ಮಧುಕರ್ ಬಳ್ಕೂರು ಸರಣಿ ಕಥೆ 15 – ತೊಂಭತ್ತರ ಕ್ರಿಕೆಟ್ ಕ್ರೇಜ್…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

ಹಿಂದಿನ ಸಂಚಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

15

“ಯಾಕೋ ಈ ವೆಸ್ಟ್ ಇಂಡೀಸ್ ನವರನ್ನ ನೋಡಿದ್ರೆ ಮೀನು ಹಿಡಿಯುವವರಾಗೆ ಕಾಣಿಸ್ತಾರೆ ಅಲಾ…” ಹಾಗಂತ ಮ್ಯಾಚ್ ನೋಡುವಾಗ ಹಿಂದಿನಿಂದ ಯಾರೋ ಅಂದಗಾಯಿತು. ಯಾರು ಹಾಗಂದರೊ, ಒಂದು ಕ್ಷಣ ಎಲ್ಲರೂ ನಗುವಂತಾಯಿತು. ತೀರಾ ಸಿರೀಯಸ್ ಆಗಿ ಮ್ಯಾಚ್ ನೋಡುವಾಗ, ಸೈಲೆನ್ಸ್ ಆವರಿಸಿದ್ದಾಗ ಹೀಗೆ ಪಟಕ್ ಅಂತ ಯಾರಾದರೊಬ್ಬರು ಡೈಲಾಗ್ ಹೊಡೆಯೋದು, ನಂತರ ಒಂದಷ್ಟು ದಿನ ಅದನ್ನೇ ರಿಪೀಟ್ ಮಾಡಿ ನಗುವುದು ಆಗೆಲ್ಲಾ ಸಾಮಾನ್ಯವಾಗಿತ್ತು. ಅದು ಯಾಕ್ ಹಾಗೆ ಅನ್ನಿಸುತ್ತೋ ಗೊತ್ತಿಲ್ಲ. ವೆಸ್ಟ್ ಇಂಡೀಸ್ ನವರನ್ನ ನೋಡಿದಾಗಲೆಲ್ಲ ಪಕ್ಕಾ ಲೋಕಲ್ ಗಳ ತರಹ ಕಾಣಿಸುತ್ತಿದ್ದರು. ಬಹುಶಃ ಅವರ ಮುಖಭಾವ, ಮ್ಯಾನರಿಸಂಗಳೇ ಇದಕ್ಕೆ ಕಾರಣವಾಗಿರಬಹುದು.

ಆದರೆ ನನಗೆ ಹಾಗಂದಾಗ ನೆನಪಾದದ್ದು ಮಹೇಶ ಅಲಿಯಾಸ್ ಗೋಲಿರಾಜ. ಮಳೆ ಬರುವ ಟೈಮಿನಲ್ಲಿ ಆಲ್ಕೆರೆಗೆ ಮೀನು ಹಿಡಿಯೋಕೆ ಅಂತ ಬರ್ತಿದ್ದ ಮಹೇಶ ನೋಡೋದಕ್ಕೂ ಥೇಟ್ ವೆಸ್ಟ್ ಇಂಡೀಸ್ ನವರ ತರಾನೆ ಇದ್ದ. ಕಪ್ಪು ಮುಖ, ಬಿಳಿ ಹಲ್ಲು, ಇನ್ನು ಗೊಲಿ ಆಡುವಾಗ ನಾಲಗೆ ಕಚ್ಚಿಕೊಂಡು ಹೊಡೆದನೆಂದರೆ ಎದುರಿನವರ ಗೋಲಿ ಮೈಲುದೂರ ಹೋಗಿ ಬೀಳಿಸುವ ಅವನ ವರಸೆ. ಇಂತಹ ಮಹೇಶ ಮಳೆ ಬಂದ ಟೈಮಲ್ಲಿ ಗಾಳ ಹಿಡ್ಕೊಂಡು ಆಲ್ಕರೆ ಕಡೆಗೆ ಬಂದರೆ ಮೀನಿಲ್ಲದೆ ವಾಪಾಸಾಗುತ್ತಿರಲಿಲ್ಲ. ಅವನು ಗಾಳಕ್ಕೆ ಎರೆಹುಳು ಸಿಕ್ಕಿಸುವುದು, ನಂತರ ಗಾಳವನ್ನು ನೀರಿಗೆ ಬಿಡುವುದು, ಮೀನು ಕದಲಬಾರದಂತ ಶಬ್ದ ಮಾಡ್ದೆ ಸೈಲೆನ್ಸ್ ಮೆಂಟೇನ್ ಮಾಡೋದು, ಮೀನು ಕಚ್ಚಿಕೊಳ್ಳುತ್ತಿದ್ದಂತೆ ಗಾಳವನ್ನು ಸರಕ್ಕಂತ ಮೇಲಕ್ಕೆತ್ತುವುದು, ಎಲ್ಲವೂ ನೋಡುವುದಕ್ಕೆ ಸೊಗಸಾಗಿದ್ದವು. ಅದೊಂದು ದಿನ ಈಗ್ ಬಂದೆ ಅಂತ ಹೇಳಿ ಗಾಳವನ್ನು ನನ್ನ ಕೈಗಿತ್ತು ಎಲ್ಲೊ ಹೋಗೆಬಿಟ್ಟಿದ್ದ.

ಆಗ ನನ್ನ ಕೈಲಿರೋ ಗಾಳ ನೋಡಿದ ಪುಣ್ಯಾತ್ಮರೊಬ್ಬರು ಅಪ್ಪಯ್ಯನ ಬಳಿ ಬಂದು ನೋಡಿ ನಿಮ್ಮ ಮಗ ಅಲ್ಲಿ ಮೀನು ಹಿಡಿತಿದಾನೆ ಅಂತ ಹೇಳಿಬಿಟ್ಟಿದ್ದರು. ಅದೇ ಸಮಯಕ್ಕೆ ಗಾಳಕ್ಕೆ ಮೀನು ಸಿಕ್ಕಿ ಅದನ್ನೇನು ಎತ್ತಬೇಕಾ ಬ್ಯಾಡವ ಎತ್ತಿ ಏನ್ ಮಾಡ್ಬೇಕು ಅನ್ನೊ ಗೊಂದಲದಲ್ಲಿ ನಾನು ತಿಣುಕಾಡಿದ್ದು ಆಯಿತು. ಎಲ್ಲಾ ಮಹೇಶ ತಂದಿಟ್ಟ ಅವಂತಾರವಾಗಿತ್ತು. ಇನ್ನು ಫೀಲ್ಡಿಂಗ್ ಮಾಡುವ ವೇಳೆ ಕೈಗೆ ಬಾಲ್ ಸಿಕ್ಕಿದಾಗಲೆಲ್ಲ ವಿಕೆಟ್ ಗೆ ಗುರಿ ಇಡೋದು, ಒಮ್ಮೊಮ್ಮೆ ಅದು ಓವರ್ ಥ್ರೋ ಆಗಿ ಎಲ್ಲರಿಂದಲೂ ಬೈಸಿಕೊಳ್ಳುವುದು ಒಂಥರಾ ಮಹೇಶನಿಗೆ ಗೋಲಿಯಾಟದಿಂದ ಬಂದ ಬಳುವಳಿಯಾಗಿತ್ತು. ಇಂತಾ ಮಹೇಶನ ಪೂರ್ವಜರೇನಾದರೂ ವೆಸ್ಟ್ ಇಂಡೀಸ್ ನವರು ಆಗಿದ್ದಿರಬಹುದಾ ಅಂತ ಹಲವು ಸಲ ಯೋಚನೆ ಬಂದಿದ್ದುಂಟು. ಏಕೆಂದರೆ ವಾಸ್ಕೊಡಗಾಮ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದಿದ್ದನ್ನು ಶಾಲೆಯ ಪಠ್ಯ ಪುಸ್ತಕದಲ್ಲಿ ಓದಿದ್ದ ನನಗೆ ಮಹೇಶನ ಹಿಂದಿನವರು ಕೂಡಾ ಆ ಟೈಮಲೆಲ್ಲಾದರೂ ಇಲ್ಲಿಗೆ ಬಂದಿರಬಹುದಾ ಎಂಬುದು ನನ್ನ ಊಹೆಯಾಗಿತ್ತು.

ಇನ್ನು ಕೊಲಂಬಸ್ ಇಂಡಿಯಾವನ್ನು ಹುಡುಕುತ್ತೆನಂದು ಹೊರಟು ಕಂಡುಹಿಡಿದ ಜಾಗವಾಗಿದ್ದರಿಂದಲೋ ಏನೋ, ವೆಸ್ಟ್ ಇಂಡೀಸ್ ನವರೆಂದರೆ ನಮ್ಮವರೇ ಅನ್ನೊ ಭಾವನೆ. ಅದಕ್ಕೆ ಸರಿಯಾಗಿ ವೆಸ್ಟ್ ಇಂಡೀಸ್ ಎಂದರೆ ಪಶ್ಚಿಮ ಭಾರತ ಅಂತಾದ್ದರಿಂದ ಒಂಥರಾ ವಿಂಡೀಸ್ ನವರು ಇಂಡಿಯಾದ ಮಾಸ್ ವರ್ಷನ್ ಅಂತಲೇ ತಲೇಲಿ. ಮುಂದೆ ವೆಸ್ಟ್ ಇಂಡೀಸ್ ದ್ವೀಪಗಳ ಸಮೂಹ ಅಂತ ಗೊತ್ತಾಗಿ, ಸಮುದ್ರತೀರ ಅವರ ಹತ್ತಿರದಲ್ಲೇ ಇರುವುದರಿಂದ ನಮ್ಮ ಹಾಗೆ ಅವರದ್ದು ಕೂಡ ಮೀನು ಹಿಡಿಯುವ ಕೆಲಸವಾಗಿದ್ದಿರಬಹುದು ಅನ್ನೊ ನಿರ್ಣಯಕ್ಕೆ ಬಂದಿದ್ದು ಆಯಿತು. ಹಾಗಾಗಿ ಅವರನ್ನು ನೋಡಿದಾಗಲೆಲ್ಲ ಕ್ರಿಕೆಟ್ ಅನ್ನ ಅಪ್ಪಟ ಪ್ರೋಫೆಷನ್ ಆಗಿ ತಗೊಂಡಿಲ್ಲವೆನೋ ಅಂತ ಬಹಳಷ್ಟು ಸಲ ಅನ್ನಿಸಿದ್ದಿದೆ. ಏಕೆಂದರೆ ಅವರ ಲೋಕಲ್ ಮ್ಯಾನರಿಸಂ, ಯಾವುದೇ ಏಕ್ಸಾಯಿಟ್ ಮೆಂಟ್ ಗೆ ಒಳಗಾಗದೆ ಎಂಜಾಯ್ ಮಾಡುತ್ತಾ ಆಡುವುದು.

ಅಪಾರ ಸಾಮರ್ಥ್ಯವಿದ್ದರೂ ಬದ್ಧತೆಯನ್ನು ಪ್ರದರ್ಶಿಸದೆ ಇರುವುದು ಇದೆಲ್ಲವನ್ನು ನೋಡಿದಾಗ ಹಲವು ಬಾರಿ ಹಾಗನ್ನಿಸಿದ್ದುಂಟು. ಇನ್ನು ವಿಂಡೀಸ್ ಕ್ರಿಕೆಟಿಗರು ಯಾವತ್ತಿಗೂ ಯಾರೊಂದಿಗಾದರೂ ಜಗಳ ಕಾದಿದ್ದಾಗಲಿ, ಅಂಪೈರ್ ತೀರ್ಮಾನವನ್ನು ವಿರೋಧಿಸಿದ್ದಾಗಲಿ ಕಾಣಲು ಸಾಧ್ಯವಿರಲಿಲ್ಲ. ಹಾಗೆಯೇ ಮ್ಯಾಚ್ ಸೋತರೆ ತಲೆ ಕೆಡಿಸಿಕೊಳ್ಳೊದು, ಆಕಾಶವೇ ತಲೆ ಮೇಲೆ ಬಿದ್ದವರ ಹಾಗೆ ಆಡೋದು ಅವರ ಜಾಯಾಮಾನದಲ್ಲೆ ಇಲ್ಲಾ ಅನ್ನಬಹುದು. ಎಲ್ಲವನ್ನು ಟೇಕ್ ಇಟ್ ಇಸೀ ಪಾಲಿಸಿ ರೀತಿಯಲ್ಲಿ ಸ್ವೀಕರಿಸುವುದು ಡೊಂಟ್ ವರಿ ಬಿ ಹ್ಯಾಪಿ ಅನ್ನುವ ರೀತಿಯಲ್ಲಿ ಇದ್ದುಬಿಡುವುದು ವೆಸ್ಟ್ ಇಂಡೀಸ್ ನವರ ಹುಟ್ಟು ಗುಣವೇ ಆಗಿದ್ದಿರಬಹುದು.

ಇನ್ನು ಬದ್ಧತೆಯ ವಿಚಾರದಲ್ಲಿ ವಿಂಡೀಸ್ ನ ಹಾಗೆ ಇರುವ ಪಾಕಿಸ್ತಾನದವರು ಇನ್ ಸ್ಟಂಟ್ ಮಾದರಿಯ ಕ್ರಿಕೆಟಿಗೆನಿಸಿದ್ದರು. ಒಂದು ಪಂದ್ಯದಲ್ಲಿ ತೀರಾ ಹೀನಾಯವಾಗಿ ಸೋಲೋದು ನಂತರ ದುತ್ತಂತ ಎಲ್ಲರೂ ತಿರುಗಿ ನೋಡುವ ರೀತಿಯಲ್ಲಿ ವಾಪಾಸಾಗೋದು ಪಾಕಿಸ್ಥಾನದವರ ಸ್ಪೇಷಾಲಿಟಿಯಾಗಿತ್ತು. ಅದೊಂದು ಕಾಲವಿತ್ತು. ಇಮ್ರಾನ್ ಖಾನ್ ಪಾಕಿಸ್ತಾನದ ರಸ್ತೆಗಳಲ್ಲಿ ತಿರುಗಾಡುವಾಗ ಯಾವನಾದ್ರು ಟ್ಯಾಲೆಂಟ್ ಆಗಿ ಆಡುವ ಹುಡುಗ ಕಂಡುಬಂದರೆ ಮಾರನೇ ದಿನವೇ ಅವನು ಪಾಕಿಸ್ತಾನ ಟೀಮ್ ನಲ್ಲಿರುತ್ತಿದ್ದ ಅನ್ನುವ ಮಾತುಗಳಿದ್ದವು. ಅದು ನಿಜವೂ ಆಗಿತ್ತು. ಆದರೆ ಹಾಗೆ ಬರುತ್ತಿದ್ದ ಹುಡುಗರು ರಾತ್ರೊರಾತ್ರಿ ಸ್ಟಾರ್ ಆಗಿಬಿಡುತ್ತಿದ್ದರು ಎನ್ನುವುದು ನಿಜವಾದರೂ ತದನಂತರ ಅವರ ವರ್ತನೆ ತಲೆ ನಿಲ್ಲದಂತೆ ಇರುತ್ತಿತ್ತು ಅನ್ನೊದು ಸತ್ಯಕ್ಕೆ ದೂರವಾಗಿರಲಿಲ್ಲ.

ಈ ಕಾರಣದಿಂದ ಪಾಕಿಸ್ತಾನದ ಯಾವೊಬ್ಬ ಕ್ರಿಕೆಟಿಗನೂ ಕೂಡಾ ನಿರಂತರವಾಗಿ ತಂಡದ ಭಾಗವಾಗಿರಲಿಲ್ಲವೆಂದೆ ಹೇಳಬಹುದು. ಬಹುತೇಕ ಕ್ರಿಕೆಟಿಗರು ಅಪ್ಪಟ ಪ್ರತಿಭಾವಂತರೆನಿಸಿಕೊಂಡು ಬಂದು, ಕೆಲವೇ ವರ್ಷಗಳಲ್ಲಿ ಅಶಿಸ್ತು, ಅನುಚಿತ ವರ್ತನೆಗಳಿಂದ ತಮ್ಮ ಕೆರಿಯರ್ ಅನ್ನ ಹಾಳುಮಾಡಿಕೊಂಡಿದ್ದು ನೋಡಿದರೆ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೊ ಮಾತು ನೆನಪಾಗದೆ ಇರದು. ಆದರೆ ನಿಜವಾದ ವಿಷಯ ಸಹವಾಸದಿಂದ ಸನ್ಯಾಸಿ ಕೆಟ್ಟ ಅನ್ನೊ ಹಾಗಿನ ಪಾಕಿಸ್ತಾನದ ವಾತಾವರಣ ಅನ್ನೊದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಇನ್ನು ವರ್ಣ ಭೇದ ನೀತಿಯಿಂದ ಮತ್ತೆ ಕ್ರಿಕೆಟ್ ಗೆ ವಾಪಾಸ್ ಆಗಿದ್ದ ದಕ್ಷಿಣ ಆಫ್ರಿಕಾದವರು ತೊಂಭತ್ತರ ದಶಕದ ಟಾಪ್ ಒನ್ ತಂಡವಾಗಿದ್ದರು. ತಂಡದಲ್ಲಿರುವ ಸಂಪೂರ್ಣ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹೊಸಬರಾಗಿ ಆಗಮಿಸಿದ್ದರಿಂದಲೋ ಏನೋ ಅವರಿಂದ ಕ್ರಿಕೆಟ್ ಮಾದರಿಗೆ ಹೊಸ ವೇಗವೇ ಬಂದಿತೆನ್ನಬಹುದು. ಆದರೆ ಭಾರತೀಯರಿಗೆ ಸ್ಟಾರ್ಟಿಂಗ್ ಸಮಸ್ಯೆ ಇದ್ದಂತೆ ಸೌತ್ ಆಫ್ರಿಕಾ ದವರಿಗೆ ಎಂಡಿಂಗ್ ಸಮಸ್ಯೆ ಕಾಡಿದ್ದರಿಂದ ಇಡೀ ಕ್ರಿಕೆಟ್ ಲೋಕವೇ ಅವರನ್ನು ಚೋಕರ್ಸ್ ಅಂತ ಕರೆಯುವಂತಾಯಿತು. ಏನೇ ಆದರೂ ಕ್ರಿಕೆಟ್ ನಲ್ಲಿ ಬ್ಯಾಟಿಂಗ್, ಬೌಲಿಂಗ್ ನಷ್ಟೇ ಫೀಲ್ಡಿಂಗ್ ಕೂಡ ಬಹುಮುಖ್ಯವಾದ ಭಾಗ ಎಂದು ವಿಶ್ವಕ್ಕೆ ತೋರಿಸಿಕೊಟ್ಟ ಹೆಗ್ಗಳಿಕೆ ಮಾತ್ರ ಸೌತ್ ಆಫ್ರಿಕಾ ಆಟಗಾರರದೇ.

ಇನ್ನು ಶ್ರೀಲಂಕಾ ಬಗ್ಗೆ ಹೇಳದೆ ತೊಂಭತ್ತರ ದಶಕದ ಕ್ರಿಕೆಟ್ ಕಂಪ್ಲೀಟ್ ಆಗುವುದಿಲ್ಲ. ಒಂದು ಸಾಧಾರಣ ತಂಡವೊಂದು ಕೆಲವೇ ಕೆಲವು ದಿನಗಳಲ್ಲಿ ಅಸಾಧಾರಣ ತಂಡವಾಗಿ ಬದಲಾಗಿ ಮಿರಾಕಲ್ ಸೃಷ್ಟಿಸಿದ್ದರೆ ಅದು ಶ್ರೀಲಂಕಾ ತಂಡವೇ ಆಗಿರಬೇಕು. 96ರ ವರ್ಲ್ಡ್ ಕಪ್ ಮೊದಲು ಸಾಮಾನ್ಯ ತಂಡವಾಗಿದ್ದ ಶ್ರೀಲಂಕಾ ನಂತರ ಹದಿನೈದು ಓವರ್ ಗಳ ಫೀಲ್ಡಿಂಗ್ ನಿಯಮವನ್ನು ಅದ್ಭುತವಾಗಿ ಬಳಸಿಕೊಂಡು ಎಲ್ಲರ ಕಣ್ಣು ಕುಕ್ಕುವ ರೀತಿಯಲ್ಲಿ ಕಪ್ ಎತ್ತಿದ್ದು ಅಸಾಧಾರಣ ವಿಷಯವೇ ಸರಿ. ಅದಕ್ಕೂ ಮೊದಲು ನ್ಯೂಜಿಲೆಂಡ್ ನ ಮಾರ್ಕ್ ಗ್ರೇಟ್ ಪ್ಯಾಚ್, ನಮ್ಮವರೇ ಆದ ತೆಂಡೂಲ್ಕರ್ ಆ ಫಾರ್ಮುಲಾದಲ್ಲಿ ಸಕ್ಸಸ್ ಕಂಡಿದ್ದರೂ, ಜೋಡಿ ಜುಗಲ್ ಬಂಧಿಯಾಗಿ ಸನತ್ ಜಯಸೂರ್ಯ ಹಾಗೂ ರಮೇಶ್ ಕಲುವಿತರಣ ಜೋಡಿ ಇದರಲ್ಲಿ ಹೆಚ್ಚು ಯಶಸ್ಸು ಕಂಡಿದ್ದು ಶ್ರೀಲಂಕಾದ ಗೆಲುವಿಗೆ ಮಹತ್ತರ ಪಾತ್ರ ನೀಡಿತೆನ್ನಬಹುದು. ಅದರಲ್ಲೂ ಅದೃಷ್ಟ ಒಲಿದುಬಂದರೆ ಹೇಗಿದ್ದವರು ಎಲ್ಲೊ ಹೋಗಿಬಿಡುತ್ತಾರೆ ಎನ್ನುವುದಕ್ಕೆ ಜಯಸೂರ್ಯನೇ ಪ್ರತ್ಯಕ್ಷ ಸಾಕ್ಷಿ. ಏಕೆಂದರೆ ಎಡಗೈ ಸ್ಪಿನ್ನರ್ ಆಗಿ ಏಳನೇ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದ ಜಯಸೂರ್ಯ, ನಾಯಕ ರಣತುಂಗಾರ ಒಂದು ನಿರ್ಧಾರದಿಂದ ರಾತ್ರೊರಾತ್ರಿ ಸ್ಟಾರ್ ಆಗಿದ್ದನ್ನು ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಮರೆಯರು. ಬಹುಶಃ ವರ್ಲ್ಡ್ ಕಪ್ ನ ನಂತರ ಜಯಸೂರ್ಯ ವಿಶ್ವದ ಅಗ್ರಗಣ್ಯ ಬೌಲರ್ ಗಳಿಗೆಲ್ಲ ದೊಡ್ಡ ತಲೆನೋವಾಗಿದ್ದರು ಅನ್ನೋದು ಗುಟ್ಟಾಗೇನು ಉಳಿದಿರಲಿಲ್ಲ.

ಇನ್ನು ತಮ್ಮ ಕೆರಿಯರ್ ಮುಗಿಸುವ ವೇಳೆಗೆ 13000 ರನ್ 300 ಪ್ಲಸ್ ವಿಕೆಟ್ ವರೆಗೆ ಅವರು ಸಾಗಿದ್ದು ನೋಡಿದರೆ ಹೇಗಿದ್ದ ಹೇಗಾದ ಗೊತ್ತಾ ಚಿನ್ನಾರಿ ಮುತ್ತ ಹಾಡು ನೆನಪಿಗೆ ಬರದೇ ಇರದು. ಉಳಿದಂತೆ ಅರವಿಂದ ಡಿಸಿಲ್ವಾ, ಚಾಮುಂಡ ವಾಸ್, ಮುತ್ತಯ್ಯ ಮುರಳೀಧರನ್ನರೆಲ್ಲಾ ವರ್ಲ್ಡ್ ಕ್ಲಾಸ್ ಪ್ಲೇಯರ್ ಗಳಾಗಿ ಹೊರಹೊಮ್ಮಿದ್ದು 96ರ ವರ್ಲ್ಡ್ ಕಪ್ ನಂತರವೆಂದೆ ಹೇಳಬೇಕು. ಒಟ್ಟಾರೆ ತೊಂಭತ್ತರ ದಶಕದಲ್ಲಿ ಏಕದಿನ ಕ್ರಿಕೆಟ್ ನ ಸ್ವರೂಪವನ್ನೆ ತಲೆಕೆಳಗಾಗಿಸಿ ಆ ಮೂಲಕ ಶ್ರೀಲಂಕಾ ಟೀಮ್ ಬಗೆಗಿದ್ದ ದೃಷ್ಟಿಕೋನವನ್ನು ಬದಲಿಸಿದ ಕೀರ್ತಿ ಅರ್ಜುನ್ ರಣತುಂಗಾರಿಗೆನೆ ಸಲ್ಲಬೇಕು. ಯಾವುದೇ ಹೊಸ ಅಲೆಯೂ ಬೀಸದೇ, ಇರುವ ಅದದೇ ಪ್ಲೇಯರ್ ಗಳನ್ನು ಅತ್ಯದ್ಭುತವಾಗಿ ಬಳಸಿಕೊಳ್ಳುವ ಸಂಕಲ್ಪ ಮಾಡಿದ್ದು, ಅವರಲ್ಲಿದ್ದ ದಕ್ಷತೆಯನ್ನು ವಿಶ್ವಕ್ಕೆ ಪರಿಚಯಿಸುವ ಪಣ ತೊಟ್ಟಿದ್ದು ರಣತುಂಗಾರನ್ನು ಇಮ್ರಾನ್ ಖಾನ್ ನಂತರದ ಪ್ರಭಾವಿ ನಾಯಕರ ಲೆವೆಲ್ಲಿಗೆ ಏರಿಸಿತೆನ್ನಬಹುದು.

ಇನ್ನು ಕ್ರಿಕೆಟ್ ಜನಕರ ದೇಶ ಇಂಗ್ಲೆಂಡ್ ಅಂದಾಕ್ಷಣ ನೆನಪಾಗೋದು ಟೆಸ್ಟ್ ಮಾದರಿ ಕ್ರಿಕೆಟ್. ಬಹಳ ಹಿಂದೆ ಓದಿದ ನೆನಪು.1877ರಲ್ಲಿ ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾದಾಗ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡಗಳು ವರುಷದಲ್ಲಿ ಸರದಿ ಪ್ರಕಾರ ಎರಡು ಬಾರಿ ಎದುರಾಗುತ್ತಿದ್ದವಂತೆ. ಆಸ್ಟ್ರೇಲಿಯಾದವರು ಇಂಗ್ಲೆಂಡ್ ಗೆ ಬರುತ್ತಿದ್ದುದು ಇಂಗ್ಲೆಂಡ್ ನವರು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದುದು, ಹೀಗೆ ಒಂದೊಂದು ಪ್ರವಾಸವೂ ಮೂರ್ನಾಲ್ಕು ತಿಂಗಳುಗಳವರೆಗೆ ನಡೆಯುತ್ತಿದ್ದುದು, ಆಡುತ್ತಿದ್ದುದೆ ಐದಾರು ಟೆಸ್ಟ್ ಪಂದ್ಯಗಳಾದರೂ ಬಹುಪಾಲು ಸಮಯ ಹಡಗು ಪ್ರಮಾಣದಲ್ಲಿಯೇ ಆಟಗಾರರು ಕಳೆಯುತ್ತಿದ್ದುದು ಎಲ್ಲವೂ ವಿಸ್ಮಯಕಾರಿ ಸಂಗತಿಗಳಾಗಿದ್ದವು. ಇನ್ನು ಕ್ರಿಕೆಟ್ ನೋಡುವ ಪ್ರೇಕ್ಷಕರ ಶಿಸ್ತನ್ನು ನೋಡಬೇಕಾದರೆ ನೀವು ಇಂಗ್ಲೆಂಡ್ ನಲ್ಲಿಯೇ ಕಾಣಬೇಕು. ತಲೆಯಲ್ಲೊಂದು ಟೋಪಿ ಮೈಮೇಲೊಂದು ಒಂದು ಕೋಟ್ ಹಾಕಿಕೊಂಡು ಅದೆಷ್ಟು ತನ್ಮಯರಾಗಿ ಸೀಟ್ ನಲ್ಲಿ ಕುಳಿತುಬಿಡುತ್ತಾರೆಂದರೆ ಬಹುಶಃ ಅವರು ಆಟಗಾರರಿಗೆ ಗೌರವಪೂರ್ವಕವಾಗಿ ನೀಡುವ ಚಪ್ಪಾಳೆಯ ವಿನಃ ಇನ್ನೊಂದು ಸದ್ದು ನಿಮಗೆ ಕೇಳಿಸಲಿಕ್ಕಿಲ್ಲ. ಕ್ರಿಕೆಟ್ ಶುರುವಾದ ಆ ದಿನಗಳಿಂದ ಹಿಡಿದು ಇಲ್ಲಿಯವರೆಗೂ ಈ ಸಾಂಪ್ರದಾಯಿಕ ವರ್ತನೆ ಬದಲಾಗಿಲ್ಲವೆನ್ನುವುದು ಇಂಗ್ಲೀಷನವರು ಕ್ರಿಕೆಟ್ ಗೆ ಕೊಡುವ ಗೌರವ ಎಂತದ್ದು ಎನ್ನುದರ ಬಗ್ಗೆ ತಿಳಿಯುತ್ತದೆ.

ಇನ್ನು ನ್ಯೂಜಿಲ್ಯಾಂಡ್ ನ ಪ್ರೇಕ್ಷಕರನ್ನು ನೋಡಿದಾಗಲೆಲ್ಲ ಹೊಟ್ಟೆ ಉರಿಯೋದು. ಆರಾಮಾಗಿ ಫ್ಯಾಮಿಲಿ ಜೊತೆ ಬಂದು ಟವಲ್ ಹಾಸಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಾ ಅಡ್ಡಾಡುವುದನ್ನು ನೋಡಿದಾಗ ಇವರೇನು ಕ್ರಿಕೆಟ್ ನೋಡಿಲಿಕ್ಕೆ ಬಂದರೊ ಟೂರ್ ಗಿರ್ ಅಂತ ಎಂಜಾಯ್ ಮಾಡಲೋ ಬಂದರೋ ಅಂತ ಅನ್ನಿಸಿಬಿಡೋದು! ಏಕೆಂದರೆ ಭಾರತದಲ್ಲಿ ಒಂದು ಟಿಕೆಟ್ ಗಾಗಿ ವಾರಗಟ್ಟಲೇ ಕ್ಯೂನಲ್ಲಿ ನಿಂತು ಅಷ್ಟೊಂದು ಜನರ ಮಧ್ಯೆ ಸರ್ಕಸ್ ಮಾಡಿ ನೋಡುವಾಗ ಯಾರಿಗೂ ಹಾಗನ್ನಿಸದೇ ಇರದು. ಬಹುಶಃ ನ್ಯೂಜಿಲೆಂಡ್ ನಲ್ಲಿನ ರೀತಿಯ ಕ್ರಿಕೆಟ್ ನೋಡುವ ಭಾಗ್ಯವನ್ನು ಭಾರತದಲ್ಲಿ ಊಹಿಸಲಿಕ್ಕೆನೆ ಸಾಧ್ಯವಿಲ್ಲವೆನೋ. ಏಕೆಂದರೆ ಟೆಸ್ಟ್ ನಂತಹ ಐದು ದಿನಗಳ ಪಂದ್ಯಗಳಲ್ಲಿಯೂ ಕೂಡ ಸ್ಟೇಡಿಯಂ ಭರ್ತಿಯಾಗಿಯೇ ಇರುತ್ತಿದ್ದುದು ಆ ದಿನಗಳಲ್ಲಿ ಸಾಮಾನ್ಯವಾಗಿತ್ತು.

ಈಡನ್ ಗಾರ್ಡನ್ ಮೈದಾನ ಒಂದರಲ್ಲೆ ಲಕ್ಷ ಮಂದಿ ಜಮೆಯಾಗಿ ಸೀಟ್ ಸಿಗುತ್ತಿರಲಿಲ್ಲವೆಂದರೆ ಅದೆಂತಾ ಕ್ರಿಕೆಟ್ ಕ್ರೇಜ್ ಭಾರತದಲ್ಲಿದೆಯೆಂಬುದು ತಿಳಿದುಕೊಳ್ಳಿ. ಇನ್ನು ಆ ದಿನಗಳಲ್ಲಿ ಗೆದ್ದಾಗ ಪಟಾಕಿ ಸಿಡಿಯದಿದ್ದರೆ, ಸೋತಾಗ ಬಾಟಲ್ ಗಳು ಮೈದಾನಕ್ಕೆ ಬೀಳದಿದ್ದರೆ ಸ್ಟೇಡಿಯಂನಲ್ಲಿ ಭಾರತಿಯ ಪ್ರೇಕ್ಷಕರಿಲ್ಲ ಅನ್ನೊದನ್ನ ಕಣ್ಣು ಮುಚ್ಚಿ ಹೇಳಬಹುದಾಗಿತ್ತು. ಇದರರ್ಥ ಭಾರತ ಸೇರಿದಂತೆ ಉಪಖಂಡದ ದೇಶಗಳಲ್ಲಿ ಕ್ರಿಕೆಟ್ ಎಮೋಷನ್ ಇಂತದ್ದೊಂದು ದೊಡ್ಡ ಸೌಂಡ್ ರೂಪದಲ್ಲಿ ಬ್ಲಾಸ್ಟ್ ಆಗುತ್ತಿತ್ತು ಅಂತ ಬೇರೆ ಹೇಳಬೇಕಾಗಿರಲಿಲ್ಲ.

ಇನ್ನು 1999ರ ವಿಶ್ವಕಪ್ ಬಳಿಕ ಕ್ರಿಕೆಟ್ ಲೋಕದಲ್ಲಿ ಆಸ್ಟೇಲಿಯನ್ನರ ಯುಗ ಶುರುವಾಯಿತೆನ್ನಬಹುದು. ಮುಂದೆ ಅವರ ಸಾರ್ವಭೌಮತ್ವ ಎಲ್ಲಿಯವರೆಗೆ ಹೋಯಿತೆಂದರೆ ನಂತರದ ನಾಲ್ಕು ವರ್ಲ್ಡ್ ಕಪ್ ಗಳಲ್ಲಿ ಮೂರರಲ್ಲಿ ಗೆದ್ದಿದ್ದಲ್ಲದೆ ಟೆಸ್ಟ್ ನಲ್ಲೂ ಸುಧಿರ್ಘ ವರುಷದವರೆಗೆ ನಂ ಒನ್ ಸ್ಥಾನವನ್ನು ಕಾಯ್ದುಕೊಂಡರು. ಕ್ಯಾಂಗರೂಗಳು ಎಷ್ಟು ಬಲಾಢ್ಯರಾಗಿ ಬೆಳೆದು ಹೆಸರು ಮಾಡಿದರೂ ಅಷ್ಟೇ ಸ್ಲೆಡ್ಜಿಂಗ್ ನಲ್ಲೂ ಕೂಡ ಹೆಸರು ಮಾಡಿ ವರ್ಚಸ್ಸು ಕಳೆದುಕೊಂಡರೆಂದೆ ಹೇಳಬಹುದು. ಏಕೆಂದರೆ ಜಂಟಲ್ಮ್ಯಾನ್ ಗಳ ಆಟದಲ್ಲಿ ಬಲಾಢ್ಯರಾಗಿದ್ದುಕೊಂಡು ತೀರಾ ಸ್ಲೆಡ್ಜಿಂಗ್ ನ ಅಗತ್ಯವಿತ್ತಾ ಅಂತ ಅನ್ನಿಸಬಹುದಾದರೂ ಕಾಂಗರೂಗಳ ಯಶಸ್ಸಿನಲ್ಲಿ ಅದು ಕೂಡಾ ಪ್ರಮುಖ ಪಾತ್ರ ವಹಿಸಿತ್ತೆಂಬುದನ್ನ ತಳ್ಳಿ ಹಾಕುವಂತಿಲ್ಲ. ಮೈದಾನದ ಹೊರಗಡೆ ಅಪ್ಪಟ ಜಂಟಲ್ಮ್ಯಾನ್ ಗಳೆನಿಸಿಕೊಂಡರೂ ಮೈದಾನದಲ್ಲಿ ಮಾತ್ರ ಎದುರಾಳಿಗೆ ಸ್ಲೆಡ್ಜಿಂಗ್ ಮಾಡುತ್ತಿದ್ದುದು ಆಸೀಸ್ ಕ್ರಿಕೆಟಿಗರ ತಂತ್ರಗಾರಿಕೆಯ ಭಾಗವೆಂದೆ ಅರ್ಥೈಸಬಹುದು.

ಇನ್ನು ಕ್ರಿಕೆಟ್ ಶಿಶುಗಳೆನಿಸಿದ ಜಿಂಬಾಬ್ವೆ ಕೀನ್ಯಾ ತಂಡಗಳು ಅನಿರೀಕ್ಷಿತ ಫಲಿತಾಂಶಗಳಿಗೆ ಹೆಸರಾಗಿದ್ದರು. ಅನುಭವ ಕಡಿಮೆ ಅನ್ನೊದು ಬಿಟ್ಟರೆ ಫೀಲ್ಡ್ ಗೆ ಇಳಿಯುವಾಗ ಯಾವುದೇ ಸೋಲಿನ ಭಯ, ಒತ್ತಡವಿಲ್ಲದೆ ಆಡುತ್ತಿದ್ದರಿಂದ ಅವರ ಪ್ರದರ್ಶನ ಆಗಾಗ ದೊಡ್ಡ ತಂಡಗಳಿಗೆ ಸಂಕಷ್ಟ ಒಡ್ಡುವಲ್ಲಿ ಯಶಸ್ಸಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ವರ್ಲ್ಡ್ ಕಪ್ ನ ಗ್ರಾಪ್ ನೋಡಿದರೂ ಈ ತರಹದ ಒಂದೆರಡು ಫಲಿತಾಂಶಗಳು ಉದಾಹರಣೆಯಾಗಿ ಕಾಣಸಿಗುತ್ತವೆ. 96ರ ವರ್ಲ್ಡ್ ಕಪ್ ನಲ್ಲಿ ವೆಸ್ಟ್ ಇಂಡೀಸ್ ಅನ್ನ ಮಣಿಸಿದ್ದ ಕೀನ್ಯಾ 2003ರ ವರ್ಲ್ಡ್ ಕಪ್ ನಲ್ಲಿ ಸೆಮಿಫೈನಲ್ ವರೆಗೂ ಹೋಗಿದ್ದನ್ನ ಮರೆಯುವಂತಿಲ್ಲ. ಇನ್ನು ಜಿಂಬಾಬ್ವೆ 1999ರ ವರ್ಲ್ಡ್ ಕಪ್ ನಲ್ಲಿ ಅತಿಥೇಯ ಇಂಗ್ಲೆಂಡ್ ಅನ್ನೆ ಹಿಂದಕ್ಕೆ ತಳ್ಳಿ ಸೂಪರ್ ಸಿಕ್ಸ್ ಹಂತಕ್ಕೆ ಹೋಗಿದ್ದನ್ನು ಇತಿಹಾಸ ಪುಟಗಳಿಂದ ಕಣ್ಮರೆಯಾಗಿಲ್ಲ. ಅದೇ ವರ್ಲ್ಡ್ ಕಪ್ ನಲ್ಲಿ ಪಾಕಿಸ್ತಾನಕ್ಕೆ ಅಚ್ಚರಿಯ ರೀತಿಯಲ್ಲಿ ಚಳ್ಳೆ ಹಣ್ಣು ತಿನ್ನಿಸಿದ ಬಾಂಗ್ಲಾ 2007ರ ವರ್ಲ್ಡ್ ಕಪ್ ನಲ್ಲಿ ಭಾರತವನ್ನೇ ಸೋಲಿಸಿ ಸೂಪರ್ ಏಯ್ಟ್ ಗೆ ಲಗ್ಗೆ ಇಟ್ಟಿದ್ದನ್ನು ಯಾರು ಮರೆತಿಲ್ಲ. ಇದೀಗ ಬಾಂಗ್ಲಾದೇಶ ಟೀಮೇ ಕ್ರಿಕೆಟ್ ಶಿಶುವಾಗೇ ಉಳಿದಿಲ್ಲ ಅನ್ನೊದು ಬೇರೆ ಮಾತು.

ಕ್ರಿಕೆಟ್ ಆಡುವ ದೇಶಗಳಲ್ಲಿ ಇಷ್ಟೊಂದು ವೈವಿಧ್ಯತೆ, ಚಮತ್ಕಾರ, ವಿಸ್ಮಯಗಳು ಅಡಗಿರುವುದುರಿಂದಲೇ ತೊಂಭತ್ತರ ಕ್ರಿಕೆಟ್ ಸೊಗಸಾಗಿ ನಮ್ಮ ಮೈ ಮನಗಳಲ್ಲಿ ತುಂಬಿಕೊಳ್ಳಲು ಸಾಧ್ಯವಾಯಿತು ಎನ್ನಬಹುದು. ಇನ್ನು ಅದು ಸೃಷ್ಟಿಸಿದ ಆಸೆ, ಕನಸು, ಭ್ರಮೆ, ಕಲ್ಪನೆಗಳಿಗೆ ಪದಗಳಿಂದ ಬಣ್ಣ ಕಟ್ಟಲು ಸಾಧ್ಯವಾಗದಿರುವುದಕ್ಕೆ ಕಾರಣ ಕ್ರಿಕೆಟ್ ನಮ್ಮೆಲ್ಲರ ನಾಡಮಿಡಿತದ ರಿಮೋಟ್ ಕಂಟ್ರೋಲ್ ನಂತೆ ಕೆಲಸ ಮಾಡುತ್ತಿತ್ತೆಂದು ನಿಸ್ಸಂಶಯವಾಗಿ ಹೇಳಬಹುದು.

| ಇನ್ನು ನಾಳೆಗೆ ।

‍ಲೇಖಕರು Admin

August 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: