ಮಧುಕರ್ ಬಳ್ಕೂರು ಸರಣಿ ಕಥೆ 18 – ಬೌಲರ್ ಗಳ ಗತವೈಭವ ಮತ್ತೆ ಮರುಕಳಿಸಲಿ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

18

“ಅದೆಂತಾ ಕಾಲ ಬಂತಪ್ಪಾ, ಈ ಟಿ ಟ್ವೆಂಟಿ ಕ್ರಿಕೆಟ್ ಬಂದು ಕ್ರಿಕೆಟ್ ಅಂದ್ರೆ ಬರೀ ಬ್ಯಾಟ್ಸ್ಮನ್ ಗಳ ಆಟ ಅನ್ನೊ ತರಾ ಆಗಿದೆ. ಇನ್ನು ಬೌಲರ್ ಗಳ ಪಾಡೋ ದೇವರಿಗೆ ಪ್ರೀತಿ” ಹಾಗಂತ ಇತ್ತೀಚೆಗೆ ಹಿರಿಯರೊಬ್ಬರು ಕಳವಳ ವ್ಯಕ್ತಪಡಿಸುತ್ತಿದ್ದರು.

ಹೌದು, ಅವರ ಕಳವಳ ನಿಜವಾಗಿತ್ತು. ಮೇಲ್ನೋಟಕ್ಕೆ ಟಿ ಟ್ವೆಂಟಿ ಕ್ರಿಕೆಟ್ ಬಂದು ಭರಪೂರ ಮನರಂಜನೆ ಸಿಗುತ್ತಿದೆಯಾದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮಾತಿನಲ್ಲಿರುವ ಗಂಭಿರತೆ ಏನೆಂಬುದು ಅರ್ಥವಾಗುತ್ತದೆ. ಅದರಲ್ಲೂ ನೀವು ತೊಂಭತ್ತರ ದಶಕದಿಂದೀಚೆಗೆ ನಿರಂತರವಾಗಿ ಕ್ರಿಕೆಟ್ ನೋಡಿಕೊಂಡು ಬಂದವರಾಗಿದ್ದರೆ ಕಳೆದ ಹತ್ತು ವರುಷಗಳಲ್ಲಿ ಆದ ದಿಢೀರ್ ವ್ಯತ್ಯಾಸ ನಿಮ್ಮ ಗಮನಕ್ಕೆ ಬರುತ್ತದೆ.  
ಅವರ ಮಾತಿನಲ್ಲೇ ಹೇಳುವುದಾದರೆ ಅದೊಂದು ಕಾಲ. ಬೌಲರ್ ಗಳು ಬ್ಯಾಟ್ಸ್ಮನ್ ಗಳಿಗಿಂತಲೂ ಒಂದು ಕೈ ಮಿಗಿಲಾದ್ದರು.

ಸಿನಿಮಾದಲ್ಲಿ ಖಡಕ್ ವಿಲನ್ ಗಳಿದ್ದರೆ ಹೇಗೆ ಹೀರೋಗಳಿಗೆ ಒಂದು ಬೆಲೆ ಅಂತ ಸಿಗುತ್ತಿತ್ತೊ ಹಾಗೆ ಕ್ರಿಕೆಟ್ ನಲ್ಲೂ ಇಂತಿಂಥ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರಷ್ಟೇ ಅವನೊಬ್ಬ ಪರಿಪೂರ್ಣ ಬ್ಯಾಟ್ಸ್ಮನ್ ಎನ್ನುವ ಮನ್ನಣೆ ಇತ್ತು. ಆ ದಿನಗಳಲ್ಲಿ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ನನ್ನು ನಿರ್ಧರಿಸುವ ಮಾನದಂಡ ಅವನು ತನ್ನ ಕಾಲಾವಧಿಯಲ್ಲಿ ಎಂತೆಂಥ ಬೌಲರ್ ಗಳನ್ನು ಎದುರಿಸಿದ್ದ ಎಂಬುದರ ಮೇಲೆ ನಡೆಯುತ್ತಿತ್ತು. ಹಾಗಾಗಿ ಅವನ ಅಂಕಿಅಂಶಗಳು ರೆಕಾರ್ಡ್ ಗಳೆಲ್ಲ ಅನಂತರ ಗಣನೆಗೆ ಬರುತ್ತಿದ್ದವು. ಆಗೆಲ್ಲಾ ಬೌಲರ್ ಗಳೆಂದರೆ ಸದಾ ಕಾಲ ಬ್ಯಾಟ್ಸ್ಮನ್ ಗಳಿಗೆ ಸವಾಲು ನೀಡುವವರು ಎನ್ನುವ ಮನಸ್ಥಿತಿ ಇತ್ತು.

ಬ್ಯಾಟ್ಸ್ಮನ್ ಆದವನು ತನ್ನ ವೃತ್ತಿ ಜೀವನದಲ್ಲಿ ಇಂತಹ ಸವಾಲುಳನ್ನೆಲ್ಲ ಎದುರಿಸಿದ ಮೇಲೆನೆ ಬೌಲರ್ ಗಳಿಗೆಲ್ಲ ಸವಾಲಾಗಿ ತೋರುತ್ತಿದ್ದ. ಸೋ, ಕ್ರಿಕೆಟ್ ನಲ್ಲಿ ಆಗ ಸವಾಲುಗಳನ್ನು ಮೊದಲು ಎದುರಿಸಬೇಕಾಗಿದ್ದವರು ಬ್ಯಾಟ್ಸ್ಮನ್ ಅಷ್ಟೇ ಆಗಿದ್ದರು. ಸಿನಿಮಾದಲ್ಲೆನೋ ಸ್ಕ್ರಿಪ್ಟ್ ಪ್ರಕಾರ ಕೊನೆಗೆ ವಿಲನ್ ಎದುರು ಹೀರೋ ಗೆಲ್ಲುತ್ತಾನೆ. ಆದರೆ ಮೈದಾನದಲ್ಲಿ ಹಾಗಲ್ಲವಲ್ಲ. ಮೈದಾನದಲ್ಲಿ ಬ್ಯಾಟ್ಸ್ಮನ್ ಆದವನು ಬೌಲರ್ ನ ಸವಾಲನ್ನು ಸಮರ್ಥವಾಗಿ ಎದುರಿಸಿದ ಮೇಲೆನೆ ಹೀರೋ ಆಗಬೇಕು. ಒಂದು ವೇಳೆ ಅದರಲ್ಲಿ ಆತ ವಿಫಲನಾದರೆ ಸವಾಲು ಹಾಕಿದ ಆ ಬೌಲರ್ ಗೆನೆ ಆ ಪಟ್ಟ ಲಭಿಸುತ್ತಿತ್ತು. ಕ್ರಿಕೆಟ್ ನಲ್ಲಿ ಬ್ಯಾಟ್ಸ್ಮನ್ ಗಳಷ್ಟೆ ಬೌಲರ್ ಗಳಿಗೂ ಪ್ರಾಧಾನ್ಯತೆ ಸಿಗುತ್ತಿದ್ದ ಕಾಲವದು.

ಬಿಡಿ, ಅವರ ಮಾತು ತುಂಬಾ ಹಿಂದಿನದ್ದು ಎನಿಸಬಹುದು. ಆದರೆ ತೀರಾ ಹಿಂದಕ್ಕೆ ಹೋಗದೆ ತೊಂಭತ್ತರ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಎಂತೆಂತಹ ಬೌಲರ್ ಗಳು ನಮ್ಮಲ್ಲಿದ್ದರು. ಕೋಟ್ನಿ ವಾಲ್ಶ್, ಕರ್ಟ್ಲಿ ಎಂಬ್ರೋಸ್, ಅಲನ್ ಡೋನಾಲ್ಡ್, ಶಾನ್ ಪೋಲ್ಲಾಕ್, ಶೇನ್ ಬಾಂಡ್, ಚಾಮುಂಡ ವಾಸ್, ವಾಸಿಂ ಅಕ್ರಂ, ವಕಾರ್ ಯೂನಸ್, ಶೋಯೆಬ್ ಅಕ್ತರ್, ಗ್ಲೇನ್ ಮೆಗ್ರಾಥ್, ಹೀತ್ ಸ್ಟ್ರೀಕ್, ಜಾವಗಲ್ ಶ್ರೀನಾಥ್, ಹೀಗೆ ಒಬ್ಬರ ಇಬ್ಬರಾ….? ಏಕೆ ಇಲ್ಲಿ ಬರೀ ವೇಗದ ಬೌಲರ್ ಗಳನ್ನಷ್ಟೇ ಹೆಸರಿಸಲಾಯಿತೆಂದರೆ ತಮ್ಮ ಫೀಟ್ನೆಸ್ ಕಾಯ್ದುಕೊಳ್ಳುವುದು ವೇಗದ ಬೌಲರ್ ಗಳೆನಿಸಿಕೊಂಡವರಿಗೆ ಸವಾಲಿನ ಕೆಲಸವಾಗಿರುವುದರಿಂದ!

ಹೌದು, ಗಂಟೆಗೆ ಪ್ರತಿ ಎಸೆತವನ್ನು 145 ಕಿ.ಮೀ ವೇಗದಲ್ಲಿ ಎಸೆಯಬಲ್ಲವರಾಗಿದ್ದ ಈ ಬೌಲರ್ ಗಳು ಒಂದೊಂದು ಅವಧಿಯಲ್ಲೇ ಹದಿನೈದುದಿಪ್ಪತ್ತು ಓವರ್ ಗಳನ್ನು ಸತತವಾಗಿ ಎಸೆಯುತ್ತಿದ್ದರೆಂದರೆ ಅರ್ಥ ಮಾಡಿಕೊಳ್ಳಿ ಅವರ ಕ್ಷಮತೆ..!!! ಇದು ಬರೀ ಒಂದೆರಡು ಮ್ಯಾಚ್ ಗೂ ಸೀರೀಸ್ ಗೂ ಸೀಮಿತವಾಗಿರದೆ ವೃತ್ತಿ ಬದುಕಿನೂದ್ದಕ್ಕೂ ಈ ಕ್ಷಮತೆಯನ್ನು ಉಳಿಸಿಕೊಂಡಿದ್ದರು ಎನ್ನುವುದೇ ಇಲ್ಲಿ ವಿಷಯ. ಇದರಿಂದಲೇ ತಿಳಿಯುತ್ತೆ ಅವರ ಹೆಚ್ಚುಗಾರಿಕೆ. ಇದೆಲ್ಲದಕ್ಕೂ ಕಾರಣ ಅವರ ಫಿಸಿಕಲ್ ಫೀಟ್ನೆಸ್. ಈ ಎಲ್ಲ ಆಟಗಾರರು ಅದರಲ್ಲಿ ಹೆಚ್ಚು ಕಡಿಮೆ ಯಶಸ್ಸು ಸಾಧಿಸಿ ದಶಕಗಳ ಕಾಲ ತಮ್ಮ ತಂಡದ ಭಾಗವಾಗಿದ್ದಾರೆಂಬುದೇ ಇಲ್ಲಿ ಹೈಲೆಟ್ ಆಗುವ ಪಾಯಿಂಟ್.

ಈಗ ಹೇಳಿ, ಅಂತಹ ಬೌಲರ್ ಗಳು ಈಗೆಲ್ಲಿದ್ದಾರೆ..?ಎಲ್ಲೋ ಅಂಡರ್ ಸನ್, ಸ್ಟುವರ್ಟ್ ಬ್ರಾಡ್ ಬಹಳ ವರುಷಗಳಿಂದ ಟೆಸ್ಟ್ ಮ್ಯಾಚ್ ಗಳಷ್ಟೇ ಆಡುತ್ತಿರುವುದರಿಂದ ಸಕ್ರಿಯವಾಗಿರೋದು ಬಿಟ್ಟರೆ ಇನ್ನೊಬ್ಬ ಹಳೆ ತಲೆ ಸಿಗಲಿಕ್ಕಿಲ್ಲ! ಇನ್ನು ಗಮನಿಸಬೇಕಾದ ಗಂಭೀರ ಸಂಗತಿ ಎಂದರೆ ಅಂತಹ ಬೌಲರ್ ಗಳು ಈಗೀಗ ತಯಾರಾಗುತ್ತಿಲ್ಲ ಎನ್ನುವುದು.! ಇದಕ್ಕಿಂತಲೂ ಆತಂಕದ ವಿಚಾರವೆಂದರೆ ಇರುವ ಒಂದಷ್ಟು ಭರವಸೆ ಮೂಡಿಸುವ ಶಾರ್ಪ್ ಬೌಲರ್ಸ್ ಗಳು ನಿರಂತರ ಗಾಯದ ಸಮಸ್ಯೆಗೆ ಒಳಗಾಗುತ್ತಿರುವುದು.! ಹೌದು, ಫೀಟ್ನೆಸ್ ಕಾಯ್ದುಕೊಳ್ಳಲು ವಿಫಲರಾಗುತ್ತಿರುವುದೇ ಇಂದಿನ ಬೌಲರ್ ಗಳ ಬಹು ದೊಡ್ಡ ದುರಂತ.

ಕಾರಣ, ಬದಲಾದ ಕ್ರಿಕೆಟ್ ಫಾರ್ಮೆಟ್!! ಟೆಸ್ಟ್, ಒನ್ ಡೇ, ಟಿ ಟ್ವೆಂಟಿ ಎನ್ನುವ ವಿಭಿನ್ನ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ!! ಅತಿಯಾದ ಕ್ರಿಕೆಟ್ ನಿಂದ ಆಗುತ್ತಿರುವ ಒತ್ತಡ. ಅದರಲ್ಲೂ ಟಿ ಟ್ವೆಂಟಿ ಫಾರ್ಮೆಟ್ ಲಗ್ಗೆ ಇಟ್ಟು ಕ್ರಿಕೆಟ್ ಅನ್ನೊದು ಅಪ್ಪಟ ಮನೋರಂಜನೆಯಾಗಿ ಬದಲಾದ ಮೇಲೆ ಬೌಲರ್ ಗಳ ಶೋಷಣೆ ಶುರುವಾಯಿತೆಂದೆ ಹೇಳಬಹುದು. ಮನೋರಂಜನೆ ಅಂದಾಕ್ಷಣ ಬ್ಯಾಟಿಂಗ್ ಅಬ್ಬರ ಅಂತಲೇ ನಂಬಿಕೆ ಬೆಳೆದಿರೋದರಿಂದ ಒಂಥರಾ ಬೌಲರ್ ಗಳೆಂದರೆ ಸಿನಿಮಾದಲ್ಲಿ ಹೀರೋಗಳಿಂದ ಹೊಡೆಸಿಕೊಳ್ಳುವ ಫೈಟರ್ ಲೆವೆಲ್ಲಿಗೆ ಇಳಿದು ಹೋದರಾ ಅಂತನ್ನಿಸುವುದು ಸುಳ್ಳಲ್ಲ.

ಈಗ ಹೇಗಾಗಿದೆ ಎಂದರೆ ಅವನು ಬೌಲರಾ ಬ್ಯಾಟ್ಸ್ಮನ್ನ ಅನ್ನೋದು ಮುಖ್ಯವಲ್ಲ. ಒಟ್ಟಿನಲ್ಲಿ ಅವನು ಹೊಡಿತಿರಬೇಕು. ಅವನು ಹ್ಯಾಗೆ ಹೊಡೆದ ಅನ್ನೋದ್ ಮುಖ್ಯ ಅಲ್ಲ. ಹೊಡೆದ ಬಾಲ್ ಎಲ್ಲಿಗ್ ಹೋಗಿ ಬಿತ್ತು ಅನ್ನೋದೆ ವಿಷಯ. ಹೊಡೆದರಷ್ಟೇ ಹೀರೋ. ನೋಡುವ ಪ್ರೇಕ್ಷಕರಿಗೆ ಮನೋರಂಜನೆ ಸಿಗೋದಷ್ಟೇ ಮುಖ್ಯ. ಇಪ್ಪತ್ತು ಓವರಿಗೆ ನೂರಾ ಎಪ್ಪತ್ತೋ, ಎಂಭತ್ತೋ ಹೊಡೆದರಷ್ಟೇ ಗೆಲ್ಲುವ ಭರವಸೆ. ಮತ್ತೆ ಆ ರನ್ ಚೇಸ್ ಮಾಡೋದಕ್ಕೆ ಎದುರಾಳಿ ಕೂಡ ಅದೇ ರೀತಿಯಲ್ಲಿ ಆಡಬೇಕು. ಅಂತದ್ದರಲ್ಲಿ ಬೌಲರ್ ಏನಾದರೂ ಚಾಕಕ್ಯತೆಯಿಂದ ವಿಕೆಟ್ ಉರುಳಿಸಿ ಪಂದ್ಯ ಗೆಲ್ಲಿಸಿಕೊಟ್ಟರೂ ಬ್ಯಾಟ್ಸ್ಮನ್ ರನ್ ಚೇಸ್ ಮಾಡೋ ಒತ್ತಡಕ್ಕೆ ಹೋಗಿ ಔಟಾದ ಅಂತಲೇ ಅನಿಸೋದು! ಹಾಗಾಗಿ ಗೆಲುವಿನ ಪೂರ್ಣ ಕ್ರೆಡಿಟ್ಟು ಬೌಲರ್ ಗೆ ಸಿಗೋದಿಲ್ಲ! ಸಿಕ್ಕರೂ ಕಟ್ಟಕಡೆಯಲ್ಲಿ ತನ್ನ ಪ್ರದರ್ಶನದ ಬಗ್ಗೆ ಅವನಿಗೆ ನಿಜವಾದ ತೃಪ್ತಿ ಸಿಗಲಿಕ್ಕಿಲ್ಲ! ಹೀಗಾಗಿ ಬೌಲರ್ ನೊಬ್ಬನ ನಿಜವಾದ ಸತ್ವ ಪರೀಕ್ಷೆ ಟಿ ಟ್ವೆಂಟಿ ಯಂತಹ ಕ್ರಿಕೆಟ್ ನಲ್ಲಿ ಆಗುವುದೇ ಇಲ್ಲ ಅನ್ನಬಹುದು!

ಇನ್ನು ಪ್ರದರ್ಶನದ ತೃಪ್ತಿಯ ಬಗೆಗಿನ ಮಾತು ಬ್ಯಾಟ್ಸ್ಮನ್ ಗೂ ಅನ್ವಯಿಸುತ್ತಾದರೂ ಬ್ಯಾಟ್ಸ್ಮನ್ ಒಂದಷ್ಟು ಮನೋರಂಜಿಸಿ ಹೇಗೂ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದುಬಿಡುತ್ತಾನೆ. ಇದರಿಂದ ಬೌಲರ್ ಕೂಡ ತಾನು ಹೊಡೆಸಿಕೊಂಡ ರನ್ ಗಳಿಗೆ ಬ್ಯಾಟ್ ಹಿಡಿದು ಬಾರಿಸುವುದರ ಮೂಲಕವೇ ಚುಕ್ತಾ ಮಾಡಬೇಕು.

 ಮುಂಚೆಲ್ಲಾ ಅಸಲಿ ಮ್ಯಾಚ್ ಅಂದ್ರೆ ಇಪ್ಪತ್ತು ಓವರ್ ನಂತರವೇ ಶುರುವಾಗೋದು. ಬೌಲರ್ ನೊಬ್ಬನ ಒಳ್ಳೇ ಎಸೆತವನ್ನು ಎಂತಹಾ ಬ್ಯಾಟ್ಸ್ಮನ್ ಆದರೂ ಗೌರವಿಸುತ್ತಿದ್ದ ಟೈಮದು. ಕೆಟ್ಟ ಎಸೆತಗಳನ್ನಷ್ಟೇ ಆಗ ದಂಡಿಸುತ್ತಿದ್ದುದು. ಆಗೆಲ್ಲ ಹೊಡಿಬಡಿ ಶುರುವಾಗ್ತಿದ್ದುದೇ ನಲವತ್ತು ಓವರ್ ನಂತರ. ಈಗೆಲ್ಲಾ ಅದಕ್ಕೆ ಟೈಮೇ ಇಲ್ಲ. ಬ್ಯಾಟಿಂಗ್ ಗೆ ಅನುಕೂಲವಾಗುವ ಪಿಚ್ ನಲ್ಲಿ ಮೊದಲ ಓವರ್ ನಿಂದಲೇ ದಂಡಂ ದಶಗುಣಂ ಮಂತ್ರ. ಹಾಗಾಗಿ ಬೌಲರ್ ನೊಬ್ಬ ತನ್ನ ಸಿಮೀತ ತಂತ್ರಗಾರಿಕೆಯಲ್ಲೆ ಬೌಲ್ ಮಾಡಬೇಕು. ತನಗೆ ಸಿಗುವ ನಾಲ್ಕು ಓವರ್ ಗಳಲ್ಲಿ ಹೆಚ್ಚಿನ ವೈವಿಧ್ಯತೆ ತೋರಲು ಸಾಧ್ಯವಾಗದೆ ಆಡುತ್ತಿರಬೇಕು.

ಎಲ್ಲೊ ಒಂದು ಕಡೆ ಟಿ ಟ್ವೆಂಟಿ ಕ್ರಿಕೆಟ್ ಶುರುವಾದ ಮೇಲೆ ಬೌಲಿಂಗ್ ವಿಭಾಗ ಎರಡನೇ ದರ್ಜೆ ಇಳಿದು ಹೋಯಿತಾ ಅನ್ನಿಸುತ್ತಿರುವುದು ಹೌದು. ಎಲ್ಲೋ ಬೌಲರ್ ಗಳೆಲ್ಲ ಯಂತ್ರಗಳಂತೆ, ಬ್ಯಾಟ್ಸ್ಮನ್ ಗಳೆಲ್ಲ ಅದನ್ನು ಹ್ಯಾಂಡಲ್ ಮಾಡುವ ಆಪರೇಟರ್ ಗಳ ತರಹ ಕಾಣಿಸುತ್ತಿರುವುದು ನಿಜ. ಇದು ಅಪಾಯಕಾರಿ ಬೆಳವಣಿಗೆ. ಯಂತ್ರ ಕೆಟ್ಟರೆ ಆಪರೇಟರ್ ಗಳಿಗೂ ಕೆಲಸವಿರುವುದಿಲ್ಲ ಅನ್ನೋದನ್ನ ಮರೆಯಬಾರದು. ನಡೆಯುವಾಗ ಯಾವ ಕಾಲು ನಾನು ಮುಂದು ತಾನು ಮುಂದು ಅಂತ ಸಾಗದೆ ಹೇಗೆ ಸಹಜವಾಗಿ ಸಾಗುತ್ತದೋ ಹಾಗೆ ಕ್ರಿಕೆಟ್ ನಲ್ಲಿಯೂ ಬೌಲಿಂಗ್, ಬ್ಯಾಟಿಂಗ್ ವಿಭಾಗ ಪೂರಕವಾಗೇ ಇರಬೇಕು. ಕ್ರಿಕೆಟ್ ನಲ್ಲಿ ಬರೀ ವಿಕೆಟ್ ಕೀಪಿಂಗ್ ಅಷ್ಟೇ ಥ್ಯಾಂಕ್ಸ್ ಲೆಸ್ ಜಾಬ್ ಅಂತ ಕರೆಸಿಕೊಂಡಿದ್ದು. ಆದರೆ ಈಗ ಕ್ರಿಕೆಟ್ ಸಾಗುವ ರೀತಿ ನೋಡಿದರೆ ಬೌಲಿಂಗ್ ಡಿಪಾರ್ಟ್ಮೆಂಟ್ ಕೂಡ ಮುಂದೊಂದು ದಿನ ಥ್ಯಾಂಕ್ಸ್ ಲೆಸ್ ಜಾಬ್ ಎನ್ನಿಸಿಕೊಳ್ಳುವ ಅಪಾಯವಿದೆ. ಈಗಂತೂ ಟಿ ಟ್ವೆಂಟಿ ಸ್ಪೇಷಲಿಷ್ಟ್ ಬೌಲರ್ ಅಂತಲೇ ತಯಾರಾಗುತ್ತಿದ್ದಾರೆ. ಹಾಗೆ ಬರುವವರು ಕೂಡ ಅಲ್ ರೌಂಡರ್ ರೂಪದಲ್ಲೇ ಶೈನ್ ಆಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಕರ್ನಾಟಕದ ಹೆಮ್ಮೆಯ ಲೆಗ್ ಸ್ಪಿನ್ನರ್ ಆಗಿದ್ದ ಬಿ ಎಸ್ ಚಂದ್ರಶೇಖರ್ ಬೌಲಿಂಗ್ ಅನ್ನ ನೋಡಲೆಂದೆ ಮೈದಾನದಲ್ಲಿ ಪ್ರೇಕ್ಷಕರು ಜಮೆಯಾಗುತ್ತಿದ್ದರಂತೆ! ಅಷ್ಟೇ ಏಕೆ ನಾವೇ ಟಿವಿಯಲ್ಲಿ ತೆಂಡೂಲ್ಕರ್ ಬ್ಯಾಟಿಂಗ್ ನೋಡುತ್ತಾ ಇಷ್ಟಪಟ್ಟಂತೆ ಗ್ಲೆನ್ ಮೆಗ್ರಾಥ್, ಅಲನ್ ಡೊನಾಲ್ಡ್ ಬೌಲಿಂಗ್ ರನ್ ಅಪ್ ಅನ್ನು ಇಷ್ಟಪಟ್ಟಿದ್ದೇವು. ಅದ್ಯಾಕೆ, ಮುರುಳಿಧರನ್ ಕಣ್ಣು ಬಿಟ್ಟುಕೊಂಡು ಬ್ಯಾಟ್ಸ್ಮನ್ ನನ್ನು ನುಂಗುವ ರೀತಿಯಲ್ಲಿ ಬೌಲಿಂಗ್ ಮಾಡ್ತಿದ್ದಿದ್ದನ್ನ ಮರೆಯೋಕೆ ಸಾಧ್ಯವಾ..? ತೆಂಡೂಲ್ಕರ್ ನ ಲಾಲಿಪಾಪ್ ಬೌಲಿಂಗ್ ಗೆ ಎದುರಾಳಿಗಳು ಪೇಚಾಡುತ್ತಾ ಎಡವುದು ಕೂಡ ಮುದ ನೀಡುತ್ತಿತ್ತಲ್ವ. ಹೌದು, ಅಜರುದ್ದೀನ್ ನ ರಿಸ್ಟ್ ಬ್ಯಾಟಿಂಗ್ ಹೇಗೆ ಕಣ್ಣಿಗೆ ತಂಪು ನೀಡುತ್ತಿತ್ತೋ, ಹಾಗೆ ಮನೋಜ್ ಪ್ರಭಾಕರ್ ನ ಆಫ್ ಕಟರ್ ಗೆ ಬ್ಯಾಟ್ಸ್ಮನ್ ತಬ್ಬಿಬ್ಬು ಆಗುತ್ತಿದ್ದುದು ಕೂಡಾ ಸೊಗಸಾಗಿ ಕಾಣುತ್ತಿತ್ತು. ಸ್ಪಿನ್ ಬೌಲರ್ ಗಳೆಂದರೆ ಬರೀ ನಾಲ್ಕು ಹೆಜ್ಜೆ ನಡೆದು ಬೌಲ್ ಮಾಡೋದೆಂದು ಅಂದುಕೊಂಡಿದ್ದ ನಮಗೆ ಅನಿಲ್ ಕುಂಬ್ಳೆಯ ಶೈಲಿ ವಿಭಿನ್ನವಾಗಿ ಸೆಳೆಯುತ್ತಿತ್ತು. ನಮ್ಮ ಜಾವಗಲ್ ಶ್ರೀನಾಥ್ ಫಾರಿನ್ ಪಿಚ್ ಗಳಲ್ಲಿ ಅದ್ಬುತವಾಗಿ ಇನ್ ಸ್ವಿಂಗ್ ಔಟ್ ಸ್ವಿಂಗ್ ಮಾಡುತ್ತಿದ್ದುದನ್ನು ನೋಡಿ ನಮ್ಮ ಇಂಡಿಯನ್ ಪ್ಲಾಟ್ ಪಿಚ್ ಗಳ ಬಗ್ಗೆ ಬೇಸರ ಪಡುತ್ತಿದ್ದೇವು. ವಿಂಡೀಸ್, ಪಾಕಿಸ್ತಾನ ಟೀಂ ಗಳಲ್ಲಿ ನಾಲ್ಕು ನಾಲ್ಕು ಮಂದಿ ಫಾಸ್ಟ್ ಬೌಲರ್ ಗಳನ್ನು ಗ್ರೌಂಡ್ ಗೆ ಇಳಿಸುತ್ತಿರಬೇಕಾದ್ರೆ ನಾವು ಮಾತ್ರ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಗಳೆಂಬ ಜೋಡೆತ್ತುಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದೇವು. ಬೌಲರ್ ಗಳೆಂದರೆ ಎದುರಾಳಿಗಳಿಗೆ ನಡುಕ ಹುಟ್ಟಿಸುವವರು ಎನ್ನುವ ಕಾಲ ಅದಾಗಿತ್ತು.

ಬ್ಯಾಟಿಂಗ್ ನೋಡುವುದಕ್ಕೆ ಅದೆಷ್ಟು ವೈವಿದ್ಯಮಯ ಪ್ರಕಾರಗಳ ಕಲಾವಂತಿಕೆ ಆಗಿನ ಬ್ಯಾಟ್ಸ್ಮನ್ ಗಳಲ್ಲಿ ಇದ್ದಿತ್ತೊ ಅಷ್ಟೇ ಪ್ರಕಾರದ ವೈವಿಧ್ಯತೆ ಆಗಿನ ಕಾಲದ ಬೌಲರ್ ಗಳಲ್ಲಿಯೂ ಇದ್ದಿದ್ದವು. ಒಬ್ಬರ ಬ್ಯಾಟಿಂಗ್ ನೋಡೋದಕ್ಕೆ ಅಂತಾನೆ ಅದೆಷ್ಟು ಕಾತರದಿಂದ ಟಿವಿ ಮುಂದೆ ಕುಳಿತಿರುತ್ತಿದ್ದೆವೋ, ಅಷ್ಟೇ ಕಾತರದಲ್ಲಿ ಬೌಲರ್ ನೊಬ್ಬನ ಬೌಲಿಂಗ್ ನೋಡುವುದಕ್ಕೂ ಹಪಹಪಿಸುತ್ತಿದ್ದೇವು. ಆ ದಿನಗಳೆಲ್ಲ ಈಗ ಕಣ್ಮರೆಯಾಗುತ್ತಿದೆ ಅಂತನಿಸುವುದು ಸೋಜಿಗದ ವಿಷಯ. 

ಕ್ರಿಕೆಟ್ ನಲ್ಲಿ ಬೌಲಿಂಗ್ ವಿಭಾಗ ಕಳೆದು ಹೋಗದೆ ಇರಲಿ. ಬೌಲರ್ ಗಳ ಗತವೈಭವ ಮತ್ತೆ ಮರುಕಳಿಸುವಂತಾಗಲಿ.

| ಇನ್ನು ನಾಳೆಗೆ ।

‍ಲೇಖಕರು Admin

August 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: