ಮಧುಕರ್ ಬಳ್ಕೂರು ಸರಣಿ ಕಥೆ 5 – ಆಲ್ಕೆರೆ ಜಡ್ಡಿನ ಕ್ರಿಕೆಟಾಟ..

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

5

 ಆಲ್ಕೆರೆ ಜಡ್ಡಿನ ಕ್ರಿಕೆಟಾಟ

ಅದು ಆಲ್ಕೆರೆ ಜಡ್ಡು. ಜಡ್ಡು ಅಂದರೆ ನಮ್ಮ ಆಡುಭಾಷೆಯಲ್ಲಿ ಏನನ್ನು ಬೆಳೆಯದ ಭೂಮಿ ಅಂತನ್ನಬಹುದು. ಇಂತಾ ಜಡ್ಡು ನಮ್ಮ ಪಾಲಿಗೆ ಪರ್ಮನೆಂಟ್ ಕ್ರಿಕೆಟ್ ಅಡ್ಡವಾಗಿತ್ತು. ಕಾರಣ, ಬೇರೆ ಹೊಲ ಗದ್ದೆಗಳೆಲ್ಲ ನಾಟಿ ಪೈರು ಅಂತ ವರುಷದ ಬಹುತೇಕ ದಿನಗಳು ತುಂಬಿರುತ್ತಿದ್ದರೆ ಆಲ್ಕೆರೆ ಜಡ್ಡು ಮಾತ್ರ ವರುಷದ ಮೂನ್ನೂರ ಅರವತ್ತೈದು ದಿನ ಖಾಲಿ ಹೊಡೆದಿರುತ್ತಿತ್ತು. ಹಾಗಾಗಿ ಈ ಜಡ್ಡು ಹುಡುಗರ ಪಾಲಿಗೆ ಹಾಟ್ ಫೇವರಿಟ್ ಆಗಿತ್ತು. 

ಇನ್ನು ಆಲ್ಕೆರೆ ಅನ್ನೋದು ನಾವಿದ್ದ ಜಾಗದ ಹೆಸರು. ನಾವಿದ್ದ ಮನೆಯ ಎಡ ಮೂಲೆಯಲ್ಲೊಂದು ಹಳೆಯದಾದ ಆಲದ ಮರ ಹಾಗೂ ಅದಕ್ಕೆ ಅಂಟಿಕೊಂಡಿರುವಂತೆ  ಕೆರೆ ಇದ್ದ ಕಾರಣ ಆ ಜಾಗಕ್ಕೆ ಆಲ್ಕೆರೆ ಅನ್ನೊ ಹೆಸರು. ಇನ್ನು ಕೆರೆಯ ಕಲ್ಲು ಬಂಡೆಯಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡುವ ಆ ಸಂಭ್ರಮ, ಹಾಗೆ ನೋಡುತ್ತಲೇ ಎದುರಿನ ಹಸಿರು ಬೈಲಿನಲ್ಲಿ ಅರ್ಧ ಮೈಲಿ ನಡೆದರೆ ಸೂರ್ಯನೇ ಕೈಗೆ ಸಿಗುತ್ತಾನೆನೊ ಎನಿಸುವ ಆ ಭಾವ ಎಲ್ಲವೂ ನಯನ ಮನೋಹರ. ಇನ್ನು ಇಂತಹ ವಾತಾವರಣದಲ್ಲಿ ಕ್ರಿಕೆಟ್ ಆಡುವ ಸಂಭ್ರಮವಂತೂ ಮಾತಿಗೆ ನಿಲುಕದು.
ಆದರೆ ನಾವೆಲ್ಲಿ ಆಡೋದು..!? ಆಡೋದನ್ನ ನೋಡೋದಷ್ಟೆ.! ಒಮ್ಮೊಮ್ಮೆ ಜನ ಜಾಸ್ತಿಯಾದಾಗ ನಾವು ಚಿಕ್ಕವರು ಅಂದುಕೊಂಡವರು ಆಡುವ ಆಸೆಯನ್ನೆ ಬಿಡಬೇಕಿತ್ತು.

ಹಾಗಾಗಿ ಬಹಳಷ್ಟು ದಿನ ಆಟ ನೋಡೋದಷ್ಟೆ ಕೆಲಸವಾಗೋದು.. ಎಷ್ಟು ದಿನ ಅಂತಾ ಸುಮ್ಮನೆ ನೋಡೋದು..? ಏನಾದ್ರು ಮಾಡಬೇಕಲ್ಲ! ಹಾಗಾಗಿನೆ ದೊಡ್ಡವರು ಹೊಡೆದ ಚೆಂಡನ್ನೆಲ್ಲ ಎತ್ತಿಕೊಂಡ್ ಬರೋಕೆ ಅಂತ ಓಡೋದು. ಅದನ್ನ ಎಷ್ಟು ಬೇಗ ತಗೊಂಡ್ ಬರ್ತಿವೋ ಅಷ್ಟು ಬೇಗ ನಾವು ಅವರನ್ನು ಇಂಪ್ರೆಸ್ ಮಾಡಿದೀವಿ ಅಂತ ಅಂದುಕೊಳ್ಳೋದು!! ನಮಗ್ಯಾರು ಥ್ಯಾಂಕ್ಸ್ ಹೇಳದಿದ್ದರೂ ಈ ಕೆಲಸವನ್ನೆಲ್ಲಾ ಭಾರಿ ಉಮೇದಿನಲ್ಲಿ ನಿಯತ್ತಿನಲ್ಲಿ ಮಾಡೋದು!! ಹೀಗೆ ಮಾಡ್ತಾ ಇದ್ದರೆ ಅವರು ಇಂಪ್ರೆಸ್ ಆಗಿ ನಮ್ಮನ್ನು ಮುಂದಿನ ಮ್ಯಾಚ್ ಗೆ ಸೇರಿಸಿಕೊಳ್ಳತ್ತಾರಂತ ಅಂದಾಜು!!

ಇನ್ನು ನನ್ನ ತಲೆಯಲ್ಲೊ… ಯಾವುದೋ ಇಂಟರ್ ನ್ಯಾಶನಲ್ ಲೆವೆಲ್ ನಲ್ಲಿ ಮ್ಯಾಚ್ ನಡೀತಿದೆ ಅನ್ನೋ ಭ್ರಮೆ! ಅಲ್ಕೆರೆ ಜಡ್ಡು ಇದ್ದಿದ್ದೆ ಮೂವತ್ತು ಯಾರ್ಡ್ ಗಳಷ್ಟು.! ಆದರೆ ಅದೇ ನನಗಾಗ ಭಯಂಕರ ದೊಡ್ಡ ಗ್ರೌಂಡ್ ತರಹ ಕಾಣೋದು! ಇನ್ನು ಹತ್ತಿರದ ರಸ್ತೆಯಲ್ಲಿ ಕಾಣುವ ಬೀದಿ ದೀಪದ ಕಂಬ ಒಂಥರಾ ಆಡೋರಿಗೆ ಫ್ಲಡ್ ಲೈಟ್ ತರಾ ತೋರೋದು! ಆದರೇನು.. ಹೇಳಿ ಕೇಳಿ ಹೊಡೆದ ಬಾಲ್ ಗಳೆಲ್ಲ ಪೊದೆ ಸಂದಿಲೋ ರಸ್ತೆ ಆಚೆಗೋ ಹೋಗೋದು! ತಕ್ಷಣಕ್ಕೆ ಎಲ್ಲಿ ಸಿಗಬೇಕು ? ಒಂದರ್ಥದಲ್ಲಿ ಆಡೋದಕ್ಕಿಂತ ಬಾಲ್ ಹೂಡ್ಕೊದರಲ್ಲೆ ಸಮಯ ಜಾರಿ ಹೋಗಿರೋದು. ಇನ್ನು ಸೂರ್ಯ ಮುಳುಗಿದ ಮೇಲೂ ಆಟ ಸಾಗುತ್ತಿತ್ತೆಂದರೆ ರಸ್ತೆಯಲ್ಲಿರೋ ಬೀದಿಯ ದೀಪ ಅದ್ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿತ್ತೆಂದು ತಿಳಿದುಕೊಳ್ಳಿ..!! ಆ ಮಂಪರು ಬೆಳಕಿನಲ್ಲೆ ಬಾಲ್ ವೈಡ್ ಆಗಿದ್ದು, ಸ್ಟಂಪ್ ಆಗೋದು, ರನೌಟ್ ಆಗೋದು, ಹೀಗೆ ಹೌದು ಇಲ್ಲಗಳ ನಡುವೆ ಒಂದಷ್ಟು ಜಗಳಗಳಾಗೋದು, ಕಿರಿಕಿರಿಗಳಾಗೋದು… ಸ್ವಲ್ಪ ಹೊತ್ತಿನಲ್ಲೆ ಎಲ್ಲ ತಣ್ಣಗಾಗಿ ಆಡುತ್ತಿದ್ದ ಮಹಾಶಯರೇ ಫೋರ್ಥ್ ಅಂಪೈರ್ ಗಳಾಗಿ ಒಟ್ಟಾಗಿ ಕುಳಿತು ಮ್ಯಾಚ್ ಬಗ್ಗೆ ಟೀಕೆ, ವಿಮರ್ಶೆ ಮಾಡೋದು… ಹೀಗೆ ಒಂದು ರಸವತ್ತಾದ ಸಂಜೆ ಸ್ವಲ್ಪ ರಸ, ಸ್ವಲ್ಪ ವಿರಸದೊಂದಿಗೆ ಸಾಮರಸ್ಯದಲ್ಲಿ ಮುಗಿದುಹೋಗೋದು… 

ನನಗೋ ನಮ್ಮ ಈ ಜಡ್ಡಿನಲ್ಲಿ ಆಗುವ ಮ್ಯಾಚ್ ಟಿವಿಯಲ್ಲೊಮ್ಮೆ ನೇರ ಪ್ರಸಾರವಾದರೆ ಹೇಗಿರುತ್ತೆ ಅಂತ ಯೋಚನೆ! ಏಕೆಂದರೆ ಆಡದೆ ಬಾಲ್ ಬಾಯ್ ಆಗಿ ಬೌಂಡರಿ ಗೆರೆ ಆಚೆ ನಿಂತಿರುತ್ತಿದ್ದ ನಾನು ನನಗೆನೆ ಗೊತ್ತಿಲ್ಲದಂತೆ ಕಾಮೆಂಟರಿ ಉದುರಿಸುತ್ತಿದ್ದೆ ನೋಡಿ.! ಹೌದು, ಅರ್ಧಂಬರ್ಧ ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡವನ್ನು ಸೇರಿಸಿ ಬರೀ ನನಗಷ್ಟೆ ಕೇಳಿಸುವಂತೆ ಗುನುಗುತ್ತಿದ್ದವನಿಗೆ ಜಡ್ಡಿನಲ್ಲಿ ನಡೆಯುತ್ತಿದ್ದ ಮ್ಯಾಚ್ ಯಾವ ಇಂಟರ್ ನ್ಯಾಶನಲ್ ಮ್ಯಾಚಿಗಿಂತಲೂ ಕಡಿಮೆಯೆನಿಲ್ಲ ಅನ್ನೊ ಭಾವನೆಯಿತ್ತು.!! ಹಾಗೂ ನನ್ನ ಏಕ್ಸಾಯಿಟ್ ಮೆಂಟ್ ತಣಿದು ಆಗೊಮ್ಮೆ ಈಗೊಮ್ಮೆ ಆಡೋಕೆ ಚಾನ್ಸ್ ಸಿಗೋದು! ಆದ್ರೂ ಬ್ಯಾಟ್ ಮಾಡೋಕೆ ಎಲ್ಲಿ ಸಿಗ್ಬೇಕು ಹೇಳಿ..? ಸಿಕ್ಕರೂ ಒಂದ್ ಬಾಲ್, ಎರಡ್ ಬಾಲ್. ಅದು ಕೂಡಾ ಮ್ಯಾಚೇ ಮುಗಿದೇ ಹೋಯಿತು ಅನ್ನೊ ಟೈಮಲ್ಲಿ! ಇನ್ನೇನು ಮ್ಯಾಚ್ ಸೋಲಾಯ್ತು ಅನ್ನೊ ಟೈಮಲ್ಲಿ ಆಡುತ್ತಿರೋ ನಮ್ಮ ಕೈಯಿಂದ ಬ್ಯಾಟ್ ತಗೊಂಡು ಇದು ಇಲ್ಲಿಗೆ ಮುಗಿತು ಅಂತ ನೆಕ್ಟ್ ಮ್ಯಾಚ್ ಗೆ ರೆಡಿಯಾಗ್ತಾರೆ ನೋಡಿ. ಆಗಲೇ ನಮ್ಮ ಮುಸುಡಿ ಕಪ್ಪಾಗೋದು! ಇದೊಂಥರಾ ಹೇಗೆ ಅಂದ್ರೆ ನಾವು ಆಟಕ್ಕಿದ್ದೇವೆ ಲೆಕ್ಕಕ್ಕಿಲ್ಲ ಅನ್ನೊ ಹಾಗೆ. ಬಹಳಷ್ಟು ಸಾರಿ ಹೀಗೆ ಆಗೋದು. ಒಂದಿನವಂತೂ ಹೀಗಾಗಿದ್ದಕ್ಕೆ ಮನೆಗೆ ಬಂದು ರಂಪಾಟವೇ ಮಾಡಿಬಿಟ್ಟಿದ್ದೆ. ಯಾರೇನೇ ಸಮಾಧಾನ ಮಾಡಿದ್ರು ಕೇಳೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಕೊನೆಗೂ ಅಪ್ಪಯ್ಯ ಕಾಟಾಚಾರಕ್ಕೆ ಅಂತ ಮನೆ ಅಂಗಳದಲ್ಲೇ ಬೌಲ್ ಮಾಡೋಕೆ ಬಂದರೂ ನನ್ನದು ಆಲ್ಕೆರೆ ಜಡ್ಡಲ್ಲೆ ಆಡಬೇಕೆನ್ನುವ ಹಟ. ಹಾಗೆ ಜಡ್ಡಿನಲ್ಲಿ ಆಡಿದರಷ್ಟೆ ಅದು ಕ್ರಿಕೆಟ್ ಅನ್ನೊದು ನನ್ನ ತಲೇಲಿ. ಎಲ್ಲಾ ಎರಡು ದಿನದ ಕತೆ. ಮತ್ತದೇ ಆಡೋಕೆ ನಮ್ಮನ್ನ ಸೇರಿಸಿಕೊಂಡ್ರೆ ಸಾಕು ಅನ್ನೊ ಮನಸ್ಥಿತಿ. ಅತ್ತಿದ್ದು ಗೊಳಾಡಿದ್ದು ಯಾವುದು ನೆನಪಿಲ್ಲ. ಫೀಲ್ಡಿಂಗ್ ಮಾಡುವಾಗ ಒಂದು ಸಲ ಬಾಲ್ ಹಿಡಿದ್ರು ಸಾಕು ಆ ದಿನ ನಾವು ಪುನೀತ ಅನ್ನೊ ಭಾವನೆ.! ಅಪ್ಪಿ ತಪ್ಪಿ ಕ್ಯಾಚ್ ಹಿಡಿದರಂತೂ ಆ ದಿನ ಭೂಮಿ ಮೇಲೆ ಇಲ್ಲ ಅನ್ನೊ ತರ ಮನಸ್ಸಲ್ಲಿ..! ಇನ್ನು ಕ್ಯಾಚ್ ಬಿಟ್ಟರೆ ..? ಆ ಕ್ಷಣಕ್ಕೊಂದು ಬೈಗುಳ… ಅಮ್ಮಮ್ಮಾ ಅಂದ್ರೆ ನೆಕ್ಟ್ ಮ್ಯಾಚ್ ಗೆ ಡ್ರಾಪ್… ಯಥಾಪ್ರಕಾರ ಬೌಂಡರಿ ಗೆರೆ ಆಚೆಗೆ ನಿಂತು ಬಾಲ್ ಹೆಕ್ಕೊ ಕೆಲಸ. ಅದೇ ಕಾಮೆಂಟರಿಯ ಗೊಣಗಾಟ. ಒಟ್ಟಾರೆ ಕ್ರಿಕೆಟ್ ಅನ್ನೊ ಮೂರಕ್ಷರದ ಸುತ್ತಲೇ ಮನಸು ಸಕ್ರಿಯವಾಗಿರಬೇಕು. ಅದು ಬೈಲಲ್ಲಿ ಆಡೋ ಮ್ಯಾಚೇ ಆಗಲಿ. ಇಂಟರ್ ನ್ಯಾಶನಲ್ ಮ್ಯಾಚೇ ಇರಲಿ. ಇದು ನನ್ನೊಳಗಿನ ಏನ್ಸಕ್ಲೋಪೀಡಿಯಾದ ಧ್ಯೇಯವಾಗಿತ್ತು.

ಇನ್ನು ಅಷ್ಟು ಚಿಕ್ಕ ಗ್ರೌಂಡ್ ನಲ್ಲಿ ಎಮ್ಮೆ ಹಸು ಕರುಗಳೆಲ್ಲ ಫೀಲ್ಡರ್ ಗಳಾಗೋವು. ಆಡೋಕೆ ಬರುವ ಅರ್ಧದಷ್ಟು ಹುಡುಗರು ಹಸು ಕರು ಮೇಯಿಸಿಕೊಂಡೇ ಬರೋರು. ಹಾಗಾಗಿ ಅವುಗಳು ಒಂಥರಾ ಆಟದ ಭಾಗವಾಗಿ ಇರುತ್ತಿದ್ದವು. ಯಾರ ಮನೇಲಿ ಕ್ರಿಕೆಟ್ ಆಡಿ ಬರ್ತೀನಿ ಅಂತ ಹೇಳೋ ಧೈರ್ಯ ಯಾವ ಹುಡುಗರಿಗೂ ಇರ್ಲಿಲ್ಲ. ಹಾಗೆ ಗೊತ್ತಾದ್ರೆ ಜನ್ಮ ಜಾಲಾಡೋರು. ಕ್ರಿಕೆಟ್ ಏನು ಹೊಟ್ಟೆಗೆ ಕೂಳು ಹಾಕುತ್ತಾ ಅನ್ನೊದು ಬಹುತೇಕ ಮನೆಯವರ ಮಾಮೂಲಿ ಬೈಗುಳವಾಗಿತ್ತು. ಹಾಗಾಗಿಯೆ ಸ್ವಾಮಿ ಕಾರ್ಯ ಸ್ವಕಾರ್ಯ ಅಂತಲೇ ಎಮ್ಮೆ ಹಸುಗಳನ್ನೆಲ್ಲ ಮೇಯಿಸಿಕೊಂಡು ಬರ್ತೀನಿ ಅಂತ ಬಂದು ಆಡೋದು. ಎಮ್ಮೆ, ಹಸುಗಳು ಆದರ ಪಾಡಿಗೆ ಅದು ಮೇಯೋವು. ಅದೇ ಗ್ಯಾಪ್ ನಲ್ಲಿ ಕ್ರಿಕೆಟ್ ಆಡೋದು. ಒಮ್ಮೊಮ್ಮೆ ಅವು ಕಣ್ತಪ್ಪಿಸಿ ಯಾರ್ಯಾರ ಮನೆ ಹೊಲಗದ್ದೆಗೆಲ್ಲ ಹೋಗಿ ಮೇಯೋವು. ಹೊಲದ ಯಜಮಾನರು ಅದನ್ನು ತಮ್ಮ ತೋಟದಲ್ಲಿ ಕಟ್ಟಾಕಿ ಕ್ರಿಕೆಟ್ ಆಡ್ತಿದ್ದ ಜಾಗಕ್ಕೆ ಬಂದು ಯಾರದ್ರಿ ಹಸು ಅಂತ ದಬಾಯಿಸಿ ಕೇಳೋರು. ಗೊತ್ತಾದರೂ ಆ ಹೊತ್ತಿಗೆ ಒಪ್ಪಿಕೊಳ್ಳೊಕೆ ಹಿಂಜರಿಕೆ. ಕೊನೆಗೆ ಆಟ ಎಲ್ಲಾ ಮುಗಿದ ಮೇಲೆ ದಮ್ಮಯ್ಯ ದಕ್ಕಯ್ಯ ಮನೆಯವರಿಗೆ ಹೇಳ್ಬೇಡಿ ಅಂತ ಕೇಳಿಕೊಂಡು ಬಿಡಿಸಿಕೊಂಡು ಬರೋದು. ಹಾಗೂ ಒಮ್ಮೊಮ್ಮೆ ಮನೆಯವರಿಗೂ ಗೊತ್ತಾಗಿ ಅಲ್ಲಿಯೂ ಮಂಗಳಾರತಿ ಆಗೋದು. ಹಾಗಾಗಿ ಜಡ್ಡಿನಲ್ಲಿ ಎಮ್ಮೆ ಹಸುಗಳು ಓಡಾಡ್ತಾ ಇದ್ದರೆ ಅದನ್ನು ಯಾರೂ ಓಡಿಸ್ತಿರಲಿಲ್ಲ. ಕಣ್ಣುದುರೆ ಇದೆ ಅನ್ನೊ ಕ್ಲಾರಿಟಿ.

ಇನ್ನು ಬೆಳಿಗ್ಗೆ ಟೈಮಲ್ಲಿ ಆಡೋಕೆ ಬಂದಾಗಲಂತೂ ಆಲ್ಕೆರೆಯಲ್ಲಿ ಸ್ನಾನ ಮಾಡದೆ ಯಾರು ವಾಪಾಸ್ ಆಗುತ್ತಿರಲಿಲ್ಲ. ಆಟವೆಲ್ಲ ಮುಗಿದು ಸುಮಾರು ಮಧ್ಯಾಹ್ನದ ಹೊತ್ತಿಗೆ ಕೆರೆಗೆ ಬಂದು ಒಂದು ಡೈವ್ ಹೊಡೆದರೆ ಆಯಾಸವೆಲ್ಲ ಮಂಗಮಾಯವಾಗೋದು… ಬಿರುಬಿಸಿಲಿಗೆ ಎರಡು ರೌಂಡು ಈಜಿದಾಗ ಮತ್ತೆ ಇನ್ನೊಂದು ರೌಂಡ್ ಕ್ರಿಕೆಟ್ ಆಡೋ ಹುಮ್ಮಸ್ಸು ಬರೋದು…. ಹುಡುಗರೆಲ್ಲಾ ಒಟ್ಟಿಗೆ ಸೇರಿ ಕೆರೆಯಲ್ಲಿ ಈಜುವ ಆ ಗಮ್ಮತ್ತಿಗೆ ಹಸು ಕರುಗಳಿಗೆಲ್ಲಾ ಒಂಥರಾ ಹುಮ್ಮಸ್ಸು ಬಂದುಬಿಡೋದು… ಮಾತು ಬರೋಲ್ಲ ಅನ್ನೋದು ಬಿಟ್ಟರೆ ಬೆನ್ನು ತಿಕ್ಕುವಾಗ ಅವುಗಳ ಕಣ್ಣಲ್ಲಿ ಕಾಣುವ ಸಮಾಧಾನ ನೋಡಬೇಕು! ಇನ್ನು ಅವುಗಳು ಕೊಡುವ ಸಹಕಾರಕ್ಕೆ ನಾವುಗಳು ದಿನಪೂರ್ತಿ ಕೆರೆಯಲ್ಲೆ ಇರಬೇಕು.! ನೀರು ಅಂದರೆನೇ ಹಾಗೋ ಅಥವಾ ಆಲ್ಕೆರೆ ನೀರಿನಲ್ಲೆ ಅಂತಾ ಜಾದೂ ಇದೆಯಾ ಹಾಗಂತ ಒಮ್ಮೊಮ್ಮೆ ಆಶ್ಚರ್ಯವಾಗೋದು! ಏಕೆಂದರೆ ನಮ್ಮೂರಿನಲ್ಲಿ ಬಹಳಷ್ಟು ಕೆರೆಗಳಿದ್ದರೂ ಈಜಬೇಕು ಅಂತ ಅನ್ನಿಸಿದಾಗಲೆಲ್ಲ ಹೆಚ್ಚಾಗಿ ಬರುತ್ತಿದ್ದುದು ಆಲ್ಕೆರೆಗೆನೆ. ಕಾರಣ ಆಲ್ಕೆರೆ ಜಡ್ಡಿನ ಕ್ರಿಕೆಟಾಟ. ಕ್ರಿಕೆಟ್ ನಾವುಗಳೆಲ್ಲಾ ಹೀಗೆ ಸೇರುವುದಕ್ಕೆ ಒಂದು ಒಂದೊಳ್ಳೆ ನೆನಪಾಗಿತ್ತು. ಆದರೆ ಆ ನೆಪದೊಂದಿಗೆ ಕಳೆದ ಕ್ಷಣಗಳೆಲ್ಲ ಈಗಲೂ ಸವಿಸವಿ ನೆನಪುಗಳಂತೆ ಕಾಡ್ತಿರೊದಂತೂ ಸುಳ್ಳಲ್ಲ.  

| ಇನ್ನು ನಾಳೆಗೆ |

‍ಲೇಖಕರು Admin

July 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: