಿಂದ ನಳನಳಿಸುತ್ತಿತ್ತು. ತನ್ನ ಮನೆಯೆನಿಸಿತು. ಒಬ್ಬಳೇ. ಹೋಂ ಅಲೋನ್ ಅಟ್ ನೈಂಟಿ ಸೆವೆನ್. ಎಲ್ಲಂದರಲ್ಲೆ ಮಲಗಬಹುದು, ಏನಂದರದನ್ನೆ ತಿನ್ನಬಹುದು, ನಡುಮನೆಯಲ್ಲೆಲ್ಲಾ ಉರುಳಾಡಬಹುದು. ಸ್ಯಾಲೆ ಬಿಚ್ಚಿ ನರ್ತಿಸಬಹುದು; ಆಹ್, ನರ್ತನವೇ! ವಯಸಿನಲ್ಲಿರುವಾಗ ಸುಂದರಿ. ಪತಿಗೆ ಈರ್ಷೆಯಾಗುವಷ್ಟು. ಮಗ ನ್ಯೂಸ್ ಚಾನೆಲ್ ಹಾಕಿ ಹಾಕಿ ಮರಣ ಕಹಳೆ ಮಾತ್ರ ಕೇಳಿಸಿದ್ದನು. ಮುದುಕಿ ಚಾನೆಲ್ ಚೇಂಜ್ ಮಾಡಿ, ಧೂಂ ಧಡಾಧೂಂ ಹಾಡು ಹಾಕಿದಳು. ಮಗನಸೋಫಾ ಮೇಲೆ ಮಲಗಿ ಮೆತ್ತೆಗೆ ತಲೆದಿಂಬು ಕೊಟ್ಟುಕೊಂಡಳು. ಇನ್ನು ಟೀವಿ ರಿಮೋಟು ದಿನಪೂರ್ತಿ ತನ್ನದೇ. ಮೂಲೆಯಲ್ಲಿ ಭರಪೂರ ಭರವಸೆಯಿತ್ತು, ಮೂಟೆ ಕಡಲೇ ಕಾಯಿ. ನಿಶ್ಚಿಂತೆ.
ಮುದುಕಿ ನಿಜಕ್ಕೂ ಆ ದಿನಗಳನ್ನು ಮನಸಾರೆ ಅನುಭವಿಸಿದಳು. ಸೌಜನ್ಯಕ್ಕೂ ಆಸ್ಪತ್ರೆ ಸೇರಿದವರ ಬಗ್ಗೆ ವಿಚಾರಿಸಲಿಲ್ಲ. ವಿಚಾರ ಮನದ ಪರದೆ ಮೇಲೆ ಹಾದು ಹೋಗುತ್ತಿತ್ತು; ಹಾಯಲು ಬಿಟ್ಟು ಸುಮ್ಮನಾಗುತ್ತಿದ್ದಳು. ಬರಲಾರರು ಎಂಬುದು ಅಸ್ಪಷ್ಟವಾಗಿ ಅಚ್ಚೊತ್ತಿತ್ತು. ಹಿಂದುಮುಂದಿನ ಚಿಂತೆ ಎನಗೇಕೆ. ಸೀಕ್ರೆಟ್ಟಾಗೊಂದು ಒಳ ಆಸೆ ಇಟ್ಟುಕೊಂಡಿದ್ದಳು. ಎಂದಾದರೊಂದು ದಿನ ತಾನು ಆಸ್ಪತ್ರೆ ಹಾಸಿಗೆ ಮೇಲೆ ಮಲಗಿರಬೇಕು. ನಾಲ್ಕು ಮಕ್ಕಳು ಸೊಸೆಯಂದಿರು ಸುತ್ತ ನೆರೆದಿರಬೇಕು. ಕೈಗೆ ಗ್ಲುಕೋಸು ಚುಚ್ಚಿರಬೇಕು. ಪಕ್ಕದಲ್ಲಿ ಹಣ್ಣು ಹಂಪಲಿರಬೇಕು.
ಡಾಕ್ಟರು ನನ್ನ ಕಾಳಜಿ ಮಾಡಬೇಕು. ಭಗವಂತ ಅದು ಯಾಕೊ ಎನಗೆ ಗಟ್ಟಿಪಿಂಡ ಕೊಟ್ಟು ಒಂದು ದಿನವಾದರೂ ಆಸ್ಪತ್ರೆಗೆ ಅಡ್ಮಿಟ್ ಮಾಡುವ ಅವಕಾಶ ಕೊಡದೆ ನಿರಾಸೆಗೊಳಿಸಿದನು. ಬದಲಾಗಿ ಇದೆನೊ ಹೊಸದು ಕೊಟ್ಟಿರುವನು. ಕಾಂತಮ್ಮ ಈಗ ಮಗ ಸೊಸೆಯ ಹಾಸಿಗೆ ಮೇಲೆ ಮಲಗುತ್ತಿದ್ದಳು. ತನ್ನದಕ್ಕಿಂತ ಮೆತ್ತಗಿತ್ತು. ಅವರ ಬೀರು ತೆರೆದು ಒಂದೊಂದೆ ಸೀರೆ ತೆಗೆದು ಮುಟ್ಟಿ ಸವರಿ ಮಾಡಿದಳು. ಸೊಂದಿ ಸೊಂದಿ ಹುಡುಕಿದಳು.
ಮೊಮ್ಮಗನ ಮೊಮ್ಮಗಳ ಒಳಉಡುಪುಗಳನ್ನು ಹಿಡಿದೆತ್ತಿ ನೋಡಿದಳು. ಅವರ ಅಲಂಕಾರಿಕ ವಸ್ತುಗಳನ್ನು ಪರಿವೀಕ್ಷಿಸಿದಳು. ಅಡಿಗೆ ಮನೆಯಲ್ಲಿನ ಡಬ್ಬಿಗಳನ್ನೆಲ್ಲ ತಡಕಿದಳು. ರುಚಿಯಾದ್ದನ್ನೆಲ್ಲ ಮುಕ್ಕಿದ್ದಳು. ಸೊಸೆಯ ಆರ್ಥಿಕ ಅಡಗು ತಾಣಗಳೆಲ್ಲ ಗೋಚರಿಸಿದ್ದವು. ಮುಟ್ಟುವ ಆಸಕ್ತಿ ಕಳೆದುಕೊಂಡಿದ್ದಳು. ಹಿಂದಾಗಿದ್ದರೆ ಚೂರು ಇರಿದು ಎರಡನೆಯವನಿಗೋ ನಾಲ್ಕನೆಯವನಿಗೊ ವರ್ಗಾಯಿಸುತ್ತಿದ್ದಳು. ಸೊಸೆ ಎಂದಿನಂತೆ ಗಂಡನೆಂದು ಭಾವಿಸಿ ಸುಮ್ಮನಾಗುತ್ತಿದ್ದಳು. ಕಾಂತಮ್ಮ ಹಂಡೆ ಪೂರ್ತಿ ಬಿಸಿನೀರು ಕಾಯಿಸಿ ಸುಸ್ತಾಗುವಷ್ಟು ಸುರಿದುಕೊಂಡಳು. ಇಷ್ಟಿದ್ದೂ ಎಡಗಣ್ಣು ಮಾತ್ರ ಹೊಡೆಯುತ್ತಲೇ ಇತ್ತು.

ಈ ನಡುವೆ ಮುಂಜಾನೆ ಬಾಗಿಲು ತೆರೆದಾಗೆಲ್ಲ ಹೋಟೆಲಿನ ಪೊಟ್ಟಣಗಳು ಎಡತಾಕುತ್ತಿದ್ದವು. ಮೆಡಿಕಲ್ ಶಾಪಿನ ಪೊಟ್ಟಣಗಳು ಇರುತ್ತಿದ್ದವು. ತನ್ನ ಮಾತ್ರೆಗಳು ಯಾರಿಗೆ ಗೊತ್ತಿರುವುದು? ಮುದುಕಿ ಪೊಟ್ಟಣಗಳನ್ನು ಎತ್ತಿ ಏನಿದೆ ಎಂದು ಮೂಸುತ್ತಿದ್ದಳು. ಹಬೆ, ಅನ್ನದ ಗಂಧದ ನಡುವೆ ಯಾವ ಯಾವುದೋ ಚಿರಪರಿಚಿತ ವಾಸನೆ ಅಡರುತ್ತಿತ್ತು. ಮೆಟ್ಟಿಲುಗಳ ಮೇಲೆಯೆ ಬಿಟ್ಟುಬಿಡುತ್ತಿದ್ದಳು. ತನ್ನ ಪ್ರೀತಿಯ ಕಡಲೆಕಾಯಿಗಳು ಸಾಕಿತ್ತು. ಸಾಕಿತ್ತು ಮಾತ್ರವೇ?. ಚಿರಪರಿಚಿತ ವಾಸನೆಗಳು ಒಮ್ಮೆಯಾದರೂ ಕದ ತಟ್ಟಿ ಹೇಗಿದ್ದೀಯಮ್ಮ ಎನ್ನಬಹುದಿತ್ತಲ್ಲವೇ? ಧೈರ್ಯವಿಲ್ಲವೋ ಅಥವಾ…. ನಿರ್ಲಕ್ಷ್ಯವೋ? ತಾಯಿ ಅಧೀರ ಮಕ್ಕಳನ್ನು ಒಪ್ಪಬಹುದು, ನಿರ್ಲಕ್ಷ್ಯ?
ಆ ಮನೆಯು ಪುಟ್ಟದಾಗಿದ್ದರಿಂದ ಬಚ್ಚಲು ಒಳಗಿದ್ದರೂ ಕಕ್ಕಸಿನ ಕೋಣೆ ಮಾಳಿಗೆಯಲ್ಲಿತ್ತು. ಮುದುಕಿಗೆ ಹತ್ತಿ ಇಳಿಯುವುದು ತೊಂದರೆಯೇನಲ್ಲ. ಕೈಕಾಲುಗಳು ಯಂತ್ರಗಳಂತೆ ಚಲಿಸುತ್ತಿದ್ದವು.
ಕಾಂತಮ್ಮ ಅಂದು ಮುಂಜಾನೆ ಎಂದಿನಂತೆ ಎರಡು ಬೊಗಸೆ ಭರಪೂರ ಕಡಲೆ ಕಾಯಿ ತಿಂದು ಮಿಳ್ಳೆ ನೀರು ಕುಡಿದು, ಕಕ್ಕಸಿಗೆಂದು ಮೇಲೆ ಹೋಗಿದ್ದಳು. ಮುಗಿಸಿಕೊಂಡು ಮೆತ್ತಗೆ ಮೆಟ್ಟಿಲು ಇಳಿಯುತ್ತಿರುವಾಗ ನಿತ್ರಾಣವೆನಿಸಿ ಕುಸಿದು ಕೂತಳು. ಎದುರು ಹಲವು ದಿನಗಳಿಂದ ಪೇರಿಸಿಕೊಂಡಿದ್ದ ಬೆಳ್ಳಿ ಬಣ್ಣದ ಪೊಟ್ಟಣಗಳು. ಕಣ್ಣು ಮಂಜಾದವು.
***
ಅದೇ ದಿನ ಮಗ ಮತ್ತು ಸೊಸೆಯ ಬಿಡುಗಡೆ. ಮಗ ಆಟೋದಿಂದಿಳಿದು ಡ್ರೈವರಿಗೆ ಚಿಲ್ಲರೆ ತೆಗೆದು ಕೊಡುತ್ತಿದ್ದನು. ಸೊಸೆ ಆ ಕಡೆ ಈ ಕಡೆ ವಾಲಾಡುತ್ತ ಮೆಟ್ಟಿಲು ಹತ್ತಿ ಮೊದಲ ಮಹಡಿಗೆ ಬಂದಳು. ಅತ್ತೆ ಸೆರಗು ಹರಡಿಕೊಂಡು ಮೆಟ್ಟಿಲ ಮೇಲೆ ಕೂತಿದ್ದನ್ನು ಕಂಡು, ‘ಯಾಕವ್ವ ಇಲ್ಲಿ ಕೂತಿದ್ದೀಯ’ ಎಂದು ಮೈದಡವಿದಳು. ಕಿಟಾರನೆ ಕಿರುಚಿದಳು.
ಮೆಟ್ಟಿಲ ಮಗ್ಗುಲಲ್ಲಿದ್ದ ಬಚ್ಚಲಿನ ಕಿಟಕಿಯಿಂದ ಮುದುಕಿಯ ಕೊರಳಿಗೆ ಸೆರಗು ಸುತ್ತಿಕೊಂಡಿತ್ತು.
ಬಹಳ ಚೆನ್ನಾಗಿದೆ. ವಿವರಗಳಲ್ಲೇ ಬದುಕು ಕಟ್ಟಿಕೊಟ್ಟಿದ್ದೀರಿ. ಕಥಾತಂತ್ರವೂ ಅಚ್ಚುಕಟ್ಟು.
ತುಂಬ ತುಂಬ ಥ್ಯಾಂಕ್ಸ್ ಸರ್ ಓದಿದ್ದಕ್ಕೆ, ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ. 🙂 🙂