ಮಧುಕರ್ ಬಳ್ಕೂರು ಸರಣಿ ಕಥೆ 17 – ಅವರೇ ಟಾಪ್ ಒನ್ ಬ್ಯಾಟ್ಸ್ಮನ್…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

17

ಬ್ರಿಯಾನ್ ಲಾರಾ ಏನಾದರೂ ಭಾರತದಲ್ಲಿ ಹುಟ್ಟಿದಿದ್ದರೆ ಅವರೇ ಕ್ರಿಕೆಟ್ ದೇವರಾಗಿರುತ್ತಿದ್ದರು. ಹಾಗೆಯೇ ರಾಹುಲ್ ದ್ರಾವಿಡ್ ಏನಾದರೂ ಬೇರೆ ದೇಶದ ಪರ ಆಡಿದಿದ್ದರೆ ಅವರೇ ಟಾಪ್ ಒನ್ ಬ್ಯಾಟ್ಸ್ಮನ್ ಆಗಿರುತ್ತಿದ್ದರು” ಇಂತದ್ದೊಂದು ಚರ್ಚೆ ಆ ದಿನಗಳಲ್ಲಿ ಸಾಕಷ್ಟು ನಡೆಯುತ್ತಿತ್ತು.

ಬಹುಶಃ ತೊಂಭತ್ತರ ದಶಕದ ಆರಂಭದ ವರ್ಷಗಳಲ್ಲಿ ವಿಶ್ವದ ನಂ ಒನ್ ಆಟಗಾರ ಯಾರು ಅನ್ನೊ ಪ್ರಶ್ನೆಗೆ ಬ್ರಿಯಾನ್ ಲಾರಾ ಅವರೇ ಉತ್ತರ ಆಗಿದ್ದರು. ಆಗ ಅವರು ಆಡುತ್ತಿದ್ದ ರೀತಿ, ಗಂಟೆಗಟ್ಟಲೆ ಆಡಿದರೂ ಸುಸ್ತಾಗದ ಅವರ ಮನಸ್ಥಿತಿ, ಬೌಲರಗಳ ಮೇಲೆ ಸಾಧಿಸುತ್ತಿದ್ದ ಅಧಿಪತ್ಯ, ಸೆಂಚುರಿಯನ್ನು ಡಬಲ್ ಸೆಂಚುರಿಯಾಗಿ ಪರಿವರ್ತಿಸುತ್ತಿದ್ದ ಅವರ ದಿಟ್ಟತನ. ಇದ್ಯಾವುದಕ್ಕೂ ಮತ್ತೊಬ್ಬ ಆಟಗಾರನಿಲ್ಲ ಎಂದೇ ವಾದವಾಗಿತ್ತು. ಏಕೆಂದರೆ ದೊಡ್ಡ ದೊಡ್ಡ ಇನ್ನಿಂಗ್ಸ್ ಗಳನ್ನ ಅಷ್ಟೊಂದು ಸಲೀಸಾಗಿ ಅವರು ಆಡುತ್ತಿದ್ದರು.

ಸರಿಸುಮಾರು ಅದೇ ಕಾಲಾವಧಿಯಲ್ಲಿ ಬಂದ ಸಚಿನ್, ಲಾರಾಗಿಂತಲೂ ಕಡಿಮೆ ವಯಸ್ಸಿನವರಾದರೂ ದೊಡ್ಡ ಇನ್ನಿಂಗ್ಸ್ ಅಂತ ಬಂದಾಗ ಅವರಿಗಿಂತ ದೂರವೇ ಇದ್ದಿದ್ದರು. ಲಾರಾನಂತೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಎಲ್ಲಾ ಸಾಮರ್ಥ್ಯವಿದ್ದರೂ ಸಚಿನ್ ತಮ್ಮ ಇನ್ನಿಂಗ್ಸ್ ಅನ್ನ ಶತಕದ ಮಟ್ಟಿಗಷ್ಟೆ ಯೋಚಿಸುತ್ತಾರೆ ಅನ್ನೊ ಮಾತುಗಳು ಆಗಿದ್ದವು. ಸ್ವತಃ ಕಪಿಲ್ ದೇವ್ ಅವರೇ ಮುಂಬಯಿ ಹಿನ್ನೆಲೆಯಿಂದ ಬಂದ ಆಟಗಾರರು ಬರೀ ಶತಕದ ಮಟ್ಟಿಗಷ್ಟೆ ಯೋಚಿಸುತ್ತಾರೆ ಅಂತ ಹಿಂದೊಮ್ಮೆ ಹೇಳಿದ್ದರು. ಹೆಚ್ಚು ಕಮ್ಮಿ ಸಚಿನ್ ಆಟವನ್ನು ಗಮನಿಸಿದಾಗಲೂ ಇದೇ ಕಾಣುತ್ತಿತ್ತು.

ತಮ್ಮ ಸ್ಕೋರ್ 90 ಆಗುವವರೆಗೆ ನಿರ್ಭಿಡೆಯಿಂದ ಆಡೋದು, ನಂತರ ದಿಢೀರ್ ಅಂತ ನಿಧಾನಿಯಾಗೋದು, ತದನಂತರ ಸೆಂಚುರಿ ಮೈಲುಗಲ್ಲು ತಲುಪಿದ ಮೇಲೆ ನಿರಾಳವಾಗೋದು, ಮುಂದೆ ಅದನ್ನೆ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಗಂಭೀರವಾಗದೆ ಹೋಗೋದು, ಮುಂದಿನ ಪಂದ್ಯದಲ್ಲಿ ಮತ್ತದೇ ಸೆಂಚುರಿ ಬಾರಿಸುವ ಮಹಾನ್ ಸಂಕಲ್ಪದೊಂದಿಗೆ ಕ್ರಿಸ್ ಗೆ ಇಳಿಯೋದು ಎಲ್ಲವೂ ಅವರ ಆಟವನ್ನು ಗಮನಿಸಿದವರಿಗೆ ತಿಳಿಯುತ್ತಿತ್ತು. ಹಾಗಾಗಿ ಅವರ ಗ್ರಾಪ್ ನಲ್ಲಿ ಸೆಂಚುರಿಗಳ ಸಂಖ್ಯೆ ದಿಢೀರ್ ಅಂತ ಏರಿಕೆ ಆಯಿತೆ ವಿನಃ ದ್ವಿಶತಕದಂತಹ ದೊಡ್ಡ ಇನ್ನಿಂಗ್ಸ್ ಗಳಲ್ಲಿ ಹಿಂದುಳಿದರೆಂದೆ ಹೇಳಬೇಕು. ಇದಕ್ಕೆ ಸಾಕ್ಷಿಯೆಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಂದು ಹತ್ತು ವರ್ಷಗಳ ಬಳಿಕ ಸಚಿನ್ ರಿಂದ ಮೊದಲ ಡಬಲ್ ಸೆಂಚುರಿ ಬಂದಿತೆನ್ನುವುದು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಲಾರಾ ಈ ವಿಷಯದಲ್ಲಿ ಸಚಿನ್ ಗೆ ಉಲ್ಟಾ ಆಗಿದ್ದರು. ಅವರಿಗೆ ಸಿಗುತ್ತಿದ್ದ ಅವಕಾಶಗಳಲ್ಲೆ ದೊಡ್ಡ ಇನ್ನಿಂಗ್ಸ್ ನ್ನಾಗಿ ಪರಿವರ್ತಿಸುವ ಎಲ್ಲಾ ಛಾತಿಯನ್ನು ತೋರುತ್ತಿದ್ದರು. ಇಷ್ಟೆಲ್ಲಾ ಆದರೂ ಲಾರಾ ನಂತಹ ದೈತ್ಯ ಆಟಗಾರ ಇರುವ ಸಮಯದಲ್ಲಿ ಅವರ ತಂಡ ದೊಡ್ಡ ಮಟ್ಟದ ಯಶಸ್ಸು ಕಾಣದಿದ್ದುದು ವಿಚಿತ್ರವೆಂದೆ ಹೇಳಬೇಕು. ಕಾರಣ, ತಂಡದ ಆಟಗಾರರ ನಡುವಿನ ಸಮನ್ವಯದ ಕೊರತೆ, ಬದ್ಧತೆ ಇಲ್ಲದಿರುವುದು. ಅಲ್ಲಿನ ಕ್ರಿಕೆಟ್ ಆಡಳಿತ ಮಂಡಳಿ ಆರ್ಥಿಕವಾಗಿ ದುರ್ಬಲವಾಗಿರೋದು, ಮಂಡಳಿಯವರೊಂದಿಗೆ ಆಟಗಾರರ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲದೆ ಇರೋದು. ಮುಖ್ಯವಾಗಿ ವೆಸ್ಟ್ ಇಂಡೀಸ್ ಅಂತಹ ದ್ವೀಪರಾಷ್ಟ್ರಗಳಲ್ಲಿ ಕ್ರಿಕೆಟ್ ಗೆ ತುಂಬಾ ಪ್ರಾಧಾನ್ಯತೆ ಇರದಿರುವುದು, ಈ ಎಲ್ಲಾ ಕಾರಣಗಳಿಂದ ಜನಪ್ರಿಯತೆಯಲ್ಲಿ ಭಾರತೀಯ ಆಟಗಾರನಿಗೆ ಸಿಗುತ್ತಿದ್ದ ಮನ್ನಣೆ ಲಾರಾಗೆ ಸಿಗಲಿಲ್ಲವೆಂದೆ ಹೇಳಬಹುದು. ಮುಂದೆ ತೊಂಭತ್ತರ ದಶಕದ ಕೊನೆಗೆ ಬರುವ ಹೊತ್ತಿಗೆ ಸಹಜವಾಗಿಯೇ ಉತ್ತುಂಗದಲ್ಲಿದ್ದ ಸಚಿನ್ ಟಾಪ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡರು. ಇದೇ ವೇಳೆಯಲ್ಲಿ ಸ್ಪೋರ್ಟ್ಸ್ ಚಾನಲ್ ಗಳು ಅತೀ ವೇಗವಾಗಿ ಲಗ್ಗೆ ಇಟ್ಟ ಪರಿಣಾಮ ಕ್ರಿಕೆಟ್ ಭಾರತದ ಮನೆ ಮನಗಳಲ್ಲಿ ವ್ಯಾಪಕವಾಗಿ ಹರಡಲಾರಂಭಿಸಿತ್ತು.

ಕ್ರಿಕೆಟ್ ಬೇರೆ ಆದಾಯದ ಬಹು ದೊಡ್ಡ ಮೂಲವಾಗಿ ಎಲ್ಲರಿಗೂ ಕಾಣಲಾರಂಭಿಸಿತ್ತು. ಪರಿಣಾಮ, ಜಾಹಿರಾತು ಕಂಪನಿಗಳು, ಪ್ರಾಯೋಜಕರು ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡಿದ್ದರು. ಅದಾಗಲೇ ಜಾಹಿರಾತುದಾರರ ಪಾಲಿನ ವಂಡರ್ ಬಾಯ್ ಏನಿಸಿದ್ದ ಸಚಿನ್ ಇದೇ ಸಮಯಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗೇ ಎಲ್ಲರಿಗೂ ಕಂಡರು. ಇದೇ ವೇಳೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಹಿಂದೆಂದೂ ಕಾಣದ ರೀತಿಯಲ್ಲಿ ದುಡ್ಡು ನೋಡಲಾರಂಭಿಸಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆಯಿತು. ನೋಡು ನೋಡುತ್ತಿದ್ದಂತೆ ಜಂಟಲ್ಮ್ಯಾನ್ ಗಳ ಈ ಆಟ ಬಡ ಭಾರತದಲ್ಲಿ ಎಲ್ಲರೂ ಜಪಿಸುವ, ಪೂಜಿಸುವ ಧರ್ಮವಾಗಿ ಹೋಯಿತು. ಸಹಜವಾಗಿಯೇ ಸಚಿನ್ ಆ ಧರ್ಮವನ್ನೆ ಹುಟ್ಟುಹಾಕಿದ ದೇವರ ರೀತಿಯಲ್ಲಿ ಕಂಡರು.              

ಸರಿ ಸುಮಾರು ಇದೇ ಅವಧಿಯಲ್ಲಿ ಕ್ರಿಕೆಟ್ ಲೋಕ ಕಂಡ ಮಹಾನ್ ತಪಸ್ವಿಯೊಬ್ಬನ ಉದಯವಾಗಿತ್ತು. ಒಂದು ವೇಳೆ ಆ ಕ್ರಿಕೆಟ್ ದೇವರೆನಾದರೂ ಕೈ ಕೊಟ್ಟರೆ ಇವರು ಭಾರತವನ್ನು ರಕ್ಷಿಸುತ್ತಾರೆ ಎಂಬುವಷ್ಟರ ಮಟ್ಟಿಗೆ ಆ ತಪಸ್ವಿ ಭಾರತೀಯರ ನಂಬಿಕೆಯಾದರು. ಅಪ್ರತಿಮ ಏಕಾಗ್ರತೆ, ಅಸಾಧಾರಣ ತಾಳ್ಮೆ, ತಾಂತ್ರಿಕತೆಯಲ್ಲಿ ಎಲ್ಲರನ್ನೂ ಮೀರಿಸುವ ಪರಿಪೂರ್ಣತೆ, ಹೀಗೆ ಹತ್ತು ಹಲವು ವಿಷಯಗಳಲ್ಲಿ ಪರಿಪಕ್ವತೆ ಹೊಂದಿದ್ದರೂ, ತಮ್ಮ ಕೆರಿಯರ್ ನ ಉದ್ದಕ್ಕೂ ಸಚಿನ್, ಗಂಗೂಲಿಯ ನೆರಳಲ್ಲೆ ಸಾಗುವಂತಾದದ್ದು ಅವರ ದುರಂತವೊ ಅಥವಾ ಭಾರತದ ಸುಯೋಗವೊ ಕೊನೆಗೂ ಪ್ರಶ್ನೆಯಾಯಿತು. ಏಕೆಂದರೆ ದ್ರಾವಿಡ್ ಅನ್ನೊ ಅಪದ್ಬಾಂಧವ ಭಾರತದ ಪಾಲಿಗೆ ನಿರ್ವಹಿಸಿದ ಪಾತ್ರಗಳು ಹಾಗಿದ್ದವು. ಮೊದಲನೆಯದಾಗಿ ಯಾವ ಆಟಗಾರ ಮುಂದೆ ಹೋಗಬೇಕೆಂದರೂ ಸೈಡ್ ಬಿಟ್ಟು ಕೊಡುವ ಅವರ ಗುಣ ಉಳಿದ ಸಹ ಆಟಗಾರರಿಗೆ ಸಿಕ್ಕಿದ ಬಹುದೊಡ್ಡ ನೈತಿಕ ಬೆಂಬಲವೆಂದೇ ಹೇಳಬೇಕು.

ಬಹುಶಃ ಆ ಸಮಯದಲ್ಲಿ ಯಾವೊಬ್ಬ ಆಟಗಾರನಿಂದಲೂ ಅದನ್ನೆಲ್ಲ ನಿರೀಕ್ಷೆ ಮಾಡೋದು ಕಷ್ಟವಿತ್ತು. ಇನ್ನು ದೊಡ್ಡ ಸಾಧಕರಾಗಷ್ಟೇ ಹೊರಹೊಮ್ಮಬೇಕಾದವರು ಆಟಗಾರರ ನಡುವಿನ ಅದ್ಭುತ ಸೇತುವೆಯಾಗಿ, ಎದುರಾಳಿಗಳ ಪಾಲಿಗೆ ತಡೆಗೋಡೆಯಾಗಿ ರೂಪುಗೊಂಡದ್ದು ಭಾರತದ ತಂಡಕ್ಕೆ ದಕ್ಕಿದ ವರದಾನವೆಂದೇ ಹೇಳಬೇಕು. ಏಕೆಂದರೆ ಯಾರೇ ಕ್ರಿಸ್ ನಲ್ಲಿದ್ದರೂ ಇನ್ನೊಂದು ತುದಿಯಲ್ಲಿ ದ್ರಾವಿಡ್ ಇದ್ದಾನೆಂದರೆ ನಿಶ್ಚಿಂತೆಯಿಂದ ಆಡುತ್ತಿದ್ದರು. ತಾನು ಆಡುತ್ತಾ ಸಹ ಆಟಗಾರರನ್ನು ಅದ್ಭುತವಾಗಿ ಆಡಿಸಿಕೊಂಡು ಹೋಗುವ ಕಲೆ ದ್ರಾವಿಡ್ ಗಷ್ಟೇ ಸಿದ್ಧಿಸಿದಿಯಾ ಅಂತ ಹಲವು ಬಾರಿ ಅನ್ನಿಸಿದ್ದುಂಟು. ಇದರ ಫಲಿತಾಂಶ ಅವರು ತಮ್ಮ ಸಹ ಆಟಗಾರರ ಜೊತೆ ನಿರ್ವಹಿಸಿದ ವಿಶ್ವದಾಖಲೆಯ ಜೊತೆಯಾಟಗಳೇ ಸಾಕ್ಷಿ ಇದ್ದವು. ಇಷ್ಟು ಮಾತ್ರವಲ್ಲದೆ ತಂಡಕ್ಕೆ ಅವಶ್ಯಕತೆ ಇದ್ದಾಗಲೆಲ್ಲ ಬೇರೆ ಬೇರೆ ಪಾತ್ರಗಳಲ್ಲಿ ಅವರು ರೆಡಿಯಾಗಿರುತ್ತಿದ್ದುದು ಅವರ ಹಾಜರಿ ತಂಡಕ್ಕೆ ಅದೆಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತಿತ್ತು.

ಎಲ್ಲೊ ಒಂದು ಕಡೆ ಇಷ್ಟೊಂದು ಸಮರ್ಪಿತ ಮನೋಭಾವ, ತ್ಯಾಗದ ಗುಣಗಳಿರುವುದರಿಂದಲೋ ಏನೋ ದ್ರಾವಿಡ್ ಕೆರಿಯರ್ ಉದ್ದಕ್ಕೂ ಆದ್ಯತೆ, ಪ್ರಾಧಾನ್ಯತೆಯಲ್ಲಿ ಸಚಿನ್ ಗಂಗೂಲಿ ನಂತರವೇ ಆಗಿ ಉಳಿದರು. ಬಹುಶಃ ಆ ವಿಷಯದಲೆಲ್ಲ ಸ್ಪರ್ಧೆಗಿಳಿದಿದ್ದರೆ ಅವರ ಹಾಗೂ ತಂಡದ ಪರಿಸ್ಥಿತಿ ಎಲ್ಲಿರುತ್ತಿತ್ತು ಅನ್ನೊದು ಆ ದಿನಗಳಲ್ಲಿ ಊಹಿಸೋಕೂ ಕಷ್ಟವಿತ್ತು. ಕಡೆಯವರೆಗೂ ಯಾವ ಆಟಗಾರನೊಂದಿಗೂ ಪೈಪೋಟಿಗಿಳಿಯದೆ ತಾನಾಯಿತು ತನ್ನ ಜವಾಬ್ದಾರಿಯಿತು ಅನ್ನುವ ರೀತಿಯಲ್ಲಿ ಆಡಿದ್ದು ಅವರ ಸಹಜ ಸ್ವಭಾವವೇ ಏನಿಸಿದ್ದರೂ ಈ ಮೂಲಕ ತಂಡದಲ್ಲೊಂದು ಸಪರೇಟ್ ಐಡೆಂಟಿಟಿ ಕಂಡುಕೊಂಡಿದ್ದು ಅವರ ವೈಶಿಷ್ಟ್ಯವೆಂದೆ ತಿಳಿಯಬೇಕು. ಏನೇ ಆದರೂ ಒಂದುವರೆ ದಶಕಗಳ ಕಾಲ ತಂಡದ ಸಮತೋಲನಕ್ಕೆ ದೊಡ್ಡ ಕೊಂಡಿಯಾಗಿ ನಿಂತು ಅವರು ನೀಡಿದ ಕೊಡುಗೆಯಂತೂ ಭಾರತೀಯ ಕ್ರಿಕೆಟ್ ಇತಿಹಾಸ ಮರೆಯದು. ಆದರೂ ಎಲ್ಲೊ ಒಂದು ಕಡೆ ಬ್ರಿಯಾನ್ ಲಾರಾ  ಭಾರತದಲ್ಲಿ ಹುಟ್ಟಿದಿದ್ದರೆ ಹೇಗೆ ದೇವರಾಗುತ್ತಿದ್ದರು ಅಂತ ಅನ್ನಿಸುತ್ತಿತ್ತೊ, ಹಾಗೆ ದ್ರಾವಿಡ್ ಅಂತಹ ಮಹಾನ್ ಆಟಗಾರ ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಇಂಗ್ಲೆಂಡ್ ನಲ್ಲೊ ಇದ್ದಿದ್ದರೆ ಅವರಿಗೆ ಸಿಗಬೇಕಾದ ಪ್ರಾಧಾನ್ಯತೆ ಬೇರೆಯದೇ ಆಗಿರುತ್ತಿತ್ತು ಅಂತ ಹಲವು ಬಾರಿ ಅನ್ನಿಸಿದ್ದುಂಟು.

ಕ್ರಿಕೆಟ್ ಲೋಕದ ಮಟ್ಟಿಗೆ ಮತ್ತೊಬ್ಬ ಸಚಿನ್ ಬೇಕಾದರೂ ಹುಟ್ಟಬಹುದು. ಮತ್ತೊಬ್ಬ ಲಾರಾ ಕೂಡ ಜನ್ಮ ತಾಳಬಹುದು. ಅಷ್ಟೇ ಏಕೆ ದ್ರಾವಿಡ್ ನಷ್ಟೆ ಪ್ರತಿಭಾಶಾಲಿ ಮತ್ತೊಬ್ಬ ಬರಲೂಬಹುದು. ಆದರೆ ಹಾಗೆ ಬರುವವನು ದ್ರಾವಿಡ್ ನಿರ್ವಹಿಸಿದ ರೀತಿಯಲ್ಲಿ ಪಾತ್ರಗಳನ್ನು ನಿರ್ವಹಿಸಲಾರ ಅನ್ನೊದು ಕ್ರಿಕೆಟ್ ಜಗತ್ತು ಕಂಡುಕೊಂಡ ಸತ್ಯವೇ ಸರಿ. ಹಾಗಾಗಿ ವಿಶ್ವಕ್ಕೆ ಒಬ್ಬರೇ ದ್ರಾವಿಡ್ ಎಂಬುದನ್ನ ಘಂಟಾಘೋಷವಾಗಿ ಎಲ್ಲಾ ಕಾಲದಲ್ಲೂ ಹೇಳಬಹುದು.

ಕ್ರಿಕೆಟ್ ನಂ ಒನ್ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆಗೆ ಸಚಿನ್ ತೆಂಡೂಲ್ಕರ್ರೆ ಪ್ರಶ್ನಾತೀತ ಉತ್ತರವಾಗಿದ್ದರೂ ಕೊಂಚ ಪ್ರಶ್ನೆಯನ್ನು ಬದಲಾಯಿಸಿ ಯುವಕರಿಗೆ ಯಾರು ಹೆಚ್ಚು ಮಾದರಿಯಾಗಬಲ್ಲರು ಅಂತ ಕೇಳಿದರೆ ಬಹುಶಃ ದ್ರಾವಿಡ್ ಅವರೇ ಪರಿಪೂರ್ಣವಾದ ಉತ್ತರವೆಂದು ನಿಸ್ಸಂಶಯವಾಗಿ ಹೇಳಬಹುದು. ಏಕೆಂದರೆ ದೇವರನ್ನೆಲ್ಲಾ ಆರಾಧಿಸಬಹುದೇ ವಿನಃ ಅನುಸರಿಸಲು ಸಾಧ್ಯವಿಲ್ಲವಾದ್ದರಿಂದ ಸಚಿನ್ ಆಗಲಿ ಲಾರಾನಾಗಲಿ ದ್ರಾವಿಡ್ ರಷ್ಟು ಪರಿಪೂರ್ಣ ಮಾದರಿಯಾಗಲಾರರೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಸಚಿನ್, ಲಾರಾ ಅಂತಹ ದೈವದತ್ತ ಪ್ರತಿಭೆಗಳೆನಿಸಿದರೆ ದ್ರಾವಿಡ್ ತಾಳ್ಮೆ ಶಿಸ್ತಿನಂತಹ ದೈವಿಕ ಗುಣಗಳ ಜೊತೆಗೆ ಸತತ ಅಭ್ಯಾಸ, ಪರಿಶ್ರಮಗಳಿಂದ ಎತ್ತರಕ್ಕೆ ಹೋದವರೆಂದೆ ಒತ್ತಿ ಹೇಳಬೇಕಾಗುತ್ತದೆ. ಹಾಗಾಗಿ ಸಕ್ಸಸ್ ಗೆ ನಿರಂತರ ಅಭ್ಯಾಸ, ಕಠಿನ ಪರಿಶ್ರಮ ಬಿಟ್ಟರೆ ಬೇರಾವ ಅಡ್ಡ ಮಾರ್ಗವೂ ಇಲ್ಲ ಎನ್ನುವ ದ್ರಾವಿಡ್ ಫೀಲಾಸಪಿಯೇ ಎಲ್ಲಾ ಕಾಲಕ್ಕೂ ಎಲ್ಲರಿಗೂ ಮಾದರಿ ಎನ್ನಬಹುದು. ಸಚಿನ್, ಸೆಹ್ವಾಗ್, ಗಂಗೂಲಿಯಂತಹ ಅಬ್ಬರದ ಆಟಗಾರರ ಕಾಲಘಟ್ಟದಲ್ಲೆ ಆ ಹಾದಿಯಲ್ಲಿ ನಡೆದು ತೋರಿಸಿದ್ದು ದ್ರಾವಿಡ್ ರನ್ನೆ ಏಕೆ ಯುವಕರು ಮಾದರಿಯನ್ನಾಗಿ ತೆಗೆದುಕೊಳ್ಳಬೇಕು ಅನ್ನೊದಕ್ಕೆ ಪುಷ್ಠಿ ನೀಡುತ್ತದೆ. 

ಇನ್ನು ತೊಂಭತ್ತರ ದಶಕದ ಸರ್ವಶ್ರೇಷ್ಠ ಬೌಲರ್ ಯಾರು ಎಂಬ ಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ. ಒಂದು ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಗಳನ್ನು ನಡುಗುವಂತೆ ಮಾಡುತ್ತಿದ್ದ ವೇಗದ ಬೌಲರ್ ಗಳಾದರೆ, ಎರಡನೆಯವರು ಆದೇ ಸರ್ವಶ್ರೇಷ್ಟ ಬ್ಯಾಟ್ಸ್ಮನ್ ಗಳಿಗೆ ತಿಣುಕಾಡುವಂತೆ ಮಾಡುತ್ತಿದ್ದ ಸ್ಪಿನ್ನರ್ ಗಳು. ಬ್ಯಾಟ್ಸ್ಮನ್ ಗಳನ್ನು ಬೆಚ್ಚಿಬೀಳಿಸುವಂತೆ ಮಾಡುವ ವೇಗಿಗಳ ಸಾಲಿನಲ್ಲಿ ಎಂಬ್ರೋಸ್, ವಾಲ್ಶ್, ಡೊನಾಲ್ಡ್, ವಾಸ್, ಅಕ್ರಂ, ವಕಾರ್ ರಂತಹ ವೇಗಿಗಳೇ ಮಂಚೂಣಿಯಲ್ಲಿದ್ದರೂ, ರೆಕಾರ್ಡ್ ಗಳ ಪರಿಗಣನೆಗೆ ತೆಗೆದುಕೊಂಡರೆ ವಾಸಿಂ ಅಕ್ರಂ ಅವರೇ ಆಗ ಅಗ್ರಗಣ್ಯರಾಗಿದ್ದರೆಂದು ಒಪ್ಪಬೇಕಾಗುತ್ತದೆ.

ಇನ್ನು ತೊಂಭತ್ತರ ಆರಂಭದಲ್ಲಿ ಕುಂಬ್ಳೆ ಅವರೇ ಹೆಚ್ಚು ಬ್ಯಾಟ್ಸ್ಮನ್ ಗಳನ್ನು ತಿಣುಕಾಡುವಂತೆ ಮಾಡುತ್ತಿದ್ದರಾದರೂ ತದನಂತರ ಎಂತಹ ಪಿಚ್ ನಲ್ಲಾದರೂ ಚೆಂಡು ತಿರುಗಿಸುವ ಕೈಚಳಕ ಮೆರೆದಿದ್ದು ಶೇನ್ ವಾರ್ನ್ ಎಂದೇ ಹೇಳಬೇಕು. ಅಲೆಕ್ಸಾಂಡರ್ ಪ್ರಪಂಚವನ್ನೆಲ್ಲಾ ಗೆದ್ದು ಭಾರತದಲ್ಲಿ ಸೋತಂತೆ, ಶೇನ್ ವಾರ್ನ್ ಕೂಡ ಪ್ರಪಂಚದ ದಿಗ್ಗಜ ಬ್ಯಾಟ್ಸ್ಮನ್ ಗಳನ್ನೆಲ್ಲಾ ಬುಗರಿಯಂತೆ ಆಡಿಸಿ ಭಾರತದ ಬ್ಯಾಟ್ಸ್ಮನ್ ಗಳೆದುರು ಮಂಡಿಯೂರಿದ್ದು ಇದೇ ಪ್ರಪಂಚದೆದುರು ಜಗಜ್ಜಾಹೀರಾದ ಸಂಗತಿಯಾಗಿತ್ತು. ಅದರಲ್ಲೂ ಸಚಿನ್ ತೆಂಡೂಲ್ಕರ್ ನಿದ್ರೆಯ ಕನಸಿನಲ್ಲೂ ಬಂದು ಕಾಡುತ್ತಾರೆ ಅಂತಾ ಹೇಳಿಕೆ ನೀಡಿದ್ದು ನೋಡಿದರೆ ಯಾವ ಮಟ್ಟಿಗೆ ವಾರ್ನ್ ಸಚಿನರಿಂದ ಕಂಗೆಟ್ಟಿರಬಹುದು ಎಂಬುದು ತಿಳಿಯುತ್ತದೆ. ಇನ್ನು ತಮ್ಮ ಅವಧಿಯಲ್ಲಿ ಪ್ರಪಂಚದ ಎಲ್ಲಾ ದಿಗ್ಗಜ ಬೌಲರಗಳ ಮೇಲೆ ಸವಾರಿ ಮಾಡಿದ ಸಚಿನ್ ಯಾವ ಬೌಲರ್ ಗೆ ಹೆಚ್ಚು ತಿಣುಕಾಡಿದ್ದಾರೆ ಅಂತ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತಿರಿ. ಏಕೆಂದರೆ ತಮ್ಮ ಸುದೀರ್ಘ ಕ್ರಿಕೆಟ್ ಕೆರಿಯರ್ ನಲ್ಲಿ ಸೌತ್ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ ಬೌಲಿಂಗ್ ಅನ್ನು ಅಂದಾಜಿಸುವಲ್ಲಿ ಕಷ್ಟವಾಗುತ್ತಿತ್ತು ಅಂತ ಸ್ವತಃ ಸಚಿನ್ ಅವರೇ ಒಪ್ಪಿಕೊಂಡಿರೋದು ವಿಚಿತ್ರವಾದರೂ ಸತ್ಯವೇ.

ಇನ್ನು ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯಬ್ ಅಕ್ತರ್ ಗೆ ಸಚಿನ್ ತೆಂಡೂಲ್ಕರ್ರೆ ಅತೀ ಹೆಚ್ಚು ಬೆವರಿಳಿಸಿದವರಾದರೂ ನಿಮ್ಮ ತಾಳ್ಮೆ ಪರೀಕ್ಷಿಸಿದ ಬ್ಯಾಟ್ಸ್ಮನ್ ಯಾರು ಅಂತ ಪ್ರಶ್ನಿಸಿದರೆ ಅವರು ಮುಖ ಸಪ್ಪೆಗಾಗಿಸಿಕೊಂಡು ದ್ರಾವಿಡ್ ಹೆಸರೇ ಹೇಳುತ್ತಾರೆ. ದ್ರಾವಿಡ್ ಕ್ರೀಸ್ ಗೆ ಬಂದು ಹದಿನೈದು ನಿಮಿಷದೊಳಗಡೆ ಅವರ ವಿಕೆಟ್ ಕೀಳಲು ಸಾಧ್ಯವಾಗದಿದ್ದರೆ ಉಳಿದ ಬ್ಯಾಟ್ಸ್ಮನ್ ಗಳ ಕಡೆ ಗಮನ ಕೊಡಿ ಅಂತ ಆಸೀಸ್ ನಾಯಕ ಸ್ಟೀವ್ ವ್ಹಾ ತಮ್ಮ ಬೌಲರ್ ಗಳಿಗೆ ಹೇಳುತ್ತಿದ್ದುದು ಆಡುವಾಗ ದ್ರಾವಿಡರ ಮನಸ್ಥಿತಿ ಯಾವ ರೀತಿ ಇರುತ್ತಿತ್ತು ಎಂಬುದು ತಿಳಿಸುತ್ತದೆ.

ಇನ್ನು ಆಸೀಸ್ ನ ದಿಗ್ಗಜ ಬೌಲರ್ ಮೆಗ್ರಾಥ್ ಗೆ ತಾವು ಎದುರಿಸಿದ ಸರ್ವಶ್ರೇಷ್ಟ ಬ್ಯಾಟ್ಸ್ಮನ್ ಯಾರು ಅಂತ ಕೇಳಿದರೆ ಅವರು ಬ್ರಿಯಾನ್ ಲಾರಾ ಹೆಸರನ್ನೆ ಮೊದಲು ತೆಗೆದುಕೊಳ್ಳುತ್ತಾರೆ. ಇನ್ನು ಸ್ಪಿನ್ ಬೌಲಿಂಗ್ ಅನ್ನ ಎದುರಿಸುವಲ್ಲಿ ಭಾರತದ ಬ್ಯಾಟ್ಸ್ಮನ್ ಗಳಷ್ಟು ಸಮರ್ಥರು ಇಡೀ ವಿಶ್ವದಲ್ಲೇ ಇಲ್ಲ ಎಂದಿರುವ ಮುರಳಿಧರನ್ ಪರೋಕ್ಷವಾಗಿ ಭಾರತಿಯರೆದುರು ತಾವು ಹೆಚ್ಚು ಸಫಲರಾಗಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಹೀಗೆ ಆಟದ ಗುಣಮಟ್ಟದಿಂದ ಅಂಕಿ ಅಂಶಗಳಿಂದ ಜನಪ್ರಿಯತೆಯಿಂದ ಯಾರನ್ನೆ ನಂ ಒನ್ ಎಂದು ನಾವು ಪರಿಗಣಿಸಿದರೂ, ಅದೇ ಆಟಗಾರರ ದೃಷ್ಟಿಕೋನದಲ್ಲಿ ಆ ಹೆಸರುಗಳು ಬೇರೆಬೇರೆನೇ ಆಗಿರುತ್ತವೆ ಅನ್ನೋದು ಸೋಜಿಗವೇ ಸರಿ.

| ಇನ್ನು ನಾಳೆಗೆ ।

‍ಲೇಖಕರು Admin

August 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: