ಮಧುಸೂದನ ವೈ ಎನ್
ಇದೊಂದು ಅದ್ಭುತ ಪುಸ್ತಕ. ಕೇವಲ ಐವತ್ತು ಚಿಲ್ಲರೆ ಪುಟಗಳು. ಪ್ರಜಾವಾಣಿ ಮಯೂರಗಳಲ್ಲಿ ಪ್ರಕಟಗೊಂಡಿರುವ ಹತ್ತು ಪ್ರಬಂಧಗಳು. ಬಯಲುಸೀಮೆಯ ಬದುಕಿನ ಬಗ್ಗೆ. Strongly recommend.
ಲೇಖಕರು ಒಂದು ಪ್ರಬಂಧದಲ್ಲಿ ಹೀಗೆ ಹೇಳುತ್ತಾರೆ-
ಪ್ರೆಸೆಂಟ್ ಸಾ” ಎಂದು ಹೇಳಲು ಬರುತ್ತಿರಲಿಲ್ಲ. ಸುಮ್ಮನೆ ಎದ್ದುನಿಂತು “ಪೆ ಪೆ ಪೆ” ಎಂದು ವಾಕ್ಯವನ್ನು ಮುಂದುವರೆಸಲಾಗದೆ ಕಣ್ಣೀರು ತುಂಬಿಕೊಂಡು ನಿಂತುಬಿಡುತ್ತಿದ್ದೆ. ನಿಂತು ಪಾಠ ಹೇಳುವ ದಿನಗಳು ನನ್ನ ಗಲ್ಲಿಗೇರಿಸುವ ದಿನಗಳೇ ಎಂದು ಭಾವಿಸುತ್ತಿದ್ದೆ. ಅವರನ್ನು ಚಿಕ್ಕಂದಿನಲ್ಲಿ ‘ಬಿಕ್ಕಲ’ ಎಂದು ಕರೆಯುತ್ತಿದ್ದರಂತೆ. ತೀರ ಗೋಳಾಟ ಮಾಡದೆ ತೀರ ಹರಟೆ ಮಾಡದೆ ಓದುಗರ ಹಿತಕ್ಕಾಗಿ ಹೇಳಿದಂತೆ ಪ್ರಬಂಧ ಬರೆಯುತ್ತ ಹೋಗುತ್ತಾರೆ.
ಪುಟಗಳನ್ನು ಸ್ಕ್ರೀನ್ ಶಾಟ್ ಹಾಕೋಣ ಅಂದರೆ ಇರುವುದೇ ಚಿಕ್ಕ ಪುಸ್ತಕ. ಕೆಲವು ಸಾಲುಗಳು-
ಹಳ್ಳಿಗಾಡುಗಳಲ್ಲಿ ಜಾತಿಪದ್ದತಿಯ ವಿಲಕ್ಷಣ ಕಟ್ಟುಪಾಡುಗಳನ್ನು ಮುರಿಯುವ ಹೆಚ್ಚಿನ ಅವಕಾಶ ಮಹಿಳೆಯರಿಗೆ ಮಾತ್ರ ಇರುತ್ತದೆ. ಈ ಕ್ರಾಂತಿಕಾರಿಕ ಉಲ್ಲಂಘನೆಯಲ್ಲಿ ಮಹಿಳೆಯರು ಸದಾ ಮುಂದಿರುತ್ತಾರೆ. ಪುರುಷರು ಮಾತ್ರ ಈ ವಿಷಯದಲ್ಲಿ ಅದೃಷ್ಟಹೀನರು.
ನೀನು ದೊಡ್ಡವನಾದ ಮೇಲೆ ನನಗೆ ಒಂದುಕಟ್ಟು ವಿಳೆದೆಲೆ ಒಂದು ಪಾವು ಅಡಿಕೆ ಕೊಡಿಸಿಬಿಡಪ್ಪ ಈ ಬಡವಿಗೆ ಅಷ್ಟು ಸಾಕು
ಒಮ್ಮೆ ಬೇಲಿ ಹಾರುವಾಗ ಲೇಖಕರ ಕಣ್ಣಿಗೆ ಕಳ್ಳಿಹಾಲು ಬಿದ್ದುಬಿಡುತ್ತದಂತೆ. ಉರಿಯೋ ಉರಿ. ವೈದ್ಯರಿಲ್ಲದ ಕಾಲ. ಸ ಗಾಳಿತಿಮ್ಮಿಯೆಂಬ ಮಾದಿಗ ಹೆಂಗಸು ಅವರ ಕಣ್ಣಿಗೆ ಎದೆಹಾಲು ಹನಿಸಿ ವಾಸಿ ಮಾಡಿದರಂತೆ.
“ನಿರಂತರ ದುಡಿಮೆ ಒಂಟಿತನಕ್ಕೆ ಉಪಶಮನ”
ತುಮಕೂರಿನ ಭಾಷೆ- ಮೆಣಸಿನಕಾಯಿಯನ್ನು “ಕಸುರುಗಾಯಿ” ಎನ್ನುವುದು
ಸಾರನ್ನು ʼಎಸರುʼ ಎನ್ನುವುದು.
ಕಾರಾಮಗ್ಗಿ(ಕರಮೊಗೆ)
ಮಳೆ,ಬಯಸಲುಸೀಮೆಯಂದರೆ ಮಳೆಯ ಬಗ್ಗೆ ಆಡದಿರುವಂತಿಲ್ಲ. “ಯಾವ ಮಳೆ ಬರದಿದ್ದರೂ ನಾನು ಮಾತ್ರ ಬಂದೇ ಬರುತ್ತೀನಿ ಎಂದು ಉತ್ತರೆ ಮಳೆ ಬಲಗೈ ಭಾಷೆ ಕೊಟ್ಟಿತ್ತಂತೆ. ಉತ್ತರೆ ಮಳೆಗಿರುವ ರೋಗನಿವಾರಕ ಗುಣಲಕ್ಷಣ…
“ಕುಟುಂಬಕ್ಕೆ ಎಂತಹ ವಿಷಮ ಸ್ಥಿತಿ ಒದಗಿಬಂದರೂ ಬೀಜದ ರಾಗಿ ಮಾತ್ರ ಮುಟ್ಟದಿರುವ ಅಜ್ಜಿ” (ಗೊತ್ತಿರಲಿ ಮಂಗಳ ಗ್ರಹಕ್ಕೋದರೂ ಈ ಪ್ರಜ್ಞೆ ಇರಬೇಕಾಗುತ್ತದೆ)
ಅಜ್ಜವ್ವ ಪ್ರತಿದಿನ ಬೆಳಗ್ಗೆ ಮನೆಯ ಕೆಲಸ ಕಾರ್ಯಗಳನ್ನೆಲ್ಲ ಸೊಸೆಯಂದಿರಿಗೆ ವಹಿಸಿ, ತಲೆ ಮೇಲೆ ನೀರುತುಂಬಿದ ಕರಮೊಗೆಯನ್ನು ಹೊತ್ತು ಅವಳ ಪ್ರೀತಿ ಪತ್ರ ʼಜಯಿʼ ಎಂಬ ಕೆಂದಹುಸವನ್ನು ಹಿಡಿದುಕೊಂಡು ಹೊಲಕ್ಕೆ ಹೋದರೆ, ದೀರ್ಘ ಹಗಲಿನ ಕೊನೆಯ ಅಂಚಿಗೆ ಬರುತ್ತಿದ್ದ ತೇವಭರಿತ ಮುಸ್ಸಂಜೆಯ ಮಂದ ಬೆಳಕಿನಲ್ಲಿ ಅವಳು ಮರಳಿ ಹಟ್ಟಿಗೆ ಬರುತ್ತಿದ್ದುದು.
ಹಸಿ ರಾಗಿ ತೆನೆಗಳನ್ನು ಹೊಲಗಳಲ್ಲಿ ಸುಟ್ಟು ಬೆಲ್ಲ ತೆಂಗಿನತುರಿ ಹಚ್ಚಿ ಮುತ್ತುಗದ ಎಲೆಯಲ್ಲಿ ಹಂಚುವುದು, ಮತ್ತು ʼರಾಗಿಬೆಳಸೆʼ(ಹಸಿ ರಾಗಿಯನ್ನು ಜಜ್ಜಿ ಕಲ್ಲುಪ್ಪು ಹಸಿಮೆಣಸಿನಕಾಯಿ ಬೆಳ್ಳುಳ್ಳಿಯನ್ನು ಜಜ್ಜಿ ಬೆರೆಸಿ ಉಂಡೆ ಕಟ್ಟುವುದು).
ಅದೆಷ್ಟು ಸೊಪ್ಪುಗಳು-
ಕೋಲುಅಣ್ಣೆಸೊಪ್ಪು, ಬಟ್ಟಕೊಮ್ಮೆಸೊಪ್ಪು, ಮುಚ್ಲಣ್ಣೆಸೊಪ್ಪು, ಗಣಿಕೆಸೊಪ್ಪು, ಸೀರಂಗಿಸೊಪ್ಪು, ಹಾಲುಮೂಲಂಗಿ ಸೊಪ್ಪು, ಸೀಮೆಆನೆಗೊನೆಸೊಪ್ಪು, ನುಗ್ಗೆಸೊಪ್ಪು, ದಂಟಿನ ಸೊಪ್ಪು, ಕಿರುಕ್ಸಾಲೆ ಸೊಪ್ಪು, ಜಣುವಿನ ಸೊಪ್ಪು, ಕೀರೆಸೊಪ್ಪು.
ಅಪ್ಪಯ್ಯಾ, ಕೂಡುದಾರಿಯಂದ ಹಿಂದಕೆ ಮೂರು ಹೆಜ್ಜೆ, ಮುಂದಕೆ ಏಳು ಹೆಜ್ಜೆ, ಪಾದ ನೆನೆಸೂವಂತ ತೊರೆ, ಸಾಲುಹುಣಿಸೆ ನೆರಳು ದಾಟಿಬಂದರೆ ಅದೇ ನನ್ನೂರ ಗುಡಿಹಳ್ಳಿ. ಊರಿಗೆ ಬಂದರೆ ಕುರಿಹಾಲು ಕುರಿತುಪ್ಪ ಕೊಟ್ಟೇನು, ಕಂಚಿನ ಗಂಗಳದಲ್ಲಿ ಮುದ್ದೆಯಾ ಉಂಡ್ಹೋಗು. ಬಾರೊ ಅಪ್ಪಯ್ಯ ನಮ್ಮ ಹಟ್ಟಿಗೆ”
ಲೇಖಕರ ಪರ್ಮಿಶನ್ ಇಲ್ಲದೆ ಒಂದೇ ಒಂದು ಪ್ರಬಂಧ ಹಂಚುತ್ತಿದ್ದೇನೆ.
ಪರಿಚಯ ಸೊಗಸಾಗಿದೆ