ಮಧುಕರ್ ಬಳ್ಕೂರು ಸರಣಿ ಕಥೆ 13- ಕ್ರಿಕೆಟ್ ನೋಡುವಾಗಿನ ಕ್ಷಣದ ತಲೆಬುಡವಿಲ್ಲದ ನಂಬಿಕೆಗಳು…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

13

“ನಾನು ಹೀಗೇ ನೋಡ್ತಾ ಇದ್ದರೆ ವಿಕೆಟ್ ಬಿಳೋದು ಡೌಟ್.. ಸ್ವಲ್ಪ ಹೊತ್ತು ಹೊರಗ್ ಹೋಗಿ ಬಂದ್ರೆ ವಿಕೆಟ್ ಬೀಳಬಹುದಾ ಅಂತಾ..!” ಯಾಕೊ ಹೀಗನ್ನಿಸೋಕೆ ಶುರುವಾಗಿತ್ತು. 

ನಮ್ಮ ತಂಡದ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡ ಸಮಯದಲ್ಲಿ ಎದುರಾಳಿಗಳು ನಿರಾಯಾಸವಾಗಿ ಮೇಲುಗೈ ಸಾಧಿಸಿದಾಗ ಯಾಕೋ ನಮ್ಮ್ ಬಗ್ಗೆನೆ ಹೀಗೆಲ್ಲ ಡೌಟ್ ಬರೋಕೆ ಶುರುವಾಗುತ್ತಿತ್ತು!! ನಾನ್ ಮ್ಯಾಚ್ ನೋಡಿದಿದ್ರೆ ಇಂಡಿಯಾ ಗೆಲ್ಲುತ್ತಿತ್ತೊ ಏನೋ ಎನ್ನುವ ಆ ಕಾಮೆಂಟರಿ ದಿನಗಳ ಮನಸ್ಥಿತಿಯಿಂದ ಮನಸ್ಸು ಬದಲಾಗಿದ್ದು ನಮ್ಮ ಮುಗ್ದತೆ ಮಾಯವಾಗಿದ್ದರ ಸಂಕೇತವಾ, ಅಥವಾ ತಿಳುವಳಿಕೆ, ಪ್ರೀತಿ ಜಾಸ್ತಿಯಾದಾಗ ಹುಟ್ಟಿಕೊಳ್ಳೊ ಕಳೆದುಕೊಳ್ಳೊ ರೀತಿಯ ಭಯವಾ..? ಗೊತ್ತಿಲ್ಲ. ಆದರೆ ವಿಪರೀತವಾದ ಹುಚ್ಚಿನ ಪರಿಣಾಮದಿಂದ ಕ್ರಿಕೆಟ್ ನೋಡುತ್ತಿದ್ದ ಕೆಲವೇ ವರ್ಷಗಳಲ್ಲಿ ಇಂತದ್ದೆಲ್ಲ ಅನಿಸೋಕೆ ಶುರುವಾಗಿದ್ದಂತೂ ಹೌದು.

ಕ್ರಿಕೆಟ್ ನೋಡುವಾಗ ನಮ್ಮ ತಲೆಬುಡವಿಲ್ಲದ ನಂಬಿಕೆಗಳು ಹೀಗಿದ್ದವು. ಇಂಡಿಯಾ ಟಾಸ್ ಗೆಲ್ಲುತ್ತಲೇ ಮ್ಯಾಚ್ ಗೆದ್ದಾಯಿತು ಅಂತ ಅನ್ನುಕೊಳ್ಳೋದು! (ಅದು ಮ್ಯಾಚ್ ಭಾರತದಲ್ಲಿ ನಡೆದರೆ) ಏಕೆಂದರೆ ಟಾಸ್ ಗೆದ್ದರೆ ಇಂಡಿಯಾ ಬ್ಯಾಟಿಂಗ್ ಮಾಡ್ತಾರೆ ಚೇಸಿಂಗ್ ನಲ್ಲಿ ವೀಕ್ ಅನ್ನೊದು ಆಗಿದ್ದ ನಂಬಿಕೆ. ಹಾಗೆಯೇ ಬಲಿಷ್ಠ ತಂಡದೆದುರು ವಿದೇಶಿ ಪಿಚ್ ಗಳಲ್ಲಿ ಇಂಡಿಯಾ ವಿನ್ ಆಗೋಲ್ಲ ಅನ್ನೊದು ಇನ್ನೊಂದು ಓಪಿನಿಯನ್. ಏಕೆಂದರೆ ಫಾರೀನ್ ಪಿಚ್ ಗಳಲ್ಲಿ ಇಂಡಿಯಾ ಕಳಪೆ ಆಗಿದ್ದರಿಂದ ಈ ನಂಬಿಕೆ.

ಇನ್ನು ಇಂಡಿಯಾದ ವಿರುದ್ಧ ಪಾಕಿಸ್ತಾನವೆನಾದರೂ ಗೆದ್ದರೆ ಆ ದಿನ ಯಾವ ವಾರವಾಗಿತ್ತಂತ ನೋಡೋದು! ಅಕಸ್ಮಾತ್ ಆ ದಿನ ಶುಕ್ರವಾರ ಆಗಿದ್ದರೆ ಅದು ಪಾಕಿಗಳಿಗೆ ಪವಿತ್ರ ದಿನ ಅನ್ನೊ ನಂಬಿಕೆ! ಹಾಗೂ ಆ ದಿನವೇ ಭಾರತ ಗೆದ್ದಲ್ಲಿ ಅವರ ದೇವರು ನಮ್ಮ ನಾಯಕ ಅಜರ್ ಗೆ ಅದೃಷ್ಟ ತಂದುಕೊಟ್ಟರು ಅಂತ ಅಂದುಕೊಳ್ಳೊದು!! ಅದರಂತೆ ಭಾರತವೆನಾದರೂ ಯಾವುದಾದರೂ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದಲ್ಲಿ ಆ ದಿನ ಅಮಾವಾಸ್ಯೆಯಾಗಿತ್ತಾ ಅಂತ ಚೆಕ್ ಮಾಡುವುದು!

ಇನ್ನು ಇಂತಹ ವಿಷಯಗಳಲ್ಲಿ ನನ್ನ ಸ್ನೇಹಿತನೊಬ್ಬನ ನಂಬಿಕೆ ಕೊಂಚ ವಿಚಿತ್ರವೇ ಅಂತನ್ನಬಹುದು. ಫೀಲ್ಡಿಂಗ್ ಮಾಡುವಾಗ ಇಂಡಿಯಾದವರು ಸಿಕ್ಕಾಪಟ್ಟೆ ಕ್ಯಾಚ್ ಕೈಚೆಲ್ಲಿದ್ದರೆ ಡ್ರಿಂಕ್ಸ್ ಬ್ರೇಕ್ ನಲ್ಲಿ ಕುಡಿದ ಡ್ರಿಂಕ್ಸ್ ನಿಂದಾಗೆ ಏನೋ ಎಡವಟ್ಟಾಗಿದೆ ಅನ್ನೊದು ಅವನ ನಂಬಿಕೆ! ಅದರಲ್ಲೂ ವಿದೇಶದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಈ ಅನುಮಾನಗಳು ಜಾಸ್ತಿ ಅವನಿಗೆ!! ಕಂತ್ರಿ ನನ್ನ ಮಕ್ಕಳು ಗೆಲ್ಲಬೇಕು ಅಂತ ಹೀಗೆಲ್ಲ ಮಾಡ್ತಾರೆ ಅನ್ನೊ ಸಮರ್ಥನೆ ಬೇರೆ!! ಅವನು ಯಾವತ್ತಿಗೂ ನಮ್ಮ ಆಟಗಾರರ ಸಹಜ ವೈಫಲ್ಯವನ್ನು ಒಪ್ಪಿಕೊಂಡಿದ್ದಾಗಲಿ ಈ ಮೂಲಕ ಅವರನ್ನು ಬಿಟ್ಟುಕೊಟ್ಟಿದ್ದಾಗಲಿ ಇಲ್ಲವೇ ಇಲ್ಲ ಎನ್ನಬಹುದು.

ಇನ್ನು ಪೆಪ್ಸಿ ಬೂಸ್ಟ್ ಗೆ ಜಾಹೀರಾತು ನೀಡುವ ಸಚಿನ್ ಬರೀ ಅದನ್ನಷ್ಟೇ ಕುಡಿಯುತ್ತಾನೆ ನೀರು ಕುಡಿಯೊಲ್ಲ ಅನ್ನೊದು ಅವನಿಗಿದ್ದ ಇನ್ನೊಂದು ನಂಬಿಕೆ.!! ಏಕೆಂದರೆ ಸಚಿನ್ ಎಂ ಆರ್ ಎಫ್ ಜಾಹಿರಾತಿನಲ್ಲಿದ್ದು ಬರೀ ಎಂ ಆರ್ ಎಫ್ ಸ್ಟಿಕ್ಕರ್ ಬ್ಯಾಟ್ ಗಳನ್ನಷ್ಟೇ ಬಳಸುವುದರಿಂದ ಕುಡಿಯುವ ವಿಚಾರದಲ್ಲೂ ಹೀಗೆ ಇರುತ್ತಾನೆ ಅನ್ನೊದು ಅವನ ತಲೇಲಿ!! ಅದೇ ರೀತಿ ಕೋಕಾ ಕೋಲಾ ಜಾಹಿರಾತಿನಲ್ಲಿರುವ ಗಂಗೂಲಿ ಕೂಡ ಬರೀ ಅದನ್ನೆ ಕುಡಿತಾನೆ ಅನ್ನೊದು ಅದೇ ತರಹದ ಇನ್ನೊಂದು ಊಹೆ!

ಇನ್ನೊಬ್ಬನಿದ್ದ. ಇವನಿಗೆ ಪುಲ್ ಉಲ್ಟಾ. ಮ್ಯಾಚ್ ಶುರುವಾಗುತ್ತಲೇ ನಮ್ಮ ಪ್ಲೇಯರ್ಸ್ ಗಳಿಗೆ ಅವಾಚ್ಯ ಶಬ್ದಗಳಲ್ಲಿ  ಉಗಿಯಲಾರಂಭಿಸುತ್ತಿದ್ದ. ಹಾಗೆ ಆಗಾಗ ಊಗಿತಾ ಇದ್ದರೆ ನಮ್ಮವರು ಚೆನ್ನಾಗಿ ಆಡ್ತಾರೆ ಅನ್ನೊದು ಅವನ ನಂಬಿಕೆ! ಇದು ನಮಗೆ ಆನಂತರ ತಿಳಿದಿದ್ದು! ಅಷ್ಟರಲ್ಲಾಗಲೇ ನಮ್ಮ ಅವನ ಮಧ್ಯೆ ಸಿಕ್ಕಾಪಟ್ಟೆ ಜಟಾಪಟಿಗಳೆಲ್ಲಾ ನಡೆದುಹೋಗಿರೋದು!! ಯಾಕೆಂದ್ರೆ ಸಮಯ ಸಂದರ್ಭ ಅಂತಿಲ್ಲದೆ ಫೇವರಿಟ್ ಆಟಗಾರರನ್ನು ಹಿಗ್ಗಾಮುಗ್ಗಾ ಊಗಿತಿದ್ದರೆ ಯಾರು ತಾನೇ ಸುಮ್ಮನಿರುತ್ತಾರೆ ಹೇಳಿ…? ತಮಾಷೆಯೆಂದರೆ ಅದೇ ಹೊತ್ತಿಗೆ ಮತ್ತೊಬ್ಬ ತನ್ನ ವಯಸ್ಸಿಗೆ ಮೀರಿದ ವೇದಾಂತವನ್ನು ಪ್ರದರ್ಶಿಸುತ್ತಾ ಎಲ್ಲಾರ ಹತ್ರಾನೂ ಬೈಸಿಕೊಳ್ಳುತ್ತಿದ್ದ! ಕಾರಣ, ಯಾರು ಗೆಲ್ತಾರೆ ಅಂತ ಅಂದಾಜಿಸಲಾಗದಂತಹ ರೋಚಕ ಘಟ್ಟದಲ್ಲೂ ಮ್ಯಾಚ್ ಅಂದ್ಮೆಲೆ ಯಾರೋ ಒಬ್ಬರು ವಿನ್ ಆಗ್ಬೇಕು ಯಾಕ್ ಟೆನ್ಶನ್ ಮಾಡ್ಕೋತಿರಾ ಆರಾಮಾಗಿ ನೋಡಿ ಅಂತೆಲ್ಲ ಡೈಲಾಗ್ ಹೊಡೆಯುತ್ತಿದ್ದ!! ಏನಪ್ಪಾ, ಇಂತಹ ಚಿಕ್ಕ ವಯಸ್ಸಿಗೆ ಅದೆಂತ ಮನಸ್ಸು ಅಂತಂದುಕೊಂಡರೆ ತಪ್ಪು. ಆಮೇಲೆ ಗೊತ್ತಾಗಿದ್ದೆನಂದರೆ ನಾವಿಲ್ಲಿ ಟೆನ್ಶನ್, ಏಕ್ಸಾಯಿಟ್ ಮೆಂಟ್ ನಲ್ಲಿದ್ದರೆ ಅಲ್ಲಿ ಆಡುವ ಆಟಗಾರರಿಗೆ ತೊಂದರೆಯಾಗುತ್ತದೆನ್ನುವುದು ಅವನ ಸಿರೀಯಸ್ ನಂಬಿಕೆ! ಹಾಗಾಗಿಯೇ ಮ್ಯಾಚ್ ನೋಡುವಾಗಲೆಲ್ಲ ಅವನು ಭಯಂಕರ ಕಾಮ್ ಇಗಿ ಇರುವುದು!! ಇನ್ನೊಬ್ಬ ಇದ್ದ. ಮ್ಯಾಚ್ ಆಡುವ ಜಾಗದಲ್ಲಿ ಮಳೆ ಬರ್ತಿದ್ದರೆ ನಮ್ಮಲ್ಲೂ ಮಳೆ ಬರಬೇಕಲ್ವ ಅನ್ನೊನು..! ಯಾಕೆಂದರೆ ಹಗಲಾಗೋದು ರಾತ್ರಿಯಾಗೋದು ಬಿಸಿಲಾಗೋದು ಮಳೆಯಾಗೋದೆಲ್ಲ ಸೃಷ್ಟಿಕರ್ತ ದೇವರ ಕ್ರಿಯೆ ಎಂದು ನಂಬಿದ್ದರಿಂದ ದೇವರು ಹಾಗೆ ಒಬ್ರಿಗೊಂದು ಇನ್ನೊಬ್ರಿಗೊಂದು ವ್ಯತ್ಯಾಸ ಮಾಡಲಾರ ಎನ್ನೋದು ಅವನ ಬಲವಾದ ನಂಬಿಕೆ!!

ಇನ್ನು ಕೆಲವರಿಗೆ ಮ್ಯಾಚ್ ನೋಡುವ ವೇಳೆ ಇಂತಿಂಥ ಜಾಗಗಳಲ್ಲಿ ಕೂತು ಮ್ಯಾಚ್ ನೋಡಿದ್ರೆನೆ ಲಕ್ಕಿ ಅನ್ನುವ ನಂಬಿಕೆ! ಹಾಗೆ ಜಾಗ ಚೇಂಜ್ ಆದ್ರೆ ಒಳ್ಳೆ ರಿಸಲ್ಟ್ ಬರಲ್ಲ ಅನ್ನೊದು ಅವರ ತಿಳುವಳಿಕೆ! ಒಮ್ಮೊಮ್ಮೆ ಮಾಮೂಲಿ ಕೂರುವ ಜಾಗದಲ್ಲಿ ಕೂತಿರದಿದ್ದರೆ ಆ ಜಾಗದಲ್ಲಿ ಕೂತಿದ್ದವರನ್ನು ಎಬ್ಬಿಸಿಯಾದರೂ ಅಲ್ಲೇ ಕೂರಬೇಕು ಅವರಿಗೆ..! ಇಲ್ಲದಿದ್ದರೆ ಆ ಮ್ಯಾಚ್ ಹೊಗೆ ಅಂತಲೇ ತಲೆಗೆ ಬರೋದು..!! ಇನ್ನು ಕೆಲವೊಂದು ಮ್ಯಾಚ್ ಗಳು ಇಂತಿಂತವರ ಮನೆಯಲ್ಲಿ ನೋಡಿದ್ರೆನೆ ಶುಭ ಅನ್ನುವಂತದ್ದು ಆಗಿದ್ದ ಇನ್ನೊಂದು ನಂಬಿಕೆ. ಇದು ತೀರಾ ಹಾಗೆನೂ ಅಲ್ಲದಿದ್ದರೂ, ಒಂದಿಷ್ಟು ಕ್ರಿಕೆಟ್ ಆಸಕ್ತಿ ಇರುವ ಸಮಾನ ಮನಸ್ಕರ ಮನೆಗಳಲ್ಲಿ ನೋಡಿದರೆನೆ ಮ್ಯಾಚ್ ನೋಡಿದ ತೃಪ್ತಿ ಎನ್ನಬಹುದು. ಆದರೂ ಬಹುತೇಕ ಬಾರಿ ಅದು ಸಾಧ್ಯವಾಗದೆ ಒಂದು ಮ್ಯಾಚ್ ಅನ್ನ ನಾಲ್ಕೈದು ಮನೆಗಳಲ್ಲಿ ನೋಡುವಂತಹ ಅನಿವಾರ್ಯತೆ ಎದುರಾಗುತ್ತಿದ್ದುದು ಆ ದಿನಗಳಲ್ಲಿ ಸಾಮನ್ಯವಾಗಿರುತ್ತಿತ್ತು.

ಕಾರಣ, ಎಷ್ಟೇ ಸಮಾನ ವಯಸ್ಸಿನವರ ಮನೆ ಆದರೂ ಮನೆಲಿದ್ದ ಹಿರಿಯರು ಆಗಾಗ ನಮ್ಮೆಡೆಗೆ ದೃಷ್ಟಿ ಬೀರುತ್ತಿದ್ದರಿಂದ, ಹಾಗೂ ಕೆಲವರ ಮನೆಯಲ್ಲಿ ಸೀರಿಯಲ್ ನೋಡಬೇಕಂತ ಹೆಂಗಸರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಾವೇ ಜಾಗ ಖಾಲಿ ಮಾಡಬೇಕಾಗಿರುವುದರಿಂದ ಮ್ಯಾಚ್ ನೋಡೋಕೆ ದೊಡ್ಡ ಸುತ್ತಾಟವೇ ಆಗುತ್ತಿತ್ತೆನ್ನಬಹುದು. ಇದಲ್ಲೆರ ಮಧ್ಯೆ ನಮ್ಮ ತಂಡದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡು ಮ್ಯಾಚ್ ನೋಡೋಕೆ ಕೂತಿರುತ್ತಿದ್ದ ನನಗೆ ದಿಢೀರ್ ಅಂತ ಎದುರಾಳಿಗಳ ಕೈ ಮೇಲಾದಾಗ ನಾನೇ ಎಲ್ಲೊ ನಮ್ಮವರಿಗೆ ಡಿಸ್ಟರ್ಬ್ ಆಗ್ತಿದಿನಾ ಅಂತೆಲ್ಲ ಅನ್ನಿಸಲಾರಂಭಿಸಿ ಎದ್ದೊಗಿಬಿಡುತ್ತಿದ್ದೆ. ಒಮ್ಮೊಮ್ಮೆ ನಾನು ಎದ್ದೊದ ಮೇಲೆ ಎದುರಾಳಿಯ ವಿಕೆಟ್ ಬೀಳಲಾರಂಭಿಸಿ ನಮ್ಮ ತಂಡ ಮೇಲುಗೈ ಸಾಧಿಸುವ ಚಮತ್ಕಾರಗಳೆಲ್ಲ ನಡೆಯುತ್ತಿದ್ದರಿಂದ ಆಗಾಗ ಪರಿಸ್ಥಿತಿ ನೋಡಿ ಎದ್ದೊಗೊದೆಲ್ಲ ನಡೆಯುತ್ತಿತ್ತು.

ಒಟ್ಟಾರೆ ಕ್ರಿಕೆಟ್ ಬಗೆಗಿನ ಬಾಲ್ಯದ ಮನಸ್ಥಿತಿ ದೊಡ್ಡವರಾದಾಗ ಬದಲಾಗಿತ್ತೆಂದೆ ಹೇಳಬಹುದಾದರೂ, ನಾವು ಸುತ್ತಲಿನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದ ರೀತಿ ಅದಕ್ಕೆ ತಕ್ಕಂತೆ ಇದ್ದ ಪರಿಸರ ನಮ್ಮ ಈ ಬದಲಾವಣೆಗೆ ಪ್ರಭಾವ ಬೀರಿತ್ತೆನ್ನಬಹುದು. ಬಾಲ್ಯದಲ್ಲಿ ಫೀಲ್ಡ್ ಮಾಡುವಾಗ ನಮ್ಮೆಡೆಗೆ ಒಂದು ಬಾಲ್ ಬಂದರೂ ಸಾಕೆಂದು ಸಂಭ್ರಮಿಸುತ್ತಿದ್ದ ನಾವುಗಳು ಹೈಸ್ಕೂಲು ಹೋಗೋ ಹೊತ್ತಿಗೆ ಕೊಂಚ ಭೃಷ್ಟರಾಗಿ ಕಪಟಿಗಳಾಗಿ ಹೋದೆವಾ ಅಂತ ಅನುಮಾನ ಬಂದಿದ್ದುಂಟು.

“ಏಯ್, ಬೇಕಂತಲೇ ರನೌಟ್ ಮಾಡ್ತಿಯನಾ..” ಸಂತೋಷ್ ಸರ್ ನನ್ನನ್ನು ದುರುಗುಟ್ಟಿಕೊಂಡು ನೋಡಿ ಗದರಿದ್ದರು. ಸಂತೋಷ್ ಸರ್ ನಮಗೆ ಗಣಿತ ಟೀಚರ್ ಆಗಿದ್ದರು. ಜೊತೆಗೆ ಯೋಗವನ್ನು ಕೂಡ ಹೇಳಿಕೊಡುತ್ತಿದ್ದರು. ಸಾಹಿತ್ಯ, ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಅವರು ಸದಾ ಚಟುವಟಿಕೆಯಲ್ಲಿರುವ ವ್ಯಕ್ತಿ ಎನಿಸಿದ್ದರು. ಆದರೆ ನಮ್ಮಂತ ಹುಡುಗರಿಗೆ ಆಗ ಅವರು ಇಷ್ಟವಾಗುತ್ತಿದ್ದುದು ನಮ್ಮ ಜೊತೆ ಕ್ರಿಕೆಟ್ ಆಡೋಕೆ ಬರುತ್ತಿದ್ದರು ಅನ್ನೊ ಕಾರಣಕ್ಕಾಗಿ!! ಹೌದು. ಮೇಸ್ಟ್ರು ಮಕ್ಕಳ ಸಂಭಂಧ ತರಗತಿಯ ಕೊಠಡಿಗಳಲ್ಲಷ್ಟೆ ಎಂಬ ನಮ್ಮ ತಿಳುವಳಿಕೆಯನ್ನು ಅವರು ಬದಲಾಯಿಸಿದವರಾಗಿದ್ದರು.

ಇನ್ನು ಮೈದಾನದಲ್ಲಂತೂ ಒಂದು ಅಂತರ ಕಾಯ್ದುಕೊಂಡೆ ಎಲ್ಲರೊಡನೆ ಬೆರೆಯುತ್ತಿದ್ದರು. ಸಂತೋಷ್ ಸರ್ ಹೇಗಪ್ಪಾ ಅಂದ್ರೆ ನಾವು ಹುಡುಗರು ಆಡುವಾಗ ಮೊದಲಿಗೆ ಬಂದು ಬ್ಯಾಟ್ ಹಿಡಿಯುತ್ತಿದ್ದರು. ಆಗ ಬ್ಯಾಟ್ ಮಾಡುತ್ತಿರುವ ತಂಡಕ್ಕೆ ಸಿಕ್ಕಾಪಟ್ಟೆ ಖುಷಿಯಾಗುತ್ತಿತ್ತು. ಏಕೆಂದರೆ ಒಮ್ಮೆ ಅವರು ಬ್ಯಾಟ್ ಹಿಡಿದರೆಂದರೆ ಒಂದಿಷ್ಟು ಬೌಂಡರಿಗಳನ್ನು ಬಾರಿಸದೇ ಮುಗಿಸುತ್ತಿರಲಿಲ್ಲ. ಹಾಗೆ ದಿಢೀರ್ ಅಂತ ಔಟಾದಾಗ ಬೌಲ್ ಮಾಡಲು ಇಳಿಯುತ್ತಿದ್ದರು. ಆಗ ಎದುರಾಳಿ ಟೀಮ್ ಗೆ ಖುಷಿಯಾಗೋದು. ಏಕೆಂದರೆ ಸರ್ ಬೌಲಿಂಗ್ ಅನ್ನ ಎದುರಿಸೋದು ಅಷ್ಟೊಂದು ಸುಲಭವಾಗಿರಲಿಲ್ಲ.

ನಲವತ್ತೈದು ನಿಮಿಷಗಳ ಪಿಟಿ ಪಿರಿಯಡ್ ನಲ್ಲಿ ಸರ್ ತೋರಿಸುವ ಪ್ರದರ್ಶನ ನಮ್ಮ ಗೆಲುವನ್ನು ನಿರ್ಧರಿಸುವಂತಾಗಿತ್ತು. ಎಲ್ಲವೂ ಚೆನ್ನಾಗೇ ಇತ್ತು. ಆದರೆ ಹೋಗ್ತಾ ಹೋಗ್ತಾ ಸಂತೋಷ್ ಸರ್ ಬ್ಯಾಟ್ ಹಿಡಿದಷ್ಟು ಹೊತ್ತು ಅವರ ವಿಕೆಟ್ ಬೀಳದಿರುವುದು ಹಾಗೂ ಅವರು ಆಡುತ್ತಿದ್ದಷ್ಟು ಹೊತ್ತು ಉಳಿದವರಿಗೆ ಅವಕಾಶ ಸಿಗದಿರುವುದೆಲ್ಲ ಆಗಿ ಹುಡುಗರೆಲ್ಲ ಯೋಚಿಸುವಂತಾಯಿತು. ಕೊನೆಗೂ ನಾವೊಂದಿಷ್ಟು ಹುಡುಗರು ಇದಕ್ಕೆನಾದರೂ ಮಾಡಬೇಕಲ್ಲ ಅಂತ ಯೋಚಿಸಿದಾಗ ಅವರಿಗೆ ಸದಾ ರನ್ನರ್ ಆಗಿರುತ್ತಿದ್ದ ನಾನು ಅವರನ್ನು ಬೇಕಂತಲೇ ರನೌಟ್ ಮಾಡಿಸಬೇಕೆನ್ನುವ ತೀರ್ಮಾನಕ್ಕೆ ಬರಲಾಯಿತು.

ಸಂತೋಷ್ ಸರ್ ಅವರ ನಂಬುಗೆಯ ರನ್ನರ್ ಆಗಿದ್ದ ನಾನು ಅದೊಂದು ದಿನ ಅರ್ಧಂಬರ್ಧ ಮನಸ್ಸಿನಲ್ಲಿ ಓಡಿದಂತೆ ಮಾಡಿ ಅವರನ್ನು ರನೌಟ್ ಮಾಡಿಯೂಬಿಟ್ಟೆ. ಅದೆಲ್ಲಿತ್ತೋ ಸಿಟ್ಟು ಬೇಕಂತಲೇ ಓಟ್ ಮಾಡ್ತಿಯನ ಅಂತ ದುರುಗುಟ್ಟಿಕೊಂಡು ನೋಡಿ ಗದರಿಯೂಬಿಟ್ಟಿದ್ದರು. ಯಾಕೊ ಕೆಲ್ಸ ಕೆಟ್ಟೊಯಿತು ಹೇಗಪ್ಪಾ ಇನ್ನು ಮುಖ ತೋರಿಸೋದಂತೆಲ್ಲ ಅಂಜಿಕೆಯಾಗಿ ಅಲ್ಲಿಂದ ನಾನು ಕಾಲ್ಕಿತ್ತಿದ್ದು ಆಯಿತು. ಇದರ ಪರಿಣಾಮ ನೆಕ್ಟ್ ಗಣಿತ ಪಿರಿಯಡ್ ನಲ್ಲಿ ನನಗೆ ಲೆಕ್ಕ ಸೂತ್ರವನ್ನು ಬಿಡಿಸಿಲಿಕ್ಕೆ ಹೇಳಿ ನಾನದರಲ್ಲಿ ಪೇಚಾಡಿ ಅವರಿಂದ ಕ್ಲಾಸ್ ತಗೊಂಡಿದ್ದು ಆಯಿತು.

ಯಾಕೋ ಸರ್ ಕೆಂಗಣ್ಣಿಗೆ ಗುರಿಯಾದೆ ಅಂತ ಆ ಕ್ಷಣ ಅನ್ನಿಸಿದರೂ, ಮಾಡುವ ಕೆಲಸವನ್ನು ಕಪಟ, ನಾಟಕವಿಲ್ಲದೆ ಶುದ್ಧ ಮನಸ್ಸಿನಿಂದ ಶೃದ್ಧೆಯಿಂದ ಮಾಡಬೇಕೆನ್ನುವ ಪಾಠವನ್ನು ಅವರು ಹೇಳಿಕೊಟ್ಟರು ಅನ್ನೊದು ಆನಂತರ ತಿಳಿಯಿತು. ಬಹುಶಃ ಅಂದು ಅವರು ನನಗೆ ಕ್ಲಾಸ್ ತೆಗೆದುಕೊಂಡು ಭಯ ಮೂಡಿಸದೆ ಇದ್ದಿದ್ದಲ್ಲಿ ಅಮಾಯಕನಾಗಿದ್ದ ನಾನು ಸೈಲೆಂಟಾಗಿ ಕಪಟತನವನ್ನು ಮೈಗೂಡಿಸಿಕೊಳ್ಳುತ್ತಿದ್ದೆನಾ..? ಗೊತ್ತಿಲ್ಲ.

ಬಹುಶಃ ಆ ಸಾಧ್ಯತೆಯನ್ನು ಸರ್ ಆರಂಭದಲ್ಲಿಯೇ ಚಿವುಟಿ ಹಾಕಿದರು ಎಂದಷ್ಟೆ ಹೇಳಬಲ್ಲೆ. ಕ್ರಿಕೆಟ್ ಜೊತೆಗೆ ಸಂತೋಷ್ ಸರ್ ಅನ್ನ ನೆನಪಿಸಿಕೊಳ್ಳುವುದಕ್ಕೆ ಇದಕ್ಕಿಂತ ದೊಡ್ಡ ಕಾರಣ ಬೇರೆ ಇಲ್ಲ ಎಂದೇ ಭಾವಿಸುತ್ತೇನೆ.

| ಇನ್ನು ನಾಳೆಗೆ ।

‍ಲೇಖಕರು Admin

August 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: