ಮಧುಕರ್ ಬಳ್ಕೂರು ಸರಣಿ ಕಥೆ 20 – ಕ್ರಿಕೆಟ್ ಪಂದ್ಯಗಳು ಹೇಳುವ ಕತೆಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

20

ಕ್ರಿಕೆಟ್ ಪಂದ್ಯಗಳು ಸಾಕಷ್ಟು ಕತೆ ಹೇಳುತ್ತೆ. ಕ್ರಿಕೆಟಿಗರ ವೃತ್ತಿ ಬದುಕು ಸಾಕಷ್ಟು ನೀತಿಗಳನ್ನು ಹೇಳುತ್ವೆ.

ಅದು1969. ಕಾನ್ಪುರದಲ್ಲಿ ಇಂಡಿಯಾ ಆಸ್ಟ್ರೇಲಿಯಾ ನಡುವಿನ ಟೆಸ್ಟ್. ಕರ್ನಾಟಕದ ಜಿ ಆರ್ ವಿಶ್ವನಾಥ್ ಪಾಲಿಗೆ ಪದಾರ್ಪಣೆಯ ಪಂದ್ಯ. ಉತ್ಸಾಹದಲ್ಲೆ ಕಣಕ್ಕಿಳಿದ ವಿಶ್ವನಾಥ್ ಗೆ ಆರಂಭದಲ್ಲೆ ನಿರಾಸೆ ಕಾದಿತ್ತು. ತಾನೆದುರಿಸಿದ ಮೊದಲ ಬಾಲ್ ನಲ್ಲೆ ಔಟಾಗುವುದರೊಂದಿಗೆ ವಿಶ್ವನಾಥ್ ಭಾರವಾದ ಹೆಜ್ಜೆಯಲ್ಲಿ ಪೆವಿಲಿಯನ್ ಗೆ ಸಾಗಿದರು. ಕಣ್ಣಂಚಿನಲ್ಲಿ ನೀರು. ಮನಸು ಭಾರ. ಶೂನ್ಯ ಸುತ್ತಿದ್ದಕ್ಕಿಂತಲೂ ತನಗೆ ಇನ್ನೊಂದು ಚಾನ್ಸ್ ಸಿಗುತ್ತೋ ಇಲ್ಲವೋ ಅನ್ನೋದೆ ದೊಡ್ಡ ಪ್ರಶ್ನೆಯಾಯಿತು.

ಆ ಕ್ಷಣಕ್ಕೆ ಅವರನ್ನು ಸಮಾಧಾನಿಸಿ ಸ್ಪೂರ್ತಿ ತುಂಬಿದ ಕ್ಯಾಪ್ಟನ್ ಪಟೌಡಿ ಹೇಳಿದ್ದಿಷ್ಟು, “ಡೊಂಟ್ ವರಿ, ನೀನು ನಾನು ಆಯ್ಕೆ ಮಾಡಿದ ಹುಡುಗ. ಆರಾಮಾಗಿ ಆಡು.” ಅಷ್ಟೇ, ವಿಶ್ವನಾಥ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಭರ್ಜರಿ ಸೆಂಚುರಿ ಹೊಡೆದರು. ಮುಂದೆ ಅವರು ಭಾರತದ ಪ್ರಾಮಿಸಿಂಗ್ ಬ್ಯಾಟ್ಸ್ಮನ್ ಎನಿಸಿದರು. ನೆನಪಿರಲಿ. ವಿಶ್ವನಾಥ್ ಹೊಡೆದ ಹದಿನಾಲ್ಕು ಸೆಂಚುರಿಯಲ್ಲಿ ಭಾರತ ತಂಡ ಸೋತಿಲ್ಲ. 

ಅದು1980. ಇಂಡಿಯಾ ಇಂಗ್ಲೆಂಡ್ ನಡುವಿನ ಗೋಲ್ಡನ್ ಜ್ಯೂಬಿಲಿ ಟೆಸ್ಟ್. ಆಗ ಭಾರತದ ನಾಯಕರಾಗಿದ್ದವರು ಜಿ ಆರ್ ವಿಶ್ವನಾಥ್. ಕಪಿಲ್ ದೇವ್ ಬೌಲಿಂಗ್ ನಲ್ಲಿ ಬಾಬ್ ಟೇಲರ್ ಹೊಡೆಯಲು ಹೋದ ಚೆಂಡು ಕೀಪರ್ ಕಿರ್ಮಾನಿ ಕೈ ಸೇರಿತ್ತು. ತಕ್ಷಣವೇ ಅಂಪೈರ್ ಔಟ್  ಕೊಟ್ಟುಬಿಟ್ಟರು. ಟೇಲರ್ ಕೂಡ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೆ ನಾಯಕ ವಿಶ್ವನಾಥ್ ಗೆ ಮಾತ್ರ ಚೆಂಡು ಟೇಲರ್ ಬ್ಯಾಟ್ ಗೆ ತಗುಲಿಲ್ಲವೆನಿಸಿತ್ತು. ಸೀದಾ ಅಂಪೈರ್ ಬಳಿಗೆ ಹೋಗಿ ಚರ್ಚಿಸಿ ಟೇಲರ್ ಅವರನ್ನು ವಾಪಸ್ ಆಡಲು ಕರೆದರು. ಅಷ್ಟೇ, ಕಳಪೆ ಸ್ಥಿತಿಯಲ್ಲಿದ್ದ ತಂಡವನ್ನು ಟೇಲರ್ ಬಾಥಮ್ ರ ಜೊತೆಗೂಡಿ ಶತಕದ ಜೊತೆಯಾಟವಾಡುವುದರ ಮೂಲಕ ಉತ್ತಮ ಸ್ಥಿತಿಗೆ ಕೊಂಡ್ಯೊದರು. ಇಂಡಿಯಾ ಮ್ಯಾಚ್ ಸೋತಿತು. ಆದರೆ ವಿಶ್ವನಾಥ್ ಅವರ ಸ್ಪೋರ್ಟ್ಸ್ ಮ್ಯಾನ್ ಶಿಪ್ ಅವರ ಆಟದಷ್ಟೇ ಪ್ರಖ್ಯಾತಿ ಪಡೆಯುತು. ನೆನಪಿಡಿ, ವಿಶ್ವನಾಥ್ ಮತ್ತೆ ಭಾರತದ ಕ್ಯಾಪ್ಟನ್ ಆಗಲಿಲ್ಲ.

ಅದು 1989ರ ಭಾರತದ ಪಾಕಿಸ್ತಾನ್ ಪ್ರವಾಸ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪಾದಾರ್ಪಣೆಯ ಸರಣಿ. ಆದರೆ ಅದೇ ಸರಣಿಗೆ ಅಜರುದ್ದೀನ್ ಕೊನೆಯ ಗಳಿಗೆಯಲ್ಲಿ ಆಯ್ಕೆ ಆಗಿದ್ದರು ಅನ್ನೊದು ಹಲವರಿಗೆ ಗೊತ್ತಿಲ್ಲ. ಹೌದು, ಕಳಪೆ ಫಾರ್ಮ್ ನಲ್ಲಿದ್ದ ಅವರನ್ನು ಆಯ್ಕೆ ಮಾಡಲು ಆಯ್ಕೆದಾರರು ಬಹುತೇಕ ಹಿಂದೇಟು ಹಾಕಿದ್ದರು. ಆದರೆ ಅದೇ ಸಮಯಕ್ಕೆ ರಮಣ್ ಲಾಂಬಾವರು ಗಾಯಾಳುವಾಗಿದ್ದರ ಪರಿಣಾಮ ಅದೃಷ್ಟ ಅಜರ್ ಗೆ ಒಲಿಯಿತು. ಮೊದಮೊದಲು ಚುರುಕಾದ ಫೀಲ್ಡಿಂಗ್ ನಿಂದ ಗಮನಸೆಳೆದ ಅಜರ್ ನಂತರ ಬ್ಯಾಟಿಂಗ್ ನಿಂದಲೂ ತಂಡಕ್ಕೆ ಆಪದ್ಭಾಂಧವರಾದರು.

ಕೃಷ್ಣಮಾಚಾರಿ ಶ್ರೀಕಾಂತ್ ನಾಯಕರಾಗಿದ್ದ ಆ ಸರಣಿಯ ಎಲ್ಲಾ ನಾಲ್ಕು ಪಂದ್ಯಗಳು ಡ್ರಾಗೊಂಡವು. ಸರಣಿ ಮುಗಿದು ಭಾರತಕ್ಕೆ ವಾಪಸ್ ಆದ ಮೇಲೆ ಅಜರ್ ಗೆ ಮತ್ತೊಂದು ಅದೃಷ್ಟ ಒಲಿದಿತ್ತು. ತಂಡದಲ್ಲಿ ಕಪಿಲ್, ವೆಂಗಸರ್ಕಾರ್, ಶಾಸ್ತ್ರಿಯಂತಹ ಘಟಾನುಘಟಿಯರು ಇದ್ದರೂ ಆಯ್ಕೆದಾರರು ಮುಂದಿನ ಸರಣಿಗೆ ಅಜರ್ ಅವರನ್ನು ನಾಯಕರನ್ನಾಗಿ ನೇಮಿಸಿದ್ದರು. ಸರಣಿಯ ಮುಂಚೆ ತನ್ನ ಸ್ಥಾನಕ್ಕಾಗಿಯೇ ಪರದಾಡಿದ್ದ ಆಟಗಾರನೊಬ್ಬ ಮುಂದಿನ ಸರಣಿಗೆ ನಾಯಕನಾಗುತ್ತಾನೆಂದರೆ ನೆನಪಿಡಿ, ಭವಿಷ್ಯವೆನ್ನುವುದು ಯಾರಿಗೂ ಗೊತ್ತಿರುವುದಿಲ್ಲ.  ಅದು 1991ರ ಆಸ್ಟ್ರೇಲಿಯಾ ಪ್ರವಾಸದ ಒಂದು ಪಂದ್ಯ. ಪೆವಿಲಿಯನ್ ನಲ್ಲಿ 12ನೇ ಆಟಗಾರರಾಗಿ ಸೌರವ್ ಗಂಗೂಲಿ ಕುಳಿತಿದ್ದರು. ಅದೇ ಸಮಯದಲ್ಲಿ ಕಣದಲ್ಲಿರುವ ತಮ್ಮದೇ ತಂಡದ ಆಟಗಾರರಿಗೆ ನೀರು ತೆಗೆದುಕೊಂಡು ಹೋಗಿ ಕೊಡುವುದಕ್ಕೆ ಒಲ್ಲೆ ಅನ್ನುತ್ತಾರೆ. ಇಡೀ ಸರಣಿಯಲ್ಲಿ ಗಂಗೂಲಿ ಬರೀ ಒಂದು ಪಂದ್ಯವನ್ನಷ್ಟೇ ಆಡುತ್ತಾರೆ. ಮತ್ತೆ ಗಂಗೂಲಿ ಮುಂದಿನ ಸರಣಿಗೆ ಆಯ್ಕೆಗೊಳ್ಳುವುದಿಲ್ಲ.

ಬಹುಶಃ ಗಂಗೂಲಿ ಆ ಆಟಿಟ್ಯೂಡ್ ತೋರಿಸದಿದ್ದರೆ ಖಂಡಿತಾ ಒಂದಷ್ಟು ಅವಕಾಶಗಳು ಸಿಗುವುದರಲ್ಲಿತ್ತು. ಏಕೆಂದರೆ ಇಡೀ ತಂಡದಲ್ಲಿ ಅವರಷ್ಟೇ ಎಡಗೈ ಬ್ಯಾಟ್ಸ್ಮನ್ ಎನಿಸಿದ್ದರು. ಹಾಗೂ ಆಯ್ಕೆದಾರರು ಎಡಗೈ ದಾಂಡಿಗನನ್ನೇ ತಲಾಶ್ ಮಾಡುತ್ತಿದ್ದರು. ಇದೇ ಸಮಯದಲ್ಲಿ ದ್ರಾವಿಡ್ ರಣಜಿ ಪಂದ್ಯಗಳಲ್ಲಿ ಅತ್ಯದ್ಭುತವಾಗಿ ಪ್ರದರ್ಶನ ನೀಡುತ್ತಿದ್ದರೂ ಎಡಗೈ ದಾಂಡಿಗರಿಗೆ ಆದ್ಯತೆ ಇದ್ದುದರಿಂದ ವಿನೋದ್ ಕಾಂಬ್ಳಿ ಆಯ್ಕೆ ಆದರು. ಕಾಂಬ್ಳಿ ಎರಡು ವರುಷ ಅದ್ಭುತವಾಗಿ ಆಡಿ ಜನಪ್ರಿಯತೆ ಗಳಿಸಿ ನಂತರ ಬಂದಷ್ಟೇ ವೇಗದಲ್ಲಿ ಚರಿಶ್ಮ ಹಾಳು ಮಾಡಿಕೊಂಡರು. ನೆನಪಿಡಿ. ತಂಡದಲ್ಲಿ ಮತ್ತೆ ದಾಂಡಿಗನ ಸ್ಥಾನ ಖಾಲಿ ಬಿದ್ದಿತು.

ಅದು 1996ರ ಲಾರ್ಡ್ಸ್ ಟೆಸ್ಟ್. ನಾಲ್ಕುವರೆ ವರುಷ ಹೊರಗಿದ್ದ ಗಂಗೂಲಿಗೆ ಮತ್ತೊಂದು ಅವಕಾಶ ಲಭಿಸಿತ್ತು. ಅದೇ ಸಂದರ್ಭದಲ್ಲಿ ಬಹಳ ವರುಷಗಳಿಂದ ಅವಕಾಶದ ಕದ ತಟ್ಟುತ್ತಿದ್ದ ದ್ರಾವಿಡ್ ಗೂ ಮೊದಲ ಬಾರಿ ಅವಕಾಶ ಒಲಿದಿತ್ತು. ಗಂಗೂಲಿ ಮೊದಲ ಪಂದ್ಯದಲ್ಲೆ ಭರ್ಜರಿ ಸೆಂಚುರಿ ಹೊಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರೆ ದ್ರಾವಿಡ್ ಮಾತ್ರ ಐದು ರನ್ನುಗಳಿಂದ ಶತಕ ವಂಚಿತರಾಗಿದ್ದರು. ಆದ್ರೆ ಅಂದು ದ್ರಾವಿಡ್ ಆಡಿದ ಆಟ ತೋರಿದ ಕ್ರೀಡಾ ಮನೋಭಾವ ಜಿ ಆರ್ ವಿಶ್ವನಾಥ್ ಅವರನ್ನು ಮತ್ತೆ ನೆನಪಿಸುವಂತೆ ಮಾಡಿತ್ತು. ತೊಂಭತ್ತೈದರ ಗಡಿಯಲ್ಲೂ ಅಂಪೈರ್ ಬೆರಳೆತ್ತೊದಕ್ಕೂ ಮುಂಚೆನೇ ಕ್ರೀಸ್ ತೊರೆದ ದ್ರಾವಿಡ್ ನೆರೆದಿದ್ದ ಕ್ರೀಡಾ ಪ್ರೇಮಿಗಳ ಹೃದಯವನ್ನು ಗೆದ್ದಿದ್ದರು. ಇಷ್ಟಾಗಿಯೂ ಕೆಲವೇ ವರುಷಗಳಲ್ಲಿ ದ್ರಾವಿಡ್ ರ ಆಟದ ವೈಖರಿ ಟೆಸ್ಟ್ ಗಷ್ಟೇ ಸರಿ ಅನ್ನೋ ಆರೋಪ ಕೇಳಿ ಬಂತು. ದ್ರಾವಿಡ್ ಕೂಡ ಈ ವದಂತಿಯಿಂದ ಬೇಸತ್ತು ಖಿನ್ನರಾದರೋ ಗೊತ್ತಿಲ್ಲ. ಅವರು ಕೂಡ ಒಂದಷ್ಟು ದಿನ ತೀರಾ ಸ್ಲೋ ಆಗಿ ಆಡುತ್ತಿದ್ದರು. ಆದರೆ ನಾಯಕ ಅಜರ್ ಮಾತ್ರ ಅವರ ಬಗ್ಗೆ ಭರವಸೆ ಕಳೆದುಕೊಳ್ಳದೆ ಪ್ರತಿ ಸೀರೀಸ್ ನಲ್ಲೂ ಅವರಿರುವಂತೆ ನೋಡಿಕೊಂಡರು. ಪರಿಣಾಮ, 1998ರ ವರ್ಷಪೂರ್ತಿ ನಿಧಾನಿಯಾಗಿದ್ದ ದ್ರಾವಿಡ್ 99ರಲ್ಲಿ ಎಲ್ಲರೂ ದಿಗ್ಭ್ರಮೆ ಆಗೋ ರೀತಿಯಲ್ಲಿ ಆಡಿದರು. ಭಾರತದ ದಿ ಗ್ರೇಟ್ ವಾಲ್ ಎನಿಸಿದರು.

ಅದು 2000ನೇ ಇಸವಿ. ಮ್ಯಾಚ್ ಫಿಕ್ಸಿಂಗ್ ಸ್ಕ್ಯಾಂಡಲ್ ನಿಂದ ಟೀಮ್ ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನುವ ವಾತಾವರಣವಿತ್ತು. ಅಂತ ಸಂದರ್ಭದಲ್ಲಿ ವಾತಾವರಣವನ್ನು ತಿಳಿಯಾಗಿಸಿ ಮತ್ತೆ ತಂಡವನ್ನು ಟ್ರ್ಯಾಕ್ ಗೆ ತರಬೇಕಾಗಿತ್ತು. ಆಗ ಇದೇ ಗಂಗೂಲಿ ಎನ್ನುವ ಗತ್ತು ಗಾಂಭೀರ್ಯದ ವ್ಯಕ್ತಿ ಮತ್ತೆ ಆಯ್ಕೆದಾರರ ಕಣ್ಣಿಗೆ ಕಾಣುತ್ತಾರೆ. ಅವರೇ ಅನಿವಾರ್ಯರೂ ಆಗುತ್ತಾರೆ. ಕಾರಣವಿಷ್ಟೇ, ಅವರ ಗಟ್ಟಿತನ, ಯಾರ ಮುಲಾಜಿಗೂ ಬಗ್ಗದ ಆ ಗುಣ ಈಗ ಎದುರಾಳಿ ತಂಡಗಳಿಗೆ ಉತ್ತರ ನೀಡುವುದಕ್ಕೆ ಅವಶ್ಯವಾಗಿದ್ದವು. ವಿಚಿತ್ರವೆಂದರೆ ತಂಡದಲ್ಲಿದ್ದ ಅನಿಲ್ ಕುಂಬ್ಳೆ ಗಂಗೂಲಿಗಿಂತಲೂ ಸೀನಿಯರ್ ಆಗಿದ್ದರು, ಹಾಗೂ ಎಲ್ಲಾ ರೀತಿಯಿಂದಲೂ ನಾಯಕತ್ವಕ್ಕೆ ಅರ್ಹರೇ ಆಗಿದ್ದರು. ಆದರೆ ಆಯ್ಕೆದಾರರು ಭವಿಷ್ಯದ ಭಾರತ ತಂಡವನ್ನು ತಲೆಯಲ್ಲಿ ಇಟ್ಟುಕೊಂಡು ಗಂಗೂಲಿಯನ್ನು ಆಯ್ಕೆ ಮಾಡಿದ್ದರು. ಹಾಗೂ ಅನಿಲ್ ಕುಂಬ್ಳೆ ಕೂಡ ತಮ್ಮ ಕೆರಿಯರ್ ನ ಕೊನೆಯಲ್ಲಿ ನಾಯಕತ್ವದ ಗದ್ದುಗೆ ಪಡೆಯುತ್ತಾರೆ. ಎರಡೆರಡು ಬಾರಿ ಅಜರ್, ಸಚಿನ್ ಆದ ನಂತರ ಗಂಗೂಲಿ, ದ್ರಾವಿಡ್, ಧೋನಿ ಬಳಿಕ ಅಂದರೆ ನೂರು ಟೆಸ್ಟ್ ಆಡಿದ ತರುವಾಯ ಟೆಸ್ಟ್ ಪಂದ್ಯಗಳ ಚುಕ್ಕಾಣಿ ಕುಂಬ್ಳೆಗೆ ಸಿಗುತ್ತದೆ.

ಈ ಎಲ್ಲಾ ಪ್ರಕರಣಗಳ ನೀತಿ ಒಂದೇ. ನೀವು ಹೇಗೆ ಇರುತ್ತಿರೋ ಅದೇ ರೀತಿಯಲ್ಲಿ ಸಹಜವಾಗೇ ಇರಿ. ನಿಮ್ಮಲ್ಲಿನ ಉತ್ತಮವಾದದ್ದನ್ನ ಸದಾ ನೀಡುತ್ತೀರಿ. ನಿಮಗೆ ಸಿಗಬೇಕಾಗಿದ್ದು ಸಿಕ್ಕೆ ಸಿಗುತ್ತದೆ. ಅದು ಎರಡೇ ಟೆಸ್ಟ್ ಕ್ಯಾಪ್ಟನ್ಸಿಯಲ್ಲಿ ವಿಶ್ವನಾಥ್ ರ ಕ್ರೀಡಾ ಮನೋಭಾವಕ್ಕೆ ಸಿಕ್ಕ ಮನ್ನಣೆಯೇ ಇರಬಹುದು. ಗಂಗೂಲಿಯ ಅದೇ ಗತ್ತು ಗಾಂಭೀರ್ಯದ ಗುಣಕ್ಕೆ ನಾಯಕತ್ವ ಸಿಕ್ಕಿದ ದೃಷ್ಟಾಂತವೇ ಇರಬಹುದು. ವಿಷಯ ಇಷ್ಟೇ. ಜೀವನದಲ್ಲಿ ಸಾಮರ್ಥ್ಯ ತೋರುವುದಷ್ಟೇ ನಿಮ್ಮ ಕೆಲಸ. ಅದು ಬಿಟ್ಟರೆ ಆಯ್ಕೆ ಸ್ವಾತಂತ್ರ್ಯವಿಲ್ಲ. ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೆನಿದ್ದರೂ ಬೇರೆಯವರದೇ. ಅದರಲ್ಲೂ ಆ ಸಮಯದ ಬೇಡಿಕೆ, ಪರಿಸ್ಥಿತಿ, ಸಂದರ್ಭಗಳು ನಿಮ್ಮನ್ನು ತೆಕ್ಕೆಗೆ ತೆಗೆದುಕೊಂಡು ಆಯ್ಕೆ ಮಾಡಿಕೊಂಡಿರುತ್ತದೆ ಅಷ್ಟೇ. ಅದರ ರಿಸಲ್ಟ್ ನಂತರ ಏನೇ ಇರಬಹುದು.

ಕಿರಿಯ ವಯಸ್ಸಿಗೆ ಅಂದರೆ ಇಪ್ಪತ್ತೊಂದನೇ ವಯಸಿಗೆ ಕ್ಯಾಪ್ಟನ್ ಆಗಿ ಟೈಗರ್ ಅಂತ ಕರೆಸಿಕೊಂಡ ಪಟೌಡಿ ಅವರನ್ನ ಈ ದೇಶ ಕಂಡಿದೆ. ಕಪಿಲ್ ದೇವ್ ಇಪ್ಪತ್ತನಾಲ್ಕನೇ ವಯಸ್ಸಿಗೆ ಇಂಡಿಯಾಕ್ಕೆ ವರ್ಲ್ಡ್ ಕಪ್ ಗರಿ ನೀಡಿದ್ದನ್ನು ನೋಡಿದ್ದೇವೆ. ಆದರೆ ನಂತರ ಅಂತಹ ಯಶಸ್ಸನ್ನು ಅವರು ನೋಡಲಿಲ್ಲ. ಇಪ್ಪತ್ತಮೂರನೇ ವಯಸಿಗೆ ಕ್ಯಾಪ್ಟನ್ ಆದ ಸಚಿನ್ ಎರಡೆರಡು ಬಾರಿ ಗದ್ದುಗೆ ಏರಿದರೂ ಯಶಸ್ಸು ಸಿಗಲಿಲ್ಲ. ಆದರೆ ಕ್ಯಾಪ್ಟನ್ಸಿಗೆ ಇರಬೇಕಾದ ಅರ್ಹತೆ, ಬುದ್ದಿವಂತಿಕೆ ಎಲ್ಲವೂ ಸಚಿನ್ ರಲ್ಲಿದ್ದವು.

ಮಹೇಂದ್ರ ಸಿಂಗ್ ಧೋನಿ ತಮಗಿಂತಲೂ ಸೀನಿಯರ್ ಎನಿಸಿದ ಯುವರಾಜ್,  ಸೆಹ್ವಾಗ್, ಹರ್ಭಜನ್, ಜಹೀರ್ ಖಾನ್ ಅವರನ್ನು ಹಿಂದಿಕ್ಕಿ ಕ್ಯಾಪ್ಟನ್ ಆಗುತ್ತಾರೆ. ಅಷ್ಟೇ ಅಲ್ಲ ಹಿರಿಯರಾದ ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್ ಅವರನ್ನು ಕೂಡಾ ಲೀಡ್ ಮಾಡುತ್ತಾರೆ. ನೆನಪಿಡಿ, ಅದೇ ಸಮಯಕ್ಕೆ ಧೋನಿಗಿಂತಲೂ ಉತ್ತಮ ವಿಕೆಟ್ ಕೀಪರ್ ಎನಿಸಿದ್ದ  ಪಾರ್ಥಿವ್ ಪಟೇಲ್ ಧೋನಿಯಿಂದಾಗಿ  ಹೊರಗುಳಿಯಬೇಕಾಗುತ್ತದೆ. ದಿನೇಶ್ ಕಾರ್ತಿಕ್ ಕ್ರಿಕೆಟ್ ಕೆರಿಯರ್ ಕೂಡ ಧೋನಿ ಇರುವುದರಿಂದ ಬಂದು ಹೋಗಿ ಬಂದು ಹೋಗಿ ಆಗುತ್ತದೆ. ಕಾರಣ ವಿಕೆಟ್ ಕೀಪರ್, ಬ್ಯಾಟ್ಸ್ಮನ್, ಕ್ಯಾಪ್ಟನ್ಸಿ, ಹಾಗೂ ಮ್ಯಾಚ್ ಫಿನಿಶರ್ ಎನಿಸಿದ್ದ ಧೋನಿ ಆಯ್ಕೆದಾರರ ಮೊದಲ ಆಯ್ಕೆ ಆಗಿರುತ್ತಾರೆ. 
ಪಟೌಡಿ, ಕಪಿಲ್, ಅಜರ್, ಸಚಿನ್, ಗಂಗೂಲಿ, ಧೋನಿ ಇವರೆಲ್ಲರಿಗೂ ಇರುವ ಸಾಮ್ಯತೆ ಎಂದರೆ ಅತೀ ಕಿರಿಯ ವಯಸ್ಸಿಗೆ ಕ್ಯಾಪ್ಟನ್ ಆಗಿರುತ್ತಾರೆ ಇಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಂದು ಕೆಲವೇ ವರುಷಗಳಲ್ಲಿ ಕ್ಯಾಪ್ಟನ್ ಆಗಿರುತ್ತಾರೆ. ವಿಷಯ ಇಷ್ಟೇ, ಆಯ್ಕೆದಾರರು ಭವಿಷ್ಯದ ಕ್ರಿಕೆಟ್ ಟೀಮ್ ಅನ್ನ ತಲೇಲಿಟ್ಟುಕೊಂಡು ಆಯ್ಕೆ ಮಾಡಿರುತ್ತಾರೆ ಅಷ್ಟೇ.

ಇನ್ನು ಕುಂಬ್ಳೆಗೆ ತಡವಾಗಿ ಕ್ಯಾಪ್ಟನ್ಸಿ ದಕ್ಕಿತು ಎಂದು ಹೇಳುವ ನಾವು ಅವರ ಒರಗೆಯವರಾದ ಶೇನ್ ವಾರ್ನ್ ಹಾಗೂ ಮುತ್ತಯ್ಯ ಮುರಳೀಧರನ್ ಗೆ ಕ್ಯಾಪ್ಟನ್ಸಿ ಸಿಗದಿರುವುದನ್ನು ಮರೆತಿದ್ದೇವೆ. ಹೌದು, ಸುದೀರ್ಘ ಅವಧಿಯವರೆಗೆ ತಮ್ಮ ತಂಡದ ಪರ ಆಡಿದ ವಾರ್ನ್ ಕಡೆಗೂ ತಮ್ಮ ದೇಶವನ್ನು ಮುನ್ನಡೆಸುವ ಭಾಗ್ಯ ಪಡೆಯಲಿಲ್ಲ. ಆದರೂ ಅವರ ಕ್ಯಾಪ್ಟನ್ ಶಿಪ್ ಕ್ವಾಲಿಟಿ ಹೊರಗೆ ಬಂದಿದ್ದು ಐಪಿಎಲ್ ಮೊದಲ ಸೀಸನ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲ್ಲಿಸುವುದರ ಮೂಲಕವೇ. ಅಂತೆಯೇ 800 ವಿಕೆಟ್ ಸರದಾರ ಮುತ್ತಯ್ಯ ಮುರಳೀಧರನ್ ಗೆ ಕ್ಯಾಪ್ಟನ್ ಆಗುವ ಯೋಗವೇ ಕೂಡಿ ಬರಲಿಲ್ಲ. ಶಿವನಾರಾಯಣ್ ಚಂದ್ರಪಾಲ್, ಗ್ಲೇನ್ ಮೆಗ್ರಾಥ್, ಕರ್ಟಿ ಎಂಬ್ರೋಸ್, ಜ್ಯಾಕ್ ಕ್ಯಾಲಿಸ್,  ವಿವಿಎಸ್ ಲಕ್ಷ್ಮಣ್, ಸಯೀದ್ ಅನ್ವರ್, ಚಾಮುಂಡ ವಾಸ್ ಇವರೆಲ್ಲರೂ ತಮ್ಮ ತಮ್ಮ ತಂಡದ ಪರ ಸುದೀರ್ಘ ಅವಧಿಯವರೆಗೆ ಆಡಿದರೆ ವಿನಃ ಕ್ಯಾಪ್ಟನ್ ಆಗಲಿಲ್ಲ.
ವಿಷಯ ಬರೀ ಕ್ಯಾಪ್ಟನ್ ಶಿಪ್ ಗಷ್ಟೇ ಅನ್ವಯವಾಗುತ್ತದೆ ಅಂತ ಅನ್ಕೋಬೇಡಿ.

ಇತಿಹಾಸ ನೋಡಿದರೆ ತಂಡಕ್ಕೆ ಆಯ್ಕೆಯಾಗುವ ವಿಚಾರದಲ್ಲೂ ಇಂತಹ ದೃಷ್ಟಾಂತಗಳು ಇವೆ. ಭಾರತದಲ್ಲೆ ತೆಗೆದುಕೊಂಡರೆ ತಮಿಳುನಾಡಿನ ಲಕ್ಷ್ಮಣ್ ಶಿವರಾಮಕೃಷ್ಣನ್, ನರೇಂದ್ರ ಹಿರ್ವಾನಿ ಆರಂಭದಲ್ಲೆ ದೊಡ್ಡ ಸ್ಪಿನ್ನರ್ ಆಗುವ ಲಕ್ಷಣಗಳೆಲ್ಲವನ್ನು ತಮ್ಮ ಮೊದಲ ಆಯ್ಕೆಯಲ್ಲಿಯೇ ತೋರಿದ್ದರು. ಆದರೆ ಸುದೀರ್ಘ ಕಾಲ ಇಂಡಿಯಾದ ಟಂಪ್ ಕಾರ್ಡ್ ಎನಿಸಿದ್ದು ಅನಿಲ್ ಕುಂಬ್ಳೆಯೇ. ತೊಂಭತ್ತರ ದಶಕದಲ್ಲಿ ರಣಜಿ ಪಂದ್ಯಗಳಲ್ಲಿ ರನ್ನುಗಳ ಗುಡ್ಡೆ ಹಾಕುತ್ತಿದ್ದ ವಿಜಯ್ ಭಾರದ್ವಾಜ್, ಅಮೋಲ್ ಮುಜಂಮ್ದಾರ್ ಭಾರತದ ಭವಿಷ್ಯದ ಕ್ರಿಕೆಟ್ ಕಲಿಗಳೆಂದೆ ಹೇಳಲಾಗುತ್ತಿತ್ತು. ವಿಜಯ್ ಭಾರದ್ವಾಜ್ ಅಂತೂ ಪಾದಾರ್ಪಣೆ ಮಾಡಿದ ಸರಣಿಯಲ್ಲೆ ಅಭೂತಪೂರ್ವ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಕೂಡ ಮಿಂಚಿದ್ದರು. ನಂತರ ಒಂದು ಸರಣಿಗೆ ಆಯ್ಕೆಯಾಗಿ ಬೆಂಚ್ ಕಾಯಿಸಿ ಮತ್ತೆ ಕಾಣಲಿಲ್ಲ.

ಮುಜಾಂಮ್ದಾರ್ ಗೆ ಅಂತರಾಷ್ಟ್ರೀಯ ಕ್ರಿಕೆಟ್ ನ ಬಾಗಿಲೇ ತೆರೆಯಲಿಲ್ಲ. ಅಷ್ಟೇ ಏಕೆ ಕೆಲ ವರ್ಷಗಳ ಹಿಂದೆ ನಮ್ಮ ಇನ್ನೊಬ್ಬ ಕನ್ನಡಿಗ ಕರಣ್ ನಾಯರ್ ಕೂಡ ಪಾದಾರ್ಪಣೆಯ ಸರಣಿಯಲ್ಲೇ ತ್ರಿಶತಕ ಬಾರಿಸಿ ಭಾರತದ ಎರಡನೇ ತ್ರಿಶತಕಧಾರಿ ಎನಿಸಿದ್ದರು. ಇದುವರೆಗೂ ಅವರಿಗೆ ಇನ್ನೊಂದು ಅವಕಾಶ ಲಭಿಸಲಿಲ್ಲ. ಆಯ್ಕೆಯ ಮಾನದಂಡಗಳು ನಿಜಕ್ಕೂ ವಿಚಿತ್ರ. ಕೆಲವು ಆಟಗಾರರು ಸುಲಭದಲ್ಲಿ ಗಿಟ್ಟಿಸಿಕೊಳ್ಳೋದು ಹಾಗೂ ಪದೇ ಪದೇ ಅವಕಾಶ ಪಡೆಯೋದು. ಇನ್ನು ಕೆಲವರು ವರುಷಾನುಗಟ್ಟಲೆ ಪರದಾಡುವುದು ನೋಡಿದರೆ ಬರೀ ಸಾಮರ್ಥ್ಯ ತೋರುವುದಷ್ಟರಲ್ಲಿ ಏನು ಇಲ್ಲ ಜೊತೆಗೆ ಆಯಾ ಕಾಲಘಟ್ಟದ ಬೇಡಿಕೆ, ಸಂಧರ್ಭಗಳಿಗುಣವಾಗಿ ಅದೃಷ್ಟವೂ ಬೇಕೆನ್ನಿಸುತ್ತದೆ.

ಏನೇ ಆದರೂ ವಿಶ್ವನಾಥ್ ಗೆ ಪಟೌಡಿ ಸಿಕ್ಕ ಹಾಗೆ ದ್ರಾವಿಡ್ ಬೆನ್ನಿಗೆ ಅಜರ್ ನಿಂತ ಹಾಗೆ ನೈತಿಕವಾಗಿ ಬೆಂಬಲ ನೀಡುವ ಒಬ್ಬ ವ್ಯಕ್ತಿ ಇರಬೇಕಾಗುತ್ತದೆ. ಹಾಗೆ ಇಟ್ಟ ಭರವಸೆಯನ್ನು ಹುಸಿಗೊಳಿಸದೆ ತನ್ನ ಸಾಮರ್ಥ್ಯ, ಪ್ರತಿಭೆಯನ್ನು ಡಬಲ್ ಆಗಿ ತಂಡಕ್ಕೆ ನೀಡುವ ಛಾತಿ ಆ ಆಟಗಾರನೂ ಹೊಂದಿರಬೇಕಾಗುತ್ತದೆ. ಹೌದು, ಆ ದಿನ ಪಟೌಡಿ ವಿಶ್ವನಾಥ್ ಗೆ ಹುಮ್ಮಸ್ಸು ತೋರಿಸದಿದ್ದರೆ, ದ್ರಾವಿಡ್ ಪ್ರತಿಭೆಯ ಬಗ್ಗೆ ಅಜರ್ ವಿಶ್ವಾಸ ಕಳೆದುಕೊಂಡಿದ್ದರೆ, ನೀರು ಸಪ್ಲೈ ಮಾಡಲು ಒಲ್ಲೆ ಎಂದಿದ್ದ ಗಂಗೂಲಿಯನ್ನು ಆಯ್ಕೆದಾರರು ನಾಯಕನನ್ನಾಗಿ ಮಾಡಲು ಯೋಚಿಸಿದ್ದರೆ, ಅವರ ಆ ಪ್ರತಿಭೆ, ಸಾಮರ್ಥ್ಯ ಆ ಮಟ್ಟಿಗೆ ತಂಡಕ್ಕೆ ದಕ್ಕುತ್ತಿತ್ತಾ ಅನ್ನೋದು ಪ್ರಶ್ನೆ.

ಇವತ್ತು ಇದೇ ದ್ರಾವಿಡ್ ರಿಂದ ಅದೆಷ್ಟು ತರುಣರ ಆಟ ಸುಧಾರಿಸಿಲ್ಲ? ಅಂದು ಗಂಗೂಲಿಯಿಂದ ಅದೆಷ್ಟು ಸ್ಪೋರ್ಟಿವ್ ಪ್ಲೇಯರ್ ಗಳು ಮನ್ನೆಲೆಗೆ ಬಂದಿಲ್ಲ..? ಅಂದ ಹಾಗೆ ಇಲ್ಲಿ ಪ್ರತಿಯೊಬ್ಬ ನಾಯಕನಿಗೂ ಅವರ ಫೇವರೇಟ್ ಪ್ಲೇಯರ್ ಅಂತ ಒಬ್ಬ ಲಿಸ್ಟ್ ನಲ್ಲಿ ಇರ್ತಾನೆ ಅನ್ನೊ ವಿಷಯವಿದೆ. ಹಾಗೇ ಆತ ಇರುವಷ್ಟು ದಿನ ಆ ಆಟಗಾರ ಕೂಡ ಒಂದಷ್ಟು ಕಾಲ ಸೇಫಾಗೂ ಇರುತ್ತಾನೆ ಅನ್ನೊ ವಿಚಾರವೂ ಇದೆ. ಏನೇ ಆದರೂ ಅದೇ ಸಮಯದಲ್ಲಿ ನಾಯಕನಿಟ್ಟ ನಂಬಿಕೆಯನ್ನು ಉಳಿಸಿಕೊಂಡು ತಂಡಕ್ಕೆ ಅನಿವಾರ್ಯವಾಗುವ ರೀತಿಯಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡುವುದು ಆ ಆಟಗಾರ ಮಾಡಲೇಬೇಕಾಗುತ್ತದೆ. ಹಾಗಿದ್ದಾಗ ಮಾತ್ರ ಆತ ಧೀರ್ಘ ಕಾಲ ತಂಡದ ಭಾಗವಾಗಿರುತ್ತಾನೆ. ಸುಮ್ಮನೆ ಗಮನಿಸಿದರೆ ವಾಸಿಂ ಜಾಫರ್, ಶ್ರೀಶಾಂತ್, ಕೈಫ್, ಮುರುಳಿ ಕಾರ್ತಿಕ್, ಇರ್ಫಾನ್ ಪಠಾಣ್ ರಂತಹ ಪ್ರತಿಭಾನ್ವಿತ ಪ್ಲೇಯರ್ ಗಳು ಗಂಗೂಲಿ, ದ್ರಾವಿಡ್ ಕ್ಯಾಪ್ಟನ್ ಆಗಿದ್ದಾಗ ತಂಡದಲ್ಲಿದ್ದವರು ಅವರು ನಾಯಕತ್ವದಿಂದ ನಿರ್ಗಮಿಸಿದಾಗ ಕಾಣದಾಗಿದ್ದನ್ನು ನೋಡಬಹುದು. ಅದೇ ರೀತಿ ಧೋನಿ ನಿರ್ಗಮಿಸಿದಾಗ ರೈನಾ ಕೂಡ ಅವಕಾಶ ವಂಚಿತರಾಗಿವುದನ್ನು ನೆನಪಿಸಿಕೊಳ್ಳಬಹುದು.

ಎಂಭತ್ತರ ದಶಕದಲ್ಲಿ ವಿಶ್ವನಾಥ್ ತೋರಿದ ಕ್ರೀಡಾ ಮನೋಭಾವಕ್ಕೆ ಇಡೀ ಪ್ರಪಂಚವೇ ಸೆಲ್ಯೂಟ್ ಹೊಡೆದಿದೆ. ಅದರಂತೆ 2002ರಲ್ಲಿ ಲಾರ್ಡ್ಸ್ ನಲ್ಲಿ ಇಂಗ್ಲೀಷ್ ನವರಿಗೆ ಶರ್ಟ್ ಬಿಚ್ಚಿ ತೋರಿಸಿದ ಗಂಗೂಲಿಯ ರಿವೆಂಜ್ ಗೂ ಸೆಲ್ಯೂಟ್ ಸಿಕ್ಕಿದೆ. ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಎಂಬಂತೆ ಬದಲಾಗುವ ಕಾಲಘಟ್ಟಕ್ಕೆ ಕಾಲವೇ ತನಗೆ ಬೇಕಾದ ವ್ಯಕ್ತಿಗಳನ್ನು ಆರಿಸಿಕೊಳ್ಳುತ್ತದೆನೋ ಎನಿಸುತ್ತದೆ.

| ಇನ್ನು ನಾಳೆಗೆ ।

‍ಲೇಖಕರು Admin

August 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: